ವಿಟ್ಟೊರಿಯೋ ಡಿ ಸಿಕಾ ನಿರ್ಮಿಸಿದ ಪ್ರಸಿದ್ಧ ಇಟಾಲಿಯನ್ ಚಿತ್ರದ ಚಿತ್ರಕಥೆ
ಕೆ ವಿ ಸುಬ್ಬಣ್ಣ
ವಿಟ್ಟೊರಿಯೋ ಡಿ ಸಿಕಾ ನಿರ್ಮಿಸಿದ (೧೯೦೨- ೧೯೭೫) ‘ಬೈಸಿಕಲ್ ಥೀವ್ಸ್’ ಜಗತ್ತಿನ ಚಲನಚಿತ್ರದ ಇತಿಹಾಸಕ್ಕೇ ಒಂದು ಚಿಕ್ಕ ತಿರುವು ತಂದುಕೊಟ್ಟಿತು. ‘ಬೈಸಿಕಲ್ ಥೀವ್ಸ್’ ನಲ್ಲಿ ಹಸಿ ವಾಸ್ತವತೆಯಿದ್ದರೂ ಈ ಚಿತ್ರ ವಾಸ್ತವದ ಚಿತ್ರ ವರದಿಯಷ್ಟೇ ಆಗಿಬಿಡದೆ ಗಹನವಾದ ಅನುಭವ ಮೂಲವಾಗುವುದು. ಇದರ ಹಿಂದಿರುವ ಆಳವಾದ ಮಾನವೀಯ ಪ್ರೇಮದಿಂದ. ರಸ್ತೆಯ ಜನಸಂದಣಿಯಲ್ಲಿ ಪ್ರತ್ಯೇಕ ಚಹರೆಯೇ ಇಲ್ಲವೇನೋ ಎನ್ನುವ ಹಾಗೆ ಬೆರೆತುಹೋಗುವ ಆಂಟೋನಿಯೋನಂಥವನು ನಮ್ಮ ಆಸಕ್ತಿಯನ್ನು ಸೆಳೆದು, ನಮ್ಮೆದುರು ತನ್ನ ಬದುಕನ್ನು ತೆರೆದುಕೊಳ್ಳುವುದು ಇಂಥ ಗಾಢಪ್ರೀತಿ ಆಸಕ್ತಿಗಳಿಂದ ಮಾತ್ರವೇ ಸಾಧ್ಯವಾಗಿದೆ. ಬಡತನದ ಬವಣೆಯಲ್ಲಿ ಸಿಕ್ಕು ದಿಕ್ಕುಗೆಟ್ಟು ಮೂರ್ಖರಾಗುವ, ಮೂಢರಾಗುವ, ಹಗಲುಗನಸಿನ ಟೊಳ್ಳುಗಳಾಗುವ, ಅನೀತಿವಂತರಾಗುವ, ಅಪರಾಧಿಗಳಾಗುವ, ಹಿಂಸ್ರರಾಗುವ ಈ ಜನರನ್ನು, ಭವಿಷ್ಯಕಾರ್ತಿಯ ಕೋಣೆಯ ಹುಸಿಯಲ್ಲಿ,

ಕ್ಲಬ್ ನ ರಾಜಕೀಯ ಸಭೆ ಮನೋರಂಜನೆಗಳ ಕಣ್ಣು ಮುಚ್ಚಾಲೆಯಲ್ಲಿ, ಚರ್ಚ್ ಸರ್ವಿಸ್ ನ ಧಾರ್ಮಿಕ ಆಡಂಬರ ಢಂಬಗಳಲ್ಲಿ, ಸೂಳೆಗೇರಿಯ ಅನೈತಿಕ ಅಸಹ್ಯ ನಿರ್ಲಜ್ಜೆಯಲ್ಲಿ ಮುಂತಾಗಿ ಎಲ್ಲೆಂದರಲ್ಲಿ ಕಂಡು ಮರುಕಪಡುತ್ತೇವೆ. ಕಛೇರಿಗಳಲ್ಲಿ, ಪೋಲಿಸ್ ಠಾಣೆಗಳಲ್ಲಿ ತುಂಬಿಕೊಂಡ ನಿರ್ಲಕ್ಷ್ಯದ ಅಧಿಕಾರಿಗಳು, ಚರ್ಚ್ ನಲ್ಲಿ ಸೇವೆ ಸೌಜನ್ಯಗಳ ವೇಷತೊಟ್ಟು ಸದ್ದಿಲ್ಲದೆ ಹರಿದಾಡುವ ಶ್ರೀಮಂತ ಢಾಂಬಿಕರು ಮುಂತಾದ ಹಿಂಡು ಹಿಂಡನ್ನು ಕಂಡು ಕೆರಳುತ್ತೇವೆ. ಕಣ್ಣೆದುರಿನ ಘನವಾಸ್ತವದಲ್ಲಿ ಮನುಷ್ಯ ವ್ಯಾಪಾರಗಳ ಅದೃಶ್ಯ ಸಂಕೀರ್ಣವನ್ನು ಅರಿವುಗೊಳಿಸಿಕೊಳ್ಳುತ್ತ ಆಳ ಆಳಕ್ಕೆ ಇಳಿದುಕೊಳ್ಳುತ್ತೇವೆ.
(ಬೆನ್ನುಡಿ )
ಅಕ್ಷರ ಪ್ರಕಾಶನ
ಬೆಲೆ : ರೂ ೧೫/-



0 Comments