ಡಾ ಎಸ್ ಬಿ ಜೋಗುರ ಬರೆದ ಸಣ್ಣಕಥೆ

ಹೊತ್ತಿಗೊದಗಿದ ಮಾತು

ಡಾ ಎಸ್ ಬಿ ಜೋಗುರ

ಬಿಜಾಪುರದ ಗಾಂಧೀ ಚೌಕಿನೊಳಗ ಸಂಜಿ ಆಗತಿದ್ದಂಗ ಹಗೂರಕ ಜನ ಪಬ್ಲಿಕ್ ಲಾಯಬ್ರರಿ ಮುಂದ ಹರಕೊಂಡು ಬರತಿದ್ದರು.  ಹಂಗ ಬಂದವರು ಗಪೂತಲೇ ಭಜಿ ಯಮನಪ್ಪನ ತಳ್ಳೂ ಗಾಡಿ ಕಾಯಕೊಂತ ನಿಲ್ಲತಿದ್ದರು. ಅಂವಾ ಇನ್ನೂ ಫರ್ಲಾಂಗ ದೂರ ಅದಾನಂದರೂ ಕಣ್ಣಗಲ ಮಾಡಿ ‘ಪಾಳಿ ಹಚ್ಚರಿ.. ಪಾಳಿ ಹಚ್ಚರಿ’ ಅಂತ ತಮ್ಮ ತಮ್ಮೊಳಗೇ ಹುರುಪಲೇ ಮಾತಾಡತಿದ್ದರು. ಅಟ್ಟೂ ಮೀರಿ ಬಾಳ ತಡ ಆಗಿ, ರಾತ್ರಿ ಹಿಟ್ಟ ಮುಗದು, ಭಜಿ ಸಿಗಲಿಲ್ಲಂದ್ರ ಯಮನಪ್ಪನ್ನ ತರಾಟೆಗೆ ತಗೊಂಡು, ಸಲುಗೆಯಿಂದ ವಾರ್ನಿಂಗ್ ಮಾಡತಿದ್ದರು. ‘ಯಮನಪ್ಪ,  ನನ್ ನೆನಪ ಇಟ್ಗೊ .. ನಾಳಿಗಿ ಬರ್ತೇನಿ ನಾಳಿನೂ ನೀ ಹಿಂಗೇ ಮಾಡದರ ನಿನ್ ಭಜಿ ತಿನ್ನೂದೇ ಬಿಡ್ತೀವಿ’ ಅಂದದ್ದೇ ಯಮನಪ್ಪ ನಕ್ಕೊಂತ ‘ಹಂಗ್ಯಾಕ ಅಂತೀರಿ ಸೈಬರ, ನಾಯೇನ ಬೇಕಂತ ಮಾಡೀನ್ಯಾ.. ವ್ಯಾಳೆ ಐತು, ಪೋಲಿಸರ ಕಿರಕಿರಿ ಬ್ಯಾರೆ, ನೀವೇ ನೋಡಿರೆಲ್ಲ.. ಹಿಟ್ಟೂ ಮುಗೀತು. ನಾಳಿಗಿ ಬಂದಿದ್ದೇ ತಾಬಡತೋಬಡ ಬಿಡೂದುಬಿಟ್ಟು ನಿಮಗ ಮೊದಲ ಕೊಟ್ಟು ಕಳಸೇ ಮುಂದಿನ ಗಿರಾಕಿ’ ಅಂದಾಗ ಭಜಿ ಸಿಗಲಾರದ ಗಿರಾಕಿ ಸಮಾಧಾನ ಪಟ್ಗೊಂಡು ಹೋಗತಿತ್ತು. ಆ ತಳ್ಳೂ ಗಾಡಿ ತಲಿ ಸುತ್ತಾಲಕೂ ಕಲರ್ಪುಲ್ ಪೇಟಾ ಸುತ್ತದಂಗ ಕನ್ನಡ, ತೆಲುಗು, ಹಿಂದಿ ಸಿನೇಮಾದ ಹೀರೋ, ಹೀರೋಯಿನ್ ಗಳ ಪೋಟೊಗಳೇ ಎದ್ದು ಕಾಣತಿದ್ವು. ಗಾಡಿ ಒಳಗ ಇದ್ದದ್ದು ಒಂದು ಸಣ್ಣ ನೀರಿನ ಟಾಕಿ, ಅದರ ಬಾಯಿಗಿ ಮಲ ಮಲ ದೋತರ ಬಟ್ಟಿಯಿಂದ ಬಿಗಿದು ನೀರು ಸೋಸುವಂಗ ಮಾಡಿದ್ದರು.

ಬಾಜೂ ಒಂದ್ನಾಲ್ಕು ನೀರ ತುಂಬಿದ ಪ್ಲಾಸ್ಟಿಕ್ ಕೊಡ. ಒಂದು ಬಣ್ಣದ  ಸ್ಟೊವ್, ಎಣ್ಣಿ ಡಬ್ಬಿ, ಒಂದೆರಡು ಡಬರಿ, ನಾಕು ತಂಬಗಿ, ಒಂದು ಪೆಟ್ರೊಮ್ಯಾಕ್ಸ್.  ಹಂಗೇ ಅಪ್ಪಿ ತಪ್ಪಿ ಮ್ಯಾಲ ಗಾಡಿ ನಿರಕಿಯೊಳಗ ಕಣ್ಣು ಹಾಯ್ಸದರ ಒಂದಷ್ಟು ರದ್ದಿ ಪೇಪರ, ಪ್ಲಾಸ್ಟಿಕ್ ಕವರ್. ಇವಿಷ್ಟು ಅವರ ಭಜಿ ಬ್ಯುಜಿನೆಸ್ ನ ಬಾರದಾನಿ. ಅವನ ಹೆಂಡತಿ ರತ್ನವ್ವ ಭಜಿ ಕಟ್ಟಿ ಕೊಡೂದು ರೊಕ್ಕಾ ತಗೋಳೂದು ಮಾಡದರ, ಆಕಿ ಗಂಡ ಯಮನಪ್ಪ ಒಂದು ಸಾರಿ ಗೋಲ್ ಭಜಿ, ಇನ್ನೊಂದು ಸಾರಿ ಮಿರ್ಚಿ ಭಜಿ, ಮತ್ತೊಮ್ಮ ಕಟ್ ಭಜಿ ಹಿಂಗ ಒಂದರ ಬೆನ್ನಿಗಿ ಒಂದೊಂದು ವೆರೈಟಿ ಕಡಾಯಿಯೊಳಗ ಹಾಕಿ, ಕರದು ತಗದು ಬುಟ್ಟಿಗೆ ಸುರುವೂ ಪುರಸತ್ತಿಲ್ಲದೇ ಖಾಲಿ ಆಗಿ ಬಿಡತಿದ್ವು. ನನಗ..ನಿನಗ ಅಂತ ಜನ ಅಡ್ರಾಸಿ ಒಬ್ಬರ ಮ್ಯಾಲ ಒಬ್ಬರು ಮುಗಿಬಿದ್ದು ತಗೋತಿದ್ದರು. ಹಂಗಂತ ಯಮನಪ್ಪ ಮರ್ತಿದಾಗ ಯಾರೂ.. ಎಲ್ಲೂ ಮಾಡಲಾರದ ಭಜಿಯಂತೂ ಮಾಡ್ತಿರಲಿಲ್ಲ… ಅದು ಮಾಮೂಲು ಭಜಿನೇ. ಒಂದೇ ಅಳತಿ ಮ್ಯಾಲ ಹಿಟ್ಟ ಕಲಸಿ, ಖಾರ, ಉಪ್ಪು, ಕರಿಬೇವು, ಪುದಿನಾ, ಕೊತಂಬರಿ, ಅಜಿವಾನ ಹಾಕಿ, ಭೇಷಿ ಗಮ್ ಅನ್ನೂವಂಗ ಮಾಡತಿದ್ದ. ನಾಕು ಮಂದಿ ಅಂವಾ ಭಜಿ ಬಾಳ ಚುಲೊ ಮಾಡ್ತಾನ ಅಂತ ಪುಕ್ಕಟ ಪಬ್ಲಿಸಿಟಿ ಕೊಟ್ಟಿದ್ದೇ ಆ ಪರಿ ಗಿರಾಕಿ ಕುಂತಿದ್ವು. ಅಂಥಾ ಯಮನಪ್ಪ ಇಂಥಾ ಭಜಿ ಬಿಜಿನೆಸ್ ಮ್ಯಾಲೇ ಒಂದು ಜೋರಾಪುರದೊಳಗ ಸಣ್ಣದೊಂದು ಕಟ್ಟಿದ ಮನಿ ತಗೊಂಡ, ತಾನು ಓದದಿದ್ದರೂ ಎರಡೂ ಮಕ್ಕಳಿಗಿ ಚಲೋ ಸಾಲಿಗಿ ಹಾಕಿದ್ದ.

