ಡಾ ಕೆ ಎಸ್ ಚೈತ್ರಾ ಅಂಕಣ – ಬಂದ್‌ ನಲ್ಲಿ ಬಾಂಡಿಂಗ್!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

16

ಕರೋನಾ  ಸಲುವಾಗಿ  ದೇಶವೇ ಲಾಕ್‌ಡೌನ್‌ನಲ್ಲಿ ಇರುವಾಗ ನಮ್ಮ ಹಾಸ್ಟೆಲ್ ದಿನಗಳ  ನೆನಪು ನುಗ್ಗಿ ಬರುತ್ತಿತ್ತು. ಮಣಿಪಾಲದಲ್ಲಿ  ಮೆಡಿಕಲ್, ಡೆಂಟಲ್, ಎಮ್‌ಎಸ್‌ಸಿ, ಫಾರ್ಮಸಿ ಹೀಗೆ  ವಿವಿಧ ಕೋರ್ಸ್ ಗಳಿಗೆ ಕಾಲೇಜು  ಬೇರೆ  ಇದ್ದರೂ ಹಾಸ್ಟೆಲ್‌ಗಳಲ್ಲಿ  ಪ್ರತ್ಯೇಕ  ವ್ಯವಸ್ಥೆ ಇರಲಿಲ್ಲ. ಎಲ್ಲಾ ಕೋರ್ಸ್ ಗಳ ಹುಡುಗಿಯರೂ  ಒಟ್ಟಿಗೇ  ಇರಬೇಕಿತ್ತು. ಪ್ರತಿಯೊಬ್ಬರಿಗೂ ತಮ್ಮದು  ಹೆಚ್ಚಿನ  ಗ್ರೇಡ್  ಎಂಬ  ಭಾವನೆ. ಇದಲ್ಲದೇ  ಉತ್ತರ ಭಾರತ, ದಕ್ಷಿಣ ಭಾರತ, ಮಲೇಶ್ಯಾ, ಸೌದಿ, ನೇಪಾಳ ಹೀಗೆ ಜಗತ್ತಿನ  ಎಲ್ಲೆಡೆಯಿಂದ  ಬಂದ  ಹುಡುಗಿಯರಿದ್ದರು. ದಕ್ಷಿಣ ಭಾರತದವರಲ್ಲೇ  ಮಲೆಯಾಳಿ, ಆಂಧ್ರ, ತಮಿಳು ಮತ್ತು ಕನ್ನಡ ಪಂಗಡ.  ಎಲ್ಲರದ್ದೂ  ತಮ್ಮ ತಮ್ಮದೇ  ಗುಂಪು  ಮತ್ತು  ತಾವೇ ಶ್ರೇಷ್ಠರೆಂಬ ಹೆಮ್ಮೆ. ಊಟ-ತಿಂಡಿಗೆ ಮೆಸ್‌ಗೆ  ಹೋದರೂ  ಅಷ್ಟೇ.. ತೆಲುಗಿನವರು ಪಪ್ಪು , ಮಲೆಯಾಳಿಗಳು ಪಾಲ್ ಪಾಯಸ, ತಮಿಳಿನವರು ಪೊಂಗಲ್, ಪಂಜಾಬಿಗಳು ಪರಾಠ ಹೀಗೆ ತಮ್ಮೂರಿನ  ರುಚಿ ಬೆಸ್ಟ್ ಎನ್ನುತ್ತಾ  ಇತರರ ಬಗ್ಗೆ  ಒಂದು ರೀತಿಯ ಅಸಹನೆ ತೋರಿಸುತ್ತಿದ್ದರು.  ಒಟ್ಟಿನಲ್ಲಿ  ಹೇಳುವುದಾದರೆ ಹಾಸ್ಟೆಲ್  ಒಂದು, ಗುಂಪು ನೂರೊಂದು!

ವಾರ್ ರೂಂ !

ಎಲ್ಲಾ  ಗುಂಪುಗಳ  ನಡುವೆ  ಜಗಳ- ಹೊಡೆದಾಟ ನಡೆಯುತ್ತಿರಲಿಲ್ಲ; ಆದರೆ  ಪರಸ್ಪರ  ಸಿಕ್ಕಾಗ ಹಲೋ, ಹಾಯ್, ಬಾಯ್‌ಗಷ್ಟೇ  ಪರಿಚಯ ಮೀಸಲು. ಆಟ-ಪಾಠ- ಊಟ- ಓಡಾಟ ಎಲ್ಲವೂ  ತಂತಮ್ಮ  ಗುಂಪಿನೊಂದಿಗಷ್ಟೇ  ನಡೆಯುತ್ತಿತ್ತು. ಅನೇಕ ವರ್ಷಗಳಿಂದ ಇದು ಹೀಗೆಯೇ  ನಡೆದು ಬಂದಿತ್ತು, ನಮ್ಮ ಕಾಲದಲ್ಲೂ  ಮುಂದುವರಿದಿತ್ತು. ಟಿವಿ ರೂಮನ್ನು ವಾರ್ ರೂಂ ಎಂದೇ ಕರೆಯುತ್ತಿದ್ದರು. ಇಡೀ ಹಾಸ್ಟೆಲ್ಲಿಗೆ ಒಂದು ಟಿವಿ ರೂಮು.ಅಲ್ಲೊಂದು ಸುಮಾರಾಗಿ ದೊಡ್ಡದಾದ ಟಿವಿ. ಇಂಗ್ಲೀಷ್ ಮತ್ತು ಹಿಂದಿಯ ಕೆಲವು ಛಾನೆಲ್ ಗಳು ಬರುತ್ತಿದ್ದವು.  ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಹಿಂದಿ ನೋಡುವುದು ಇಷ್ಟವಿರಲಿಲ್ಲ; ಹೆಚ್ಚಿನವರಿಗೆ ಅರ್ಥವೂ ಆಗುತ್ತಿರಲಿಲ್ಲ. ಆದರೂ ಹಿಂದಿ ಸಿನಿಮಾ ಹೇಗಾದರೂ ನೋಡುತ್ತಿದ್ದರು. ಹಿಂದಿ ನ್ಯೂಸ್, ಸೀರಿಯಲ್ ಮಾತ್ರ ಸಿಕ್ಕಾಪಟ್ಟೆ ಬೋರ್ ಎನ್ನುತ್ತಿದ್ದರು. ಉತ್ತರ ಭಾರತದ ಹುಡುಗಿಯರಿಗೆ  ಸೀರಿಯಲ್ ಎಂದರೆ ಪಂಚಪ್ರಾಣ. ನ್ಯೂಸ್ ಅಂದರೆ ಅಷ್ಟಕ್ಕಷ್ಟೇ. ಆದರೆ ಹಠಕ್ಕೆ ಬಿದ್ದು ನ್ಯೂಸ್ ಕೂಡಾ ಹಿಂದಿಯದ್ದೇ ನೋಡಬೇಕು ಎಂದು ವಾದ ಮಾಡುತ್ತಿದ್ದರು.ಎಂದಿನಂತೆ ಹಿಂದಿ-ಇಂಗ್ಲೀಷ್ ಎರಡೂ ಬರುತ್ತಿದ್ದ ಕನ್ನಡಿಗರಾದ ನಮಗೆ ಯಾವುದಾದರೂ ಪರವಾಗಿರಲಿಲ್ಲ. ಸ್ವಭಾವತಃ ಯಾವುದೇ ರೀತಿಯ ಕಾದಾಟ ಬಯಸದ ನಾವು ಟಿವಿಯಲ್ಲಿ ಏನು ಬರುತ್ತದೋ ಅದನ್ನೇ ನೋಡುತ್ತಿದ್ದೆವು ( ಸ್ವಂತ ಆಸಕ್ತಿ ಆಯ್ಕೆಯ ವಿಷಯವನ್ನು ನಾವೇ ಬಿಟ್ಟುಕೊಟ್ಟಿದ್ದೆವು ಎನ್ನುವುದೇ ಸರಿ!) ಆದರೆ ಸಂಖ್ಯೆಯಲ್ಲೂ ಹೆಚ್ಚಿದ್ದ ,ಸ್ವಭಾವದಲ್ಲೂ ಜೋರಿದ್ದ ಮಲೆಯಾಳಿ ಹುಡುಗಿಯರು ಸಾಧ್ಯವಾದಾಗಲೆಲ್ಲಾ ಪ್ರತಿಭಟನೆ ಮಾಡುತ್ತಿದ್ದರು.ಹೀಗಾಗಿ  ರಿಮೋಟಿಗಾಗಿ ಮಹಾಯುದ್ಧವೇ ನಡೆದು ಟಿವಿ ರೂಮ್ ,ವಾರ್ ರೂಂ ಆಗಿತ್ತು! 

 ಟಿವಿಯ ಮೋಡಿ

ನನಗಂತೂ ಟಿವಿ ಎಂದರೆ ಎಲ್ಲಿಲ್ಲದ ಪ್ರಾಣ.ಮಣಿಪಾಲಕ್ಕೆ ಬರುವಾಗ ಇಡೀ ಹಾಸ್ಟೆಲ್ಲಿಗೆ ಒಂದೇ ಟಿವಿ ಎಂದು ತಿಳಿದಾಗ ನನಗಾದ ದುಃಖ ಅಷ್ಟಿಷ್ಟಲ್ಲ. ಮನೆಯ ಮೂಲೆಯಲ್ಲಿದ್ದ ಟಿವಿಯನ್ನು ನೋಡಿ ದುಃಖ ಉಮ್ಮಳಿಸಿ ಬರುತ್ತಿತ್ತು. ಹಾಸ್ಟೆಲ್ಲಿಗೆ ಬರುವಾಗ  ಅಪ್ಪ, ಅಮ್ಮ ತಂಗಿಯರ ಹಾಗೆ ಅದನ್ನೂ ಅಪ್ಪಿ ಅತ್ತಿದ್ದೆ. ಟಿವಿ ನನ್ನ ಪಾಲಿಗೆ ವಸ್ತುವಲ್ಲ, ಆತ್ಮೀಯ ಬಂಧುವಾಗಿತ್ತು. ಶಾಲಾದಿನಗಳಲ್ಲಿ ಅದು ಬಂದ ಹೊಸತರಲ್ಲಿ  ಭಯಭಕ್ತಿಯಿಂದ ಮಹಾಭಾರತ ನೋಡುತ್ತಿದ್ದೆ. ನಂತರ  ನುಕ್ಕಡ್, ಯೆ ಜೊ ಹೈ ಜಿಂದಗಿ ಮುಂತಾದ ಧಾರಾವಾಹಿಗಳನ್ನು  ಬಹಳ ಖುಷಿಯಿಂದ ಮನೆಯವರೆಲ್ಲಾ ನೋಡುತ್ತಿದ್ದೆವು.ಈ ಧಾರಾವಾಹಿಗಳು ಅರ್ಥವಾಗಲೆಂದೇ ಹಿಂದಿಯನ್ನು ಆಸಕ್ತಿಯಿಂದ ಕಲಿತಿದ್ದೆ ಎಂದರೆ ತಪ್ಪಾಗಲಾರದು. ಡಿಡಿ ನ್ಯಾಶನಲ್ ಮಾತ್ರ ಇದ್ದ ಕಾಲಕ್ಕೆ ಭಾನುವಾರ ಮಧ್ಯಾಹ್ನ ಪ್ರಾದೇಶಿಕ ಸಿನಿಮಾ ಪ್ರಸಾರವಾಗುತ್ತಿತ್ತು. ಅದನ್ನು ವೀಕ್ಷಿಸುವುದು ಖಾಯಂ ಪದ್ಧತಿ. ಬೇಗ ಊಟ ಮುಗಿಸಿ ಟಿವಿ ಮುಂದೆ ಜಮಖಾನ ಹಾಸಿ ಪ್ರತಿಷ್ಠಾಪನೆಯಾಗುತ್ತಿದ್ದೆವು.. ಮಕ್ಕಳೆಲ್ಲಾ  ಕೆಳಗೆ ಕುಳಿತರೆ ದೊಡ್ಡವರು ಸೋಫಾದಲ್ಲಿ ಆಸೀನರಾಗಿ ಸಿನಿಮಾ ವೀಕ್ಷಣೆ. ಕಿಟಕಿಗಳಿಗೆ ಬೆಡ್ ಶೀಟ್ ಹಾಕಿ ಆದಷ್ಟೂ ಹಾಲ್ ಕತ್ತಲು ಮಾಡಿ ತುಂಬಿದ ಹೊಟ್ಟೆ, ಎಳೆವ ಕಣ್ಣುಗಳ ನಡುವೆಯೇ ಅರ್ಥವಾಗದ ಭಾಷೆಯ ಸಿನಿಮಾವನ್ನು ಸಂಪೂರ್ಣವಾಗಿ ವೀಕ್ಷಿಸುತ್ತಿದ್ದೆವು. (ಈಗಿನಂತೆ ಸಬ್ ಟೈಟಲ್ಸ್ ಸೌಲಭ್ಯ ಇರಲಿಲ್ಲ.ಅದೂ ಅಲ್ಲದೇ ಹೆಚ್ಚಿನವು ಪ್ರಶಸ್ತಿ ಪುರಸ್ಕೃತ ಆರ್ಟ್ ಸಿನಿಮಾಗಳಾಗಿದ್ದು ಕಪ್ಪು-ಬಿಳುಪಿನಲ್ಲಿ ಇರುತ್ತಿದ್ದವು). ಬೆಂಗಾಲಿ, ಮರಾಠಿ, ತಮಿಳು, ಮಲಯಾಯಂ ಜತೆ ಒರಿಯಾ, ಅಸ್ಸಾಮಿ, ಭೋಜ್ ಪುರಿ ಹೀಗೆ ಭಾಷೆಯ ಹಂಗೇ ಇಲ್ಲದೇ ಸಿನಿಮಾ ನೋಡಿ ಕಥೆ ಅರ್ಥ ಮಾಡಿಕೊಳ್ಳುವಷ್ಟು ನೈಪುಣ್ಯತೆ ಪಡೆದುಬಿಟ್ಟಿದ್ದೆವು! ಕನ್ನಡದ ಕಾರ್ಯಕ್ರಮಗಳು ಬರುತ್ತಿದ್ದದ್ದು ಕಡಿಮೆಯೇ. ಆದರೂ ಅಪರೂಪಕ್ಕೊಮ್ಮೆ ಈ ವಿಭಾಗದಲ್ಲಿ ಕನ್ನಡ ಸಿನಿಮಾ ಬರುತ್ತಿತ್ತು. ಆಗ ಸೀಮೆಗಿಲ್ಲದ ಸಂಭ್ರಮ ನಮಗೆ. ಆಗ ನಾವಷ್ಟೇ ಅಲ್ಲ, ಸುತ್ತಮುತ್ತಲ ಮನೆಯವರಿಗೆಲ್ಲಾ ಬರಲು ಆಹ್ವಾನ. ಕತ್ತಲ ಕೋಣೆಯಲ್ಲಿ ಖಾರದ ಕಡ್ಲೆಕಾಯಿ ತಿನ್ನುತ್ತಾ ಸ್ನೇಹಿತರೊಂದಿಗೆ ಗುಸುಗುಸು ಮಾತನಾಡುತ್ತಾ ಕನ್ನಡದ ಸಿನಿಮಾ ನೋಡುತ್ತಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ! ಹಾಗಾಗಿಯೇ ಅಂದು ನೋಡಿದ ಬ್ಯಾಂಕರ್ ಮಾರ್ಗಯ್ಯ ಸಿನಿಮಾದ ಪ್ರತಿ ದೃಶ್ಯವೂ ಇಂದಿಗೂ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ!ಒಟ್ಟಿನಲ್ಲಿ ನನಗಂತೂ ಟಿವಿಗೆ ಮಾಯಾಪೆಟ್ಟಿಗೆ ಎನ್ನುವುದಕ್ಕಿಂತ ಮೋಜಿನ ಗೆಳೆಯ ಎನ್ನುವುದೇ ಸರಿಯೆನಿಸುತ್ತಿತ್ತು!

 ಕಾಲೇಜಿನಲ್ಲಿ ಕಾದಾಟ

ಹೈಸ್ಕೂಲಿನ ನಂತರ ಕಾಲೇಜಿನಲ್ಲಿರುವಾಗ  ವಿಜ್ಞಾನವನ್ನು ಆರಿಸಿಕೊಂಡಿದ್ದರಿಂದ ಟಿವಿ ವೀಕ್ಷಣೆಗೆ ಸಮಯ ಕಡಿಮೆಯಾಗಿತ್ತು. ಅರ್ಧ ಗಂಟೆ ಸಿಕ್ಕರೆ ಹೆಚ್ಚು..ಆದರೂ ಒಂದು ವ್ರತದಂತೆ ಟಿವಿ ವೀಕ್ಷಣೆಯನ್ನು ಪಾಲಿಸಿಕೊಂಡು ಬಂದಿದ್ದೆ. ನನ್ನ ಟಿವಿ ಸಮಯದಲ್ಲಿ ಕರೆಂಟ್  ಹೋದರೆ ಕಣ್ಣಿನಲ್ಲಿ ಗಂಗಾ ಭವಾನಿಯೇ ಸುರಿಯುತ್ತಿತ್ತು.ದ್ವಿತೀಯ ಪಿಯುಸಿ ಪರೀಕ್ಷೆಯ ಸಮಯ; ಎಲ್ಲರೂ ಜ್ವರ ಬಂದವರಂತೆ ಓದುತ್ತಿದ್ದರು..ನಾನೂ! ಆದರೆ ರಾತ್ರಿ ಎಲ್ಲಾ ಓದು ಮುಗಿಸಿ ಟಿವಿ ಅರ್ಧ ಗಂಟೆ ನೋಡುತ್ತಿದ್ದೆ. ಪರೀಕ್ಷೆಗೆ ಹದಿನೈದು ದಿನಗಳಿರುವಾಗ ಅಪ್ಪ ‘ ಇನ್ನು ಸ್ವಲ್ಪ ದಿನ ಅಂದರೆ ಪರೀಕ್ಷೆ ಮುಗಿಯುವ ತನಕ ಟಿವಿ ಬೇಡ; ಅದರ ಬದಲು ಹೊರಗೆ ವಾಕ್ ಹೋಗಿ ಬಾ, ಆಟ ಆಡು, ಕತೆ ಪುಸ್ತಕ ಓದು. ರಿಲಾಕ್ಸ್ ಮಾಡು’  ಎಂದು ನಯವಾಗಿ ಹೇಳಿದ್ದರು. ಬಿಸಿ ರಕ್ತ,  ಪರೀಕ್ಷೆಯ ಪಿತ್ತ ಎರಡೂ ಸೇರಿ ಸಿಟ್ಟಿಗೆದ್ದು ಕೂಗಾಡಿದ್ದೆ. ಊಟ ಬಿಡುತ್ತೇನೆ ಎಂದು ಹೆದರಿಸಿದ್ದೆ.ಅಪ್ಪ ಏನೂ ಮಾತನಾಡದೇ  ಟಿವಿ ಆಫ್ ಮಾಡಿದ್ದರು. ನನ್ನನ್ನು ಸಮರ್ಥಿಸಲು ಅಮ್ಮನ ಬಳಿ ನೋಡುವಂತೆಯೇ ಇರಲಿಲ್ಲ ಏಕೆಂದರೆ ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಅವರಿಬ್ಬರೂ ಒಂದೇ ಎಂಬುದು ಮೊದಲಿನಿಂದಲೂ ಮಕ್ಕಳಾದ ನಮಗೆ ಗೊತ್ತಿದ್ದ ವಿಷಯವೇ. ಆ ರಾತ್ರಿಯಿಡೀ ಮುನಿಸಿಕೊಂಡು, ಹಸಿದುಕೊಂಡು ಟಿವಿಯನ್ನೇ ನೆನೆಸಿಕೊಂಡು ಮಲಗಿದ್ದಷ್ಟೇ ಬಂತು. ಅಪ್ಪ-ಅಮ್ಮರಿಂದ ಮಾತೇ ಇಲ್ಲ.ಬೆಳಿಗ್ಗೆ ಏಳುವಾಗ ಹೊಟ್ಟೆ ಹಸಿದಿತ್ತು. ಅಪ್ಪನ ಬಳಿ ಹೋಗಿ ‘ ಎಕ್ಸಾಂ ಮುಗಿದ ನಂತರ ಟಿವಿ ನೋಡಲು ಬಿಡಬೇಕು. ಹಾಗಿದ್ದರೆ ತಿಂಡಿ ತಿನ್ನುತ್ತೇನೆ’ ಎಂದೆ.  ಅಪ್ಪ ಆಗಲಿ ಎಂದರೆ ಅಮ್ಮ ನಸುನಕ್ಕರು.ಅದೇ ಕಡೆ ಅಪ್ಪ-ಅಮ್ಮರೊಂದಿಗೆ ನನ್ನ ಸಿಟ್ಟು ಜಗಳ! ಈಗ ನಾನು ಹಠ ಮಾಡುವುದಿಲ್ಲ ಮತ್ತು ಇಂದಿಗೂ ನನ್ನ ಸುಖಾಸುಮ್ಮನೆ ಹಠಕ್ಕೆ ಅವರು ಮಣಿಯುವುದಿಲ್ಲ !! 

ಕಾವೇರಿಯ ಕಾವು ಏರಿದಾಗ

ಫ್ಲಾಶ್ ಬ್ಯಾಕ್ ನಿಂದ ಮಣಿಪಾಲಕ್ಕೆ ಬಂದರೆ ತೊಂಬತ್ತನಾಲ್ಕನೇ  ಇಸವಿ  ಇರಬೇಕು,  ಕಾವೇರಿ ನೀರಿನ ಗಲಾಟೆ  ಜೋರಾಗಿತ್ತು. ಎರಡೂ  ರಾಜ್ಯಗಳಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ಅನೇಕ  ಕಡೆ  ಬಸ್‌ಗೆ  ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ, ಗಾಜು ಒಡೆಯುವುದು, ರಸ್ತೆ ತಡೆ ಮುಂತಾದ ಅಹಿತಕರ  ಘಟನೆಗಳು  ನಡೆದಿದ್ದ  ಕಾರಣ  ಬಂದ್ ಘೋಷಿಸಲಾಗಿತ್ತು. ವಿದ್ಯಾರ್ಥಿಗಳಾದ  ನಮಗೆ  ಪ್ರಯಾಣ ಕೈಗೊಳ್ಳಬಾರದು  ಎಂದು  ಕಟ್ಟುನಿಟ್ಟಾಗಿ  ಸೂಚನೆ  ಸಿಕ್ಕಿತ್ತು. ಹಾಗೆಯೇ  ಪರಿಸ್ಥಿತಿ  ತಿಳಿಯಾಗುವವರೆಗೆ  ಆದಷ್ಟೂ  ಹಾಸ್ಟೆಲ್ ಬಿಟ್ಟು ಹೊರಗೆ  ಬರಬಾರದು  ಎಂದು  ತಿಳಿಸಿದ್ದರು. ಊರಿಗೆ ಹೋಗುವಂತಿಲ್ಲ, ಹೊರಗೆ ತಿರುಗುವಂತಿಲ್ಲ, ಓದಲಂತೂ ಮೊದಲೇ  ಮನಸ್ಸಿಲ್ಲ! ಊಟ-ತಿಂಡಿಗೆ  ತೊಂದರೆಯಿರಲಿಲ್ಲ ; ಆದರೆ  ಇಡೀ  ದಿನ  ಹಾಸ್ಟೆಲ್  ಮತ್ತು  ಮೆಸ್  ಬಿಟ್ಟರೆ  ಗತಿಯಿಲ್ಲ! ಒಂದು  ದಿನ  ರೂಮ್  ಕ್ಲೀನ್  ಮಾಡಿ, ಬಟ್ಟೆ ತೊಳೆದಿದ್ದಾಯ್ತು. ಮತ್ತೊಂದು  ದಿನ  ಕತೆಪುಸ್ತಕ  ಓದುವುದರಲ್ಲಿ  ಕಳೆಯಿತು. ಮೂರನೇ  ದಿನ  ಏಳುತ್ತಲೇ  ಏನು  ಮಾಡುವುದು  ಎಂಬ  ಚಿಂತೆ. ನೂರಾರು ಹುಡುಗಿಯರಿದ್ದ ಹಾಸ್ಟೆಲ್‌ನಲ್ಲಿ ಉಸಿರು ಕಟ್ಟುವ ಮೌನ…ಮೊಬೈಲ್, ನೆಟ್  ಇಲ್ಲದಿದ್ದ ಕಾಲವಿದು. ನಿಧಾನವಾಗಿ ಟಿವಿ ರೂಮಿಗೆ ಇಣುಕಲಾರಂಭಿಸಿದೆವು.  ಟಿವಿಯಲ್ಲಿ  ಯಾವುದೋ ಕಾರ್ಯಕ್ರಮ; ಎಂದಿನಂತೆ ಜಗಳವಿಲ್ಲ. ಭಾಷೆ ಮುಖ್ಯವಾಗಿರಲಿಲ್ಲ; ಬದಲಿಗೆ ನಮ್ಮೊಂದಿಗೆ ಜನ ಇದ್ದಾರೆ ಎಂಬ ಭಾವ ಮುಖ್ಯವೆನಿಸಿತ್ತು.

ಬಂಧನದಿಂದ  ಬಿಡುಗಡೆ

ಆದರೆ ಎಷ್ಟು ಹೊತ್ತು ಸುಮ್ಮನೇ ಕುಳಿತು ಟಿವಿ ನೋಡಲು ಸಾಧ್ಯ? ಅದೂ ಒಂದು ದಿನದಲ್ಲಿ ಬೋರಾಯಿತು. ಇದು ಬರೀ ನಮ್ಮ ಕತೆಯಲ್ಲ, ಎಲ್ಲರದ್ದೂ. ಆರನೇ ದಿನ ಮಧ್ಯಾಹ್ನ ಬಿರುಬಿಸಿಲು. ಊಟ  ಮುಗಿಸಿ  ನೆಪಕ್ಕೆ  ಹಾಸಿಗೆಯಲ್ಲಿ ಕಣ್ಣುಮುಚ್ಚಿದ್ದರೂ  ಮನಸ್ಸಿನಲ್ಲಿ  ಕಳವಳ. ಅಷ್ಟರಲ್ಲಿ  ಯಾರೋ ಒಂದಿಬ್ಬರು  ಹಾಸ್ಟೆಲ್  ಒಳಗಿದ್ದ  ಅಂಗಳದಲ್ಲಿ  ಟೇಪ್‌ರೆಕಾರ್ಡರ್ ಹಾಕಿಕೊಂಡು ಕುಣಿಯಲು  ಆರಂಭಿಸಿದರು. ಮೊದಲು ಕುತೂಹಲಕ್ಕೆಂದು  ರೂಮಿನಿಂದ  ಇಣುಕಿ  ನೋಡಿದ ಹುಡುಗಿಯರು  ಒಬ್ಬೊಬ್ಬರಾಗಿ  ತಾವೂ  ಸೇರಿದರು. ಮೊದಲು ಸ್ವಲ್ಪ ಹಿಂಜರಿಕೆ, ನಾಚಿಕೆ, ಅನುಮಾನವಿತ್ತು. ಕಡೆಗೆ  ಹೇಗಿದ್ದರೂ ಯಾರೂ  ಕೇಳುವವರಿಲ್ಲ, ನೋಡುವವರೂ ಇಲ್ಲ..ಆಗಿದ್ದಾಗಲಿ ಎಂದು ಎಲ್ಲರೂ  ಕುಣಿದವರೇ. ಹಾಕಿದ್ದು ಯಾವುದೋ ಹಾಡು..ಮಾಡಿದ್ದು ಚಿತ್ರ  ವಿಚಿತ್ರ  ಡಾನ್ಸ್. ಒಟ್ಟಿಗೇ  ಸೇರಿದ್ದು -ಕುಣಿದಿದ್ದು, ರೂಮಿನಲ್ಲಿ ಕಟ್ಟಿ ಹಾಕಿದಂತೆ  ಇದ್ದವರಿಗೆ ಒಂದು ರೀತಿಯಲ್ಲಿ  ಬಿಡುಗಡೆ ನೀಡಿತ್ತು. ಸುಮಾರು ಒಂದೂವರೆ  ಗಂಟೆ ಕಾಲ ನಡೆದ ಈ ಡಾನ್ಸ್ ಮೈಕೈಯನ್ನು ದಣಿಸಿದರೂ ಮನಸ್ಸಿಗೆ ಒಂದಿಷ್ಟು  ನೆಮ್ಮದಿ  ತಂದಿತ್ತು. ಆ ದಿನ  ಕುಣಿದಾಗ  ಎಲ್ಲ ಗುಂಪುಗಳ  ಗೋಡೆ  ಒಡೆದು ಬಿದ್ದಿತ್ತು. ಪ್ರತಿಯೊಬ್ಬರಿಗೂ  ಇಂಥ ಆತಂಕದ  ಕ್ಷಣದಲ್ಲಿ  ನಾವೆಲ್ಲರೂ  ಒಟ್ಟಿಗಿದ್ದೇವೆ, ಒಟ್ಟಾಗಿ ಎದುರಿಸುತ್ತೇವೆ  ಎಂಬ  ಸಂಗತಿಯೇ  ಧೈರ್ಯ-ನೆಮ್ಮದಿ ಕೊಟ್ಟಿತ್ತು. ಅಂದಿನಿಂದ  ದಿನವೂ  ಅಂಗಳದಲ್ಲಿ  ಅಂತ್ಯಾಕ್ಷರಿ, ರಿಂಗ್, ಕತೆ, ಹಗ್ಗದಾಟ, ಬೇರೆ ಭಾಷೆ-ಅಡಿಗೆ  ಕಲಿಯುವುದು  ಹೀಗೆ  ಎಲ್ಲರೂ  ಒಟ್ಟಿಗೇ  ಸೇರುತ್ತಿದ್ದೆವು. ಅಂತೂ  ಕಾವೇರಿ ನೀರಿಗೆ  ಸೂಕ್ತ  ಪರಿಹಾರ  ಸಿಕ್ಕು  ಬಂದ್  ಮುಗಿವಾಗ  ಸುಮಾರು ಎರಡು ವಾರವೇ  ಕಳೆದಿತ್ತು. ಬಂದ್‌ ನಲ್ಲಿ  ಶುರುವಾದ  ಬಾಂಡಿಂಗ್  ಇಂದಿಗೂ  ಮುಂದುವರಿದಿದೆ. ದಿಗ್ಭಂಧನದಲ್ಲಿ ಹುಟ್ಟಿದ  ಸ್ನೇಹದ  ಬಿಗಿಬಂಧಗಳ  ನೆನೆದರೆ ಅಚ್ಚರಿಯಾಗುತ್ತದೆ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: