– ಕೆ ಅಕ್ಷತಾ
ನನ್ನ ಸ್ಕೂಟರ್ನಲ್ಲಿ ಮುಂದ್ಗಡೆ ಕೂತ್ಕಂಡು ಬರ್ತಿದ್ದ ನಾಯಿಮರಿ ತೇಜಸ್ವಿ ಚಿಕ್ಕಪ್ಪ ಪ್ರೊ.ಕೇಶವಹೆಗ್ಡೆಯವರ(ಖ್ಯಾತ ವನ್ಯಜೀವಿ ಛಾಯಾಚಿತ್ರಕಾರ ಸೇನಾನಿ ಅವರ ತಂದೆ) ಮನೆಯದು. ಅವರ ಮನೆಯ ಪೊಮೇರಿಯನ್ ನಾಯಿಯೊಂದು ಮರಿ ಹಾಕಿದಾಗ ನಾನು `ಶಿವರುದ್ರಪ್ಪನವರ ಮಕ್ಕಳು ನಾಯಿಮರಿ ತನ್ಕೊಡಿ ಸಾಕ್ತೀವಿ ಅಂತ ಹೇಳ್ತಾ ಇದ್ದರು. ಈ ಮರಿಗಳನ್ನು ಕೊಡ್ತೀರಾ ಅವರಿಗೆ ತಗಂಡು ಹೋಗಿ ಕೊಡ್ತೀನಿ’ ಅಂದೆ. ಅದನ್ನು ತಗಂಡು ಹೋಗಿ ಶಿವರುದ್ರಪ್ಪನವರ ಮನೆಯಲ್ಲಿ ಬಿಟ್ಟೆ. ಸಣ್ಣ ಮರಿಗಳಾಗಿದ್ದಾಗ ನಾಯಿಗಳು ಮುದ್ದಾಗಿರ್ತವೆ. ಇವು ಅಚ್ಚಬಿಳಿ ಬಣ್ಣದ ಜೂಲು ನಾಯಿಮರಿಗಳು. ಅವನ್ನು ನೋಡಿ ಶಿವರುದ್ರಪ್ಪನವರ ಮನೆಯವರು ಬಹಳ ಸಂತೋಷ ಪಟ್ಟು ಅವನ್ನು ಸಾಕಲಿಕ್ಕೆ ಒಪ್ಪಿದರು. ಮಕ್ಕಳಿಬ್ಬರೂ ನಾಯಿ ಮರಿಯನ್ನು ನೋಡಿದ್ದೆ ಅಪಾರವಾದ ಖುಷಿಯಿಂದ ಕುಣಿದಾಡಿದರು. ಹೀಗೆ ಕೇಶವಹೆಗ್ಡೆಯವರ ಮನೆಯ ಎರಡು ನಾಯಿ ಮರಿಗಳು ಶಿವರುದ್ರಪ್ಪನವರ ಮನೆಯಲ್ಲಿ ಆಶ್ರಯ ಪಡೆದವು.
ಇದಾಗಿ ಒಂದು ವಾರವಾಗಿತ್ತೇನೋ, ಒಮ್ಮೆ ಶಿವರುದ್ರಪ್ಪನವರು ಎಲ್ಲೋ ಕಂಡವರು ಗಂಭೀರವಾದ ಸ್ವರದಲ್ಲಿ `ಶಾಮಣ್ಣ, ಸಂಜೆ ಮನೆ ಕಡೆ ಬಂದು ಹೋಗು’ ಅಂದ್ರು. ಅವರ ಸ್ವರದಲ್ಲಿದ್ದ ಗಂಭೀರತೆಯೇ -ಏನೋ ನನ್ನಿಂದ ಅವಘಡ ಆಗಿದೆ ಅನ್ನೋದನ್ನ ಸೂಚಿಸುವಂತೆ ಇತ್ತು. ಸ್ವಲ್ಪ ಭಯದಿಂದಲೇ ಅವರ ಮನೆಗೆ ಹೋದೆ. ಬಾಗಿಲ ಬುಡದಲ್ಲಿಯೇ ನಾಯಿ ಮರಿಗಳೆರಡು ಆಗ ತಾನೇ ಸ್ನಾನ ಮಾಡಿಸಿದ್ರು ಕಾಣ್ತದೆ ನಡಗುತ್ತಾ ನಿಂತಿದ್ವು. ನಾನು ಹೋದ ಕೂಡಲೇ ಮೇಷ್ಟ್ರು, `ನಿಂಗೆ ನಾಯಿಮರಿಗಳನ್ನು ತನ್ಕೊಡಕ್ಕೆ ಯಾರು ಹೇಳಿದ್ದು’ ಅಂತ ಕೇಳಿದ್ರು. `ಸರ್, ಇವು ಕೇಶವಹೆಗ್ಡೆಯವರ ಮನೆಯ ನಾಯಿಮರಿಗಳು. ಒಳ್ಳೆ ಜಾತಿನಾಯಿಯ ಮರಿಗಳು. ಜಯಂತಿ ಯಾವಾಗಲೂ ನಂಗೊಂದು ನಾಯಿಮರಿ ತನ್ಕೊಡಿ ಅಂತಿದ್ಲು ಅದಕ್ಕೆ ತನ್ಕೊಟ್ಟೆ’ ಅಂದೆ. ಮೇಷ್ಟ್ರಿದ್ದೋರು, `ನಾನು ನಿನಗೆ ನಾಯಿಮರಿಗಳ ಅಪ್ಪ ಅಮ್ಮನ ಜಾತಿ ಕೇಳಲಿಲ್ಲ. ಹುಡುಗ್ರು ಹೇಳಿದ್ರು ಅಂತ ಇಷ್ಟು ಸಣ್ಣ ಮರಿಗಳನ್ನ ತನ್ಕೊಟ್ಟು ಹೋಗಿದೀಯಲ್ಲ; ಇವುಗಳ ಕಾಲದಲ್ಲಿ ದಿನಾ ನೆರೆಹೊರೆಯವರ ಹತ್ರ ಬಯ್ಯಿಸಿಕೊಳ್ಳೋದಾಗಿದೆ. ರಾತ್ರಿ ಆಗ್ತಿದ್ದಂಗೆ ಸಣ್ಣಮರಿಗಳು ತಾಯಿ ಜೊತೆಗಿಲ್ಲ ನೋಡು ಕೂಗಕ್ಕೆ ಶುರು ಹಚ್ಕೊಳ್ತಾವೆ, ನಿಲ್ಲಿಸೋದೆ ಇಲ್ಲ. ಕೇರಿಯಲ್ಲಿರೋ ಯಾರಿಗೂ ನಿದ್ದೆಯಿಲ್ಲ. ನೀನು ಈ ಮರಿಗಳನ್ನ ತಗಂಡು ಹೋಗಿ ಅವುಗಳ ತಾಯಿ ಹತ್ರ ಬಿಟ್ಟುಬಿಡು, ಇಷ್ಟೆ ಆಗಿದ್ರು ಸುಮ್ನಿರ್ತಿದ್ದೆ ಶಾಮಣ್ಣ, ಇಲ್ನೋಡು ನೀನು ತಂದ್ಕೊಡುವಾಗ ಮರಿಗಳು ಹ್ಯಾಗಿದ್ವು, ಈಗ ಹ್ಯಾಗಿದಾವೆ ನೋಡು?’
`ಯಾಕೆ ಸರ್ ಅನ್ನ ತಿನ್ನಲ್ವ?’ ಅಂದೆ. `ಅನ್ನ ತಿನ್ನೋದಲ್ಲ. ಬೆಳಿಗ್ಗೆ ಎದ್ದ ಕೂಡಲೇ ಅಣ್ಣ ತಂಗಿ ತಾವು ಸ್ನಾನ ಮಾಡೋ ಮೊದಲು ಅವಕ್ಕೆ ಸ್ನಾನ ಮಾಡಿಸಕ್ಕೆ ಹೊರಡ್ತಾರೆ. ಅದರಲ್ಲೂ ಸ್ಪಧರ್ೆ; ಜಯಂತಿ ಸ್ನಾನ ಮಾಡಿಸಿದ್ಲು ಅಂತ ಅವಳಣ್ಣ ಸ್ನಾನ ಮಾಡಿಸೊದು. ಅವನು ಮಾಡ್ಸಿದ ಅಂತ ಇವಳು ಸ್ನಾನ ಮಾಡಿಸೋದು. ಶಾಲೆಗೆ ಹೋಗ ತನಕಾನು ಇದೇ ನಡೀತಿರತ್ತೆ. ಆಮೇಲೆ ಶಾಲೆಯಿಂದ ಬಂದ ಕೂಡಲೇ ಮತ್ತೆ ಅವಕ್ಕೆ ಸ್ನಾನ. ಹೀಗೆ ದಿನಕ್ಕೆ ಮೂರ್ನಾಲ್ಕು ಸರ್ತಿ ಸ್ನಾನ ಮಾಡಿಸ್ತಾರೆ. ಜೊತೆಗೆ ಯಾರೋ ಹೇಳಿದ್ದಾರೆ ಸ್ನಾನ ಮಾಡಿಸಿ ಬಿಸಿಲಲ್ಲಿ ಒಣಗಿಸಬೇಕು ಅಂತ ಅದಕ್ಕೆ ಇವರು ಶಾಲೆಗೆ ಹೋಗುವಾಗ ಬಿಸಲಲ್ಲಿ ಅವೆರಡು ಮರಿಗಳನ್ನ ಕಟ್ಟಿ ಹೋದ್ರೆ ಮತ್ತೆ ಸಂಜೆ ಶಾಲೆ ಬಿಟ್ಟು ಬಂದ್ಮೇಲೆ ಬಿಚ್ಚಿ ಸ್ನಾನಕ್ಕೆ ಕರ್ಕಂಡು ಹೋಗ್ತಾರೆ. ಅಲ್ಲಿವರೆಗೆ ಅವು ಬಿಸಿಲಲ್ಲಿ ಒಣಕ್ಕೊಂಡು ಬಿದ್ದಿರ್ತವೆ. ಹಿಂಗೆ ಬಿಟ್ರೆ ಚಳಿಯಲ್ಲಿ ನಡುಗಿ ಬಿಸಿಲಲ್ಲಿ ಒಣಗಿ ಮರಿಗಳು ಸಾಯೋದಂತೂ ಖಂಡಿತ ಅದಕ್ಕೂ ಮೊದಲು ಇವನ್ನ ಇಲ್ಲಿಂದ ತಗಂಡು ಹೋಗಿ ಅವುಗಳ ತಾಯಿ ಹತ್ರ ಸೇರಿಸಿಬಿಡು’ ಅಂದ್ರು.
]]>





tappade odtini e kaalamannu tumba chennagirutte.