ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಕೆ ಎಸ್ ಚೈತ್ರಾ ಹೊಸ ಅಂಕಣ ಆರಂಭ – ‘ದಂತ’ ಕಥೆಗಳು

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

1

ಮಣಿಪಾಲಕ್ಕೆ ಮಲೆನಾಡಿನ ಹುಡುಗಿ

‘ಮೆಡಿಕಲ್ ಸಿಗಲಿಲ್ಲವಾ? ಹೋಗ್ಲಿ ಡೆಂಟಲ್ ಆದ್ರೂ ಸಿಕ್ತಲ್ಲ!’
‘ಹೆಣ್ಮಕ್ಕಳಿಗೆ ಶಕ್ತಿ ಕಡಿಮೆಯೇ, ಈ ಡೆಂಟಲ್ ಒಳ್ಳೆಯದಾಯ್ತು, ಅಂಥ ಎಮರ್ಜೆನ್ಸಿ ಇರಲ್ಲ.’
‘ಹಲ್ಲಿನ ಕೆಲಸ ಅಂದ್ರೆ ಹೆಚ್ಚಿರಲ್ಲ ; ನೋವು ಬಂದ್ರೆ ಕಿತ್ತು, ಡೆಂಚರ್ ಮಾಡಿದ್ರೆ ಆಯ್ತು’
ಇವೆಲ್ಲವೂ ತಪ್ಪು!! ಸರಿಯಾಗಿ ಎರಡೂವರೆ ದಶಕಗಳ ಹಿಂದೆ ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗೆಯಿಂದ ಕರಾವಳಿಯ ಮಣಿಪಾಲಕ್ಕೆ ನಾನು ದಂತವೈದ್ಯಕೀಯದ ಸೀಟು ಪಡೆದಾಗ ಕೇಳಿಬಂದ ಮಾತುಗಳಿವು. ಆಗಷ್ಟೇ ಪಿಯುಸಿ ಮುಗಿಸಿ ಮೆಡಿಕಲ್ ಸೀಟ್ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದ, ಹರೆಯದ ಹುಡುಗಿಯಾಗಿದ್ದ ನಾನೂ ಈ ಮಾತುಗಳನ್ನು ಬಲವಾಗಿ ನಂಬಿದ್ದೆ. ಆದರೆ ಇಪ್ಪತ್ತೈದು ವರ್ಷಗಳ ಅಧ್ಯಯನ- ಅನುಭವ ಇವೆಲ್ಲವೂ ತಪ್ಪು ಎಂಬುದನ್ನು ತಿಳಿಸಿದೆ, ತೋರಿಸಿದೆ.

ನಾವು ವೃತ್ತಿಪರ ಕೋರ್ಸ್ಗಳಿಗೆ ಸೇರುವಾಗ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಎಂಬ ಎರಡೇ ಆಯ್ಕೆಗಳು. ಅದರಲ್ಲಿ ಬಹಳ ಕಡಿಮೆ ಸೀಟುಗಳಿದ್ದ ಮೆಡಿಕಲ್ ಸಿಗದೇ ಹೋದಾಗ ಹೇಗೋ ಪೇಶೆಂಟ್ ನೋಡುವ ಡೆಂಟಲ್ ಸೇರಿಕೊಳ್ಳುತ್ತಾರೆ ಎಂಬುದು ಹೆಚ್ಚಿನವರಲ್ಲಿ ಸತ್ಯವಾಗಿತ್ತು. ಆದರೆ ಡೆಂಟಲ್ ಎಂದರೆ ಮೆಡಿಕಲ್‌ಗಿಂತ ಸ್ವಲ್ಪ ಕಡಿಮೆ ದರ್ಜೆ ಎಂಬ ಮನೋಭಾವ ಜನರಲ್ಲಿತ್ತು. ಕಾರಣ ಅದರಲ್ಲಿ ಸರ್ಜರಿ- ಎಮೆರ್ಜೆನ್ಸಿ ಯಾವುದೂ ಇಲ್ಲ; ಹಾಗಾಗಿ ಆದಾಯವೂ ಕಡಿಮೆ ಎಂಬ ತಿಳಿವಳಿಕೆ. ಆದರೆ ನಾನು ಮಣಿಪಾಲಕ್ಕೆ ಹೋದ ಕೆಲವೇ ದಿನಗಳಲ್ಲಿ ನಮ್ಮ ಸಮಾಜ, ಸುತ್ತಲಿನ ಪರಿಸರ ಹೇಗೆ ನಮ್ಮ ಅಭಿಪ್ರಾಯವನ್ನು ರೂಪಿಸುತ್ತದೆ ಎಂಬುದು ಅರಿವಾಯಿತು.

ಮಣಿಪಾಲದಲ್ಲಿ ದೇಶ-ವಿದೇಶಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ಮಲೇಷ್ಯಾ, ಭೂತಾನ್, ಮಾರಿಶಿಯಸ್, ನೇಪಾಳ, ಅರಬ್ ರಾಷ್ಟçಗಳ ಜತೆ ನೆರೆಯ ರಾಜ್ಯ ಕೇರಳದ ವಿದ್ಯಾರ್ಥಿಗಳು ಹೆಚ್ಚು. ಶಿವಮೊಗ್ಗ ಬಿಟ್ಟರೆ ನೋಡಿದ್ದ ದೊಡ್ಡ ಊರು ಬೆಂಗಳೂರು ಎನ್ನುವ ನನಗೆ ಇವರೆಲ್ಲರೂ ಬೆರಗು-ಕುತೂಹಲ. ಹಾಗೇ ಮಾತನಾಡುವಾಗ ಅವರಲ್ಲಿ ಬಹಳಷ್ಟು ಜನರ ಮೊದಲ ಆಯ್ಕೆ ದಂತವಿಜ್ಞಾನ ಎಂದು ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಅಲ್ಲಿ ಜನರಿಗೆ ಡೆಂಟಿಸ್ಟ್ಗಳ ಅಂದರೆ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ನೀಡುವ ಅವಶ್ಯಕತೆ ಎಷ್ಟಿದೆ ಎಂದರೆ ಸರ್ಕಾರವೇ ಅವರ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿ, ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೇರೆ ದೇಶಗಳಿಗೆ ಕಳಿಸುತ್ತದೆ.

ಅಲ್ಲಿ ಶಿಕ್ಷಣ ಪಡೆದ ನಂತರ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಅದಷ್ಟೇ ಅಲ್ಲ ವಿದ್ಯಾರ್ಥಿಗಳ ಆಸಕ್ತಿ ಮೇಲೆ ಅವರಿಗೆ ವಿಜ್ಞಾನ, ಕಲೆ, ವಾಣಿಜ್ಯ, ಹೋಟೆಲ್ ಮ್ಯಾನೆಜ್ ಮೆಂಟ್, ಪ್ರವಾಸೋದ್ಯಮ, ಸಮೂಹ ಮಾಧ್ಯಮ – ಹೀಗೆ ಅದೆಷ್ಟು ಬಗೆಯ ಆಯ್ಕೆಗಳಿತ್ತು ಎಂದರೆ ಆ ಸಮಯಕ್ಕೆ ನನಗೆ ಊಹಿಸಲು ಅಸಾಧ್ಯವಾಗಿತ್ತು.

ನನ್ನ ಪುಣ್ಯಕ್ಕೆ ನನಗೆ ದಂತವಿಜ್ಞಾನ ಮೊದಲಿನಿಂದಲೂ ಆಸಕ್ತಿಯಿದ್ದ ಕ್ಷೇತ್ರ; ಶಿವಮೊಗ್ಗೆಯ ಪ್ರಸಿದ್ಧ ದಂತ ವೈದ್ಯ ಡಾ. ಮಂಜುನಾಥ್ ಅವರ ಬಳಿ ಸಣ್ಣ ಪುಟ್ಟ ಚಿಕಿತ್ಸೆಗಾಗಿ ಹೊಗುತ್ತಿದ್ದೆವು. ಒಮ್ಮೆ ಹೀಗೆಯೇ ಹೋದಾಗ ಥಟ್ಟನೇ ನನ್ನ ಸಹಪಾಠಿಯೊಬ್ಬಳು ಸಿಕ್ಕಿದ್ದಳು. ಅವಳ ಮುಂದಿನ ಹಲ್ಲುಗಳು ಹುಳುಕಾಗಿ ಕಪ್ಪಾಗಿ ಅನೇಕ ವರ್ಷಗಳೇ ಕಳೆದಿದ್ದವು. ಹೈಸ್ಕೂಲಿನಲ್ಲಿ ಆಕೆ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಕಾಲೇಜಿಗೆ ಬಂದಾಗಲಂತೂ ‘ಬಾಯಿ ತೆರೆದರೆ ದಾಳಿಂಬೆ ಬೀಜವಲ್ಲ, ಕಪ್ಪು ನೇರಳೆ’ ಎಂದು ಅಣಕಿಸುತ್ತಿದ್ದರು. ನಮಗೆ ಆಗ ಗೊತ್ತಿದ್ದ ಫಿಲ್ಲಿಂಗ್ ಎಂದರೆ ಸಿಮೆಂಟ್ ಅಥವಾ ಬೆಳ್ಳಿ ತುಂಬಿಸುವುದು ಮಾತ್ರ. ಆದರೆ ಈ ಹುಡುಗಿ ಒಳಹೋದವಳು ಹೊರಗೆ ಬಂದು ನಾನು ಈ ಹಿಂದೆ ಎಂದೂ ನೋಡಿರದಷ್ಟು ದೊಡ್ಡದಾಗಿ ಹಲ್ಲು ತೋರಿಸಿ ನಕ್ಕಿದ್ದಳು. ನೋಡಿದರೆ ಮುತ್ತಿನಂಥ ಹಲ್ಲು, ನನಗೆ ಆಕ್ಷಣಕ್ಕೆ ಈ ಡಾ. ಮಂಜುನಾಥ್ ಮೆಜಿಶೀಯನ್ ಎನ್ನಿಸಿತ್ತು. ನನ್ನ ಹಲ್ಲು ತೋರಿಸಲು ಹೋದಾಗ ಆತ್ಮೀಯರಾದ ಅವರನ್ನು ಈ ಬಗ್ಗೆ ಕೇಳಿದಾಗ ಅದು ಹೊಸದಾಗಿ ಬಂದಿರುವ ಹುಳುಕು ತುಂಬುವ ಕಾಂಪೋಸಿಟ್ ಎಂಬ ವಸ್ತು. ಹಲ್ಲಿಗೆ ಅಂಟಿಸಿ ವಿಶೇಷ ಬೆಳಕು ಹಾಯಿಸಿದರೆ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ ಎಂದು ವಿವರಿಸಿ ಪುಟ್ಟ ಪ್ರಾತ್ಯಕ್ಷಿಕೆ ನೀಡಿದ್ದರು. ನನಗೆ ಆದಿನ ರಾತ್ರಿ ಮಲಗಿದರೂ ಕಪ್ಪು ನೇರಳೆ- ಬಿಳಿ ಮುತ್ತಾಗಿದ್ದದ್ದೇ ಕನಸು…ಮನಸ್ಸಿನಾಳದಲ್ಲಿ ಕಲೆ-ವಿಜ್ಞಾನ ಎರಡೂ ಸೇರಿದ ಈ ವೃತ್ತಿ ಮಜಾ ಎನಿಸಿತ್ತು. ಅದಕ್ಕೆ ಸರಿಯಾಗಿ ಮೆಡಿಕಲ್ ಸ್ವಲ್ಪದರಲ್ಲಿ ತಪ್ಪಿದಾಗ ದಂತವಿಜ್ಞಾನವನ್ನು ಖುಷಿಯಿಂದಲೇ ಆರಿಸಿಕೊಂಡಿದ್ದೆ; ಅಪ್ಪ-ಅಮ್ಮ ನಿನ್ನಿಷ್ಟ ಎಂದಿದ್ದರು. ಆದರೆ ಒಂದೊಮ್ಮೆ ಆಸಕ್ತಿ ಇರದಿದ್ದರೆ, ಜನರ ಮಾತುಗಳನ್ನೇ ನಂಬಿದ್ದರೆ, ಅಪ್ಪ-ಅಮ್ಮ ಒತ್ತಡ ಹೇರಿದ್ದರೆ?? ಓದಿದ ಮೇಲೆ ವೃತ್ತಿ ಕೈಗೊಳ್ಳುವುದು ಅನಿವಾರ್ಯವಾಗಿತ್ತು; ಆದರೆ ಕಷ್ಟಪಟ್ಟು ಮಾಡುತ್ತಿದ್ದೆ ಹೊರತು ಇಷ್ಟಪಟ್ಟಲ್ಲ ಎಂದು ಅನಿಸುತ್ತದೆ. ಒಟ್ಟಿನಲ್ಲಿ ಆಸಕ್ತಿಯ ಮೇಲೆ ವೃತ್ತಿಯ ಆಯ್ಕೆಯೇ ಹೊರತು ಅದು ಸಿಗಲಿಲ್ಲ ಇದು ಎಂದಲ್ಲ ಎಂಬ ಸತ್ಯ ಅರಿವಾಗಿತ್ತು.
ಹೆಣ್ಮಕ್ಕಳಿಗೆ ಶಕ್ತಿ ಕಡಿಮೆ ಏಕೆಂದರೆ ದೈಹಿಕವಾಗಿ ಹುಡುಗರು ಸಮರ್ಥರು ಎಂಬುದು ಸತ್ಯವೇ. ಹಾಗಾಗಿ ಮೊದಲ ಬಾರಿ ಹಲ್ಲು ಕೀಳಬೇಕಾದರೆ ಒಳಗೊಳಗೇ ಹೆದರಿಕೆ. ನನ್ನ ಬ್ಯಾಚಿನಲ್ಲಿ ಇದ್ದವರೆಲ್ಲಾ ಹುಡುಗರು..ಆಳ್ತನದಲ್ಲಿ ಜೋರಾಗಿರುವವರು.

ಹೀಗಾಗಿ ಕ್ಲಾಸಿನಲ್ಲಿ ಜಾಣೆ ಎನಿಸಿಕೊಂಡಿದ್ದ ನಾನು ಈಗ ಪ್ರಾಯೋಗಿಕವಾಗಿ ಹಿಂದುಳಿಯುತ್ತೇನೋ ಎಂಬ ಅಳುಕು. ಆದರೆ ಪ್ರೊಫೇಸರ್ ಹೇಳಿದಂತೆ ಮಾಡಿ ಹಲ್ಲು ತೆಗೆದವರಲ್ಲಿ ನಾನು ಎರಡನೆಯವಳು. ಬೇರೆಯವರಿಗಿರಲಿ, ಸ್ವತಃ ನನಗೇ ಆಶ್ಚರ್ಯ. ಅಷ್ಟರಲ್ಲಿ ಪ್ರೊಫೆಸರ್ ವಿವರಿಸಿದ್ದರು ‘ ಹಲ್ಲು ತೆಗೆಯಲು ಶಕ್ತಿ ಬೇಕು ನಿಜ. ಮಾತ್ರವಲ್ಲ ಗಂಟೆಗಟ್ಟಲೇ ಬಗ್ಗಿ ಕುಳಿತು ಸೂಕ್ಷ್ಮವಾದ ಕೆಲಸ ಮಾಡುವಾಗ ದೈಹಿಕ- ಮಾನಸಿಕ ಸಾಮರ್ಥ್ಯ ಎರಡೂ ಬೇಕು. ಆದರೆ ಶಕ್ತಿ ಎಂದರೆ ಬಲ ಪ್ರಯೋಗ ಮಾತ್ರವಲ್ಲ! ಹಾಗೆ ಮಾಡಿದರೆ ಹಲ್ಲು ತೆಗೆಯುವುದಲ್ಲ, ಮುರಿಯುವುದೇ ಹೆಚ್ಚು. ಅದನ್ನು ಯಾರೂ ಮಾಡಬಹುದು. ಅಗತ್ಯವಿರುವಷ್ಟು ಮಾತ್ರ ಶಕ್ತಿ ಹಾಕಿ ಸರಿಯಾದ ಸಾಧನಗಳನ್ನು ಬಳಸಿ, ರೋಗಿಗೆ ಆದಷ್ಟೂ ಕಡಿಮೆ ತೊಂದರೆಯಾಗುವ ರೀತಿಯಲ್ಲಿ ಹಲ್ಲು ತೆಗೆಯುವುದು ಮುಖ್ಯ. ಬಲಪ್ರಯೋಗ ಹೆಚ್ಚಿದಷ್ಟೂ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಹೆಚ್ಚು. ರೋಗಿಗೆ ಊತ, ನೋವು, ಹಲ್ಲು ತುಂಡಾಗುವುದು, ರಕ್ತಸ್ರಾವ ಎಲ್ಲವೂ ಹೆಚ್ಚಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಎಮರ್ಜೆನ್ಸಿಯೂ ಆಗಬಹುದು. ಹಾಗಾಗಿ ಶಕ್ತಿಗಿಂತ ಸರಿಯಾದ ಟೆಕ್ನಿಕ್ ಮತ್ತು ತಾಳ್ಮೆ ಮುಖ್ಯ ಇದನ್ನು ಯಾವಾಗಲೂ ನೆನಪಿಡಿ. ತಾವು ಗ್ ಎಂದು ಬೀಗುವ ಹುಡುಗರಿಗೆ ಗೊತ್ತಿರಲಿ ಹುಡುಗಿಯರು ಮೆಂಟಲಿ ಸ್ಟಾçಂಗ್ ಮತ್ತು ಹಿಡಿದ ಕೆಲಸ ಮುಗಿಯುವವರೆಗೆ ಬಿಡುವುದಿಲ್ಲ. ಸೋ, ಯು ಡೂ ಹ್ಯಾವ್ ಟಫ್ ಕಾಂಪಿಟೇಶನ್ ’. ಸ್ವಲ್ಪ ಸಮಾಧಾನವಾದರೂ ಹಾಗಾದರೆ ಈ ಕೆಲಸ ಸುಲಭವಲ್ಲ, ಶಕ್ತಿ ಸಾಲಲ್ಲ ಎಂಬ ವಿನಾಯಿತಿ ಸಿಗುವುದಿಲ್ಲ ಎಂಬ ಸತ್ಯದ ಅರಿವಾಗಿತ್ತು.

ಹಲ್ಲಿನ ಕೆಲಸ ಅಂದ್ರೆ ಹೆಚ್ಚಿರಲ್ಲ, ಹಲ್ಲು ಕಿತ್ತು ಕಟ್ಟೋದು ಎನ್ನುವುದರ ಜತೆ ಕೆಲವು ಕುಹಕಿಗಳು ಕಂಡವರ ಬಾಯಿಗೆ ಕೈಯಿಟ್ಟು, ಹಲ್ಕಟ್ ಡಾಕ್ಟರ್ ಆಗೋದಾ ಎಂದೂ ವ್ಯಂಗ್ಯವಾಡುತ್ತಿದ್ದರು. ಹಲ್ಲುನೋವು-ಡೆಂಚರ್‌ಗಷ್ಟೇ ಡೆಂಟಿಸ್ಟ್ ಭೇಟಿಯ ಕಾಲ ಮುಗಿದು ಬಹಳ ವರ್ಷಗಳಾಯಿತು. ಬೇರೆ ಬೇರೆ ಅಗತ್ಯಗಳಿಗೆ ತಕ್ಕದಾಗಿ ಒಂಬತ್ತು ವಿವಿಧ ಶಾಖೆಗಳಿವೆ. ಇದಲ್ಲದೇ ಸೌಂದರ್ಯವರ್ಧನೆ ಕೂಡಾ ಮುಖ್ಯ ಪಾತ್ರ ವಹಿಸುವುದರಿಂದ ಕಾಸ್ಮೆಟಿಕ್ ಡೆಂಟಿಸ್ಟಿ ಬಲು ಜನಪ್ರಿಯ.

ಹೀಗಾಗಿ ದಂತವಿಜ್ಞಾನ ಎಂದರೆ ಬರೀ ಹಲ್ಲು ತೆಗೆಯುವ-ಕಟ್ಟುವ ಕೆಲಸವಲ್ಲ. ಹಾಗೆಯೇ, ಹಲ್ಕಟ್ ಎಂದು ಕುಹಕವಾಡುತ್ತಿದ್ದವರ ಗಮನಕ್ಕೆ; ಹಲ್ಲು ಮಾತ್ರವಲ್ಲ ಏನನ್ನಾದರೂ ಕಟ್ಟುವ ಕೆಲಸ ಕಷ್ಟದ್ದು ಮತ್ತು ಮಹತ್ವದ್ದು ; ಮುರಿಯುವ ಕೆಲಸ ಅತೀ ಸುಲಭ. ಅದರಂತೆಯೇ ಕಂಡವರ ಜೇಬಿಗೆ ಕೈ ಹಾಕಿ ಹಣ ಕೀಳುವುದರ ಬದಲು ತಮ್ಮ ಬಳಿ ಬಂದ ರೋಗಿಗಳ ಬಾಯಲ್ಲಿ ಕೆಲಸ ಮಾಡಿ ‘ಹಲ್ಲು ಕಟ್ಟುವ’ ಡೆಂಟಿಸ್ಟ್, ಆರೋಗ್ಯ ರಕ್ಷಕರು!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

27 March, 2022

2 Comments

  1. T S SHRAVANA KUMARI

    ಒಳ್ಳೆಯ ಪೀಠಿಕೆ

  2. Krishna R Bhat

    ಕನ್ನಡದಲ್ಲಿ ದಂತ ವೈದ್ಯರು ತಮ್ಮ ಅನುಭವಗಳನ್ನು ಬರೆದುಕೊಂಡದ್ದು ತುಂಬಾ ಕಡಿಮೆ. ಎಂದಿನಂತೆ ಚೆನ್ನಾಗಿ ಬರೆಯುತ್ತಿದ್ದೀರಾ. ಶುಭವಾಗಲಿ – ಕೃಷ್ಣ ಭಟ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading