ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಅಬ್ದುಲ್ ರಶೀದ್ ಅವರ ’ಸಂಪೂರ್ಣ ಪಾರಿಜಾತ’


ಅಬ್ದುಲ್ ರಶೀದ್

ರಶೀದ್ ಅವರ ಬರವಣಿಗೆಯೇ ಹಾಗೇ. ಏನು ಬರೆದರೂ, ಓದುಗರನ್ನು ತಮ್ಮ ತಮ್ಮ ಜಗತ್ತಿನಿಂದ ಮೆಲ್ಲನೆ ಕಳಚಿ ತಮ್ಮೊಡನೆ ತೇಲಿಸಿಕೊಂಡು ಹೋಗುತ್ತವೆ. ಅಲ್ಲಿಂದ ದಟ್ಟವಾಗಿ ಮುಸುಕಿರುವ ಮಂಜು, ಧೋ ಎಂದು ಸುರಿಯುತ್ತಿರುವ ಮಳೆ, ದೊಂದಿಯ ಆಡುವ ಬೆಳಕು, ಎಲ್ಲವನ್ನು ಹಾರಿಸಿಕೊಂಡು ಹೋಗುವಂತೆ ಬೀಸುತ್ತಿರುವ ತಣ್ಣನೆ ಗಾಳಿ, ಅಮಲು ತುಂಬುವ ಬೆಳದಿಂಗಳು, ಸುಂದರಿಯರ ಅವರಿಸಿರುವ ನವಿರಾದ ಪಾರಿಜಾತದ ಘಮ ಎಲ್ಲಾ ಸುತ್ತುವರಿದು ಕೊಡಗಿನ ಕಾಡುಗಳಲ್ಲಿ, ಕಾಫಿ ತೋಟಗಳಲ್ಲಿ ನೆರಳುಗಳಂತೆ ಓಡಾಡುವ ವಿಚಿತ್ರ ಪಾತ್ರಗಳು ಎದುರಾಗುತ್ತವೆ.
ಅದು ಎರಡನೇ ಮಹಾಯುದ್ಧದಲ್ಲಿ ಗುಂಡು ತಗುಲಿ ಈಗ ಒಂಟಿಯಾಗಿ ಕುಂಟಿ ನಡೆಯುವ, ತನ್ನ ಬಾಡಿಗೆ ಮನೆಯಲ್ಲಿರುವ ಸುಂದರಿ ಸುಮಿತ್ರಾ ಟೀಚರ್ ಗೆ ಬಾಗಿಲಡಿ ಪ್ರೇಮಪತ್ರಗಳನ್ನು ತಳ್ಳುವ ಕೇಶವನ್ ನಾಯರ್ ಇರಬಹುದು ಅಥವಾ ‘ನೀವು ಈ ಊರಲ್ಲಿ ತಂಗುವುದಾದರೆ ನಮ್ಮಲ್ಲೇ ತಂಗಬೇಕು, ಬೇರೆಲ್ಲೂ ಬೇಡ. ಇಲ್ಲಿ ಬಹಳ ಜನ ಕೈವಿಷ ಹಾಕುವವರು, ಆದರೆ ಮೊದಲೇ ಕೇಳಿ, ನನ್ನ ಗಂಡನಿಗೆ ಇಬ್ಬರು ಹೆಂಡತಿಯರು, ಆಮೇಲೆ ಗೊಂದಲ ಬೇಡ’ ಎಂದು ಎಚ್ಚರಿಸುವ ಊರಿನ ಸೂಲಗಿತ್ತಿ ಇರಬಹುದು. ‘ಊಟ ಮಾಡುವ ಮೊದಲು ನನ್ನ ವಿಷಯ ಕೇಳಿ, ನಾನು ಎರಡು ಕೊಲೆ ಮಾಡಿದ್ದೇನೆ’ ಎಂದು ತಣ್ಣನೆಯ ಧ್ವನಿಯಲ್ಲಿ ಹೇಳುವ ಆಕೆಯ ಗಂಡನಿರಬಹುದು ಅಥವಾ ತರಗತಿಯೊಳಗೆ ಸದ್ದಿಲ್ಲದೆ ಚಲಿಸುತ್ತಿರುವ ಏನೋ ಒಂದು ಪರಿಮಳದಂತೆ ಓಡಾಡುತ್ತಿರುವ ಸುಮಿತ್ರಾ ಟೀಚರಿರಬಹುದು.

ರಶೀದರ ಅನನ್ಯ ಬರವಣಿಗೆಯ ಅಚ್ಚು ಹೊಡೆದಂತಿರುವ ಈ ಐದು ಕತೆಗಳು ಎಲ್ಲಿಯೂ ಅತಿರೇಕವಿಲ್ಲದ ಶೈಲಿ, ನವಿರು ಹಾಸ್ಯದ ಕೆಳಗೇ ಹರಿಯುವ ನೋವಿನ ಎಳೆಗಳು, ವಿಶಿಷ್ಟ ವಸ್ತು, ಜೊತೆಗೆ ಸಾಹೇಬನಾಗಿದುಕೊಂಡೂ ಇಂದಿಗೂ ಇನ್ನೊಬ್ಬರ ಹಣೆಬರಹ ಅರಿಯಲು ಶಾನಭಾಗನೆಂದು ಮಂಗಾಟವಾಡುವ ಸಾಮರ್ಥ್ಯವಿರುವ ಈ ಲೇಖಕನ ಅಪೂರ್ವ ಹುಡುಗುತನ ಎಲ್ಲಾಸೇರಿ ನಮ್ಮನ್ನು ಅವರು ಸೃಷ್ಟಿಸುವ ಮಾಂತ್ರಿಕ ಜಗತ್ತಿನೊಳಗೆ ಸೆಳೆದುಕೊಳ್ಳುತ್ತವೆ.
ಉಮಾರಾವ್
(ಬೆನ್ನುಡಿ)
 
ಪ್ರಕಾಶಕರು :  ಅಭಿನವ
ಬೆಲೆ ರೂ. 50/-
 
 

‍ಲೇಖಕರು avadhi

1 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading