ಈ ವಿಷಯ ಕೇಳೋದಿಕ್ಕೆ ವಿಚಿತ್ರ ಅನಿಸುತ್ತೆ. ಆದರೆ ಇದು ನಿಜ. ಮದುವೆ ಅನ್ನುವ ವಿಷಯ ಕೇಳಿದೊಡನೆ ಮಾರು ದೂರ ಹಾರಿ ನಿಲ್ಲುವ, ಅಸ್ವಸ್ಥರಾಗುವ, ಗಲಿಬಿಲಿಗೊಳ್ಳುವ, ತಲ್ಲಣಿಸಿಹೋಗುವ ಗಂಡಸರಿದ್ದಾರೆ. ಅಂದರೆ ಆ ರೀತಿಯ ಹೆಂಗಸರು ಇಲ್ಲ ಅಂತ ಅರ್ಥವೇನು? ಅಂತ ನೀವು ಕೇಳ್ತೀರಾ ಅಂತ ನನಗೆ ಖಂಡಿತಾ ಗೊತ್ತು. ಇದ್ದಾರೆ, ಅಂತಹ ಹೆಂಗಸರೂ ಇದ್ದಾರೆ. ಆದರೆ ಈ ವಾರ ಮದುವೆಯ ಬಗ್ಗೆ ಹೆದರುವ ಗಂಡಸರ ಬಗ್ಗೆ ಮಾತ್ರ ಮಾತಾಡ್ತೀನಿ ನನ್ನ ಮುಂದಿನ ವಾರದ ಕಾಲಂ ಎಸ್, ಮದುವೆ ಎಂದರೆ ಮಾರು ದೂರ ಆಚೆ ಜಿಗಿಯುವ ಹೆಣ್ಣುಗಳ ಬಗ್ಗೆ.
ಮದುವೆ ಅನ್ನುವುದು ನಮ್ಮ ಮನೆಗಳಲ್ಲಿ, ಸಮಾಜದಲ್ಲಿ ತೀರಾ ತೀರಾ ಮುಖ್ಯವಾದ ಘಟ್ಟಗಳಲ್ಲೊಂದು. ಗೃಹಸ್ಥಾಶ್ರಮ ಅನ್ನೋದು ಬದುಕಿನ ಎರಡನೆಯ ಹಾಗು ಬಹು ಮುಖ್ಯ ಘಟ್ಟ. ಮದುವೆ, ಕನ್ಯಾದಾನ, ಸಪ್ತಪದಿ ಎಲ್ಲಕ್ಕೂ ಒಂದು ಅರ್ಥ, ಒಂದು ಹಿರಿಮೆ ಇತ್ತು. ಮದುವೆ, ಆ ಮೂಲಕ ಸಂತಾನ, ಮಕ್ಕಳು ಮರಿ ಇಲ್ಲದಿದ್ದರೆ ಬದುಕಿದ್ದಾಗಲೇ ನೂರೆಂಟು ಮಾತು ಕೇಳಬೇಕು ಸತ್ತಮೇಲಿನ ಮಾತಂತೂ ಬಿಡಿ ಮಕ್ಕಳಿಲ್ಲದೆ ಸತ್ತವರಿಗೆ ಸದ್ಗತಿ ಇಲ್ಲವೇ ಇಲ್ಲ ಅಂತ ನಂಬಿರೋ ಕಾಲ ಇದು. ಆದರೆ ಇತ್ತೀಚಿನ ದಿನಗಳಲ್ಲಿ ಈ ವ್ಯವಸ್ಥೆ ಕೊಂಚ ಮುಕ್ಕಾಗಿದೆ. ಒಂಟಿಯಾಗಿ ಉಳಿದವರು ಈಗ ಪ್ರಶ್ನಾರ್ಹರಲ್ಲ, ಅದೂ ಒಂದು ಸಹಜ ಸ್ಥಿತಿಯೇನೋ ಎನ್ನುವಂತೆ ನಗರ ಪ್ರದೇಶಗಳಲ್ಲಿ ಜನ ಅದನ್ನು ಒಪ್ಪಿಕೊಳ್ಳುತ್ತಾ ಇದ್ದಾರೆ. ಹಾಗಾದರೆ ಮದುವೆಯ ಬಗೆಗಿನ ಗಂಡಸರ ದೃಷ್ಟಿಕೋನದಲ್ಲಿ ಅಂತಹ ಬದಲಾವಣೆ ಏನಾಗಿದೆ??
ಆ ಬಗ್ಗೆ ಮಾತಾಡುವ ಮುನ್ನ ನಾನು ನನ್ನ ಒಬ್ಬ ಕ್ಲೈಂಟ್ ವಿಷಯ ಇಲ್ಲಿ ಹೇಳಬೇಕು. ಆತ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್, ಆರೋಗ್ಯವಂತ, ಸ್ಫುರದ್ರೂಪಿ, ಒಳ್ಳೆ ಸಂಬಳ, ಒಳ್ಳೇ ಕೌಟುಂಬಿಕ ಹಿನ್ನಲೆ. ಇವೆಲ್ಲದರ ನಡುವೆ ಆತ ನನ್ನೆದುರಿನ ಖುರ್ಚಿಯಲ್ಲಿ ಕೂತಿದ್ದ. ಆತ ಆಳವಾದ ಖಿನ್ನತೆ ಅನುಭವಿಸುತ್ತಿದ್ದ, ಆತಂಕಗೊಂಡಿದ್ದ, ಹೆದರಿದ್ದ. ನಾನು ಮಾತಾಡಿಸಿ ಅವನ ಸ್ಥಿತಿಗೆ ಕಾರಣ ಏನು ಅಂತ ಕೇಳಿದಾಗ ಬಂದ ಉತ್ತರ, ’ಡಾಕ್ಟ್ರೆ ನನ್ನ ಮದುವೆ ನಿಶ್ಚಯ ಆಗಿದೆ, ಯಾಕೋ ಆತಂಕ, ಸರಿಯಾಗಿ ಊಟ ಮಾಡೋಕ್ಕಾಗ್ತಿಲ್ಲ, ನಿದ್ದೆ ಬರ್ತಿಲ್ಲ, ಆಫೀಸಿನಲ್ಲಿ ಕೆಲಸ ಮಾಡೋಕ್ಕಾಗ್ತಿಲ್ಲ…. ಇಲ್ಲ ಡಾಕ್ಟ್ರೆ ನನಗೆ ಮನಸನ್ನು ಎಲ್ಲೂ ಕೇಂದ್ರೀಕರಿಸಲಾಗುತ್ತಿಲ್ಲ, ಏನೋ ತಲ್ಲಣ … ನನಗೆ ಏನಾಗಿದೆ??’
’ನೀವು ಬೇರೆ ಯಾರನ್ನಾದರೂ ಪ್ರೀತಿಸುತ್ತಿದ್ದೀರಾ?’
’ಇಲ್ಲ’.
’ನಿಮಗೆ ನಿಶ್ಚಯ ಆಗಿರೋ ಹುಡುಗಿ ಚನ್ನಾಗಿಲ್ಲವಾ?’
’ಇಲ್ಲ ಡಾಕ್ಟ್ರೆ ಅವಳಿಗಿಂತ ಯೋಗ್ಯ ಸಂಗಾತಿ ನನಗೆ ಸಿಕ್ಕಬಹುದು ಅನ್ನುವ ನಂಬಿಕೆ ನನಗಿಲ್ಲ…..’
’ನಿಮಗೇನಾದರೂ ಲೈಂಗಿಕ ಸಮಸ್ಯೆ ಇದೆಯಾ?’
’….ಇಲ್ಲ’
ಹೀಗೇ ಮಾತುಕಥೆ ನಡೀತು. ಆತ ಮಾಮೂಲಾಗೇ ಉತ್ತರಿಸುತ್ತಿದ್ದ. ಮೇಲ್ನೋಟಕ್ಕೆ ಅವನಲ್ಲಿ ಯಾವುದೇ ಸಮಸ್ಯೆ ಕಾಣಲಿಲ್ಲ. ಮಾತಾಡುತ್ತಾ ಮಾತಾಡುತ್ತಾ ನನಗೆ ಅರ್ಥ ಆಯ್ತು, ಅವನಿಗಿರುವ ಸಮಸ್ಯೆ ಅಂದರೆ Commitment ಬಗೆಗಿನ ಹೆದರಿಕೆ. ಮದುವೆಯ ಬಗೆಗಿನ ಹೆದರಿಕೆ. ಅದಕ್ಕೆ ಕಾರಣ ಅವನ ದುರ್ಬಲ ಸ್ವಭಾವ ಮತ್ತು ಅವನ ಕಸಿನ್ ಜೀವನದಲ್ಲಾದ ಒಂದು ಘಟನೆ. ಆಕೆಗೆ ಮದುವೆ ಆಗಿತ್ತು, ಅನೇಕ ಕಾರಣಗಳಿಂದ ಆ ಮದುವೆ ಊರ್ಜಿತವಾಗಲಿಲ್ಲ. ಆದರೆ ಆಕೆ ಆತನನ್ನು ಸುಮ್ಮನೆ ನಡೆದು ಹೋಗಲು ಬಿಡಲಿಲ್ಲ. ಅವನ ಕುತ್ತಿಗೆ ಪಟ್ಟಿ ಹಿಡಿದು ದೊಡ್ಡ ಮೊತ್ತದ ಪರಿಹಾರ ವಸೂಲು ಮಾಡಿದ್ದಳು. ಈಗ ಇವನ ಹೆದರಿಕೆ ಅಂದರೆ ಇವನ ಮದುವೆಯೂ ಹಾಗೇ ಆದರೆ, ಇವನ ಹೆಂಡತಿಯೂ ಜೋರು ಸ್ವಭಾವದವಳಾದರೆ … ಇವನಿಗೆ ಅವಳನ್ನು, ಅವನ ಭಾಷೆಯಲ್ಲೇ ಹೇಳುವುದಾದರೆ, ’ಕಂಟ್ರೋಲ್’ ಮಾದಲು ಆಗದೆ ಹೋದರೆ…, ಅಕಸ್ಮಾತ್ ಆಕೆ ವರದಕ್ಷಿಣೆ ಹಿಂಸೆ ಅಂತ ಕೇಸೇ ಹಾಕಿಬಿಟ್ಟರೆ …. ಹೀಗೆ ಸಾಗಿತ್ತು ಅವನ ಆಲೋಚನಾ ಲಹರಿ.
ಇಂದು ಮಾಧ್ಯಮ ಎಲ್ಲರ ಮನೆ ಜಗಳವನ್ನೂ ಸಂತೆಯ ಮಧ್ಯೆ ತಂದು ನಿಲ್ಲಿಸುತ್ತಿದೆ. ಯಾರೊಬ್ಬರ ಮನೆಯ ವಿಚಾರವೂ ಈಗ ಖಾಸಗಿ ಸಂಗತಿಗಳಲ್ಲ ಎನ್ನುವ ರೀತಿಯಲ್ಲಿ ಮಾಧ್ಯಮದ ಅಂಗಳಕ್ಕೆ ಬಂದು ಸೇರುತ್ತಿವೆ. ಮೇಲ್ನೋಟಕ್ಕೆ ದೇಶದ ಎಲ್ಲಾ ಕಾನೂನುಗಳು ಮಹಿಳೆಯರ ಪರವಾಗಿದೆ ಎಂದು ಕಾಣುತ್ತಿದೆ. ಇಂದಿನ ದಿನಮಾನದಲ್ಲಿ ಮಹಿಳೆ ಸಹ ಹಿಂದಿನಂತೆ ಸಂಸಾರದಲ್ಲಿ ತಾನು ಎರಡು ಮೆಟ್ಟಿಲು ಕೆಳಗಿರಬೇಕಾದವಳು, ಗಂಡನಿಗಿಂತ ಎರಡು ಹೆಜ್ಜೆ ಹಿಂದಿರಬೇಕಾದವಳು ಎನ್ನುವ ಹಳೆ ನಂಬಿಕೆಯನ್ನು ಒಪ್ಪುತ್ತಿಲ್ಲ. ಮದುವೆಯಲ್ಲಿ ತಾನೂ ಸಹ ಸಮ ಜವಾಬ್ದಾರಿ ಸಮವಾದ ಹಕ್ಕು ಹೊಂದಿರುವವಳು ಎಂದು ನಂಬಿರುವವಳು, ಮತ್ತು ಹಾಗೆ ನಡೆದುಕೊಳ್ಳುವವಳು. ಆದರೆ ಎಷ್ಟೇ ವಿದ್ಯಾವಂತರಾಗಿದ್ದರೂ ಸುಮಾರು ಜನ ಗಂಡಸರ ಅಂತರಾಳದ ’ಅಹಂ’ ಈ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಮತ್ತು ಅದೇ ಕಾರಣಕ್ಕಾಗಿ ತಾನು ಮದುವೆಯಲ್ಲಿ ಸೋಲುತ್ತೇನೇನೋ ಎನ್ನುವ ಹಿಂಜರಿಕೆ. ಇಲ್ಲ, ಇದು ಎಲ್ಲರ ವಿಷಯದಲ್ಲೂ ನಿಜ ಅಲ್ಲ. ದುರ್ಬಲ ವ್ಯಕ್ತಿತ್ವದ ಕೆಲವು ಗಂಡಸರಿಗೆ ಈ ಭೀತಿ ಒಂದು ಸವಾಲಿನಂತೆ ಕಾಣುತ್ತದೆ.
ನನ್ನ ಕ್ಲೈಂಟ್ ಜೊತೆ ಅನೇಕ ಭೇಟಿಗಳ ನಂತರ, ಚಿಕಿತ್ಸೆಯ ನಂತರ ಈತ ಮದುವೆ ಆಗಲೇನೋ ತಯಾರಾದ. ಆದರೆ ಮದುವೆಯ ಒಂದು ತಿಂಗಳ ನಂತರ ಮತ್ತೆ ಕೆಲವು ನೆರಳುಗಳು ಇವನ ಜೀವನವನ್ನು ಕಾಡತೊಡಗಿದವು. ಆಗ ಮತ್ತೆ ದಂಪತಿಗಳಿಬ್ಬರೂ ನನ್ನ ಬಳಿಗೆ ಬಂದರು. ಇಬ್ಬರನ್ನೂ ಕೂರಿಸಿಕೊಂಡು ಅವರ ಅನೇಕ ಹೆದರಿಕೆಗಳನ್ನು ಕಡಿಮೆ ಮಾಡಬೇಕಾಯಿತು.
ಇದು ‘ಮದುವೆ ಎಂಬ ಬಂಧನ’ದ ಫೋಬಿಯಾಗೆ ಒಳಗಾಗಿರುವ ಗಂಡಸರ ಬಗೆಗಿನ ಒಂದು ಉದಾಹರಣೆ ಅಷ್ಟೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಜೀವನದಲ್ಲಿ ಭೂತಕಾಲದಲ್ಲಿ ನಡೆದ ಅಥವಾ ಕಳೆದುಕೊಂಡ ಸಂಬಂಧ, ತಾನು ಕಂಡ ಪ್ರಪಂಚದಲ್ಲಿನ ಕೆಲವು ಘಟನೆಗಳಿಂದ ಹೆಣ್ಣಿನ ಬಗ್ಗೆ ಅಪನಂಬಿಕೆ, ಶಂಕೆ, ತಾನು ಒಬ್ಬ ’ಗಂಡಸಾಗಿ’ ಅವಳನ್ನು ಗೆಲ್ಲಬಲ್ಲೆನೋ ಇಲ್ಲವೋ ಎನ್ನುವ ಆತಂಕ, ಹಣಕಾಸಿನ ಸಮಸ್ಯೆ, ಅಪ್ಪ ಅಮ್ಮಂದಿರ ಜಗಳವನ್ನೇ ನೋಡುತ್ತಾ ಆತಂಕದಲ್ಲಿ, ಅಪನಂಬಿಕೆಯಲ್ಲಿ, ಹೆದರಿಕೆಯಲ್ಲಿ ಕಳೆದ ಬಾಲ್ಯ, ಡ್ರಗ್ಸ್, ಕುಡಿತ ಮುಂತಾದ ದುರಾಭ್ಯಾಸ, ಅಥವಾ ಮದುವೆಯಾದ ಮೇಲೆ ತನ್ನ ಸ್ವಾತಂತ್ರ್ಯ ಹರಣವಾಗಬಹುದು ಎನ್ನುವ ಹೆದರಿಕೆ, ಕೆಲವು ಸಂದರ್ಭಗಳಲ್ಲಿ ತನ್ನ ಸಲಿಂಗಿ ಸ್ವಭಾವ ಸಹ ಮದುವೆ ಎಂದರೆ ಹಿಂಜರಿಯುವಂತಾಗುತ್ತದೆ. ಇವು ನಾನು ನನ್ನ ವೃತ್ತಿ ಜೀವನದಲ್ಲಿ ಕಂಡು ಕೊಂಡ ಕೆಲವು ಕಾರಣಗಳು ಮಾತ್ರ.
ನನಗೊಬ್ಬ ಸ್ನೇಹಿತ ಇದ್ದಾನೆ. ಇತ್ತೀಚಿಗೆ ಬಂದ ಒಂದು ಹಿಂದಿ ಚಿತ್ರದ ನಾಯಕನಂತಹವನು. ಅವನಿಗೆ ಅದಮ್ಯ ಜೀವನ ಪ್ರೀತಿ, ಜಗತ್ತನ್ನು ಸುತ್ತುವ ಹಂಬಲ, ಮನೆಯ ಹೊರಗಿನ ಪ್ರಪಂಚದಲ್ಲಿ ತನ್ನ ಜಗತ್ತು ಕಟ್ಟಿಕೊಳ್ಳುವವ, ಆದರೆ ಮದುವೆ ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಹುದು ಅನ್ನುವ ಹೆದರಿಕೆ. ಅದಕ್ಕಾಗಿ ಮದುವೆಯಾಗಲು ಒಲ್ಲ. ಆದರೆ ತನ್ನ ದೈಹಿಕ ಮತ್ತು ಮಾನಸಿಕ ಅಗತ್ಯಕ್ಕಾಗಿ ಒಬ್ಬರಾದ ಮೇಲೆ ಒಬ್ಬರಂತೆ ಗರ್ಲ್ ಫ್ರೆಂಡ್ ಗಳನ್ನ ಹುಡುಕಿಕೊಳ್ಳುತ್ತಾನೆ. ಉಹು, ಆತನೇನೂ ಅವರನ್ನು ನಂಬಿಸಿ ಮೋಸ ಮಾಡುತ್ತಿಲ್ಲ. ಗರ್ಲ್ ಫ್ರೆಂಡ್ ಗಳು ನನ್ನ ಹಿಡಿತಕ್ಕೆ ಸಿಕ್ಕರು ಎಂದು ಗೊತ್ತಾಗುತ್ತಿದ್ದಂತೆಯೇ ‘ಯಾವುದೇ ಕಾರಣಕ್ಕೂ ನಾನು ಮದುವೆ ಆಗೋಲ್ಲ’ ಅಂತ ಕಡ್ಡಿ ತುಂಡು ಮಾಡಿದವನಂತೆ ಹೇಳಿಬಿಡುತ್ತಾನೆ. ಅದೇ ಆ ಸಿನಿಮಾದ ನಾಯಕನಂತೆಯೇ ಮದುವೆ ಅಂದರೆ ’ದಿನಾ ಅದೇ ಸಾರು, ಅದೇ ಅನ್ನ’ ಅಂತ ತಳ್ಳಿ ಹಾಕಿಬಿಡುತ್ತಾನೆ.
ಆದರೆ ನಾನು ಕಂಡ ಹಾಗೆ ಹೀಗೆ ಸಮಾಜಕ್ಕೆ ಫೋಸು ಕೊಡುವವರೆಲ್ಲಾ ತಾವು ಮಹಾ ಸುಖಿಗಳು ಎಂದೇ ನಂಬಿಕೊಂಡಿರುತ್ತಾರೆ. ಜನರ ಮುಂದೆ ಹಾಗೆ ಕೊಚ್ಚಿಕೊಳ್ಳುತ್ತಿರುತ್ತಾರೆ, ಆದರೆ ಎದೆಯಂತರಾಳದಲ್ಲಿ ಅವರು ಅತ್ಯಂತ ಒಂಟಿಯಾಗಿರುತ್ತಾರೆ. ಮೊದಮೊದಲು ಆಕರ್ಷವಾಗಿ ಕಂಡ ಬದುಕು ನಂತರ ಟೊಳ್ಳಾಗುತ್ತಾ ಹೋಗುತ್ತದೆ, ವಯಸ್ಸಾದಂತೆ ಒಂಟಿತನ ಬೇಟೆಯಾಡುತ್ತದೆ. ಇಲ್ಲಿ ಮದುವೆ ಬೇಡ ಎಂದರೆ, ಹೆಂಡತಿ ಬೇಡ ಅಂತಷ್ಟೇ ಅಲ್ಲ, ಮಕ್ಕಳೂ ಬೇಡ ಅಂತ. ಅದು, ಆ ಒಂಟಿತನದ ಭಾರ ದಿನದಿನಕ್ಕೂ ಹೆಚ್ಚಾಗುತ್ತಾ ಹೋಗುತ್ತದೆ. ನಾನು ಕಂಡ ಅನೇಕ ಶ್ರೀಮಂತ ಗಂಡುಗಳು ಹೇಳುವುದು, ’ನನ್ನ ಹತ್ತಿರ ಬೇಕಾದಷ್ಟು ಹಣ ಇದೆ, ಆದರೆ ಇದನ್ನೆಲ್ಲಾ ಎನು ಮಾಡಲಿ?? ’ನನ್ನವರು’ ಅಂತ ಯಾರ ಮೇಲೆ ಖರ್ಚು ಮಾಡಲಿ?? ಏನೂ ತೋಚದೆ ಒಬ್ಬರಾದೊಬ್ಬರ ಮೇಲೆ ಒಬ್ಬರಂತೆ ಗೆಳತಿಯರನ್ನು ಬದಲಾಯಿಸುತ್ತಾ ಹೋಗುತ್ತೇನೆ, ಮತ್ತು ಇನ್ನೂ ಹೆಚ್ಚು ಒಂಟಿಯಾಗುತ್ತಾ ಇರುತ್ತೇನೆ.
ಆದರೆ ಇನ್ನೂ ಕೆಲವು ಸಂದರ್ಭಗಳಲ್ಲಿ ಈ ಗಂಡಸರು ಒಮ್ಮೆ ಮುಂದೆ ಹೆಜ್ಜೆ ಇಟ್ಟು ಒಂದು ಸಂಬಂಧಕ್ಕೆ ತಮ್ಮ ಮನಸ್ಸನ್ನು ತೆರೆದುಕೊಂಡರೆ ಅವರು ಬೇರೆಯವರಿಗಿಂತಲೂ ಹೆಚ್ಚು ಸಂಬಂಧಕ್ಕೆ ನಿಷ್ಠರಾಗಿರುತ್ತಾರೆ.
ಇಲ್ಲಾ, ನಾನಿಲ್ಲಿ ನ್ಯಾಯಾಧೀಶೆಯಲ್ಲ, ಹಾಗೆ ಮಾತಾಡುತ್ತಲೂ ಇಲ್ಲ. ಮದುವೆ ಅನ್ನುವುದು ವೈಯಕ್ತಿಕ ಆಸೆ, ನಿರ್ಧಾರ, ಆದರೆ ಇಲ್ಲಿ ನಾನು ಹೇಳಬೇಕೆಂದಿರುವುದು, ನಿಮ್ಮ ಮನಸ್ಸಿನ ಮಾತನ್ನು ಕೇಳಿ, ನಿಮಗೇನು ಬೇಕು ಅಂತ ಅರ್ಥ ಮಾಡಿಕೊಳ್ಳಿ, ಮತ್ತು ನಿಮ್ಮ ಪ್ರತಿ ಹೆಜ್ಜೆ, ಪ್ರತಿ ಆಯ್ಕೆ ಆ ಹೆಜ್ಜೆಯೆಡೆಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತದಾ ಅಂತ ನೋಡಿ. ಆ ಎರಡಕ್ಕೂ ತಾಳಮೇಳ ಇಲ್ಲ ಅಂತಾದಾಗ ಖಂಡಿತಾ ನೆರವು ಕೇಳಲು ಹಿಂಜರಿಯಬೇಡಿ.
ನನ್ನ ಮುಂದಿನ ಲೇಖನ ಮದುವೆ ಎಂದರೆ ಮಾರು ದೂರ ಹಾರುವ ಹೆಣ್ಣುಗಳ ಬಗ್ಗೆ.







“ನನಗೊಬ್ಬ ಸ್ನೇಹಿತ ಇದ್ದಾನೆ… ದೈಹಿಕ ಮತ್ತು ಮಾನಸಿಕ ಅಗತ್ಯಕ್ಕಾಗಿ ಒಬ್ಬರಾದ ಮೇಲೆ ಒಬ್ಬರಂತೆ ಗರ್ಲ್ ಫ್ರೆಂಡ್ ಗಳನ್ನ ಹುಡುಕಿಕೊಳ್ಳುತ್ತಾನೆ…. ಗರ್ಲ್ ಫ್ರೆಂಡ್ ಗಳು ನನ್ನ ಹಿಡಿತಕ್ಕೆ ಸಿಕ್ಕರು ಎಂದು ಗೊತ್ತಾಗುತ್ತಿದ್ದಂತೆಯೇ ‘ಯಾವುದೇ ಕಾರಣಕ್ಕೂ ನಾನು ಮದುವೆ ಆಗೋಲ್ಲ’ ಅಂತ ಕಡ್ಡಿ ತುಂಡು ಮಾಡಿದವನಂತೆ ಹೇಳಿಬಿಡುತ್ತಾನೆ. ”
This kind of men treat women like sex tools. They use women for their physical needs but don’t want to take responsibility. Thank God the court has recently given seminal judgment on premarital sex. Your friend can no longer have sex with girl friends and then escape from responsibility. Consensual sex before marriage is equivalent to wedding in the eyes of the law. He has to eat ದಿನಾ ಅದೇ ಸಾರು, ಅದೇ ಅನ್ನ’. Disgusting people.
ಮೇಡಂ ನಾನು ನಿಮ್ಮನ್ನು ಭೇಟಿ ಆಗಬೇಕಕಿದೆ ನಿಮಮ್ಮ್ಮಮ್ಮ ದೂರವಾಣಿ ನಂಬರ ಕೊಡಿ
98864 83315
ನಿಮ್ಮ ಸ್ನೇಹಿತನ ಕಥೆ ಒಪ್ಪುವಂತಹದ್ದೇ. ಚಿತ್ರ ರಂಗದ ಎಲ್ಲರೂ ಹಸನ್ಮುಖಿಗಳೇ. ಆದರೇ ಜಂಬದಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಅಲ್ಲದೆ ನಿಮ್ಮ ಸಲಹೆ ಅಳವಡಿಸಿಕೊಳ್ಳಲು ಕೂಡ ಉಪಯುಕ್ತವಾಗಿದೆ. ಧನ್ಯವಾದಗಳು.