ದಯೆ ನಮ್ಮನ್ನು ಹಾಳುಮಾಡುತ್ತದೆ, ಕೆಲಸ ಬೆಳೆಸುತ್ತದೆ
ಗೊರೂರು ಶಿವೇಶ್
ಹಾಸನ-ಮೈಸೂರು ನಡುವೆ ರೈಲಿನಲ್ಲಿ ಪಯಣಿಸುವರಿಗೆ ಮಂದಗೆರೆ ಒಂದು ವಿಶಿಷ್ಟ ತಂಗುದಾಣ. ಬೆಳಿಗ್ಗೆ ತಿಂಡಿಗಾಗಿ ಇತರೆ ಸ್ಟೇಷನ್ಗಳಿಗಿಂತ ಹೆಚ್ಚು ಹೊತ್ತು ರೈಲು ಅಲ್ಲಿ ನಿಂತರೆ, ರಾತ್ರಿ ಅತ್ತಲಿಂದ ಬರುವಾಗ ಇತ್ತಲಿಂದ ಹೋಗುವ ರೈಲು, ಕ್ರಾಸಿಂಗ್ಗಾಗಿ ಬಹುತೇಕ ಇದೇ ನಿಲ್ದಾಣವನ್ನು ಶ್ರಯಿಸುತ್ತದೆ. ಇದರಿಂದಾಗಿ ಬಹಳಷ್ಟು ಸಂದರ್ಭದಲ್ಲಿ ಹತ್ತಕ್ಕಿಂತ ಹೆಚ್ಚು-ನಿಮಿಷ ಆ ರೈಲು ಅಲ್ಲಿ ತಂಗಿರುತ್ತದೆ.
ರೈಲು ನಿಂತೊಡನೆ ರೈಲಿನಲ್ಲಿದ್ದ ಜನ ತಿಂಡಿ-ತಿನಿಸಿಗಾಗಿ ಧಾವಿಸುತ್ತಾರೆ. ಇಡ್ಲಿ-ವಡೆ, ರೈಸ್ಬಾತ್ ದೊರಕುವುದಾದರೂ ಕಡಿಮೆ ದರದಲ್ಲಿ ದೊರಕುವ ಪರಂಗಿ ಹಣ್ಣಿನ ಹೋಳುಗಳಿಗೆ ಮುಗಿಬೀಳುವವರೇ ಹೆಚ್ಚು. ರಾತ್ರಿ ಸಂದರ್ಭದಲ್ಲಿ ಹೂವು, ಸೊಪ್ಪು, ತರಕಾರಿಗಳು, ಮಾವಿನಕಾಯಿ, ಹಲಸಿನಹಣ್ಣು ಮುಂತಾದುವನ್ನು ರೈಲಿನುದ್ದಕ್ಕೂ ಕೂಗುತ್ತಾ ಮಾರುವವರು ಹಳ್ಳಿಗರು.
ನೀವು ಹಾಗೆಯೇ ವಿರಾಮವಾಗಿ ಕುಳಿತೋ ಇಲ್ಲವೇ ಹೊರಗೆ ನಿಂತಿದ್ದರೆ, ಜೀರ್ಣವಾದ ಚೆಡ್ಡಿತೊಟ್ಟು ಹಳೆಯ ಅಂಗಿ ಧರಿಸಿದ ಒಬ್ಬ ಮುದುಕ ನಿಮ್ಮ ಮುಂದೆ ಸರಿದು ಹೋಗುತ್ತಾನೆ. ಆತನ ಬಳಿ ಸಣ್ಣ ಪೇಪರ್ನಲ್ಲಿ ಈ ಮೊದಲೆ ಪೊಟ್ಟಣ ಕಟ್ಟಿದ ಕಡಲೆಕಾಯಿ ಇದೆ. ‘ಕಡ್ಲೆಕಾಯಿ’ ಎಂಬ ಏಕತಾನದ ಶಬ್ಧದೊಂದಿಗೆ ಆತ ಹಾದು ಹೋಗುತ್ತಾನೆ. ನೀವು ಎರಡೋ ಮೂರೋ ಪೊಟ್ಟಣವನ್ನು ತೆಗೆದುಕೊಂಡು ಐದೋ, ಹತ್ತೋ ನೀಡಿದರೆ ಚಿಲ್ಲರೆಗಾಗಿ ಅವನ ಬಳಿಯಿದ್ದ ನಾಣ್ಯಗಳನ್ನು ನಿಮ್ಮ ಬಳಿ ಚಾಚುತ್ತಾನೆ. ಒಂದು ರೂಪಾಯಿಗೆ ಸ್ವಲ್ಪ ಹೆಚ್ಚೇ ಎನ್ನಿಸುವಂಥ ಕಡೆಲೇಕಾಯಿ ಆ ಪೊಟ್ಟಣದಲ್ಲಿರುತ್ತದೆ.
ವೃದ್ದಾಪ್ಯದಿಂದಾಗಿ ಸರಿಯಾಗಿ ಕಣ್ಣು ಕಾಣಿಸದ ಆ ವೃದ್ಧನನ್ನು ಮಾತಿಗೆಳೆದ. ಆತ ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡಿದ್ದಾನೆ. ತನಗಿಂತ ನಾಲ್ಕೈದು ವರ್ಷ ಕಡಿಮೆ ವಯಸ್ಸಿನ ಹೆಂಡತಿಯೊಂದಿಗೆ ವಾಸ. ವೃದ್ಧಾಪ್ಯವೇತನದ ಜೊತೆಗೆ ದಿನಾಲು ಬೆಳಿಗ್ಗೆ, ಮಧ್ಯಾಹ್ನ, ಸಂಜೆಯ ರೈಲಿನ ಪಯಣಿಗರಿಗೆ ಕಡೆಲೆಕಾಯಿ ಮಾರುವುದರಿಂದ ಬರುವ ಅಲ್ಪ ಸ್ವಲ್ಪ ಆದಾಯದೊಂದಿಗೆ ಜೀವನ. ಹೆಂಡತಿಗೂ ಕೂಡ ಅದೇ ಕೆಲಸ.

‘ಜನರೆಲ್ಲರೂ ಸರಿಯಾದ ಚಿಲ್ಲರೆ ತೆಗೆದುಕೊಳ್ಳುತ್ತಾರೆ ಎಂಬ ಗ್ಯಾರಂಟಿ ಇದೇಯೆ? ‘ ಪ್ರಶ್ನಿಸಿದೆ. ‘ನನ್ನಂಥ ಮುದುಕನಿಗೆ ಯಾರು ಮೋಸ ಮಾಡ್ತಾರೆ ಸ್ವಾಮಿ ? ಒಬ್ರು, ಇಬ್ರು, ಮೋಸ ಮಾಡಿದ್ರೆ ಏನು ಮಾಡೋಕ್ಕಾಗಲ್ಲ, ನಿಯತ್ತಿನ ಜನ ಇನ್ನೂ ಇದ್ದಾರೆ ಸ್ವಾಮಿ. ಒಂದ್ಸಾರಿ ಒಬ್ಬರು ಏಳೆಂಟು ರೂಪಾಯಿ ಕಡ್ಲೆಕಾಯಿ ತಗೊಂಡ್ರು, ಅಷ್ಟರಲ್ಲಿ ರೈಲು ಹೊರಡ್ತು. ಅವ್ರು ಅರ್ಜಂಟಾಗಿ ಹೋದ್ರು. ದುಡ್ಡು ಹೋಯ್ತು ಅಂಥಾ ನಾನು ಸುಮ್ನಾದೆ. ಎರಡು ದಿನ ಕಳೆದ ಮೇಲೆ ಅದೇ ವ್ಯಕ್ತಿ ನನ್ನನ್ನು ಹುಡುಕಿಕೊಂಡು ಬಂದು ಹಣ ಕೊಟ್ಟು ಹೋದ್ರು.’ ಮಾನವೀಯ ಗುಣಗಳ ಬಗ್ಗೆ ಅಪಾರ ನಂಬಿಕೆಯನ್ನಿರಿಸಿದವನಂತೆ ನುಡಿದ ಆತ.
ಅದೇ ಟ್ರೈನಿನಲ್ಲಿ ಟಾಯ್ಲೆಟ್ಟಿನ ಪಕ್ಕಕ್ಕಿದ್ದ ಜಾಗದಲ್ಲಿ ಹನ್ನೆರಡು-ಹದಿಮೂರು ವರ್ಷದ ಹುಡುಗನೊಬ್ಬ ದೇವರ ಪಟವೊಂದನ್ನು ಇಟ್ಟುಕೊಂಡು ಕೂತಿದ್ದ. ಭಿಕ್ಷೆ ಬೇಡುವವರಿಗೆ, ವ್ಯಾಪಾರ ಮಾಡುವವರಿಗೆ ರೈಲಿನಂಥ ಅನುಕೂಲವಾದ ಜಾಗ ಇನ್ನೊಂದಿಲ್ಲ. ಪ್ರತಿ ಸ್ಟೇಷನ್ನಿನಲ್ಲಿ ಇಳಿದು ಬೇರೆ ಬೋಗಿಗಳನ್ನು ಹತ್ತಿ ತಮ್ಮ ವೃತ್ತಿ ಮಾಡಲು ಅನುಕೂಲ. ಶೌಚಾಲಯದ ಪಕ್ಕದಲ್ಲೇ ದೇವರ ಪಟವನ್ನಿರಿಸಿದ್ದಕ್ಕೆ ಅಲ್ಲದ್ದ ಕೆಲವು ಆಸ್ತಿಕರು ತರಾಟೆಗೆ ತೆಗೆದುಕೊಂಡರು. ಪಕ್ಕದ್ದಲ್ಲಿದ್ದ ಸೀಟಿಗೆ ಬಂದು ಕೂರಲು ಆಹ್ವಾನಿಸಿದರು.
ಸಶಕ್ತರಾಗಿರುವವರಿಗೆ ಭಿಕ್ಷೆ ನೀಡುವವರು ಕಡಿಮೆ. ಇದಕ್ಕೆ ಅವರು ಸಣ್ಣ ಮಕ್ಕಳನ್ನೋ ದೇವರ ಪಟವನ್ನೋ ಆಶ್ರಯಿಸುತ್ತಾರೆ. ಆ ಹುಡುಗನ ಪೋಷಕರು ಅದನ್ನೇ ಮಾಡಿದ್ದರು. ದೈವಬೀರುಗಳಾದ ಜನಕ್ಕೆ ಇಂಥವರ ಕಂಡರೆ ತುಂಬಾ ಮರುಕ. ‘ದಾನಕ್ಕಿಂತ ದೊಡ್ಡದಿಲ್ಲ’ ಎಂದು ಎಲ್ಲಾ ಧರ್ಮಗಳು ಹೇಳಿರುವುದರಿಂದ ಸಹಜವಾಗಿ ಅನೇಕರು ಇಂಥವರಿಗೆ ದಾನಮಾಡಿ ಪುಣ್ಯ ಕಟ್ಟಿಕೊಳ್ಳಲು ನೋಡುತ್ತಾರೆ. ಸಂಜೆ 4 ಗಂಟೆಗೆ ರೈಲು ಹತ್ತಿದ ಹುಡುಗನಿಗೆ ರಾತ್ರಿ 8 ಗಂಟೆಯವರೆಗಿನ ಗಳಿಕೆ ಪಕ್ಕದ ಸೀಟಿನವ ವಿಚಾರಣೆ ಮಾಡಿ ಲೆಕ್ಕ ಹಾಕಿ ತಿಳಿಸಿದ ಪ್ರಕಾರ ತೊಂಬತ್ತೈದು ರೂಪಾಯಿ ಆದಾಯ. ಯಾವುದೇ ಹಣ ಹೂಡಿಕೆಯ ಅಗತ್ಯ ಇದಕ್ಕಿಲ್ಲ. ಈ ರೀತಿಯ ಹಣದ ರುಚಿ ಕಂಡವ ದೈಹಿಕ ಶ್ರಮ ಬಯಸುವ ಇತರೆ ವೃತ್ತಿಯ ಕಡೆಗಾಗಲಿ, ವಿದ್ಯಾಭ್ಯಾಸದ ಕಡೆಗಾಗಲಿ ಒಲವನ್ನು ಬೆಳೆಸಿಕೊಳ್ಳುವುದು ಸಾಧ್ಯವೇ ?
ಇಳಿವಯಸ್ಸಿನಲ್ಲೂ ವ್ಯಾಪಾರ ಮಾಡಿ ಸಿಗುವ ಅಲ್ಪ-ಸ್ವಲ್ಪ ಹಣದಲ್ಲಿ ಬದುಕ ನಿರ್ವಹಿಸಲು ಹೋರಾಟ ನಡೆಸುತ್ತಿರುವ ಆ ವೃದ್ಧರು. ಅದೇ ರೈಲಿನಲ್ಲಿ ಭಿಕ್ಷಾಟನೆಯ ಲಾಭದ ರುಚಿ ಹಿಡಿದು, ಅದನ್ನೇ ವೃತ್ತಿ ಮಾಡಿಕೊಳ್ಳುವತ್ತ ಮನ ಮಾಡುತ್ತಿರುವ ಪುಟ್ಟ ಹುಡುಗ. ಇಬ್ಬರನ್ನು ಕಂಡಾಗ ಬಾಬಾ ಅಮ್ಟೆಯವರು (ಸಮಾಜದಿಂದ ಪರಿತ್ಯಕ್ತರಾದ ಕುಷ್ಠರೋಗಿಗಳಿಗೆ ನೆಲೆ ಕಲ್ಪಿಸಿ ಅವರಲ್ಲಿ ಸ್ವಾವಲಂಬನೆಯನ್ನು ಮೂಡಿಸಿದ ಮಹಾನುಭಾವ) ಹೇಳಿದ ಮಾತು ನೆನಪಿಗೆ ಬಂತು.
ದಯೆ ನಮ್ಮನ್ನು ಹಾಳುಮಾಡುತ್ತದೆ. ಕೆಲಸ ಬೆಳೆಸುತ್ತದೆ.






ಇದನ್ನು ಓದಿದಾಗ ಹಾಸನದ ಕಥೋಲಿಕ ಚರ್ಚಿನ ಬಳಿ ಪ್ರತಿ ಭಾನುವಾರ ಅಥವಾ ಇನ್ನಿತರ ವಿಶೇಷ ದಿನಗಳಲ್ಲಿ ಪುಟ್ಟ ಹುಡುಗನನ್ನು ಮುಂದು ಮಾಡಿ ಭಿಕ್ಷೆ ಬೇಡುವ, ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಭಿಕ್ಷುಕನ ಚಿತ್ರ ಮನಸ್ಸಿಗೆ ಎದುರಾಗುತ್ತದೆ.
ಚರ್ಚಿಗೆ ಹೋಗುವವರಿಗೆ ಈ ಚೂಟಿ ಹುಡುಗ ಬಹಳ ಅಚ್ಚುಮೆಚ್ಚು. ತನ್ನ ಚೂಟಿತನದಿಂದ, ಮುಗ್ಧ ಆಕರ್ಷಕ ಕಳೆಯಿಂದ ಎಲ್ಲರನ್ನೂ ಸೆಳೆಯುತ್ತಾನೆ. ಟಾಟಾ ಮಾಡುತ್ತಾನೆ, ಥ್ಯಾಂಕ್ಯು ಎನ್ನುತ್ತಾನೆ. ಅವನಿಗೆ ಕೊಡಲು ಐದು ರೂ.ಗಳ ನಾಣ್ಯವಿಲ್ಲದಿದ್ದರೆ ನನ್ನ ಹೆಂಡತಿ ಇಡೀ ದಿನ ಪರಿತಪಿಸುತ್ತಾಳೆ.ಸೆಂಟಿಮೆಂಟ್ಸ್ ಗಳಿಂದ ಹೊರಬಂದು ನೋಡಿದರೆ ಈ ಚೂಟಿ ಹುಡುಗನ ಭವಿಷ್ಯದ ಬಗ್ಗೆ ಬೇಜಾರಾಗುತ್ತದೆ. ಜನರನ್ನು ಸೆಳೆಯುವ ತಂತ್ರ ಅರಿತು ಕೊಂಡಿರುವ ಈ ಹುಡುಗನಿಗೆ ಇದೇ ಕಾಯಕ ಆಕರ್ಷಕವೆನಿಸುವುದಿಲ್ಲವೆ?ಈ ಮುಗ್ಧತೆ ಉಳಿಯದೆಯೂ ಇರಬಹುದು. ಕೆ.ವಿ. ಅಯ್ಯರ್ ರವರ ‘ರೂಪದರ್ಶಿ’ ಕಾದಂಬರಿ ಓದಿದವರಿಗೆ ಇದು ಗೊತ್ತು.
Pity kills an individual, and thus a society.
Teach people how to live with dignity, provide them education and support systems. Instead, what does our wretched governments do, given free food thru various schemes, free money thru some other shady schemes, free that and free this, governments and NGOs, NPOs compete in this regard.
So, many if not most, find comfort in these free schemes and work will sound like a very painful idea to them.
heart touching article
ಗೊರೂರು ಶಿವೇಶ್ ರವರು ಅವದಿಯಲ್ಲಿ ಕಂಡು ಖುಷಿಯಾಯ್ತು.ಲೇಖನ ಇಷ್ಟವಾಯ್ತು..
thanks for all the comments