ಪಶು ವೈದ್ಯರ ನೈಜ ಅನುಭವ ಕುರಿತ ಜೇಮ್ಸ್ ಹೆರಿಯಟ್ ಕಥಾನಕಗಳ ಕನ್ನಡ ರೂಪಾಂತರವಾಗಿರುವ ಡೇರಿ ಡಾಕ್ಟರ್ ಹೋರಿ ಮಾಸ್ಟರ್ ಕೃತಿಯನ್ನು ಡಾ.ಗಣೇಶ ಎಂ. ನೀಲೇಸರ ಅವರು ರಚಿಸಿದ್ದಾರೆ. ಭೂಮಿ ಬುಕ್ಸ್ ಪ್ರಕಾಶನದಿಂದ ಈ ಕೃತಿ ಮುದ್ರಿತವಾಗಿದೆ. ಡೇರಿ ಡಾಕ್ಟರ್ ದಿನನಿತ್ಯದ ಕಥೆಯನ್ನು ಹಾಸ್ಯಭರಿತವಾಗಿ ಈ ಕೃತಿಯಲ್ಲಿ ಬರೆದಿದ್ದಾರೆ.
ಪ್ರಸಾದ್ ರಕ್ಷಿದಿ ಅವರು ಈ ಕೃತಿ ಬಗ್ಗೆ ವಿಮರ್ಶಿಸಿದ್ದಾರೆ..
ಪ್ರಸಾದ್ ರಕ್ಷಿದಿ
ಪತ್ತೇದಾರಿ ಕಾದಂಬರಿಯಂತೆ ಅಥವಾ ಹಾಸ್ಯಲೇಖನಗಳ ಪುಸ್ತಕಗಳ ಹೆಸರಿನಂತೆ ಕೇಳುವ ಪುಸ್ತಕವನ್ನು ಬರೆದವರು. ವೃತ್ತಿಯಿಂದ ಪಶು ವೈದ್ಯರಾಗಿರುವ ಗಣೇಶ. ಎಂ.ನಿಲೇಸರ. ಅವರು ಪತ್ರಿಕೆಗಳಲ್ಲಿ ಕೃಷಿ ವಿಭಾಗಗಳಲ್ಲಿ ಹೈನುಗಾರಿಕೆ, ಇತ್ಯಾದಿ ಹಲವು ವಿಷಯಗಳ ಬರಹಗಾರರೂ ಹೌದು.
ಈ ಪುಸ್ತಕಕ್ಕೆ ಈ ಹೆಸರಿಡಲು ಲೇಖಕರ ಹಾಸ್ಯ ಪ್ರಜ್ಞೆಯೇ ಕಾರಣ. ಪಶು ವೈದ್ಯಕೀಯ ವೃತ್ತಿಯಲ್ಲಿನ ಹಲವು ಅನುಭವಗಳನ್ನು ಕಥನ ಶೈಲಿಯಲ್ಲಿ ದಾಖಲಿಸುತ್ತಾ ಹೋಗುವ ಲೇಖಕರು. ಪ್ರತಿ ಸಂಗತಿಯಲ್ಲಿಯೂ ತಮ್ಮ ಹಾಸ್ಯ ಪ್ರಜ್ಞೆ ಮತ್ತು ಸ್ವವಿಮರ್ಶೆಯನ್ನು ಒಂದು ಸ್ಥಾಯೀಗುಣವಾಗಿ ಉಳಿಸಿಕೊಂಡಿದ್ದಾರೆ.

ಆದರೆ ಈ ಬರಹಗಳ ವಿಶೇಷತೆ ಮತ್ತು ಮಹತ್ವವಿರುವುದು, ಈ ಅನುಭವಗಳು ಇಷ್ಟಕ್ಕೆ ಮಿತಿಯಾಗದೆ ಹಲವು ಮುಖಗಳಲ್ಲಿ ಯೋಚಿಸುವಂತೆ ಮಾಡುವುದು. ಇಲ್ಲಿ ಪ್ರಾಣಿ-ಮನುಷ್ಯ ಸಂಬಂಧಗಳ ವಿಶ್ಲೇಷಣೆಯಿದೆ. ಮನುಷ್ಯ ಸ್ವಭಾವಗಳ ಕುರಿತು ಹೀಗೇಕೆ ಎಂಬ ವಿಷಾದವೂ, ನವಿರಾದ ಆತ್ಮೀಯತೆಯೂ ಸಮ್ಮಿಳನಗೊಂಡಿವೆ. ಸಮಾಜ ಶಾಸ್ತ್ರಜ್ಞನೊಬ್ಬನ ಹುಡುಕಾಟವಿದೆ.
‘ಟ್ರೂಡಿ’ ಎಂಬ ನರ್ಸ್ ನಾಯಿಯ ಪ್ರಸಂಗ. ಹೈನುಗಾರಿಕೆಯ ನಾನಾ ಸಮಸ್ಯೆಗಳು. ಇತರ ಪ್ರಾಣಿಗಳ ಚಿಕಿತ್ಸೆಗಳು ಆ ಸಂದರ್ಭಗಳಲ್ಲಿ ಎದುರಾಗುವ ಸಮಸ್ಯೆಗಳು, ತೊಂದರೆಗಳು, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವಾಗಿನ ಕಷ್ಟಗಳು ಎಲ್ಲವನ್ನೂ ಉತ್ಪ್ರೇಕ್ಷೆಯಿಲ್ಲದೆ ಸಹಜವಾಗಿ ನಿರೂಪಿಸಿದ್ದಾರೆ.
ವಾಸು ಎಂಬ ಕೊಳಗೇರಿಯ ಬಾಲಕ ಒಂದು ರೀತಿಯಲ್ಲಿ ವಿಕ್ಷಿಪ್ತನಾಗಿದ್ದವನು ತನ್ನ ನಾಯಿಗಾಗಿ ಬದಲಾಗುತ್ತ ಮೃದುವಾಗುತ್ತ ಹೋದವನು ನಾಯಿಯನ್ನು ಕಳೆದುಕೊಂಡು ನಂತರ ಇನ್ನಷ್ಟು ವಿಕ್ಷಿಪ್ತನಾಗುವ ಪ್ರಸಂಗ ನಮ್ಮನ್ನು ಯೋಚನೆಗೆ ಹಚ್ಚುವಂತೆ ಮಾಡುತ್ತದೆ. ಪ್ರತಿ ಅಧ್ಯಾಯದಲ್ಲಿಯೂ ಹೀಗೆ ಬೇರೆ-ಬೇರೆ ಅನುಭವಗಳನ್ನು ತೆರೆದಿಡುತ್ತ ಸಾಗುವ, ಡೈರಿ ಡಾಕ್ಟರ್ ಒಂದು ವಿಭಿನ್ನ ಕೃತಿ. ಕನ್ನಡದಲ್ಲಿ, ಅಕೆಡೆಮಿಕ್ ಅಲ್ಲದ ಇಂತಹ ಬರಹಗಳ ಅಗತ್ಯ ತುಂಬಾ ಇದೆ.
ಪಶು ವೈದ್ಯರ ರಸಾನುಭವಗಳ 'ಡೇರಿ ಡಾಕ್ಟರ್ ಹೋರಿ ಮಾಸ್ಟರ್'
ನಿಮಗೆ ಇವೂ ಇಷ್ಟವಾಗಬಹುದು…




0 Comments