ಹಳ್ಳಿ ಹುಡುಗಿಯ ಅಮೆರಿಕಾ ಪಯಣ..

ಅಮೆರಿಕಾ ಅಮೆರಿಕಾ …

ಪಯಣದಾರಂಭದಲ್ಲಿ ಕಾಡಿದ ತಲ್ಲಣ..

..

ವೃತ್ತಿ ಜೀವನದಲ್ಲಿ ವೃತ್ತಿಯ ಭಾಗವಾಗಿ ರಾಜ್ಯದ ಹಳ್ಳಿಗಳಲ್ಲಿ ಓಡಾಡಿದ್ದೇನೆ. ಹಲವಾರು ಕವರೇಜ್ ಗಳನ್ನು ಮಾಡಿದ್ದೇನೆ.ಹಳ್ಳಿಯಲ್ಲೇ ಹುಟ್ಟಿ ಬೆಳೆದದ್ದರಿಂದ ಹಳ್ಳಿಯ ಕಡೆಗೆ ತುಡಿತ ಸಹಜ ಈಗಲು ಕೂಡ. ಜಗಲಿಕಟ್ಟೆಯಲ್ಲಿ ಕೂತು ಹರಟುವ ಮಜವನ್ನು ರೆಸ್ಟೋರೆಂಟಗಳ ಹೈಫೈ ಟೇಬಲ್ ಗಳು ಕೊಡಲು ಸಾಧ್ಯವಿಲ್ಲ. ಹಾಗೆ ಸೆಗಣಿ ಸಾರಿಸಿದ ಅಂಗಳದಲ್ಲಿ ಹಾಸಿದ ಚಾಪೆಯ ಮೇಲೆ ಮೈ ಹರಡಿ ಆಗಸದ ಕಡೆಗೆ ಮುಖವಿಟ್ಟಾಗ ಸಿಗುವ ಖುಷಿ ಕುರ್ಲಾನ್ ಹಾಸಿಗೆಯಲ್ಲಿ ಮಲಗಿದಾಗ ಸಿಗಲು ಸಾಧ್ಯವಿಲ್ಲ.

Jyothi column low resನಿಜ ಮಂಗಳೂರಿನಲ್ಲಿ ವೃತ್ತಿ ಬದುಕಿನ ಮೊದಲ ವರ್ಷಗಳು. ಮತ್ತೆ ಬೆಂಗಳೂರು ದೊಡ್ಡ ನಗರದ ಪರಿಚಯವನ್ನು ಮಾಡಿಕೊಟ್ಟಿದ್ದವು. ಸ್ಮಾತಕೋತ್ತರ ಪದವಿ ಪಡೆಯಬೇಕಾದರೆ ಸೂರ್ಯ ಮುಳುಗದ ದೇಶ ನಾರ್ವೆಗು ಭೇಟಿ ನೀಡುವ ಅವಕಾಶ ಬಂದಿತ್ತು. ಡಾಕ್ಯುಮೆಂಟರಿ ಮೇಕಿಂಗ್ ಕುರಿತ ಟ್ರೈನಿಂಗ್ ಗಾಗಿ ಅಲ್ಲಿ ಒಂದು ತಿಂಗಳ ಕಾಲ ತಂಗಿದ್ದೆ. ರಾತ್ರಿ 10 ಗಂಟೆಯಾದರು ಬೆಳಕ ಚೆಲ್ಲಿ ಮುಳುಗದ ಸೂರ್ಯನ ಕಂಡು ಅಚ್ಚರಿಪಟ್ಟಿದ್ದೆ. ಭೂಮಿಯ ಮೇಲಿನ ಸ್ವರ್ಗದಂತಿರುವ ನಾರ್ವೆಯ ನಿಸರ್ಗ ಸೌಂದರ್ಯ ಪ್ರಕೃತಿಯ ಸೃಷ್ಟಿಕರ್ತನ ಅಭಿರುಚಿ ಅಬ್ಬಾ ಎಷ್ಟು ಚೆನ್ನಾಗಿದೆಯಲ್ಲಾ ಎಂಬ ಯೋಚನೆಯನ್ನು ಹುಟ್ಟುಹಾಕಿತ್ತು.

ಅಂದ ಹಾಗೆ ಈ ಬಾರಿ ಏನು ಬರೆಯೋಣ ಅಂದು ಕೊಂಡ ತಕ್ಷಣ ಈ ಅನುಭವವನ್ನು ಬರೆಯಬೇಕನ್ನಿಸಿತು. ಮತ್ತು ಹೀಗೆ ಬರೆಯೋಕೆ ಕಾರಣವು ಇದೆ.ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಟ್ವೀಟ್ ಗಳನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಓದುತ್ತೇನೆ. ಅವು ನಂಗೆ ತುಂಬಾನೆ ಇಷ್ಟವಾಗುತ್ತವೆ. ಬಹುತೇಕ ನನ್ನನ್ನು ಕಾಡೋ ಪ್ರಶ್ನೆಗಳು, ಕಲ್ಪನೆಗಳು ಯೋಚನೆಗಳನ್ನು ಶೇಖರ್ ಕಪೂರ್ ಬರೆದಂತೆ ತೋರುತ್ತೆ.

ಇತ್ತೀಚೆಗೆ ಒಂದು ಟ್ವೀಟ್ ಓದಿದ್ದೆ. ಅದೇನಂದ್ರೆ ಕೆಲವೊಮ್ಮೆ ಮನಸ್ಸನ್ನು ಹರಿಯಬಿಡಬೇಕು. ಅವು ಎಲ್ಲಿ ಬೇಕಾದರು ಓಡಾಡುವಂತೆ, ಕಲ್ಪನಾ ಜಗತ್ತಲ್ಲಿ ತೇಲಾಡಲು ಬಿಡಬೇಕು. ಆಗ ಸೃಜನಶೀಲ ಚಿಂತನೆಯು ಹೊರಹೊಮ್ಮಲು ಸಾಧ್ಯ. ಏನೋ ಒಂದು ಹೊಸ ಯೋಚನೆ ಮೂಡಲು ಸಾಧ್ಯ .ನಿಜ ಈ ಬಾರಿ ಅದಕ್ಕೆ ಅಮೆರಿಕಾ ಪಯಣದ ಅನುಭವ ಬರೆಯಬೇಕೆಂದುಕೊಂಡೆ.ಯಾಕಂದ್ರೆ ಈ ಬಾರಿ ಏನು ಬರೆಯಬೇಕೆಂದು ಪ್ಲಾನ್ ಮಾಡಿರಲಿಲ್ಲ. ಸುಮ್ನೆ ಹೀಗೆ ಬರೆಯಬೇಕನಿಸಿತು. ಅದ್ಕೆ ಬರೀತಿದೇನೆ ಅಷ್ಟೆ.

ನಾಲ್ಕು ವರ್ಷಗಳ ಹಿಂದೆ ಅಮೆರಿಕನ್ ಕೌನ್ಸುಲೇಟ್ ನಿಂದ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ರಾಜಕೀಯ ವರದಿಗಾರಿಕೆಯ ಮಾನದಂಡದ ಆಧಾರದ ಮೇಲೆ ಇಂಟರ್ ನ್ಯಾಶನಲ್ ವಿಸಿಟರ್ ಶಿಪ್ ಕಾರ್ಯಕ್ರಮದಡಿ ಅಮೆರಿಕಾ ಭೇಟಿಗೆ ಆಯ್ಕೆಯಾಗಿದ್ದೆ. ವಾಷಿಂಗ್ಟನ್ ಡಿ.ಸಿ, ನ್ಯೂಯಾರ್ಕ್, ಒಮಾಹಾ, ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾ ಕ್ಕೆ ಭೇಟಿ ನೀಡುವ ಅವಕಾಶ ದೊರೆತಿತ್ತು.

ಮೊದಲ ಬಾರಿ ಒಬ್ಬಳೇ ಹೊರಟಿದ್ದೆ. ಈಗಿನ ಕಾಲದಲ್ಲಿ ಐರೋಪ್ಯ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿನ ದೇಶಗಳಿಗೆ ಹೋಗಿ ಬರುವುದು ದೊಡ್ಡ ವಿಷಯವಲ್ಲ. ಮೊದಲಾದ್ರೆ ಅಮೆರಿಕಾಕ್ಕೆ ಹೋಗಿ ಬರೋದೆಂದ್ರೆ ಅದೇನೋ ಮಹಾನ್ ಸಾಧನೆಯಂತೆ. ಆದ್ರೆ ಈಗ ಅಂತಹ ದೊಡ್ಡ ವಿಷಯ ಅದಲ್ಲ. ಆದರೆ ದೇಶ ಸುತ್ತುವ ಬಗ್ಗೆ ಆಸಕ್ತಿ ಹೊಂದಿರೋ ನನಗೆ ಇದೊಂದು ಒಳ್ಳೆಯ ಅವಕಾಶವನ್ನಂತು ಒದಗಿಸಿತ್ತು. ಈಜಿಪ್ಟ್ ಗೆ ಹೋಗೋ ಕನಸಂತು ಇನ್ನು ಹಾಗೆ ಇದೆ. ಇರಲಿ..

ನನ್ನ ಅಮೆರಿಕಾದತ್ತ ಪಯಣ ಆರಂಭವಾಗಿತ್ತು. ಬೆಂಗಳೂರಿನಿಂದ ಫ್ರಾಂಕ್ ಫರ್ಟ್  ಅದಾಗಲೆ ತಲುಪಿಯಾಗಿತ್ತು. ಅಲ್ಲಿಂದ ವಾಷಿಂಗ್ಟನ್ ಗೆ ಹೋಗೋ ವಿಮಾನ ರದ್ದಾಗಿತ್ತು. ಹಾಗಾಗಿ ವಿಮಾನನಿಲ್ದಾಣದಲ್ಲಿ ಪರದಾಟ. ವೈಟಿಂಗ್ ಲಿಸ್ಟ್ ನಲ್ಲಿ ಹೆಸರು ಬರುತ್ತಾ ಅಂತ ಕಾಯುತ್ತಲೇ ಇದ್ದೆ. ಅಪರಿಚಿತ ದೇಶದಲ್ಲಿ ಕಾಡೋ ಒಬ್ಬಂಟಿತನದ ಮಧ್ಯೆ ಅಲ್ಲಿದ್ದವರನ್ನು ಪರಿಚಯ ಮಾಡಿಕೊಳ್ಳೋ ಪ್ರಯತ್ನ ಮಾಡುತ್ತಿದ್ದೆ. ರಷ್ಯಾದ ಒಬ್ಬ ಯುವಕ ತಾನು ಹೋಗಬೇಕಿದ್ದ ವಿಮಾನವು ರದ್ದಾಗಿದೆ. ಎಂತಾ ಅವ್ಯವಸ್ಥೆ ಅಂತ ಬೈಯ್ತಾ ಇದ್ದ. ಸುಮ್ಮನೆ ನಮ್ಮ ದೇಶದಲ್ಲಿ ಎಲ್ಲಾದಕ್ಕು ಬೈಯ್ತೀವಿ ಅಂದ್ಕೊಂಡೆ. ಸುಮಾರು ನಾಲ್ಕು ಗಂಟೆಗಳಾಗಲೇ ಕಳೆದುಹೋಗಿತ್ತು. ಫೋನ್ ಇಲ್ಲ. ಕಥೆಯಿಲ್ಲ. ಜಗತ್ತಿನಲ್ಲಿ ಕಳೆದುಹೋಗೋದಂದ್ರೆ ಇದೇನಾ ಅಂದ್ಕೊಂಡೆ. ಒಂದು ರೀತಿಯಲ್ಲಿ ಏಕಾಂಗಿತನವನ್ನು ಅನುಭವಿಸುತ್ತಿದ್ದೆ. ಇನ್ನೊಂದೆಡೆ ನಮ್ಮವರು ಆತಂಕಗೊಳ್ಳುತ್ತಾರೋ ಅನ್ನೋ ಆತಂಕ.

ಕೊನೆಗು ನನ್ನ ಹೆಸರು ಕಷ್ಟದಲ್ಲಿ ನನಗೆ ಅರ್ಥವಾಗುವಂತೆ ಕರೆದಿದ್ದು ಕೇಳಿಸಿತು. ಬೇಗನೆ ಓಡಿದೆ. ಓಡೋ ಭರದಲ್ಲಿ ಬ್ಯಾಗ್ ಒಂದನ್ನು ಮರೆತೇ ಬಿಟ್ಟಿದ್ದೆ. ಪಕ್ಕದಲ್ಲೇ ಕೂತಿದ್ದ ವಿದೇಶಿ ಕೃಷಿತಜ್ಞರೊಬ್ಬರು ಬ್ಯಾಗ್ ತಂದಿಟ್ಟರು. ಮತ್ತೆ ಓಟ. ಕೊನೆಗು ಅರ್ಜೆಂಟಾಗಿ ವಿಮಾನ ಹತ್ತಿದ್ದೆ.

flightಮತ್ತೆ ಷಿಕಾಗೋ ವಿಮಾನನಿಲ್ದಾಣದಲ್ಲಿ ಇಳಿಯಬೇಕಿತ್ತು. ಅಲ್ಲಿಂದ ಮತ್ತೆ ವಾಷಿಂಗ್ಟನ್ ಗೆ ಪಯಣ ಬೆಳೆಸಬೇಕಿತ್ತು. ಹಾಕಿದ್ದ ಚಪ್ಪಲ್ ಬೇರೆ ಕಟ್. ಟ್ರೈ ನ್ ಮೂಲಕ ಮತ್ತೆ ವಾಷಿಂಗ್ಟ ನ್ ಗೆ ತೆರಳೋ ವಿಮಾನ ಹಿಡಿಯಬೇಕಿತ್ತು. ಒಮ್ಮೆ ದಾರಿ ತಪ್ಪಿ ಕೆಲವು ನಿಮಿಷ ವೇಸ್ಟು ಆಯಿತು. ಅಬ್ಬಾ ಆ ಕ್ಷಣದ ಆತಂಕ ಹೇಳತೀರದ್ದಲ್ಲ. ಕೊನೆಯ ಘಳಿಗೆಯಲ್ಲಿ ವಿಮಾನ ಹತ್ತುತ್ತಿದ್ದೆ.

ವಾಷಿಂಗ್ಟನ್ ಗೆ ಹೋಗೋ ವಿಮಾನ ತುಂಬಾನೆ ದೊಡ್ಡದಿತ್ತು. ಪಕ್ಕದಲ್ಲಿ ಕೂತ ಯುವತಿ ಹಾಡು ಕೇಳು ಎಂದಳು. ನೋ ಎಂದು ಸುಮ್ಮನಾದೆ. ಡೆಸ್ಟ್ ನಿ ತಲುಪಿದ್ರೆ ನಂಗೆ ಸಾಕಾಗಿತ್ತು. ಕೊನೆಗು ವಿಮಾನದಿಂದ ಇಳಿದಿದ್ದೆ. ಲಗ್ಗೇಜ್ ತೆಗೆದುಕೊಂಡು ಸುಮ್ಮನೆ ಕುಳಿತೆ. ಕೆಲವು ನಿಮಿಷ ಮೌನ ಬೇಕೆನಿಸಿತು.

ಟ್ಯಾಕ್ಸಿಯವರ ಬಳಿ ಹೋದೆ. ನನ್ನ ಲೊಕೇಶನ್ ಹೇಳಿದೆ. ದಾರಿಯುದ್ದಕ್ಕು ಅಮೆರಿಕಾ ಅಧ್ಯಕ್ಷ ಒಬಾಮಾ ಕುರಿತಂತೆ ಆ ಚಾಲಕ ಮಾತಾಡಿದರು.ಅಮೆರಿಕಾದ ಜನರ ಮನಸ್ಥಿತಿಯ ಕುರಿತಂತೆ ವಿವರಿಸುತ್ತಾ ಹೋದ್ರು.

ನಾನು ತಂಗಬೇಕಿದ್ದ ಹೋಟೀಲ್ ಬಳಿ ಗಾಡಿ ನಿಂತಿತ್ತು. ಟಿಪ್ಸ್ ನೀಡಬೇಕೆಂದು ಮೊದಲೇ ಹೇಳಿರೋದ್ರಿಂದ ಹಾಗೇ ಮಾಡಿದೆ. ವಿಮಾನದ ಆಗಮನದ ಸಮಯದಲ್ಲಿ ವ್ಯತ್ಯಯವಾಗಿದ್ರಿಂದ ಬರಮಾಡಿಕೊಳ್ಳಬೇಕಾಗಿದ್ದ  ಮೇಡಂ ಬಾನಿಗು ಗೊಂದಲವಿತ್ತು. ಕೊನೆಗು ಹೊಟೇಲ್ ನವರ ಸಹಕಾರದಿಂದ ಮನೆಗೆ ತಲುಪಿದ ವಿಷಯ ತಿಳಿಸಿದೆ. ಸಹಜವಾಗಿ ಮನೆಯಲ್ಲಿ ಆತಂಕವಿತ್ತು. ಧ್ವನಿ ಕೇಳಿದ ಮೇಲೆ ಆ ಆತಂಕ ದೂರವಾಗಿತ್ತು.

ರೂಮ್ ಗೆ ಬಂದೆ. ಸಮಯದ ವ್ಯತ್ಯಾಸದಿಂದ ಒಂದು ರೀತಿಯ uncomfortable feelings ಇತ್ತು. ಆಗ ಬಾನಿ ಬಾಗಿಲು ತಟ್ಟಿದ್ರು. ಸಾರಿ ಫಾರ್ ದಿ ಇನ್ ಕನ್ವೀಯೆನ್ಸ್ ಅಂದ್ರು. ನಾಳೆ ಸಿಗುವ ಎಂದು ಮರುದಿನದ ಕಾರ್ಯಕ್ರಮದ ಲಿಸ್ಟ್ ಕೈಗಿತ್ತರು. ಬಾನಿ ಮಾತು ಹಿತವೆನೆಸಿತು. ಆಕೆ ತೆರಳಿದ ನಂತ್ರ ಬೋಲ್ಟ್ ಹಾಕಿ ನಿದ್ದೆಗೆ ಜಾರಿದೆ. ಅದ್ಹೇಗೆ ನಿದ್ದೆಯ ಮಂಪರು ಆವರಿಸಿತೋ ತಿಳಿಯಲೇ ಇಲ್ಲ..

ಮರುದಿನ ಏನಾಯಿತು..ಅಮೆರಿಕಾ ಬಗ್ಗೆ ನನಗಿದ್ದ ಕಲ್ಪನೆಯೇನು ಕಂಡಿದ್ದೇನು ಹೇಳ್ತೀನಿ ಬರೋ ವಾರ,,,

ಅಲ್ಲೀವರೆಗು ಟೇಕ್ ಕೇರ್…

ಜ್ಯೋತಿ ..

‍ಲೇಖಕರು Admin

August 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: