ಡಾ ಕೆ ಎಸ್ ಚೈತ್ರಾ ಅಂಕಣ – ಅವರು ಒಂದ್ಸಲ ನೋಡ್ಲಿ!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

24

ವಿದ್ಯಾರ್ಥಿ ಮತ್ತು ವೃತ್ತಿ ಜೀವನದಲ್ಲಿ ರೋಗಿಗಳನ್ನು ನೋಡುತ್ತಾ ಚಿಕಿತ್ಸೆ ನೀಡುತ್ತಾ ಅವರೊಂದಿಗೆ ದಂತವೈದ್ಯರಾಗಿ ನಿಕಟ ಸಂಪರ್ಕ ಹೊಂದಿರುತ್ತೇವೆ. ಅದರಿಂದಾಗಿಯೇ ಸಮಾಜದ ರೀತಿ-ನೀತಿ, ಧೋರಣೆಗಳು ನಾನಾ ರೀತಿಯಲ್ಲಿ ಅರಿವಿಗೆ ಬರುತ್ತವೆ. ಕೆಲವೊಂದು ಖುಷಿ ಕೊಟ್ಟರೆ ಮತ್ತೆ ಕೆಲವು ಬೇಸರ ಮೂಡಿಸುತ್ತದೆ. ಹಲವು ಪ್ರಸಂಗಗಳಂತೂ ಸಿಟ್ಟನ್ನೂ ತರಿಸುತ್ತದೆ. ಆದರೆ ವೈಯಕ್ತಿಕವಾಗಿ ನಮ್ಮ ಭಾವನೆ ಏನಿದ್ದರೂ ಅದನ್ನು ನಿಯಂತ್ರಣದಲ್ಲಿಟ್ಟು ತಪ್ಪು ಅನ್ನಿಸಿದ್ದನ್ನು ತಿದ್ದುವ ಜವಾಬ್ದಾರಿಯೂ ನಮಗಿದೆ.ಎಷ್ಟೇ ಮುಂದುವರಿದ ಸಮಾಜ ನಮ್ಮದು , ಕಾಲ ಸುಧಾರಿಸಿದೆ ಎಂದರೂ ಆಳವಾಗಿ ಬೇರೂರಿದ ರೂಢಿತ ಮೌಲ್ಯಗಳನ್ನು ಬದಲಿಸಲು ಇನ್ನೂ ಸಮಯ ಬೇಕು ಎಂಬುದಕ್ಕೆ ಅನೇಕ ನಿದರ್ಶನಗಳಿವೆ.

ಮಣಿಪಾಲದಲ್ಲಿ ಓದು ಮುಗಿಸಿ ಸ್ವಲ್ಪ ಕಾಲ ಶಿವಮೊಗ್ಗೆ ಮತ್ತು ಬೆಂಗಳೂರಿನ ದಂತವೈದ್ಯ ಕಾಲೇಜಿನಲ್ಲಿ ಉಪನ್ಯಾಸಕಳಾಗಿ ಕಾರ್ಯ ನಿರ್ವಹಿಸಿದ್ದೆ. ಆಗ ನಡೆದ ಪ್ರಸಂಗ; ಉತ್ತರ ಭಾರತೀಯಮೂಲದ  ಗಂಡ ಹೆಂಡತಿ ಚಿಕಿತ್ಸೆಗಾಗಿ ಬಂದಿದ್ದರು. ನಾನು ಕೆಲಸ ಮಾಡುತ್ತಿದ್ದದ್ದು ಫಿಲ್ಲಿಂಗ್, ರೂಟ್ ಕೆನಾಲ್ ಚಿಕಿತ್ಸೆ ಮಾಡುವ ಕನ್ಸ್ರ್ವೇಟಿವ್  ವಿಭಾಗ. ಸಹಜವಾಗಿ ನಾನು ಜೂನಿಯರ್.. ಪ್ರೊಫೆಸರ್ , ಅಸೋಸಿಯೆಟ್ ಪ್ರೊಫೆಸರ್ ಹೀಗೆ ವಯಸ್ಸು, ಹುದ್ದೆ ಮತ್ತು ಅನುಭವದಲ್ಲಿ ಹಿರಿಯರು ಅನೇಕರಿದ್ದರು. ತಲೆ ಮೇಲೆ ಘೂಂಘಟ್ ಹಾಕಿ ಬಂದ ಮಹಿಳೆಯನ್ನು ನನ್ನೆದುರು ಕೂರಿಸಿ ಗಂಡ ‘ ಠೀಕ್ ಸೆ ಇಸ್ಕಾ ಮುಹ್ ದೇಖೋ ದೀದಿ.. ಸುಬಹ್ ಶ್ಯಾಮ್ ದರ್ದ್ ಸೆ  ರೋತಿ ಹೈ (ಇವಳ ಬಾಯಿಯನ್ನು ಸರಿಯಾಗಿ ಪರೀಕ್ಷಿಸಿ ; ಹಗಲು-ರಾತ್ರಿ ನೋವಿನಿಂದ ಅಳುತ್ತಾಳೆ). ಸರಿ, ಪರೀಕ್ಷೆ ಮಾಡಿದರೆ ಕೀವು ತುಂಬಿ ಸೋಂಕಾದ ಹಲ್ಲುಗಳು. ಮಾತ್ರೆ ಬರೆದು ಇಬ್ಬರಿಗೂ ಸೋಂಕು, ಚಿಕಿತ್ಸೆ, ಖರ್ಚು ಎಲ್ಲಾ ವಿವರಿಸಿದ್ದಾಯ್ತು.

a child with forwardly placed upper teeth, proclination

ಇನ್ನೆರೆಡು ದಿನ ಬಿಟ್ಟು ಬರಲು ಅಪಾಯಿಂಟ್ಮೆಂಟ್ ಬರೆಯುತ್ತಿರುವಾಗ ಗಂಡ ಹತ್ತಿರ ಬಂದು ‘ಸಬ್ ಠೀಕ್ ಹೈ ; ಲೆಕಿನ್ ಏಕ್ ಬಾರ್ ಉನ್ ಸೆ ಭೀ ಪೂಛ್ ಲೋ’ (ಎಲ್ಲಾ ಸರಿ, ಆದರೆ ಒಮ್ಮೆ ಅವರನ್ನೂ ಕೇಳಿಬಿಡಿ) ಎಂದ. ಆತ ಕೈ ತೋರಿದತ್ತ ನೋಡಿದರೆ  ಪ್ರೊಫೆಸರ್, ನನಗಿಂತಲೂ ಜೂನಿಯರ್ ಆದ ಹೊಸಬ ಡಾಕ್ಟರಿಗೆ ಏನನ್ನೋ ವಿವರಿಸುತ್ತಿದ್ದರು.  ನಿಜ ಕಾಲೇಜುಗಳಿಗೆ ಬರುವ ರೋಗಿಗಳಿಗೆ ಚಿಕಿತ್ಸೆ ಕಡಿಮೆ ದರದಲ್ಲಿ ಆಗುತ್ತದೆ ಎಂದು ಗೊತ್ತಿದ್ದರೂ ವಿದ್ಯಾರ್ಥಿಗಳು/ ಜ್ಯೂನಿಯರ್ ವೈದ್ಯರು ಏನಾದರೂ ಹೆಚ್ಚು ಕಡಿಮೆ ಮಾಡಿದರೆ, ಸರಿಯಾಗಿ ಡಯಾಗ್ನೈಸ್ ಮಾಡದಿದ್ದರೆ ಎಂಬ ಅಳುಕಿರುತ್ತದೆ. ಹಾಗಾಗಿ ಸೀನಿಯರ್ ಕೇಳಿ ಖಚಿತಪಡಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಹಾಗಾಗಿ ಬಹುಶಃ ಅನುಭವಿ ಪ್ರೊಫೆಸರ್ ಕೇಳಬೇಕೇನೋ ಎಂದು ಕರೆಯಲು ಹೊರಟರೆ ಅವರಲ್ಲ, ಮತ್ತೊಬ್ಬರು ಎಂದರು. ಪ್ರೊಫೆಸರ್ ಅಂದ್ರೆ ಮೇಡಂ, ಅವರು ಬೇಡ ಅಂದು ಜ್ಯೂನಿಯರ್ ಡಾಕ್ಟರ್ ಕರೆಯಲು ಕಾರಣ ಏನು ಎಂದು ಆಶ್ಚರ್ಯವಾಯಿತು. ಬಹುಶಃ ಪ್ರೊಫೆಸರ್ ಎಂದು ಗೊತ್ತಾಗಿರಕ್ಕಿಲ್ಲ ಎಂದು ಮತ್ತೆ ವಿವರಿಸಿ ಹೇಳಿದೆ. ಆದರೂ ಇವರು ಬೇಡ, ಅವರು ಒಂದ್ಸಲ ನೋಡಲಿ ಎಂಬ ಒತ್ತಾಯ. ಏನೋ ಅವರಿಷ್ಟ ಎಂದು ಜ್ಯೂನಿಯರ್ ವೈದ್ಯರಿಗೆ ಹೇಳಿ, ಅವರು ಬಂದು ನೋಡಿದರು. ಮತ್ತೆ ನಾನು ಹೇಳಿದ್ದನ್ನೇ ಹೇಳಿದರು.

ಮರ್ದ್ ಲೋಗ್!

ಅಂತೂ ಚಿಕಿತ್ಸೆಗಾಗಿ ಒಪ್ಪಿ ಹೆಸರು ಬರೆಸುವಾಗ ಕಾರಣವನ್ನು ಗಂಡ ಹೇಳಿದರು ‘ ವೋ ಮರ್ದ್ ಹೈ ನಾ. ಉನ್ಕಾ ಡಿಸಿಶನ್  ಸಹಿ ಹೋತಾ ಹೈ. ಲೇಡೀಸ್ , ಕಾಮ್ ಕರ್ ನೆ ಕಾ ಠೀಕ್ ಹೈ. ಲೆಕಿನ್ ಡಿಸಿಶನ್ ಲೇನಾ ಹೈ ತೋ ಕೈಸಾ ಭರೋಸಾ ಕರೇಂ? ಅಬ್ ಉನ್ಹೋನೆ ಕಹಾ ಯಹೀ ಠೀಕ್ ಹೈ, ತೋ ಆಪ್ ಟ್ರೀಟ್ ಮೆಂಟ್ ದೆದೋ. ಹಮೆ ಭರೋಸಾ ಹೈ!( ಅವರು ಪುರುಷರಲ್ಲವೇ, ಅವರ ನಿರ್ಣಯ ಸರಿ ಇರುತ್ತೆ.ಮಹಿಳೆಯರು ಕೆಲಸ ಮಾಡಲು ಸರಿ, ಆದರೆ ನಿರ್ಣಯ ತೆಗೆದುಕೊಂಡರೆ  ವಿಶ್ವಾಸವಿಡುವುದು ಹೇಗೆ? ಈಗ ಅವರು ಬಂದು ನೋಡಿ ಸರಿ ಅಂತ ಹೇಳಿದ್ರಲ್ಲ, ನೀವು ಟ್ರೀಟ್ಮೆಂಟ್ ಕೊಡಿ) . ನನಗೆ ಆತನ ಮಾತು ಕೇಳಿ ಸಿಕ್ಕಾಪಟ್ಟೆ ಸಿಟ್ಟು ಬಂತು. ಯಾರ ಹತ್ತಿರ ಬೇಕಾದರೂ ಮಾಡಿಸಿಕೊಳ್ಳಿ ನಾನು ಮಾಡುವುದಿಲ್ಲ ಎಂಬ ಮಾತು ನಾಲಿಗೆಯ ತುದಿಯವರೆಗೆ ಬಂದಿತ್ತು. ಆದರೆ ಪಾಪ ನೋವಿನಿಂದ ನರಳುತ್ತಿದ್ದ ಆ ಹೆಂಡತಿಯ ಮುಖ ನೋಡಿ ಪಾಪ ಅನ್ನಿಸಿ ಚಿಕಿತ್ಸೆ ಮಾಡಿದೆ. ಆದರೂ ಚಿಕಿತ್ಸೆ ನೀಡುವಾಗಲೆಲ್ಲಾ ಜತೆಗೆ ಬರುತ್ತಿದ್ದ ಆತನಿಗೆ ಮತ್ತು ಆಕೆಗೂ ಒಂದಿಷ್ಟು ತಿಳಿ ಹೇಳುವ ಪ್ರಯತ್ನ ಮಾಡಿದೆ. ಎದುರಿಗೆ ಜೀ ಜೀ ಎಂದು ತಲೆ ಆಡಿಸಿದರೂ ಕಡೆಗೆ ‘ ಹಮಾರೆ ಯಹಾಂ ಐಸಾ ಹೀ ಹೈ; ಉಸ್ ಕೋ ಬಸ್ ಫಾಲೋ ಕರ್ನಾ ಹೈ’ ಎನ್ನುವ ಮಾತೇ ಗಂಡನಿಂದ ಬರುತ್ತಿತ್ತು, ಹೆಂಡತಿಯ ಸ್ವರವೇ ಇಲ್ಲ.. ಚಿಕಿತ್ಸೆ ಮುಗಿದು ಆಕೆಗೆ ನೋವು ಸಂಪೂರ್ಣ ಗುಣವಾಯಿತು. ಗಂಡ, ಹೆಂಡತಿಯದ್ದು ಹೇಗಾಗುತ್ತೆ ಎಂದು ಟೆಸ್ಟ್ ಮಾಡುತ್ತಿದ್ದೆ. ಈಗ ನಂಬಿಕೆ ಬಂತು. ತನಗೂ ಹಲ್ಲು ನೋವಿದೆ. ನೀವೇ ಹೆಚ್ಚು ಇಂಟ್ರೆಸ್ಟ್ ತೆಗೆದುಕೊಂಡು ಬಡಿಯಾ ಕಾಮ್ ಕರೋ ಎಂದು ಆದೇಶ ನೀಡಿದ. ನಾನು,  ಮರ್ದ್ ಲೋಗ್ ಹತ್ತಿರವೇ ಮಾಡಿಸಿಬಿಡಿ ಎಂದು ನಯವಾಗಿಯೇ ಜಾರಿಕೊಂಡೆ!! ಬೆಳೆದುಬಂದ ಪರಿಸರ, ಮುಗ್ಧತೆ, ಶಿಕ್ಷಣದ ಕೊರತೆ, ಅಹಂ ಹೀಗೆ ಕಾರಣ ಏನೇ ಇರಲಿ ಆ ವ್ಯಕ್ತಿಯ ಮಾತು, ವರ್ತನೆ ಕಸಿವಿಸಿ ಉಂಟುಮಾಡಿದ್ದಂತೂ ನಿಜ!

ನನ್ನಿಂದ ಜಗಳ!

ಹಾಗೆಯೇ ಗಂಡಹೆಂಡತಿಯ ನಡುವಿನ ಜಗಳಕ್ಕೆ ನನ್ನ ಮಾತು ನೆಪವಾಗಿ ನಾನು ಸುಸ್ತಾದ ಪ್ರಸಂಗವೂ ಇದೆ! ಒಂದು ಸಂಜೆ ತಮ್ಮ ಹತ್ತು ವರ್ಷದ ಮಗಳನ್ನು ಕರೆದುಕೊಂಡು ಗಂಡ-ಹೆಂಡತಿ ಬಂದರು. ಸಮಸ್ಯೆ ಎಂದರೆ ಹಲ್ಲಿನ ಮೇಲೆ ಇದ್ದ ತಿಳಿಕಂದು ಬಣ್ಣದ ಕಲೆಗಳು.ಮಗಳು ಚಾಕೊಲೆಟ್ ತಿನ್ನುತ್ತಿರುವುದರಿಂದ ಹೀಗೆ ಆಗುತ್ತಿರಬಹುದು ಎಂದು ಅವರ ಭಾವನೆ. ಹಾಗಾಗಿ ಅವಳಿಗೆ ಹೆದರಿಸಿ, ತಾವೇ ನಿಂತು ಗಟ್ಟಿಯಾಗಿ ಬ್ರಶ್ ಮಾಡಿಸಿ ಸಾಕಷ್ಟು ಪ್ರಯತ್ನ ಮಾಡಿದ್ದರು.  ಈಗ ಅದನ್ನು ಕ್ಲೀನ್ ಮಾಡಿಸುವುದು ಅವರ ಉದ್ದೇಶ. ಹುಡುಗಿಯ ಹಲ್ಲಿನ ಮೇಲೆ ಕಲೆಗಳಿದ್ದದ್ದು  ನಿಜ; ಆದರದು ಚಾಕಲೆಟ್ ಅಥವಾ ಆಹಾರಕ್ಕೆ ಸಂಬಂಧಿಸಿದ್ದಲ್ಲ. ಫ್ಲುರೋಸಿಸ್ ಎಂಬ ಫ್ಲೋರೈಡ್ ಅಂಶ ದೇಹದಲ್ಲಿ ಹೆಚ್ಚಿದ್ದಾಗ ಹಲ್ಲಿನಲ್ಲಿ ಕಾಣಿಸುವ ಕಲೆ. ಸಾಮಾನ್ಯವಾಗಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ನಿರ್ದಿಷ್ಟ ಮಿತಿಗಿಂತ (0.7-1.2 ಪಾರ್ಟ್ಸ್ ಪರ್ ಮಿಲಿಯನ್) ಹೆಚ್ಚಿದ್ದಾಗ ಅದು ದೇಹದಲ್ಲಿ ನಾನಾ ರೀತಿಯ ಪರಿಣಾಮ ಬೀರುತ್ತದೆ. ಅವುಗಳಲ್ಲಿ ಹಲ್ಲಿನ ಕಲೆಗಳೂ ಸಾಮಾನ್ಯ. ನಮ್ಮ ಕರ್ನಾಟಕದಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಅಂತರ್ಜಲ ನೀರಿನಲ್ಲಿ ಈ ಪ್ರಮಾಣ ಹೆಚ್ಚಿದ್ದು ಮಕ್ಕಳಲ್ಲಿ ಫ್ಲೋರೋಸಿಸ್ ಸಮಸ್ಯೆಯಿದೆ. ಮಕ್ಕಳಲ್ಲಿ ಶಾಶ್ವತ ಹಲ್ಲಿನ ರಚನೆ ಆಗುವಾಗ  ಹೆಚ್ಚು ಸಮಯ (ತಿಂಗಳು-ವರ್ಷಗಟ್ಟಲೇ)ಈ  ರೀತಿ ಫ್ಲೋರೈಡ್ ಅಂಶ ಹೆಚ್ಚಿರುವ ನೀರಿನ  ಸೇವನೆ ಹೆಚ್ಚಿದ್ದರೆ ಮುಂಬರುವ ಹಲ್ಲುಗಳಲ್ಲಿ ಈ ಕಲೆಗಳು ಕಾಣಿಸಿಕೊಳ್ಳುತ್ತವೆ. ಅಂದರೆ ಮಕ್ಕಳಲ್ಲಿ ಮೊದಲ ಎಂಟು ವರ್ಷಗಳು ಮುಖ್ಯ.ಅದಾದ ನಂತರ ಹಲ್ಲಿನ ರಚನಾಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಹೀಗಾಗುವ ಸಾಧ್ಯತೆ ಇಲ್ಲ. ಈ ಕಾರಣದಿಂದ ಹಲ್ಲಿನಲ್ಲಿ ಹೀಗೆ ಕಲೆಗಳು ಮಕ್ಕಳಲ್ಲಿ ಕಂಡಾಗ  ಯಾವ ಊರು ಎಂದು ವಿಚಾರಿಸುವುದು ಮುಖ್ಯ. ಹಾಗೆಯೇ ಇವರನ್ನೂ ಯಾವ ಊರು ನಿಮ್ಮದು ಎಂದೆ. ಆಕೆ ಬೆಂಗಳೂರಿನಲ್ಲಿ ಇದ್ದೇವೆ. ತವರು ಮನೆ ಕೋಲಾರ ಎಂದಳು. ಕೋಲಾರದ ಅನೇಕ ಹಳ್ಳಿಗಳಲ್ಲಿ ಈ ಫ್ಲೋರೋಸಿಸ್ ಸಮಸ್ಯೆ ಇದೆ. ಶಾಲಾ ಮಕ್ಕಳಲ್ಲಿ ಇದು ಅತ್ಯಂತ ಸಾಮಾನ್ಯ ಸಮಸ್ಯೆ ಎಂದು ವಿವರಿಸುತ್ತಾ ಇದ್ದೆ. 

ನಿನ್ನಿಂದಲೇ…

ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ. ಮಧ್ಯೆ ಬಾಯಿ ಹಾಕಿ ಗಂಡ ಹೆಂಡತಿ ಕಡೆ ತಿರುಗಿದ  ‘ ನೇನು ಚೆಪ್ಪಲೆ, ನೀನಿಂಚಿ ಅಂತಾಯಿಂದಿ…( ನಾನು ಹೇಳಿಲ್ವಾ, ನಿನ್ನಿಂದಲೇ ಆಗಿದ್ದು)’ ಸಿಟ್ಟಿನ ಮುಖ ಮಾಡಿ ಏನೇನೋ ಬೈಯ್ಯತೊಡಗಿದ. ಹೆಂಡತಿ ಸಣ್ಣ ಮುಖ ಮಾಡಿ ‘ ಅಂತ ನಾ ತಲೆಪೈನ ಏಸ್ತಾರು..(ನನ್ನ ತಲೆ ಮೇಲೆ ಹಾಕ್ತೀರಿ)’ ಎಂದೆನೋ ಅಳುಧ್ವನಿಯಲ್ಲಿ  ನುಡಿದಳು. ನನಗೆ ಬರುವ ತೆಲುಗು ಅಷ್ಟಕ್ಕಷ್ಟೇ. ಅದರಲ್ಲೂ ಈ ರೀತಿ ಸರಸರ ಮಾತನಾಡಿದರೆ ದೇವುಡಾ ಎನ್ನುವುದೇ! ಆದರೆ ಧಾಟಿ, ಹಾವ-ಭಾವ ನೋಡಿ  ಜಗಳ ಶುರುವಾಯಿತು ಅನ್ನುವುದು ಗೊತ್ತಾಯಿತು. ಗಂಡ ಹೆಂಡತಿ ಜಗಳ ಹೊಸದಲ್ಲ (ಸ್ವಂತ ಅನುಭವ ಬೇಕಷ್ಟಿದೆ). ಆದರೆ ಹೀಗೆ ದಂತವೈದ್ಯರ ಬಳಿ ಮಾತನಾಡುತ್ತಾ ಇದ್ದಕ್ಕಿದ್ದಂತೆ ಜಗಳವಾಗುವುದು ಗೊತ್ತಿರಲಿಲ್ಲ. ಆಶ್ಚರ್ಯ, ಗಾಬರಿ ಎಲ್ಲವೂ ಆಯಿತು. ಅಷ್ಟರಲ್ಲಿ ಮಗಳು ಗಟ್ಟಿಯಾಗಿ ‘ ಅಯಿಂದಿ, ಸೈಲಂಟಗ ಉಂಡಂಡ!’(ಆಯ್ತು ಸುಮ್ನೇ ಇರಿ)  ಎಂದು ಕೂಗಿದಳು. ಇಬ್ಬರೂ ಮುಖ ದುಮ್ಮಿಸಿಕೊಂಡು ಕುಳಿತ ಮೇಲೆ ಗೊತ್ತಾದ ವಿಷಯ ಇಷ್ಟು. ಬೆಂಗಳೂರಿನಲ್ಲಿ ವಾಸವಾಗಿದ್ದರೂ ಹೆಂಡತಿ ತವರೂರು ಕೋಲಾರಕ್ಕೆ ಆಗಾಗ್ಗೆ ಅಂದರೆ ರಜೆಗೆ  ಹೋಗಿ ಬರುತ್ತಾಳೆ. ಅದರಿಂದಲೇ ಮಗಳಿಗೆ ಹೀಗಾಗಿದೆ. ಇನ್ನು ತವರೂರಿಗೆ ಹೋಗುವುದು ಬೇಡ ಎಂದು ಗಂಡನ ಆದೇಶ. ಇಲ್ಲಿ ಅತ್ತೆ ಮಾವರೊಂದಿಗೆ ಇದ್ದು ಕೆಲಸ ಮಾಡಿ ಮಾಡಿ ಅರ್ಧ ಜೀವ ಆಗಿದ್ದೇನೆ. ಆಗಾಗ್ಗೆ ಒಂದೆರಡು ದಿನ ಊರಿಗೆ ಹೋಗುವುದು ಒಂದಷ್ಟು ನೆಮ್ಮದಿ. ಅದೂ ಬೇಡವೆಂದರೆ ಹೇಗೆ ಎಂದು ಹೆಂಡತಿಯ ಗಲಾಟೆ. ನಿಜವಾದ ಸಮಸ್ಯೆ ಇದ್ದದ್ದು ಹೆಂಡತಿಯ ಬಳಗದ ಬಗ್ಗೆ ಗಂಡನಿಗಿದ್ದ ಅಸಹನೆ. ಈಗ ಕೋಲಾರ ಎಂದಿದ್ದೇ ಮಗಳ ಆರೋಗ್ಯದ ನೆಪ ಇಟ್ಟುಕೊಂಡು ಅದನ್ನು ವ್ಯಕ್ತಪಡಿಸಿದ್ದ. ಮಧ್ಯೆ ಸಿಕ್ಕಿಹಾಕಿಕೊಂಡಿದ್ದು ನಾನು! ವಿಧಿಯಿಲ್ಲದೇ ನಾನೇ ಜಗಳ ಪರಿಹರಿಸಬೇಕಾಯಿತು ‘ ಕಲೆಗಳಿಗೆ ಹೆಚ್ಚಿನ ಫ್ಲೋರೈಡ್ ಕಾರಣ ನಿಜ. ಆದರೆ ಅದು ಹೆಚ್ಚಲು, ಕುಡಿಯುವ ನೀರು- ಮಕ್ಕಳು ಗೊತ್ತಿಲ್ಲದೇ ತಿನ್ನುವ ಫ್ಲೋರೈಡ್ ಟೂತ್ ಪೇಸ್ಟ್ ಹೀಗೆ ಅನೇಕ ಕಾರಣಗಳಿವೆ. ಅದೂ ಅಲ್ಲದೇ ಒಂದು ವಾರ ಕೋಲಾರದಲ್ಲಿ ಇದ್ದರೆ ಹೀಗಾಗಲು ಸಾಧ್ಯವಿಲ್ಲ. ಈಗಂತೂ ಆಕೆ ಹತ್ತು ವರ್ಷದವಳು. ಇನ್ನು ಹಲ್ಲಿನ ಮೇಲೆ ಏನೂ ಪರಿಣಾಮ ಬೀರುವುದಿಲ್ಲ. ಅಷ್ಟಾಗಿಯೂ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಿದ್ದರೆ ವಿಶೇಷ ಫಿಲ್ಟರ್ ಬಳಸಬಹುದು. ಈಗಿರುವ ಕಲೆಗೆ ಬ್ಲೀಚಿಂಗ್ ಮಾಡಿದರೆ ಸಾಕು’ ಎಂದು ವಿವರಿಸಿದೆ. 

ಕೂಡಲೇ ಹೆಂಡತಿ ‘ ನಮ್ಮತ್ತೆ , ಮೊಮ್ಮಗಳಿಗೆ ಬ್ರಶ್ ಮಾಡಿಸ್ತೀನಿ ಅಂತಾ ಇಷ್ಟಿಷ್ಟು ಪೇಸ್ಟ್ ಹಾಕಿಸಿ ತಾವು ರೇಡಿಯೋ ಕೇಳ್ತಾ ಕೂರ್ತಿದ್ರು. ಇವಳು ಎಷ್ಟು ನುಂಗಿದ್ದಾಳೋ ಯಾರಿಗೆ ಗೊತ್ತು. ಅದರ ಮೇಲೆ ದಿನಾ  ತೀಸ್ಕೋ ನಾನಾ ಅಂತ ಚಾಕೊಲೇಟ್ ತಂದುಕೊಡ್ತಾರೆ.ಇನ್ನೇನಾಗುತ್ತೆ ?’ ಎಂದಳು. ‘ಆಗಿದ್ದು ಆಯ್ತು ಬಿಡಿ. ಚಾಕೋಲೇಟ್ ಅಪರೂಪಕ್ಕೆ ಪರವಾಗಿಲ್ಲ. ದಿನಾ ಕೊಡುವಂತಿಲ್ಲ..ನಿಮ್ಮ ಅತ್ತೆಗೆ ತಿಳಿಸಿ ಹೇಳಿ’ ಎಂದು ಸಮಾಧಾನ ಮಾಡಿದೆ. ಆಶ್ಚರ್ಯವೆಂದರೆ ಇದುವರೆಗೆ ಉರಿಯುತ್ತಿದ್ದ ಗಂಡ ‘ ಅದೇ ಮೇಡಂ! ಹಿಂದೆ ಆಗಿದ್ದಕ್ಕೆಲ್ಲಾ ನಾವೇನು ಮಾಡಕ್ಕೆ ಆಗುತ್ತೆ? ಹೇಗೋ ಹೊಂದಿಕೊಳ್ಳಬೇಕು. ಅಪ್ಪ-ಅಮ್ಮನ್ನ ಬಿಡೋಕಾಗುತ್ತಾ?’ ಎಂದು ನನ್ನನ್ನೇ ಪ್ರಶ್ನಿಸಿದ. ಸುಖಾಸುಮ್ಮನೇ ಜಗಳದಲ್ಲಿ ಸಿಕ್ಕಿಹಾಕಿಕೊಂಡು ಕಿರಿಕಿರಿಯಾಗಿತ್ತು, ಹುಡುಗಿ ಮತ್ತು ಇತರರು ಚಿಕಿತ್ಸೆಗೆ ಕಾಯುತ್ತಿದ್ದಳು. ಗಂಡ-ಹೆಂಡತಿಯನ್ನು ಅಲ್ಲಿಯೇ ಬಿಟ್ಟು ಒಳಗೆ ನಡೆದೆ. ಮನಸ್ಸು ಮಾತ್ರ  ನಿಜ, ಅಪ್ಪ-ಅಮ್ಮ, ಅತ್ತೆ-ಮಾವ, ಮಕ್ಕಳು, ಗಂಡ ಮತ್ತು ಸಮಾಜ   ಯಾರನ್ನೂ-ಯಾವುದನ್ನೂ  ಬಿಡಲಿಕ್ಕೆ ಸಾಧ್ಯವಿಲ್ಲ ..ಮಹಿಳೆಗೆ ಮಾತ್ರವೇ?  ಎಂದು ಪ್ರಶ್ನಿಸಿತು!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: