ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೇಕಾಯ್ : ತೇಜಸ್ವಿ ಹೊಕ್ಕಳ ಸುತ್ತ ಇ೦ಜೆಕ್ಷನ್!

– ಕೆ ಅಕ್ಷತಾ

  ಒಮ್ಮೆ ತೇಜಸ್ವಿಗೆ ಅವರ ಮಾವನ ಮನೆ ಹತ್ತಿರದಲ್ಲೆ ಬೀದಿ ನಾಯಿಯೊಂದು ಕಚ್ಚಿಬಿಟ್ಟಿತು. ಕಚ್ಚಿದ್ದು ಹುಚ್ಚು ನಾಯಿಯಾದರೆ ಹದಿನಾಲ್ಕು ಇಂಜೆಕ್ಷನ್ ಹಾಕಿಸ್ಕಬೇಕಾಗೋದು. ತೇಜಸ್ವಿ ಇಂಜೆಕ್ಷನ್ಗೆ ಹೆದರಿ ಡಾಕ್ಟರ್ ಹತ್ರ ತೋರಿಸೋಕೆ ನಿರಾಕರಿಸಿದ್ರು. ನಾನು ಒತ್ತಾಯ ಮಾಡಿ, `ತೇಜಸ್ವಿ ನಿಮ್ಗೆ ಹುಚ್ಚುಗಿಚ್ಚು ಹಿಡಿದು ಬಿಟ್ಟಾತು ಮಾರಾಯ್ರ’ ಅಂತಾ ಹೆದರಿಸಿ ಸಕರ್ಾರಿ ಆಸ್ಪತ್ರೆಗೆ ಕರ್ಕಂಡ್ಹೋದೆ. ಅಲ್ಲಿನ ಡಾಕ್ಟರ್ ಹತ್ರ ತೇಜಸ್ವಿ `ನಂಗೆ ಇಂಜೆಕ್ಷನ್ ಹಾಕಿಸ್ಕಾಳ್ಳಾಕೆ ಸಾಧ್ಯಾನೇ ಇಲ್ಲ ಡಾಕ್ಟ್ರೇ ತುಂಬಾ ಹೆದರಿಕೆ ಆಗತ್ತೆ. ಬೇರೆ ಏನೇ ಹೇಳಿ ಮಾಡ್ತೀನಿ’ ಅಂತಾ ರಿಕ್ವೆಸ್ಟ್ ಮಾಡಿಕಂಡ್ರು. ಆ ಡಾಕ್ಟ್ರಿಗೆ ಏನೆನಿಸ್ತೋ, `ಒಂದ್ಕೆಲಸ ಮಾಡಿ ಮನೆ ಹತ್ತಿರಾನೆ ನಾಯಿ ಕಚ್ಚಿದ್ದು ಅಂತೀರಲ್ಲ ಹೋಗಿ ಆ ನಾಯಿನ ಹುಡುಕಿ ಸಿಕ್ಕಿದ್ರೆ ಕಟ್ಟಿಹಾಕಿ ಅದು ನಾಳೆವರೆಗೆ ಸಾಯ್ಲಿಲ್ಲ. ಅದಕ್ಕೆ ಹುಚ್ಚು ಹಿಡಿದ ಲಕ್ಷಣ ಕಾಣಿಸ್ಲಿಲ್ಲ ಅಂದ್ರೆ ಹದಿನಾಲ್ಕು ಇಂಜೆಕ್ಷನ್ ತಗೋಳ್ಳೋದು ಬೇಡ. ಸೇಫ್ಟಿಗೆ ಒಂದೇ ಒಂದು ಇಂಜೆಕ್ಷನ್ ತಗೋಬೇಕಾಗತ್ತೆ. ಆದರೆ ಏನಕ್ಕೂ ನಾಳೆವರೆಗೆ ಮಾತ್ರ ಟೈಮಿರೋದು’ ಅಂತಾ ಹೇಳಿ ಕಳಿಸಿದ್ರು. ಮನೆ ಸುತ್ತಮುತ್ತ ಎಲ್ಲಾ ಕಡೆ ನಾಯಿಯನ್ನ ಹುಡಕ್ಕಂಡು ಅಲೆದ್ವಿ. ಎಲ್ಲೂ ನಾಯಿ ಸಿಗ್ಲಿಲ್ಲ. ಅದೂ ಅಲ್ಲದೆ ನಾಯಿ ಕಚ್ಚಿದ ಗಾಬರಿಯಲ್ಲಿ ತೇಜಸ್ವಿ ಆ ನಾಯಿಯನ್ನು ಗಮನಿಸಿರ್ಲಿಲ್ಲ. ನಾಯಿಯ ಬಣ್ಣ, ಅದು ಹೆಣ್ಣೋ ಗಂಡೋ, ಬಾಯಲ್ಲಿ ಜೊಲ್ಲು ಸುರಿಸ್ತತ್ತೋ ಇಲ್ಲವೋ ಇದ್ಯಾವ ವಿವರಗಳು ತಿಳಿದಿರಲಿಲ್ಲ. ತೇಜಸ್ವಿ ಇಂಜೆಕ್ಷನ್ನಿಂದ ತಪ್ಪಿಸ್ಕಳ್ಳಾಕ್ಕೆ ಎಂತಹ ಅತಿರೇಕದ ಕ್ರಮಕ್ಕೆ ಕೈ ಹಾಕಿದ್ರು ಅಂದ್ರೆ ಯಾವುದೇ ನಾಯಿ ಎದುರಿಗೆ ಬಂದ್ರೂ ಅದನ್ನ ಹಿಡ್ಕೊಂಡು ಅದರ ಬಾಲ ಎತ್ತಿ, ಮುಖ, ಮೂತಿ, ಹಲ್ಲು ಎಲ್ಲ ಪರೀಕ್ಷಿಸಿ, ಥೂ ಇದಲ್ಲ ಕಣ್ರಿ ಅಂತಾ ಬಿಟ್ಟು ಓಡಿಸೋರು. ಪುಣ್ಯಾತ್ಮ ನಾಯಿ ಮಹರಾಯ ಸಿಗಲೇ ಇಲ್ಲ. ಕೊನೆಗೆ ಬೇರೆ ವಿಧಿನೇ ಇಲ್ದೆ ತೇಜಸ್ವಿ ಡಾಕ್ಟರ್ ಹೇಳಿದಂತೆ ಇಂಜೆಕ್ಷನ್ ಹಾಕಿಸ್ಕೊಳ್ಳಾಕೆ ಒಪ್ಕೊಂಡ್ರು. ಇಂಜೆಕ್ಷನ್ನನ ಹೊಕ್ಕಳ ಸುತ್ತ ಕೊಡೋರು. ತೇಜಸ್ವಿ ಒಂದಿನ ಶರಟು ಬಿಚ್ಚಿ ಇಂಜೆಕ್ಷನ್ ಹಾಕಿಸ್ಕೊಳ್ತಾ ಎದುರಿಗೆ ನೋಡಿದ್ರೆ ಅಲ್ಲಿ ಕಾಯ್ತಾ ಇರೋ ಪೇಶೆಂಟ್ಗಳ ಸಾಲಿನಲ್ಲಿ ನಮ್ಮ ಕ್ಲಾಸ್ಮೇಟ್ಗಳಾದ ಶಾಂತಾ ಜಯತೀರ್ಥ ಮತ್ತು ಪ್ರಮೀಳಾ ಇದ್ದರು. ಅವರ ಎದುರಿಗೆ ಆರೆ ಬೆತ್ತಲಾಗಿ ಹೊಕ್ಕಳ ಸುತ್ತ ಇಂಜೆಕ್ಷನ್ ಹಾಕಿಸ್ಕಳೋಕೆ ತೇಜಸ್ವಿಗೆ ನಾಚಿಕೆ, ಮುಜುಗರ ಒತ್ತರಿಸಿಕೊಂಡು ಬಂದಿದ್ವು. ಆಮೇಲೂ ಮೂರ್ನಾಲ್ಕು ದಿನ ನಾವು ಹೋದ ಸಮಯಕ್ಕೆ ಆಕಸ್ಮಿಕವಾಗಿ ಶಾಂತಾ ಜಯತೀರ್ಥನೂ ಔಷಧಿ ತಗಂಡೋಗಕ್ಕೆ ಬರ್ತಿದ್ರು. ತೇಜಸ್ವಿ, ಶಾಂತಾ ಎದುರಿಗೆ ಇಂಜೆಕ್ಷನ್ ತಗಳ್ಳಾಕೆ ನಾಚಿಕೆಯಿಂದ ಹಿಡಿಯಷ್ಟಾಗೋರು. ಕೊನೆಗೊಮ್ಮೆ ಎಲ್ಲ ಮುಗೀತು. ಅಂತೂ ನೋವು, ನಾಚಿಕೆ ಎಲ್ಲವನ್ನು ಅನುಭವಿಸುತ್ತಾ ಹದಿನಾಲ್ಕನೆಯ ಇಂಜೆಕ್ಷನ್ ತಗಂಡು ನಿಟ್ಟುಸಿರು ಬಿಡ್ತಾ ಮನೆಗೆ ಬಂದು ಕೂತು ನಾನು ತೇಜಸ್ವಿ ನಿರಾಳವಾಗಿ ಹರಟೆ ಹೊಡೀತಾ ಇದ್ದರೆ ಎದುರಿಗೆ ಬಾಲ ಅಲ್ಲಾಡಿಸುತ್ತಾ ನಾಯಿಯೊಂದು ಬಂದು ನಿಂತಿದೆ. ತೇಜಸ್ವಿ ಇದ್ದೋರು ಒಂದೇ ಸರ್ತಿಗೆ `ರ್ರೀ ಬಡ್ಡಿಮಗಂದು ಇದೇ ನಾಯಿ ಕಣ್ರೀ ನನಗೆ ಕಚ್ಚಿದ್ದು’ ಅಂತ ಕೂಗಿಕೊಂಡ್ರು ಆ ನಾಯಿ ಆರೋಗ್ಯಕರವಾಗೆ ಇತ್ತು. ಹುಚ್ಚೂ ಹಿಡಿದಿರ್ಲಿಲ್ಲ. ಸತ್ತೂ ಇರ್ಲಿಲ್ಲ. ನಿನ್ನೆ ಕಾಣಿಸ್ಕಂಡಿದ್ದರೂ ತೇಜಸ್ವಿಯನ್ನು ಒಂದು ಇಂಜೆಕ್ಷನ್ನ ನೋವಿನಿಂದ ಪಾರು ಮಾಡಿದ ಪುಣ್ಯಾನಾದರೂ ಅದಕ್ಕೆ ಬಂದಿರೋದು. ಈಗ ಎಲ್ಲ ಮುಗಿದಿರೋ ಹೊತ್ತ್ನಲ್ಲಿ ಬಂದು ಎದುರಿಗೆ ನಿಂತಿದ್ಯಲ್ಲ!]]>

‍ಲೇಖಕರು G

8 September, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading