ಕೃಷ್ಣ ಮಾಸಡಿ ಮಲೆನಾಡಿನ ಅಂಚಿನವರು. ಹಾಗೆಯೇ ಕನ್ನಡ ಕಥನ ಲೋಕಕ್ಕೆ ಅಪೂರ್ವ ಕತೆಗಳನ್ನು ಕೊಡುಗೆಯಾಗಿ ನೀಡಿಯೂ ಪ್ರಸಿದ್ಧಿಯ ಅಂಚಿಗೆ ಉಳಿದವರು. ಅಂಚುಗಳನ್ನು ನಿರ್ಲಕ್ಷಿಸುವುದು ಚರಿತ್ರೆಯ ಪ್ರಮುಖ ಲಕ್ಷಣವೂ ಹೌದು ರಾಜಕಾರಣವೂ ಹೌದು. ಆದರೆ ಸಂಸ್ಕೃತಿಯ ಕಣ್ಣು ಅನ್ವೇಷಿಸುವುದೇ ಇಂತಹ ‘ಮರೆ’ ಗಳಾಚೆಗಿನ ಜಲ ಕಣ್ಣುಗಳನ್ನ, ಮಾಸಡಿ ಅವರ ಸೃಜನ ಪ್ರತಿಭೆ ಕೂಡ ಈ ಬಗೆಯದೆ. ಕೃಷ್ಣ ಮಾಸಡಿ ಅವರು ಭಾಷೆ ಮಾಧ್ಯಮವಾದ ಕಥನದಲ್ಲಿ ಹಾಗೂ ದೃಶ್ಯ ಮಾಧ್ಯಮವಾದ ಸಿನಿಮಾಗಳ ಮೂಲಕ ಬದುಕಿನ ‘ಮಾಯಾವಾಸ್ತವ’ ಗಳನ್ನು ಅನಾವರಣ ಮಾಡುತ್ತಿರುವ ಲೇಖಕ. ತಾನು ಸೃಷ್ಟಿಸಿದ ಕೃತಿಯ ಬಗೆಗಿನ ಮೋಹವನ್ನು ಮೀರಿಯೂ ತನ್ನ ಕೃತಿಗಳ ಬಗ್ಗೆ ನಿರ್ಭಾವುಕರಾಗಿ ವಿಮರ್ಶಿಸುವ ಗುಣವುಳ್ಳವರು.

ನವ್ಯ ಪಂಥದ ತೀವ್ರ ಪ್ರಭಾವಕ್ಕೆ ಒಲಿದು ಬರವಣಿಗೆಯನ್ನು ಆರಂಭಿಸಿದರೂ ತಮ್ಮ ಅಭಿವ್ಯಕ್ತಿಯಲ್ಲಿ ಭಾರತೀಯ ಗ್ರಾಮಜೀವನದ ಆಧುನಿಕ ಆಯಾಮ, ಪಲ್ಲಟಗಳನ್ನು ಅತೀವ ಅನುರಕ್ತಿಯಿಂದ ಶೋಧಿಸಿ ಬರೆದಾಗಲೂ ಗುಪ್ತಭಕ್ತನ ಹಾಗೆ ಮರೆಯಲ್ಲಿಯೇ ಇರಬಯಸಿದವರು ಆ ಕಾರಣದಿಂದಲೇ ಮಾಸಡಿಯವರ ಬರಹಗಳು ಸ್ಫಟಿಕದ ಪ್ರತಿಫಲನ ಗುಣವನ್ನು ಹಾಗೂ ಮಣ್ಣಿನ ವಾಸನೆಯನ್ನು ತಟ್ಟನೆ ಹೊಳೆಸುವ ಮೂಲಕ ಓದುಗರಿಗೆ ಆಪ್ತತೆಯ ಅನುಭೂತಿಯನ್ನು ನೀಡುತ್ತವೆ.
(ಬೆನ್ನುಡಿ )
ಕೆ. ವೈ . ನಾರಾಯಣಸ್ವಾಮಿ
ಧಾತ್ರಿ ಪುಸ್ತಕ
ಬೆಲೆ : ರೂ ೧೦೦/-
ಡೈಲಿ ಬುಕ್ : ಕೃಷ್ಣ ಮಾಸಡಿಯವರ ’ಸ್ವರ್ಗದ ಬಣ್ಣ’
ನಿಮಗೆ ಇವೂ ಇಷ್ಟವಾಗಬಹುದು…

0 Comments