ಡಾ. ಪಿ. ಮನೋಹರ ಉಪಾಧ್ಯ
ಈ ವರ್ಷ ಜನವರಿಯಲ್ಲಿ ನಾನು ಓದಿದ ಬೆಂಗಳೂರಿನ ಪಶು ವೈದ್ಯ ಕಾಲೇಜಿನಲ್ಲಿ ಮಿತ್ರ ಡಾ .ಗಣೇಶ .ಎಂ . ಹೆಗಡೆ ನೀಲೇಸರರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವಿತ್ತು. ಅನಿವಾರ್ಯವಾಗಿ ಹೋಗಲಾಗದ ಕಾರಣ, ಬಿಡುಗಡೆಯ ಮರುದಿನವೇ ಫೋನಾಯಿಸಿ ” ಮೊದಾಲು ಎರಡೂ ಪುಸ್ತಕ ಕಳುಹಿಸಿ ಮಾರಾಯ್ರೇ ” ಎಂದೆ. ಒಂದನೇ ಪುಸ್ತಕ – “ಭೂಮಿ ಬುಕ್ಸ್ ಪ್ರಕಾಶನದಲ್ಲಿ “ಡೇರಿ ಡಾಕ್ಟರ್ ಹೋರಿ ಮಾಸ್ಟರ್ “; ಎರಡನೆಯದು ಶಿರಸಿ ಓಣಿಕೇರಿಯ ಕೃಷಿ – ಋಷಿ ಬೆಂಗಳಿ ವೆಂಕಟೇಶರ “ಸುಸ್ಥಿರ ಕೃಷಿಗೆ ಹತ್ತಾರು ಹಾದಿ” , ಇದು ಕೃಷಿ ಮಾಧ್ಯಮ ಕೇಂದ್ರ, ಧಾರವಾಡದ ಪ್ರಕಟಣೆ. ಪುಸ್ತಕ ಬಂದ ಕೂಡಲೇ ” ಡೇರಿ ಡಾಕ್ಟರ್ —–“ನ ಎರಡು ಅಧ್ಯಾಯ ಮುಗಿಸಿ ಹೆಗ್ದೇರಿಗೆ ಫೋನ್ ಮಾಡಲೇಬೇಕಾಯ್ತು . ಎಲ್ಲಾ 20 ಅಧ್ಯಾಯಗಳೂ ಎರಡೇ ದಿನದಲ್ಲಿ ಮುಗಿದು ಹೋಯ್ತು. ಅಬ್ಬಾ! ಅಂತೂ ದೊರಕಿತಲ್ಲ, ಕನ್ನಡಕ್ಕೊಬ್ಬ ” ಜೇಮ್ಸ್ ಹೆರಿಯಟ್! “.
ಅಂದ ಹಾಗೆ ನಿಮಗೆ ತಿಳಿದಿರಬಹುದು, ಇಂಗ್ಲೆಂಡಿನ ಪಶುವೈದ್ಯ ಜೇಮ್ಸ್ ಹೆರಿಯಟ್ ನ ಬಗ್ಗೆ. ಒಬ್ಬ ಹಸು-ಹಂದಿ-ಕುದುರೆ – ಕೋಳಿ -ಆಡು- ಕುರಿ- ನಾಯಿ – ಬೆಕ್ಕು ಎಲ್ಲವನ್ನೂ ಚಿಕಿತ್ಸೆ ಮಾಡುವ ಸಾಮಾನ್ಯ ಪಶುವೈದ್ಯನೊಬ್ಬ ತನ್ನ ಚಿತ್ರ-ವಿಚಿತ್ರ ಅನುಭವಗಳನ್ನೆಲ್ಲ ದಾಖಲಿಸಿ ಅನೇಕ ಪುಸ್ತಕಗಳನ್ನು ಬರೆದದ್ದು, ಅವುಗಳ ಬಗ್ಗೆ ಚಲನಚಿತ್ರ – ಧಾರಾವಾಹಿಗಳಾಗಿ ಪ್ರಪಂಚದ ಕೋಟಿ ಕೋಟಿ ಮನೆ – ಮನಗಳನ್ನು ತಲುಪಿದ್ದು ಇತಿಹಾಸ. ಅಂತಹದೇ ಅನುಭವಗಳು ದಿನನಿತ್ಯದಲ್ಲಿ ಹೆಗಡೆ ಅಥವಾ ನನ್ನಂತಹ ಪಶು ವೈದ್ಯರುಗಳಿಗೆ ಮಾಮೂಲಿ ಎನಿಸಿದರೂ, ಹೆರಿಯಟ್ ದಾಖಲಿಸಿದ ಕ್ರಮ ಅನನ್ಯ, ಅಧ್ಭುತ .
ಹೆರಿಯಟ್ ಪುಸ್ತಕಗಳಲ್ಲಿ ಬರುವ ನೂರಾರು ಅನುಭವ ಕಥನಗಳಲ್ಲಿ ಆಯ್ದ 20 ಪ್ರಸಂಗಗಳನ್ನು ಹೆಗಡೆಯವರೇ ಪಶುವೈದ್ಯರಾಗಿ, ಅಲ್ಲಿ ಬರುವ ಪ್ರಾಣಿ ಹಾಗೂ ಇತರೆ ಪಾತ್ರಗಳೆಲ್ಲವೂ ಅವರ ಸುತ್ತುಮುತ್ತಲಿನವುಗಳೇ ಆಗಿ ಪುಸ್ತಕಗಳಲ್ಲಿ ಓಡಾಡಿಕೊಡಿದ್ದಾರೆ .
ಅಧ್ಯಾಯಗಳೇ ಹಾಗೆ. ಯಾವುದನ್ನೂ ಮೊದಲು ಓದಬಹುದು, ನಂತರವೂ. ಮಾರ್ಜಾಲ ನ್ಯಾಯದ ಜಲಜಮ್ಮ ಅಧಿಕಾರ ಚಲಾಯಿಸುವುದು; ಜೀವಂತ ಇರುವಾಗಲೇ ಡಾಕ್ಟ್ರನ್ನೇ ಫೋಟೋ ಫ್ರೇಮ್ ಹಾಕಿಸಿ ಆರಾಧಿಸುವ ಮಾಲಿನಿ ಶರ್ಮ; ನಾಯಿಯೇ ಜೀವವಾಗಿದ್ದ ರೌಡಿ ವಾಸು; ಕ್ರಿಸ್ಮಸ್ ಶುಭದಿನ ಬೆಳ್ಳಂಬೆಳಗ್ಗೆ ಆಡಿನ ಬಾಯಿಂದ ಹೊರಬಂದ ಚಡ್ಡಿ ; ಟೀವಿಗೂ ಬೇಕಾದ ಡಾಕ್ಟರ್ ; ವೈರಿ ಸತ್ಯಪಾಲನ ಹೆಂಡತಿ ಡಾಕ್ಟ್ರಿಗೆ ಪ್ರಿಯವಾದದ್ದು; ಗೋ ಡಾಕ್ಟ್ರ ಸೂಜಿಯಿಂದ ಬ್ರುಸೆಲ್ಲಾ ಅಂಟಿಸಿಕೊಂಡ ನಾಥಪ್ಪ ಗೋ ಡಾಕ್ಟ್ರ ಸೂಜಿಯಿಂದಲೇ ಗುಣವಾದದ್ದು; ಸೋಮಯ್ಯನೆಂಬ ಜಂಭದ ಕೋಳಿಗೆ ಕದಂ ಡಾಕ್ಟ್ರ ಮಸಾಲೆ ಮದ್ದು; ಆದರ್ಶಗಳ ಬೆನ್ನು ಹತ್ತಿ ಡೈರಿ ಸ್ಥಾಪಿಸಿ ಕೈ ಸುಟ್ಟುಕೊಂಡ ಕಿರೀಟಿ ; ಡಾಕ್ಟ್ರ ಕೈಗುಣ ಬಲಪಡಿಸಿದ ಬಕೆಟ್ ಒದೆಯುವ ಕರು;
ಬ್ರುಸೆಲ್ಲಾ ಕಾಯಿಲೆ ಹಿಡಿಸಿಕೊಂಡ ಡಾಕ್ಟ್ರು ಮತ್ತು ಮೆಂಟಲ್ ಲೀನಾ ಮಧ್ಯೆ ಕಿಚಿ ಕಿಚಿ; ಉಪ್ಪಿನಕಾಯಿ ಅಂಗಡಿಯ ಬೆಕ್ಕಿನ ಹೊಟ್ಟೆಯಲ್ಲಿ ಸಿಕ್ಕ ಕೂದಲುಂಡೆ ; ಜೀವ ಉಳಿಸಿದ ಗಂಟಿಯೇ ಜೀವ ಹೋಗುವಂತೆ ಜಾಡಿಸಿ ಒದ್ದದ್ದು; ಸಾರ್ವಜನಿಕವಾಗಿ ಮರ್ಯಾದೆ ತೆಗೆದ ಹಂಪಣ್ಣನಿಗೆ ಸವಾಲಾಗಿ ನಿಲ್ಲಬಹುದಾಗಿದ್ದ ಪೂಜಾರ್ರು ; ಕುದುರೆ ಶೋನಲ್ಲಿ ಸ್ಟ್ರಿಕ್ಟ್ ಆಗಿ ಮಾರ್ಕು ಹಾಕಿದ ಡಾಕ್ಟ್ರಿಗೆ ಕತ್ತೆಗಳ ತಿರಸ್ಕಾರ; ಕಸಾಯಿ ಖಾನೆಗೆ ಒಪ್ಪಿಸಿದ ವೀಣೆ ಹಸು ಓಡಿ ವಾಪಾಸು ಬಂದು ಧಾಕಪ್ಪನನ್ನು ಸೇರಿಕೊಂಡದ್ದು – ಹೀಗೆ ನವರಸ ಪಾಕದ ಜೀವಂತ ಸಂದರ್ಭಗಳಲ್ಲಿ ಓದುಗ ಒಂದೋ ಡಾಕ್ಟರ್ ಆಗುತ್ತಾನೆ; ಇಲ್ಲವೇ ಪ್ರಾಣಿಯ ಮಾಲಕನಾಗುತ್ತಾನೆ. ಇತರೆ ಪಾತ್ರಗಳೂ ಆಗಬಹುದು ; ಪ್ರಾಣಿಯಾಗಿಯೂ ಅನುಭವಿಸಬಹುದು. ಈ ಪುಸ್ತಕ ಓದುವವನಿಗೆ ಕೃಷಿ – ಗೋ ಸಂಪತ್ತು ಇರಲೇಬೇಕೆಂದಿಲ್ಲ. ಅವೆಲ್ಲವೂ ಇದೆಯೆಂಬ ಭ್ರಮೆಯನ್ನು ಆವರಿಸಿ ಎಲ್ಲಾ ಪ್ರಸಂಗಗಳಲ್ಲಿ ನಮ್ಮ ಪಾತ್ರಗಳನ್ನು ನಾವೇ ಕಂಡುಕೊಳ್ಳುತ್ತೇವೆ .
ಕಳೆದ 25 ವರ್ಷಗಳ ನನ್ನ ಪ್ರಾಕ್ಟೀಸಿನಲ್ಲಿ ಅರಿವಿದ್ದೋ- ಅರಿವಿಲ್ಲದೆಯೋ ಆಗಾಗ ಹೆರಿಯಟ್ ನ ನೆನಪಾಗುತ್ತಿದ್ದರೂ ಈ ಪುಸ್ತಕ ಓದಿದ ನಂತರ ” ಹೌದಲ್ಲ, ನನ್ನಲ್ಲೂ ಒಬ್ಬ ಹೆರಿಯಟ್ ಇದ್ದಾನೆ” ಎಂಬಷ್ಟರ ಮಟ್ಟಿಗೆ ನನಗೇ ನನ್ನ ಬಗ್ಗೆ ಹೆಮ್ಮೆ. ಹೆಗಡೆಯವರ ಭಾವಾನುವಾದವೇ ಹಾಗೆ, ಅವರು ಈ ಮೊದಲು ಮೂಲ ಕನ್ನಡಿಗರೇ ಅದ, ಗುಜರಾತಿ ಪಶು ವೈದ್ಯ, ಡಾ . ಹೆರಂಜಾಲರ ಆತ್ಮ ಕಥೆಯನ್ನು 2006ರಲ್ಲಿ ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದರು . ಅವರ ಭಾವಾನುವಾದ ಎಷ್ಟು ಸಮೃದ್ಧ ವಾಗಿತ್ತೆಂದರೆ ಮೂಲ ಲೇಖಕ ಹೆರಂಜಾಲರೇ ನನ್ನ ಬಳಿ ಒಮ್ಮೆ ” ಆ ಪುಸ್ತಕ ಮರಾಠಿ , ಗುಜರಾತಿ, ಹಿಂದಿ ಇತರೆ ಭಾಷೆಗಳಿಗೆ ತರ್ಜುಮೆಯಾಗಿದ್ದರೂ, ಹೆಗ್ಡೇರು ಬರೆದ ಹಾಗೆ ಈ ಹಿಂದೆ ಯಾರೂ ಬರೆದಿಲ್ಲ ” ಎಂದಿದ್ದರು . ಆ ” ಓರ್ವ ಪಶು ವೈದ್ಯನ ಅಪೂರ್ವ ಅನುಭವಗಳು ” ಪುಸ್ತಕ ಓದಿದ ನಂತರ ನಾನು ಹೆಗ್ಡೇರಿಗೆ ಫ್ಯಾನ್ ಆಗಿಬಿಟ್ಟೆ.
ನಾನು ಓದಿ ಪುಸ್ತಕ ಕೆಳಗಿಟ್ಟ ಕೂಡಲೇ ನನ್ನ ಹೆಂಡತಿಯೂ ಒಂದೇ ದಿನದಲ್ಲಿ ಓದಿ ಮುಗಿಸಿ, ತೆಗೆದ ಬಾಯಿಗೆ ” ಪಶುವೈದ್ಯ ವೃತ್ತಿಗೆ ಮಕ್ಕಳನ್ನು ಸೇರಿಸಬೇಕೋ ಬೇಡವೋ ಎನ್ನುವ ತಂದೆ ತಾಯಂದಿರೂ, ಅವರ ಮಕ್ಕಳೂ ಓದಲೇಬೇಕಾದ್ದು” ಎಂದು ವಗಾಯಿಸಿಬಿಟ್ಟಳು . ಪಶುವೈದ್ಯ ವೃತ್ತಿಯಲ್ಲಿ ಪ್ರಾಣಿಯೇ ಕೇಂದ್ರ ಬಿಂದು. ಮಾಲೀಕ, ವೈದ್ಯರು ಜೊತೆಗೆ ನೆರವಾಗುವವರು; ವೃತ್ತಿಯಲ್ಲಿ ಹಣವನ್ನೇನೋ ಯಥೇಚ್ಚವಾಗಿ ಸಂಪಾದಿಸಲಾಗದೇ ಇರಬಹುದು – ” ವೈವಿಧ್ಯವೇ ಸಮೃ ಧ್ಧಿ” ಎಂಬ ಪರಮ ಸತ್ಯ ಈ ಹೊತ್ತಿಗೆಯಲ್ಲಿ ಸ್ಪಷ್ಟವಾಗಿಯೇ ಬಂದಿದೆ.
ಪುಸ್ತಕ ಪ್ರಕಟಣೆಗೆ ಪ್ರೇರೇಪಿಸಿದ ಪತ್ರಕರ್ತ ನಾಗೇಶ್ ಹೆಗಡೆಯವರದ್ದೇ ಮುಖ ಪುಟ ವಿನ್ಯಾಸ; ಚಿತ್ರಕಲೆಯ ವಿದ್ಯಾರ್ಥಿನಿ ಶ್ವೇತಾ ಆಡುಕಲಾ ಅವರ ಆಕರ್ಷಕ ರೇಖಾ ಚಿತ್ರಗಳು – ಒಟ್ಟೂ ಸಮಗ್ರತೆಯನ್ನು ಎತ್ತಿ ತೋರಿಸುತ್ತವೆ .ಭೂಮಿ ಬುಕ್ಸ್ ನವರಿಗೆ ಕೃತಜ್ಞತೆಗಳು . ಪುಸ್ತಕದಲ್ಲಿ ಡಾ .ಗಣೇಶ ಎಂ ನೀಲೇಸರರ ದೂರವಾಣಿ, ಇ ಮೈಲ್ ವಿವರಗಳಿವೆ . ಓದಿ ಇಷ್ಟವಾದರೆ ಅವರಿಗೆ ಒಂದು ಥ್ಯಾಂಕ್ಸ್ ಹೇಳಿ . .








ಮೊದಲು ಶಿಫಾರಸು ಮಾಡಿದ ನಿಮಗೆ ಥ್ಯಾಂಕ್ಸ್
Naanu EraDu dina modale Odi Mugiside. A pustaka nanna kaiyalliruva tanaka bere kelasagalige rajakottidde. Pratiyondannu prasangavannu Odi Sambramisi Snehitarige tilisiddene. Idu Ondu Akara granthavU houdu. Eshto vicharagalu, pashugala bagegina saamanya jnanada jotege manassige ullasa koduva reeiya nirupane ishtavvaytu. Ellarigu parichayisalu yogyaviruva pustakavidu. Yaarigaadaru gift kodabekendare idannu modala Adyateyalli kodabahudu. Cinemaasaktarige cinema tegeyalu olle prasangagalalu idaralli siguttave. Short film galige suktavaada prassangalu manoranjakavaagide. Lekhakarige, prakashakarige, ellarigu dhanyavaadagalu.
A good book not only to read and enjoy but also a valuable guide for day to day life of a farmer.You gave me the book for reading,extremely good one.The experiences narrated in a very interesting way.
CV Gopalakrishna .