ಅದು ರಾಮೋಜಿ ಫಿಲಂ ಸಿಟಿಯಲ್ಲಿದ್ದ ದಿನಗಳು. ಈಟಿವಿಯ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದ ನಾನು 2500 ಎಕರೆಯ ಆ ವಿಸ್ತಾರ ಮಾಯಾಲೋಕದಲ್ಲಿ 24 ಗಂಟೆ ಸುದ್ದಿ, ಸುದ್ದಿ ಮತ್ತು ಸುದ್ದಿಯನ್ನಲ್ಲದೆ ಇನ್ನೇನನ್ನೂ ಸೇವಿಸುತ್ತಿರಲಿಲ್ಲ. ಅದೇ ಹಾಸಿಗೆ, ಅದೇ ಹೊದಿಕೆ ಎನ್ನುವ ವಾತಾವರಣ. ಹಾಗಿರುವಾಗ ಒಂದು ದಿನ ಹೈದರಾಬಾದ್ ನಲ್ಲಿ ಕೂಚಿಪುಡಿ ಪ್ರದರ್ಶನ, ಡಾಕ್ಟರ್ ಒಬ್ಬರಿಂದ ಎನ್ನುವ ಸುದ್ದಿ ಬಂದು ಬಿತ್ತು. ಹಗಲಿರುಳೂ ಸುದ್ದಿಮನೆಯಲ್ಲೇ ಕೂತ ನಾನು ಹೊರಗಿನ ಗಾಳಿ ಬೆಳಕು ಸಿಗದೇ ಹೋದರೆ ನಾನೇ ಸುದ್ದಿಯಾಗಿಬಿಡುತ್ತೀನೇನೋ ಎನ್ನುವ ಸ್ಥಿತಿ ತಲುಪುತ್ತಿದ್ದೆ. ಹಾಗಾಗಿ ಆ ಕೆಲವು ಗಂಟೆಯ ಮಟ್ಟಿಗೆ ಸುದ್ದಿಯೆಂಬ ಹಾಸಿಗೆಯನ್ನು ನೀಟಾಗಿ ಮಡಚಿಟ್ಟು ರಂಗಾರೆಡ್ಡಿಯಿಂದ ಗೆಳೆಯರೊಟ್ಟಿಗೆ ಸೇರಿದ್ದು ಹೈದರಾಬಾದ್ ನ ಕಲಾಕ್ಷೇತ್ರವನ್ನು. ಹಾಗೆ ಭೇಟಿಯಾದವರು ಡಾ ಬಿ ಎಸ್ ಪದ್ಮಾವತಿ.
ವೈದ್ಯ ವೃತ್ತಿ ಮಾಡುತ್ತಾ ಕೂಚಿಪುಡಿ ಎನ್ನುವುದು ಸುದ್ದಿ ನಾಸಿಕ ಹೊಂದಿರುವವರಿಗೆ ಒಂದಿಷ್ಟು ಸುದ್ದಿಯೇ ತಾನೇ? ಹಾಗಾಗಿ ಅವರನ್ನು ಮಾತಾಡಿಸಿ ಥ್ಯಾಂಕ್ಸ್ ಹೇಳಿ ವಾಪಸ್ ಬಂದೆ. ಮತ್ತೆ 24 ಗಂಟೆ ಸುದ್ದಿಗಳು ಇನ್ನೆಲ್ಲವನ್ನೂ ಮರೆಸಿಹಾಕಿತು. ಆ ನಂತರ ನಾನು ಬೆಂಗಳೂರು ಸೇರಿದ್ದು ಮತ್ತೆ ಸುದ್ದಿಯಲ್ಲಿ ಮುಳುಗಿದ್ದು ಈ ಎಲ್ಲವೂ ಆಗುತ್ತಾ ಇರುವ ವೇಳೆಯಲ್ಲೇ ಮತ್ತೆ ಪದ್ಮಾವತಿ ಎನ್ನುವ ಹೆಸರು ಕಾಣಿಸಿಕೊಂಡಿತ್ತು. ಚಾನಲ್ ನಲ್ಲಿ ನಾನು ನಡೆಸುತ್ತಿದ್ದ ಷೋ ಒಂದಕ್ಕೆ ಮನಶ್ಯಾಸ್ತ್ರಜ್ಞರೊಬ್ಬರು ಬೇಕಿತ್ತು. ಹಾಗಾಗಿ ಗೂಗಲ್ ಗೆ ಮನಶ್ಯಾಸ್ತ್ರಜ್ಞರನ್ನು ಹುಡುಕಲು ಹೇಳಿ ಕಾಫಿ ಹೀರುತ್ತಿದ್ದೆ.
ಗೂಗಲ್ ಪುಂಖಾನುಪುಂಖವಾಗಿ ನೂರೆಂಟು ಹೆಸರನ್ನು ಎತ್ತಿ ಹಾಕಿ ಸುಮ್ಮನಾಗಿತ್ತು. ಅದರ ಕಡೆ ಕಣ್ಣು ಹಾಯಿಸುತ್ತಾ ಕುಳಿತಾಗಲೇ ಮತ್ತೆ ಡಾ ಪದ್ಮಾವತಿ ಹೆಸರು ಕಂಡದ್ದು. ಎಲ್ಲಿಯ ಹೈದರಾಬಾದ್, ಎಲ್ಲಿಯ ಬೆಂಗಳೂರು ಎಂದು ಸುಮ್ಮನಾಗುತ್ತಿದ್ದವನು ಕುತೂಹಲ ತಡೆಯಲು ಸಾಧ್ಯವಾಗದೆ ಆ ನಂಬರ್ ಗೆ ಫೋನಾಯಿಸಿದೆ. ಅರೆ! ಇದು ಆ ಡಾ ಪದ್ಮಾವತಿಯೇ..
ಡಾ ಪದ್ಮಾವತಿ ಜೊತೆ ನಡೆಸಿದ ಎಷ್ಟೋ ಚರ್ಚೆಗಳನ್ನು ಕೇಳುತ್ತಾ ಕೇಳುತ್ತಾ ಬದುಕು ಹೀಗೆಲ್ಲಾ ಉಂಟೆ? ಎನಿಸಿತೊಡಗಿತು. ದೋಣಿಗೊಂದು ಸರಿಯಾದ ಹುಟ್ಟು ಕಂಡುಕೊಳ್ಳಲಾಗದವರು ಸಮುದ್ರದಲ್ಲಿ ಧಿಕ್ಕಾಪಾಲಾಗುವ ಅದೆಷ್ಟು ಕಥೆಗಳು??.. ಒಂದೊಂದೇ ಕೇಳುತ್ತಾ ನಿಟ್ಟುಸಿರಾಗತೊಡಗಿದೆ.
ಆಗಲೇ ನಾನು ಅವರನ್ನು ಕೇಳಿದ್ದು ‘ಅವಧಿ’ಗೊಂದು ಅಂಕಣ ಬರೆದುಕೊಡಿ ಅಂತ. ಹಾಗೆ ಕೇಳುವಾಗ ನನ್ನ ಮುಂದೆ ಇದ್ದದ್ದು ನಾನೇ ಬರೆದ ಒಂದು ಲೇಖನ- ‘ಹೇಗಿದ್ದ ಹೇಗಾದ ಗೊತ್ತಾ’. ಇದು ನನ್ನ ಮುಂದೆಯೇ ಜರುಗಿ ಹೋದ ಘಟನೆ. ಅತಿ ಸುಂದರನಾದ, ಅಷ್ಟೇ ಚುರುಕಾದ, ಸದಾ ನಗು ನಗುತ್ತಾ ಇದ್ದ, ಸುತ್ತಲವರನ್ನೂ ಹುಮ್ಮಸ್ಸು ತುಂಬಿ ಹೊಸ ದಿಕ್ಕಿಗೆ ಕರೆದೊಯ್ಯುತ್ತಿದ್ದ ಆ ಹುಡುಗ ನನ್ನ ಕಣ್ಣ ಮುಂದೆಯೇ ಕುಸಿಯತೊಡಗಿದ್ದ. ಯಾಕಪ್ಪಾ? ಎಂದು ನಾನು ಕೇಳಿದ್ದೇ ತಡ ಅವನ ಕಣ್ಣಲ್ಲಿ ಧಾರಾಕಾರ ನೀರು. ಆತ ಹೇಳಿದ ಕಥೆಗಳು ನನ್ನನ್ನೂ ತಲ್ಲಣಿಸಿ ಹಾಕಿತ್ತು.
ಪದ್ಮಾವತಿ ಹೇಳುತ್ತಾ ಹೋದ ಕಥೆಗಳೂ ಅಷ್ಟೇ.. ಬದುಕಿಗೆ ಕಟ್ಟಿದ ಹಾಯಿ ಪಟ ಒಂದಿಷ್ಟು ಹರಿದರೂ ದಿಕ್ಕಾಪಾಲಾಗಿ ಹೋಗುವ ಕಥೆ ಹೇಳುತ್ತಿದ್ದವು. ಆಗ ನನಗೆ ಅನಿಸಿತು- ಎಷ್ಟು ಮಂದಿ ಇಂತಹ ತಲ್ಲಣಗಳನ್ನು ತಮ್ಮ ಹೊಟ್ಟೆಯಲ್ಲಿಟ್ಟುಕೊಂಡಿದ್ದಾರೋ?, ಎಷ್ಟು ಮಂದಿ ತಮ್ಮ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು ಎಂದೂ ಗೊತ್ತಾಗದೆ ನಿಟ್ಟುಸಿರಿಡುತ್ತಿದ್ದಾರೋ?, ಎಷ್ಟು ಮಂದಿ ತಮಗೆ ಗೊತ್ತಾಗದಂತೆ ತಮ್ಮ ಬದುಕನ್ನು ನರಕ ಮಾಡಿಕೊಳ್ಳುತ್ತಿದ್ದಾರೊ..? ಹಾಗಾಗಿ ನಾನು ಪದ್ಮಾವತಿಯವರನ್ನು ಎಡಬಿಡದೆ ಕಾಡಿ ಅವರ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಅಂಕಣ ಬರೆಯುವಂತೆ ಮಾಡಿದ್ದೇನೆ.
ಪದ್ಮಾವತಿ ಮೂರು ಸ್ನಾತಕೋತ್ತರ ಪದವಿಯನ್ನು ಬಗಲಿನಲ್ಲಿಟ್ಟುಕೊಂಡವರು. ಮನಶ್ಯಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಅಷ್ಟೇ ಆಗಿದ್ದಿದ್ದರೆ ಇವರು ಹತ್ತರಲ್ಲಿ ಹನ್ನೊಂದನೆಯ ಮನಶ್ಯಾಸ್ತ್ರಜ್ಞರಾಗಿಬಿಡುತ್ತಿದ್ದರೆನೋ..? ಡಾ ಪದ್ಮಾವತಿ ನೃತ್ಯದಲ್ಲಿ ಆಸಕ್ತಿ ಹೊಂದಿದವರು. ಕೂಚಿಪುಡಿ ಪ್ರವೀಣೆ. ಶಾಸ್ತ್ರೀಯ ನೃತ್ಯ ಸಂಯೋಜನೆಯಲ್ಲಿ ಹೆಸರು ಮಾಡಿದವರು. ಬೇಕೆನಿಸಿದಾಗ ಕ್ಯಾಮೆರಾ ಬಗಲಿಗೇರಿಸಿ ಪಶ್ಚಿಮ ಘಟ್ಟಗಳನ್ನು ಹೊಕ್ಕು ಬರುವವರು. ಸಂಗೀತವನ್ನು ಚಿಕಿತ್ಸೆಗೂ ಅಳವಡಿಸಿಕೊಂಡವರು.
ಈ, ಈ ಎಲ್ಲವೂ ಅವರನ್ನು ಭಿನ್ನವಾಗಿಸಿದೆ. ಬಹುಷಃ ಬೆಂಗಳೂರು ಕಂಡ ಉತ್ತಮ ಮನಶ್ಯಾಸ್ತ್ರಜ್ಞರಲ್ಲೊಬ್ಬರು. ಅವರ ವಿಶೇಷತೆ ಇರುವುದೇ ಅವರ ಕೇಳುವ ಕಿವಿಯಲ್ಲಿ. ಸಮಸ್ಯೆಗಳಿಗೆ ಸದಾ ಕಿವಿಯಾಗಿ, ಅದನ್ನು ತೀರ ತೀರಾ ಸಹಜವಾದ ಸಮಸ್ಯೆಯೇನೋ ಎನ್ನುವಂತೆ ಎದುರಿಗಿದ್ದವರಿಗೆ ಸಮಾಧಾನ ಮಾಡುತ್ತಾ ತಮ್ಮ ನೈಪುಣ್ಯತೆಯ ಗಾಣದಲ್ಲಿ ಅರೆದು, ಒಂದು ಪರಿಹಾರ ನೀಡುತ್ತಾ ಹೋಗುತ್ತಾರಲ್ಲಾ ಅದೇ ಅವರ ವಿಶೇಷತೆ. ಎಷ್ಟು ಮನೆಗಳ ಬೆಳಕು ಇನ್ನೂ ಆರದೆ ಉಳಿದಿದೆಯೋ? ಎಷ್ಟು ಒಡಲುಗಳು ತಂಪಾಗಿದ್ದಾವೋ…
ಇದನ್ನು ನಾನು ಏಕೆ ಹೇಳುತ್ತಿದ್ದೇನೆಂದರೆ ಅವರು ನನ್ನ ಮುಂದೆ ಬಿಡಿಸಿಟ್ಟ ಕಥೆಗಳು ಹಾಗಿವೆ. ಅವು ಯಶೋಗಾಥೆಗಳು. ಈ ಕಥೆಗಳಲ್ಲಿ ನೀವೂ ಕಂಡರೆ ಅದು ತೀರಾ ತೀರಾ ಸಹಜ. ನಾನು ನನ್ನ ‘ಡೋರ್ ನಂ 142’ ಬರೆದಾಗ ಅದರ ಲೇಖನವೊಂದರಲ್ಲಿ ಹೇಳಿದ್ದೆ. ಇವತ್ತು ಮನೆಗೊಬ್ಬ ವೈದ್ಯರಿರುವಂತೆ ಮನೆಗೊಬ್ಬ ಮನಶ್ಯಾಸ್ತ್ರಜ್ಞ ರೂ ಬೇಕು. ಹೌದಲ್ಲಾ. ನಮ್ಮ ಬದುಕು ಎಷ್ಟೊಂದು ಬದಲಾಗಿ ಹೋಗಿದೆ. ಪ್ರತೀ ದಿನ, ಪ್ರತೀ ಕ್ಷಣ ಒತ್ತಡದ ಬದುಕು ಹೊಟ್ಟೆಯೊಳಗೊಂದು ಆರದ ಸಂಕಟವನ್ನು ಹುಟ್ಟು ಹಾಕುತ್ತಿದೆ.
‘ಮುಂಗಾರು ಮಳೆ’ಯಲ್ಲಿ ರಂಗಾಯಣ ರಘು ಹೇಳುತ್ತಾನೆ- ಎಲ್ಲರ ಮನೆ ದೋಸೆ ತೂತಾದರೆ ನಮ್ಮ ಮನೆಯಲ್ಲಿ ಮುದ್ದೆಯೇ ತೂತು.. ಅಂತ. ಅಂತಹ ಕಾಲಘಟ್ಟಕ್ಕೆ ನಾವೆಲ್ಲರೂ ಬಂದು ತಲುಪಿದ್ದೇವೆ. ಹಾಗಾಗಿಯೇ ಈ ಅಂಕಣ ಆರಂಭಿಸಬೇಕಾದ ಅನಿವಾರ್ಯತೆ ಉಂಟಾಯಿತು. ಈ ಅಂಕಣ ನಿಮ್ಮದೇ ಅಂಕಣ. ಇಲ್ಲಿನ ಕಥೆಗಳನ್ನುಓದಿ. ಅಷ್ಟೇ ಅಲ್ಲ ನಿಮಗೇನಾದರೂ ನಿಮ್ಮದೇ ಕಥೆಯಿದ್ದರೆ ನೇರ ಡಾಕ್ಟರ್ ಅನ್ನು ಸಂಪರ್ಕಿಸಿ. ಇಲ್ಲವೇ ನಮ್ಮ ಮೇಲ್ ಗೆ ನಿಮ್ಮ ಹೆಸರು ಇಲ್ಲದೆಯೂ ಪ್ರಶ್ನೆಕೇಳಿ. ಅವರಿಂದ ಉತ್ತರ ಪಡೆದು ಪ್ರಕಟಿಸುತ್ತೇವೆ
ಇನ್ನು ನೀವುಂಟು ಅವರುಂಟು.
ಅದರ ಮಧ್ಯೆ ಈ ಹಿಂದೆ ನಾನು ಬರೆದ ಒಂದು ಲೇಖನ ಓದಿ. ಡಾ ಪದ್ಮಾವತಿ ಅವರು ಹೇಳಲಿರುವ ಕಥೆಗಳಿಗೆ ಇದು ಒಳ್ಳೆಯ ಆರಂಭ ಕೊಟ್ಟೀತು..
-ಜಿ ಎನ್ ಮೋಹನ್
ಪ್ರಧಾನ ಸಂಪಾದಕ
++
ಹೇಗಿದ್ದ ಹೇಗಾದ ಗೊತ್ತಾ…
ಅವರ ಎದುರು ಕೂತ ನನ್ನ ಕಣ್ಣುಗಳು ಸಾವನ್ನು ಅರಸುತ್ತಾ ಇದ್ದಂತಿತ್ತು. ಬದುಕು ಎಂಬುದು ಬೆಟ್ಟಕ್ಕೆ ಮತ್ತೆ ಮತ್ತೆ ಕಲ್ಲು ಹೊರುವ ಶಿಕ್ಷೆಯಂತೆ ಕುಳಿತಿದ್ದೆ. ಕಾಮು, ಕಾಫ್ಕಾನ ಕಾದಂಬರಿಯ ನಾಯಕರು ಹೇಗಿರುತ್ತಾರೆ ಎಂಬುದು ನನ್ನನ್ನು ನೋಡಿದರೆ ಸಾಕು ಆ ಕ್ಷಣದಲ್ಲಿ ಗೊತ್ತಾಗಿ ಹೋಗುತ್ತಿತ್ತು. ಒಂದು ಮಾತು ಆಡಿದರೂ ಅದು ಯಾವುದೋ ನೀರಿಲ್ಲದ ಬಾವಿಯ ಆಳದಿಂದ ಹೊರಕ್ಕೆಳೆದ ಹಾಗಿರುತ್ತಿತ್ತು. ಒಂದೊಂದು ಶಬ್ದವೂ ನನ್ನ ಕೈಗೆ ಸಿಕ್ಕದೆ ಮತ್ತೆ ಮತ್ತೆ ತಪ್ಪಿಸಿಕೊಳ್ಳುವ ಆಟವಾಡುತ್ತಿತ್ತು. ಒಂದು ಹೆಜ್ಜೆ ಇಡಬೇಕು ಎನ್ನುವುದೇ ನನ್ನ ಅಂದಿನ ಒಂದು ಮಹತ್ವದ ಕೆಲಸವೇನೋ ಎಂಬಂತೆ ಬೆಳೆದು ಕೂರುತ್ತಿತ್ತು.
ಆದರೆ… ಆದರೆ…ನಾನು ಹಾಗಿರಲಿಲ್ಲವಲ್ಲ. ದುಃಖದಲ್ಲಿ ಸದಾ ಮಂದಹಾಸ ತೀಡಿಕೊಂಡು, ಜೊತೆಯಲ್ಲಿದ್ದವರ ಗಂಟುಮುಖಕ್ಕೂ ಒಂದಿಷ್ಟು ಮುಗುಳ್ನಗು ತೀಡುತ್ತಾ, ಬೆಟ್ಟವನ್ನು ಬೇಕಾದರೂ ಹೊತ್ತು ತಂದು ನಿನ್ನ ಮುಂದೆ ಬಿಸಾಡುತ್ತೇನೆ ಎನ್ನುವ ಉತ್ಸಾಹ ತೋರುತ್ತಾ, ಕಲ್ಲನ್ನು ಗುದ್ದಿ ಎಣ್ಣೆ ತೆಗೆಯುವವನಂತೆ ಆಡುತ್ತಾ, ‘ಏ , ಎಲ್ಲಿ ಹೋಗ್ತಿಯಾ ಇರೋ, ನೀನು ಹೋದ್ರೆ ಬೇಜಾರಾಗುತ್ತೆ’ ಅಂತ ಆಲ್ ಮೋಸ್ಟ್ ಎಲ್ಲರೂ ಹೇಳುವ ಹಾಗೆ ಇದ್ದವನು ನಾನೇನಾ…?
ಹೌದು ಅದು ನಾನೇನಾ…? ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟೆ. ಅವರು ಮುಗುಳ್ನಗು ಬೀರುತ್ತ ಕುಳಿತಿದ್ದರು. ಮಾತಾಡುವಾಗ ಒಂದು ತುಂಡು ಸಹ ಕ್ಲಿನಿಕಲ್ ಭಾಷೆ ಇರಲಿಲ್ಲ. ಆಗೀಗ ಜೋಕ್ ಕಟ್ ಮಾಡುತ್ತಿದ್ದರು. ಆ ಜೋಕ್ ಗೆ ಪಕ್ಕೆ ಹಿಡಿದು ನಕ್ಕುಬಿಡಬಹುದಾಗಿದ್ದ ನಾನು ‘ಅಯ್ಯೋ ನಗುವ ಸಂದರ್ಭ ಬಂತಲ್ಲ’ ಎಂದು ನೋವಿನಿಂದ ವಿಲಿವಿಲಿ ಒದ್ದಾಡುವಂತವನಾಗಿ ಹೋಗಿದ್ದೆ. ಅಷ್ಟು ನಗುತ್ತಿದ್ದರೂ ಅವರ ದೃಷ್ಟಿ ಎಂಬ ಹತಾರ ನನ್ನೊಳಗೆ ಇಳಿದು ತಪಾಸಣೆ ನಡೆಸುತ್ತಿದೆ ಎಂಬುದು ಗೊತ್ತಾಗಿ ಹೋಗಿತ್ತು. ನಾನು ಸಂಪೂರ್ಣ ಶರಣಾಗತನಾಗಿ ಹೋಗಿದ್ದೆ. ಇನ್ನು ನೀವುಂಟು,ನೀವು ಅದ್ದುವ ಹಾಲೋ ನೀರು ಯಾವುದರಲ್ಲಾದರೂ ಬೀಳಲು ಸಿದ್ಧ ಎನ್ನುವಂತೆ ಕುಳಿತುಬಿಟ್ಟಿದ್ದೆ.
ಅವರು ನನ್ನನ್ನು ಕಾಡಲಿಲ್ಲ. ಏನನ್ನೂ ಕೇಳಲಿಲ್ಲ. ನೆಪಕ್ಕೆ ಯಾವುದೋ ವಿಷಯ, ಮಧ್ಯೆ ಒಂದಷ್ಟು ಉಪಕಥೆ,…ಬ್ಲಡಿ ಮ್ಯಾನ್ ನಿನಗೇನಾಗಿದೆ ಎನ್ನುವಂತಹ ನೋಟ ಇಷ್ಟೆ. ಎದ್ದು ಬರೋವಾಗ ಒಂದಿಷ್ಟು ಗುಳಿಗೆ, ಹೇಗೆ ಬಳಸಬೇಕು ಎಂಬ ಬಗ್ಗೆ ಚುಟುಕು ಸಲಹೆ. ಅವರು ಖ್ಯಾತ ಮನೋವೈದ್ಯರು. ಎದುರಿಗೆ ಕೂತ ನಾನು ಬದುಕು ಎಂಬ ಬಸ್ ಸ್ಟಾಪ್ ನಲ್ಲಿ ಬಸ್ಸೂ ಸಿಗದೆ, ಹತ್ತಿಸಿಕೊಳ್ಳುವ ಆಟೋ ಸಹ ಬರದೆ, ಹೋಗಲಿ ಕೈ ತೋರಿಸಿದರೆ ಡ್ರಾಪ್ ಮಾಡುವ ಉದಾರ ಮನಸ್ಸಿನವರೂ ಇಲ್ಲದೆ… ಹಾಳಾಗಿ ಹೋಗಲಿ ಎಂದು ಆ ಬಸ್ ಸ್ಟಾಪ್ ನಿಂದ ಎದ್ದು ಹೋಗಲೂ ಸಾಧ್ಯವಾಗದೆ ಕುಳಿತವ.
‘ಹೇಗಿದ್ದ ಹೇಗಾದ ಗೊತ್ತ…ನಮ್ಮ ಚಿನ್ನಾರಿ ಮುತ್ತ’ ಹಾಡು ನಾನು ನನ್ನ ಬಗ್ಗೆನೇ ಹೇಳಿಕೊಳ್ಳಬೇಕೇನೋ. ಒಂದು ಉತ್ಸಾಹದ ಮೂಟೆ, ಕತ್ತರಿಸಿಕೊಳ್ಳಲು ಸಿದ್ಧವಾದ ತರಕಾರಿಯಂತಾಗಿ ಹೋಗಿತ್ತು.
ಕೆಲಸ ಸಿಗಲಿಲ್ಲ ಅಂತ ಅಂತಹ ಸ್ನಾತಕೋತ್ತರ ಪದವೀಧರೆ ಐದನೇ ಮಹಡಿಯಿಂದ ಹಾರಿ ಸತ್ತಳಂತೆ, ತನ್ನ ಮಾದಕ ಕಣ್ಣು, ತೊಡೆಗಳಲ್ಲಿ ಜಗತ್ತನ್ನೇ ಹಿಡಿದಿಟ್ಟಿದ್ದ ಸಿಲ್ಕ್ ಸ್ಮಿತಾಳಂತಹ ಸಿಲ್ಕ್ ಸ್ಮಿತಾ ಸಾವಿಗೆ ಶರಣಾದಳಂತೆ, ಕಲ್ಪನಾ ತನ್ನ ಆಭರಣವನ್ನೇ ಪುಡಿ ಮಾಡಿ ದೂರದ ಊರಲ್ಲಿ ಬದುಕು ತೊರೆದಳಂತೆ, ಅಂತಹ ಬೋಲ್ಡ್ ಬಜಾರಿ ಮಂಜುಳಾ ಸಾವು ಹುಡುಕುತ್ತ ಹೋದಳಂತೆ. ಬದುಕಿನಲ್ಲಿ ಸೋತವರೂ, ಇದ್ದ ಬದುಕನ್ನು ಜಿದ್ದಿನಿಂದ ಗೆದ್ದವರೂ ಯಾಕೆ ಆ ಸಾವಿನ ಚಕ್ರದಲ್ಲಿ ತಿರುಗಲು ಬಯಸುತ್ತಾರೆ. ಜಗತ್ತು ನಮ್ಮ ಮುಷ್ಠಿಯೊಳಗೇ ಇದ್ದರೂ, ಸಿರಿತನ ಮನೆ ಅಂಗಳದಲ್ಲಿ ಹೊರಳಾಡುತ್ತಿದ್ದರೂ, ಸಂಸಾರ ಸಂತಸದ ಕಡಲಲ್ಲಿ ತೇಲುತ್ತಿದ್ದರೂ ಸಾವಿನ ಚಕ್ರ ಹತ್ತುವ ಯೋಚನೆಯೊಂದು ಏಕೆ ಸುಳಿದು ಹೋಗುತ್ತದೆ.
ಆವು, ಈವು, ನಾವು, ನೀವು ಎನ್ನುವ ‘ನಾಕು ತಂತಿ’ ಯಲ್ಲಿ ಒಂದು ಆ ಕಡೆ ಈ ಕಡೆಯಾದರೂ ಹೀಗೇನೋ…? ನನ್ನ ಕಸಿನ್ ಎಸ್ ಎಸ್ ಎಲ್ ಸಿ ಬರೆದಿದ್ದ. ಶೇ. 92 ಅಂಕ ಬಂದಿತ್ತು. ಓಹ್ ! ಅಂತ ನಾವೆಲ್ಲ ಹರ್ಷೋದ್ಗಾರ ಮಾಡಿ ಸ್ವೀಟ್ಸ್ ಅಂಗಡಿಯತ್ತ ಹೆಜ್ಜೆಹಾಕಲು ಸಜ್ಜಾಗಿದ್ದರೆ ಆತನ ಕಣ್ಣಲ್ಲಿ ಮಾತ್ರ ದಳ ದಳ ನೀರು ಇಳಿಯುತ್ತಿತ್ತು. ಕಂಟ್ರೋಲ್ ಮಾಡಲಾಗದೇ ಎಲ್ಲರ ಎದುರೇ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಅವನು ಅಂದುಕೊಂಡ ಒಂದೈದಾರು ಅಂಕ ಅವನಿಗೆ ಕಡಿಮೆ ಆಗಿತ್ತು
‘ಅಂದುಕೊಂಡ ಎಲ್ಲವೂ ಅಂದುಕೊಂಡ ಹಾಗೆ’ ಅಗದಿದ್ದರೆ ಬಹುಶಃ ನಾವು ಕಾಮು, ಕಾಫ್ಕಾನ ಕತೆಗಳ ನಾಯಕರಾಗಿಬಿಡತ್ತೇವೇನೋ. ಬದುಕು ಎಂಬ ಗುಂಡುಕಲ್ಲನ್ನು ಕಾಲಿಗೆ ಕಟ್ಟಿಕೊಂಡು ರೇಸ್ ಗೆ ನಿಂತ ಹಾಗೆ…
ನನ್ನ ಗೆಳತಿಯೊಬ್ಬಳು ಶಿಕ್ಷಣದ ಹೊಸ ಕಾನ್ಸೆಪ್ಟ್ ಗಳ ಬಗ್ಗೆ ಮಾತನಾಡುತ್ತಿದ್ದಳು. ದೂರದ ಒಂದು ಶಾಲೆ ಮಕ್ಕಳಿಗೆ ಹೆಚ್ಚೆಚ್ಚು ಮಣ್ಣಿನಾಟ ಕಲಿಸುತ್ತಿತ್ತು. ಜೇಡಿಮಣ್ಣಿನಿಂದ ಗೊಂಬೆ ಮಾಡುವುದು ಹಾಗೂ ಅದನ್ನು ಸುಡುವುದು ಇದೇ ಒಂದು ಆಟ, ಹಾಗೆಯೇ ಬದುಕಿನ ಒಂದು ಪಾಠವಾಗಿತ್ತು.
ಜೇಡಿ ಮಣ್ಣಿನಲ್ಲಿ ಗೊಂಬೆ ಮಾಡುವುದು ಬದುಕಿನ ಒಂದು ಪಾಠ ಹೇಗಾಗಿಬಿಡುತ್ತೆ ಅಂತ ಪ್ರಶ್ನಿಸಿದೆ. ಅವಳು ಬಿಡಿಸಿಡುತ್ತಾ ಹೋದಳು. ಮಗು ಇಂತಹದೇ ಗೊಂಬೆ ಅದಕ್ಕೆ ಇಂತಹದೇ ಆಕಾರ ಇರಬೇಕು ಎಂಬ ಹುಮ್ಮಸ್ಸಿನಿಂದ ಹೊರಡುತ್ತದೆ. ಆದರೆ ಆ ಪುಟ್ಟ ಬೆರಳುಗಳಲ್ಲಿ ಮಣ್ಣು ತನಗೆ ಬೇಕಾದಂತೆ ಹೊರಳಿಕೊಳ್ಳುತ್ತದೆಯೋ ಹೊರತು ಮಗುವಿಗೆ ಬೇಕಾದಂತೆ ಅಲ್ಲ. ಗಣೇಶ ಮಡಲು ಹೊರಟು ಅದರ ಅಪ್ಪನನ್ನು ಮಾಡಿದ ಅನ್ನುವುದು ಅದಕ್ಕೇ. ಲೋಟ ಮಾಡಲು ಹೊರಟ ಮಗು ತಟ್ಟೆಗೆ ತೃಪ್ತಿ ಪಡಬೇಕಾಗುತ್ತದೆ. ಹುಡುಗಿ ಮಾಡಲು ಹೊರಟ ಮಗು ಶಿವಲಿಂಗ ಮಾಡಿ ಕೈಚೆಲ್ಲಬೇಕಾಗುತ್ತದೆ. ಈ ಗೊಂಬೆಗಳನ್ನು ಸುಡುವಾಗಲೂ ಅಷ್ಟೇ. ಬೇಕಾದ ಬಣ್ಣ ಮೂಡುವುದಿಲ್ಲ. ಇದರಿಂದ ಮಗು ಎಳವೆಯಲ್ಲೇ ತನ್ನ ಕೈಮೀರಿದ ಎಷ್ಟೋಸಂಗತಿಗಳು ಈ ಬದುಕಿನಲ್ಲಿವೆ ಎಂಬುದನ್ನು ಅರಿಯುತ್ತ ಹೋಗುತ್ತದೆ.ಇದು ಡಿಸಪಾಯಿಂಟ್ ಗಳನ್ನು ಗೆಲ್ಲುವತ್ತ ಮೊದಲ ಹಾಗೂ ಮಹತ್ವದ ಪಾಠ ಎನ್ನುತ್ತಿದ್ದಳು.
ಅರೆ ಹೌದಲ್ಲಾ… ಆ ಎಸ್ ಎಸ್ ಎಲ್ ಸಿ ಕಸಿನ್ ಗೂ ನಾನು ಇದೇ ಹೇಳಿದ್ದೆ. ಆದರೆ ಬೇರೆ ಭಾಷೆಯಲ್ಲಿ. ನಿನ್ನ ಮನೆಯೊಳಗಿನ ಸಂಗತಿ ನಿನ್ನ ಹಿಡಿತದಲ್ಲಿರುತ್ತದೆ. ಮನೆಯಾಚೆಗಿನ ಸಂಗತಿಗಳು ಹತ್ತು-ಹಲವರ ಕೈಯಲ್ಲಿರುತ್ತದೆ. ಇದು ನಮ್ಮ ಸೂತ್ರಕ್ಕೆ ಕುಣಿಯುವ ಸಂಗತಿಗಳಲ್ಲ ಎಂಬುದನ್ನು ನೆನಪಿಟ್ಟುಕೋ. ನೀನು ಮನೆ ಎಂಬ ಮುಚ್ಚಟೆಯ ಜಗತ್ತಿನಿಂದ ಈಗ ಸಮಾಜ ಎಂಬ ಲೋಕಕ್ಕೆ ಜಿಗಿಯುತ್ತಿದ್ದೀಯಾ ಎಂದಿದ್ದೆ.
ಹೀಗನ್ನುವಾಗ ನಾನೂ ಸಹಾ ನನ್ನ ಬಾಲ್ಯಕ್ಕೆ ಜಾರಿ ಹೋದೆ. ಹೈಸ್ಕೂಲ್ ನಲ್ಲಿ ಕಲಿಯುವಾಗ ಒಂದು ಸುಭಾಷಿತ ಹೇಳಿಕೊಟ್ಟಿದ್ದರು. ‘ಎಲೈ ಚಾತಕ ಪಕ್ಷಿಯೇ ಕಂಡಕಂಡಲ್ಲೆಲ್ಲ ಕಣ್ಣೀರಿಡಬೇಡ. ಏಕೆಂದರೆ ಆಗಸದಲ್ಲಿ ಹಲವು ಮೋಡಗಳಿರಬಹುದು. ಆದರೆ ಆ ಎಲ್ಲವೂ ಮಳೆಯಾಗಿ ಸುರಿಯುವುದಿಲ್ಲ’ ಅಂತ. ಆ ಸುಭಾಷಿತ ಅದು ಯಾಕೆ ನನ್ನೊಳಗೆ ಜಾಗ ಮಾಡಿಕೊಂಡು ಕುಳಿತುಬಿಟ್ಟಿತೋ ಏನೋ? ನಾನು ಮೌನಕ್ಕೆ ಶರಣಾದೆ. ನನ್ನ ಅನುಗಾಲದ ಕಷ್ಟಗಳೂ ಸಹ ನನ್ನೊಳಗೇ ಉಳಿದು ಹೋದವು. ನನ್ನ ಖುಷಿ ನನ್ನ ದುಃಖ ನಾನು ನಡೆದು ಬಂದ ಕಲ್ಲುಮುಳ್ಳಿನ ಹಾದಿ ಎಲ್ಲವೂ ನನ್ನೊಳಗೇ…
‘ಕೆಥಾರ್ಸಿಸ್’ ಅನ್ನುವ ಇನ್ನೊಂದು ಪಾಠ ನಾನು ಸಂವಹನ ತರಗತಿಯಲ್ಲಿದ್ದಾಗ ಕಲಿಯಬೇಕಾಗಿ ಬಂತು. ಒಳಗೆ ಅದುಮಿಟ್ಟದ್ದೆಲ್ಲ ಒತ್ತಡ ತಡೆಯದೆ ಸ್ಫೋಟಗೊಳ್ಳುತ್ತದೆ ಅಂತ ಅಷ್ಟೆ. ಹೌದಲ್ಲಾ!
ಆ ‘ಕೆಥಾರ್ಸಿಸ್’ ನನ್ನನ್ನು ಮನೋವೈದ್ಯರ ಮುಂದೆ ಕೂರಿಸಿತ್ತು. ಹಾಗೆ ಕೂರುವಾಗ ಹತ್ತು-ಹಲವು ಕಾರಣಗಳಿದ್ದವು. ‘ಏಣಿಯ ಎತ್ತರದಲ್ಲಿ ಪ್ರತಿಯೊಬ್ಬರೂ ಏಕಾಂಗಿ’ ಎನ್ನುವ ಮಾತು ನನ್ನ ಅಣ್ಣನದ್ದು. ಏಣಿ ಎತ್ತರದ ಕಷ್ಟ ಸುಖ ಆ ಎತ್ತರದ್ಲಲಿದ್ದವರಿಗೇ ಗೊತ್ತು.
ನನ್ನ ಕಲೀಗ್ ಒಬ್ಬರು ಹೇಳ್ತಾ ಇದ್ರು. ನೋಡಪ್ಪಾ, ಏಣಿಯ ಎರಡನೆಯದ್ದೋ, ಮೂರನೇದೋ ಮೆಟ್ಟಿಲಿಂದ ಕೆಳಗೆ ಬಿದ್ರೆ ಅಬ್ಬಬ್ಬಾ ಅಂದ್ರ ಬಟ್ಟೆ ಕೊಳೆಯಾಗುತ್ತೆ. ಧೂಳು ಜಾಡಿಸಿಕೊಂಡು ಮುಂದೆ ಹೋಗ್ತಾ ಇರಬಹುದು. ಆದ್ರೆ ಏಣಿ ತುದಿಯಿಂದ ಬಿದ್ರೆ ಮಾತ್ರ ಕಷ್ಟ. ಮೂಳೆ ಮುರಿಯೋದಂತೂ ಗ್ಯಾರೆಂಟಿ. ಅದೃಷ್ಟ ಇನ್ನೂ ಕೆಟ್ಟದಾಗಿದ್ರೆ ಪ್ರಾಣಾನೂ ಹೋಗ್ಬಹುದು ಅಂತ.
‘ನನ್ನೊಳಗಿನ ನಾನು’ ಬೇರೆಯವರತ್ತ ಬಿಚ್ಚದೆ ಹೋದಾಗ ಹೀಗೆಲ್ಲ ಆಗುತ್ತೇನೋ. ಆಗುತ್ತೇನೋ ಏನ್ಬಂತು ನಾನು ಹಾಗಾಗಿದ್ದಕ್ಕೆ ಅಲ್ವ ವೈದ್ಯರ ಮುಂದೆ ಸಾವಿನ ಮನೆಯ ಇನ್ವಿಟೇಷನ್ ಹಿಡಿದುಕೊಂಡವನ ಹಾಗೆ ಕುಳಿತದ್ದು.
ಈಗ ಆ ಕಡೆ ಈ ಕಡೆ ಕಣ್ಣು ಹೊರಳಿಸ್ತೀನಿ. ನಾನು ಎದ್ದು ಬಂದ ಜಾಗದಲ್ಲಿ ಕುಳಿತಿರೋರು, ನನ್ನ ಥರದ ಸೀಟಲ್ಲೇ ಒದ್ದಾಡ್ತಿರೋರು, ಐಟಿ-ಬಿಟಿ ಸಂಬಳ ಎಣಿಸ್ತಾ ಇರೋರು, ಸಮಾಜ ಸುಧಾರಿಸ್ಬೇಕು ಅಂತ ಇದ್ದದ್ದೆಲ್ಲಾ ತೊರೆದು ಬಂದವರು, ಡ್ರೀಂ ಹುಡುಕ್ಕೊಂಡು ಹೊರಟಿದ್ದೀನಿ ಅಂದವರು ಎಲ್ಲಾರ ಕೈಯಲ್ಲೂ ಆ ಇನ್ವಿಟೇಷನ್ ಇದೆ.
ಮನೆಯೊಳಗಿನ ಕತ್ತಲು, ಮನದಾಳದೊಳಗಿನ ಕತ್ತಲು ನಮ್ಮನ್ನ ಇಂಚಿಂಚೇ ಕಾಮುವಿನ ಲೋಕಕ್ಕೆ ಎಳೀತಾ ಇದೆ. ಅದಕ್ಕೇ ಆತ್ಮಸಂಗಾತಕ್ಕೆ ಒಂದು ಜೀವ ಬೇಕು. ಅದು ಗೆಳೆಯರಾಗಿರದಿದ್ದರೆ, ಕನಿಷ್ಠ ಮನೋವೈದ್ಯರಾದರೂ ಆಗಿರಬೇಕು.






Tumba tumba tumba aathuradinda kaythiddini
ಆದಷ್ಟು ಬೇಗ ಅಂಕಣ ಬರಲಿ…ಮನಸಿನ ರೋಗದ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆ ದೂರವಾಗಲಿ…
ಬದುಕಿನ ಓಟದಲ್ಲಿ ಹೀಗೊಂದು ನಿಲ್ದಾಣ ಸಿಕ್ಕಿಬಿಡಬಹುದೇನೋ ಎನ್ನುವ ಆತಂಕ ಒಮ್ಮೆ ಮಿಂಚಿ ಮರೆಯಾಯಿತಾದರೆ… ಬರಹ ನಂಗೆ ಇಷ್ಟವಾಗಿದೆ.
ಆರಂಭವಾಗುವ ಅಂಕಣಕ್ಕೆ ಕಾಯುವಂತೆ ಮಾಡಿದೆ ಪೀಠಿಕೆ.
ಪ್ರಿಯ ಮೋಹನ್, ವರ್ತಮಾನದ ಬದುಕು ಎಲ್ಲವನ್ನೂ ನುಂಗಿ ನೀರು ಕುಡಿಯುತ್ತಾ ಇರುವಾಗ, ಒತ್ತಡದಲ್ಲಿ ಬದುಕುತ್ತಿರುವ ಇಂದಿನ ಯುವ ಚೇತನಗಳಿಗೆ ಇಂತಹದ್ದೊಂದು ಆಪ್ತ ಸಂವಾದ ಅವಶ್ಯಕವಾಗಿ ಬೇಕಿತ್ತು. ಈ ಕುರಿತು ಚಿಂತಿಸಿದ ನಿಮಗೆ, ಅವಧಿ ಬಳಗಕ್ಕೆ ವಂದನೆಗಳು.
ಜಗದೀಶ್ ಕೊಪ್ಪ, ಧಾರವಾಡ
ಸೈಕಾಲಜಿಯ ಸಾವಿರದ ಒಂದು ಭಾಗದ ಓದನ್ನು ನಾನೂ ಕಾಣಲು ಪ್ರಯತ್ನಿಸಿದ್ದೇನೆ. (ಅಥವಾ ಡಿಗ್ರಿ ಸೈಕಾಲಜಿ ಓದಿನಿಂದ ಪ್ರಯತ್ನಿಸಲ್ಪಟ್ಟಿದ್ದೇನೆ). ಮತ್ತು ಇಂದು ನಾವು ನೀವೇ ಹೇಳಿದಂತೆ ಮನೆಗೊಂದು ಮನಃಶಾಸ್ತ್ರಜ್ಞ ಅತಿ ಮುಖ್ಯ ಎಂಬುವ ಕಾಲದಲ್ಲಿ ಕಾಲಿಟ್ಟಾಗಿದೆ. ಇಂತಹ ಸಂದರ್ಭದಲ್ಲಿ ಬಹಳ ಒಳ್ಳೆಯ ಮತ್ತು ಸಕಾಲಿಕ ಪ್ರಯತ್ನ ಈ ಅಂಕಣ. ಇದನ್ನು ಎಲ್ಲರೂ ಓದುವಂತಾಗಲಿ.