ಗೋಪಾಲ ವಾಜಪೇಯಿ ಕಾಲಂ : ಕುಸುರಿ ಕೆಲಸಗಳ ಕಾರಂತರು!

ಸುಮ್ಮನೇ ನೆನಪುಗಳು – 41

ಭೋಪಾಲ್ ‘ರಂಗಮಂಡಲ’ದ ಬೆಂಗಳೂರಿನ ಪ್ರಯೋಗಗಳು ಮುಗಿದ ಮರುದಿನ ನಾನು ಕಾರಂತರನ್ನು ಕಾಣಲೆಂದು ಅವರ ಮನೆಗೆ ಹೊರಟೆ. ಆಗಿನ್ನೂ ಅವರು ಎನ್. ಆರ್. ಕಾಲನಿಯ ಬಾಡಿಗೆ ಮನೆಯಲ್ಲಿಯೇ ಇದ್ದರು. ಬಾಗಲಕೋಟೆಯ ರಂಗಮಿತ್ರನೊಬ್ಬ ನನ್ನೊಂದಿಗಿದ್ದ.
ನಾವು ಅವರ ಮನೆಯ ದಾರಿಗೆ ಹೊರಳಿದಾಗ ಕಾರಂತರು ಗೇಟಿನ ಬಳಿಯೇ ನಿಂತಿದ್ದು ಕಂಡಿತು. ಅವರ ಹತ್ತಿರ ಹೋಗಿ ಕೈ ಮುಗಿದು ನಿಂತೆವು. ಕಾರಂತರು ಏನೋ ಚಡಪಡಿಕೆಯಲ್ಲಿದ್ದಂತೆ ತೋರಿತು. ‘ಪ್ಚ್’ ಎನ್ನುವುದು, ಗಡ್ಡದ ಮೇಲೆ ಕೈಯಾಡಿಸಿಕೊಳ್ಳುವುದು ಮತ್ತೆ ಮತ್ತೆ ವಾಚು ನೋಡಿಕೊಳ್ಳುವುದು (ಈಗವರ ಕೈಯಲ್ಲಿ ಬೇರೊಂದು ಸಾದಾ ವಾಚ್ ಇತ್ತು)… ಯಾರನ್ನೋ ಕಾಯುತ್ತಿದ್ದರು. ನಾವು ಹೋಗಿ ಎದುರು ನಿಂತದ್ದು, ನಮಸ್ಕಾರ ಮಾಡಿದ್ದು ಯಾವುದನ್ನೂ ಅವರು ಗಮನಿಸಿದಂತೆ ಕಾಣಲಿಲ್ಲ. ಮತ್ತೆ ಮತ್ತೆ, ನಾವು ಹೊರಳಿ ಬಂದೆವಲ್ಲ, ಆ ದಾರಿಯತ್ತಲೇ ಅವರ ಕಣ್ಣು ಹೊರಳುತ್ತಿತ್ತು. ಅಂಥದರಲ್ಲೇ ಒಮ್ಮೆ ಅವರು ನಮ್ಮನ್ನು ನೋಡಿದರಾದರೂ ಥಟ್ಟನೆ ಮತ್ತೆ ತಮ್ಮದೇ ಯೋಚನೆಯಲ್ಲಿ ಮುಳುಗಿದರು.
ಅಷ್ಟರಲ್ಲಿ ಮೇಲಿನಿಂದ ಇಳಿದು ಬಂದರು ಪ್ರೇಮಾ ಮೇಡಮ್… ಅವರು ಹೊರಗೆ ಹೊರಡಲು ‘ಸಿದ್ಧ’ರಾಗಿಯೇ ಇಳಿದಿದ್ದರು. ”ಹೊರಟೆ… ಹೂಂ, ತಗೊಳ್ಳಿ ಕೀ…” ಅಂತ ಅವರ ಕೈಗೆ ಬೀಗದ ಕೈ ಹಾಕುತ್ತ, ಯಾರು, ಏನು ಎಂಬಂತೆ ನಮ್ಮೆಡೆ ನೋಡಿದರು.
”ಸರ್ ಭೆಟ್ಟಿಗೆ ಬಂದಿದೀವಿ…” ಅಂದೆ.
”ಯಾರೋ ಬಂದಿದ್ದಾರೆ ನೋಡಿ,” ಅಂದವರೇ ರಸ್ತೆಗಿಳಿದು ಭರಭರನೆ ಸಾಗಿದ ಅವರನ್ನು, ಕಾರಂತರು, ”ಪ್ರೇಮಾ… ಒನ್ನಿಮಿಷ…” ಅಂತ ಕರೆದರು. ತಿರುಗಿ ನೋಡಿದ ಅವರಿಗೆ, ”ಇವರು ವಾಜಪೇಯಿ ಅಂತ… ಅದೇ ‘ಮುಂದೇನ ಸಖಿ ಮುಂದೇನ…’ ನಾಟಕ ಇವರೇ ಬರದದ್ದು…” ಅನ್ನುತ್ತಿದ್ದ ಹಾಗೆಯೇ, ಪ್ರೇಮಾ ಮೇಡಮ್ ನನ್ನನ್ನೊಮ್ಮೆ ಅಳೆಯುವಂತೆ ನೋಡಿ, ‘ಓಡು ಹೆಜ್ಜೆ’ ಹಾಕತೊಡಗಿದರು. ಬಹುಶಃ ಆಗ ಅವರು ‘ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್’ನಲ್ಲಿ ಕೆಲಸ ಮಾಡುತ್ತಿದ್ದರೆಂದು ಕಾಣುತ್ತದೆ. ಅವರು ಆ ಕಡೆ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುಗುವುದಕ್ಕೂ, ಆ ಕಡೆಯಿಂದ ಒಂದು ಕಾರು ಬಂದು ಕಾರಂತರ ಮನೆಯೆದುರು ನಿಲ್ಲುವುದಕ್ಕೂ ಸರಿಹೋಯಿತು. ಡ್ರೈವರ್ ಕಾರಿಳಿದು, ಕಾರಂತರಿಗೊಮ್ಮೆ ನಮಸ್ಕರಿಸಿ, ವಿನೀತನಾಗಿ ನಿಂತ.
ವಾಚನ್ನು ನೋಡಿಕೊಳ್ಳುತ್ತಾ ಕಾರಂತರು, ”ಒಂದೈದು ನಿಮಿಷ ಇರಪ್ಪ… ಬನ್ನಿ ವಾಜಪೇಯಿ… ಬನ್ನಿ…” ಅಂತ ನಮ್ಮನ್ನು ಮೇಲಕ್ಕೆ ಕರೆದೊಯ್ದರು.
ಅದು ಮೊದಲ ಮಹಡಿಯ ಮೇಲಿನ ಮನೆ. ನಾವಲ್ಲಿ ಕೂತಿದ್ದಂತೆ ಕಾರಂತರು ಮತ್ತೊಂದು ಕೋಣೆ ಹೊಕ್ಕರು. ಸುತ್ತ ಕಣ್ಣಾಡಿಸುತ್ತ ಕೂತೆವು. ಹಾಲ್ ತುಂಬ ಆ ದಂಪತಿಯ ಅಭಿರುಚಿಯ ಕುರುಹುಗಳು. ಒಂದೆಡೆ ನೆಲವಾಸಿನ ಮೇಲೊಂದು ಹಾರ್ಮೋನಿಯಮ್ಮು, ಒಂದು ಖಂಜಿರ, ಗೆಜ್ಜೆ ಕೋಲುಗಳು, ಕಟ್ಟಿಗೆಗಳು, ಕರಟಗಳು, ಮತ್ತೇನೇನೋ ವಾದ್ಯ ಪರಿಕರಗಳು. ಅವುಗಳಲ್ಲಿ ಕೆಲವು ಯಾವ್ಯಾವುದೋ ರಾಜ್ಯದ ಜಾನಪದ ಮೂಲದವು, ಮತ್ತೆ ಕೆಲವು ಆದಿವಾಸಿಗಳು ಬಳಸುವಂಥವು… ಇನ್ನೊಂದೆಡೆ ನಾವು ನೋಡರಿಯದ ಚರ್ಮವಾದ್ಯಗಳು ; ನೂರಾರು ವರ್ಷ ಹಳೆಯವಾದ ಅಪರೂಪದ ಪಾತ್ರೆಗಳು, ಗಂಟೆಗಳು, ತಾಳಗಳು ಇತ್ಯಾದಿ. ಆ ಗ್ರಂಥ ರಾಶಿಯಂತೂ… ಅಬ್ಬಾ…! ಅದೊಂದು ‘ವಸ್ತು ಸಂಗ್ರಹಾಗಾರ’ವೇ.
ಎಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತ ಕೂತಿರುವ ಹಾಗೆಯೇ ಕಾರಂತರು ಬಟ್ಟೆ ಬದಲಿಸಿ ಬಂದರು. ಮುಖದಲ್ಲಿ ಪ್ರಸನ್ನತೆ ಮನೆ ಮಾಡಿತ್ತು.
”ಸಾರಿ. ನಿಮಗೇನೂ ಕೊಡೋದಕ್ಕೆ ಆಗ್ಲಿಲ್ಲ… ಸ್ವಲ್ಪ ಅವಸರದಲ್ಲಿದ್ದೀನಿ. ಇವತ್ತು ‘ದೂರದರ್ಶನ’ದಲ್ಲಿ ನನ್ನ ರೆಕಾರ್ಡಿಂಗ್. ‘ರಂಗಗೀತೆ’ಗಳದು…” ಅಂತ ಚೀಲವನ್ನು ಬಗಲಿಗೆರಿಸಿ, ಬೀಗವನ್ನು ಕೈಗೆತ್ತಿಕೊಂಡರು. ನಾವು ಕೂತಲ್ಲಿಂದ ಎದ್ದು ಹೊರಗೆ ಸಾಗಿದ್ದಂತೆಯೇ, ಬಾಗಿಲಿಗೆ ಬೀಗ ಹಾಕಿದ ಕಾರಂತರು, ”ಟೈಮಿದ್ರೆ ನೀವೂ ಬನ್ನಿ ‘ದೂರದರ್ಶನ’ಕ್ಕೆ… ಮಾತಾಡ್ತಾ ಹೋಗಬಹುದು…” ಅಂತ ಮೆಟ್ಟಿಲುಗಳನ್ನಿಳಿಯತೊಡಗಿದರು.
ನಮಗೋ ಒಳಗೊಳಗೇ ಖುಷಿ. ಉತ್ತರ ಕರ್ನಾಟಕದವರಾದ ನಮಗೆ ‘ದೂರದರ್ಶನ’ ಆಗಲೂ ಈಗಲೂ ಯಾವಾಗಲೂ ದೂರದ್ದೇ. ಅಂಥದರಲ್ಲಿ ‘ದೂರದರ್ಶನ ಸ್ಟುಡಿಯೋ’ವನ್ನು, ಅಲ್ಲಿ ನಡೆಯುವ ರೆಕಾರ್ಡಿಂಗನ್ನು ನೋಡುವ ಅವಕಾಶ… ಅದೂ ಜಗತ್ಪ್ರಸಿದ್ಧ ರಂಗ ನಿರ್ದೇಶಕರಾದ ಬಿ.ವಿ. ಕಾರಂತರು ಪ್ರಸ್ತುತ ಪಡಿಸುವ ‘ರಂಗಗೀತೆ’ಗಳ ಕಾರ್ಯಕ್ರಮದ ರೆಕಾರ್ಡಿಂಗ್ ವೀಕ್ಷಿಸುವ ಅಲಭ್ಯ ಅವಕಾಶ… ಸ್ವತಃ ಕಾರಂತರೇ ಕರೆಯುತ್ತಿದ್ದಾರೆ…! ಇಂಥದ್ದೊಂದು ಅವಕಾಶ ಅಯಾಚಿತವಾಗಿ ಒದಗಿ ಬಂದರೆ ಬಿಡುವುದುಂಟೆ…?

-೦-೦-೦-೦-೦-

ಕಾರು ಮಿನರ್ವ ದಾಟಿ ಜೆ. ಸಿ. ರಸ್ತೆಯಲ್ಲಿ ಸಾಗಿತ್ತು. ಆಗ ಆ ರಸ್ತೆಯಿನ್ನೂ ಏಕಮುಖ ಸಂಚಾರದ ಕಕ್ಷೆಗೆ (ಶಿಕ್ಷೆಗೆ?) ಒಳಪಟ್ಟಿರಲಿಲ್ಲ. ಶಿವಾಜಿ ಟಾಕೀಜು ದಾಟಿ ಮುಂದೆ ಹೊರಟಿದ್ದಂತೆಯೇ ಕಾರಂತರು ಕಲಾಕ್ಷೇತ್ರದ ಕಡೆ ನೋಡುತ್ತ, ಏನೋ ನೆನಪಾದವರಂತೆ,
”ವಾ… ವಾಜಪೇಯಿ… ನಿಮ್ಮ ‘ಮುಂದೇನs ಸಖಿ ಮುಂದೇನs…?’ ತುಂಬಾ ಒಳ್ಳೆ ನಾಟಕ. ನೀವು ಮತ್ತೆ…” ಅಂತ ಮಾತು ಮುಂದುವರಿಸುವಷ್ಟರಲ್ಲೇ ನಾನದನ್ನು ತುಂಡರಿಸಿದೆ ,
‘ಸರ್… ಅದು ನಾನು ಬರೆದದ್ದಲ್ಲ… ವ್ಯಾಸ ದೇಶಪಾಂಡೆ ಬರೆದದ್ದು…” ಅಂದೆ.
”ಓ… ಹೌದೌದು. ಅವರು ವ್ಯಾ… ವ್ಯಾಸ ದೇಶಪಾಂಡೆ… ವ್ಯಾಸ ದೇಶಪಾಂಡೆ. ನೀವು ವಾ… ವಾಜಪೇಯಿ… ವಾಜಪೇಯಿ. ಯಾಕೋ ಈ ಎರಡೂ ಹೆಸರು ಕನ್ಫ್ಯೂಸ್ ಆಗ್ತಿದೆ…” ಅಂತ ಕ್ಷಣ ಕಾಲ ಏನನ್ನೋ ಧೇನಿಸಿಕೊಂಡು, ”ನಿಮ್ಮ ‘…ಲಿಯರ್’ ಎಡಾಪ್ಟೇಶನ್ ಬಹಳ ಚೆನ್ನಾಗಿದೆ… ಲೀಲಾವತಿ, ಶೀಲಾವತಿ, ಮಂಗಳಾವತಿ, ನಂದಭೂಪತಿ… ನೇಟಿವಿಟಿ… ಹಾಡುಗಳಂತೂ ಭಾಳ ಇಷ್ಟ ಆದ್ವು…” ಅಂದರು.
”ಥ್ಯಾಂಕ್ ಯು ಸರ್…”
”ಆ ಹಾಡುಗಳಿಗೆ ಟ್ಯೂನ್ ಮಾಡ್ಬೇಕು ಅಂತ ಭಾಳಾನೇ ಆಸೆ ಇತ್ತು. ಆದ್ರೆ ಏನ್ಮಾಡ್ಲಿ? ಅಷ್ಟು ಟೈಮ್ ಇರ್ಲಿಲ್ಲ…” ಅಂತ ಪೇಚಾಡಿಕೊಂಡರು.
ಹೌದು. ಹುಬ್ಬಳ್ಳಿಯ ಪ್ರಯೋಗಗಳ ಸಂದರ್ಭದಲ್ಲಿ ಕಾರಂತರಿಗೆ ನಿಜಕ್ಕೂ ಟೈಮೇ ಇರಲಿಲ್ಲ. ಭೋಪಾಲ್ ‘ರಂಗಮಂಡಲ’ದ ರಂಗ ಯಾತ್ರೆ ಎಂದರೆ ಅದು ನಿಜಕ್ಕೂ ಪುರಿಯ ಜಗನ್ನಾಥನ ರಥ ಯಾತ್ರೆಯೇ. ಅಂಥ ಒಂದು ಬೃಹತ್ ರಥದ ಸಾರಥ್ಯ ವಹಿಸುವುದೆಂದರೆ ಅದೇನು ಸಾಮಾನ್ಯವೇ? ಆ ನಾಟಕಗಳ ಕಲಾವಿದರ ಯೋಗಕ್ಷೇಮದ ಹೊಣೆ ಬೇರೆ. ನಿಜಕ್ಕೂ ಕಾರಂತರು ಅವರನ್ನೆಲ್ಲ ಮಕ್ಕಳಂತೆ ಕಾಣುತ್ತಿದ್ದದ್ದು ನನ್ನ ಅನುಭವಕ್ಕೆ ಬಂದ ಮಾತು. ಕಲಾವಿದರೂ ಅಷ್ಟೇ ; ಕಾರಂತರನ್ನು ಅವರು ‘ಬಾಬಾ ಕಾರಂತ’ ಎಂದೇ ಗೌರವಿಸುತ್ತಿದ್ದರು.
ಪ್ರತಿ ಮಧ್ಯಾಹ್ನ ಅಂದಂದಿನ ನಾಟಕದ ತಾಲೀಮು ಆಗಬೇಕು. ಎಲ್ಲವೂ ಕರಾರುವಾಕ್ಕಾಗಿದೆಯೇ ಎಂಬುದನ್ನು ಗಮನಿಸಬೇಕು. ಅದಕ್ಕೆಲ್ಲ ಒಬ್ಬ ಮ್ಯಾನೇಜರ್ ಅಂತ ಇದ್ದರೂ, ಒಟ್ಟಾರೆ ಜವಾಬ್ದಾರಿ ಕಾರಂತರದೆ ತಾನೇ… ಅಂಥದರಲ್ಲಿ ತಾವೇ ನಿರ್ದೇಶಿಸಿದ ‘ಮಹಾ ನಿರ್ವಾಣ್…’ (ಮೂಲ ಮರಾಠಿ : ಸತೀಶ್ ಆಳೇಕರ್) ನಾಟಕದಲ್ಲಿ ಸ್ವತಃ ಕಾರಂತರು ಮುಖ್ಯ ಪಾತ್ರವಾದ ಆತ್ಮ/ಸೂತ್ರಧಾರನಾಗಿ ಅಭಿನಯಿಸುತ್ತಿದ್ದರು. ಈ ಪಾತ್ರ ಅವರ ಹಾಡುಗಾರಿಕೆಗೆ, ತುಂಟತನಕ್ಕೆ, ಅಭಿನಯ ಚಾತುರ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. ಇವತ್ತಿಗೂ ನನ್ನ ನೆನಪಿನಲ್ಲಿ ಉಳಿದಂಥ ಪಾತ್ರ ಅದು.
ಇಷ್ಟೆಲ್ಲದರ ನಡುವೆಯೇ ಕಾರಂತರು ನಮ್ಮ ಶಿಬಿರಾರ್ಥಿಗಳಿಗೆ ಮೂರು ದಿನ ಪಾಠ ಮಾಡಿದ್ದರು. ಗಾನ ವಿದುಷಿ ಗಂಗೂಬಾಯಿಯವರ ಮನೆಗೆ ಹೋಗಿ ಬಂದಿದ್ದರು. ಗದಗಿನಲ್ಲೂ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೇ, ವಿಮರ್ಶಕ ಟಿ.ಪಿ. ಅಶೋಕ ಅವರೊಂದಿಗೆ ‘ಸಂದರ್ಶನ’ಕ್ಕೆ ಸಹಕರಿಸಿದ್ದರು.
ಈ ಸಂದರ್ಶನದ ಕುರಿತು ಒಂದಿಷ್ಟು ಹೇಳಬೇಕು. ನಾನು ಕೆಲಸ ಮಾಡುತ್ತಿದ್ದ ‘ಕಸ್ತೂರಿ’ ಮಾಸಪತ್ರಿಕೆ ಪ್ರತಿ ವರ್ಷ ‘ವಸಂತ ಸಂಚಿಕೆ’ಯೊಂದನ್ನು ಹೊರ ತರುವ ಪರಿಪಾಠವನ್ನು ಇರಿಸಿಕೊಂಡಿತ್ತು. ಸಾಮಾನ್ಯವಾಗಿ ಏಪ್ರಿಲ್ ಇಲ್ಲವೆ ಮೇ ತಿಂಗಳಿನ ಸಂಚಿಕೆ ವಿಶೇಷಾಂಕವಾಗಿ ಹೊರಬರುತ್ತಿತ್ತು. ಪಾ.ವೆಂ. ಆಚಾರ್ಯರ ಕಾಲದಿಂದಲೂ ನಡೆದುಬಂದಿದ್ದ ಪದ್ಧತಿ ಇದು. ಕಾರಂತರು ಭೋಪಾಲ್ ‘ರಂಗಮಂಡಲ’ದ ನಾಟಕಗಳೊಂದಿಗೆ ಹುಬ್ಬಳ್ಳಿಗೆ ಬಂದರಲ್ಲ, ಆಗ ನಾವು ತೊಡಗಿದ್ದದ್ದು ಆ ಸಂಚಿಕೆಯ ಕೆಲಸದಲ್ಲೇ. ಹುಬ್ಬಳ್ಳಿ ಬಿಟ್ಟರೆ ಬೆಂಗಳೂರಲ್ಲಿ ಮಾತ್ರ ಪ್ರಯೋಗಗೊಳ್ಳಲಿದ್ದ ಈ ನಾಟಕಗಳನ್ನು ನೋಡಲು ಸುತ್ತಲಿನ ನೂರಾರು ಕಿಲೋಮೀಟರ್ ಅಂತರದ ಊರುಗಳಿಂದ ನಾಟಕಪ್ರಿಯರು ಬಂದಿದ್ದರು. ಹಾಗೆ ಬಂದ ಹೆಗ್ಗೋಡಿನ ನೀನಾಸಂ ಮಿತ್ರರ ಜೊತೆಗಿದ್ದವರು ವಿಮರ್ಶಕ ಟಿ.ಪಿ. ಅಶೋಕ್. ಒಂದು ಬೆಳಗಿನ ಅವಧಿಯಲ್ಲಿ ಕಾರಂತರೊಂದಿಗೆ ಅಶೋಕ ಅವರನ್ನೂ ನಮ್ಮ ಕಚೇರಿಗೆ ಕರೆದೊಯ್ದೆ. ಅವರೊಂದಿಗೆ ಮಾತಾಡುತ್ತ ಕುಳಿತಾಗಲೇ ‘ಸಂದರ್ಶನ ಮಾಡಿಕೊಡಿ ಅಂತ ಕೇಳಿ’ ಎಂಬೊಂದು ಚೀಟಿಯನ್ನು ಮೆಲ್ಲನೆ ನಮ್ಮ ಸಂಪಾದಕರೆದುರು ಇರಿಸಿದೆ. ಅದರಲ್ಲಿಯ ‘ಅಂತ ಕೇಳಿ’ಯನ್ನು ಹೊಡೆದು ಹಾಕಿ ಚೀಟಿಯನ್ನು ಅಶೋಕ್ ಎದುರು ಸರಿಸಿದರು. ‘ಆಯಿತು’ ಎಂಬಂತೆ ತಲೆಯಾಡಿಸಿದ ಅಶೋಕ್ ಅವರಿಗೆ, ”ವಿಶೇಷ ಸಂಚಿಕೆಯ ಕೆಲಸ ಮುಗಿಯುತ್ತ ಬಂದಿದೆ. ಆದ್ದರಿಂದ ತಮ್ಮ ವಾಸ್ತವ್ಯದ ಸಂದರ್ಭದಲ್ಲೇ ಈ ಕಾರ್ಯವನ್ನು ಮಾಡಿ ಮುಗಿಸಿ ಬೇಗ ಕೊಡಿ,” ಎಂದು ಆಗ್ರಹಿಸಿದರು ನಮ್ಮ ಸಂಪಾದಕರು.
ಅಲ್ಲಿಂದ ವಾಪಸ್ ಹೋಗುವಾಗ ಅಶೋಕ್ ”ಯಾವಾಗ ಕೂಡೋಣ ಸಂದರ್ಶನಕ್ಕೆ?” ಎಂದು ಕಾರಂತರನ್ನು ಕೇಳಿದ್ದಾರೆ.
ಅದಕ್ಕೆ ಕಾರಂತರು, ”ನೋಡಿ, ಈ ಇಂಟರವ್ಯೂ ಅನ್ನೋದನ್ನ ಅರ್ಧ ಗಂಟೇಲಿ ಮಾಡೋದಿಕ್ಕೆ ಆಗೋದಿಲ್ಲ. ಅರ್ಧ ಗಂಟೇಲಿ ಇಬ್ಬರು ಮನುಷ್ಯರು ಪರಸ್ಪರ ಅರ್ಥ ಮಾಡಿಕೊಳ್ಳೋದಿಕ್ಕೆ ಆಗೋದಿಲ್ಲ. ನೀವು ನನ್ನ ಜೊತೇನೇ ಮೂರು ದಿನ ಇದ್ದುಬಿಡಿ. ರಂಗಭೂಮಿಯ ಕುರಿತು ಇಬ್ಬರೂ ಆಲೋಚಿಸೋಣ…” ಅಂತ ಹೇಳಿದ್ದಾರೆ.
ಮುಂದೆ ಮೂರು ದಿನ ಅಶೋಕ್ ಅವರನ್ನು ತಮ್ಮೊಂದಿಗೆ ಉಳಿಸಿಕೊಂಡಿದ್ದಾರೆ ಕಾರಂತರು.
”ಅದೊಂದು ವಿಶಿಷ್ಟ ಅನುಭವ. ಆ ಮೂರು ದಿನಗಳಲ್ಲಿ ಕಾರಂತರಿಂದ ನಾನು ಕಲಿತದ್ದು ಅಪಾರ. ಕಾರಂತರು ತಮ್ಮ ಜೀವನದ ಬಗ್ಗೆ, ರಂಗಭೂಮಿಯ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ ಉತ್ಸಾಹದಿಂದ ಮಾತನಾಡಿದರು. ಈ ವಯಸ್ಸಿನಲ್ಲೂ ಈ ಮನುಷ್ಯ ಬದುಕಿನ ಬಗ್ಗೆ ಇನ್ನೂ ಮುಗ್ಧತೆ, ಕುತೂಹಲ ಕಾಯ್ದುಕೊಂಡಿರುವುದನ್ನು ಗಮನಿಸಿದಾಗ ಸಂತೋಷವಾಯಿತು…” ಅನ್ನುತ್ತಾರೆ ಟಿ.ಪಿ. ಅಶೋಕ್.
ಅಶೋಕ್ ಬರೆದು ಕೊಟ್ಟ ಆ ಸಂದರ್ಶನ ಲೇಖನದ ಜೊತೆ ನಾನು ‘ರಂಗಮಂಡಲ’ದ ವಿಭಾ ಮಿಶ್ರಾರನ್ನು ಕಾಡಿ ಬೇಡಿ ಪಡೆದಿದ್ದ ಒಂದು ವಿಶಿಷ್ಟ ಚಿತ್ರವನ್ನು ಬಳಸಿಕೊಂಡೆ. ‘ಮಹಾನಿರ್ವಾಣ್’ ನಾಟಕದ ಪೋಸ್ಟರ್ ಅದು. ಅದರಲ್ಲಿ ಕಾರಂತರ ಒಂದು ವಿಶೇಷ ಭಂಗಿ ಇತ್ತು.
ಹಾಂ… ನೀವು ‘ಅಲ್ಲಿಯ ತನಕ’ದ ಕಾರಂತರನ್ನು ಅರಿಯಬೇಕೆಂದರೆ ಖಂಡಿತ ಈ ಸಂದರ್ಶನವನ್ನು ಓದಬೇಕು. ಮುಂದೆ 1996ರಲ್ಲಿ ಪುತ್ತೂರಿನ ಕರ್ನಾಟಕ ಸಂಘದವರು ಪ್ರಕಟಿಸಿದ ‘ಬಿ.ವಿ. ಕಾರಂತ’ ಎಂಬ ಗೌರವ ಗ್ರಂಥದಲ್ಲಿಯೂ ‘ಕಸ್ತೂರಿ’ಯ ಈ ಸಂದರ್ಶನ ಸ್ಥಾನ ಪಡೆಯಿತು. ಒಟ್ಟು 360 ಪುಟಗಳ ಈ ಗೌರವ ಗ್ರಂಥದ ಉಪ ಶೀರ್ಷಿಕೆ ‘ನಿರ್ದೇಶಕನ ಸಾಧನೆಗಳ ಸಮೂಹ ಶೋಧ.’ ಇದರೊಳಗಿನ 36 ಲೇಖನಗಳು ಮತ್ತು ಅನುಬಂಧ ನಮಗೆ ಕಾರಂತರ ಬದುಕು ಮತ್ತು ಬಹುಮುಖೀ ಪ್ರತಿಭೆಯ ಪರಿಪೂರ್ಣ ಚಿತ್ರಣವನ್ನು ಸ್ಪಷ್ಟವಾಗಿ ನೀಡುತ್ತವೆ.

-೦-೦-೦-೦-೦-

ಕಾರು ‘ವಿಧಾನ ವೀಧಿ’ಯಲ್ಲಿ ಸಾಗಿ, ಹಾಗೇ ಮುಂದುವರಿದು, ಕಾಫಿ ಬೋರ್ಡ್ ಎದುರು ಬಲಕ್ಕೆ ತಿರುಗಿ, ‘ವಿಶ್ವೇಶರಯ್ಯ ಟವರ್ಸ್’ ಆವರಣದಲ್ಲಿ ನಿಂತುಕೊಂಡಿತು. ಅದೇ ಹೊಸದಾಗಿ ಕಾರ್ಯಾರಂಭ ಮಾಡಿದ್ದ ಬೆಂಗಳೂರು ‘ದೂರದರ್ಶನ’ಕ್ಕೆ ಆಗಿನ್ನೂ ಸ್ವಂತದ ಕಟ್ಟಡ ಇರಲಿಲ್ಲ. ಅದರ ಕಲಾಪ- ಕಾರುಬಾರುಗಳೆಲ್ಲ ನಡೆಯುತ್ತಿದ್ದದ್ದು ಈ ‘ವಿಶ್ವೇಶರಯ್ಯ ಟವರ್ಸ್’ ಮೇಲಿನ ಆರನೆಯದೋ ಏಳನೆಯದೋ ಅಂತಸ್ತಿನಿಂದ. ಅಲ್ಲಿಯೇ ಒಂದು ಕಡೆ ಸ್ಟುಡಿಯೋ, ಇನ್ನೊಂದು ಕಡೆ ಸಿಬ್ಬಂದಿ ಮತ್ತು ಸಲಕರಣೆಗಳಿಗೆ ಜಾಗ ಇತ್ಯಾದಿ ಇತ್ಯಾದಿ.

ಅದಾಗಲೇ ಸ್ಟುಡಿಯೋದಲ್ಲಿ ಕಾರಂತರ ‘ರಂಗಗೀತೆ’ಗಳ ರೆಕಾರ್ಡಿಂಗ್ ವ್ಯವಸ್ಥೆ ಆಗಿತ್ತು. ಕಾರಂತರು ಮತ್ತು ಸಹ ಗಾಯಕರಿಬ್ಬರು ಕೂಡುವುದಕ್ಕೆ ವೇದಿಕೆ. ‘ದೂರದರ್ಶನ’ದ ಅಭಿರುಚಿಗೆ ತಕ್ಕ ಹಾಗೆ ಏನೇನೋ ಅಲಂಕರಣಗಳು. ನಗುತ್ತ ನಿಂತುಕೊಂಡ ಮೂರು ಕ್ಯಾಮರಾಗಳು. ಒಂದಷ್ಟು ಢಾಳು
ಢಾಳು ಲೈಟುಗಳು. ಎಲ್ಲ ಹೊಣೆಯೂ ತಮ್ಮ ತಲೆಯ ಮೇಲೆಯೇ ಇದೆಯೇನೋ ಎಂಬ ಗತ್ತಿನಲ್ಲಿ ಕತ್ತು ತಿರುಗಿಸಿ, ಉಳಿದವರನ್ನು ‘ಯಕಃಶ್ಚಿತ್’ ಎಂಬಂತೆ ನೋಡುತ್ತಾ ತಿರುಗುತ್ತಿದ್ದ ನಾಲ್ಕಾರು ಜನ ಧಡಿಯರು. ಕ್ಷಣ ಕ್ಷಣಕ್ಕೂ ರೇಗುತ್ತಿದ್ದ ಒಬ್ಬಾತ ಕಾರಂತರು ಕಂಡೊಡನೆ ಅವರ ಬಳಿಗೆ ಓಡಿಬಂದ. ಕೈಮುಗಿದು ”ಎಲ್ಲಾ ರೆಡಿ ಸರ್…” ಅಂದ. ಕಾರಂತರನ್ನು ಬೇಡಿಕೆಗೆ ಕರೆದೊಯ್ದ. ನಮಗೆ, ”ಸರ್, ನೀವು ಅಲ್ಲಿ…” ಅಂತ ವೇದಿಕೆಯಿಂದ ಎದುರಿಗೆ ಸುಮಾರು ದೂರದಲ್ಲಿದ್ದ ‘ಗಾಜಿನ ಮನೆ’ಯ ಪಕ್ಕದಲ್ಲಿದ್ದ ಕುರ್ಚಿಗಳೆಡೆ ಕೈತೋರಿಸಿದ.
ಹಾಗೆ ಕೈ ತೋರಿಸಿದ ಆತ ಆ ಕಾರ್ಯಕ್ರಮದ ಪ್ರಡ್ಯೂಸರ್ ಅಂತ ನಂತರ ನನಗೆ ಗೊತ್ತಾಯಿತು.
ಕಾರಂತರ ಜತೆ ಸಹಗಾಯಕರು ವೇದಿಕೆಯ ಮೇಲೆ ಆಸೀನರಾದರು. ಅವರಿಗೆ ಏನೇನೋ ಸೂಚನೆಗಳನ್ನು ಕೊಟ್ಟ ಆ ಪ್ರಡ್ಯೂಸರ್ ಅಲ್ಲಿಂದಿಳಿದು ನಮ್ಮ ಪಕ್ಕದಲ್ಲಿದ್ದ ‘ಗಾಜಿನ ಮನೆ’ಯನ್ನು ಪ್ರವೇಶಿಸಿದ. ಆ ಒಳಗಾಗಿ ಕಾರಂತರ ಬೆರಳುಗಳು ಹಾರ್ಮೋನಿಯಮ್ಮಿನ ಬಿರಡೆಗಳ ಮೇಲೆ ಆಡತೊಡಗಿದ್ದವು. ಸಹಗಾಯಕರು ತಮ್ಮ ಕೈಯಲ್ಲಿದ್ದ ವಾದ್ಯಗಳನ್ನು ‘ಅಣಿ’ಗೊಳಿಸಿಕೊಳ್ಳುತ್ತಿದ್ದರು. ಒಳಗಿನಿಂದ ಪ್ರಡ್ಯೂಸರ್ ”ರೆಡೀ…?” ಅಂತ ಕೇಳಿದ. ಕಾರಂತರ ಹಿಂದೆ ಇದ್ದವನೊಬ್ಬ (ಫ್ಲೋರ್ ಮ್ಯಾನೇಜರ್?) ‘ಥಮ್ಸ್ ಅಪ್’ ಸನ್ನೆ ತೋರಿಸಿದ.
”ಕ್ಯಾಮರಾ… ರೆಡಿ…?” ಅಂತ ಮತ್ತೆ ಪ್ರಡ್ಯೂಸರ್ ಪ್ರಶ್ನೆ.
”ಬೆಳಿಗ್ಗೇನೇ ರೆಡಿ ಆಗಿ ಕೂತೀದೀವಿ ಸ್ವಾಮಿ…”
”ಇನ್ನೂ ‘ರೆಡೀ…?’ ಅಂತ ರಾಗಾ ಎಳೀತಾ ಇದೀರಲ್ಲಾ…”
”ನಮ್ ಸಹನೆಗೂ ಒಂದ್ ಮಿತಿಯಿದೆ. ಬೇಗ ಶುರು ಹಚ್ಕೊಳ್ಳಿ…”
-ಅಂತೇನೇನೋ ಪ್ರತಿಕ್ರಿಯೆಗಳು.
ಪ್ರೊಡ್ಯುಸರ್ ಅದಕ್ಕೆ ಪ್ರತಿಯಾಗಿ ಇನ್ನೇನೋ ಹೇಳಿದ. ಕ್ಯಾಮರಾ ಹಿಂದಿದ್ದವರು ಪಕ್ಕಕ್ಕೆ ಸರಿದು ಕೈಕಟ್ಟಿ ನಿಂತರು : ಅಸಹಕಾರ ಆಂದೋಲನ ಹೂಡಿದವರಂತೆ.
ಅದನ್ನೆಲ್ಲ ಗಮನಿಸುತ್ತಲೇ ಇದ್ದ ಕಾರಂತರು, ”ನಿಮ್ಮದು ಮುಗೀಲಿ… ಆ ನಂತ್ರ ಶುರು ಮಾಡಿಕೊಳ್ಳೋಣ…” ಅಂತ ತಾವೂ ಕೈಕಟ್ಟಿ ಕೂತರು.
ಆ ಛಾಯಾಗ್ರಾಹಕ ತ್ರಿಮೂರ್ತಿಗಳ ಕಾರಣದಿಂದ ಇರಿಸುಮುರಿಸಾದರೂ ತೋರಗೊಡದೆ, ಪ್ರಡ್ಯುಸರ್ ”ನಮ್ಮ ನಮ್ಮ ಅಸಮಾಧಾನಗಳನ್ನ ಆಮೇಲೆ ಇತ್ಯರ್ಥ ಮಾಡಿಕೊಳ್ಳೋಣ. ಈಗ ಮೊದ್ಲು ಸಾರ್ ಪ್ರೊಗ್ರಾಮ್ ಮುಗಿಸಿಬಿಡೋಣ…” ಅಂತ ಸಮಾಧಾನದ ಮಾತಾಡಿದ.
ಕ್ಯಾಮರಾಮನ್ ಗಳು ಮತ್ತೆ ಕಾರ್ಯೋನ್ಮುಖರಾದರು. ಪ್ರಡ್ಯುಸರ್ ‘ಸೂಚನೆ’ಗಳನ್ನು ಕೊಡಲು ಆರಂಭಿಸಿದ.
ಶುರುವಾಯಿತು ಕಾರಂತರ ಹಾಡು :
”ಗಜವದನಾ ಹೇರಂಬ… ವಿಜಯಧ್ವಜ ಶತರವಿ ಪ್ರತಿಭಾ…”
ಗಿರೀಶ ಕಾರ್ನಾಡರ ‘ಹಯವದನ’ದ ನಾಂದಿ ಪದ್ಯ. ಅದು ಗಣೇಶವಂದನ ಗೀತೆ. ಕಾರಂತರ ಮೂಸೆಯಲ್ಲಿ ಈ ಹಾಡು ಮೂಡಿಬಂದ ಪರಿಯೇ ಅದ್ಭುತವಾದದ್ದು.
ಪಲ್ಲವಿಯನ್ನು ಮುಗಿಸಿ ಇನ್ನೇನು ಚರಣವನ್ನೆತ್ತಿಕೊಳ್ಳಬೇಕು… ಅಷ್ಟರಲ್ಲಿ ಒಳಗಿನಿಂದ ‘ಕಟ್ ಕಟ್ ಕಟ್…’ ಅಂತ ಪ್ರಡ್ಯುಸರ್ ದನಿ. ಕಾರಂತರು ಆಗಲೇ ಮೈಮರೆತು ಹಾಡತೊಡಗಿದ್ದರಲ್ಲ, ರೆಕಾರ್ಡಿಂಗ್ ನಿಲ್ಲಿಸಿದ್ದೇಕೆ ಎಂದು ಅವರಿಗೆ ತಿಳಿಯಲೇ ಇಲ್ಲ. ಯಾವುದೋ ಲೈಟಿಗೆ ಹಾಕಿದ್ದ ಒಂದು ಬಣ್ಣದ ಹಾಳೆ ಅಲ್ಲಿಂದ ಉದುರಿ ಬಿದ್ದಿತ್ತು. ಪ್ರಕಾಶ ಸಂಯೋಜನೆ ಸರಿ ಇರದಿದ್ದರೆ ಮುಂದುವರಿಸುವುದು ಹೇಗೆ?

ತಗೋ, ಮತ್ತೆ ಶುರುವಾಯಿತು ಅವರ ಮೇಲೆ ಇವರು, ಇವರ ಮೇಲೆ ಅವರು ಕೆಸರು ಎರಚಾಡುವುದಕ್ಕೆ. ಯಾರೊಬ್ಬರೂ ಸುಮ್ಮನಿರುವ ಲಕ್ಷಣ ಕಾಣಲಿಲ್ಲ. ಅದುವರೆಗೆ ಗದ್ದಕ್ಕೆ ಕೈಯಾನಿಸಿಕೊಂಡು, ಹಾರ್ಮೊನಿಯಮ್ಮಿನ ಮೇಲೆ ಮೊಳಕೈ ಊರಿ ನಡೆಯುತ್ತಿರುವುದನ್ನೆಲ್ಲ ಗಮನಿಸುತ್ತಿದ್ದ ಕಾರಂತರು ಸಹಗಾಯಕರತ್ತ ಒಮ್ಮೆ ನೋಡಿ, ಕೂತಲ್ಲಿಂದ ಎದ್ದರು. ಪ್ರಡ್ಯೂಸರ್ ಹೆಸರು ಹಿಡಿದು ಕರೆದರು. ಸ್ವಲ್ಪ ಜೋರು ದನಿಯಲ್ಲಿಯೇ, ”ನಾನು ನಿಮ್ಮ ನಿಮ್ಮ ಜಗಳ ನೋಡೋದಕ್ಕೆ ಅಂತ ಬಂದದ್ದಲ್ಲ ಇಲ್ಲಿ… ಇದು ನನಗೆ ನೀವು ಮಾಡಿರೋ ಇನ್ಸಲ್ಟು… ಈಗಲೇ ಇದನ್ನೊಂದು ಇಶ್ಯೂ ಮಾಡ್ತೇನೆ. ಪ್ರೆಸ್ ಮೀಟ್ ಕರೀತೇನೆ. ಏನು ಅನ್ಕೊಂಡಿದ್ದೀರಿ ನೀವೆಲ್ಲಾ… ?” ಅಂತ ಕೂಗಾಡೋದಕ್ಕೆ ಶುರು ಮಾಡಿದರಷ್ಟೇ ಅಲ್ಲ, ತಮ್ಮ ಬ್ಯಾಗ್ ಹೆಗಲಿಗೇರಿಸಿ ವೇದಿಕೆಯಿಂದ ಕೆಳಗಿಳಿದರು.
ಇದ್ದಕ್ಕಿದ್ದ ಹಾಗೆಯೇ ಅಲ್ಲಿ ಸ್ತಬ್ಧತೆ ಮನೆಮಾಡಿತು. ಪ್ರಡ್ಯೂಸರ್ ಓಡಿ ಬಂದವನೇ ಕಾರಂತರ ಕೈಕಾಲು ಕಟ್ಟಿಕೊಳ್ಳತೊಡಗಿದ.
”ಸಾರಿ ಸರ್… ಹಾಗೆಲ್ಲಾ ಮಾಡಬೇಡಿ ಸರ್… ಈಗ ಶುರು ಮಾಡಿಬಿಡೋಣ ಸರ್…”
”ಮತ್ತೆ ಅದೇ ರಿಪೀಟ್ ಆಗೋದಿಲ್ಲ ಅನ್ನೋದನ್ನ ಹೇಗ್ರೀ ಹೇಳ್ತೀರಿ…? ಮೈ ಟೈಮ್ ಈಸ್ ವೆರಿ ಪ್ರೆಶಿಯಸ್. ಇವತ್ತು ಐದು ಗಂಟೆಗೆ ನನ್ನ ಫ್ಲೈಟು. ಅದು ಮಿಸ್ಸಾದ್ರೆ ನಾಳೆ ನಾನು ಡೆಲ್ಲಿ ಸೆಮಿನಾರಿನಲ್ಲಿ ಪಾರ್ಟಿಸಿಪೇಟ್ ಮಾಡೋದಕ್ಕೇ ಆಗೋದಿಲ್ಲ…”
”ಇಲ್ಲ ಸರ್. ರೈಟ್ ಟೈಮಿಗೆ ನೀವು ಏರ್ ಪೋರ್ಟ್ ತಲಪೋ ಹಾಗೆ ಮಾಡ್ತೀವಿ…”
ಅಂತೂ ಕಾರಂತರು ತಣ್ಣಗಾದರು. ಮತ್ತೆ ವೇದಿಕೆ ಏರಿದರು. ಅಲ್ಲಿ ಅವರು ಮತ್ತೆ ‘ಗಜವದನಾ ಹೇರಂಬ…’ ಶುರುಮಾಡುತ್ತಿದ್ದಂತೆ ನಾನು ಅಲ್ಲಿಂದ ಹೊರಟು ಬಂದೆ. ನಮ್ಮ ಶಿಬಿರದ ಸಮಾರೋಪಕ್ಕೆ ಆಗಿನ ಸಂಸ್ಕೃತಿ ಸಚಿವ ಎಂ. ಪಿ. ಪ್ರಕಾಶ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬೇಕಿತ್ತು. ಮಧ್ಯಾಹ್ನ ನಾಲ್ಕು ಗಂಟೆಯ ಮೇಲೆ ಸಚಿವರೊಂದಿಗೆ ಭೇಟಿ ನಿಗದಿಯಾಗಿತ್ತು.

-೦-೦-೦-೦-೦-

ನಮ್ಮ ರಂಗ ತರಬೇತಿ ಶಿಬಿರದ ನಾಟಕ ‘ನಂದಭೂಪತಿ’. ಅದರ ತಯಾರಿಯ ಜೋರಿನಲ್ಲೇ ಮುಖ್ಯ ಪಾತ್ರವಹಿಸಬೇಕಿದ್ದ ನಟನನ್ನು ತೀವ್ರ ಜ್ವರ ಕಾಡತೊಡಗಿತು. ಏನೇ ಆಗಲಿ, ‘ದಿ ಶೋ ಮಸ್ಟ್ ಗೋ ಆನ್’… ಜಯತೀರ್ಥ ಜೋಶಿ ತಾವೇ ‘ನಂದಭೂಪತಿ’ಯ ಪಾತ್ರದ ಹೊಣೆ ಹೊತ್ತರು. ಪಾತ್ರವನ್ನು ನಿರ್ವಹಿಸುತ್ತಲೇ ರಿಹರ್ಸಲ್ ನಡೆಸಬೇಕು. ಜತೆಗೆ ಇನ್ನಿತರ ತಯಾರಿ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬುದರ ಮೇಲೊಂದು ಕಣ್ಣಿಡಬೇಕು. ನಮ್ಮ ಕಡೆಯ ಭಾಷೆಯಲ್ಲಿ ಹೇಳಬೇಕೆಂದರೆ, ಯಾರೊಬ್ಬರಿಗೂ ‘ಕುಂಡೀ ತುರಿಸಿಗೋಳಿಕ್ಕೂ ವ್ಯಾಳ್ಯಾ ಇಲ್ಲ’ ಎಂಬಂಥ ಪರಿಸ್ಥಿತಿ. ಇಂಥದರಲ್ಲೇ ಒಬ್ಬನ ಮೇಲಿನ್ನೊಬ್ಬನ ದುಸುಮುಸು. ಮತ್ಯಾರದೋ ಹುಸಿ ಮುನಿಸು. ಏನೇನೋ ಗುಸುಗುಸು. ಎಲ್ಲವನ್ನೂ ಸಹಿಸಿಕೊಂಡೇ ನಾವು ಸಂಘಟಕರು (ರಾಘವೇಂದ್ರ ಹುನಗುಂದ, ಸೇತುಮಾಧವ ಮಾನವಿ, ಸಂಜೀವ ದೇಶಪಾಂಡೆ, ರಜನಿಕಾಂತ ಹುನಗುಂದ, ನಾನು ಮತ್ತಿತರರು) ‘ಅಭಿನಯ ಭಾರತಿ’ ಎಂಬ ರಂಗರಥವನ್ನು ಎಳೆದುಕೊಂಡು ಹೊರಟಿದ್ದೆವು. ಯಾಕಂದರೆ, ಅದು ಆ ಕಾಲದ ಭಾರೀ ಬಜೆಟ್ಟಿನ ರಂಗ ಶಿಬಿರ. ಆ ತನಕ ಪಾತ್ರಗಳ ಪೋಷಾಕು, ಆಭರಣಗಳು ಇತ್ಯಾದಿಗಳಿಗಾಗಿಯೇ ಹತ್ತಾರು ಸಾವಿರ ರೂಪಾಯಿಗಳು ಖರ್ಚಾಗಿದ್ದವು. ಒಟ್ಟು ವೆಚ್ಚ ನಲವತ್ತು ಸಾವಿರ ಮೀರುವ ಅಂದಾಜು ಇತ್ತು.
ಇಷ್ಟಾದರೂ ನಮಗಿದ್ದ ದೊಡ್ಡ ಸಮಾಧಾನವೆಂದರೆ ‘ಜೋಶಿದ್ವಯ’ರ ಕಾರಣದಿಂದ ನಾಟಕದ ತಾಲೀಮಿಗೆ ಕಳೆ ಏರುತ್ತಲಿದ್ದದ್ದು. ಜಯತೀರ್ಥ ಜೋಶಿ ಈ ಶಿಬಿರವನ್ನೂ ಈ ನಾಟಕವನ್ನೂ ಈ ಪಾತ್ರವನ್ನೂ ಒಂದು ಚಾಲೆಂಜಾಗಿ ಸ್ವೀಕರಿಸಿದ್ದರು. ಕಲಾವಿದರೆಲ್ಲ ನಾಟಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಸಿತಾರ್ ವಾದಕ ಮಿತ್ರ ಶ್ರೀನಿವಾಸ ಜೋಶಿ ಸ್ವರಸಂಯೋಜನೆ ಮಾಡಿದ ‘ನಂದಭೂಪತಿ’ಯ ಹಾಡುಗಳು ಆಗಲೇ ಕಲಾವಿದರ ನಾಲಗೆಯ ಮೇಲೆ ಆಡತೊಡಗಿದ್ದವು.
ಇನ್ನೇನು ‘ಶಿಬಿರ ಸಮಾರೋಪ’ದ ದಿನ (ಮೇ 12, 1985) ಒಂದು ವಾರವಿದೆ ಎನ್ನುವಾಗಲೇ ಇದ್ದಕ್ಕಿದ್ದಂತೆ ಜಯತೀರ್ಥ ಜೋಶಿಗೆ ಕಾರಂತರಿಂದ ಒಂದು ಟೆಲೆಗ್ರಾಮು – ”…’ನಂದಭೂಪತಿ’ ನಾಟಕದ ಹಾಡುಗಳಿಗೆ ಟ್ಯೂನ್ ಮಾಡಬೇಕೆಂಬ ಅಸೆ ಬಲವತ್ತರವಾಗಿದೆ. ನಾಳೆ 7ನೆಯ ತಾರೀಖು ನಾನು ಬೆಳಗಾವಿಗೆ ಬರುತ್ತಿದ್ದೇನೆ. ಏರ್ ಪೋರ್ಟಿನಿಂದ ಹುಬ್ಬಳ್ಳಿಗೆ ಕರೆದೊಯ್ಯಲು ಯಾರನ್ನಾದರೂ ಕಳಿಸಿಕೊಡಿ….”
ಜೋಶಿ ನಮ್ಮೆದುರು ಅದನ್ನು ಹಿಡಿದರು.
ಬಿಸಿತುಪ್ಪ. ನಾವು ಸಂಘಟಕರು ಪರಸ್ಪರ ಮುಖ ನೋಡಿಕೊಂಡೆವು. ಏನು ಮಾಡುವುದು? ಅಂಥ ಅಂತಾರಾಷ್ಟ್ರೀಯ ಖ್ಯಾತಿಯ ರಂಗ ಗಣ್ಯರೊಬ್ಬರು ತಾವಾಗಿಯೇ ಇಷ್ಟಪಟ್ಟು ಬಂದು ನಮ್ಮ ನಾಟಕದ ಹಾಡುಗಳಿಗೆ ಟ್ಯೂನ್ ಮಾಡುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಇದು ಹೆಮ್ಮೆ ಪಡಬೇಕಾದ ವಿಚಾರವೇ. ಆದರೆ, ಈಗಾಗಲೇ ಶ್ರೀನಿವಾಸ ಜೋಶಿ ರಾಗ ಸಂಯೋಜನೆ ಮಾಡಿದ ಹಾಡುಗಳೆಲ್ಲ ನಾಟಕಕ್ಕೆ ಒಂದು ‘ಒಜನ’ನ್ನು ತಂದು ಕೊಟ್ಟಿವೆ. ಅವುಗಳಲ್ಲಿ ಕೆಲವು ಹಾಡುಗಳ ಸಂಯೋಜನೆಯಂತೂ ತುಂಬ ಮೋಹಕವಾಗಿವೆ. ಇಂಥ ಸಂದರ್ಭದಲ್ಲಿ ಕಾರಂತರು ಬಂದು ಟ್ಯೂನ್ ಮಾಡುತ್ತೇನೆ ಅಂತ ಕೂತರೆ ಅದು ವೃಥಾ ಗೊಂದಲಕ್ಕೆ ಕಾರಣವಾಗಬಹುದಲ್ಲವೇ?
”ಏನ್ ಮಾಡೂಣು…?” ಅಂತ ಜಯತೀರ್ಥ ಜೋಶಿಯನ್ನೇ ಕೇಳಿದೆವು.
ಇಂಥ ವಿಚಾರಗಳಲ್ಲಿ ಆತ ತುಂಬಾ ಚಾಲಾಕು. ಎಲ್ಲಿಯೂ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಅದರಲ್ಲೂ, ಈಗ ಬರುತ್ತಿರುವವರು ಸ್ವತಃ ಆತನ ಗುರುಗಳು.
”ಏನ್ ಮಾಡೂಣು ಅಂದ್ರ ನಾ ಏನ್ ಹೇಳ್ಳಿ? ಅವರು ಈ ಹೊತ್ತಿಗಾಗ್ಲೇ ಮುಂಬೈಗೆ ಬಂದಿರಬೇಕು. ನೋಡ್ರಿ, ನಾಳೆ ಫ್ಲೈಟು ಅರೈವಲ್ ಎಷ್ಟೊತ್ತಿಗೆ ಅಂತ ತಿಳಕೊಂಡು, ಅಷ್ಟೊತ್ತಿಗೆ ಯಾರನಾದ್ರೂ ಅಲ್ಲಿ ಇರಲಿಕ್ಹೇಳ್ರಿ…” ಅಂತ ರಿಹರ್ಸಲ್ಲಿಗೆ ಹೊರಟುಹೋದರು.
ಕಾರಂತರ ಬರುವಿಕೆಯಿಂದ ಆಗಬಹುದಾದ ಗೊಂದಲಗಳ ಅರಿವು ಜೋಶಿಗೆ ಇರಲಿಲ್ಲವೆಂದಲ್ಲ. ಆದರೆ ಇದು ಸಂಘಟಕರು ಪರಿಹರಿಸಿಕೊಳ್ಳಬೇಕಾದ ವಿಚಾರ ಎಂಬುದು ಆತನ ನಿಲುವು.
ಅಂತೂ ಒಂದು ನಿರ್ಧಾರಕ್ಕೆ ಬಂದೆವು : ‘ಪ್ರಸ್ತುತ ಶಿಬಿರಾರ್ಥಿಗಳಲ್ಲಿ ಒಬ್ಬರಾದ, ನಮ್ಮ ತಂಡದ ‘ಹೀಂಗೊಂದೂರಾಗ ಒಬ್ಬ ರಾಜ’ ನಾಟಕದಲ್ಲಿ ಮುಖ್ಯ ಪಾತ್ರವಹಿಸಿದ್ದ ಅರವಿಂದ ಕುಲಕರ್ಣಿಯವರು ಬೆಳಗಾವಿಗೆ ಹೋಗಬೇಕು, ಕಾರಂತರನ್ನು ಎದುರುಗೊಂಡು ಹುಬ್ಬಳ್ಳಿಗೆ ಕರೆತರಬೇಕು’…

-೦-೦-೦-೦-೦-

ಅವತ್ತು ಅರವಿಂದ ಕುಲಕರ್ಣಿಯ ಜತೆ ಬೆಳಗಾವಿಯಿಂದ ಬಂದಿಳಿದ ಕಾರಂತರು, ”ಜಯತೀರ್ಥ ಜೋಶಿ ಉಳಿದಿರುವ ಕಡೆಯೇ ನನಗೂ ವಸತಿ ಏರ್ಪಾಟು ಮಾಡಿ ಸಾಕು,” ಅಂದರು. ನಾವು ಜೋಶಿಗೆ ವಸತಿ ಏರ್ಪಾಟು ಮಾಡಿದ್ದು ‘ಸವಾಯಿ ಗಂಧರ್ವ ಕಲಾಮಂದಿರ’ದ ಬಳಿಯೇ ಇದ್ದ ಒಂದು ಸಾಮಾನ್ಯ ಹೋಟಲಿನಲ್ಲಿ. ಅಲ್ಲಿಯೇ ಒಂದು ರೂಮಿನಲ್ಲಿ ತಮ್ಮ ಸಾಮಾನುಗಳನ್ನು ಇರಿಸಿ ಫ್ರೆಶ್ ಆದ ಕಾರಂತರು, ”ನನಗೆ ಒಂದು ಹಾರ್ಮೋನಿಯಂ ತರಿಸಿಕೊಟ್ರೆ ಹಾಡುಗಳ ಕೆಲಸ ಶುರು ಮಾಡಬಹುದು…” ಅಂತ ಬ್ಯಾಗಿನಿಂದ ನಾಟಕದ ಸ್ಕ್ರಿಪ್ಟ್ ತೆಗೆದರು.
ಅದು ಊಟದ ಸಮಯ. ನಮ್ಮ ಹೊಟ್ಟೆ ಕೆರೆಯುತ್ತಿತ್ತು. ಕಾರಂತರಿಗೋ ಅದರ ಪರಿವೆಯೇ ಇಲ್ಲ…! ನಾವೇ ನೆನಪಿಸಬೇಕಾಯಿತು.
”ಸರಿ. ಇಲ್ಲೇ ತರಿಸ್ಬಿಡಿ…” ಅಂತ ಅವರು.
”ಸರ್… ಇಲ್ಲಿ ಊಟ ಚೆನ್ನಾಗಿರೊಲ್ಲ ಸರ್… ಬೇರೆ ಕಡೆ ಹೋಗೋಣ…” ಅಂತ ನಾವು.
”ಸರಿ… ಬೇಗ ಮುಗಿಸ್ಕೊಂಡ್ ಬಂದು ಹುಡುಗರ ಜತೆ ಕೂಡ್ಬೇಕು… ಬನ್ನಿ,” ಅಂತ ಎದ್ದರು.
ಎಷ್ಟೆಲ್ಲಾ ಊರುಗಳನ್ನು, ರಾಜ್ಯಗಳನ್ನು, ದೇಶ-ಪರದೇಶಗಳನ್ನು ಸಂಚರಿಸಿ ಬಂದವರು ಅವರು. ಎಷ್ಟೆಲ್ಲಾ ‘ನೀರು ಕುಡಿ’ದವರು, ‘ರುಚಿ ಉಂಡ’ವರು… ಅವರಿಗೆ ಇಲ್ಲಿ ನಮ್ಮೂರಲ್ಲಿ ‘ಒಳ್ಳೆಯ ಊಟ’ ಹಾಕಿಸಬೇಕು ಅಂತ ನಾವಿದ್ದರೆ ಕಾರಂತರು ಆರ್ಡರ್ ಮಾಡಿದ್ದು ಸಿಂಪಲ್ಲಾಗಿ ”ಅನ್ನ, ತಿಳಿ ಸಾರು, ಗಟ್ಟಿ ಮೊಸರು…”
”ಅಲ್ಲಾ ಸರ್… ಏನಾದ್ರೂ ‘ಬೇರೆ’ ಹೇಳ್ಬೇಕಿತ್ತು…” ಅಂತ ಅರವಿಂದ ಕುಲಕರ್ಣಿ.
”…’ಬೇರೆ’ ಅಂದ್ರೆ…?”
”ಅಂದ್ರೆ…” ಅಂತ ನಾನು ಬಾಯಿಬಿಡುವಷ್ಟರಲ್ಲೇ ಕಾರಂತರು, ”ನಾನು ಇದನ್ನ ಬಿಟ್ಟು ಒಂದು ಎಗ್ ಕೂಡ ಮುಟ್ಟಿದವನಲ್ಲ… ಅದು ಎದುರಿಗೆ ಕಂಡ್ರೆ ಸಾಕು ನನಗೆ ವಾಂತಿ ಬರ್ತದೆ… ಈಗ ಹೇಳಿದ್ದೀನಲ್ಲ ಇಷ್ಟು ಸಾಕು. ಹೆಚ್ಚಂದ್ರೆ ಒಂದು ‘ರಾಯ್ತ’ ಹೇಳಿ… ಆಯ್ತ…” ಅಂತ ಗಟಗಟನೆ ಒಂದು ಗ್ಲಾಸು ನೀರು ಕುಡಿದರು.
ಮುಂದೆ ಅಲ್ಲಿರುವಷ್ಟು ದಿನವೂ ಹಗಲಿನಲ್ಲಿ ಅವರದು ಅಷ್ಟೇ. ”ಅನ್ನ, ತಿಳಿ ಸಾರು, ಗಟ್ಟಿ ಮೊಸರು…” ಹೆಚ್ಚಂದ್ರೆ ಒಂದು ‘ರಾಯ್ತ’…
‘ರಾತ್ರಿ’ಯಲ್ಲಿ ಊಟ ಮಾಡಿದರೆ ಮಾಡಿದರು, ಇಲ್ಲದಿದ್ದರೆ ಇಲ್ಲ.
ಅಂದು ಊಟ ಮುಗಿಸಿ ಬಂದರಲ್ಲ… ಕೂಡಲೇ, ”ಹುಡುಗರನ್ನ ಕರೆಸಿ… ಪ್ರಾಕ್ಟೀಸ್ ಮಾಡ್ಬೇಕು…” ಅಂತ ಅವಸರಿಸಿದ ಅವರನ್ನ ನಾವೇ ‘ರೆಸ್ಟ್ ತಗೊಳ್ಳಿ ಸರ್’ ಅಂತ ಒತ್ತಾಯಿಸಿ, ‘ಸವಾಯಿ ಗಂಧರ್ವ ಕಲಾಮಂದಿರ’ಕ್ಕೆ ಬಂದೆವು.
ಕಾರಂತರ ಆಗಮನ ಒಂದು ಕಡೆ ನಮ್ಮಂಥ ಒಂದು ಲೋಕಲ್ ತಂಡದ ಹೆಮ್ಮೆ ಹೆಚ್ಚಲು ಕಾರಣವಾದರೆ, ಇನ್ನೊಂದು ಕಡೆ ಈ ಕೊನೆಯ ಗಳಿಗೆಯಲ್ಲಿ ಹಾಡುಗಳಿಗೆ ಅವರು ಹೊಸದಾಗಿ ಟ್ಯೂನ್ ಮಾಡಿದರೆ ಅದಕ್ಕೆ ನಮ್ಮ ಹುಡುಗರು ಹೊಂದಿಕೊಂಡಾರೆಯೇ ಎಂಬ ಆತಂಕಕ್ಕೂ ಕಾರಣವಾಗಿತ್ತು.
ಜಯತೀರ್ಥ ಜೋಶಿಯನ್ನು ಕೇಳಿದರೆ, ”ಅವರಿಗೆ ಬ್ಯಾಡಾ ಅಂತ ಹ್ಯಾಂಗ್ ಹೇಳೋದ್ರೀ…? ‘ಬರ್ರಿ’ ಅಂತ ವಿನಂತಿ ಮಾಡಿಕೊಂಡ್ರೂ ಒಮ್ಮೊಮ್ಮೆ ಮನಸು ಮಾಡೋ ಪೈಕಿ ಅಲ್ಲಾ ಆ ಅವಧೂತನಂಥಾ ಮನಶಾ. ಅಂಥಾದರಾಗ ಅಲ್ಲಿಂದ ಇಲ್ಲೀ ತನಕಾ ತಾವಾಗೇ ಬಂದಾರ ಆ ಮಹಾರಾಯ್ರು,” ಅಂತೆಲ್ಲ ಏನೇನೋ ವಿಷಯಾಂತರ ಮಾಡಲು ನೋಡಿದರು. ನಂತರ,
”ನೋಡ್ರೀ… ನಾವು ಇಲ್ಲೆ ನಮ್ಮ ರಿಹರ್ಸಲ್ ನಾವು ಮಾಡತಿರತೀವಿ… ಅಲ್ಲೆ ಒಂದು ನಾಲ್ಕೈದು ಹುಡಗರನ ಅವರ ಜೊತೀಗೆ ಪ್ರಾಕ್ಟೀಸಿಗೆ ಬಿಡೂಣು… ಅವರಿಂದ ಏನಾರೆ ‘ಹೊಸಾ’ದು ಸಿಕ್ರ ತೊಗೊಳ್ಳೋಣಂತ…” ಅಂತ ಪರಿಹಾರವನ್ನೂ ಸೂಚಿಸಿದರು.
ಹೌದು, ಕಾರಂತರು ಬಂದದ್ದರಿಂದ ನಮಗೆ ಒಂದಷ್ಟು ‘ಹೊಸಾ’ದು ಸಿಕ್ಕದ್ದಂತೂ ನಿಜ. ತಾವು ಉಳಿದುಕೊಂಡಿದ್ದ ರೂಮಿನಲ್ಲಿಯೇ ನಾಲ್ಕೈದು ಹುಡುಗರ ಜೊತೆ ಪ್ರಾಕ್ಟೀಸಿಗೆ ಕೂತ ಕಾರಂತರು ಒಮ್ಮೆ ಎಲ್ಲ ಹಾಡುಗಳನ್ನೂ ಅವರಿಂದ ಹಾಡಿಸಿದ್ದಾರೆ. ಅವರು ಹಾಡುವಾಗ ಏನೇನೋ ನೋಟ್ಸ್ ಮಾಡಿಕೊಂಡಿದ್ದಾರೆ.
ಅವರೊಂದಿಗೆ ಸಂಗೀತವನ್ನೂ ಬಲ್ಲ ಹಿರಿಯ ಪ್ರಸಾಧನಪಟು ಗಜಾನನ ಮಹಾಲೆ. ನಮ್ಮ ಹುಡುಗರ ಪೈಕಿ ಪ್ರಾಕ್ಟೀಸಿಗೆ ಹೋದವರು (ಈಗ ‘ಮೈಸೂರು ರಂಗಾಯಣ’ದಲ್ಲಿರುವ ಪ್ರಶಾಂತ ಹಿರೇಮಠ ಮುಂತಾದವರು.
ಮುಂದೆ ಎರಡು ಮೂರು ದಿನ ಕಾರಂತರು ಆ ಹಾಡುಗಳಿಗೆ ಅಲ್ಲಲ್ಲಿ ಕುಸುರಿ ಕೆಲಸ ಮಾಡುತ್ತಲೇ ಸಾಗಿದರು ಕಾರಂತರು. ಆಗ ನಮಗೆ, ಭೋಪಾಲ್ ‘ರಂಗಮಂಡಲ’ದ ನಾಟಕಗಳೊಂದಿಗೆ ಹುಬ್ಬಳ್ಳಿಗೆ ಬಂದಿದ್ದಾಗಲೇ ಕಾರಂತರಿಗೆ ಒಂದಿಷ್ಟು ಟೈಮ್ ಸಿಕ್ಕಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆನ್ನಿಸದೇ ಇರಲಿಲ್ಲ… ಅಂಥ ಕೌಶಲ ಅವರದು.
‘ನಂದಭೂಪತಿ’ ನಾಟಕದ ಆರಂಭದ ಹಾಡೇ ಆರಂಭದ ಹಾಡೇ ಅದಕ್ಕೆ ಉದಾಹರಣೆ :
ಬಾಗ್ಯಾಡೂ ಬಾಳಿಗಿಡಾ ತೂಗ್ಯಾಡೂ ತೆಂಗ I
ಕೂಗ್ಯಾಡೂ ಕೋಗೀಲಿ ಹಾರ್ಯಾಡೂ ಹಂಗ…II
ಯಾಲಕ್ಕಿ ಗೊನಿ ಕಡಿಯೋ ಗಿಳಿ ಗೊರವಂಕ I
ಹಾಲಕ್ಕಿ ನುಡಿತಾವ ಶಕುನಾ ಬೆಳತಂಕ… II
ಒಂಬತ್ತು ಗುಡ್ಡಾ ಎಂಬತ್ತು ಹಳ್ಳಾ I
ತೊಂಬತ್ತು ಜಾತಿ ಮೃಗಾ ನೂರಾರು ಕೊಳ್ಳಾ II
ಇದ್ದರಿರಬೇಕಪ್ಪಾ ಇಂಥಾ ಸುಂದರ ನಾಡ I
ಸುದ್ದ ಸ್ವರಗಿದು ಇಲ್ಲೇ ಬಾಳು ಸುಕದ್ಹಾಡ… II
ಈ ಹಾಡಿಗೆ ನಾನು ಬರೆದದ್ದು ಇವೆರಡೇ ಚರಣಗಳನ್ನು. ಪಲ್ಲವಿ ಇರಲೇ ಇಲ್ಲ ಅದಕ್ಕೆ. ಒಮ್ಮೆಲೇ ಶುರುವಾಗುತ್ತಿತ್ತು ಹಾಡು. ಕಾರಂತರು ಅದಕ್ಕೊಂದು ಪಲ್ಲವಿಯನ್ನು ಕೊಟ್ಟರು. ನಾಲ್ಕೇ ಪದಗಳ ಪಲ್ಲವಿ :
ಇದು ಮಂಗಳಾವತಿ
ದೊರಿ ನಂದಭೂಪತಿ…
ಈ ಪಲ್ಲವಿ ಸೇರಿತಲ್ಲ… ಅಬ್ಬಾ ಅದು ಹಲಸಿನ ಮೇಲೆ ಜೇನನ್ನಿರಿಸಿದ ಹಾಗಾಯಿತು. ಹಾಡಿನ ಸೊಗಸೇ ಇಮ್ಮಡಿಯಾಗಿ ಹೋಯಿತು…
ಅಷ್ಟಕ್ಕೇ ಸುಮ್ಮನಾಗಲಿಲ್ಲ ಕಾರಂತರು. ಅದಕ್ಕೆ ಜತೆಯಾಗಿ ಎಲ್ಲೆಲ್ಲಿ ಚಂಡೆಯ ನಾದ ಸೇರಬೇಕು ಎಂಬುದನ್ನು ಹೇಳುತ್ತಾ ಹೋದರು.
ಇದು ಮಂಗಳಾವತಿ… (ಠಂಗ್ ಠಂಗ್)
ದೊರಿ ನಂದಭೂಪತಿ… (ಠಂಗ್ ಠಂಗ್)
ನಮಗೆ ಚಂಡೆ ಸಿಗಲಿಲ್ಲ. ಬೇರೊಂದು ವಾದ್ಯವನ್ನು ಕಾರಂತರೇ ಸೂಚಿಸಿದರು.
ಕೆಲವೆಡೆ ನಾನು ಹಾಡುಗಳಲ್ಲಿ ಬಳಸಿದ ಉತ್ತರ ಕರ್ನಾಟಕದ ಒಂದಷ್ಟು ಗ್ರಾಮ್ಯ ಪದಗಳು ತಮಗೆ ತಿಳಿಯದಿದ್ದಾಗ ಕಾರಂತರು ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಅರ್ಥ ಕೇಳುತ್ತಿದ್ದರು.
ಯಾಡ್ದೂವರಿ ಯಾಡ್ದೂವರಿ ಮನಿ ಸರಕೋಂತ
ಯಡ್ಡಿನಿಂದ ಗುಡ್ಡಾ ಇಳದು ಕಾಲ ಮುರಕೋಂತ
ಬಂತವಾ ಕುದರಿ ಬಂತವಾ…
-ಎಂಬ ಹಾಡಿನಲ್ಲಿ ‘ಯಾಡ್ದೂವರಿ’ ಮತ್ತು ‘ಯಡ್ಡಿನಿಂದ’ ಎಂಬೆರಡು ಪದಗಳು ಅವರಿಗೆ ಗೊಂದಲವನ್ನುಂಟು ಮಾಡಿದ್ದವು.
”ಸರ್… ‘ಎರಡು’ ಪದ ನಮ್ಮ ಗ್ರಾಮೀಣರ ಆಡುಮಾತಿನಲ್ಲಿ ‘ಎಡ್ದು’ ‘ಯಾಡ್ದು’ ಆಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದನ್ನೇ ‘ಎಯ್ಡು’ ಅಂತ ಉಚ್ಚರಿಸುತ್ತಾರೆ. ‘ವರಿ’ ಅಂದರೆ ‘ವರೆ’ ಅಥವಾ ಅರ್ಧ. ಆದ್ದರಿಂದ ‘ಯಾಡ್ದೂವರಿ’ ಅಂದ್ರೆ ಎರಡೂವರೆ ಅಂತ ಅರ್ಥ. ಮತ್ತು ‘ಯಡ್ಡಿನಿಂದ’ ಎಂಬುದು ಎಡಸೊಕ್ಕಿನಿಂದ, ಮದದಿಂದ ಅನ್ನುವುದನ್ನು ಸೂಚಿಸುತ್ತದೆ,” ಅಂತ ವಿವರಿಸಿದೆ.
ಇಡೀ ಹಾಡನ್ನು ನಾನು ‘ಚದುರಂಗ’ದ ಆಟದ ಸಂಕೇತಗಳನ್ನು ಬಳಸಿಕೊಂಡು ಬರೆದಿದ್ದೆ. ನಂದಭೂಪತಿಯ ಬದುಕೇ ಒಂದು ಚದುರಂಗದ ಆಟ.
ಇನ್ನೊಂದು ಹಾಡಿನಲ್ಲಿಯೂ ಕಾರಂತರಿಗೆ ಅರ್ಥವಾಗದ ಎರಡು ಮೂರು ಪದಗಳಿದ್ದವು.
ಈಟೈತಿ ಆಟೈತಿ ಅನಬ್ಯಾಡಾ , ನೀ ಏಟೈತಿ ಅದನೂ ಹೇಳಬ್ಯಾಡಾ…
ಇದ್ದಟೂ ನೀನ ತಿನಬ್ಯಾಡಾ , ಕಾಟಾಚಾರಕ್ಕ ನೀ ಕೊಳ್ಳಬ್ಯಾಡಾ…
ಮಾತ ಬಾಳ ನೀ ಆಡಬ್ಯಾಡಾ , ಹೂತ ಹೆಣಾನ ನೋಡಬ್ಯಾಡಾ…
ಓಡೋ ಕುದರೀನ ಕಾಡಬ್ಯಾಡಾ ನೀ ಹಾಡೂ ಹೆಣ್ಣಿನ ಹಿಂದ ಓಡಬ್ಯಾಡಾ…
ಕೊಡಬೇಕನಿಸೀದ್ರ ಕೊಡು , ಕೊಟ್ಟು ಕೆಟ್ಟೆಂತನಬ್ಯಾಡ ನೋಡು…
ಗ್ವಾದ್ಲಿ ಬೇಕು ಗ್ವಾತಾ ಬ್ಯಾಡಂದ್ರ ಹ್ಯಾಂಗೋ ಅಣ್ಣಾ…?
ಮಾದ್ಲಿ ತಿನ್ನಾವಗ ಗೊತ್ತಿರಬೇಕೋ ಗೋದಿ ಬಣ್ಣಾ…!
ಈ ಹಾಡನ್ನು ಕಾರಂತರು ಎರಡು ಮೂರು ಸಲ ಓದಿಕೊಂಡರು. ನಮ್ಮ ಹುಡುಗರೋ ಅದನ್ನು ತುಂಬ ಸಲೀಸಾಗಿಯೇ ಹಾಡುತ್ತಿದ್ದರು. ಆದರೆ, ಕಾರಂತರಿಗೆ ಕೊನೆಯ ಎರಡು ಸಾಲುಗಳ ಕುರಿತು ಏನೋ ಗೊಂದಲವಿತ್ತು.
”ವಾಜಪೇಯಿ… ಇಲ್ಲಿ ‘ಗ್ವಾದ್ಲಿ’ ಅಂತಿದೆಯಲ್ಲಾ… ಹಾಗಂದ್ರೇನು? ‘ಗ್ವಾತಾ’ದ ಅರ್ಥ ಏನು? ‘ಮಾದ್ಲಿ’ ಅಂದ್ರೆ ಬಹುಶಃ ಗೊದಿಯಿಂದ ಮಾಡೋ ಪದಾರ್ಥ ಇರಬೇಕು… ಏನು ‘ಮಾದ್ಲಿ’ ಅಂದ್ರೆ?”
‘ಗ್ವಾದ್ಲಿ’ ಅಂದರೆ ಗೋದಲೆ. ಅಂದರೆ ದನದ ಮನೆಯಲ್ಲಿ ಅವುಗಳಿಗೆ ತಿನ್ನಲು ಮೇವು ಹುಲ್ಲು ಇತ್ಯಾದಿಗಳನ್ನು ಹಾಕುವುದಕ್ಕೆ ಮಾಡಿದ ಕಟ್ಟಿಗೆಯ ಬಾನಿಯ ಥರದ್ದು. ಅದು ತುಂಬಾ ಬೆಚ್ಚಗೆ ಇರುತ್ತದೆ. ನಾವು ಚಿಕ್ಕವರಿದ್ದಾಗ ಮನೆಯಲ್ಲಿ ದೊಡ್ಡವರು ಬೈದರೆ ಹೋಗಿ ಗೋದಲೆಯ ಹುಲ್ಲಿನಲ್ಲಿ ಮಲಗಿಬಿಡುತ್ತಿದ್ದೆವು. ಒಳ್ಳೆ ಸಂಪು ನಿದ್ರೆ ಬಂದುಬಿಡೋದು. ಅಲ್ಲಿಯ ಒಂದು ತೊಂದರೆ ಎಂದರೆ ಗಂಜಳದ ನಾತದ್ದು. ಗಂಜಳವನ್ನೇ ‘ಗ್ವಾತ’ ಎನ್ನುತ್ತಾರೆ ನಮ್ಮ ಕಡೆಯ ರೈತಾಪಿ ಜನ. ನಾನಿಲ್ಲಿ ‘ಸುಖ ಬೇಕು ಅಂದರೆ ಸ್ವಲ್ಪ ಮಟ್ಟಿಗೆ ದುಃಖವನ್ನು ಸಹಿಸಬೇಕು; ಅದು ಬೇಡ, ಬರೀ ಸುಖ ಇರಲಿ ಅಂದರೆ ಹೇಗೆ?’ ಎಂಬ ಅರ್ಥದಲ್ಲಿ ಈ ಹಾಡನ್ನು ಬರೆದೆ, ಅಂತೆಲ್ಲಾ ಕಾರಂತರಿಗೆ ವಿವರಿಸಿದೆ. ಹಾಗೆಯೇ ‘ಮಾದ್ಲಿ’ಯ ವಿವರಣೆಯನ್ನೂ ಕೊಟ್ಟೆ.
”ಒಂಥರಾ ಇದು ಆ ಬುಂದೇಲಿ ಭಾಷೆ ಇದ್ದಂಗಿದೆ… ದೇಸಿ… ನೀವು ಈ ಶೈಲಿಯನ್ನೇ ಮುಂದುವರಿಸಿ. ಬಿಡಬೇಡಿ…” ಅಂತ ಕಾರಂತರು ಮೆಚ್ಚಿಕೊಂಡಾಗ ನಾನು ಸ್ವಲ್ಪ ಉಬ್ಬಿದ್ದು ನಿಜ.

-೦-೦-೦-೦-೦-

1985ರ ಮೇ 12ನೇ ತಾರೀಖು…ಬೆಳಗಿನ 10:00ಕ್ಕೆ ನಮ್ಮ ‘ಶಿಬಿರ ಸಮಾರೋಪ’ ಸಮಾರಂಭ. ಅಂದೇ ಸಂಜೆ ‘ನಂದಭೂಪತಿ’ ನಾಟಕದ ಎರಡು ಪ್ರದರ್ಶನಗಳು. ಸಮಾರಂಭದ ವೇಳೆಗೆ ಸರಿಯಾಗಿ ಬಂದಿದ್ದಾರೆ ಮುಖ್ಯ ಅತಿಥಿ ಸಚಿವ ಎಂ.ಪಿ. ಪ್ರಕಾಶ್.
ಅವರು ಬರುವುದಕ್ಕೂ ಮುಂಚೆ ನಡೆಯಿತು ಒಂದು ಸಣ್ಣ ಪ್ರಸಂಗ. ಕಾರಂತರನ್ನು ಸಭೆಗೆ ಕರೆಯಲೆಂದು ಅವರ ರೂಮಿಗೆ ಸಂಘಟಕರಲ್ಲೊಬ್ಬರಾದ ಗೆಳೆಯ ರಾಘವೇಂದ್ರ ಹುನಗುಂದ ಹೋಗಿದ್ದಾರೆ. ಕಾರಂತರು ಇನ್ನೂ ಹಾಸಿಗೆಯಲ್ಲೇ ಮಲಗಿದ್ದಾರೆ. ಹುನಗುಂದರಿಗೆ ಗಾಬರಿ. ಅವರ ಸ್ವಾಸ್ಥ್ಯದ ಬಗ್ಗೆ ಚಿಂತೆಯಾಗಿದೆ. ಕೇಳಿದ್ದಾರೆ. ಕಾರಂತರು ”ಏನೂ ಇಲ್ಲ… ನಿನ್ನೆ ರಾತ್ರಿ ರಿಹರ್ಸಲ್ ಮುಗಿದಾಗ ಲೇಟಾಯ್ತಲ್ಲ. ಅದಕ್ಕೇ ಎದ್ದದ್ದು ಲೇಟು… ನೀವು ಹೊರಡಿ. ನಾನು ರೆಡಿಯಾಗಿ ಬಂದ್ಬಿಡ್ತೇನೆ ರಿಹರ್ಸಲ್ಲಿಗೆ…” ಅಂದಿದ್ದಾರೆ.
”ಅಲ್ಲಾ ಸರ್… ರಿಹರ್ಸಲ್ ಅಲ್ಲಾ… ಇವತ್ತು ಶಿಬಿರದ ಸಮಾರೋಪ. ಫಂಕ್ಷನ್ ಇನ್ನೇನು ಶುರು ಆಗ್ತದೆ… ಅದಕ್ಕೇ ಕರೆಯೋದಕ್ಕೆ ಬಂದೆ…”
”ಅಲ್ಲಿಗೆ ನಾನ್ಯಾಕ್ ಬರಬೇಕು? ನನಗೇನ್ ಕೆಲಸಾ ಅಲ್ಲಿ…? ಫಂಕ್ಷನ್-ಗಿಂಕ್ಷನ್ ಅಂತಾದ್ರೆ ನಾನು ಬರೋದಿಲ್ಲ…”
”ಅಲ್ಲಿಗೆ ಮಿನಿಸ್ಟರು ಪ್ರಕಾಶ್ ಬರ್ತಿದ್ದಾರಲ್ಲಾ ಸರ್… ಚೀಫ್ ಗೆಷ್ಟಾಗಿ.”
”ಅದಕ್ಕೆ? ನಾನು ಬರಬೇಕಾ…? ಮಿನಿಸ್ಟ್ರು ಬಂದ್ರೆ ನಾನ್ಯಾಕ್ ಬರಬೇಕು? ಬರಲ್ಲಾ… ಫಂಕ್ಷನ್ ಮುಗದ ಮೇಲೆ ರಿಹರ್ಸಲ್ಲಿಗೆ ಬರ್ತೀನಿ…” ಅಂದಿದ್ದಾರೆ.
ನಾನು ಇಲ್ಲಿ ಸಮಾರಂಭದ ಜಾಗಕ್ಕೆ ಬಂದ ಸಚಿವರನ್ನು ಎದುರುಗೊಳ್ಳುತ್ತಿದ್ದಾಗ, ಸಭೆಯಲ್ಲಿ ಮತ್ತೆ ಯಾರು ಯಾರು ಇರುತ್ತಾರೆ ಅಂತ ವಿಚಾರಿಸಿದ್ದಾರೆ ಪ್ರಕಾಶ್.
”ಸರ್… ಬಿ.ವಿ. ಕಾರಂತರು, ಡಾ. ಎಸ್. ಎಸ್. ಗೋರೆ, ಜಯತೀರ್ಥ ಜೋಶಿ ಇತ್ಯಾದಿ…”
”ಆಂ…! ಕಾರಂತರು ಬಂದಿದ್ದಾರೇನ್ರೀ…! ಅವರನ್ನ ಹ್ಯಾಗ್ರಿ ಹಿಡಕೊಂಡು ಬಂದ್ರೀ…!?”
ನಾನು ಚುಟುಕಾಗಿ ವಿವರಣೆ ನೀಡುತ್ತ ಸಭಾ ಮಂದಿರಕ್ಕೆ ಕರೆದೊಯ್ಯುವ ಹೊತ್ತಿಗೆ ಹುನಗುಂದ ಬಂದು ಕಿವಿಯಲ್ಲಿ ‘ಕಾರಂತ ಪ್ರಸಂಗ’ವನ್ನು ಉಸುರಿದರು.
ಸಭೆ ಶುರುವಾಯಿತು. ಸಚಿವ ಪ್ರಕಾಶ್ ಎರಡು ಮೂರು ಸಲ ”ಕಾರಂತರು ಎಲ್ಲಿ?” ಅಂತ ಕೇಳಿದ್ದೂ ಆಯಿತು. ನಾವು, ”ಇನ್ನೇನು ಬಂದು ಬಿಡಬಹುದು…” ಅಂತ ಸಭೆ ಶುರು ಮಾಡಿದೆವು. ವೇದಿಕೆಯ ಮೇಲೆ ಡಾ. ಗೋರೆ, ಜಯತೀರ್ಥ ಜೋಶಿ, ಮತ್ತೊಬ್ಬ ಸ್ಥಳೀಯ ಗಣ್ಯರು.
ಸ್ವಾಗತ, ಮಾಲಾರ್ಪಣೆಯ ನಂತರ ಶಿಬಿರದ ಕುರಿತು ಜಯತೀರ್ಥ ಜೋಶಿ ಮಾತಾಡುತ್ತಿದ್ದ ಹೊತ್ತಿನಲ್ಲೇ ಸಭಾಂಗಣದ ಪ್ರವೇಶ ದ್ವಾರದಲ್ಲಿ ಪ್ರತ್ಯಕ್ಷರಾದರು ಕಾರಂತರು. ಕೂಡಲೇ ಸ್ವತಃ ಸಚಿವ ಪ್ರಕಾಶ್ ಎದ್ದು ಹೋಗಿ ಕಾರಂತರ ಕೈ ಹಿಡಿದು ವೇದಿಕೆಯ ತನಕ ಅವರನ್ನು ಕರೆತಂದು ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡರು.
ಆವತ್ತು ರಂಗಭೂಮಿಯ ಕುರಿತು ಸಚಿವ ಪ್ರಕಾಶ್ ಅವರ ಭಾಷಣ ಒಂದು ತೂಕದ್ದಾದರೆ, ‘ನಾಟಕಗಳಲ್ಲಿ ಪ್ರಾದೇಶಿಕ ಭಾಷೆ’ಯ ಕುರಿತು ಕಾರಂತರು ಮಾಡಿದ ಭಾಷಣ ಇನ್ನೊಂದು ತೂಕದ್ದು !
(ಮುಂದಿನ ವಾರ ಇನ್ನಷ್ಟು ಕಾರಂತ)

‍ಲೇಖಕರು avadhi

April 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

25 ಪ್ರತಿಕ್ರಿಯೆಗಳು

  1. Ahalya Ballal

    ~~ಬಂದಾನೋ ಬಂದಾ ಸವಾರ, ಯಾವ ಊರಿನ ಸರದಾರ~~

    ಪ್ರತಿಕ್ರಿಯೆ
  2. umesh desai

    ವಾಹ್ ಗುರುಗಳ ಎಂಥಾ ದಿನಮಾನ ನೀವು ನೋಡೀರಿ..ಹೊಟ್ಟಿಕಿಚ್ಚಾಗ್ತದರಿ..
    ಆ ಫೋಟೋದಾಗ ನಿಮ್ಮ ಎಡಕ್ಕ ಕೂತಾವ್ರು ಡಾ.ಗೋರೆ ಹೌದಲ್ಲ?
    ರಂಗಜಂಗಮನ ಸಂಗದ ಸವಿ ಇನ್ನೂ ಉಣಸ್ರಿ..

    ಪ್ರತಿಕ್ರಿಯೆ
  3. Ahalya Ballal

    ಮಾದ್ಲಿ ಅಂದ್ರೇನು ತಿಳೀಲಿಲ್ರೀ ಸರ….

    ಪ್ರತಿಕ್ರಿಯೆ
  4. Badarinath Palavalli

    ಬಹುಶಃ ಆಗ ದೂರದರ್ಶನದ ಸ್ಟುಡಿಯೋ ವಿಶ್ವೇಶ್ವರಯ್ಯ ಪ್ಲಾಟಿನಂ ಕಟ್ಟಡದ ತುತ್ತ ತುದಿಯಲ್ಲಿ ಇತ್ತು ಅಲ್ಲವೇ ಸಾರ್. ತುಂಬಾ ನೆನಪುಗಳನ್ನು ಕೆದಕುವ ಬರಹ.

    ಪ್ರತಿಕ್ರಿಯೆ
  5. pravara

    ಸರ್ ಇನ್ನು ಅದೆಷ್ಟು ಅನುಭವದ ಬುತ್ತಿ ಇದೆ….. ಮಾದ್ಲಿ ಅಂದ್ರೆ ಸ್ವೀಟು ಅಲ್ವೆ…

    ಪ್ರತಿಕ್ರಿಯೆ
  6. Gopaal Wajapeyi

    Pravara… ‘ಮಾದ್ಲಿ’ ಇದು ಉತ್ತರ ಕರ್ನಾಟಕದ ವಿಶೇಷ ತಿಂಡಿ. ಅದರಲ್ಲೂ ಲಿಂಗಾಯತರು ಇದನ್ನು ಮಾಡುವುದರಲ್ಲಿ ನಿಷ್ಣಾತರು. ಮತ್ತು, ಅವರು ತಯಾರಿಸಿದ ಮಾದ್ಲಿ ವಿಶೇಷ ರುಚಿ ಮತ್ತು ಕಂಪುಳ್ಳದ್ದು. ಚಪಾತಿ ಮಾಡಿ, ಅದನ್ನು ಎರಡು ದಿನ ಚನ್ನಾಗಿ ಒಣಗಿಸಿ, ಅದಕ್ಕೆ ಒಂದಿಷ್ಟು ಬೆಲ್ಲ ಸೇರಿಸಿ, ತರಿತರಿಯಾಗಿ ಬೀಸಿ ನಂತರ ಪ್ರಮಾಣಕ್ಕೆ ತಕ್ಕಷ್ಟು ಯಾಲಕ್ಕಿ ಪುಡಿ, ಒಣ ಶುಂಠಿಯ ಪುಡಿಯನ್ನು ಬೆರೆಸುತ್ತಾರೆ. ಇದಕ್ಕೆ ಬಿಸಿ ಬಿಸಿ ಹಾಲು ಹಾಕಿ ಕಲೆಸಿಕೊಂಡು ತಿನ್ನುತ್ತಾರೆ. ವಾರಗಟ್ಟಲೆ ಕೆಡದೆ ಉಳಿಯಬಲ್ಲ ಈ ‘ಮಾದ್ಲಿ’ ಅವರ ಹಬ್ಬಗಳಲ್ಲಿಯೂ ಮದುವೆಗಳಲ್ಲಿಯೂ ಇರಲೇಬೇಕು.
    ಇನ್ನು ಉತ್ತರ ಕರ್ನಾಟಕದ ಬ್ರಾಹ್ಮಣರು ಕೂಡ ಇದೇ ರೀತಿಯ ಒಂದು ಸಿಹಿ ತಿಂಡಿಯನ್ನು ಮಾಡುತ್ತಾರೆ. ಆದರೆ ಇವರ ತಯಾರಿಕಾ ವಿಧಾನ ಭಿನ್ನವಾದದ್ದು. ಹಿಟ್ಟಿಗೆ ನೀರು ಬಿದ್ದರೆ ಮುಸುರೆ ಎಂದು ಭಾವಿಸುವ ಮಡಿವಂತರಾದ್ದರಿಂದ ಬ್ರಾಹ್ಮಣರು ಚಪಾತಿಯನ್ನು ಬೀಸಿ ಪುಡಿ ಮಾಡುವ ಗೋಜಿಗೆ ಹೋಗುವುದಿಲ್ಲ. ಸಾಕಷ್ಟು ತಂಗಳು ಚಪಾತಿಗಳು ಉಳಿದಿದ್ದರೆ, ತಂಗಳನ್ನು ಮಕ್ಕಳು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕೆ, ಚಪಾತಿಗಳನ್ನು ಮುರಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ, ಅದಕ್ಕೆ ತುಪ್ಪ, ಹಾಲು, ಬೆಲ್ಲ, ಯಾಲಕ್ಕಿ ಪುಡಿ, ಗಸಗಸೆ ಇತಾದಿ ಸೇರಿಸಿ ಕಲೆಸಿ ಉಂಡೆಯಂತೆ ಕಟ್ಟುತ್ತಾರೆ. ಇದನ್ನವರು ‘ಮಾಲೇದಿ’ ಎಂದು ಕರೆಯುತ್ತಾರೆ. ಮಕ್ಕಳು ಈ ‘ಮಾಲೇದಿ ಉಂಡೆ’ಯನ್ನು ಬಾಯಿ ಚಪ್ಪರಿಸುತ್ತ ಭಕ್ಕರಿಸುತ್ತಾರೆ.
    ಬಾಯಲ್ಲಿ ನೀರು ಬಂತೇನು?

    ಪ್ರತಿಕ್ರಿಯೆ
    • Aravind

      You forgot the dry fruits in this Maadeli or Maadli.
      Ghee is another input other than milk when eating this sweet.
      A popular item during Gullavvana Picnic!!

      ಪ್ರತಿಕ್ರಿಯೆ
  7. umasekhar

    faded karanths picture after reading yoyr article he came up with bright and glitering face.

    ಪ್ರತಿಕ್ರಿಯೆ
  8. shankar pujari

    ಸರ್, ನಮಗ ಬರೀ ಮಾದ್ಲಿ ಗಂಗಾಳ ತೋರಿಸಿರಿ, ಇನ್ನಷ್ಟು ನೀಡಿರಲ್ಲಾ..

    ಪ್ರತಿಕ್ರಿಯೆ
  9. ಗುರುಪ್ರಸಾದ ಕುರ್ತಕೋಟಿ

    ನಿಮ್ಮ ಲೇಖನದ ಮೊದಲನೆ ಸಾಲು ಓದಲು ಶುರು ಮಾಡಿದರೆ ಪೂರ್ತಿ ಓದಿ ಮುಗಿಸುವ ತನಕ ಸಮಾಧಾನ ಆಗುವುದಿಲ್ಲ! ನಿಮ್ಮ ಅನುಭವಗಳ ಯಥಾವತ್ತಾದ ಚಿತ್ರಣವನ್ನ ನಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ಧನ್ಯವಾದಗಳು. ಕಾರಂತರ ಬಗ್ಗೆ ಇನ್ನಷ್ಟು ಅರಿಯಲು ಕಾತುರನಾಗಿ ಕಾಯುತ್ತಿದ್ದೇನೆ..

    ಪ್ರತಿಕ್ರಿಯೆ
  10. ramesh kulkarni

    ಸರ್ ನಿಮ್ಮ ಬರವಣಿಗೆ ಹಾಗೂ ನೆನಪಿನ ಬುತ್ತಿ ಅಗಾಧ…ನಿಮ್ಮ ಸವಿಯಾದ ಬುತ್ತಿಯೂಟ ಎಷ್ಟು ಸವಿದರೂ,ಮತ್ತೆ ಮತ್ತೆ ಸವಿಯಬೇಕೆಂಬ ಓದಿನ ಹಸಿವನ್ನು ಇಮ್ಮಡಿಗೊಳಿಸುತ್ತದೆ…ಧನ್ಯವಾದಗಳು ತಮ್ಮ ನೆನಪಿನ ಬುತ್ತಿಗೆ…:)))))

    ಪ್ರತಿಕ್ರಿಯೆ
  11. ಹರೀಶ್‌ಬಸವರಾಜ್‌, ಹುಳಿಯಾರು

    ಕಾರಂತರೆಂದರೆ ರಂಗಭೂಮಿಯ ವಿಶ್ವವಿದ್ಯಾಲಯವಿದ್ದಂತೆ ಅವರ ಬಗ್ಗೆ ಕಿರಿಯನಾದ ನನಗೆ ಹೆಚ್ಚು ತಿಳಿದಿರಲಿಲ್ಲ ವಾಜಪೇಯಿ ಅವರ ಲೇಖನ ತುಂಬಾ ಅದ್ಭುತವಾಗಿದೆ.ಮುಂದಿನ ವಾರದ ಬರಹಕ್ಕೆ ಕಾಯುತ್ತಿದ್ದೇನೆ
    ಹ್ಯಾಟ್ಸ್‌ ಆಪ್‌ ಟು ಯು ವಾಜಪೇಯಿ ಸರ್.

    ಪ್ರತಿಕ್ರಿಯೆ
  12. sugunamahesh

    ನೆನಪಿನ ಬುತ್ತಿಯಲ್ಲಿ ಅದಿನ್ನೆಷ್ಟು ವಿಷಯಗಳು ಅಡಗಿವೆಯೋ… ಕಾಕಾ ಮತ್ತಷ್ಟು ಸಂಚಿಕೆಗಳು ಹೀಗೆ ಬರಲಿ. ಮಾದ್ಲಿ ಇದನ್ನು ನಾವು ಮಾಲ್ದಿ ಪುಡಿ ಎಂದು ಕರೆಯುತ್ತೇವೆ… ಈ ಸಿಹಿತಿಂಡಿ ಎಲ್ಲಾ ಕಡೆ ಮಾಡುತ್ತಾರೆ ಅದರ ರುಚಿ ತುಂಬಾ ಚೆನ್ನಾಗಿರುತ್ತದೆ.

    ಪ್ರತಿಕ್ರಿಯೆ
  13. Sushma Moodbidre

    ನಿಮ್ಮ ಅನುಭವಗಳ ಬುತ್ತಿಯನ್ನು ನಿಮ್ಮ ಕೈಯಾರೆ ಸವಿಯುವುದು ಒಂದು ರೀತಿಯ ಸಂತೋಷದ ಅನುಭವ ನಮಗೆ ಸರ್.. 🙂

    ಪ್ರತಿಕ್ರಿಯೆ
  14. Jayalaxmi Patil

    ಏನ್ ಪುಣ್ಯವಂತರ್ರೀ ಕಾಕಾ, ನೀವೆಲ್ಲಾ!!

    ಪ್ರತಿಕ್ರಿಯೆ
  15. ಉದಯ್ ಇಟಗಿ

    ಮಾದ್ಲಿ ನಾನೂ ಉಂಡೇನಿ. ಬಾಳ ಚಲೋ ಇರ್ತದ! ಅಂದಹಾಗೆ ಕಾರಂತರೊಟ್ಟಿಗಿನ ನಿಮ್ಮ ಈ ನೆನಪುಗಳು ನಮ್ಮನ್ನೂ ಆ ದಿನಗಳಿಗೆ ಕರೆದೊಯ್ಯುತ್ತವೆ. ಕಾರಂತರ ಬಗೆಗಿನ ಇನ್ನಷ್ಟು ನೆನಪುಗಳನ್ನು ಓದಲು ಮುಂದಿನವಾರಕ್ಕಾಗಿ ಕಾಯುತ್ತಿದ್ದೇನೆ.

    ಪ್ರತಿಕ್ರಿಯೆ
  16. shrikant prabhu

    ಮಾದ್ಲಿಯ ರುಚಿಯನ್ನು ನೆನಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.ಮಾದ್ಲಿಯ ನೆನಪಿನ ಹಾಗೆ ಕಾರಂತರ ನೆನಪು ಕೂಡಾ ಮನಸ್ಸಿನಲ್ಲಿ ಉಳಿದಿರುತ್ತದೆ, ಆಗಾಗ್ಗೆ ಬರುತ್ತಲಿರುತ್ತದೆ.

    ಪ್ರತಿಕ್ರಿಯೆ
  17. Dr.Vasanthkumar Perla

    ನಿಮ್ಮ ಆಪ್ತ ಬರೆವಣಿಗೆ ಓದಿ ತುಂಬಾನೇ ಸಂತೋಷ ಆಯ್ತು ವಾಜಪೇಯಿಯವರೇ.. ನನಗೂ ಕಾರಂತರೊಡನೆಯ ಒಡನಾಟದ ನೆನಪು ಮರುಕಳಿಸಿತು. ಆಗ ನಾನು (೧೯೮೨-೧೯೮೮) ಬಸವನಗುಡಿಯಲ್ಲಿ (ಎನ್.ಆರ್. ಕಾಲನಿಗೆ ತೀರ ಸಮೀಪ)ವಾಸಿಸುತ್ತಿದ್ದೆ. ಅವರ ಬಾಡಿಗೆ ಮನೆ ಆಗ ಸೌತ್ ಎಂಡ್ ಸರ್ಕಲ್ ಬಳಿ ಇತ್ತು. ನಾನುಕೆಲಸ ಮಾಡುತ್ತಿದ್ದ ಪತ್ರಿಕೆಗಾಗಿ ಒಂದು ಸಂದರ್ಶನಕ್ಕೆ ಹೋಗಿದ್ದೆ; ಪ್ರೇಮಾ ಕಾರಂತರೂ ಇದ್ದರು. ಆಗ ಕಾರಂತರೊಂದಿಗೆ ಉಂಟಾದ ಸ್ನೇಹ(ಒಂದೇ ಊರವರಾದ್ದರಿಂದಲೂ)ಹಾಗೇ ಮುಂದುವರಿಯಿತು..ಪತ್ರಿಕೆಯಲ್ಲಿ ಸುಮಾರು ಮೂವತ್ತು ನಲವತ್ತರಷ್ಟು ನಾಟಕಗಳ ವಿಮರ್ಶೆ ಬರೆಯಲೂ ಪ್ರೇರಣೆ ಆಯಿತು. ಅವರ ‘ಸತ್ತವರ ನೆರಳು’ ನಾಟಕದಿಂದ ಅದೆಷ್ಟು ಪ್ರಭಾವಗೊಂಡೆನೆಂದರೆ ಆ ನಾಟಕವನ್ನು ಮೂರು ಬಾರಿ ನೋಡಿದೆ! ಮುಂದೆ ನಾನು ನಾಟಕದ ಕುರಿತು ಪಿಯೆಚ್.ಡಿ. ಅಧ್ಯಯನ ಮಾಡುವಾಗಲೂ ನನಗೆ ಮಾರ್ಗದರ್ಶನ-ಮಾಹಿತಿ ನೀಡಿದ್ದಲ್ಲದೆ, ಹಲವು ಆಕರಗಳನ್ನೂ ಒದಗಿಸಿದರು.. ನಿಮ್ಮ ಬರೆವಣಿಗೆ ಓದಿ ನೆನಪುಗಳು ನುಗ್ಗಿ ಬಂದವು.. ನಾಟಕದ ವಿಚಾರ ಬಂದರೆ ಅವರೊಬ್ಬ ಮೇರು ಕಲಾವಿದರೇ ಸರಿ!

    ಪ್ರತಿಕ್ರಿಯೆ
  18. Ishwara Bhat K

    ತುಂಬಾ ಚೆನ್ನಾಗಿದೆ ನೆನಪಿನ ಸರಣಿ. ಕಾರಂತರ ಬಗೆಗಿನ ನಿಮ್ಮ ನೆನಪುಗಳು ಮೊಗೆದಷ್ಟೂ ಉತ್ಸಾಹದಾಯಕವಾಗಿದೆ. ಘಟನೆಗಳ ಸಂಗ್ರಹ, ನೆನಪಿನ ಸರಣಿ. ಮುಂದೆ?

    ಪ್ರತಿಕ್ರಿಯೆ
  19. Mohan V Kollegal

    ನಿಮ್ಮನುಭವಗಳನ್ನು ಓದುವುದೇ ಚಂದ ಗುರುಗಳೇ… ಕಾರಂತರೊಡನಾಟವನ್ನು ಓದುತ್ತಿದ್ದರೆ, ನೀವುಗಳೆಲ್ಲಾ ಕಡಿಮೆ ವಯಸ್ಸಿನಲ್ಲಿ ಎಂಥಹ ಅದೃಷ್ಟಕಾಲದಲ್ಲಿದ್ದೀರಿ ಎನಿಸುತ್ತದೆ. ಖುಷಿಪಟ್ಟೆ… 🙂

    ಪ್ರತಿಕ್ರಿಯೆ
  20. Gopaal Wajapeyi

    ಈ ಲೇಖನದಲ್ಲಿ ದ್ದೊರದರ್ಶನ ಸ್ಟುಡಿಯೋ ಪ್ರಸಂಗದಲ್ಲಿ ಎರಡನೆಯ ಪ್ಯಾರಾಗ್ರಾಫಿನಲ್ಲಿ ‘…ಕಾರಂತರನ್ನು ಬೇಡಿಕೆಗೆ ಕರೆದೊಯ್ದ…’ ಎಂದಿದೆ.
    ವಾಸ್ತವವಾಗಿ ಅದು ‘…ಕಾರಂತರನ್ನು ವೇದಿಕೆಗೆ ಕರೆದೊಯ್ದ…’ ಎಂದಾಗಬೇಕಿತ್ತು.
    ಟೈಪ್ ಮಾಡುವಾಗ ಆದ ಈ ಪ್ರಮಾದವನ್ನು ಮನ್ನಿಸಿ, ದಯವಿಟ್ಟು ತಿದ್ದಿಕೊಂಡು ಓದಿಕೊಳ್ಳಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: