ಟೈಪಿಸ್ಟ್ ತಿರಸ್ಕರಿಸಿದ ಕಥೆ..

‘ಸರ್, ಈ ಕಥೆನಾ ನಾನ್ ಟೈಪ್ ಮಾಡಲ್ಲ . ದಯವಿಟ್ಟು ತಪ್ಪು ತಿಳಿಯಬೇಡಿ. ಬೇರೆಯವರ ಬಳಿ ಕೊಟ್ಟು ಟೈಪ್ ಮಾಡಿಸಿಕೊಳ್ಳಿ’ ಎಂದು ಭಯದಿಂದಲೇ ಹೇಳಿ ತಕ್ಷಣ ಕಾಲ್ ಕಟ್ ಮಾಡಿಬಿಟ್ಟರು ನನ್ನ ಖಾಯಂ ಟೈಪಿಸ್ಟ್ ಕೋಮಲಮ್ಮ. ಅವರ ಈ ವರ್ತನೆ ನನ್ನಲ್ಲಿ ಆಶ್ಚರ್ಯ ತರಲು ಕಾರಣವೆಂದರೆ ಇದುವರೆಗೂ ನಾನು ಎಂಥೆಂಥೆದೋ ತುರ್ತು ಸಂದರ್ಭದಲ್ಲಿ ಅತೀ ಕಡಿಮೆ ಸಮಯದ ಡೆಡ್ ಲೈನ್ ಗಳಲ್ಲೂ ಟೈಪ್ ಮಾಡಲು ಕೊಟ್ಟಾಗ ತುಂಬಾ ವಿಧೇಯತೆಯಿಂದ ಟೈಪ್ ಮಾಡಿ ಕಳುಹಿಸುತ್ತಿದ್ದವರು, ಕೆಲವೊಮ್ಮೆ ಬರೆದಿರುವ ಹಾಳೆಗಳನ್ನು ಖುದ್ದಾಗಿ ಹೋಗಿ ಕೊಡಲು ಸಾಧ್ಯವಾಗದೆ ಹೋದರೆ ಅವುಗಳ ಫೋಟೋ ತೆಗೆದು ಕಳಿಸಿದರೂ ಟೈಪ್ ಮಾಡಿ ತಮ್ಮ ಮಗನಿಂದ ಈ ಮೇಲ್ ಮಾಡಿಸುತ್ತಿದ್ದ ಕೋಮಲಮ್ಮ ಇಂದೇಕೆ ಹೀಗೆ ಮಾತನಾಡುತ್ತಿದ್ದಾರೆ ಎಂದು ಕಸಿವಿಸಿಗೊಂಡೆ. ನನಗೇನು ಆ ಕಥೆ ತುರ್ತಾಗಿ ಟೈಪ್ ಆಗಬೇಕಾದ ಅನಿವಾರ್ಯತೆ ಇರಲಿಲ್ಲ. ಆದರೆ ಕೋಮಲಮ್ಮನವರು ಹೀಗ್ಯಾಕೆ ಹೇಳಿರಬಹುದು ಎಂಬ ಕುತೂಹಲ ಮಾತ್ರ ಹೆಚ್ಚಾಯಿತು. ಅದರಿಂದಾಗಿಯೇ ಅವರ ಮನೆಗೆ ಹೋದೆ.

ಹೋಗುವಾಗ ದಾರಿಯಲ್ಲಿ ‘ನಾನೇನಾದರೂ ಇವರಿಗೆ ಹಳೆಯ ಬಾಕಿ ಕೊಡುವುದು ಉಳಿದಿದೆಯಾ? ಅದಕ್ಕೇ ಹೀಗೆ ಹೇಳುತ್ತಿದ್ದಾರಾ ಎಂದು ಯೋಚಿಸಿದೆ. ಆದರೆ ಅವರ ಮನೆಗೆ ಹೋಗುತ್ತಿದ್ದಂತೆಯೇ ಕಥೆಯಿದ್ದ ಹಾಳೆಗಳನ್ನು ನನ್ನ ಕೈಗಿರಿಸಿ ‘ತಗೊಳ್ಳಿ ಸರ್. ನನ್ನಿಂದ ಇದನ್ನು ಟೈಪ್ ಮಾಡಲಾಗುತ್ತಿಲ್ಲ’ ಎಂದರು. ‘ಯಾಕೆ ?’ ಎಂದು ಗದರಿಸುವಂತೆಯೇ ಕೇಳಿದೆ.
‘ಮೊದಲನೇ ಸಾಲು ಓದಿ ಹೇಳಿ ಸರ್’ ಎಂದಳಾಕೆ.

‘ಪ್ರತಿಭಾ ಆತ್ಮಹತ್ಯೆ ಮಾಡಿಕೊಂಡದ್ದು ಅವಳ ತಂದೆ ತಾಯಿಯರ ಹೃದಯಸ್ತಂಭನಕ್ಕೆ ಕಾರಣವಾಗಿತ್ತು.’
ಎಂಬ ನನ್ನ ಕಥೆಯ ಮೊದಲ ಸಾಲಿಗೂ ಇವರು ನಾನು ಕಥೆ ಟೈಪ್ ಮಾಡುವುದಿಲ್ಲ ಎನ್ನುತ್ತಿರುವುದಕ್ಕೂ ಏನು ಸಂಬಂಧ? ಎಂದು ಯೋಚಿಸುತ್ತಿರುವಾಗಲೇ‌ ಕೋಮಲಮ್ಮ ಮತ್ತೆ ನನ್ನಿಂದ ಆ ಹಾಳೆಗಳನ್ನು ಕಸಿದುಕೊಂಡು ಮುಂದಿನ ಸಾಲುಗಳನ್ನು ಓದಲಾರಂಭಿಸಿದರು…

* * * * * *

ತುಂಬಾ ಸಭ್ಯಳಾಗಿದ್ದ , ಓದಿನಲ್ಲಿ ಚುರುಕಿದ್ದ, ಶಾಲಾದಿನಗಳಿಂದ ಹಿಡಿದು ಕಾಲೇಜಿನವರೆಗೂ ಒಮ್ಮೆಯೂ ಒಂದು ಕಂಪ್ಲೇಂಟ್ ತರದ ಹುಡುಗಿ ಪ್ರತಿಭ, ಓದಿನ ಜೊತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸದಾ ಮುಂದಿರುತ್ತಿದ್ದವಳು. ಪಿಯುಸಿ ಮುಗಿಸಿದ ನಂತರ ಕಾನೂನು ಪದವಿಯ ಅಭ್ಯಾಸಕ್ಕೆ ಸೇರಿಕೊಂಡವಳು ಅದ್ಯಾರನ್ನೋ ಪ್ರೀತಿಸತೊಡಗಿದ್ದಾಳೆ ಎಂಬ ಚಿಕ್ಕದೊಂದು ಹಿಂಟ್ ಸಿಕ್ಕಿದ್ದರೂ ಪ್ರಾಯಶಃ ಅವಳ ತಂದೆತಾಯಿಗಳು ಸ್ವಲ್ಪ ಎಚ್ಚರ ವಹಿಸುತ್ತಿದ್ದರೇನೋ .’Though they live with you, yet they belong not to you’ (ಅವರು ನಿಮ್ಮೊಂದಿಗೆ ವಾಸಿಸಿದರೂ ಸಂಪೂರ್ಣ ನಿಮಗೆ ಸೇರಿರಲಾರರು ) ಎಂಬ ಮಾತನ್ನು ಕವಿ ಗಿಬ್ರಾನ್ ಅದೆಷ್ಟು ನಿಖರವಾಗಿ ಹೇಳಿದ್ದಾನೆ ಅಲ್ಲವೆ ? ಅದರಲ್ಲೂ ಕೈಗೊಂದು ಮೊಬೈಲ್ ಸಿಕ್ಕ ಮೇಲಂತೂ ಯಾರು ಯಾವ ಲೋಕದಲ್ಲಿ ವಿಹರಿಸುತ್ತಿರುತ್ತಾರೆ ಎಂಬುದೇ ಅರ್ಥವಾಗದ ಸ್ಥಿತಿ.

ಫೇಸ್ ಬುಕ್ ನಲ್ಲಿ ಪರಿಚಯವಾದ ಯಾರೋ ಒಬ್ಬ ಪ್ರೀತಿಯ ಮಾತುಗಳನ್ನಾಡಿದ್ದಾನೆ. ಆನಂತರ ಪ್ರೇಮ ನಿವೇದನೆಯನ್ನೂ ಮಾಡಿಕೊಂಡಿದ್ದಾನೆ. ಇತ್ತ ಮೊದಲಿಂದಲೂ ಅಂತರ್ಮುಖಿಯಾಗೇ ಇದ್ದ ಪ್ರತಿಭಾಗೆ ವರ್ಚ್ಯುಯಲ್ ಜಗತ್ತಿನ ಈ ಸಲುಗೆ ವ್ಯಾಮೋಹವನ್ನುಂಟುಮಾಡಿದೆ. ಕೇವಲ ಆರು ತಿಂಗಳಲ್ಲಿ ಪರಿಚಯ ಪ್ರೇಮಕ್ಕೆ ತಿರುಗಿದೆ.‌ ಅಥವಾ ಹಾಗೆಂದು ಪ್ರತಿಭಾ ನಂಬಿಕೊಂಡಿದ್ದಾಳೆ. ಮನುಷ್ಯನ ಕ್ಯೂರಿಯಾಸಿಟಿ ಇದೊಂದು ವಿಷಯದಲ್ಲಿ ಅಲ್ಪಾಯುಷಿ ಎನ್ನಲೇಬೇಕು. ಕುತೂಹಲ ಕಳೆದುಹೋಗುವ ಮುನ್ನ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದಾರೆ. ಅಜ್ಙಾತ ಸ್ಥಳವೊಂದರಲ್ಲಿ ಭೇಟಿಯಾದವರು ಸಾಕಷ್ಟು ಮಾತುಗಳನ್ನಾಡಿದ್ದಾರೆ. ಆಮೇಲೆ ಹೊರಡುವ ಸಮಯಕ್ಕೆ ಆತನ ನೈಜ ವರ್ತನೆ ಹೊರಗೆ ಬಿದ್ದಿದೆ. ಆತ ಬಂದದ್ದು ಭೇಟಿಗಲ್ಲ ಬದಲಿಗೆ ಅವಳನ್ನು ಬೇಟೆಯಾಡುವುದಕ್ಕೆಂದು. ಇವಳು ಆರಂಭದಲ್ಲಿ ಪ್ರತಿಭಟಿಸಿದ್ದಾಳೆ. ಆದರೆ ಪ್ರತಿಭಟಿಸುತ್ತ, ಪ್ರತಿಭಟಿಸುತ್ತ ತಾನೂ ಪರವಶಳಾಗಿದ್ದಾಳೆ. ಆರು ತಿಂಗಳ ಪರಿಚಯ ಆರೇಳು ನಿಮಿಷಗಳಲ್ಲಿ ಒಬ್ಬರ ಮುಂದೆ ಮತ್ತೊಬ್ಬರನ್ನು ಬೆತ್ತಲಾಗಿ ನಿಲ್ಲಿಸಿಬಿಟ್ಟಿದೆ.

ಮನೆಗೆ ಬರುವಷ್ಟರಲ್ಲಿ ಆತನ ಫೇಸ್ ಬುಕ್ ಅಕೌಂಟ್ ಡಿಲೀಟ್ ಆಗಿದೆ. ಆಷ್ಟೇ. ಪ್ರತಿಭಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಗವಳ ಅಪ್ಪ, ಅಮ್ಮ ಹೃದಯ ಒಡೆದು ಕಂಗಾಲಾಗಿ ಕೂತಿದ್ದಾರೆ. ತಮ್ಮ ಮುಂದೆ ವಿಧೇಯತೆ ಮತ್ತು ವಿನಯದಿಂದ ಓಡಾಡಿಕೊಂಡಿದ್ದ ಮಗಳು ಇಲ್ಲವಾಗಿದ್ದಾಳೆ ಎಂಬ ಸುದ್ದಿ ಅವರ ಪಾಲಿಗೆ ದೊಡ್ಡ ಶೂನ್ಯವನ್ನೇ ತಂದೊಡ್ಡಿದೆ.

* * * * *
‘ಸಾಕು ನಿಲ್ಲಿಸಿ. ನಾನೇ ಬರೆದ ಕಥೆಯನ್ನು ನೀವು ನನಗೇ ಏಕೆ ಓದಿ ಹೇಳುತ್ತೀರಿ ?’ ಎಂದ ನಾನು ಕೋಮಲಮ್ಮನವರು ಕಥೆ ಓದುವುದನ್ನು ಅಲ್ಲಿಗೇ ನಿಲ್ಲಿಸಿದೆ.
ಅದಕ್ಕವರು, ‘ ಪೂರ್ತಿ ಓದಿಬಿಡ್ತೀನಿ ಸರ್.‌ ನೀವು ಬರೆಯೋ ಕಥೆಗಳಿಂದ ಆಗುವ ಅನಾಹುತಗಳ ಬಗ್ಗೆ ನಿಮಗೂ ಜ್ಞಾನೋದಯ ಆಗ್ಲಿ’ ಎನ್ನುತ್ತಾ ಹಾಳೆಯ ಮೇಲೆ ಮತ್ತೆ ಕಣ್ಣು ನೆಟ್ಟರು.

* * * *

ಅವನು ಅಕೌಂಟ್ ಡಿಲೀಟ್ ಮಾಡಿದ ಕಾರಣಕ್ಕೆ ಇವಳು ಆತ್ಮಹತ್ಯೆ ಮಾಡಿಕೊಂಡಳೆ ಎಂದು ಯಾರಾದರೂ ಕೇಳುವುದಾದರೆ ಅದಕ್ಕೆ ಉತ್ತರ ಹೀಗಿದೆ ; ಅವನನ್ನು ಭೇಟಿಯಾಗಿ ಖುಷಿಯಿಂದ ಮನೆಗೆ ಬಂದ ಪ್ರತಿಭಾಗೆ ನ್ಯೂಸ್ ಚಾನೆಲ್ ಒಂದರಲ್ಲಿ ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ಭಯ ಹುಟ್ಟಿಸಿದೆ. ಚಲನಚಿತ್ರ ನಟಿಯೊಬ್ಬಳು ತನ್ನ ಮೇಲೆ ಪ್ರಖ್ಯಾತ ನಟನೊಬ್ಬನಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂದು #me too ಹ್ಯಾಷ್ ಟ್ಯಾಗ್ ಹಾಕಿ ಫೇಸ್ ಬುಕ್ ನಲ್ಲಿ ಬರೆದುಕೊಂಡದ್ದು ದೊಡ್ಡ ಸುದ್ದಿಯಾಗಿದೆ. ಆ ನಟಿ ಮಾತು ಮಾತಿಗೆ ನನ್ನ ಬಳಿ ಎಲ್ಲದಕ್ಕೂ ಸಾಕ್ಷಿ ಇದೆ. ಕಾಲ್ ಕರೆಗಳು, ಎಸ್ಸೆಮ್ಮೆಸ್ಸುಗಳು ಏನೇನು ಹೇಳುತ್ತವೆ ಎಂಬುದನ್ನು ವಿಚಾರಣೆಯಲ್ಲಿ ಒದಗಿಸುತ್ತೇನೆ ಎಂದು ಆಕೆ‌ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಿದ್ದಾಳೆ.

ಈ ಸುದ್ದಿಯನ್ನು ನೋಡಿದ ಪ್ರತಿಭಾಗೆ ತಮ್ಮ ಮಧ್ಯೆ ನಡೆದ ಎಲ್ಲ ಫೋನ್ ಕರೆಗಳು ಮತ್ತು ಮೆಸೇಜ್ ಗಳ ಬಗ್ಗೆ ನೆನಪಾಗಿದೆ. ನಾವು ಅದನ್ನು ಡಿಲೀಟ್ ಮಾಡಿದ್ದೇವೆ ಎಂಬ ನೆನಪೂ ಅವಳಿಗಿದೆ. ಆದರೆ ಟಿವಿ ನಿರೂಪಕ ಪದೇ ಪದೇ ಹೇಳುತ್ತಿದ್ದ ಈ ಮಾತುಗಳು ಅವಳನ್ನು ಬಲವಾಗಿ ನಾಟಿದೆ. “ವೀಕ್ಷಕರೇ, ಇವತ್ತಿನ ದಿನಗಳಲ್ಲಿ ಯಾವುದೂ ಪರ್ಸನಲ್ ಆಗಿ ಉಳಿದಿಲ್ಲ. ಡಿಜಿಟಲ್ ಲೋಕಕ್ಕೆ ತೆರೆದುಕೊಂಡಿರುವ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಪ್ರಪಂಚದ ಮುಂದೆ ಖುಲ್ಲಂ ಖುಲ್ಲಾ ತೆರೆದಿಟ್ಟಂತೆಯೇ. ನೀವು ಕಳಿಸುವ ಪ್ರತಿ ಮೆಸೇಜು, ಮಾಡುವ ಪ್ರತಿ ಕಾಲ್, ಕದ್ದು ಮುಚ್ಚಿ ನಡೆಸುವ ಸರಸ ಸಂಭಾಷಣೆಗಳು ಇವೆಲ್ಲವೂ ನಿಮಗಷ್ಟೇ ಗೊತ್ತು ಎಂದು ತಿಳಿಯಬೇಕಿಲ್ಲ. ಅವುಗಳನ್ನು ಯಾರೋ ನಿಮಗೆ ಗೊತ್ತಿಲ್ಲದೆ ಕೂಡ ಆಕ್ಸೆಸ್ ಮಾಡಬಹುದು ಅಥವಾ ನಿಮ್ಮವರೇ ಸಂಬಂಧ ಹದಗೆಟ್ಟಾಗ ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಹುದು.‌ ಎಚ್ಚರ ವೀಕ್ಷಕರೇ ಎಚ್ಚರ”. ಈ ಎಚ್ಚರಿಕೆಯ‌ ಮಾತುಗಳೇ ಆಕೆಯ ಜೀವನಕ್ಕೆ ಕುತ್ತು ತಂದಿವೆ. ಪ್ರೇಮಕ್ಕೆ ಪರವಶಳಾಗಿ ತನ್ನನ್ನು ಅರ್ಪಿಸಿಕೊಂಡು ಬಂದ ಆ ದಿನವೇ ಇಂತಹದ್ದೊಂದು ಸುದ್ದಿ ಮಹತ್ವ ಪಡೆದದ್ದು ಅವಳನ್ನು ಇನ್ನಿಲ್ಲದ ಆತಂಕ ,ಉದ್ವೇಗ ಮತ್ತು ಖಿನ್ನತೆಗೆ ತಳ್ಳಿದೆ. ಇದುವರೆಗೆ ತಾನು ಕಟ್ಟಿಕೊಂಡು ಬಂದ ತನ್ನದೇ ವ್ಯಕ್ತಿತ್ವಕ್ಕೆ ಮುಂದೊಂದಿನ ತನ್ನ ಈ ವರ್ಚ್ಯುಯಲ್ ಜಗತ್ತಿನ ಸಂಬಂಧ ಮಸಿ ಬಳಿಯುತ್ತದೆ ಎಂಬುದನ್ನು ಆಕೆ ಊಹಿಸಿದ್ದಾಳೆ. ಹಾಗಾಗಿಯೇ ಜೀವ ತೆಗೆದುಕೊಳ್ಳುವಂಥ ನಿರ್ದಯಿ ನಿರ್ಧಾರಕ್ಕೆ ಬಂದಿದ್ದಾಳೆ. ಆದರೆ ಇದ್ಯಾವುದರ ಸಣ್ಣದೊಂದು ಸುಳಿವೂ ಇಲ್ಲದ ಅವಳ ತಂದೆತಾಯಿ ಅವಳ ಸಾವಿನಿಂದ ಕುಸಿದು ಬಿದ್ದಿದ್ದಾರೆ.
* * * *
ಅದು ನನ್ನ ಕಥೆಯ ಕೊನೆಯ ಸಾಲಾಗಿತ್ತು. ‘ಸರಿ, ಈಗ ಈ ಕಥೆಯಿಂದ ಅಂತಾದ್ದೇನಾಯ್ತು ನಿಮಗೆ? ನೀವೇಕೆ ಇದನ್ನು ಟೈಪ್ ಮಾಡಲಾಗುವುದಿಲ್ಲ ?’ ಎಂದೆ.

‘ಏಕೆಂದರೆ ನನ್ನ ಮಗಳ ಹೆಸರು ಪ್ರತಿಭಾ. ನನ್ನ ಮಗಳು ಸತ್ತಳು ಎಂಬುದನ್ನು ನಾನು ಹೇಗೆ ಟೈಪ್ ಮಾಡಲಿ ?’ ಎನ್ನಬೇಕೆ ? ಇದರಿಂದ ನನಗೆ ತಕ್ಷಣಕ್ಕೆ ನಗು ಬಂತಾದರೂ ನಂತರ ವಿಚಲಿತನಾದೆ. ಇದುವರೆಗೆ ನಾನು ಕೊಟ್ಟ ಎಷ್ಟೋ ಕಥೆಗಳಲ್ಲಿ ಸಾವು-ನೋವು, ಕೊಲೆ, ರೇಪ್, ಹಿಂಸೆ, ಮೋಸ , ಬೀಭತ್ಸ ಎಲ್ಲ ರಸಗಳನ್ನುಳ್ಳ ಪಾತ್ರಗಳೂ ಇದ್ದವು ಆಗೆಲ್ಲ ಚಕಾರವೆತ್ತದ ಈ ಟೈಪಿಸ್ಟ್ ತನ್ನ ಮಗಳ ಹೆಸರಿನ ಪಾತ್ರ ಆತ್ಮಹತ್ಯೆ ಮಾಡಿಕೊಂಡಿದೆ ಎಂಬ ಕಾರಣಕ್ಕೆ ಕಥೆಯನ್ನು ತಿರಸ್ಕರಿಸುತ್ತಿರುವುದನ್ನು ನೋಡಿ ವ್ಯಥೆಯಾಯಿತು. ಅವರ ಬಳಿ ಮತ್ಯಾವ ತರ್ಕಕ್ಕೂ ಹೋಗದೆ ನನ್ನ ಕಥೆಯ ಹಾಳೆಗಳನ್ನು ಕೊಡುವಂತೆ ಸನ್ನೆ ಮಾಡಿ, ಅವುಗಳನ್ನು ಪಡೆದು ಹೊರಟೆ. ‘ಸರ್, ನನ್ನ ಮಗಳು ನೀವು ಬರೆದ ಕಥೆಗಳನ್ನು ನಾನು ಟೈಪ್ ಮಾಡಿಟ್ಟಮೇಲೆ ಸಿಸ್ಟಮ್ ನಲ್ಲೇ ಓದ್ತಾಳೆ. ಕೆಲವು ಕಥೆಗಳನ್ನು ಮತ್ತೆ ಮತ್ತೆ ಓದಿದ್ದಾಳೆ” ಎಂದ ಕೋಮಲಮ್ಮನವರು ‘ಇನ್ಮುಂದೆ ನನ್ನ ಹತ್ರ ಟೈಪಿಗೆ ಕೋಡೋದ್ನ ನಿಲ್ಲಿಸಲ್ಲ ತಾನೆ ? ‘ ಎಂದು ಅಸಾಹಯಕ ಧ್ವನಿಯಲ್ಲಿ ಕೇಳಿದರು.

‘ ಇಲ್ಲ ‘ ಎಂದೆ.

ಅವರು ಅದನ್ನು ಹೇಗೆ ಅರ್ಥೈಸಿಕೊಂಡರೋ ತಿಳಿಯದು.‌ ಮನೆಯಿಂದ ಹೊರಟು ಗಾಡಿ ಸ್ಟಾರ್ಟ್ ಮಾಡುವ ಮುನ್ನ ಯಾರೋ ಅವರ ಮನೆ ಟೆರೇಸ್ ಮೇಲೆ ಓಡಾಡುತ್ತಿದ್ದುದನ್ನು ಗಮನಿಸಿದೆ. ಇಯರ್ ಫೋನ್ ಹಾಕಿಕೊಂಡು, ಈ ಲೋಕದ ಪರಿವೆಯೇ ಇಲ್ಲದಂತೆ ನುಲಿಯುತ್ತ ಮಾತಾಡುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ ಹುಡುಗಿಯೋರ್ವಳು ನನ್ನ ಕಣ್ತಪ್ಪಿಸಿ ಟೆರೇಸಿನ ಮೂಲೆಗೆ ಹೋಗಿ ನಿಂತಳು. ಮಾತು ನಿಲ್ಲಿಸಿರಲಿಲ್ಲ. ಆ ಹುಡುಗಿಯನ್ನು ಕಳೆದ ಐದು ವರ್ಷದಿಂದ ನಾನು ನೋಡಿದ್ದೆ. ಅವಳು ಹೆಸರು ಪ್ರತಿಭಾ ಎಂದು ತಿಳಿದುಕೊಂಡಿರಲಿಲ್ಲ.

ಕೋಮಲಮ್ಮ ನನ್ನ ಕಥೆಯನ್ನು ತಿರಸ್ಕರಿಸಿದ್ದರ ಸಕಾರಣ ಪತ್ತೆಯಾದಮೇಲೆ ನಾನಲ್ಲಿ ಅರೆಕ್ಷಣವೂ ನಿಲ್ಲಲಿಲ್ಲ. ಅಂದಿನಿಂದ ಯೋಚಿಸುತ್ತಲೇ ಇದ್ದೇನೆ ;
“ಇರುವ ಪಾತ್ರಗಳನ್ನು ಕಥೆಗಾರ ಸೃಷ್ಟಿಸುತ್ತಾನೋ ಅಥವಾ ಕಥೆಗಾರ ಸೃಷ್ಟಿಸಿದ ಪಾತ್ರಗಳೇ ಲೋಕದಲ್ಲಿ ಹುಟ್ಟಿಕೊಳ್ಳುತ್ತವೆಯೋ?”

‍ಲೇಖಕರು avadhi

November 13, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ಸೋಮು ಕುದರಿಹಾಳ

    ಟೆರೇಸ್ ಮೇಲೆ ಓಡಾಡುವ ಪ್ರತಿಭಾಳನ್ನು ನೀವು ಗಮನಿಸದಿದ್ದರೆ ಉತ್ತಮ ತಂತ್ರದ ಕಥೆ ಆಗಿಬಿಡುತ್ತಿತ್ತು ಕಥೆಯ ಹಠಾತ್ ತಿರುವು ಇಷ್ಟ ಆಯ್ತು.

    ಪ್ರತಿಕ್ರಿಯೆ
    • Gangadhar Kolgi

      ಕಥೆ ನನಗೆ ಹಿಡಿಸಿದೆ. ಯೋಚನೆಗೂ ಹಚ್ಚಿದೆ. ನೀವು ಕೊನೆಯಲ್ಲಿ ಎತ್ತುವ ಪ್ರಶ್ನೆಯಂಥ, ಸಾಕಷ್ಟು ಭಿನ್ನರೂಪದಲ್ಲಿ ತೇಜಸ್ವಿ ತಮ್ಮ ಚಿದಂಬರ ರಹಸ್ಯ ಕಾದಂಬರಿಯಲ್ಲಿ ಒಂದು ಕಡೆ ಎತ್ತುತ್ತಾರೆ.ನಿಮಗೂ ಗೊತ್ತು. ( ಇಲ್ಲಿ ತಪ್ಪು ತಿಳುವಳಿಕೆಯಾಗುವ ಸಾಧ್ಯತೆಯಿದೆ. ತೇಜಸ್ವಿ ಪ್ರಶ್ನೆ ನೀವು ಅನುಕರಿಸಿದ್ದೀರಿ ಎಂದಲ್ಲ ನನ್ನ ಅಭಿಪ್ರಾಯ. ನಿಮ್ಮದು ಹೊಸಕಾಲದ, ಹೊಸತಾದ ಪ್ರಶ್ನೆ) ಈ ಪ್ರಶ್ನೆಗೆ ಪ್ರಾಯಶ: ಉತ್ತರವೇ ಇಲ್ಲವೇನೋ? ಬರಹಗಾರರಾದ ನಾವು ಅನುಕ್ಷಣವೂ ಕೇಳಿಕೊಳ್ಳುತ್ತಲೇ ಇರಬೇಕಾದ ಪ್ರಶ್ನೆಗಳೇನೋ? ಕಥೆ ತುಂಬಾ ಅರ್ಥಪೂರ್ಣವಾಗಿದೆ. ಖುಷಿ ಕೊಟ್ಟಿದೆ.

      ಪ್ರತಿಕ್ರಿಯೆ
      • Shivakumar mavali R M

        ತುಂಬಾ ಧನ್ಯವಾದಗಳು ಸರ್… ಖಂಡಿತ ಬೇಸರವಿಲ್ಲ . ತೇಜಸ್ವಿ ಅವರು ಎತ್ತಿದ್ದ ಪ್ರಶ್ನೆ ಅಪ್ರಜ್ಞಾಪೂರ್ವಕವಾಗಿ ನನಗೂ ಬಂದಿರುವುದಕ್ಕೆ ಖುಷಿಪಡುತ್ತೇನೆ … ನಿಮ್ಮ ಮಾತುಗಳಿಗೆ ಧನ್ಯವಾದ. ಹೊಸ ಕಾಲಕ್ಕೆ ಮುಖಾಮುಖಿಯಾಗುವ ಹೊಸ ವಸ್ತುಗಳ ಮೇಲೆ ಕಥೆ ಬರೆಯಬೇಕೆಂಬುದೇ ನನ್ನ ಹಂಬಲ ಸರ್…

        ಪ್ರತಿಕ್ರಿಯೆ
      • Shivakumar mavali R M

        ತುಂಭಾ ಧನ್ಯವಾದಗಳು ಸರ್. ನಿಮ್ಮ ಮಾತುಗಳಿಗೆ ಖುಷಿಯಾಗಿದೆ. ಹೌದು ಎಲ್ಲ ಕಾಲಕ್ಕೂ ಇಂಥ ಪ್ರಶ್ನೆಗಳನ್ನು ಎಲ್ಲರೂ ಕೇಳಿಕೊಳ್ಳುತ್ತಲೇ ಇರಬೇಕು …

        ಪ್ರತಿಕ್ರಿಯೆ
  2. ಡಿ ಎಮ್.ನದಾಫ್.

    ಅಮೇಝಿಂಗ್ ಸರ್
    ನಾವು ತಪ್ಪದೇ ಓದುತ್ತಿದ್ದ ನಾಗತಿಹಳ್ಳಿಯವರ ತಿಮಿರ,ಮಲೆನಾಡಿನ ಹುಡುಗಿ ಬಯಲು ಸೀಮಯ ಹುಡುಗ, ಕತೆಗಳನ್ನು ಪುನಃ ನೆನಪಿಗೆ ತಂದಿತು.
    ಎಂಥ ಫ್ರೆಶ್ ಐಟಂ ಕೊಟ್ಟಿದ್ದೀರಿ, #me too thank U
    ಡಿ.ಎಮ್. ನದಾಫ್
    ಅಫಜಲಪುರ.

    ಪ್ರತಿಕ್ರಿಯೆ
    • Shivakumar mavali R M

      ಧನ್ಯವಾದಗಳು ನದಾಫ್ … ನಾಗತಿಹಳ್ಳಿಯವರು ಸಣ್ಣ ಕತೆಗಳಲ್ಲಿ ನನಗೂ ಅಚ್ಚುಮೆಚ್ಚು…‌ನೀವು ಅವರ ಹೆಸರನ್ನು ಉಲ್ಲೇಖಿಸಿದ್ದು ಖುಷಿ ತಂದಿದೆ… ಹೀಗೇ ಪ್ರೋತ್ಸಾಹಿಸುತ್ತಿರಿ…ವಿಮರ್ಷಿಸುತ್ತಲೂ ಇರಿ

      ಪ್ರತಿಕ್ರಿಯೆ
    • Shivakumar mavali R M

      ಧನ್ಯವಾದಗಳು ..‌ಹೀಗೇ ಪ್ರೋತ್ಸಾಹಿಸುತ್ತಾ ಇರಿ …ವಿಮರ್ಶಿಸುತ್ತಾ ಇರಿ …

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: