ಡೈಲಿ ಬುಕ್ : ಆನಂದ ಭೋವಿಯವರ ’ಹಿಡಿ ಮಣ್ಣಿನ ಬೊಗಸೆ’

ಸಂಯಮಶೀಲ ಮನಸ್ಸಿನ ಸ್ಪಂದನಶೀಲ ಕತೆಗಳು

’ಅವಧಿ’ ಓದುಗರಿಗೆ ಪರಿಚಿತರಾಗಿರುವ ಆನಂದ ಭೋವಿಯವರ ಕಥಾಸಂಕಲನ ಬಿಡುಗಡೆ ಆಗುತ್ತಿದೆ

ಪುಸ್ತಕದ ಮುಖಪುಟ ಮತ್ತು ಸುನಂದಾ ಕಡಮೆಯವರು ಬರೆದ ಮುನ್ನುಡಿ ’ಅವಧಿ’ ಓದುಗರಿಗಾಗಿ

ಆನಂದ ಭೋವಿ ಎಂಬ ಈ ಕತೆಗಾರನ ಹೆಸರು ಮಾತ್ರ ಕೇಳಿ ಗೊತ್ತಿದ್ದ ನನಗೆ ಸ್ನೇಹಿತರೂ ಸಹಲೇಖಕರೂ ಆದ ಜಯಪ್ರಕಾಶ ಅಬ್ಬಿಗೇರಿಯವರು ಪರಿಚಯಿಸಿ, ಇವರ ಕತೆಗಳಿಗೊಂದು ಮುನ್ನುಡಿ ಬರೆದುಕೊಡುವಂತೆ ಕೇಳಿಕೊಂಡರು. ನಿಜಕ್ಕೂ ನಾನು ಆನಂದ ಭೋವಿಯವರ ಯಾವುದೇ ಕತೆಗಳನ್ನು ಇಲ್ಲಿಯವರೆಗೆ ಓದಿದ್ದಿಲ್ಲ. ಕತೆಯ ಅಆಇಈ ಗೊತ್ತಿಲ್ಲದ ಕೆಲವರು ಅನಗತ್ಯ ವಿವರಗಳನ್ನು ದಂಡಿಯಾಗಿ ಬರೆದು, ಯಾವೊಂದು ಘಟನೆಗಳಿಗೂ ಪರಸ್ಪರ ಸಂಬಂಧವಿಲ್ಲದಂತೆ ಕೇವಲ ಛಿದ್ರ ಚಿತ್ರಗಳನ್ನು ಕೊಟ್ಟು, ಈ ರೀತಿಯ ಬರಹಗಳನ್ನು ಯಾವ ಪ್ರಕಾರಕ್ಕೆ ಸೇರಿಸಬೇಕೆಂದೇ ತಿಳಿಯದ ಸಂದಿಗ್ಧಕ್ಕೆ ಓದುಗರನ್ನು ತಳ್ಳುವ ಅನೇಕ ಕತೆಗಳು ಇಂದು ಕಥಾ ಕ್ಷೇತ್ರದಲ್ಲಿ ದಾಂಗುಡಿಯಿಡುತ್ತಿರುವುದನ್ನು ಇಷ್ಟು ದಿನದ ಅಲ್ಲಲ್ಲಿಯ ನನ್ನ ಓದಿನ ಮಿತಿಯಲ್ಲಿ ಮನಗಂಡಿದ್ದರಿಂದ, ಅಬ್ಬಿಗೇರಿಯವರ ಒತ್ತಾಯಕ್ಕೆ ಮಣಿಯದೇ ‘ಅವರು ಕತೆಗಳನ್ನು ಕಳುಹಿಸಲಿ, ಕತೆಗಳು ನನಗೆ ಇಷ್ಟವಾದರೆ ಮಾತ್ರ ನಾನು ಅವು ಯಾಕೆ ಇಷ್ಟವಾದವು ಅಂತ ಬರೆಯಬಹುದು, ಇಷ್ಟವಾಗದಿದ್ದರೆ ನನ್ನಿಂದ ಅಪ್ರಾಮಾಣಿಕವಾಗಿ ಹೊಗಳಿ ಬರೆಯುವದು ಅಸಾಧ್ಯ’ ಅಂತ ಯಾವುದೇ ಬಿಗುಮಾನವಿಲ್ಲದೇ ಹೇಳಿಬಿಟ್ಟಿದ್ದೆ.
ಅದರ ಮಾರನೇ ದಿನವೇ ಪ್ರವೃತ್ತಿಯಿಂದ ಕತೆಗಾರರೂ ವೃತ್ತಿಯಿಂದ ಪ್ರೌಢಶಾಲೆಯ ಮುಖ್ಯಾಧ್ಯಾಪಕರೂ ಆಗಿರುವ ಸುಸಂಸ್ಕೃತ ತರುಣ ಈ ಆನಂದ ಭೋವಿಯವರು, ತಮ್ಮ ಕತೆಗಳ ಕಟ್ಟನ್ನು ಹಿಡಿದು ನಮ್ಮ ಮನೆಯನ್ನು ಹುಡುಕುತ್ತ ಬಂದು, ಒಂದೂವರೆ ಗಂಟೆಗಳ ವರೆಗೆ ಕೂತು ಮಾತನಾಡಿಕೊಂಡು ಹೋದರು. ಅವರ ಬಳಿಯ ಮಾತುಗಳೇ ಭಾವಜೀವಿಯೊಬ್ಬನ ಮತ್ತು ಒಳ್ಳೆಯ ಕತೆಗಾರನೊಬ್ಬನ ಸನಿಹವನ್ನು ನನಗೆ ತಂದುಕೊಟ್ಟಿತ್ತು. ಆನಂದ್ ಹಿಂತಿರುಗಿದ ನಂತರ ಊಟಕ್ಕೆ ಕೂತಾಗ ಸುಮ್ಮನೇ ಅವರ ಒಂದೆರಡು ಕತೆಗಳನ್ನು ಕುತೂಹಲದಿಂದ ತಿರುವಿ ಹಾಕಿದೆ. ಅರೆ! ಅನ್ನಿಸಿತು. ಊಟ ಮುಗಿಸಿ ಕೈ ತೊಳೆಯಲು ಬಿಡದೇ ನಾಲ್ಕನೇಯ ಕತೆಯವರೆಗೆ ಬಿಡದೇ ಕೌತುಕದಿಂದ ಓದಿಸಿಕೊಂಡಿತು. ಹಾಗೆ ಆನಂದರ ಕತೆಗಳು ನನ್ನೊಳಗನ್ನು ಅಚ್ಚರಿಯಿಂದ ತಟ್ಟತೊಡಗಿದವು. ಸಾಮಾನ್ಯವಾಗಿ ಎಲ್ಲ ಕತೆಗಳಲ್ಲೂ ತನ್ನ ಹಂದರವನ್ನು ಚಾಚುವ ಕಟಮಳ್ಳಿ ಎಂಬ ಗ್ರಾಮವು ಕೇವಲ ಒಂದು ಊರಿನ ಹೆಸರಾಗಿ ಬರದೇ ಆನಂದ ರ ಪಾತ್ರಗಳ ಸೃಷ್ಟಿಕ್ರಿಯೆಯಲ್ಲಿ ಒಂದು ರೂಪಕವಾಗಿ ಕೂಡ ಬೆಳೆಯುತ್ತ ಸಾಗುವುದನ್ನು ನವು ಗಮನಿಸಬಹುದು.
ಕತೆ ಅಂದರೆ ಒಂದು ಅಪ್ಪಟ ಜನಜೀವನ, ಒಂದು ಸಂಸ್ಕೃತಿಯ ಪ್ರತಿಬಿಂಬ, ಬಡವರ ದಲಿತರ ಕುರಿತು ಇರಬೇಕಾದ ಅಂತಃಕರಣ, ಹಸಿವಿನ ಕುರಿತು ಮೂಡುವ ತಿಳಿವಳಿಕೆ, ಮಹಿಳೆಯ ಸಮಾನತೆಯ ಕುರಿತಾದ ಅರಿವು, ಹಲವು ಪಾತ್ರಗಳ ಮನಸ್ಥಿತಿಯ ಅನಾವರಣ. ಕತೆಗಾರನೊಬ್ಬನ ಸಂವೇದನೆಗಳಿಗೆ ನಿಷ್ಟ ಅಭಿವ್ಯಕ್ತಿ. ಆಸಕ್ತಿದಾಯಕ ನಿರೂಪಣೆ. ಒಂದು ಘಟನೆಯ ಸುತ್ತ ಹೆಣೆದುಕೊಂಡ ಅನುಭವಗಳು, ಹಲವಾರು ಮನಸ್ಥಿತಿಗಳ ಸಂಘರ್ಷ, ಯೋಚನೆಗಳ ಸರಣಿ, ಅರ್ಥಪೂರ್ಣ ವಿವರಗಳ ಒಗ್ಗೂಡುವಿಕೆ. ಜೀವನ ಪ್ರೀತಿ ಮತ್ತು ಧ್ಯಾನಸ್ಥ ಕಟ್ಟುವಿಕೆ, ಶೋಷಣೆಯ ವಿರುದ್ಧ ಎತ್ತುವ ದನಿ, ಅಸಹಾಯಕ ಗಳಿಗೆಗಳಲ್ಲಿ ಪಾತ್ರವೊಂದು ನಡೆದುಕೊಳ್ಳುವ ಪರಿ, ಅವಮಾನದ ಕ್ಷಣಗಳಲ್ಲಿ ಮನುಷ್ಯ ಸ್ವಭಾವಗಳು ಸಂಕುಚಿತಗೊಳ್ಳುವ ಬಗೆ. ಅನೇಕ ವ್ಯಕ್ತಿಗಳ ವಾರೆನೋಟ, ಸೀಳು ನೋಟ, ಒಬ್ಬರ ದೃಷ್ಟಿಕೋನದಲ್ಲಿ ಇನ್ನೊಬ್ಬರ ಇರುವಿಕೆ, ಮುಕ್ತ ಸಾಮಾಜಿಕ ಚಿಂತನೆ, ಕತೆಯ ಪರಿಸರಕ್ಕೆ ಅಯಾಚಿತವಾಗಿ ಒದಗಿ ಬರುವ ಭಾಷೆಯ ಬಳಸುವಿಕೆ… ಹೀಗೆ ಕತೆಯೊಳಗಿನ ಶಾರೀರಿಕ ಅಂಶಗಳು ಬೆಳೆಯುತ್ತಾ ಹೋಗಬೇಕು ಎಂಬೆಲ್ಲ ವಿವರಗಳು ನನ್ನ ಕಥಾ ಸೃಷ್ಟಿಯ ಅನುಭವದ ಮಿತಿಯಲ್ಲಿ ನನಗೆ ಸಹಾಯಕವಾಗಿ ನಿಂತಂತಹ ಕಥಾ ಲಕ್ಷಣಗಳು. ಇವೆಲ್ಲವೂ ಈ ಕಥೆಗಾರ ಆನಂದ ಭೋವಿಯವರ ಕಥನಲೋಕದಲ್ಲಿ ಒಟ್ಟಾರೆಯಾಗಿ ನನಗೆ ದೊರೆತಿರುವದರಿಂದ, ಇವರು ನನಗೆ ಒಂದು ಹಂತದಲ್ಲಿ ಮೆಚ್ಚಿನ ಕತೆಗಾರರೂ ಆಗಿ ಓದಿಸಿಕೊಂಡಿದ್ದಾರೆ. ಇಂಥ ಕತೆಗಳಿಗೆ ಮುನ್ನುಡಿ ಬರೆಯುವದೇ ಒಂದು ಹೆಮ್ಮೆಯ ಸಂಗತಿ.
ಬೀರ ಮತ್ತು ರುಕ್ಮಿಯರ ಘನತೆಯನ್ನು ತನ್ನೊಡಲಲ್ಲಿ ಪಡೆದ ‘ಹಿಡಿ ಮಣ್ಣಿನ ಬೊಗಸೆ’ ಕತೆಯಲ್ಲಿ, ಗ್ರಾಮೀಣ ಭಿತ್ತಿಯೊಡನೆ ಅರಳಿರುವ ಇಲ್ಲಿಯ ಭಾಷೆಯ ಪ್ರಾದೇಶಿಕತೆ ನಮ್ಮನ್ನು ಹಿಡಿದು ನಿಲ್ಲಿಸುವಂಥದ್ದು. ‘ಅವರ ಉಸಿರೇ ನಿಂತ ಹಾಗಾಯ್ತು’ ಎನ್ನಲು ಆನಂದ್ ‘ಅವರ ಎದೀ ಓಟ ನಿಂತ ಹಾಗಾಯ್ತು’ ಎನ್ನುತ್ತಾರೆ. ಕೊಪ್ಪರಿಗೆ ಹೊನ್ನನ್ನು ಬೀರ ಮತ್ತು ಚರಂತಯ್ಯ ಸ್ವಾಮಿ ‘ಬದುಕು’ ಅಂತ ಕರೆಯುತ್ತಾರೆ. ಬೀರನು ರಾತ್ರಿಯ ಹೊತ್ತು ಬೈಲು ಕಡೆಗೆ ಮಣ್ಣಿನ ದಿಬ್ಬಕ್ಕೆ ಹೋದಾಗ, ಕೂತ ಜಾಗದಲ್ಲೇ ಒಂದು ಹೊಳೆಯುವ ವಸ್ತುವನ್ನು ಕಾಣುತ್ತಾನೆ. ನಂತರ ಕತೆಯ ಕೊನೆಯಲ್ಲಿ ಹಿಡಿ ಮಣ್ಣಿನಲ್ಲಿ ಸಿಕ್ಕ ನಾಲ್ಕಾರು ಗಾಜಿನ ಚೂರುಗಳು ಅಲ್ಲಿ ನೆರೆದ ವಿಜ್ಞಾನಿಗಳನ್ನೂ ಅಣಕಿಸುತ್ತ, ಹೊನ್ನಿಗಿಂತ ಹಿಡಿ ಮಣ್ಣೇ ಶ್ರೇಷ್ಟವೆಂಬ ವ್ಯಾಖ್ಯಾನವನ್ನು ಪ್ರತಿಬಿಂಬಿಸುತ್ತದೆ. ಆನಂದರು ಕತೆಯೊಳಗಿನ ಹಿಂಡುನಾಯಿಗಳ ಕೂಗಾಟವನ್ನೂ ನಮಗೆ ಕೇಳಿಸುವಂತೆ ಬರೆಯಬಲ್ಲರು. ಅದು ಕೂಡ ಮನುಷ್ಯನ ಒಳಗಿನ ಗೊಂದಲಗಳ ರೂಪಕವಾಗಿ ನಮ್ಮನ್ನು ಕತೆಯುದ್ದಕ್ಕೂ ಕಾಡುತ್ತವೆ. ಹೀಗೆ ಸಣ್ಣ ಸಂಗತಿಗಳನ್ನು ಕೂಡ ಬಹುವಿಸ್ತಾರಕ್ಕೆ ಕೊಂಡೊಯ್ಯುವ ಶಕ್ತಿಯಿದೆ ಇವರ ಬರವಣಿಗೆಯ ಶೈಲಿಗೆ.
‘ಚೌತ್ರಿ’ ಕತೆಯಲ್ಲಿ ಮೊದಲಿಗೇ ಸಾಯುವ ಶಿವಬಸವ್ವ, ಅವಳ ಸುತ್ತ ಕುಳಿತು ಅವಳನ್ನು ಹಾಡಿ ಹೊಗಳಿ ಅಳುವ ಸೊಸೆಯಂದಿರು ಹಾಗೂ ಮಗಳು, ಪರಸ್ಪರ ಜಿದ್ದಿಗೆ ಬಿದ್ದಂತೆ ವತರ್ಿಸುವರು. ಮನುಷ್ಯ ಸಂಬಂಧಗಳ ನವಿರುತನ ಮಾಯವಾಗುವುದೇ ಇಲ್ಲಿ. ಪ್ರಯೋಗಾತ್ಮಕವಾಗಿ ಮತ್ತು ವ್ಯಾವಹಾರಿಕವಾಗಿ ಎಲ್ಲವನ್ನೂ ನೋಡತೊಡಗಿದಾಗ ಭಾವನಾತ್ಮಕತೆ ನಾಶವಾಗುತ್ತದೆ. ನಂತರ ಇಲ್ಲಿ ಹೆಣ ಹೂಳೂವ ದೃಶ್ಯವೊಂದು ಬರುತ್ತದೆ. ಆಗ ಅತ್ತೆಯ ಕತ್ತಿನಲ್ಲಿರುವ ಬಂಗಾರದ ಸರದ ವಿಷಯವಾಗಿ ಸೊಸೆಯಂದಿರಲ್ಲೇ ಪರಸ್ಪರ ಜಗಳ ಆರಂಭವಾಗುತ್ತದೆ. ನಂತರ ಸತ್ತ ಶಿವಬಸವ್ವ ಹೇಗೆ ಬಾಳು ಕಟ್ಟಿಕೊಂಡಿದ್ದಳು, ಎಷ್ಟು ಕಷ್ಟ ನಷ್ಟ ಅನುಭವಿಸಿದ್ದಳು ಎಂಬ ಕುರಿತು ವಿವರಗಳಿವೆ. ನಂತರ ಇವರ ಜಗಳಕ್ಕೆ ಮಂಗಳ ಹಾಡುವಂತೆ ಶಿವಬಸವ್ವಳ ಬಂಗಾರದ ಸರವನ್ನು ಅವಳ ಕತ್ತಿನಲ್ಲಿಯೇ ಪುನಃ ತೊಡಿಸಿ ಹೆಣ ಹೂಳಲಾಗುತ್ತದೆ. ಅಣ್ಣನ ಹೊಲದಲ್ಲಿ ಹುಗಿದ ಹೆಣ ಕೊಳೆತ ನಂತರ , ಅದು ನೇಗಿಲಿಗೇನಾದರೂ ಸಿಕ್ಕಿ ಮೇಲೆ ಬಂದು ಎಲ್ಲಿ ಅಣ್ಣನ ಹೆಂಡತಿಯ ಪಾಲಾಗುತ್ತದೋ ಎಂಬ ಹೊಟ್ಟೆಕಿಚ್ಚು ತಮ್ಮನ ಹೆಂಡತಿಯರಲ್ಲಿ ಆರಂಭವಾಗುತ್ತದೆ. ಆಗ ತಮ್ಮನು ಅವ್ವನ ಹೆಸರಲ್ಲಿ ಚೌತ್ರಿ ಕಲ್ಲು ಕೆತ್ತಿಸಿ ಸಮಾಧಿ ಮಾಡಿದ ಜಾಗದಲ್ಲಿ ಹುಗಿಸಿ ಕಟ್ಟೆ ಕಟ್ಟಿಸುತ್ತಾನೆ. ಇಲ್ಲಿ ತನಗೆ ಸಿಗದ ಸಂಪತ್ತು ಅದು ಬೇರೆಯವರಿಗೂ ಸಿಗಕೂಡದು ಎಂಬ ಮನುಷ್ಯನ ವಾಂಛೆ ಎದ್ದು ಕಾಣುತ್ತದೆ. ಬದುಕು ಇಂತೆಲ್ಲ ವ್ಯವಹಾರಗಳ ಸಂಗಮವಾಗಿ ಪರಿಣಮಿಸುತ್ತದೆ. ಎಷ್ಟು ಸಹಜ ಅನ್ನಿಸುವ ಪ್ರಾದೇಶಿಕ ಭಾಷೆ ಆನಂದ ಅವರದು.
‘ಹೋರಿ’ ಕತೆಯಲ್ಲಿ ಒಂದಿಡೀ ಆವರಣವನ್ನು ಪ್ರಾದೇಶಿಕ ಭಾಷೆಯ ಸೊಗಡಿನಲ್ಲಿ ಕಥೆಗಾರರು ನಿರೂಪಿಸುತ್ತಾರೆ. ಹೋರಿ ಮರಿ ಹನುಮಂತನ ಕೂಡ ಆಟಾ ಆಡಿಕೋತ ಬುರು ಬುರು ಕಾಂಗ್ರೆಸ್ ಕಸದಂಗ ಬೆಳಿತು ಅನ್ನುತ್ತಾರೆ ಆನಂದ. ಗ್ರಾಮೀಣ ವಲಯದ ಇಂಥ ನುಡಿಗಟ್ಟುಗಳು ಇಲ್ಲಿಯ ಎಲ್ಲಾ ಕತೆಗಳಲ್ಲೂ ಸಾಮಾನ್ಯವಾಗಿ ನಮಗೆ ದೊರಕುತ್ತ ಸಾಗುತ್ತವೆ. ಹೋರಿಯೊಂದು ಊರ ತುಂಬ ಹಾಕೋ ಆಕಳ ಕರುಗಳಿಗೆ ಅಪ್ಪ ಆಗುವ ರೀತಿಯನ್ನು ಸಹ ತುಂಬ ವಿನೋದಮಯವಾಗಿ ವಿವರಿಸುತ್ತಾರೆ ಆನಂದ. ಫೀರಸಾಬ ಹರಯಕ್ಕೆ ಬಂದ ಹೋರಿಗಳಿಗೆ ಮೂಗುದಾರ ಹಾಕಿ ತನ್ನ ಲಯಕ್ಕೆ ತರುವವ. ಫೀರ್ ಸಾಬರಲ್ಲಿ ಗಂಡಸುತನ ಕಳೆದುಕೊಂಡ ಹೋರಿಗಳ ನೋವನ್ನೂ ಇವರು ಅಷ್ಟೇ ಸಂಯಮದಿಂದ ಹೇಳಬಲ್ಲರು. ಹರಯ ಕಳಕೊಂಡ ಹೋರಿ ಅಂಬಾ ಅಂತ ಒದರಿದರೆ, ಕುರಿಮರಿ ಒದರಿದ ಹಾಗೆ ಕೇಳಿಸುತ್ತಿತ್ತು ಎಂಬ ಸೂಕ್ಷ್ಮವನ್ನು ಹಿಡಿಯುತ್ತಾರೆ.
ಆಕಳ ಮೇಲೆ ತನ್ನ ಹೋರಿ ಬಿಡಲಿಕ್ಕೆ ಹನುಮಂತ ನೂರೋ ಇನ್ನೂರೋ ಹಣ ಪಡೆಯುತ್ತ, ಅದೇ ಒಂದು ಉದ್ಯೋಗ ಮಾಡಿಕೊಂಡಿದ್ದ ಸಮಯದಲ್ಲಿ ತಾಯಿ ತಂಗವ್ವ ಈ ಮಗನ ಮದುವೆ ಮಾಡುವ ತಯಾರಿ ನಡೆಸುತ್ತಾಳೆ. ನಂತರ ಹನುಮಂತನ ಹೆಂಡತಿ ಕಾಶವ್ವನಿಗೇ ಮಕ್ಕಳಾಗುವುದು ತಡವಾಗುತ್ತದೆ. ಅದೇ ವೇಳೆಗೆ ಅವನ ಹೋರಿಯೂ ಶಕ್ತಿ ಕಳೆದುಕೊಂಡು, ಊರಿನ ಆಕಳಿಗೆಲ್ಲ ಕೃತಕ ಗರ್ಭಧಾರಣೆ ಆರಂಭವಾಗುತ್ತದೆ. ಕಾಶವ್ವನ ಬಾಯಲ್ಲಿ ‘ಈ ಮಂದೀ ಬಾಯಗ ಸಿಕ್ಕು ಪ್ಲಾಸ್ಟಿಕ್ ಚರಗೀ ಆಗೇನಿ’ ಅಂತ ಹೇಳಿಸುವ ಆನಂದರು ಕೊಡುವ ರೂಪಕಗಳು ತಾಜಾ ಆಗಿವೆ. ಹೊಸದು ಅನಿಸುತ್ತದೆ. ವಾಸ್ತವ ಸತ್ಯಗಳನ್ನು ಕೆಲವೇ ಸಾಲುಗಳಲ್ಲಿ ಹೇಳುವ ಶಕ್ತಿ ಆನಂದರ ಕತೆಗಳಿಗೆ ಇವೆ. ಇಡೀ ಸಂಕಲನದಲ್ಲಿ ಈ ತಂಗವ್ವನ ಹೋರಿಯ ಕತೆ ಅರ್ಥಪೂರ್ಣವೂ ವಿಶಿಷ್ಟವೂ ಆಗಿದೆ.
‘ಒಲೆ ಹತ್ತಿ ಉರಿದೊಡೆ’ ಕತೆಯಲ್ಲಿ , ಇವರ ಕಥನದ ಭಾಷೆ ಓದುತ್ತ ಓದುತ್ತ ಅವರ ಭಾಷೆಯಲ್ಲೇ ನನ್ನ ಮುನ್ನುಡಿಯೂ ಕಟ್ಟಿಕೊಳ್ಳತೊಡಗುವಷ್ಟು ಆಪ್ತ ಲೋಕ ಅವರ ಭಾಷಾ ಶೈಲಿಗಿದೆ. ಇವರು ಸಂಭಾಷಣೆಯಲ್ಲೇ ಕತೆ ಕಟ್ಟಿಕೊಡುತ್ತಾರೆ. ನವಿರಾದ ಭಾವ ಹೊಮ್ಮಿಸುತ್ತಾರೆ. ಪ್ರೀತಿ ಪ್ರೇಮ ಪ್ರಣಯದ ಸಂಗತಿಗಳನ್ನು ನಾಜೂಕಾಗಿ ಎಲ್ಲಿಯೂ ಅಸಹ್ಯವಾಗದ ಹಾಗೆ ನಿರೂಪಿಸುತ್ತಾರೆ. ಗ್ರಾಮೀಣ ಮುಗ್ಧ ಭಾಷೆಯನ್ನು ಅವರು ಹ್ಯಾಗೆ ಉಚ್ಛರಿಸುತ್ತಾರೋ ಅದೇ ಧಾಟಿಯಲ್ಲಿ ಅಕ್ಷರಗಳಲ್ಲಿ ಹಿಡಿದು ಬರೆಯುವ ಛಲ ಹಾಗೂ ಶಿಸ್ತು ಇವರಲ್ಲಿದೆ. ಅದು ಮೌಲಿಕವಾದುದು ಕೂಡ. ಉದಾಹರಣೆಗೆ ರಿಟಾಯರ್ಡ್ ಅನ್ನಲು ರಿಟ್ರೆಡ್ ಅಂತ ಉಚ್ಛರಿಸುವ ಹಳ್ಳಿಗರ ಜೀವನ ಶೈಲಿಯ ಆತ್ಮೀಯತೆಯನ್ನು ಕತೆಗಳು ಸ್ಪುರಿಸುತ್ತವೆ. ಗುರಪ್ಪ ಮಾಸ್ತರ್ ಹಾಗೂ ಕಲ್ಲವ್ವನ ಸಂಬಂಧವನ್ನು ಯಾವುದೇ ಅಪಸ್ವರವಿಲ್ಲದೇ ಕಥೆಗಾರ ಹೇಳಬಲ್ಲರು. ಬಸಲಿಂಗ ಮಾಸ್ತರನ ಅನ್ಯಾಯಕ್ಕೆ ಚಾಮುಂಡಿಯಾಗಿ ಪರಿವತರ್ಿತಳಾದ ಕಲ್ಲವ್ವ ಮಹಿಳಾ ಸಬಲೀಕರಣದ ಒಂದು ಕಿಡಿಯಾಗಿ ತೋರುತ್ತಾಳೆ.
‘ಸುಮ್ಮನಿರು’ ಕತೆಯಲ್ಲಿ ಶಿಷ್ಟ ಭಾಷೆಯ ನಿರೂಪಣೆಯನ್ನು ಕೃತಕವಾಗದಂತೆ ಆನಂದ್ ತಂದಿದ್ದಾರೆ. ಹರಯದ ಹುಡುಗ ಹುಡುಗಿಯರ ತುಂಟ ಸುತ್ತಾಟದ ಕತೆಯನ್ನು ಹೇಳಿದಂತೆಯೇ ಅವುಗಳ ಒಳಗಿನ ಸಣ್ಣಪುಟ್ಟ ಸಮಸ್ಯಾತ್ಮಕ ಚಿಂತನೆಗಳನ್ನೂ ಇವರು ವಿಶ್ಲೇಷಿಸಬಲ್ಲರು. ಮನಸ್ಸು ಕದ್ದ ಹುಡುಗಿಯೊಬ್ಬಳು, ಅನಿವಾರ್ಯವಾಗಿ ಇನ್ನೊಂದು ಮದುವೆಯಾಗಿ, ನಂತರ ಸಿಕ್ಕಾಗ ಅಪರಿಚಿತಳಂತೆ ಆಡುವುದನ್ನೂ ಸಹ ಅಷ್ಟೇ ಸಹನೆಯಿಂದ ಇವರು ಬರೆಯಬಲ್ಲರು. ಯಾಕೆಂದರೆ ಬದುಕು ಅನಿವಾರ್ಯವಾದಾಗ ಹುಡುಗಿಯೊಬ್ಬಳು ಸುರಕ್ಷಿತ ದಾರಿಯನ್ನು ಆಯುವದನ್ನು ಕಂಡ ಕಥಾನಯಕನ ಮನಸ್ಸು ಛಿದ್ರಗೊಳ್ಳುವ ರೀತಿಯನ್ನು ಎಲ್ಲರ ಅನುಭವಕ್ಕೆ ದಕ್ಕುವ ಹಾಗೆ ನಿರೂಪಿಸುವದು ಬರವಣಿಗೆಯ ಅನನ್ಯತೆಯನ್ನು ಕಾಣಿಸುತ್ತದೆ.
‘ಅಳಬೇಡ ನನಕಂದ’ ಕತೆಯಲ್ಲಿ ಮನುಷ್ಯ ಸಂಬಂಧಗಳನ್ನು ಹದವಾಗಿ ಅರ್ಥ ಮಾಡಿಕೊಂಡು ತೀಡಬಲ್ಲವರು ಆನಂದ್. ‘ಹರಕ ಕೌದಿಯಂಗ ಮೈಯೊಳಗಿನ ತೊಗಲು ಜೋತು ಬಿದ್ದಿರುವ ಮುದುಕಿ’ ಎಂಬ ಮಾತು ಸೂಲಗಿತ್ತಿಯ ವರ್ಣನೆಯೊಂದರಲ್ಲಿ ಬರುತ್ತದೆ. ಒಂದು ದೈನಂದಿನ ರೂಪಕದಲ್ಲಿ ಕಣ್ಣಿಗೆ ಕಟ್ಟುವಂತೆ ರೂಪವನ್ನು ಪ್ರಸ್ತುತಪಡಿಸುವ ಸೂಕ್ಷ್ಮತೆ ಇರುವದರಿಂದಲೇ ಈ ಕತೆಗಳಿಗೆ ನೈಜತೆ ಒಲಿದಿದೆ. ಸೂಲಗಿತ್ತಿ ಸಾತವ್ವನನ್ನು ಹುಡುಕುತ್ತ ಬರುವ ವ್ಯಕ್ತಿಯೊಬ್ಬ ಅವಳ ಉಪಚಾರಕ್ಕೆ ಮಾರುಹೋಗುತ್ತಾನೆ. ಅವಳ ಅನಾರೋಗ್ಯದ ಕಾರಣ ಆತ ಹೆಂಡತಿಯನ್ನೇ ಸೂಲಗಿತ್ತಿಯ ಮನೆಗೆ ಕರೆತರುತ್ತಾನೆ. ಅವಳ ಕೂಸು ಹಾಲು ಕುಡಿಯುವ ಸೋಜಿಗದಲ್ಲಿ ಸೂಲಗಿತ್ತಿಯ ಒಡಲ ಬೆಂಕಿಯೆಲ್ಲ ಹೊರಬೀಳುತ್ತದೆ. ಅವಳ ಅಂತರಂಗದ ಆಳದಲ್ಲಿ ಊರಿನ ಸತ್ಯಗಳು ರಹಸ್ಯವಾಗಿ ಬತ್ತಿಹೋಗಿರುತ್ತವೆ. ಒಂದು ಹೊಸ ಜೀವವೊಂದರ ಸ್ವಾಗತಕ್ಕೆ ಅಗತ್ಯಳಾಗಿರುವ ಸೂಲಗಿತ್ತಿ, ತನ್ನೆಲ್ಲ ನೋವುಗಳನ್ನೂ ನುಂಗಿಕೊಂಡು ಪರರ ಏಳಿಗೆಗಾಗಿ ಹಂಬಲಿಸುವದು ಅವಳ ಘನತೆಯನ್ನು ಎತ್ತಿ ಹಿಡಿವ ಸದ್ಭಾವನೆಯಲ್ಲಿ ಕತೆ ಮೀಯುತ್ತದೆ.
‘ಕಾಗೆ’ ಕತೆಯಲ್ಲಿ ಒಂದು ಮತು ಬರುತ್ತದೆ. ‘ಈಗೇನೂ ಯಾವ ಕೆಲಸಾನೂ ಯಾವ ಜಾತಿಗೆ ಅಂಟಿಕೊಂಡಿಲ್ಲ, ರೊಕ್ಕ ಹುಟ್ಟತೈತಿ ಅಂದರ ಬೇಕಾದ್ದ ಕೆಲಸಾ ಬೇಕಾದ್ದವರು ಮಾಡ್ತಾರ’ ಜಾತಿ ಪದ್ದತಿಯ ನಿಮರ್ೂಲನೆ ಇಂದು ಈ ರೀತಿಯಿಂದ ಆಗಬೇಕಾಗಿದೆ. ಐಶ್ವರ್ಯ ಕಟಿಂಗ್ ಸಲೂನ್ ಇದಕ್ಕೆ ಕಟಮಳ್ಳಿಯಲ್ಲಿ ದಾರಿ ಮಾಡಿಕೊಡುತ್ತದೆ ಆದರೆ ಅದನ್ನೇ ಹೊಟ್ಟೆಪಾಡಿಗಾಗಿ ದಂಧೆ ಮಾಡಿಕೊಂಡಿದ್ದ ಅಡಿವೆಪ್ಪನ ದುಗುಡಕ್ಕೆ ಅದು ಕಾರಣವಾಗುವ ಪರಿಯನ್ನು ಕತೆ ಇನ್ನೊಂದೇ ಕೋನದಲ್ಲಿ ನಮ್ಮನ್ನು ಯೋಚನೆಗೆ ಎಳೆಯುತ್ತದೆ.
‘ಪೌಜಿಯೊಬ್ಬನ ಪಿಯರ್ಾದೆ’ ಕತೆಯಲ್ಲಿ ಕತೆಯ ಹಿನ್ನೆಲೆಯ ತೀಕ್ಷ್ಣ ಆವರಣವನ್ನು ಸೃಷ್ಟಿಸಿಕೊಂಡೇ ಹುಟ್ಟಿಕೊಳ್ಳುತ್ತದೆ. ಜನ ಸಮೂದಾಯದ ಬದುಕಿನ ಎಳೆಯಾಗಿರುವ ಸಂತೆಯೊಳಗಿನ ಗದ್ದಲ ಬರಿ ಅವರ ದೈನಿಕದ ಚೆಲುವನ್ನು ಮಾತ್ರ ಅಲ್ಲ ಭವಿಷ್ಯದ ಅಂದವನ್ನೂ ಸಹ ಮುರಿದುಕಟ್ಟುವಂಥದು. ಕಣ್ಣ ರೆಪ್ಪೆ ಮುಚ್ಚಿದರೆ ಸಾವಿನ ನೆನಪು ಕಾಡಿಸುವ ಊರ ತುಂಬ ಹರಡಿಕೊಂಡ ಲಡಾಯಿಯ ವಿಸ್ತಾರವು ಅಮಾಯಕ ಜೀವಿಗಳ ಬಲಿಗಾಗೇ ಕಾದಿದ್ದಂತೆ ಭಯಹುಟ್ಟಿಸುತ್ತವೆ. ಆನಂದ್ ಪ್ರತಿ ಕತೆಯಲ್ಲೂ ಒಂದಿಲ್ಲೊಂದು ರೀತಿಯಲ್ಲಿ ಹಿಂಸೆಯನ್ನು ವಿರೋಧಿಸುತ್ತಾರೆ. ಇದು ಮೂಲದಲ್ಲೇ ಕತೆಯ ಬಂಧವನ್ನು ರಕ್ಷಿಸುತ್ತದೆ.
‘ಮಠದ ಭಾವಿಯ ನೀರು’ ಪರಸಪ್ಪ ಹಾಗೂ ಮಠದ ಸ್ವಾಮಿಗಳ ಕತೆ ಹೇಳುವ ಇಲ್ಲಿಯ ವಿವರಗಳು ಗುರು ಶಿಷ್ಯರ ಆಪ್ತ ಸಂಬಂಧವನ್ನು ಶ್ರೀಗಳು ಕೊನೆಯ ಅವಸ್ಥೆಯಲ್ಲಿ ತಳೆದ ಸಮಾಜಮುಖೀ ನಿಲುವನ್ನು ಪ್ರಚುರಪಡಿಸುತ್ತದೆ. ಕಟಮಳ್ಳಿಯ ಜಾತ್ರಾ ವಿವರಗಳನ್ನು ಹೇಳಿದಷ್ಟೇ ಸುಲಭವಾಗಿ, ಶ್ರೀಗಳ ಪಾದಪೂಜೆಯ ಹಾಗೂ ಪಾದೋದಕಗಳ ಪವಿತ್ರತೆಯ ಕುರಿತು ಅಷ್ಟೇ ವ್ಯಂಗ್ಯಭರಿತ ಧಾಟಿಯಲ್ಲಿ ಆನಂದ್ ಹೇಳಬಲ್ಲರು. ಮುಟ್ಟಿದರೆ ಮೈಲಿಗೆ ಎಂಬಂತಿದ್ದ ಮಠದ ಮೂಲೆಯ ಕಸ ಹೊಡೆಯುತ್ತಿದ್ದ ಪರಸಪ್ಪ, ಶ್ರೀಗಳ ಕೊನೆಗಾಲದಲ್ಲಿ ಅವರ ಸೇವೆಮಾಡಿ, ಅವರಲ್ಲಿ ತುಂಬಿದ್ದ ಅಂದಕಾರ ಹಾಗೂ ಅಹಂಕಾರ ಹೋಗಲಾಡಿಸುತ್ತಾನೆ. ‘ಬುಗುರಿಯಂಗ ಅಡ್ಡಾಡಕತ್ತಿದ್ದವರು ಸೊರಗಿ ಶೇಂಗಾ ಸಿಪ್ಪಿಯಂಗ ಆಗ್ಯಾರ’ ಅವರ ಈ ಭಾಷೆಯ ಛಂದ ನೋಡಿ. ಶ್ರೀಗಳು ಪರಸಪ್ಪನ ಹತ್ತಿರವೇ ಮಠದ ಬಾವಿಯ ನೀರು ತರಿಸಿ ಕುಡಿಯುವ ಕಡೆಯಾಸೆ ಹೇಳುತ್ತಾರೆ. ಅವರ ಕನಸಿನಲ್ಲಿ ಪರಸಪ್ಪನ ಕೇರಿಯ ಜನರೆಲ್ಲ ಬಾವಿ ನೀರು ಸೇದಿ ತಮಗೆ ಮಡಿ ಸ್ನಾನ ಹಾಕಿದ ಹಾಗೆ ಕನಸು ಕಾಣುತ್ತಾರೆ. ಕನಸು ನನಸಾಗುವ ಹೆಬ್ಬಾಗಿಲಿನತ್ತ ಕತೆಯ ಆಶಯ ಮಿಡಿಯುತ್ತದೆ. ಕತೆಯ ಸಾಲುಗಳನ್ನು ಆನಂದ್ ಆದಷ್ಟು ಕಾವ್ಯಾತ್ಮಕಗೊಳಿಸಲು ಶ್ರಮಿಸುತ್ತಾರೆ. ಅರ್ಥವಿಸ್ತಾರ ಹೆಚ್ಚಿಸಲು ಇದೂ ಸಹಾಯಕವಾಗಿದೆ.
‘ಓಟ’ ಕತೆಯಲ್ಲಿ, ರಸ್ತೆಯಂಚಿಗೆ ಗಟಾರ ಕೊರೆಯುವ ಕೆಲಸದಲ್ಲಿ ಗಂಡ ಹೆಂಡತಿಗಳಿಬ್ಬರೂ ಬಂಡಿ ಎತ್ತಿನ ಹಾಗೆ ದುಡಿಯುವ ದೃಶ್ಯಗಳು ವಿವರವಾಗಿ ಮೂಡಿವೆ. ಭರಮಪ್ಪ ಎಲ್ಲವ್ವರ ಈ ಕತೆ ಇಂದಿನ ಆಧುನೀಕರಣಕ್ಕೆ ಸಿಕ್ಕ ದುಸ್ಥಿತಿಯ ಸಂದರ್ಭಗಳು ಬಡ ಕೂಲಿಕಾರರ ಮೇಲೆ ಆಗುವ ಪ್ರಮುಖ ಸಮಸ್ಯೆಯೆಡೆಗೆ ದನಿಯೆತ್ತುತ್ತವೆ. ಬಂಡವಾಳಶಾಹಿ ಹಾಗೂ ಜಾಗತೀಕರಣದ ಹಿನ್ನೆಲೆಯಲ್ಲಿ ನುಸುಳಿ ಬಂದ ಕೈಗಾರಿಕಾ ಉಪಕರಣಗಳು ಹೇಗೆ ಬಡವರ ವಿರುದ್ಧ ಯುದ್ಧ ಸಾರುತ್ತಿವೆ ಎಂಬುದನ್ನು ಈ ಕತೆ ತೀವ್ರವಾಗಿ ಹೇಳುತ್ತದೆ. ಸುಧಾರಣೆ ಪ್ರಗತಿ ಎಂದರೆ ಏನೆಂದೇ ಸರಿಯಾಗಿ ಅಥರ್ೈಸಿಕೊಳ್ಳದ ಆಧುನಿಕ ಮನಸ್ಸುಗಳು ಹಳ್ಳಿಗಳನ್ನು ಅದರ ಸಹಜತೆಯನ್ನು ನಾಶಪಡಿಸುವ ಹುನ್ನಾರಕ್ಕೆ ಬಿದ್ದಿರುವುದು ಸಹ ಇದರ ಮುಂದುವರೆದ ಭಾಗವೇ ಆಗಿದೆ. ಈ ಓಟ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದೇ ಒಂದು ಭಯ ಮೂಡಿಸುವ ಭವಿಷ್ಯ. ಇದು ಈ ಕಾಲದ ಅಗತ್ಯ ಕೂಡ. ಅದನ್ನು ಹೇಳುವ ರೀತಿ ಸಹ ಎಲ್ಲೂ ವಾಚ್ಯವಾಗದ ಹಾಗೆ ಎಲ್ಲಿಯೂ ಕೃತಕವೆನ್ನಿಸದ ಹಾಗೆ ಮಂಡಿಸುತ್ತಾರೆ ಆನಂದ್. ಇದು ಅವರ ಕಥನಶಕ್ತಿಯನ್ನು ತೋರಿಸುತ್ತದೆ. ಕಥಾಪಾತ್ರಗಳನ್ನು ಇವರು ಅರಿತು ಸೃಷ್ಟಿಸುವ ಬಗೆಯಲ್ಲೇ ಕತೆಯ ಗೆಲುವು ಕಾಣುತ್ತದೆ.
‘ಹನಿ’ ಕತೆಯು ಜೋಗವ್ವಳಾಗಿದ್ದ ಒಂದು ಹೆಣ್ಣಿನ ಸ್ವಗತದೊಂದಿಗೆ ಆರಂಭಗೊಳ್ಳುವ ಕಥನ. ಇಲ್ಲಿ ಗಂಡು ಮತ್ತು ಹೆಣ್ಣು ಮನಸ್ಥಿತಿಗಳು ಸಮಾನವಾಗಿ ಕಾಪಿಟ್ಟುಕೊಂಡ ಪಾತ್ರವೊಂದು ತನ್ನ ವೇದನೆಗಳನ್ನು ಅನಾವರಣಗೊಳಿಸಿದೆ. ಸಂಕಲನದಲ್ಲಿ ಇದೊಂದು ವಿಶೇಷವಾದ ಕತೆ. ಮೂರನೇ ಲಿಂಗಿಗಳ ಸಂವೇದನೆಗಳಿಗೆ ಮಾನವೀಯ ಆಕಾರಗಳಿವೆ ಎಂಬುದನ್ನೇ ಮರೆತ ನಮ್ಮ ಸಮಾಜವು ಇಂದು ಆ ಬಗ್ಗೆ ಯೋಚಿಸಬೇಕಾಗಿದೆ. ಸಹಜವಾಗಿ ಹುಟ್ಟಿನಿಂದಲೇ ಪಡೆದ ಶಾರೀರಿಕ ಭಿನ್ನತೆಯನ್ನು ಸಮಾಜವು ಅಸಹಜವಾಗಿ ಕಾಣುವುದು ಈ ವ್ಯವಸ್ಥೆಯ ಅಸಮಾನತೆಯನ್ನು ತೋರಿಸುತ್ತದೆ. ಮನುಷ್ಯರ ಭೌತಿಕ ಭಿನ್ನತೆಯ ಕುರಿತು ಆಳವಾದ ಕಾಳಜಿ ಇದ್ದ ಮನಸ್ಸೊಂದು ಇಂಥ ವಸ್ತುವನ್ನು ಆಯ್ದುಕೊಂಡಾಗ ಮಾತ್ರ ತೃತೀಯ ಲಿಂಗಿಗಳಿಗೆ ಹಾಗೂ ಅವರ ಮನಸ್ಥಿತಿಗೆ ಹೀಗೆ ನ್ಯಾಯ ಒದಗಿಸಲು ಸಾದ್ಯವಾಗುತ್ತದೆ. ಅಂಥ ಸಮಾನ ನ್ಯಾಯವೊಂದು ಅವರ ಜನ್ಮಸಿದ್ಧ ಹಕ್ಕು ಕೂಡ ಅಲ್ಲವೇ?
‘ಆಲಕ್ಕೆ ಹೂವಿಲ್ಲ’ ಕತೆಯಲ್ಲಿ ಪರಿಸರದೊಂದಿಗೆ ಮಾನವಜೀವಿಗಳ ನಿಕಟವಾದ ಸಂಬಂಧವನ್ನು ಕಥೆಗಾರ ರೂಪಕಗಳಲ್ಲಿ ಕಟ್ಟಿಕೊಡುತ್ತಾರೆ. ಈ ಕತೆಯಲ್ಲಿ ಆಲದ ಗಿಡಕ್ಕೆ ನೀರು ಹಾಕಿ ಬೆಳೆಸಿದ ತಾಯಿ ಕೊನೆಗಾಲದಲ್ಲಿ ಆಸರೆಯಿಲ್ಲದೇ ಬೀದಿಪಾಲಾಗುತ್ತಾಳೆ. ಕಲಿತು ಪಟ್ಟಣ ಸೇರಿದ ಆ ತಾಯಿಯ ಮಗ ತನ್ನ ಕೊನೆಗಾಲದಲ್ಲಿ ಬಂದು ಆ ಮರವನ್ನು ನೋಡಿ ಅದಕ್ಕೆ ಹೂ ಏರಿಸುತ್ತಾನೆ. ಎಂದಿಗೂ ಹೂ ಬಿಡದ ಆಲದ ಮರ ರಸ್ತೆ ಅಗಲೀಕರಣಕ್ಕೆ ಬಲಿಯಾಗಲು ಸಿದ್ಧಗೊಂಡು ನಿಂತಿರುತ್ತದೆ. ತಾಯಿಯನ್ನು ಆಲದ ಮರದಲ್ಲಿ ಕಾಣುವ ಮಗನಿಗೆ ಕಡೆಯಲ್ಲಿ ಆ ಆಲದ ಮರವನ್ನು ಉಳಿಸಿಕೊಳ್ಳುವ ಶಕ್ತಿಯನ್ನೂ ಸಹ ವಿಧಿ ಕಿತ್ತುಕೊಳ್ಳುತ್ತದೆ. ಇದು ವಿಪಯರ್ಾಸ. ಇಂಥ ಸಂದಿಗ್ಧಗಳಲ್ಲೇ ಇಂದಿನ ಪರಿಸರ ಬರಡಾಗುತ್ತ ಸಾಗುತ್ತಲಿದೆ ಎಂಬುದನ್ನು ಈ ಕತೆಯಲ್ಲಿ ಸಾಂಕೇತಿಕವಾಗಿ ಆನಂದ್ ಹಿಡಿದಿಡುತ್ತಾರೆ. ಯಾರಿಗೆ ನಮ್ಮ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ಇರುತ್ತದೆಯೋ ಆತ ಒಳ್ಳೆಯ ಕತೆಗಾರ ಅಷ್ಟೇ ಅಲ್ಲ ಒಳ್ಳೆಯ ಮನುಷ್ಯ ಕೂಡ.
ಸಂಯಮ ಆನಂದ ಅವರ ಕತೆಗಳ ಸ್ಥಾಯಿಭಾವ, ಕತೆಗಳಿಗೆ ಆರೋಗ್ಯಕರವಾದ ಒಂದು ಶರೀರ ತೊಡಿಸುವ ನಿಟ್ಟಿನಲ್ಲಿ ಇವರ ನೋಟ ಎದ್ದು ಕಾಣುತ್ತದೆ. ‘ಹೋರಿ’ ಯಂತಹ ಕೆಲವು ಕತೆಗಳಂತೂ ನನಗೆ ಮೊದಲ ಓದಿನಲ್ಲಿಯೇ ತುಂಬ ಇಷ್ಟವಾಗಿ, ಎರಡನೇ ಓದಿಗೆ ಹೊಸ ಹೊಸ ವ್ಯಾಖ್ಯಾನಗಳನ್ನು ಪುನರ್ ರೂಪಿಸ ತೊಡಗಿದ್ದು, ಓದಿನ ಸಂತೃಪ್ತಿಯನ್ನು ವಿಭಿನ್ನವಾಗಿ ಕರುಣಿಸಿದವು. ನೀವೂ ಓದಬೇಕು ಆನಂದರ ಕತೆಗಳನ್ನು. ಅವರು ತುಂಬ ಸಮಾಧಾನದ ಧಾಟಿಯಲ್ಲಿ ಕತೆ ಹೇಳಬಲ್ಲರು. ಇಲ್ಲಿ ಓದುಗರನ್ನು ಹಿಡಿದಿಟ್ಟುಕೊಳ್ಳುವ ಭಾಷೆಯ ಆಪ್ತತೆ ಇದೆ. ಇಲ್ಲಿಯ ಭಾಷೆಯ ವಿಶೇಷತೆ ಎಂದರೆ, ಯಾವುದೋ ಒಂದು ಶಬ್ದ, ಅಕ್ಷರ ತಪ್ಪಿದೆ ಅಂತ ತಿದ್ದಲು ಹೋದಾಗಲೇ, ಇನ್ನೊಮ್ಮೆ ಓದಿದ ನಂತರ ಅದೇ ಪದದ ಲಯ ಸರಿಯೆನಿಸಿಬಿಡುತ್ತದೆ. ಕತೆಗಳು ಯಾವಾಗಲೂ ಸಂಭಾಷಣೆ ಮೂಲಕವೇ ಆರಂಭಗೊಂಡು, ನಂತರ ಎಲ್ಲ ಪಾತ್ರಗಳ ಮನಸ್ಥಿತಿಗಳು ಅನಾವರಣಗೊಳ್ಳುತ್ತವೆ.
ಸಾಮಾಜಿಕ ಚಿಂತನೆಗೆ ಮಹತ್ವ ಕೊಡುವ ಆನಂದರ ಕತೆಗಳು, ಸಮಾಜದ ಒಳಗಿನ ಆಳವಾದ ಸಮಸ್ಯೆಗಳನ್ನು ಹೆಕ್ಕಿ ತೆಗೆಯುವತ್ತ ಗಮನ ಹರಿಸುತ್ತದೆ. ಅಂಥ ಸಮಸ್ಯೆಗಳನ್ನು ಎತ್ತುವುದರ ಮೂಲಕವೇ ಕತೆಗಳಿಗೊಂದು ಸಾಮಾಜಿಕ ಪಾತಳಿಯನ್ನು ಆನಂದ್ ಸೃಷ್ಟಿಸುತ್ತಾರೆ. ಸಮಾಜಮುಖೀ ಸ್ಪಂದನೆಗಳಿಲ್ಲದ ಬರವಣಿಗೆಯನ್ನು ಸಂಶಯದಿಂದ ಕಾಣುವ ಕಾಲ ಇದು. ಸಮಾಜಮುಖೀ ನಿಲುವು ಇಲ್ಲದ ಅಭಿವ್ಯಕ್ತಿಯನ್ನು ಅಮಾನವೀಯ ನೆಲೆ ಎಂದೇ ಪರಿಗಣಿಸಬೇಕಾಗುತ್ತದೆ. ಆ ನಿಟ್ಟಿನಲ್ಲೂ ಆನಂದ ಭೋವಿಯವರ ಸ್ಪಂದನೆಗಳು ಮಹತ್ವಪೂರ್ಣ ನೆಲೆಯದಾಗಿದೆ. ಬೇಡದ ವಿವರಗಳನ್ನು ಕತೆಗಳಲ್ಲಿ ಎಂದೂ ತುರುಕಲು ಅವರು ಯತ್ನಿಸುವದಿಲ್ಲ. ಎಷ್ಟು ಬೇಕೋ ಅಷ್ಟೇ ಮಾತು. ಹಾಗಾಗಿ ಕತೆಗಳು ಹೇಳಬೇಕಾದುದನ್ನು ಇನ್ನೂ ಉಳಿಸಿಕೊಂಡಿವೆ ಎಂಬುದನ್ನು ನಮಗೆ ಮನವರಿಕೆ ಮಾಡಿಸುತ್ತದೆ ಮತ್ತು ಓದಿ ಮುಗಿದ ನಂತರವೂ ಕತೆಯ ಆ ಸುಪ್ತಸ್ವರವನ್ನು ಆಲಿಸುವ ಹಾಗಾಗುತ್ತದೆ. ಇದು ಒಳ್ಳೆಯ ಕಥನ ಕಲೆಯ ಲಕ್ಷಣಗಳಲ್ಲಿ ಒಂದು.
ಆನಂದರ ಎರಡನೆಯ ಕಥಾ ಸಂಕಲನವೊಂದು ಹೊರಬರುತ್ತಿರುವ ಈ ಸುಸಂದರ್ಭದಲ್ಲಿ ನಾನೊಬ್ಬ ಸಹಕಥೆಗಾತರ್ಿಯಾಗಿ ಅವರ ಅಪರೂಪದ ಕಥಾ ಪಯಣಕ್ಕೆ ಹಾದರ್ಿಕವಾಗಿ ಶುಭಕೋರುವೆ.
– ಸುನಂದಾ ಪ್ರಕಾಶ ಕಡಮೆ
 
 

‍ಲೇಖಕರು G

February 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ಸುನಂದಾ ಕಡಮೆಯವರ ಮಾತುಗಳು ಕಥೆಗಳನ್ನು ಓದುವುದಕ್ಕೆ ಮನ ಕಾತರಿಸುವಂತೆ ಮಾಡಿತು. ಚಂದದ ಪರಿಚಯ.

    ಪ್ರತಿಕ್ರಿಯೆ
  2. Suryakanth Bellary

    ಭಾಳ ಛಂದ ಬರ್ದೀರಿ ಮೇಡಂ, ಎಲ್ಲಾ ಕತೆಗಳ ಸಂಕ್ಷಿಪ್ತ ಪರಿಚಯ ಅಗದೀ ಛಲೋ ಅವ. ಆನಂದ ಗುರುಗಳೇ ನಮಗೊಂದ ಪ್ರತಿ ತಲಪಿಸೋದು ಮರೀಬ್ಯಾಡ್ರಿ. ತಮಗ ಶುಭವಾಗಲಿ

    ಪ್ರತಿಕ್ರಿಯೆ
  3. Hema Sadanand Amin

    Iam from Mumbai mam your review over the book increased my curiosity to read Bovi sir`s book. just tell me the procedure to buy it. your commentswas too good.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: