ಡೈಲಿ ಬುಕ್ : ಗಣೇಶ ಹೊಸ್ಮನೆಯವರ ’ಹರಿದು ಕೂಡುವ ಕಡಲು’

ಡಾ ಆನಂದ ಋಗ್ವೇದಿ

ಗಣೇಶ ಹೊಸ್ಮನೆಯವರ ಅಪ್ಪಟ ಕನ್ನಡತನದ ಗಜಲ್ಗಳು

ಕನ್ನಡ ಜಾಯಮಾನಕ್ಕೆ ಭಾವಗೀತೆಗಳು ಸಹಜವಾದಂತೆ ಗಜಲ್ಗಳು ಸಹಜ ಸಾಧ್ಯತೆಯಲ್ಲಿ ಒಡಮೂಡಿರಲಿಲ್ಲ. ಶಾಂತರಸರು, ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ… ಇವರಿಂದ ಮೊದಲ್ಗೊಂಡು ನಮ್ಮ ಸಂದರ್ಭದ ಪ್ರಮುಖ ಗಜéಲ್ಕಾರ ಚಿದಾನಂದ ಸಾಲಿಯವರೆಗೆ ಕನ್ನಡತನವನ್ನು ಪಡೆದ ಗಜಲ್ಗಳನ್ನು ಅದರ ಮೂಲ ವ್ಯಾಕರಣದ ನೆರವಿಲ್ಲದೇ ಆಸ್ವಾದಿಸುವುದು ಸುಲಭವೇನಲ್ಲ. ಹಿಂದಿ, ಉರ್ದು ಭಾಷಿಕರಿಗೆ ಸಹಜ ಆಪ್ತವಾದ ಈ ಕಾವ್ಯ ಸಂವೇದನೆ ಕನ್ನಡಕ್ಕೆ ಆ ಪ್ರಮಾಣದಲ್ಲಿ ದಕ್ಕದೇ ಹೋದುದು ಪ್ರಾಯಶಃ ಆಸ್ವಾದನೆಯ ಭಿನ್ನತೆಯಿಂದ-ಎಂದು ನನ್ನ ಭಾವನೆ.
ಸಂಸ್ಕೃತದಂತೆ ಮಹಾಛಂದಸ್ಸುಗಳನ್ನು ಒಳಗೊಂಡ ಮಹಾ ಕಾವ್ಯಗಳನ್ನೇ ಸೃಜಿಸಿದ ಕನ್ನಡಕ್ಕೆ ಛಂದೋವಿನ್ಯಾಸದ ಮೂಲಕ ಕಾವ್ಯ ರಚನೆ ಮಾಡುವುದು ಕಷ್ಟಸಾಧ್ಯವೇನಲ್ಲ. ಅದಕ್ಕೆ ಛಂದಸ್ಸು, ಭಾಷಾ ಸಾಧ್ಯತೆ, ಪದ ಸಂಪತ್ತು ಮತ್ತು ಎಂದೂ ಮುಕ್ಕಾಗದಂತಹ ಮನುಷ್ಯ ಸಂವೇದನೆ ಬೇಕು. ಅದಕ್ಕೊಂದು ಸಾವಧಾನ ಬೇಕು, ವ್ಯವಧಾನವೂ. ಕಾವ್ಯವೆಂಬುದು ಒಂದು ಅವಧಾನ ಎಂದು ನಂಬಿದ್ದ ಪರಂಪರೆ ಹೊಸಗನ್ನಡದ ಅರುಣೋದಯದ ಸಂದರ್ಭದಲ್ಲಿ ಹ್ರಸ್ವಗೊಂಡುದಕ್ಕೆ ಸಕಾರಣವಿದ್ದಿರಬಹುದು. ಬಿಗಿ ಬಂಧವಿಲ್ಲದ, ಪ್ರತಿಮೆ-ರೂಪಕಗಳ ಅನನ್ಯತೆಯಿಲ್ಲದ ಲಯ-ಪ್ರಾಸ-ವಿನ್ಯಾಸವಿಲ್ಲದ ಕವಿತೆಯನ್ನೂ ಬರೆಯಬಹುದು ಎಂಬುದು ಆ ‘ಹ್ರಸ್ವತ್ವ’ದ ಆಶಯವಲ್ಲ. ಹಾಡುಗಬ್ಬವಷ್ಟೇ ಅಲ್ಲದೇ ತಮ್ಮ ವೈಚಾರಿಕ ಆಶಯಗಳಿಗೂ ಆಕೃತಿಯಾಗಿಸುವ ನಿಟ್ಟಿನಲ್ಲಿ ನಮ್ಮ ಕಾಲಘಟ್ಟದೊಳಗೆ ನಡೆದ ಪ್ರಯತ್ನ ಅನನ್ಯವೇ ಸರಿ. ಪ್ರಾಸವ ಬಿಡುವುದೆಂಬ ಮಾತ್ರಕ್ಕೆ, ವೈಚಾರಿಕತೆಗೆ ಆಕೃತಿಯಾದ ಮಾತ್ರಕ್ಕೆ, ಪ್ರತಿಮೆಗಳ ಭಾರಕ್ಕೆ ತೂಗಿದಂತೆ ಭಾಸವಾಗಿ ಪ್ರತಿ ಪದ ಪದಾರ್ಥ ಅರಿವಾಗದೇ ಉಳಿದ ಮಾತ್ರಕ್ಕೆ… ಕನ್ನಡ ಕಾವ್ಯಕ್ಕೆ ಸಂದ ಈ ‘ಹ್ರಸ್ವತ್ವ’ ಕಾವ್ಯವನ್ನೇ ಹಗುರಾಗಿಸುವಂತಹ ಸರಳ ಮಾರ್ಗವೇನಲ್ಲ. ಆದರೆ ಗ್ರಹಿಕೆಯನ್ನೇ ಸರಳವಾಗಿಸಿಕೊಂಡು, ಕವಿತೆ ಬರಹವನ್ನೇ ಸರಳೀಕರಿಸಿ ಹಗುರಾಗಿಸಿಕೊಂಡ ಸಂದರ್ಭದಲ್ಲಿ ಕಾವ್ಯ ಕೃಷಿಗೆ ಇಳಿದ ತಲೆಮಾರು ನಮ್ಮದು! ಗಪದ್ಯವೋ ಅಥವಾ ಪಗದ್ಯವೋ ಅಥವಾ ಎರಡೂ ಅಲ್ಲದ ಮತ್ತೊಂದು ಶಿಥಿಲ ಶಿಲ್ಪವೋ-ಅರ್ಥವಾಗದ ಹಾಗೆ ನಮ್ಮ ತಲೆಮಾರಿನ ಕಾವ್ಯದಲ್ಲಿ ಜೊಳ್ಳು ಹೊರಹೊಮ್ಮಿದ್ದು ಸುಳ್ಳಲ್ಲ. ಹಾಗೆಂದ ಮಾತ್ರಕ್ಕೆ ನಮ್ಮ ತಲೆಮಾರಿನ ಕಾವ್ಯ ಸಂಪೂರ್ಣ ಜೊಳ್ಳಲ್ಲ.
ಎಲ್ಲಾ ಮೂಲ ಮಾದರಿ ಮಾರ್ಗಗಳನ್ನು ಪರಿಶೀಲಿಸಿ, ಬಯಲಲ್ಲಿ ಉಪಕ್ರಮಿಸಿ ನಮ್ಮದೇ ಹಾದಿಯೊಂದನ್ನು ಅರಸುವ-ಹೆಜ್ಜೆಗಳ ಮೂಲಕವೇ ಕಾಲುಹಾದಿಯನ್ನು ಪಡಿಮೂಡಿಸಲು ಪ್ರಯತ್ನಿಸುವ ಈ ಕಾವ್ಯ ಕಾಯಕದಲ್ಲಿ ಎಷ್ಟೊಂದು ಕಲ್ಲು? ಎಷ್ಟೊಂದು ಮುಳ್ಳು!? ತಮ್ಮ ಹಿರಿಯರು ಹಿಡಿದ ಸಿದ್ಧಮಾರ್ಗವನ್ನು ಬಿಟ್ಟು ಭಿನ್ನತೆಯ ಅನನ್ಯತೆಯ ಬೇರೆ ಮಾರ್ಗಕ್ಕಾಗಿ ಹಂಬಲಿಸಿದ ಎಲ್ಲಾ ತಲೆಮಾರುಗಳೂ ಈ ಬಿಕ್ಕಟ್ಟನ್ನು ಎದುರಿಸಿವೆ. ಹರಿವ ನೀರು ತನ್ನೆದುರು ತೆರೆದುಕೊಂಡ ಬಯಲಲ್ಲಿ ಹಿಗ್ಗಿ, ಕೊರಕಲಲ್ಲಿ ಕುಗ್ಗಿ, ದಿಬ್ಬದಲ್ಲಿ ಉಗ್ಗಿ, ಆಳ ಪ್ರಪಾತದಲ್ಲಿ ಝರಿಯಂತೆ ಧುಮ್ಮಿಕ್ಕಿ… ಹರಿಯದೇ ನದಿಯಾಗದು. ತನ್ನ ಆಂತರಿಕ ಚಲನಶೀಲತೆ ಇಲ್ಲದೇ ಆ ನದಿ ತನ್ನ ಒಳ ಹರಿವನ್ನು ನಿರಂತರವಾಗಿಸಿಕೊಂಡು ಕಡಲು ಸೇರದು. ಎಲ್ಲಾ ಹರಿವಿನ ಗಮ್ಯವು ಆ ಕಡಲ ಒಡಲೇ ಅಲ್ಲವೇ? ಹಾಗೆಂದೇ ನಮ್ಮ ತಲೆಮಾರು ತೊಡಗಿಸಿಕೊಂಡ ಕವಿತೆಯ ಹಾದಿಯಲ್ಲಿ ಚುಟುಕು, ಶಾಯರಿ, ಕವಿತೆ… ಹೀಗೆ ಎಲ್ಲವೂ ಆ ಸಂವೇದನಾ ಕಡಲ ಒಡಲಿಗೇ ಹಂಬಲಿಸಿ ಒಡಮೂಡಿದವು.

ಚಲನಶೀಲತೆ ಅಷ್ಟೇ ಅಲ್ಲದೇ, ಬದ್ಧತೆಯೂ ಹೊಸ ತಲೆಮಾರಿನ ಕಾವ್ಯಕ್ಕಿದೆ. ಅದು ಆಶಯವಾಗಿ, ಭಾವನೆಯಾಗಿ, ಪ್ರತಿಮೆಯಾಗಿ, ಹೊಸ ರೂಪಕವಾಗಿ ಈ ಸಂದರ್ಭದ ಪ್ರತೀಕವಾಗಿ ಕವಿತೆಯಲ್ಲಿ ಕಂಡರಿಸಲ್ಪಟ್ಟಿದೆ. ಚಲನಶೀಲತೆ, ಬದ್ಧತೆಯ ಜೊತೆಗೆ ಪ್ರಯೋಗಶೀಲತೆಯೂ ಈ ತಲೆಮಾರಿನ ಕಾವ್ಯಕ್ಕಿದೆ.
ನಮ್ಮ ತಲೆಮಾರಿನ ಕಾವ್ಯದ ಬಗ್ಗೆ, ಅದರ ಚಲನಶೀಲತೆ, ಬದ್ಧತೆ ಮತ್ತು ಪ್ರಯೋಗಶೀಲತೆ ಬಗ್ಗೆ ಗಟ್ಟಿಯಾದ ಆತ್ಮವಿಶ್ವಾಸದ ದನಿಯಲ್ಲಿ ಮಾತಾಡಲು ಕಾರಣವಿದೆ. ಈ ದನಿಯನ್ನು ಗಣೇಶ ಹೊಸ್ಮನೆಯವರ ಕವಿತೆಗಳೇ, ಅದರ ಪ್ರಯೋಗಶೀಲತೆಯೇ ಪ್ರೇರೇಪಿಸಿವೆ. ನಿಜ, ತಮ್ಮದೇ ಲಯವನ್ನು ಹುಡುಕುವ, ವಿನ್ಯಾಸಕ್ಕಾಗಿ ತಡಕುವ ಮತ್ತು ಅವುಗಳನ್ನು ಸ್ವ-ಸಾಮಥ್ರ್ಯದಲ್ಲಿ ಸಾಧ್ಯವಾಗಿಕೊಂಡ ಗಣೇಶ ಹೊಸ್ಮನೆಯವರ ಈ ಹಿಂದಿನ ಕವನ ಸಂಕಲನದ ಕವಿತೆಗಳು -‘ಯಾರೂ ನೆಡದ ಮರ’- ತನ್ನ ತಂಪು ನೆರಳನ್ನು ಈ ಭಾವಾದ್ರ್ರ ನೆಲಕ್ಕೆ ಹರಡಿದೆ. ಕಾವ್ಯವೆನ್ನುವುದು ಬದುಕಿನ ಸಹಜ ಕ್ರಮ ಎಂದೇ ಭಾವಿಸಿರುವ ಕವಿ ಪ್ರಕೃತಿಗೆ, ವರ್ತಮಾನಕ್ಕೆ, ಸಾಮಾಜಿಕ ವಿದ್ಯಮಾನಕ್ಕೆ, ಅಂತರಂಗದ ತಾದ್ಯಾತ್ಮಕ್ಕೆ ಪ್ರತಿಸ್ಪಂದಿಸಿಯೇ-ಪ್ರತಿ ಕವಿತೆಗಳ ಪ್ರತಿ ಸಾಲು ರೂಪುಗೊಂಡಿವೆ. ಅಂತಹ ಪ್ರತಿಸ್ಪಂದನ ಮತ್ತು ಬದ್ಧತೆಗಳೇ ಈ ಹೊತ್ತು ಗಜéಲ್ಗಳ ರೂಪು ಧರಿಸಿ ನಿಂತಿವೆ.
ಗಜéಲ್ಗಳ ರೂಪ ಧರಿಸಿದರೂ ಇದು ಗಣೇಶ ಹೊಸ್ಮನೆಯವರದೇ ಕಾವ್ಯಧ್ವನಿ ಎಂದೆ ನಾನು. ಕನ್ನಡದ ನೆಲಕ್ಕೆ ಬಂದ ಈ ಮೊದಲಿನ ಗಜéಲ್ಗಳಲ್ಲಿ ಇದ್ದ; ಮಧು, ಮನಸ್ಸು, ಮಾನಿನಿ, ವಿರಹ, ಪ್ರೀತಿ, ಏಕಾಂತ, ಉನ್ಮಾದ, ಉರಿಯ ಉಯ್ಯಾಲೆಗಳೆಲ್ಲವೂ… -ಬೇರೊಂದು ಅನುಭವ ಲೋಕದ ವಿವರಗಳೇ- ಕನ್ನಡದ ಛಾದರ ಹೊದ್ದಂತೆ ಭಾಸವಾಗಿದ್ದಿದೆ. ಆದರೆ ಗಣೇಶ ಹೊಸ್ಮನೆಯವರ ಕನ್ನಡತನ ನುಡಿಗಾರಿಕೆ ಮತ್ತು ಲಯಗಾರಿಕೆ ಗಜéಲ್ನ ಛಂದೋರೂಪವನ್ನು ಸಮರ್ಥವಾಗಿ ಸಮ್ಮಿಲಿಸಿಕೊಂಡು-ಗಜéಲ್ ರೂಪ ಧರಿಸಿ ನಿಂತ ಅಪ್ಪಟ ಕನ್ನಡ ಕವಿತೆಗಳಂತೇ ಭಾಸವಾಗುತ್ತವೆ.
‘ಅಳಿದು ಹೋದವರೆಲ್ಲಾ ಹೋಗಬಾರದು ಕಳೆದು
ಕಣ್ಣ ರೆಪ್ಪೆಯೊಳಗೆ ನೆನಪ ಕಾಪಿಡಬೇಕು ಸದಾ’
ಈ ಸಾಲಿನ ಭಾವವೇ ಹೇಳುವಂತೆ, ನಾವು ಮರೆಯದೇ ಕಾಪಿಡಬೇಕಾದ ಸಂಗತಿಗಳು ಹಲವಿದೆ. ಈ ನೆನಪಿನಲ್ಲಿ ಪರಂಪರೆಯಿದೆ, ಗಜéಲ್ ಗಮನವಿದೆ, ವರ್ತಮಾನದ ಚಲನೆ ಮತ್ತು ಭವಿಷ್ಯದಲ್ಲಿ ತಲುಪಬೇಕಾದ ಗಮ್ಯವಿದೆ. ಬದುಕು ಮತ್ತು ಭಾವ ಎರಡೂ ವಾಸ್ತವದ ಪ್ರಖರ ಬಿಸಿಲಿನಲ್ಲಿ ಬಸವಳಿದರೂ ‘ಕತ್ತಲ ಕಣ್ಣಲ್ಲಿ ಹೊಳೆವ ಬೆಳಕ’ ಹೊತ್ತು ನಡೆವ ಈ ನಡೆಯಲ್ಲಿ –
‘ಕಣ್ಣೀರ ಕುಡಿಯುತ್ತಾ ಯಾತ್ರೆ ಹೊರಟಿದೆ ಕಾಲ
ದುಃಖದ ಈ ಜಾತ್ರೆಯಲಿ ನಗುನಗುತಿರಬೇಕು ಸದಾ’
ಬದುಕ ಆದ್ಯತೆ ಮತ್ತು ಬದ್ಧತೆಯೇ ಮೀಮಾಂಸೆಯನ್ನು ರೂಪಿಸುತ್ತವೆ ಎಂಬ ಭಾವ ಕವಿಯದ್ದು. ಸದಾಶಯ ಮತ್ತು ವಾಸ್ತವದಿಂದ ವಿಮುಖವಾಗದ ಉನ್ಮುಖ ಪ್ರಜ್ಞೆ ಮಾತ್ರ ಹೀಗೆ ಕನಸಲು, ಕನವರಿಸಲು ಮತ್ತು ಹರಸಲು ಸಾಧ್ಯ.
‘ಒದ್ದೆಯಾಗಿಸುವ’ ಆದ್ರ್ರ ಪ್ರಕ್ರಿಯೆ ಬಗ್ಗೆ ವ್ಯಾಮೋಹದಿಂದ ಬರೆವ ಕವಿಗೆ ಈ ಹಸಿತನದ ಪರಿಕಲ್ಪನೆ ತನ್ನ ಎಲ್ಲಾ ಮಾದರಿಗಳಲ್ಲಿಯೂ ಸ್ಪಷ್ಟ. ಬಾಳ ಸಖ್ಯದಲ್ಲಿ ಆಖ್ಯಾನವನ್ನು ವಾಚ್ಯವಾಗಿಸದ ಈ ಸಾಲುಗಳು –
‘ಕುಣಿದು ಕಾಡುವ ಗಾಳಿ, ಗುಡುಗು ಮಿಂಚಿನ ಮೇಳ ಬಂದವು ಜತೆಗೆ
ನಮ್ಮೊಡನೆ ಕರಗಿ ಮುಗಿಲೊಂದು ನಮ್ಮಿಬ್ಬರನು ಒದ್ದೆಯಾಗಿಸಿತು’
ವಾಸ್ತವಿಕ ಪ್ರಕೃತಿಯಲ್ಲಿ ಕಾಡುವ ಗಾಳಿ, ಗುಡುಗು ಮಿಂಚಿನ ಮೇಳ ಬದುಕ ಜತೆಯಾಗಿ ಬಂದರೂ ‘ಮುಗಿಲೇ ನಮ್ಮೊಡನೆ ಕರಗಿ’ ಎಂಬ ಕನಸಿನರಿವು ವಾಸ್ತವಿಕತೆಯಲ್ಲೂ ಭಾವಾದ್ರ್ರಗೊಳಿಸಲು ಸಶಕ್ತ.
‘ಕಣ್ಣೊಳಗೆ ಕಣ್ಣಿಟ್ಟು ಬಚ್ಚಿಟ್ಟುಕೊಂಡೆವು ಬೆಚ್ಚನೆಯ ಪ್ರೀತಿಯಲಿ
ಚೆಲ್ಲಿದ ಕಣ್ಣ ಹನಿಯೊಂದು ನಮ್ಮಿಬ್ಬರನು ಒದ್ದೆಯಾಗಿಸಿತು’
ಈ ಸಾಲುಗಳು ಅನುರಣಿಸುವ ‘ಸಖೀ ಗೀತ’ ಅಪ್ಪಟ ಕನ್ನಡತನದ್ದು. ವಿರಹದುನ್ಮಾದದ ಪ್ರೇಮ, ತಹತಹವಷ್ಟೇ ಆಗಿ ಉಳಿಯದೇ ಈ ಸಮ್ಮಿಲನದ ತೀವ್ರತೆ, ಸಖ್ಯದ ಸಂಭಾವ್ಯತೆ ಗಣೇಶ ಹೊಸ್ಮನೆಯವರ ಗಜéಲನ್ನು ಆಪ್ತವಾಗಿಸುವುದಷ್ಟೇ ಅಲ್ಲ, ನಮ್ಮನ್ನೂ ಒದ್ದೆಯಾಗಿಸುತ್ತದೆ!
‘ಬೆಳಕ ಹುಡುಕುವವರು ಕಳೆದು ಹೋದರು, ನಾನವರ ಕರೆಯುತಿರುವೆ’ ಎಂದಾಗ ಕಾವಳದ ಕಾರಿರುಳಿನಲಿ ನಾವೆಲ್ಲ ಭರವಸೆಯ ಕಳೆದುಕೊಳ್ಳಲಾರದಂತೆ ಬೆಳಕಿನ ಧ್ಯಾನವನ್ನು ಹಚ್ಚಿ, ಈ ದೀಪದ ದಾರಿಗೆ ನಡೆದು ಹೋದವರು ಕಳೆದು ಹೋದಾರೆಂದು ಕರೆಯುವ ಕೊರಳ ಉಲಿ ಮತ್ತೆ ವಾಸ್ತವಕ್ಕೆ ಕರೆಯುವುದಲ್ಲದೆ ಕತ್ತಲಲ್ಲೂ ಬೆಳಕಿನ ಕಿರಣವೊಂದ ಮೊಳೆಸಿಬಿಡುತ್ತದೆ. ಹಾಗೆಂದೇ ಪರಕೀಯ ಎನ್ನಿಸಬಹುದಾದ ಪ್ರತಿಮೆಯನ್ನು ಕಂಡರಿಸದೇ
‘ಮುಗುಳುನಗೆ ಮಧುಪಾತ್ರೆ ಕೊಡುವವಳು ಇಲ್ಲಿಲ್ಲ
ನೋವುಗಳು ಬಿಟ್ಟ ನಿಟ್ಟುಸಿರುಗಳ ತಣಿಸಿ ಕುಡಿಯುತಿರುವೆ’
ಮುಗುಳುನಗೆ ಮಧುಪಾತ್ರೆ ಮೈಮರೆಸದೇ, ಇರುವ ವಾಸ್ತವದ ನೋವ ನಿಟ್ಟುಸಿರನ್ನೇ ತಣಿಸಿ ಕುಡಿವ-ನಮ್ಮತನ-ಸ್ವಕೀಯತೆ, ದೇಸೀಯತೆ ಕಾಣಿಸಿದೆ. ಅಂತಹ ಜೀವನೋತ್ಸಾಹಕ್ಕೆ –
‘ಇರುಳೆಲ್ಲ ಹೆಣೆದ ಕುಡಿ ಬೆರಳುಗಳೇ ಹೂವಾಗಿ ಅರಳಿವೆ
ಜತೆಯಾಗಿ ಒಲವಿನಲಿ ನಿಂತ ನೆರಳುಗಳೇ ಹೂವಾಗಿ ಅರಳಿವೆ’
ಒಲವ ಜತೆಯಾಗಿ ನಿಂತ ನೆರಳುಗಳಲ್ಲೂ ಹೂವಿನ ತಾಜಾತನವೇ ಇದೆ! ಇರುಳನ್ನು ಕತ್ತಲ ರೂಪ ಎಂದು ಭಾವಿಸದೇ ‘ಅದರಲ್ಲಿ ಹೆಣೆದ ಕುಡಿ ಬೆರಳುಗಳ’ ರಮ್ಯತೆಯನ್ನು ಪರಿಭಾವಿಸುವ ಮನಸ್ಸಿಗೆ ಹೂ ಅರಳಿ ಗಂಧ ಮುಟ್ಟಿದೆ. ಆ ಅಂತಹ ಮನಸ್ಸು ಆ ಪರಿಮಳವ ಮೂಸಿ, ತನ್ನಲ್ಲೇ ತಾದ್ಯಾತ್ಮ ಪಡೆದು ಹೊಸ ಆಧ್ಯಾತ್ಮವನ್ನು ಅನುರಣಿಸಿ –
‘ಜಪವನರಿಯದೆ ತಪವನರಿಯದೆ ಪಾಪಿಯಾದೆನು ನಾನು
ನಿನ್ನ ಧ್ಯಾನದ ಪುಣ್ಯವಾದರೂ ಇರಲಿ ನನ್ನ ರಾತ್ರಿಗಳಲ್ಲಿ’
ಇರುವ ರಾತ್ರಿಗಳನ್ನು ಒಪ್ಪುತ್ತಲೇ ಆ ಕತ್ತಲನ್ನು ಆಪ್ತವಾಗಿಸುವ ಒಲವ ಧ್ಯಾನದಲಿ ನಿರತವಾಗುವ ನಿಲುವು-ಸಖೀಗೀತದ ಸಾಮಗಾನದಂತಿದೆ! ಈ ನಿಮ್ಮ ಸಖೀಗೀತ, ಸಖ್ಯಗಾನ ಕ್ಷಣಿಕ ಸುಖದ ಬೆನ್ನು ಹತ್ತಿ ಕಳೆದು ಹೋಗಬಹುದಾದ ಜೀವನ ಪ್ರೀತಿಯೇನಲ್ಲ. ಚಿಗುರುವ ಮರದ ಚೂರಾದ ಈ ಕಾಯದ ಮಾಯಕಕ್ಕೆ ತನ್ನನ್ನು ಬೆಂಕಿ ಕಡ್ಡಿಯಾಗಿಸಿದ ವಿದ್ಯಮಾನದ ಅರಿವಿಲ್ಲದ ಅಮಾಯಕತೆ ಆವರಿಸಿದ್ದರೂ –
‘ಗೀರುವಾಗಿನ ಸುಖ ಉರಿಯುವಾಗಿನ ಸೊಕ್ಕು
ಉರಿದು ಕರಕಲಾದ ಮೇಲೆ ಉಳಿಯಲಾರದೆಂದು ತಿಳಿಯಲೇ ಇಲ್ಲ ಬೆಂಕಿ ಕಡ್ಡಿಗೆ’
ಎಂದು ಶ್ರುತಪಡಿಸುವ ಮನಸ್ಸು ಮಾತ್ರ ಆ ಅಮಾಯಕತೆಯಲ್ಲೂ ಉರಿವ ಸೊಕ್ಕು, ಗೀರುವ ಸುಖ ಮತ್ತು ಕ್ಷಣಿಕತೆ ಕಂಡು ಮೂಡುವುದು-ಕನಿಕರ. ಭಾವ ವಲಯದೊಳಗೂ ಪ್ರಜ್ಞಾವಲಯ ಸಮ್ಮಿಲಿಸುವಾಗಿನ ಅರಿವಿನಂತೆ ಬೆಳಕು ಮೂಡಿಸುತ್ತದೆ-ಕಡ್ಡಿ ಗೀರದೆಯೆ!
ಆ ಅಂತಹ ಸಮ್ಮಿಲನದ ಮನಸ್ಥಿತಿಗೆ;
‘ಬೆಳಕೋ ಕತ್ತಲೆಯೋ ಎಲ್ಲಾದರೂ ಜೀವ ಉರಿವುದು ಗೆಳಯಾ
ಬರುವ ಕಾಲಕೆ ನನ್ನ ತೆರೆದಿಟ್ಟುಕೊಂಡೆನು ನಾನು’
-ಎಂಬ ಅರಿವಿದೆ!
 
‘ಅಂತರಂಗದ ವೇದನೆಗಳ ಮರೆತು ಮುಗುಳ್ನಗೆಯ ಮುಖ ಧರಿಸಿ
ನಿನಗಾಗಿಯಲ್ಲದಿದ್ದರೂ ಕುಣಿ ನಿಲ್ಲದೇ ನೀ ಕುಣಿ’
-ಎಂಬ ಅರಿವು ಮೂಡಿಸಿದ ಮಹತ್ತಿದೆ.
ಈ ಅರಿವು ಕೇವಲ ವ್ಯಕ್ತಿಯ ಅರಿವಲ್ಲ, ಮನಸ್ಥಿತಿಯ ಸುರೂಪದ ನೆಲೆಯಷ್ಟೆ ಅಲ್ಲ, ಅದು ಮನಸ್ಸು ಭಾವ – ಜೀವ ಮತ್ತು ಆತ್ಮಗಳು ಸಮ್ಮಿಲಿಸಿದ ಅರಿವು – ಆತ್ಮದರಿವು.
 
‘ನಾನು ಇದ್ದಾಗ ಜಗದಗಲದ ಅರಿವು ತಿಳಿಯದಾಗುವುದು
ತಿಳಿದಾಗಲಷ್ಟೇ ‘ಹೊಸ್ಮನೆ’ಯ ಸುತ್ತ ಕಟ್ಟಿದ ಗೋಡೆ ಒಡೆಯುವುದು’
‘ನಾನು’ ಹೋದರೆ ಹೋದೇನು ಎಂಬ ಆತ್ಮಜ್ಞಾನಿಯ ಅರಿವು ತನ್ನ ತಾನೇ ತಿಳಿದ ಮಹತ್ವವನ್ನು ಬಲ್ಲದು. ಆ ಅರಿವೆ ತನ್ನ ಸುತ್ತ ಕಟ್ಟಿದ ಅಜ್ಞಾನದ ಗೋಡೆಗಳನ್ನು, ವ್ಯಕ್ತಿತ್ವದ ತೋರಿಕೆಯ ಹೊರ ಆವರಣಗಳನ್ನು ಕಳಚಬಲ್ಲದು.
 
ಈ ಎಲ್ಲಾ ಅರಿವು, ಸಂಭ್ರಮ, ಸಂವೇದನೆಗಳೇ ನಿಮ್ಮ ಕಾವ್ಯದ ಬುಗ್ಗೆಯನ್ನು ಹರಿವ ನದಿಯಾಗಿಸಿವೆ. ಅದರ ಚಲನಶೀಲತೆಯೇ ಸುಭಗತೆಯನ್ನು ಪಡೆದು ಹರಿವ ನೀರಿನ ಲಯ-ವಿನ್ಯಾಸ ಮತ್ತು ಮಂಜುಳ ನಿನಾದ ಪಡೆದಿದೆ. ಆ ನಿನಾದವೇ ಹೊಮ್ಮಿಸುವ ಧ್ವನಿ
‘ದಡವಿರದ ನದಿಯೊಂದು ಉಕ್ಕುತಿದೆ ಒಡಲೊಳಗೆ
ಹರಿದು ಕೂಡುವ ಕಡಲ ಕಳೆಯದಿರು ಚೆಲುವೆ’
ದಡವಿರದ ನದಿಯೊಂದು ಧುಮ್ಮಿಕ್ಕಿ ಜಲಧಿಯಾಗಿ ಹರಿವ ಈ ಕಾವ್ಯ ಸಂಭ್ರಮಕ್ಕೆ ಅದು ಹರಿದು ಕೂಡುವ ಕಡಲ ಅರಿವಿದೆ. ಕೂಡುವಿಕೆಯ ಮೂಲಕವೇ ಪಡೆವ ಚೆಲುವ ಪರಿಭಾವಿಸುವ ಮನಸ್ಸಿದೆ.
ಗಣೇಶ ಹೊಸ್ಮನೆಯವರ ಒಟ್ಟೂ ಗಜéಲ್ಗಳನ್ನು ಓದಿದಾಗ ಸ್ಪುರಿಸಿದ ಹಲವು ಭಾವಗಳಲ್ಲಿ ಕೆಲವೊಂದನ್ನು ಮಾತ್ರ ಈ ಮಾತಿನಲ್ಲಿ ವ್ಯಕ್ತಪಡಿಸಿರುವೆ. ಕಾವ್ಯದ ಶಕ್ತಿಯೇ ಅದು. ತನ್ನ ಒಡಲ ವಿಶ್ವರೂಪವನ್ನು ಪ್ರದಶರ್ಿಸುತ್ತಾ ಅರ್ಥಧಾರಿಗೇ ತಬ್ಬಿಬ್ಬುಗೊಳಿಸಿಬಿಡುತ್ತದೆ! ಪ್ರೀತಿಯಂತೆ, ನದಿಯಂತೆ ಹರಿವ ಈ ಭಾವದೊರೆಗೆ ನೊರೆ, ನೆರೆ, ನೆಗಸು, ನೆನಪಿನ ಹಂಗಿಲ್ಲದ ನವೀನತೆ ಮತ್ತು ಪ್ರತಿಸ್ಪಂದಿಸುವ ಪರಿವೇಶ-ಎಲ್ಲಾ ದಕ್ಕಿವೆ. ಎಂದೇ ಭಾವ ಸಂಪನ್ನಕಾವ್ಯ ಗಣೇಶ ಹೊಸ್ಮನೆಯವರು ತೊಡಿಸಿದ ಗಜéಲ್ ಛಂದಸ್ಸಿನೊಳಗೆ ಆವಾಹನೆಯಾಗಿದೆ.
ಕನ್ನಡದ ‘ಗಜéಲ್’ ಪ್ರಕಾರದ ಕಾವ್ಯಕ್ಕೆ ಗಣೇಶ ಹೊಸ್ಮನೆಯವರು ಇಳೆ, ಮಳೆ, ಬೆಳಕು-ಕತ್ತಲೆ, ಗಿಣಿ-ಗೊರವಂಕ, ಪ್ರೀತಿ-ಒಸಗೆ, ಸಂಬಂಧ-ಸಖ್ಯ ಎಲ್ಲವನ್ನೂ ಪ್ರತೀಮಾತ್ಮಕವಾಗಿ ನೀಡಿ ಅಲಂಕರಿಸಿದ್ದಾರೆ. ಗಜéಲ್ ಛಂದೋ ರೂಪದ ಕಾವ್ಯಕ್ಕೆ ಯಶಸ್ಸು ಅದರೆಲ್ಲ ಪಲ್ಲವಿ, ಸಾಲು, ಕಾಫಿಯಾ, ರದೀಫ್ಗಳನ್ನು ಮತ್ತೆ ಮತ್ತೆ ಆಸ್ವಾದಿಸುವ ಮೂಲಕವೇ ಸಲ್ಲುವಂತಹುದು. ಅಂತಹ ಆಸ್ವಾದನೆಗೆ ಸಿಗುವ ಕಲ್ಲುಸಕ್ಕರೆಯಂತಹ ಗಣೇಶ ಹೊಸ್ಮನೆಯವರ ಕಾವ್ಯಕ್ಕೆ, ಅದರ ಖುಷಿಗೆ ನಾನು ಪ್ರೀತಿಯಿಂದಲೇ ಶುಭ ಹಾರೈಸುತ್ತೇನೆ.
 

‍ಲೇಖಕರು G

February 21, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Suryakanth Bellary

    ಚೆನ್ನಾಗಿದೆ ಬರಹ. ಅಲ್ಲಾಗಿರಿರಾಜ ಕನಕಗಿರಿ ಯವರ ‘ನೂರು ಗಜಲ್’ ಕೂಡ ತುಂಬಾ ಒಳ್ಳೆಯ ಸಂಕಲನ. ಎಲ್ಲರೂ ಒಮ್ಮೆ ಓದಲೇಬೇಕಾದ ಕೃತಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: