ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೆಲೆಕ್ಸ್‌ – ಅಬ್ಬೂರು ಜುಗಲಬಂದಿ

ಇಬ್ಬರು ಪತ್ರಕರ್ತರ ನಡುವಿನ ಜುಗಲಬಂದಿ ಇದು.

ಕ್ರಿಸ್ಮಸ್ ನ ಹಬ್ಬದ ದಿನ ಪತ್ರಕರ್ತ, ಕವಿ ರವಿಕುಮಾರ್ ಟೆಲೆಕ್ಸ್ ಒಂದು ಪುಟ್ಟ ಬರಹವನ್ನು ಬರೆದಿದ್ದರು.

ಅದನ್ನು ಓದಿದ ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ್ ಅವರು ಗದ್ಯವನ್ನು ಪದ್ಯವನ್ನಾಗಿ ಪರಿವರ್ತಿಸಿದರು.

ಜೀಸಸ್ ತೋರಿದ ದಾರಿ

ರವಿಕುಮಾರ್‌ ಟೆಲೆಕ್ಸ್

ಹೆಗಲ ಮೇಲೆ ಮಣಭಾರದ ಶಿಲುಬೆಯನ್ನು ಹೊತ್ತು ಕಡಿದಾದ ಬೆಟ್ಟಗಳ ಹತ್ತಿ ಹೊರಟ ಜೀಸಸ್ ನ ಹಿಂದೆ ಜೆರುಸಲೆಂಗೆ ಜೆರುಸೆಲೆಮ್ಮೆ ಕಣ್ಣೀರಿಟ್ಟು ಮೆರವಣಿಗೆ ಹಿಂಬಾಲಿಸಿತ್ತು. ಗೋಲ್ಗಥದಲ್ಲಿ ಪ್ರಭುತ್ವದ ಗುಲಾಮನು ಜೀಸಸ್ ನ ಅಂಗಾಲು. ಮುಂಗೈ ಗಳಿಗೆ ಉಕ್ಕಿನ ಮೊಳೆ ಹೊಡೆಯುತ್ತಿದ್ದಾಗ ಇದನ್ನು ಸಹಿಸಲಾರದ ಜೀಸಸ್ ನ ಅನುಯಾಯಿಯೊಬ್ಬ ಹರಿತವಾದ ಕತ್ತಿಯಿಂದ ಗುಲಾಮನ ಕಿವಿಗಳನ್ನು ಕತ್ತರಿಸಿಬಿಡುತ್ತಾನೆ. ರಕ್ತ ದಳದಳನೆ ಸುರಿದು ಗುಲಾಮ ನೋವಿನಿಂದ ನರಳುವಾಗ ಜೀಸಸ್ ಗುಲಾಮನನ್ನು ಮಡಿಲಿಗೆಳೆದುಕೊಂಡು ಸಂತೈಹಿಸುತ್ತಾರೆ. ತನ್ನ ಭಕ್ತನ ಕೃತ್ಯವನ್ನು ಖಂಡಿಸುತ್ತಾರೆ. ತನ್ನ ಅನುಯಾಯಿ ಮಾಡಿದ ತಪ್ಪನ್ನು ಕ್ಷಮಿಸುವಂತೆ ಗುಲಾಮನಲ್ಲಿ ಮನವಿ ಮಾಡಿಕೊಳ್ಳುತ್ತಾರೆ.

ನನ್ನನ್ನು ಶಿಲುಬೆಗೇರಿಸುವಲ್ಲಿ ಗುಲಾಮನ ತಪ್ಪೇನಿದೆ.? ಆತ ರಾಜನ ಆಜ್ಞೆಯನ್ನು ಮಾತ್ರ ಪಾಲಿಸುತ್ತಿದ್ದಾನೆ. ಆತ ತನ್ನ ಪಾಲಿನ ಕರ್ತವ್ಯವನ್ನು ಮಾಡುತ್ತಿದ್ದಾನೆ ಅಷ್ಟೆ. ಎಂದು ಜೀಸಸ್ ಸ್ವತಃ ತಾವೇ ಗುಲಾಮನ ನೋವಿಗೆ ನೊಂದು ಕಣ್ಣೀರಿಡುತ್ತಾರೆ. ಪ್ರೀತಿಯಿಂದ ಸಂತೈಸುತ್ತಾರೆ. ನಗುನಗುತಾ ಶಿಲುಬೆಗೇರುತ್ತಾರೆ.

ಕೇಡನ್ನು ಮೆಟ್ಟಿ ನಿಲ್ಲಲು ಕರುಣೆ, ಪ್ರೀತಿ, ಕ್ಷಮೆಗಳಿಂದ ಮಾತ್ರ ಸಾಧ್ಯ ಎಂಬ ಸರ್ವಶ್ರೇಷ್ಠ ಅರಿವಿನ ಧ್ಯೋತಕ ಜೀಸಸ್.

ಕರುಣೆ, ಪ್ರೀತಿ, ಕ್ಷಮೆ ಎಲ್ಲರೆದೆಯ ಬಯಲ ಹೂಗಳಾಗಿ ಸದಾ ಅರಳಲಿ .

ಅಬ್ಬೂರು ರಾಜಶೇಖರ

ಹೆಗಲೇರಿದ ಮಣಭಾರದ ಶಿಲುಬೆ
ದುರ್ಗಮ‌ ಬೆಟ್ಟಗುಡ್ಡದ ಪಯಣ
ಜೀಸಸ್ ಬೆನ್ನಿಗೆ ಜನಸಾಗರ
ಜೆರುಸಲೆಂಗೆ ಕಣ್ಣೀರ ಸ್ನಾನ

ಗೋಲ್ಗಥ ಪ್ರಭುತ್ವದ ಗುಲಾಮ
ಕೈಕಾಲಿಗೆ ಜಡಿದ ಉಕ್ಕಿನ ಮೊಳೆ
ಕೆರಳಿಸಿತು ಜೀಸಸ್ ಅನುಯಾಯಿಯ
ಬಿತ್ತು ಗುಲಾಮನ ಕಿವಿಗಳಿಗೆ ಚೂರಿ!

ರಕ್ತದ ಮಡು; ನೋವಿನ ಆಕ್ರಂದನ
ಗುಲಾಮನ ಸಂತೈಸಿದ ಜೀಸಸ್
ಭಕ್ತನ ಖಂಡಿಸಿ ಕ್ಷಮೆ ಯಾಚಿಸಿದ!
ರಾಜಾಜ್ಞೆ ಪಾಲಿಸಿದ ಗುಲಾಮನ ತಪ್ಪೇನು?

ಗುಲಾಮನ ನೋವಿಗೆ ಮರುಗಿದ ಜೀಸಸ್
ನಗು ನಗುತಲೆ ಏರಿದ ಶಿಲುಬೆಯ
ಕರುಣೆ ಪ್ರೀತಿ ಕ್ಷಮೆ ಸಾರಿದ ಜಗಕೆ.

‍ಲೇಖಕರು Avadhi

5 January, 2021

1 Comment

  1. ಗೀತಾ ಎನ್ ಸ್ವಾಮಿ

    ಜುಗಲ್ ಬಂದಿ ಗದ್ಯ ಪದ್ಯ ಎರಡು ಆಗಿ ಚಂಪೂ ಕಾವ್ಯದಂತಿದೆ. ಒಳ್ಳೆಯ ಬರಹಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading