ಟ್ರಯಲ್ ರೂಮಿನಲ್ಲಿ ಡಿಜಿಟಲ್ ಕಾವ್ಯಗಳು
ಅಮರೇಶ ಗಿಣಿವಾರ
ಪು: ಟ್ರಯಲ್ ರೂಮಿನ ಅಪ್ಸರೆಯರು
ಪ್ರ: ಪಲ್ಲವ ಪ್ರಕಾಶನ
ಲೇ: ಭುವನಾ ಹಿರೇಮಠ
ಭುವನಾ ಹಿರೇಮಠರ “ಟ್ರಯಲ್ ರೂಮಿನ ಅಪ್ಸರೆಯರು” ಕಾಲದ ಹೊಸ ಶಬ್ದದುಡುಗೆಯುಟ್ಟ ಸಂಕಲನ, ಡಿಜಿಟಲ್ ರೂಪದ ಕೃತಿಯಾಗಿದ್ದು, ನವನಾಗರೀಕತೆಯ ಶಬ್ದಗಳಿಂದ ನಿರ್ಮಿತವಾದ ಕೃತಿ. ಶಿವರುದ್ರಪ್ಪನವರು “ಹಳೆಯ ಶಬ್ದಗಳು ಮುಪ್ಪಿನಿಂದ ಮೃತವಾಗುತ್ತವೆ” ಎಂದು ಹೇಳಿದ್ದಕ್ಕೆ ಭುವನಾ ಹಿರೇಮಠರು ನ್ಯಾಯ ಒದಗಿಸಿದ್ದಾರೆ. ಕವನಗಳನ್ನು ಸೀಳಿ ಸೀಳಿ ಒದಬೇಕೆಂಬ ಹಂಬಲ ಜಾಸ್ತಿಯಾಗುತ್ತಾ ಹೋಗುತ್ತದೆ..
ವಿಶಿಷ್ಟ ಪ್ರೇಮ, ಹೆಣ್ಣಿನಲ್ಲಿ ನಿಜವಾದ ಹೆಣ್ಣನ್ನ ನೋಡುವ ರೀತಿ, ಕಳವಳ ಬಹಳ ತೀವ್ರವಾಗುತ್ತಾ ಹೋಗುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಎಲ್ಲಾ ದಿನಗಳು ಗಂಡಿನ ದಿನಗಳೇ ಆಗಿರುವುದರಿಂದ ಒಂದು ದಿನವನ್ನು ತನ್ನದಾಗಲಿ ಎಂದು ಕೇಳುವ ಆರ್ತತೆ, ನಿಗೂಢವಾಗಿದ್ದು, ಈಡೇರಿಸಿಕೊಳ್ಳುವ ಉದ್ದೇಶ ಹಿಡಿಪ್ರೇಮವಾಗಿದ್ದು, ಪ್ರೇಮಪರವಶತೆ ಇಡೀ ಒಂದು ದಿನ ಬೇಗ ಹಾಳು ಮಾಡುತ್ತದೆ.
ಇಡೀ ಯುಗದಲ್ಲಿ
ಒಂದೇ ಒಂದು ದಿನ
ನನ್ನ ಒಡೆತನದ್ದಾಗಲಿ
ಅದಕ್ಕೆ ಅವನು ನಾನು/ಹೇಳಿದಂತೆ ಆಗಲೇಬೇಕು,/ಮೇಣವಾಗಬೇಕು/ಬೆಚ್ಚಗೆ ಸ್ಪರ್ಶಿಸಿ ಕರಗಿಸಿ ಇಳಿಸಿಕೊಳ್ಳುತ್ತೇನೆ.
‘ಕುಪ್ಪಸಗಳ ಅಂತರಂಗ’ಎಂಬ ಕವನದಲ್ಲಿ ದೇಶದ ವಾಸ್ತವತೆಯನ್ನು, ದಾರಿದ್ರ್ಯದ ಬದುಕನ್ನು ಯಥಾವತ್ತಾಗಿ ಚಿತ್ರಿಸದೇ ಅವುಗಳಿಗೆ ಪರಂಪರಾಗತ ಬಣ್ಣವನ್ನು ಕೊಟ್ಟು ಚೆಂದವಾಗಿ ತೋರಿಸುವ, ಬಣ್ಣಿಸುವ ಸಮಾಜವನ್ನು ‘ಕುಪ್ಪಸದ ಅಂತರಂಗ’ದಲ್ಲಿ ಹಿಡಿದಿಟ್ಟಿದ್ದಾರೆ. ಹಾಗೂ ಕವನದಲ್ಲಿ ಆಧ್ಯಾತ್ಮ ಕೂಡ ಮಿಂಚಿನಂತೆ ಮಿಣುಕಿ ಹೋಗಿದೆ..
ನಮ್ಮ ಆತ್ಮಗಳಿಗೆ
ಮೊಲೆಗಳಿರುವುದೇಯಿಲ್ಲ
ಆದರೂ ಅದುಮುತ್ತೀರಿ,‘ನಿಮಗೆ ಮನಬಂದಂತೆ ಕೆತ್ತಬಲ್ಲಿರಿ ಜೋತುಬಿದ್ದ ಮೊಲೆಗಳ ಒಂದು ಶಿಲ್ಪವೂ ಕಾಣುವುದಿಲ್ಲ’
ಕವಯತ್ರಿಯ ಕಾವ್ಯಶಿಲ್ಪ ‘ಒಂದಂಗುಲ ಪ್ರೀತಿಯಲೆ’ ಎಂಬ ಕಾವ್ಯದಲ್ಲಿ, ಸರಳ ಶಬ್ದಗಳಿಂದ ಹೆಣೆಯಲಾಗಿದೆ. ಜೋಕಾಲಿಯಂತೆ ಸರಾಗವಾಗಿ ಹೋಗಿ ಅರ್ಥವನ್ನು ಹುಡುಕುವಾಗ ಜೋಕಾಲಿಯನ್ನು ನಿಲ್ಲಿಸಿ ಹುಡುಕಬೇಕಾಗುತ್ತದೆ.
ಕಡಲು ಸೀಳುವ ದೋಣಿ,
ಮುಗಿಲ ಕುದಿಸುವ ಬೆಳಕು,
ನೆರಳ ನುಂಗಿದ ಇರುಳು,
ಕವಯತ್ರಿ “ನೀಲಿ ಚಕ್ರಕ್ಕೆ ಕಾಲಿರಬೇಕಿತ್ತು” ಎಂಬ ಕವಿತೆ ಯಲ್ಲಿ ಮೊದಲೆರಡು ಸಾಲುಗಳಲ್ಲಿ ಕಂಡ ವೀರತನದ ಅಹವಾಲು ನಂತರದ ಸಾಲುಗಳಲ್ಲಿ ಅದು ಹತಾಶೆ, ಜಿಗುಪ್ಸೆ, ಹಾಗೂ ಅಸಹಾಯಕತೆಯ ಕಡೆ ಮುಖ ಮಾಡಿದೆ.
ಒಂದೇ ಒಂದು ಕತ್ತಿಯ ಎರವಲು ಕೊಡಿ
ಸಾವಿರ ಚೂರಿಗಳ ತಯಾರಿಸುವ ಗುತ್ತಿಗೆ ಪಡೆದಿದ್ದೇನೆ’ನಮ್ಮವರ ಕಣ್ಣೀರ ಒರೆಸಲು ಕೈಗಳು ನಡುಗಿ ಸಾಯುತ್ತಿವೆ, ನಾವು ಶಾಪಗ್ರಸ್ಥ ದೇವತೆಯರು ರಕ್ತದ ಮಡುವಿಗೆ ಆಣೆಕಟ್ಟು ಕಟ್ಟಿದ್ದೇವೆ, ಕಣ್ಣಾಲಿಗಳಲ್ಲಿಯೇ,
‘ಪಳೆಯುಳಿಕೆಯ ಶಿಲಾಬಾಲಿಕೆ’ಯ ಕವಿತೆಯಲ್ಲಿ ಜೀವಂತ ಬಾಲಿಕೆಯರ ಕಣ್ಣೀರು ಕಾಡಿಗೆಯೊಳಗೆ ಬೆರೆತು ಕಪ್ಪಾಗಬಹುದು. ಕಣ್ಣೀರಿಗೆ ಆಕಾರ ಬಣ್ಣವಿಲ್ಲ, ಯಾವ ವರ್ಣದೊಂದಿಗೆ ಬೆರೆತು ಅದೇ ಆಗುವದು, ಕವಿತೆಯ ರಹಸ್ಯ ಮಾತ್ರ ಹಾಗೇ ಉಳಿಯುವದು.
“ಕಣ್ಣ ಕಾಡಿಗೆ ಮುಂದೆ ಕಣ್ಣೀರು ಕಪ್ಪಾಗಬಹುದು”
ಒಟ್ಟಿನಲ್ಲಿ ಸರಾಗವಾಗಿ ಓದಿಸಿಕೊಂಡು ಹೋಗುವ ಸಂಕಲನ, ಇಡೀ ಸಂಕಲನದ ತುಂಬಾ ಆತ್ಮ ಎಲ್ಲೆಂದರಲ್ಲಿ ತೂರಿಬಿಟ್ಟಿವೆ. ಸಂಚಾರಿಭಾವಗಳು ಓದುಗರಲ್ಲಿ ಸುಳಿಸುಳಿದು ಹೋಗುತ್ತವೆ ಈ ಕಾಲದ ಉತ್ತಮ ಸಂಕಲನ…





0 Comments