ಯಮನಪ್ಪ ತನ್ನೂರು ಬಮನಳ್ಳಿಯೊಳಗ  ‘ಪಾಪ ಹುಚ್ಚ ಹರೆದ ಮನುಷ್ಯಾ’ ಅಂತ ಬಿರುದು ತಗೊಂಡಂವ. ಈ ಬಮನಳ್ಳಿ ಯಮನಪ್ಪ ತನ್ನೂರು ಬಿಟ್ಟು ಬಿಜಾಪೂರಕ ಬಂದದ್ದು, ಗಾಂಧೀ ಚೌಕಿನೊಳಗ ಭಜಿ ಯಾಪಾರ ಸುರು ಮಾಡಿದ್ದರ ಹಿಂದ ಒಂದು ಬ್ಯಾರೇ ಕತಿನೇ ಐತಿ…     ಹತ್ತು ವರ್ಷದ ಹಿಂದ ಈ ಯಮನಪ್ಪ ಬಿಜಾಪುರ ಜಿಲ್ಲಾದೊಳಗಿರೋ ಬಮನಳ್ಳಿ ಅನ್ನೋ ಊರೊಳಗ ಸಿಂದಗಿ ರಸ್ತೆಕ ಅಂಟಿಕೊಂಡಿರೋ ಹೊಲದೊಳಗ ಗುಡಸಲ ಹಾಕೊಂಡು, ಎರಡೆತ್ತ ಇಟ್ಗೊಂಡು ಒಕ್ಕಲತನ ಮಾಡತಿದ್ದ. ಅವನಪ್ಪ ಮಲಕಾಜಿಗಿ ನಾಕು ಮಕ್ಕಳು. ಎರಡು ಹೆಣ್ಣು, ಎರಡು ಗಂಡು. ಈ ಯಮನಪ್ಪ ಮತ್ತ ಚಂದ್ರಕಾಂತ ಅನ್ನೊ ಇಬ್ಬರು ಗಂಡ ಮಕ್ಕಳ ಪೈಕಿ ಯಮನಪ್ಪನೇ ದೊಡ್ಡಂವ. ಅಂವಾ ಓದದವನಲ್ಲ.. ಬರದವನಲ್ಲ ಆದರ ದುಡಿಯೂ ವಿಷಯದೊಳಗ ಮಾತ್ರ ಬಾಳ ಗಟ್ಟಿ. ಹಿಂದೊಮ್ಮ ಆವಾಗಿನ್ನೂ ಅವನ ಲಗ್ನ ಆಗಿರಲಿಲ್ಲ ಆಗ ಜಬರ ಗರಕಿ ಇರೋ ಇಡೀ ಹೊಲಕ್ಕ ಹೊಲಾನೆ ಒಬ್ಬನೇ ನಿಂತು ನಟ್ ಕಡದು ಸುತ್ತ ನಾಕು ಹಳ್ಳಿಗಿ ಸುದ್ದಿ ಆಗಿದ್ದ. ಯಮನಪ್ಪನ ಅಣ್ಣ ಚಂದ್ರಕಾಂತ  ಡಿಗ್ರಿಮಟ ಓದಿ, ಆಗಿನ ಟಿ.ಸಿ.ಎಚ್ ಮುಗಿಸಿ ಪ್ರಾಥಮಿಕ ಸಾಲಿ ಮಾಸ್ತರ ಆಗಿದ್ದ.  ಅಪ್ಪ ಮಲಕಾಜಿ ಸತ್ತ ಮ್ಯಾಲ ಆಸ್ತಿ ಪಾಲಾಗಿದ್ದರೂ ಎರಡೂ ಹೊಲಾ ಯಮನಪ್ಪನೇ ಮಾಡತಿದ್ದ. ತನಗಿಂತಲೂ ತನ್ನ ತಮ್ಮಂದೇ ತುಸು ಚಲೊ ಬೆಳೀಲಿ ಅಂತ ಹೇಳಿ ಹಗಲು ರಾತ್ರಿ ಕೂಡೇ ನೀರು ಬಿಡ್ತಾ  ಬಾಳ ಸೌಸಾಟಿ ಮಾಡತಿದ್ದ. ಯಮನಪ್ಪನ ಹೆಂಡತಿ ರತ್ನವ್ವ ಜೋಡೆಲುಬಿನ ಹೆಂಗಸು, ಆಕಿನೂ ದುಡಿಯಾಕ ಬಾಳ ಯಮಕ ಇದ್ದವಳು.

ಇಬ್ಬರೂ ಬಾರೀಕಾಲ ಹೊಲದಾಗ ಇದ್ದು ಹೊಲಾನ ಉತ್ತಿ, ಬಿತ್ತಿ ಭೇಷಿನ್ಯಾಗೆ ಪೀಕ್ ಕೈಗಿ ಬರುವಂಗ ಮಾಡ್ತಿದ್ದರು. ಇಂಥಾ ಯಮನಪ್ಪಗ ಎರಡು ಮಕ್ಕಳು. ಒಂದು ಗಂಡು, ಒಂದು ಹೆಣ್ಣು. ಚಂದ್ರಕಾಂತ ಮಾಸ್ತರಗ ಅದ್ಯಾಕೋ ಮಕ್ಕಳಾಗಲಿಲ್ಲ. ಅವನ ಹೆಂಡತಿ ಮಾಡಬಾರದ್ದೆಲ್ಲಾ ಮಾಡದಳು. ಸೋಳಾ ಸೋಮಾರ ವೃತ ಮಾಡದಳು, ಹುತ್ತಿನ ಮಣ್ಣ ತಂದು ನಾಗಪ್ಪ ಮಾಡಿ ಪೂಜೆ ಮಾಡದಳು, ಏನೇನೋ ಹಾಳಾಮೂಳಾ ಔಷದ ಕುಡದಳು. ಆದರೂ ಮಕ್ಕಳಾಗಲಿಲ್ಲ. ಅದೇ ನೆಪದೊಳಗ ಮಾಸ್ತರ ಕುಡಿಯಾಕ ಸುರು ಮಾಡದ. ಊರಾನ ಮಂದಿ ‘ಪಾಪ ಹುಚಬಾರಗಿ ಅಣ್ಣ ಹಗಲು ರಾತ್ರಿ ಹೊಲದೊಳಗ ಬಿದ್ದು ಮೈ ಮುರೀತೈತಿ, ಇಂವಾ ನೋಡದರ ಹಾಡ ಹಗಲೇ ಕುಡಕೊಂತ ತಿರುಗತಾನ.’ ಅಂತ ಮಾತಾಡತಿದ್ದರು. ತಮ್ಮನ ಬಗ್ಗೆ ಬಾಳ ಅಭಿಮಾನ, ಪ್ರೀತಿ, ಗೌರವ ಇರೋ ಯಮನಪ್ಪ ಅವನಿಗಿ ಒಂದೇ ಒಂದು ದಿನ ನೀ ಯಾಕ ಹಿಂಗ ಕುಡೀತಿ..? ಅಂತ ಕೇಳದಂವ ಅಲ್ಲ. ಎಟ್ಟೇ ಆಗಲಿ ಕಲತವರು. ಅವರದೇ ನೂರೆಂಟು ತಿಪಲ ಇರತೈತಿ, ತಾ ಕೇಳೂದು ಸರಿಯಲ್ಲ ಅಂತ ಸುಮ್ಮ ಇದ್ದಂವ. ಅಕಾಡಿ ಮಿರಜದಿಂದ ಹಿಡದು ಇಕಾಡಿ ಸೋಲಾಪುರ, ಆ ಕಡೆ ಹೈದ್ರಾಬಾದ್ ಮಟಾ ಎಲ್ಲೆಲ್ಲಿ ಚಲೊ ಡಾಕ್ಟರ್ ಅದಾರಂತ ಮಂದಿ ಹೇಳತಾರ ಅಲ್ಲೆಲ್ಲಾ ಹೋಗಿ ತೋರಸಕೊಂಡು ಬಂದಿದ್ದ. ಆದರೂ ಮಕ್ಕಳಾಗಿರಲಿಲ್ಲ. ಮಾಸ್ತರ ಹೆಂಡತಿ ಶಂಕ್ರಮ್ಮ ತನ್ನ ನೆಗೇಣಿ ರತ್ನಾಳ ಮಕ್ಕಳನ್ನ ಕಂಡ್ರ ಸಾಕು ಒಂದು ಸವನ ಹೊಟ್ಟಿ ಉರಿಯಕ್ಕಿ. ಒಂದಿನ ಯಮನಪ್ಪ ಮಗ ಸಂಗಮೇಶನ ಕರಕೊಂಡು ಅವನನ್ನ ಸಾಲಿಗಿ ಹಾಕಬೇಕಂತ ತಮ್ಮ ಚಂದ್ರಕಾಂತನ ಬಳಿ ಕರಕೊಂಡು ಬಂದ. ಆವಾಗ ಶಂಕ್ರಮ್ಮ ಗಂಡಗ ಒಳಗ ಕರದು ಕದ್ದಲೇ ‘ನೀವೇನೂ ಒಣಾ ಕಾರಬಾರ ಮಾಡಬ್ಯಾಡ್ರಿ.. ಅವರ ಮಕ್ಕಳದು ಅವರು ಮಾಡಲಿ’ ಅಂತ ಹೇಳೂದು ಯಮನಪ್ಪನ ಕಿವಿಗಿ ಬಿದ್ದಿತ್ತು. ಆದರ ಶಂಕ್ರಮ್ಮ ವೈನಿ ತುಸು ಖೋಡಿ ಇದ್ದರೂ ತನ್ನ ತಮ್ಮ ಅಂಥಂವಲ್ಲ ಅಂತ ಅವನ ಮುಂದ ಕೈ ಕಟಗೊಂಡು ನಿಂತಿದ್ದ.

ಹೆಂಡತಿ ಹೇಳಿದ್ದು ಚಂದ್ರಕಾಂತನ ಮನಸಿನೊಳಗ ಕಟಿಯಾಕತ್ತಿತ್ತು. ಆದರೂ ಎಟ್ಟೇ ಆಗಲಿ ಒಡಹುಟ್ಟಿದ ಅಣ್ಣ, ತನ್ನ ಹೊಲಾನೂ ಅವನೇ ನೋಡಕೋತಾನ ಅನ್ನೋ ಖಬರಿತ್ತು. ಆ ಹೊಲಾ ಮಾಡೂದರ ಬಗ್ಗೆನೂ ಆಕಿದು ತಕರಾರಿತ್ತು. ಅಂವಾ ಅರ್ಧ ಮಾಲ ತಾನೇ ಇಟಗೊತಾನ ಅಂತ ಸುಳ್ಳ್ ಸುಳ್ಳೇ  ಕತಿ ಕಟ್ಟಿದ್ದಳು. ಆ ಮಾತು ಯಮನಪ್ಪನ ಕಿವಿಗಿ ಬಿದ್ದ ಮ್ಯಾಲೂ ಅಂವಗ ಬ್ಯಾಸರ ಆಗಿರಲಿಲ್ಲ. ಎಟ್ಟೇ ಆಗಲಿ ತನ್ನ ಅಣ್ಣನ ಹೆಂಡತಿ ಬ್ಯಾರೆ ಹೊರಗಿನವರಲ್ಲಲ್ಲ.. ಅನ್ಕೊಂತಿದ್ದ. ತಿಂಗಳಗಟ್ಟಲೇ ತಿರಗಿದ ಮ್ಯಾಲೂ ಮಗನಿಗಿ ಸಾಲಿಗಿ ಹಾಕೋ ಕನಸು ನನಸಾಗಲಿಲ್ಲ. ಅವನೇ ಖುದ್ದಾಗಿ ಭಂಡ ಧೈರ್ಯ ಮಾಡಿ ಸಾಲಿಗಿ ಹೆಸರ ಹಚ್ಚಾಕ ಕರಕೊಂಡು ಹೋದ. ನೋಡಿದ ಮಂದಿ ಉಗದಾರು ಅನ್ನೋ ಭಯಕ್ಕ ಚಂದ್ರಕಾಂತ ಸ್ಟಾಪ್ ರೂಮಿಂದ ಹೊರಗ ಬಂದು ಅವನನ್ನ ಮಾತಾಡಿಸಿ, ಆ ಹುಡಗ ಸಂಗಮೇಶನ್ನ ಸಾಲಿಗಿ ಸೇರಸಿದ್ದ. ಯಮನಪ್ಪಗ ತನ್ನ ಮಗಗ ನೌಕರಿ ಸಿಕ್ಕಷ್ಟೇ ಖುಷಿಯಾಗಿತ್ತು. ಬರೂ ವರ್ಷ ಮಗಳು ಆಶಾಳನ್ನ ಸಾಲಿಗಿ ಸೇರಸಬೇಕು. ತಾನು ತನ್ನ ಹೆಂಡತಿ ಕಷ್ಟ ಪಟ್ಟಂಗ ಮಕ್ಕಳು ಪಡೂದು ಬ್ಯಾಡ ಅವರು ಓದಲಿ. ತನ್ನ ಅಕ್ಕತಂಗಿಯರಿಗೆ ಅಪ್ಪ ಓದಸಲಿಲ್ಲ, ಚಿಕ್ಕ ವಯಸ್ಸಿನೊಳಗ ಅವರಿಗಿ ಮದುವಿ ಮಾಡಿ ಕೊಟ್ಟ. ಅವ್ವ ಬೇಕಾದಷ್ಟು ಹೇಳದ್ರೂ ಅಪ್ಪ ಕೇಳಿರಲಿಲ್ಲ. ಅಪ್ಪ ಹೋದ ಎರಡು ವರ್ಷದೊಳಗ ಅವನ ಬೆನ್ನಿಂದೇ ಅವ್ವನೂ ಹೋದಳು. ಆಕಿ ಸಾಯೂಮುಂದ ‘ನಿಮ್ಮಪ್ಪ ಮಾಡದಂಗ ಮಾಡಬ್ಯಾಡ, ನಿನ್ ಹೆಣ್ ಹುಡಗಿ ಹುಷಾರೈತಿ ಅದಕ್ಕ ಓದಸು’ ಅಂತ ಹೇಳಿದ್ದನ್ನ ಯಮನಪ್ಪ ಮರತಿರಲಿಲ್ಲ.

ಅಂತೂ ಇಂತೂ ಕಟಬಿಟಿ ಮಾಡಿ ಯಮನಪ್ಪ ತನ್ನ ಎರಡೂ ಮಕ್ಕಳನ್ನ ಸಾಲಿಗಿ ಹಾಕಿದ ಸುದ್ದಿ ಕೇಳಿ ಶಂಕ್ರಮ್ಮ ಗಂಡ ಚಂದ್ರಕಾಂತನ ಮ್ಯಾಲ ಜಿಗದಾಡಿದ್ದಳು. ‘ಮಳ್ಳರಂಗ ಮಾತಾಡಬ್ಯಾಡ. ಹಂಗ ಮಾಡಾಕ ಬರಲ್ಲ , ಅವನೇ ಸಾಲೀಮಟ ಬಂದು ನನ್ನ ಮಕ್ಕಳ ಹೆಸರ ಹಚ್ಗೊರಿ ಅಂತ ಅಂದಾಗ ಯಾರಿಗೂ ಇಲ್ಲ ಅನ್ನಾಕ ಆಗಲ್ಲ.’ ಅನ್ನೋ ಮಾತ ಕೇಳಿದ್ದೇ ಶಂಕ್ರವ್ವ ‘ಸಾಕು ತಗೊರಿ ನನಗೆಲ್ಲಾ ಗೊತೈತಿ’ ಅಂತ ಮೂಗ ಮುರದಿದ್ದಳು. ಗಂಡ ಚಂದ್ರಕಾಂತಗೂ ಒಳಗೊಳಗ ಸಂಕಟ ಇತ್ತು. ಆ ಹುಡುಗರು ಕಲತು ನಾಳೆ ದೊಡ್ಡೂ ಆಗಿ, ಕಲತು ತಮ್ಮಪ್ಪನೇ ಎಲ್ಲಾ ಕೆಲಸಾ ಮಾಡೂದು ಅಂತ ಅವರಪ್ಪಗ ಏನ್ಕೆನರೇ ತಿಳುವಳಿಕಿ ನೀಡಿ ತನ್ನ ಮರ್ಯಾದೆ ಕಾಸಿನ ಕಿಮ್ಮತ್ತಿಗೂ ಉಳೀದಂಗ ಮಾಡದರ..? ಅನ್ನೋ ಲೆಕ್ಕಾಚಾರದೊಳಗ  ಚಂದ್ರಕಾಂತನ ತಲಿಯೊಳಗ ಕೆಟ್ಟ ಬುದ್ದಿ ಹೊಕ್ಕೊಂಡಿತ್ತು. ಹೆಂಡತಿ ಶಂಕ್ರಮ್ಮಂತೂ ಅದಕ್ಕ ಪೂರಾ ಸಪೋರ್ಟ್ ಇದ್ದಳು. ಅಂದುಕೊಂಡಂಗ ಆವತ್ತ ಬಿಳಿ ಪೇಪರ್ ಮ್ಯಾಲ ಯಮನಪ್ಪನ ಸಹಿ ತಗೊಂಡು ಮುಂದ ನಿನ್ನ ಮಕ್ಕಳಿಗಿ ಉದ್ಯೋಗ ಕೊಡ್ಸೂ ಜವಾಬ್ದಾರಿ ನಂದು ಅಂತ ಸುಳ್ಳ ಹೇಳಿ, ತಮ್ಮ ಅನ್ನೋ ಭೂಪನೇ ಅಣ್ಣಗ ಮೋಸಾ ಮಾಡಿದ್ದ. ಓದಾಕ ಬರಿಯಾಕ ಬರದಿರೋ ಯಮನಪ್ಪ ಆ ಹೆಬ್ಬಟ್ಟಿನ ಗುರುತು ಯಾಕ.. ಏನು ಅಂತ ಕೇಳದೇ ಅಣ್ಣನ ಮ್ಯಾಲ ಪೂರಾ ಭರೋಸಾ ಇಟ್ಟು ಒತ್ತಿ ಬಿಟ್ಟಿದ್ದ. ಅವತ್ತೊಂದಿನ ಇದ್ದಕ್ಕಿದ್ದಂಗ ಪೋಲಿಸರು ಬಂದು ಇಲ್ಲಿಂದ ಜಾಗಾ ಖಾಲಿ ಮಾಡ್ರಿ ಅಂತ ಅಂವಾ ಬೆರಳು ಒತ್ತಿರೋ ಪೇಪರ್ ತಂದು ಇವನ ಮುಂದ ಹಿಡದಾಗ ಅಂವಾ ದಂಗಾಗಿ ಹೋಗಿದ್ದ. ಅವರ ಮುಂದ ನನ್ನ ತಮ್ಮನೇ ನನಗ ಮೋಸ ಮಾಡದ ಅಂತ ಗೋಳಾಡಿ ಅತ್ತಿದ್ದ. ಅಂವಾ ಉದ್ದಾರ ಆಗಲ್ಲ ಹಾಳಾಗಿ ಹೋಗ್ತಾನ ಅಂತ ರತ್ನವ್ವ ಶಾಪ ಹಾಕಿದ್ದಳು.

ಎರಡೂ ಮಕ್ಕಳಗಿ ಅಲ್ಲಿ ಏನು ನಡದೈತಿ.. ತಮ್ಮ ಕಾಕಾ ಅಪ್ಪಗ ಏನು ಅನ್ಯಾಯ ಮಾಡದ ಅಂತ ತಿಳಿಲಾರದಕ್ಕ ಪಿಳಿ ಪಿಳಿ ಕಣ್ಣ ಬಿಟ್ಗೊಂಡು ಅಪ್ಪ ಅವ್ವನ್ನ ನೋಡತಿದ್ವು. ನನ್ನ ಆಸ್ತಿ ಬೇಕಂತ ಕೇಳದರ ನಾನೇ ಕೊಡತಿದ್ದೆ. ಈ ಮಡಸ್ ಆಸ್ತಿ ಸಲಾಗಿ ನನಗೇ ಮೋಸ ಮಾಡದ ಅಂತ ಯಮನಪ್ಪ ಒಂದು ಸವನ ಗೋಳಾಡಿದ್ದ. ಯಾಕೀಂಗ ಮಾಡಿ ಅಂತ ಕೇಳಾಕೂ ಅವನಿಗಿ ಮುಖ ಉಳದಿರಲಿಲ್ಲ. ಅಂವಾ ಸತ್ತರೂ ಅವನ ಮಣ್ಣಿಗಿ ಬರಬಾರದು ಅನ್ನೋ ತೀರ್ಮಾನ ಮಾಡಿ, ಉಟ್ಟ ಬಟ್ಟಿ ಮ್ಯಾಲ ಹೆಂಡತಿ ಮಕ್ಕಳನ್ನ ಕರಕೊಂಡು ನಡದುಬಿಟ್ಟ. ಇಡೀ ಊರಿಗೂರೇ ಉಗದರೂ ಆ ಮಾಸ್ತರಗ ಮಾತ್ರ ನಾಚಿಗಿ ಇರಲಿಲ್ಲ. ಮುಂದೇನು ಮಾಡಬೇಕು ಅಂತ ಯಮನಪ್ಪಗ ದಿಕ್ಕು ತೋಚಲಿಲ್ಲ. ಅದೂ ಅಲ್ಲದೇ ಬ್ಯಾರೆಯವರು ಹೇಳೊ ಕೆಲಸ ಬಿಟ್ಟರೆ ತಾನೇ ಸ್ವಂತ ಬ್ಯಾರೆ ಮಾಡಿ ಗೊತ್ತಿಲ್ಲ. ಅವನ ಆಸ್ತಿಗಿಂತಲೂ ಮಕ್ಕಳ ಸಾಲಿ ಮುಕ್ಕಾಗಿದ್ದರ ಬಗ್ಗೆ ಅಂವಗ ಬಾಳ ಬ್ಯಾಸರಿತ್ತು. ಏನು ಮಾಡೂದು ಅಂತ ತಿಳಿಲಾರದಂಗ ಆಗಿತ್ತು. ಹೆಂಡತಿ ರತ್ವವ್ವಳ ತವರಮನಿ ಬಾಗೇವಾಡಿ. ಆಕಿಗಿ ರಾಚಪ್ಪ ಅನ್ನೋ ಒಡಹುಟ್ಟಿದ ಒಬ್ಬ ಅಣ್ಣ ಇದ್ದ.   ರತ್ನವ್ವಳ ಮ್ಯಾಲ ಮೊದಲಿಂದ್ಲೂ ಬಾಳ ಜೀವ ಇದ್ದಂವ. ಅಲ್ಲಿಗೆ ಹೋಗೂದು ಚುಲೊ ಅಂತ ಇಬ್ಬರೂ ಮಕ್ಕಳು ಮರೀನ್ನ ಕಟಕೊಂಡು ನಡದರು. ಅದು ಬಾಗೇವಾಡಿಯ ಮುಖ್ಯ ರಸ್ತೆಯಲ್ಲಿರೋ ಬಸವೇಶ್ವರ ಖಾನಾವಳಿ. ಅವರಿಗೆ ಮಾಡಲಿಕ್ಕ ಸಾಧ್ಯ ಇರೋ ಏಕೈಕ ವ್ಯವಹಾರ. ಅದನ್ನೇ ರತ್ನವ್ವಳ ಅಣ್ಣ ಯೋಚಿಸಿ, ಆ ಖಾನಾವಳಿಯನ್ನ ಇಟ್ಟುಕೊಟ್ಟಿದ್ದ. ರತ್ನವ್ವ ಬೆರಳು ನೆಕ್ಕೂವಂಗ ಅಡುಗಿ ಮಾಡೂವಕ್ಕಿ, ಬಾಳ ಚುರುಕು.  ಗಂಡ ಯಮನಪ್ಪ ದುಡಿಯೋದರಲ್ಲಿ..

ಇದನ್ನ ಸರಿ ಮಾಡಿ ನಡಸಕೊಂಡು ಹೋಗ್ತಾರ ಅನ್ನೋ ಭರೋಸಾ ರತ್ನವ್ವಳ  ಅಣ್ಣ ರಾಚಪ್ಪಗೂ ಇತ್ತು. ಅಂದುಕೊಂಡಂಗ ಬಸವಜಯಂತಿ ದಿನಾನೇ ಆ ಖಾನಾವಳಿ ಸುರು ಆಯ್ತು.   ಖಾನಾವಳಿ ಹಿಂದ ಒಂದು ಸಣ್ಣ ಮನಿ ಇತ್ತು. ಅದನ್ನೂ ರಾಚಪ್ಪ ಬಾಡಿಗೆ ಹಿಡದು ಅವರಿಗಿ ಅಲ್ಲೇ ಇರಲಾಕ ಅನುಕೂಲ ಆಗೂವಂಗ ಮಾಡಿ ಕೊಟ್ಟಿದ್ದ. ಯಮನಪ್ಪಗ ಒಳಗೊಳಗ ಎಲ್ಲೋ ಒಂದು ಕಡಿ ಚುಚ್ಚದಂಗ ಆಗತಿತ್ತು. ಬೀಗರ ಹಂಗಿನೊಳಗ ಉಳಿಯೂದಂದ್ರ ಅವನಪ್ಪ ಯಾವತ್ತೂ ಸೇರತಿರಲಿಲ್ಲ. ಈಗ ತನ್ನ ಪರಿಸ್ಥಿತಿ ಎಲ್ಲಿಗೆ ಬಂತು ಅನ್ನೂದನ್ನ ನೆನದು ಒಳಗೊಳಗ ಬಾಳ ತಾಪ ಆಗತಿತ್ತು. ಇಬ್ಬರೂ ಮಕ್ಕಳನ್ನ ಅಲ್ಲೆ ಚಲೊ ಸಾಲಿಗಿ ಹಾಕಿದ. ಖಾನಾವಳಿ ಯಾಪಾರ ಚುಲೊ ಇತ್ತು. ದಿನದಿಂದ ದಿನಕ್ಕ ಗಿರಾಕಿ ಹೆಚ್ಚ ಆಗಾಕತದ್ವು. ರೊಟ್ಟಿ ಬಡಿಯಾಕ ಆಳು ಇಟ್ಟುಕೊಳ್ಳೋ ಮಟ್ಟದೊಳಗ ಯಾಪಾರ ಬೆಳೀತು. ಪಾರ್ಸಲ್ ಮಾಡಾಕೇ ಒಬ್ಬರು ನಿಲ್ಲಬೇಕಾಯ್ತು. ಆ ಪರಿ ಗಿರಾಕಿ ನೋಡಿ ರಾಚಪ್ಪಗೂ ದಿಗಿಲಾಯ್ತು. ಮೊದಲೂ ಅಲ್ಲೊಂದು ಖಾನಾವಳಿ ಇತ್ತು. ಆದರ ಆ ಪರಿ ಗಿರಾಕಿ ಯಾವತ್ತೂ ಇರಲಿಲ್ಲ. ಆ ಜಾಗಾ ಸರಿ ಇಲ್ಲ, ಅಲ್ಲಿ ಬರೀ ಲಾಸ್ ಆಗತೈತಿ ಅನ್ನೋ ಮಾತು ಆ ಜಾಗದ ಮ್ಯಾಲ ಹುಟ್ಕೊಂಡಿತ್ತು. ಅಂಥಾ ಜಾಗದೊಳಗ ಜನಾ ಪಾಳಿ ಹಚ್ಚಿ ಕುಂತು ಊಟಾ ಮಾಡಿ ಹೋಗೋ ಸುದ್ದಿ ಕೇಳಿದ್ದೇ ರಾಚಪ್ಪನ ಹೆಂಡತಿ ಕುಸುಮವ್ವಗ ಕಸಿವಿಸಿ ಸುರು ಆಯ್ತು.

ಆವತ್ತೊಂದಿನ ಊಟಕ್ಕ ಬಡಸೋ ಮುಂದ ಖಾನಾವಳಿ ಯಾಪಾರ ಜೋರ್ ಐತಿ ಅಂತೀರಿ, ಲಾಭದೊಳಗ ನೀವೂ ಪಾಲು ಕೇಳ್ರೆಲ್ಲ’ ಅಂತ ಗಂಡಗ ಬೆನ್ನಿಗಿ ಬಿದ್ದಳು. ಅಂವಾ ‘ಅಲ್ವೆ, ಪಾಪ ದುಡಿಯೂದೆಲ್ಲಾ ಅವರು ನಾ ಪಾಲ ಕೇಳಿದರ..?’ ‘ಹೌದು ನೀವು ಬಂಡವಾಳ ಹಾಕಿ ಕೊಟ್ಟೀಲ್ಲನೂ..’ ‘  ಅದನ್ನ ಬ್ಯಾಂಕಿಗಿ ಕಟ್ಟಾಕತ್ತಾರ. ಅದೂ ಅಲ್ಲದೇ ಇದರಾಗ ಯಾರು ಹೊರಗಿನವರು ಅದಾರ..? ಅವಕೂ ಎರಡು ಕಲಿಯೂ ಮಕ್ಕಳು, ಎಲ್ಲಾನೂ ರಟ್ಟೀ ಮ್ಯಾಲೇ ಆಗಬೇಕು..’ ಅಂದಾಗ ಕುಸುಮಾಳ ಮುಖದೊಳಗಿನ ಅಸಮಾಧಾನ ಕಡಿಮಿ ಆದಂಗ ಕಾಣಲಿಲ್ಲ. ಇಕ್ಕರಸಕೊಂತೇ ಸಾಂಬಾರ ಹಾಕಿದ್ದಳು. ಅವತ್ತೊಂದಿನ ಬಜಾರ ಕಡೆ ಹೋದಾಗ ಅಚಾನಕ್ ಆಗಿ ಕುಸುಮಾ ಖಾನಾವಳಿ ಕಡಿ ಹಾಯ್ದಿದ್ದಳು. ಅಲ್ಲಿರೋ ಗಿರಾಕಿ ನೋಡಿ ಹೌಹಾರಿದ್ದಳು. ಆ ಗದ್ದಲದೊಳಗ ಆಕಿ ಬಂದಿದ್ದು ಚಲೊ ಆಯ್ತು ಅಂತ ಯಮನಪ್ಪ ಮತ್ತ ರತ್ನವ್ವ ಹಿಗ್ಗೀಲೆ ‘ತಂಗೀ ಸ್ವಲ್ಪ ಗಲ್ಲೆದ ಮ್ಯಾಲ ಕೂಡವಾ..’ ಅಂದರು. ಗಲ್ಲೆದೊಳಗ ಆ ಪರಿ ದುಡ್ಡು ತುಂಬಿದ್ದು ನೋಡಿ ಆಕಿ ಇಡೀ ಮೈಗಿ ಮೈನೇ ಗರಮ್ ಆದಂಗ ಆಯ್ತು. ಇದ್ದಕ್ಕಿದ್ದಂಗ ಎದ್ದವಳೇ ‘ನಂದು ಕೆಲಸೈತಿ ಇನ್ನೂ ಅಡುಗಿ ಬ್ಯಾರೆ ಆಗಬೇಕು’ ಅನ್ಕೊಂತ ಎದ್ದು ನಡದೇ ಬಿಟ್ಟಳು. ರತ್ನವ್ವ ‘ಊಟ ಮಾಡಕೊಂಡು ಹೋಗು… ಅಡುಗಿ ಏನು ಮಾಡ್ತಿ..? ಕಟಗೊಂಡು ಹೋಗು’ ಅಂತ ಎಟ್ಟು ಹೇಳದರೂ ಹೊರಳಿನೂ ನೋಡಲಾರದೇ ಹಂಗೇ ಪುಸಂಗನೇ ನಡದೇ ಬಿಟ್ಟಳು. ರತ್ನವ್ವಗ ಎಲ್ಲೋ ಮನಸಿಗೆ ಮುಳ್ಳ ಚುಚ್ಚದಂಗಾಯ್ತು. ಆಕಿ ಬಂದಿದ್ಯಾಕ.. ಪುಸುಂಗನೆ ಹಂಗ ಸೆಟಗೊಂಡು ಹೋಗಿದ್ಯಾಕ ಅನ್ನೂದೇ ಗಂಡ-ಹೆಂಡತಿ ಇಬ್ಬರಿಗೂ ಗೊತ್ತಾಗಲಿಲ್ಲ.

ರಾತ್ರಿ ಇಬ್ಬರೂ ಬಾಳ ಹೊತ್ತಿನ ಮಟ ಅದನ್ನೆ ಯೋಚನೆ ಮಾಡದರು. ರತ್ನವ್ವ ಹಗೂರಕ ಗಂಡನ ಮುಂದ ‘ನಮ್ಮ ಯಾಪಾರ ನೋಡಿ ಕುಸಮವ್ವನ ಕಣ್ಣ ಕೆಂಪಗ ಆದೂವನೂ ಮತೆ..?”ಎಂಥಾ ಮಾತು ಆಡ್ತಿಯೇ ಖೋಡಿ..? ಈ ಅಂಗಡಿ ಹಾಕಿ ಕೊಟ್ಟಿದ್ದೇ ಅವರು”ಅಣ್ಣ ನಮ್ಮಂವ ಆದರೂ.. ಅಣ್ಣನ ಹೆಂಡ್ತಿ..?” ಹುಚ್ಚುಚ್ಚಾರ ಯಾಕ ಯೋಚನೆ ಮಾಡ್ತಿ..?” ಬಂದಕ್ಕಿ ಹಂಗ ನಿಗರಕೊಂಡು ಹೋಗ್ತಾಳಂದ್ರ…” ಹಂಗೆಲ್ಲಾ ಮಾತಾಡೂದು ಬ್ಯಾಡ, ಬೆಳಿಗ್ಗೆ ಎದ್ದದ್ದೇ ಮತ್ತ ಸುರು ಆಗಬೇಕು ಮಲಕೊ’ ಎಂದವನೇ ಮಗ್ಗಲು ಹೊರಳಸದ. ಅವನಿಗೂ ಹೆಂಡತಿ ಯೋಚಿಸಿದ್ದು ಒಂದೊಮ್ಮ ಖರೆ ಆಗಿದ್ದರೆ..? ಆ ಕಿರಕಿರಿನೇ ಬೇಡ. ಅವರಿಗೂ ಇನ್ಮುಂದ ಪಾಲು ಕೊಟ್ರಾಯ್ತು ಅಂತ ಯೋಚನೆ ಮಾಡಿದ. ಈಗಾಗಲೇ ಆಕಿ ಅಣ್ಣ ಹೂಡಿದ ಬಂಡವಾಳವನ್ನೆಲ್ಲಾ ಇವರು ಹಿಂತಿರುಗಿ ಕೊಟ್ಟಿದ್ದೂ ಆಗಿತ್ತು. ಅಂಗಡಿ, ಮನೆ ಬಾಡಿಗೆ ಅವರೇ ಕಟ್ಟತ್ತಿದ್ದರು. ಹೀಗಿರುವಾಗಲೂ.. ಈಗ ಬ್ಯಾಡ ಆಮ್ಯಾಲ ಯೋಚನೆ ಮಾಡಿದರಾಯ್ತು ಅಂತ ಬಲವಂತವಾಗಿ ಕಣ್ಣ ಮುಚ್ಚಿದ. ಕುಸುಮವ್ವ ಆವತ್ತ ರಾತ್ರಿ ಬೆಳ್ಳಬೆಳತನ ಗಂಡನ ಕಿವಿ ಕಡದಿದ್ದೇ ಕಡದಿದ್ದು. ಅಂವಗ ಆ ಒಂದು ರಾತ್ರಿ ಕಳಿಯೂದು ಸಾಕು ಬೇಕಾಯ್ತು. ಆಕಿ ತಗಾದೆ ಏನಂದ್ರ, ಊರಾಗ ಆಕಿ ತಮ್ಮ ಒಬ್ಬಂವ ಕಲತು ಉದ್ಯೋಗ ಇಲ್ಲದೇ ಹಂಗೇ ಕುಂತಿದ್ದ. ಅಂವಗ ಕರಕೊಂಡು ಬಂದು ಈ ಖಾನಾವಳಿ ಒಪ್ಪಿಸಿದರ ಸಜಾಗತೈತಿ ಅಂತ ಆಕಿ ಲೆಕ್ಕಾ ಹಾಕಿದ್ದಳು. ಆದರ ಆಕಿ ತಮ್ಮ ಬಾಳ ಸೋಟ ಕುರಸಾಲ್ಯಾ.. ಬರೀ ಸುಳ್ಳ.. ತಿಪಲ ಹೇಳಕೊಂತ ಇಸ್ಪೀಟ ಆಡಕೊಂತ ಹೋಗಂವ.

ಅವನನ್ನ ತಂದು ಖಾನಾವಳಿ ಅವನ ಕೈಯಾಗ ಕೊಟ್ಟರ ಉಜ್ಜಳ ಆಗೂ ಮಾತಂತೂ ಅಲ್ಲ ಅನ್ನೂದು ರಾಚಪ್ಪಗ ಗೊತ್ತಿತ್ತು. ಹಂಗಾಗಿ ಕುಸಮಾ ತನ್ನ ತಮ್ಮನ ಹೆಸರ ತಗದಾಗಲೇ ರಾಚಪ್ಪ ‘ಅಂವೇನು ಮಾಡ್ತಾನ.. ಲಪಟ ಕುರಸಾಲ್ಯಾ’ ಅಂತ ಬೈತಿದ್ದ. ಇದೇ ಕಾವಿನೊಳಗ ಕಾವಂತ ಆಕಿ ಗಂಡಗ ಬೆನ್ನಿಗಿ ಬಿದ್ದಿದ್ದಳು. ರಾಚಪ್ಪ ಏನು ಹೇಳದರೂ ಆಕಿ ಕೇಳುವಲ್ಲಳು. ಮಾರಾಯ್ತಿ ಹೊತ್ತರೇ ಹೊಂಡಲಿ ಈಗ ಬಿದ್ದಕೋ ಅಂದರೂ ಆಕಿ ಅಡರಾತ್ರಿಯೊಳಗೂ ಅದನ್ನೇ ವಟ ವಟ ಅನ್ಕೊಂತ ಮಲಗಿದ್ದಳು. ಮುಂಜ ಮುಂಜಾನೆ ಎದ್ದದ್ದೇ ಕ್ಯಾವ ಮುಖಾ ತೊಳಿಲಾರದೇ ಖರೆ ಖರೆ ಮುಂಡೆರಂಗ ಪಟ್ಟು ಹಿಡದು ಕುಂತಳು. ರಾಚಪ್ಪಗ ಸಿಟ್ಟು ಬಂದು ಎರಡೇಟು ಕೊಟ್ಟು ಸೀದಾ ಖಾನಾವಳಿ ಕಡಿ ಬಂದ. ತಂಗಿ ರತ್ನವ್ವ ಬದನಿಕಾಯಿ ಹೋಳತಿದ್ದಳು. ಗಂಡ ಯಮನಪ್ಪ ಅಲ್ಲೇ ನೀರ ತುಂಬತಿದ್ದ. ರಾಚಪ್ಪ ಹೀಂಗ ಮುಂಜಮುಂಜಾನೆ ಬಂದದ್ದು ನೋಡಿ ಅವನ ತಂಗಿ, ‘ಯಾಕಣ್ಣ ಮುಂಜ ಮುಂಜಾನೆ..?”ನಿಮ್ಮ ವೈನಿ ನನಗ ನಿನ್ನಿಯಿಂದ ಮಲಗಿಸಿಕೊಟ್ಟಿಲ್ಲ ಬರೀ ಒಂದೇ ಕಿರಕಿರಿ”ಏನಂತ..?”ಏನು ಹೇಳೂದು ಅದೊಂಥರಾ ಹುಚಗೊಟ್ಟಿ” ಅನ್ನೂದರೇ ಏನಂಥ..” ಖಾನಾವಳಿ ತಾನೇ ನಡಸತಿದ್ದಳಂತ’ ಆ ಮಾತ ಕೇಳಿದ್ದೇ ಯಮನಪ್ಪನ ಜೀವ ಜಲ್ ಅಂದಂಗ ಆಗಿ, ನೀರಿನ ಕೊಡಾ ಅಲ್ಲೇ ಇಟ್ಟು ಪುಸಂಗನೇ ಓಡಿ ಬಂದು ಸಪ್ಪಗ ಮುಖ ಮಾಡಿ,  ‘ತಂಗಿ ಹೇಳೂದು ಖರೆ ಐತಿ ಇದಕ್ಕ ರೊಕ್ಕ ಹಾಕದಂವ ನೀನು. ಹಂಗಾಗಿ ಆಕಿಗಿ ಅನಸೂದೇ.. ಅದಕ್ಯಾಕ ಇನ್ನಮ್ಯಾಲ ಆಗೂ ವ್ಯಾಪಾರದೊಳಗ ನಿಮಗೂ…..’

‘ ಅದೆಲ್ಲಾ ಇಲ್ಲಂತ, ಖಾನಾವಳಿ ಆಕಿನೇ ಮಾಡವಳಂತ’ ಅಂದಾಗ ಯಮನಪ್ಪ ಮತ್ತ ರತ್ನವ್ವಳ ಬಾಯಿ ಬಿರಿಬಿರಿ ಒಣಗಾಕ ಸುರು ಆಯ್ತು. ಈಗ ಏನು ಮಾತಾಡಬೇಕು ಅಂತ ತಿಳೀದಂಗ ಆಯ್ತು. ಅದೂ ಅಲ್ಲದೇ ಕೈಯಾಗ ನಾಕು ಕಾಸು ಇದ್ದಾಗ ಈ ಮಾತು ಹೇಳದರ ಅವರೂ ಬಿಟ್ಟು ನಡೀತಿದ್ದರು. ಈಗ ಗಿರಾಕಿ ಕುಂತಿದ್ದವು. ಅಂತದರೊಳಗ ನಾವೇ ಮಾಡ್ತೀವಿ ಅಂದ್ರ ತಮ್ಮ ಗತಿ ಏನು ಅಂತ ದೊಡ್ದ ಚಿಂತಿ ಆಯ್ತು. ಆ ಖಾನಾವಳಿ ಯಾಪಾರ ಆಗಿದ್ದು ರೊಕ್ಕೆಲ್ಲಾ ರಾಚಪ್ಪ ಕೊಟ್ಟ ಸಾಲಾ ತೀರಸೂದೇ ಆಗಿತ್ತು. ಮಕ್ಕಳ ಕಟಗೊಂಡು ಹೆಂಡತಿ ಮಾತು ಕೇಳಕೊಂಡು ಊರ ಬಿಟ್ಟು ಬಂದಿದ್ದು, ಈಗ ಇದ್ದಕ್ಕಿದ್ದಂಗ ತಾವೇ ಖಾನಾವಳಿ ನಡಸತೀವಿ ಅನ್ನೂ ಮಾತು ಕೇಳಿ ಯಮನಪ್ಪಗ ಹುಚ್ಚ ಹಿಡದಂಗೇ ಆಯ್ತು. ಮೊದಲೇ ಹುಚ್ಚ ಹರೇದ ಮನುಷ್ಯಾ ಈಗ ಮಕ್ಕಳು, ಹೆಂಡತಿನ್ನ ಕಟಗೊಂಡು ಎಲ್ಲಿ ಹೋಗೂದು ಅಂತ ತಿಳಿಲಾರದಂಗ ಆಯ್ತು. ರಾಚಪ್ಪ ಹಂಗ ಹೇಳಿಹೋದ ಮ್ಯಾಲಂತೂ ಯಮನಪ್ಪ ಅದನ್ನೆ ಗೇನಸಗೋಂತ ಕುಂತಿದ್ದ. ಇನ್ನ ಇಲ್ಲಿಂದ ನಡೀರಿ ಅನ್ನೂದರೊಳಗ ತಾವೇ ಹೋಗೂದು ಪಾಡ ಅಂತ ಯೋಚನೆ ಮಾಡಿ ಸಾಲಿಗಿ ಹೋಗಿ ಮಕ್ಕಳನ್ನ ಕರಕೊಂಡು ಬಂದ. ಬರುವಾಗ ಹ್ಯಾಂಗ ಒಣ ಕೈಯಿಂದ ಬಂದಿದ್ದ ಮತ್ತ ಹಂಗೇ ಉಟ್ಟ ಬಟ್ಟಿ ಮ್ಯಾಲ ಹೊಂಟು ಬಿಟ್ಟರು. ಖಾನಾವಳಿ ಬಿಟ್ಟು ನಡಿಯೂ ಮುಂದ ರತ್ನವ್ವಳ ಕಣ್ಣಾಗಿನ ನೀರ ದಳದಳಂತ ಇಳಿತಿದ್ವು. ಕಡಿಗೂ ಅಣ್ಣ ನಮ್ಮವ ಇದ್ದರೂ ಅತ್ತಿಗಿ ಯಾರು..  ಅನ್ನೂವಂಗ ಆಗಿತ್ತು.

ಆಕಿಗಿ ಮನಸ ಬಾಳ ಕಹಿ ಆದಂಗ ಆಗಿತ್ತು. ಹೊಳ್ಳಿ ಅಣ್ಣನ ಮುಖಾ ಸೈತ ನೋಡಲಾರದೇ ಮಕ್ಕಳ ಕರಕೊಂಡು ಗಂಡನ ಜೋಡಿ ಬರಬರ ನಡದು ಬಿಟ್ಟಳು. ಒಂದು ರಾತ್ರಿಯೊಳಗ ಇಟ್ಟೆಲ್ಲಾ ಫರಕ್ ಆಗತೈತಿ ಅಂತ ಅವರಿಗಿ ಅನಿಸಿರಲಿಲ್ಲ. ಯಮನಪ್ಪಂತೂ ಮೂಕ ಆಗಿ ಬಿಟ್ಟ. ಮೊದಲೇ ತಾಸಿಗೊಂದು ಹಗೂರಕ ಮಾತಾಡೊ ಮನುಷ್ಯಾ ಈಗ ಇದ್ದಕ್ಕಿದ್ದಂಗ ಹಿಂಗ ಹೊಂಟಿದ್ದು ಎಲ್ಲಿಗೆ.. ಮುಂದ ಏನು ? ಅನ್ನೊದು ಯಾವುದೂ ಗೊತ್ತಿಲ್ಲ. ಸಂಗಮೇಶ ಮತ್ತ ಆಶಾ ಇಬ್ಬರಿಗೂ ಏನು ನಡದೈತಿ ಅನ್ನೂದು ಸೈತ ಗೊತ್ತಿರಲಿಲ್ಲ. ಊರ ಬಿಟ್ಟು ಬ್ಯಾರೇ ಊರಿಗಿ ಹೊಂಟೀವಿ ಅನ್ನೂದು ಮಾತ್ರ ಗೊತ್ತಿತ್ತು. ಮನಿ ಇಲ್ಲ, ಮಾರಿಲ್ಲ ಎಲ್ಲಿ ಹೋಗೂದು ಅನ್ನೂದೇ ಗಂಡ-ಹೆಂಡತಿಗೆ ತಿಳಿದಂಗ ಆಗಿತ್ತು. ಕಿಸೆಯೊಳಗ ಇರೋ ರೊಕ್ಕ ಬಾಳ ಅಂದ್ರ ಎರಡು ದಿನ ಹೊಟ್ಟೀಗಿ ಆಗತಿತ್ತು. ಮುಂದ..? ಹಿಂಗೇ ಯೋಚಸ್ತಾ ಬಿಜಾಪುರ ಬಸ್ ಹತ್ತದ್ರು. ಬಿಜಾಪುರ ಬರೂಮಟ ಮುಂದೇನು ಮಾಡೂದು ಅಂತ ಗೇನಸಕೊಂತೇ ಕುಂತಿರೋ ಯಮನಪ್ಪನ ಮುಖ ಕಾಡಿಗಿ ಅಡರದಂಗ ಆಗಿತ್ತು. ಬಸ್ ಬಿಜಾಪುರ ನಿಲ್ದಾಣದೊಳಗ ಮೈ ಹೊರಳಿಸೋ ಮುಂದ ಮದ್ಯಾಹ್ನ ಎರಡಾಗಿತ್ತು. ಇಬ್ಬರೂ ಮಕ್ಕಳನ್ನ ಕರಕೊಂಡು ಒಂದು ಟಾಂಗಾ ಹತ್ತದ. ಯಾಕ.. ಎಲ್ಲಿಗಂತ ಆಕಿನೂ ಕೇಳಲಿಲ್ಲ.. ಮಕ್ಕಳೂ ಕೇಳಲಿಲ್ಲ. ಯಮನಪ್ಪನೂ ಹೇಳಲಿಲ್ಲ. ಬಿಜಾಪುರದೊಳಗಿರೋ ಇಮಾರತುಗಳನ್ನ ಮಕ್ಕಳಿಗೆ ತೋರಸಬೇಕು ನಡಿಯಪಾ.. ಅಂತ ಟಾಂಗಾದಂವಗ ಹೇಳಿದ.  ಟಾಂಗಾದವನ ಜೋಡಿ ರೇಟ್ ಹೊಂದಸಲಿಕ್ಕೂ ಹೋಗಲಿಲ್ಲ. ಅಂವಾ ಹೇಳದಷ್ಟಕ್ಕೇ ಹುಂ ಅಂದದ್ದು ಕೇಳಿ ರತ್ನವ್ವಗ ಅಚ್ಚರಿಯಾಗಿತ್ತು.

ಇಬ್ರಾಮರೋಜಾ, ಉಪಲೀಬುರಜ್, ಬಾರಾಕಮಾನ, ಜುಮ್ಮಾ ಮಸೀದಿ ಹೀಂಗ ಎಲ್ಲಾ ನೋಡಿ ಆದ ಮ್ಯಾಲ ಕಡಿಗಿ ಗೋಲಗುಮ್ಮಟ ನೋಡಾಕ ಬಂದರು. ಮಗ ಸಂಗಮೇಶ ಮತ್ತ ಆಶಾಗ ಬಾಳ ಖುಷಿ ಆಗಿತ್ತು. ಇಲ್ಲೀವರೆಗೆ ಬರೀ ಚಿತ್ರದೊಳಗ ನೋಡಿರೋ ಗೋಲಗುಮ್ಮಟ ಈಗ ಕಣ್ಣೆದುರಲ್ಲೇ ನೋಡಿ ಹಿರಿ ಹಿರಿ ಹಿಗ್ಗದರು. ಮಕ್ಕಳ ಖುಷಿ ಪಡೂದು ನೋಡಿ ಗಂಡ-ಹೆಂಡತಿಗೂ ಬಾಳ ಸಂತೋಷ ಆಯ್ತು. ಇನ್ನೇನು ಐದು ಘಂಟೆಗೆ ಗೇಟ್ ಬಂದ ಮಾಡ್ತಾರ ಅಂತ ಗೊತ್ತಾಗಿ ಗಡಬಡಿಸಿ ಟಿಕೆಟ್ ತಗೊಂಡು ಒಳಗ ಹೋದರು. ಯಮನಪ್ಪ ಮತ್ತ ರತ್ನವ್ವಗ ಆ ಗುಮ್ಮಟ ಏನೂ ಅಗಾದ ಅನಸಲಿಲ್ಲ. ಅವರ ತಾಪತ್ರಯದ ಮುಂದ ಆ ಗುಮ್ಮಟ ಬಾಳ ಸಣ್ಣದನಸತಿತ್ತು. ಸುಮ್ಮನೇ ಹಿಂಗೇ ಬೇಕೂಬ್ಯಾಡ ಅನ್ನೂವಂಗ ಸುತ್ತದರು. ಮ್ಯಾಲ ಏರೂ ಮುಂದ ಗಂಡ-ಹೆಂಡತಿ ಇಬ್ಬರಿಗೂ ಬಾಳ ನಿತ್ರಾಣ ಆದಂಗ ಆಗಿ, ಅಲ್ಲೇ ತುಸು ಹೊತ್ತು ಪಾವಟಣಿಗೆ ಮ್ಯಾಲ ಕುಂತು ವಿಶ್ರಾಂತಿ ತಗೊಂಡು ಮತ್ತ ಹತ್ತತಿದ್ದರು. ಕಡೆ ಪಾವಟಣಗಿ ಹತ್ತೂಮುಂದ ರತ್ನವ್ವ ಅಳೂದನ್ನ ಮಗಳು ಆಶಾ ಮರೆಗೆ ನಿಂತು ಕೇಳಿಸಿಕೊಂಡಳು. ಯಮನಪ್ಪ ಹಗೂರಕ ಹೆಂಡತಿ ಮುಂದ ಹೇಳತಿದ್ದ.’ಅದ್ಯಾಕ ಅಳ್ತಿ..? ನಾವು ಪಡಕೊಂಡು ಬಂದಿದ್ದೇ ಇಷ್ಟು, ಏನು ಮಾಡೂದು..?”ನೀವು ಹ್ಯಾಂಗ ಅಂತೀರಿ ಹಂಗ.. ನನಗೂ ಸಾಕಾಗೈತಿ’ ‘ ನಮ್ಮದೇನೋ ಆಯ್ತು ಮಕ್ಕಳ ಗತಿ ಏನು..?” ಅವರನ್ನ ಕಟಗೊಂಡೇ ಜಿಗದು ಬಿಡೂದು..’ ಹಂಗ ಅಂದದ್ದೇ ರತ್ನವ್ವ ಒಂದು ಸವನ ಬಿಕ್ಕಳಿಸಿ ಅಳ್ಳಾಕ ಸುರು ಮಾಡದಳು.’ ಪಾಪ ಅವು ಬದುಕಲಿ, ಕಡಿಗಿ ಭಿಕ್ಷೆ ಬೇಡಿಯಾದರೂ ಬದುಕ್ತಾವ”ನನಗೂ ಹಂಗೇ ಅನಸತೈತಿ ಆದರ ಏನು ಮಾಡೂದು.. ರತ್ನಾ ಒಂದು ಕೆಲ್ಸಾ ಮಾಡು ನೀ ಇರು, ನಾನೇ ಸರಿಯಿಲ್ಲ.. ಶನಿ ಇದ್ದಂಗ” ಹಂಗ್ಯಾಕ ಅಂತೀರಿ… ನಾ ಒಭ್ಳೆ ಇದ್ದರೇ ಏನು ಮಾಡೂವಕ್ಕಿ ನನಗೂ ಈ ಜಂಜಾಟ ಸಾಕಾಗಿ ಹೋಗೈತಿ, ನಿಮ್ಮ ಜೋಡಿ ನಾನೂ ಬರೂವಕ್ಕಿ” ಹಂಗಂದ್ರ ಕೇಳಿಲ್ಲಿ.. ಮಕ್ಕಳು ಗುಮ್ಮಟ ನೋಡ್ಕೋಂತ ಆಕಡೆ ಮುಂದ ಹೋಗಲಿ, ಆ ಎದುರಿನ ಮೂಲೆಯೊಳಗಿಂದ ಜಿಗದು ಬಿಡಮ್ಮು’ ಅಂದದ್ದನ್ನ ಅಲ್ಲೇ ಮರೆಯಲ್ಲಿ ನಿಂತು ಕೇಳಿಸಿಕೊಂಡ ಮಗಳು ಆಶಾ ಓಡಿ ಬಂದು ಅಳ್ಕೊಂತ ರತ್ನಾಳ ತೆಕ್ಕೆಗೆ ಬಿದ್ದು  ‘ಅವ್ವಾ ನಾ ಎಲ್ಲಾ  ಕೇಳಿಸಿಕೊಂಡೆ.

ನೀವಿಬ್ಬರೂ ಇಲ್ಲಿಂದ ಜಿಗಿಬೇಕಂತ ಮಾಡೀರಿ ಹೌದಿಲ್ಲೋ..? ಅಪ್ಪಾ… ನಮ್ಮನ್ನ ಬಿಟ್ಟು ಜಿಗಿಬ್ಯಾಡ್ರಿ, ನಾವೂ ಬರತೀವಿ. ಆದ್ರ ಸುಮ್ ಸುಮ್ಮನೇ ಯಾಕ ಸಾಯಬೇಕು..? ನೀವೇನು ತಪ್ಪ ಮಾಡೀರಿ  ಸಾಯಾಕ..? ಸಾಯಬಾರದು. ಅವ್ವಾ ಅಪ್ಪಗ ಹೇಳವ್ವಾ ಸಾಯೂದು ಬ್ಯಾಡಂತ.. ಅಪ್ಪಾ.. ಬ್ಯಾಡಪ್ಪಾ…’ ಅನ್ನೋ ಆ ಮಗಳ ಮಾತು ಕೇಳಿ ಗಂಡ-ಹೆಂಡತಿ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಾಕ ಸುರು ಮಾಡದರು. ಮಗಳ ಮಾತು ಆ ಹೊತ್ತಿಗೆ ಸರಿಯಾಗಿ ಒದಗಿ ಬಂದಂಗಿತ್ತು. ಅವರ ಮನಸೇ ಬದಲಾಯ್ತು. ಅಳ್ಕೊಂತೇ ಮಗಳನ್ನ ತಬ್ಬಿ ರತ್ನವ್ವ ಲೊಚ ಲೊಚ ಅಂತ ಮುತ್ತ ಕೊಟ್ಟಳು. ‘ಇಲ್ಲವಾ ಜಿಗಿಯೂದಿಲ್ಲ.. ನಿನಗಿರೋ ಬುದ್ದಿ ನಮಗಿಲ್ಲದಂಗ ಆಯ್ತು ನೋಡು ಕೂಸೇ… ನೀನೇ ನಮ್ಮನ್ನ ಬದಕಸದಿ ತಾಯೀ…’ ‘ ಖರೆ ಹೇಳದಿ ಮಗಳ.. ಸುಮ್ಮ ಸುಮ್ಮನೇ ಯಾಕ ಸಾಯಬೇಕು..? ಬದುಕಾಕ ಹಾದಿ ಬಾಳ ಅದಾವ, ನಾವೇನು ಕುಡ್ಡರಲ್ಲ.. ಕುಂಟರಲ್ಲ ದುಡುಕಿ ನಾವೆಂಥಾ ತಪ್ಪು ಮಾಡತಿದ್ದಿವಿ.. ! ನಮ್ಮ ಬುದ್ದಿ ಅನ್ನೂದು ಲದ್ದಿ ಆಗಿತ್ತು.. ನಡೀರಿ ಹೋಗಮ್ಮು’ ಅಂತ ಯಮನಪ್ಪ ಒಂದು ದೀರ್ಘ ನಿಟ್ಟುಸಿರು ಬಿಟ್ಟ.  ಮಗಳ ಕೈ ತಗೊಂಡು ಕಣ್ಣಿಗಿ ಹಚ್ಗೊಂಡ. ಅಟ್ಟು ಸಣ್ಣ ಮಗಳ ಮಾತು ಯಮನಪ್ಪನ ಎದಿಯೊಳಗ  ಬದುಕಿನ ಬಗ್ಗೆ ಹೊಸ ಭರೋಸಾ ಹುಟ್ಟಸಿತ್ತು.  ಹೆಂಡತಿ ರತ್ನವ್ವಗೂ ಮಗಳ ಮಾತು ಖರೆ ಅನಿಸಿತ್ತು. ಆವತ್ತಿನಿಂದ ಮತ್ತೆಂದೂ ಅವರು ಸಾಯೋ ಬಗ್ಗೆ ಕನಸಲ್ಲೂ ಸೈತ ಯೋಚನೆ ಮಾಡ್ಲಿಲ್ಲ. ಅದಾದ ಮುಂದ ಒಂದು ವಾರದೊಳಗ ಗಾಂಧಿ ಚೌಕ… ಭಜಿ ಯಾಪಾರ… ಆ ತಳ್ಳೂ ಗಾಡಿ..  ದಿನಗಳು ಹಾಗೇ ಉರುಳ್ತಾ ಹೋದ್ವು.

 

‍ಲೇಖಕರು avadhi

February 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Ajit

    ಅವರ ತಾಪತ್ರಯದ ಮುಂದ ಆ ಗುಮ್ಮಟ ಬಾಳ ಸಣ್ಣದನಸತಿತ್ತು…..
    Such a wonderful line especially since I have seen both

    ಪ್ರತಿಕ್ರಿಯೆ
  2. ಹಿಪ್ಪರಗಿ ಸಿದ್ದರಾಮ್...

    ಚೆನ್ನಾಗಿದೆ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: