ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೌನ್ ಹಾಲ್ ಟಾಕ್; ಬಾತ್ ರೂಮ್ ಸಾಂಗ್

rajaram tallur low res profile

ರಾಜಾರಾಂ ತಲ್ಲೂರು

ಭಾಷಣಗಳೇ ದೇಶೋದ್ಧಾರ ಮಾಡುವುದಿದ್ದಿದ್ದರೆ ನಾವಿಂದು ರಾಮರಾಜ್ಯದಲ್ಲಿದ್ದೇವೆ!

ಮೊನ್ನೆ ಟೌನ್ ಹಾಲ್ ಟಾಕ್ ಅಂತ್ಯದಲ್ಲಿ ಪ್ರಧಾನ ಸೇವಕರು ಒಂದು ಶಾಕಿಂಗ್ ಸತ್ಯ ಬಿಚ್ಚಿಟ್ಟರು. ಈ ದೇಶ ಯಾರಿಗೆ ಸೇರಿದ್ದು? ಇಲ್ಲಿ ಸರ್ಕಾರ ನಡೆಯುತ್ತಿರುವುದು ಯಾರಿಗಾಗಿ? ಇಲ್ಲಿನ ಪ್ರಜೆಗಳಲ್ಲಿ ದರ್ಜೆಗಳಿವೆಯೆ? ಆದ್ಯತೆಯ ಮೇರೆಗೆ ಬದುಕು ಕಟ್ಟಿಕೊಳ್ಳಬೇಕಾದವರು ಯಾರು?  ಎಂಬೆಲ್ಲ ಪ್ರಶ್ನೆಗಳನ್ನು ಎತ್ತಿದ ಈ ಸತ್ಯವು ಗೋರಕ್ಷಕರ ಬಗ್ಗೆ ಪ್ರಧಾನಿ ಮಾಡಿದ ಟೀಕೆಯ “ಉಬ್ಬುಗದ್ದಲದ”  ನಡುವೆ ಸುದ್ದಿ ಮಾಡಲೇ ಇಲ್ಲ.

avadhi-column-tallur-verti- low res- cropಸ್ವಯಂಸೇವೆಯ ಬಗ್ಗೆ ಮಾತನಾಡುತ್ತಾ ಪ್ರಧಾನ ಸೇವಕರು, ಗೋರಕ್ಷಕರನ್ನು ಟೀಕಿಸಿದ ಬಳಿಕ ಜನರಲ್ಲಿ ಒಂದು ಮನವಿ ಮಾಡುತ್ತಾರೆ. ನಿಮ್ಮ ಮನೆಗೆ ಬರುವ ಹಾಲು ಹಾಕುವವರು, ಪೇಪರ್ ಮಾರುವವರು, ಪೋಸ್ಟ್ ಮ್ಯಾನ್ ಮೊದಲಾದವರನ್ನು ಒಮ್ಮೆ ಮಾತಾಡಿಸಿದ್ದೀರಾ? ಅವರನ್ನು ಹೇಗಿದ್ದೀರಿ ಎಂದು ಕೇಳಿದರೆ, ಅವರಿಂದ ಸಿಗುವ ಉತ್ತರವೇ ನಿಮ್ಮ ಸ್ವಯಂಸೇವೆಗೆ ಪ್ರೇರಣೆ ಆಗಲಿದೆ ಎಂದು ಹೇಳುತ್ತಾರೆ.

ಅದಕ್ಕಿಂತ ಮೊದಲು ದೇಶದ ಆರ್ಥಿಕತೆಗೆ ಸಂಬಂಧಿಸಿ ಮಾತನಾಡುವಾಗ ತಿಂಗಳಿಗೆ 20,000ರೂಪಾಯಿ ಸಂಬಳ ಬರುವ ಕುಟುಂಬದ ಬಗ್ಗೆ, ಅಲ್ಲಿ ಇನ್ನೊಬ್ಬರಿಗೆ ಅವಕಾಶ ದೊರೆತು ಮತ್ತೆ ಹತ್ತು ಸಾವಿರ ರೂಪಾಯಿ ಜಾಸ್ತಿ ಬಂದರೆ ಆ ಕುಟುಂಬದ ಆರ್ಥಿಕತೆ ಬದಲಾಗುವ ಬಗ್ಗೆ ಜನರೆಲ್ಲ ತಲೆದೂಗುವಂತೆ ಉಪನ್ಯಾಸ ನೀಡುತ್ತಾರೆ.

ಹೀಗೆ ಇಡಿಯ ಟೌನ್ ಹಾಲ್ ಟಾಕ್ ಆವರಿಸುವುದು, ಈ ದೇಶದ ಮೇಲುಮಧ್ಯಮ ವರ್ಗವನ್ನು.

ಕೆಲವು ಅಂಕಿ-ಸಂಖ್ಯೆಗಳು ದೇಶದ ಪ್ರಧಾನ ಸೇವಕರಿಗೆ ಗೊತ್ತಿಲ್ಲದ್ದಲ್ಲ. ಆದರೆ, ಅವರ ಭಾಷಣ ಕೇಳಿ ಮೈಮರೆಯುವ, ದೇಶ ವಿಶ್ವಗುರು ಆಗುತ್ತಿದೆ ಎಂದು ಮಂಡಿಗೆ ಮೆಲ್ಲುವ ಮೇಲುಮಧ್ಯಮ ವರ್ಗದ ಜನಕ್ಕೆ ಈ ಅಂಕಿಸಂಖ್ಯೆಗಳನ್ನು ನೆನಪಿಸಬೇಕು.

ಭಾರತದ ಜನಸಂಖ್ಯೆ ಮೇ 2016ರ ವೇಳೆಗೆ ಅಂದಾಜು 133 ಕೋಟಿ. ಇದರಲ್ಲಿ MyGov ನಂತಹ ವೆಬ್/ಮೊಬೈಲ್ ಅಪ್ಲಿಕೇಷನ್ ಫ್ಲಾಟ್ ಫಾರಂ ಅನ್ನು ಬಳಸುತ್ತಿರುವವರು ಅಂದಾಜು 35 ಲಕ್ಷ ಮಂದಿ (ಹಾಗೆಂದು ಆ ವೆಬ್ ಸೈಟ್ ಸಾರುತ್ತದೆ). ಹಾಗೆ ನೋಡಿದರೆ ಇಡಿಯ ಭಾರತದಲ್ಲಿ ಇಂಟರ್ನೆಟ್ ಸಂಪರ್ಕ ಹೊಂದಿರುವವರು ಕೇವಲ 46 ಕೋಟಿ ಮಂದಿ. ಹಾಗಾಗಿ ಈ ಇಡಿಯ ಡಯಲಾಗ್ ತಲುಪುತ್ತಿರುವುದು ಕೇವಲ ಬೆರಳೆಣಿಕೆಯ ಶೇಕಡಾ ಮಂದಿಗೆ.

prasad cartoon gouಇನ್ನೊಂದು ಅಂಕಿ-ಸಂಖ್ಯೆ ಕೇಳಿ: ಈ ದೇಶದ 21.92% ಮಂದಿ ಬಡತನದ ರೇಖೆಗಿಂತ ಕೆಳಗಿದ್ದು, ತಿಂಗಳಿಗೆ ಕೇವಲ 1000  ರೂಪಾಯಿ ಮಾಸಿಕ ಸರಾಸರಿ ಆದಾಯದಲ್ಲಿ ಅವರ ಬದುಕು ನಡೆಯುತ್ತಿದೆ. ಪ್ರಧಾನ ಸೇವಕರು ಹೇಳಿದ ಹಾಲು, ಪೇಪರ್ ಹಾಕುವವರು ಮತ್ತು ಅಂಚೆಅಣ್ಣರು ಸರ್ಕಾರ ಹೇಳಿದ ಕನಿಷ್ಟ ವೇತನ ಪಡೆಯುತ್ತಿದ್ದಾರೆಂದಿಟ್ಟುಕೊಂಡರೆ, ಈ ಬಡತನದ ರೇಖೆಗಿಂತ ಕೆಳಗಿರುವವರ ಎದುರು ಅವರೂ ಸಿರಿವಂತರೇ.

ನಿಜಕ್ಕೆಂದರೆ, ಅಭಿವ್ರದ್ಧಿಯಲ್ಲಿ ಆದ್ಯತೆ ಸಿಗಬೇಕಾಗಿದ್ದದ್ದು, ಈ ದೇಶದ ಪ್ರಕ್ರತಿ ಸಂಪತ್ತನ್ನು ಕಾಯ್ದುಕೊಂಡು, ಉಳಿದ ಜನ ನೆಮ್ಮದಿಯಿಂದ ಬದುಕಲು ಶ್ರಮವಹಿಸುತ್ತಾ, ಯಾರ ಬಾಯಲ್ಲೂ ಸುದ್ದಿ ಆಗದೆ, ಎಲ್ಲ ವಿಧದಲ್ಲೂ ತುಳಿತಕ್ಕೊಳಗಾಗುತ್ತಿರುವ ಈ ಅಗಾಧ ಜನಸಮುದಾಯಕ್ಕೆ. ಅವರು ನಮ್ಮ ಸರ್ಕಾರಗಳ TO DO  ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದು ಯಾವಾಗ?

ಪ್ರಜಾಪ್ರಭುತ್ವ ನಡೆಯಬೇಕಾದದ್ದು ಡಯಲಾಗ್ ಗಳ ಮೂಲಕ. MyGov ಎರಡು ವರ್ಷಗಳನ್ನು ಪೂರೈಸಿದ ನೆಪದಲ್ಲಿ ಮೊನ್ನೆ ನಡೆದ ಪ್ರಧಾನ ಮಂತ್ರಿಯವರ ಟೌನ್ ಹಾಲ್ ಟಾಕ್  ಇಂತಹದೊಂದು ಡಯಲಾಗ್ ಆಗಬೇಕಿದೆ. ಆದರೆ, ಬಾತ್ ರೂಮ್ ಸಿಂಗಿಂಗಿನಂತಹ ಮೊನೊಲಾಗ್ ಲಹರಿಯನ್ನು ಇನ್ನೊಬ್ಬರು ಕಿವಿಗೊಟ್ಟು ಕೇಳುವುದೇ ಡಯಲಾಗ್ ಎಂದುಕೊಂಡಂತಿದೆ, ನಮ್ಮ ಮೇಲುಮಧ್ಯಮ ವರ್ಗ.

ಅಂದಹಾಗೆ, ಮೊನ್ನೆ ಟೈಮ್ಸ್ ನೌ ನಲ್ಲಿ ಅರ್ನವ್ ನಡೆಸಿದ ಸಂದರ್ಶನಕ್ಕೂ ಈ  ಆರ್ಕೆಸ್ಟ್ರೇಟೆಡ್ ಟೌನ್ ಹಾಲ್ ಲೆಕ್ಚರ್ ಗೂ ಏನು ವ್ಯತ್ಯಾಸ ಇತ್ತು?

ಪ್ರಧಾನ ಸೇವಕರ ಟೌನ್ ಹಾಲ್ ಕಾರ್ಯಕ್ರಮದ ವಿಡಿಯೋ ಇಲ್ಲಿದೆ: ಇಲ್ಲಿ ಕ್ಲಿಕ್ಕಿಸಿ 

‍ಲೇಖಕರು Admin

8 August, 2016

4 Comments

  1. Shama, Nandibetta

    Sir, very sensible write up. Liked the way you’ve analysed the situation.

    • ರಾಜಾರಾಂ ತಲ್ಲೂರು

      Thank you!

  2. ratnakarpatil

    Actually it is 100% correct… where we are going what about 80% people today there is mass hysteria in social media about present PM kannadadalli ond gadematu Jan marulo jatre maralo …….any how sensible writing

  3. venkataraya bhandary

    Well written..very true..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading