-ಟೀನಾ ಶಶಿಕಾಂತ್
ಕ್ರಿಸ್ಮಸ್ ಎಂದರೆ ಏನೋ ಸಡಗರ. ತುಂಬ ನಕ್ಷತ್ರಗಳು ಒಟ್ಟಿಗೇ ನಮ್ಮ ಸುತ್ತಮುತ್ತ ಮಿನುಗಿದ ಹಾಗೆ.. ಸಿಹಿ ಪರಿಮಳಗಳನ್ನು ಆಘ್ರಾಣಿಸುತ್ತ ನಾವು ಪಡೆಯುವ ಆನಂದದ ಹಾಗೆ..ಆಹ್ಲಾದಕರ ಸಂಗೀತವನ್ನು ಕೇಳುತ್ತ ಎಲ್ಲ ಮರೆತು ಮೈದೂಗಿದ ಹಾಗೆ.. ಸುಮಾರು ಹತ್ತು ವರುಷಗಳಿಂದ ನಾನು ಒಂದು ಮಧ್ಯರಾತ್ರಿಯ ಮಾಸ್ ಅನ್ನೂ ತಪ್ಪಿಸಿಕೊಂಡಿದ್ದೇ ಇಲ್ಲ. ದೇವರ ಬಗೆಗಿನ ನನ್ನ ಖಾಸಗೀ ನಂಬಿಕೆಗಳನ್ನೆಲ್ಲ ಮೀರಿ ನಿಲ್ಲುವ ರಾತ್ರಿಯದು.
ಕ್ರಿಸ್ಮಸ್ ಅಂದಾಕ್ಷಣ ನನಗೆ ನೆನಪಾಗುವದು ಸಿಸ್ಟರ್ ಅನಾ ಮಾರ್ಥಾ ಮತ್ತು ಕ್ರಿಸ್ಮಸ್ ಮರಗಳು. ಸಿಸ್ಟರ್ ಮಾರ್ಥಾ ನನ್ನ ಮದುವೆಯ ಮೂಲಕ ನನ್ನ ಸಂಬಂಧಿ – ಒಂದು ಲೆಕ್ಕದಲ್ಲಿ ನನ್ನ ಅತ್ತೆ. ಈವತ್ತಿಗೆ ನನ್ನೊಳಗೆ ಆಧ್ಯಾತ್ಮಿಕ ಯೋಚನೆಗಳ ಸುಳಿವೇನಾದರೂ(!?) ಇದ್ದರೆ ಅದರ ಹಿಂದಿನ ಮುಖ್ಯ ಪ್ರಭಾವ ಆಕೆಯದು. ಆಕೆ ತನ್ನ ಜೀವಮಾನದುದ್ದಕ್ಕೂ ತೀವ್ರಮಟ್ಟದ ಬ್ರಾಂಕೈಟಿಸ್ ಖಾಯಿಲೆಯಿಂದ ನರಳುತ್ತಲೇ ಇದ್ದರು. ಸಾಮಾನ್ಯ ಜನರು ತಡೆದುಕೊಳ್ಳಲು ಸಾಧ್ಯವಾಗದಂತಹ ದೈಹಿಕ ನೋವುಗಳನ್ನು ಆಕೆ ಪ್ರಾರ್ಥಿಸುತ್ತಲೇ ಮೌನವಾಗಿ ನುಂಗಿಬಿಡುತ್ತ ಇದ್ದರು. ಆಕೆ ಎಲ್ಲೇ ಇದ್ದರು ಪ್ರತಿವರ್ಷ ಆಕೆಯ ಕ್ರಿಸ್ಮಸ್ ಶುಭಾಶಯಪತ್ರ ನನ್ನ ಕೈಸೇರುವುದು. ತನ್ನ ಹತ್ತನೇ ತರಗತಿಯ ಶಿಕ್ಷಣ ಮುಗಿದಕೂಡಲೆ ಯಾವ ಪ್ರತಿರೋಧಗಳನ್ನೂ ಲೆಕ್ಕಿಸದೆ ಎಲ್ಲವನ್ನೂ ತ್ಯಜಿಸಿ ಆಶ್ರಮ ಸೇರಿದ ಆಕೆಯ ಬಗ್ಗೆ ನನಗೆ ಸದಾ ಕುತೂಹಲ. ಅವರಿಗೆ ನೂರೆಂಟು ಪ್ರಶ್ನೆ ಕೇಳಿ ಪಿರಿಪಿರಿ ಮಾಡುತ್ತಿದ್ದರು ಒಂದು ದಿನವೂ ಸಿಡುಕದೆ ಎಲ್ಲದಕ್ಕೂ ಉತ್ತರಿಸುವರು. ಕೆಲವೊಮ್ಮೆ ದಿನಗಟ್ಟಲೆ ಮೌನವಾಗಿಬಿಡುವರು. ಇಂಥವರಿಗೆ ಗಿಡಗಳೆಂದರೆ ವಿಚಿತ್ರವಾದ, ತೀರ ಲೌಕಿಕ ಅನ್ನಿಸಬಹುದಾದಂಥ ಮೋಹ. ಆಕೆಯ ಹಸಿರಿನ ಗೀಳು ಮಾತ್ರ ಯಾರಿಗೂ ಅರ್ಥವಾಗುತ್ತ ಇರಲಿಲ್ಲ. ಕೊಂಚ ಆರೋಗ್ಯವಾಗಿದ್ದರೂ ಆಶ್ರಮದ ಹೂದೋಟದಲ್ಲಿ ಕಾಲ ಕಳೆಯುವರು. ನನ್ನ ತೋಟದ ಗಿಡಗಳ ಬಗ್ಗೆ ಯಾವಾಗಲೂ ಮುತುವರ್ಜಿ ವಹಿಸಿ ಕೇಳುವ ಅವರು ನಾನು ಆಶ್ರಮಕ್ಕೆ ಭೇಟಿನೀಡಿದಾಗಲೆಲ್ಲ ಹೂಗಿಡವೊಂದರ ಕಟಿಂಗ್ ಅನ್ನು ನನ್ನ ತೋಟಕ್ಕಾಗಿ ಕೊಡುತ್ತ ಇದ್ದರು. “ಗಿಡಗಳ ಹತ್ತಿರ ಸೊಲ್ಪ ಸಮಯ ತೆಕ್ಕೊಂಡು ದಿನಾ ಕೂತುಕೊಂಡು ಮಾತನಾಡು. ನಿನ್ ಕಷ್ಟಸುಖ ಹೇಳ್ಕೋ. ಯು ವಿಲ್ ಆಲ್ವೇಸ್ ಹ್ಯಾವ್ ಅ ಬಂಚ್ ಆಫ್ ಫ್ರೆಂಡ್ಸ್ ಅರೌಂಡ್!” ಅನ್ನುವರು. ಆಗಾಗ, “ನಿನ್ ಹತ್ತಿರ ಒಂದು ಕ್ರಿಸ್ಮಸ್ ಮರ ಇಲ್ಲವಲ್ಲ!” ಎಂದು ಪೇಚಾಡಿಕೊಳ್ಳುವರು. ಆಗ ಮೈಸೂರ ಪುಟ್ಟ ಬಾಡಿಗೆಮನೆಯಲ್ಲಿದ್ದ ನಾನು ನಕ್ಕುಬಿಡುವೆ.
ಹಾಗೂ ಹೀಗೂ ನನ್ನ ಸ್ವಂತ ಮನೆಯಲ್ಲಿ ವಾಸ ಆರಂಭಿಸಿದಾಗ ಮೊದಲು ಅನ್ನಿಸಿದ್ದು – ಒಂದು ಚೆಂದದ ತೋಟ ಮಾಡಬೇಕು. ಹಿಂದೆ ಮನೆಯಲ್ಲಿ ಬಾಡಿಗೆಗಿದ್ದವರೋ, ಮನೆಯನ್ನು ದುರವಸ್ಥೆಯಲ್ಲಿ ಬಿಟ್ಟುಹೋಗಿದ್ದರು. ಎಲ್ಲ ಸರಿಪಡಿಸುವಲ್ಲಿ ಆರು ತಿಂಗಳುಗಳೇ ಕಳೆದವು. ಅದೇ ಹೊತ್ತಿಗೆ ಸಿಸ್ಟರ್ ಮಾರ್ಥಾರ ಆರೋಗ್ಯ ಕ್ಷೀಣಿಸಿತು. ಕೊನೆಯ ಬಾರಿ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದ ಅವರನ್ನು ನೋಡಲು ಹೋದಾಗ ಅವರ ಮುಖ ಅನಾರೋಗ್ಯದಿಂದ ಊದಿಕೊಂಡು ಆಕೆ ಚೆನ್ನಾಗಿದ್ದಾರೆಂಬ ಹುಸಿಭರವಸೆ ಹುಟ್ಟಿಸುತ್ತಿತ್ತು. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಸಿಸ್ಟರ್ ಮಾರ್ಥಾ ಹೇಳಿದರು – “ಈ ಸಾರಿ ಕ್ರಿಸ್ಮಸ್ ಕಾರ್ಡು ಕಳಿಸೋಕೆ ನಾನಿರಲ್ಲ ಬಿಡು”. ನನಗೂ ಪ್ರಾಯಶಃ ಹಾಗೇ ಅನ್ನಿಸಿತು. ಮೆತ್ತಗೆ ಅವರ ಕೈ ಮುಟ್ಟಿ, ”ಮನೇಲಿ ತೋಟ ಮಾಡ್ತಿದೀವಿ. ತುಂಬ ಜಾಗ ಇದೆ. ಎಲ್ಲ ನೆಟ್ಟಾದ ಮೇಲೆ ನೀವು ಒಂದು ಸಲ ಬಂದು ನೋಡಿ” ಎಂದೆ. ಅವರ ಕಣ್ಣು ಅರಳಿದವು. “ಹಾಗಿದ್ರೆ ಒಂದು ಕ್ರಿಸ್ಮಸ್ ಗಿಡ ನೆಟ್ಟುಬಿಡು, ಆಯ್ತಾ? ನಿಂಗೆ ಬಹಳ ಮರೆವು. ಕೋಪಿಷ್ಠ ಹುಡುಗಿ. ಆ ಮರದಿಂದಾನಾದರೂ ಕ್ರಿಸ್ಮಸ್‌ನ ಒಳ್ಳೇತನ ಮತ್ತೆ ನನ್ನ ಬುದ್ಧಿವಾದಗಳನ್ನ ನೆನಪಿಟ್ಟುಕೋತೀಯೇನೋ!” ಎಂದು ಕ್ಷೀಣವಾಗಿ ನಕ್ಕರು. ನಮ್ಮ ಕೆಟ್ಟ ಬುದ್ಧಿಗಳಿಂದಾಗಿಯಾದರು ನಾವು ಎಷ್ಟು ಜನರ ಹತ್ತಿರವಾಗುತ್ತೇವೆ, ಅಲ್ಲ?
ಆಮೇಲೆ ಕೆಲವೇ ದಿನಗಳಲ್ಲಿ ತಾನು ಭವಿಷ್ಯ ನುಡಿದ ಹಾಗೆಯೇ ಸಿಸ್ಟರ್ ಮಾರ್ಥಾ ಹೊರಟುಹೋದರು. ನನ್ನ ಕುಟುಂಬ ದುಃಖತಪ್ತವಾಗಿತ್ತು. ಎಲ್ಲಕಿಂತ ಹೆಚ್ಚಾಗಿ ಅವರಿಂದಲೇ ಬಾಲ್ಯದ ತೊದಲುಹಾಡುಗಳನ್ನು, ಗಿಡಗಳ ಬಗೆಗಿನ ಪ್ರೀತಿಯನ್ನು ಕಲಿತಿದ್ದ ನನ್ನ ಪುಟ್ಟ ಮಗಳು ಮೊಟ್ಟಮೊದಲ ಬಾರಿಗೆ ಸಾವೊಂದನ್ನು ಕಂಡಿದ್ದು ಮತ್ತು ಇನ್ನಿಲ್ಲದಂತೆ ಅತ್ತಿದ್ದನ್ನು ಮರೆಯಲಾಗುವದೇ ಇಲ್ಲ. ಭಾರತದೆಲ್ಲೆಡೆಯಿಂದ ಅವರ ಶಿಷ್ಯೆಯರು ಬಂದು ಅವರ ಮರಣಯಾತ್ರೆಗೆ ತಾವೇ ಹೆಗಲುಕೊಟ್ಟರು. ಅದೊಂದು ಅಪರೂಪದ ಸನ್ನಿವೇಶ. ಸಿಸ್ಟರ್ ಮಾರ್ಥಾ ಪ್ರತಿಯೊಬ್ಬರನ್ನೂ ತಮ್ಮದೇ ಆದ ರೀತಿಯಲ್ಲಿ ಮುಟ್ಟಿದ್ದರು. ಅವರಿಗೆ ವಿದಾಯ ಹೇಳಿ ವಾಪಾಸು ಬಂದ ಮರುದಿನವೇ ಹೋಗಿ ಒಂದು ಪುಟ್ಟ ಕ್ರಿಸ್ಮಸ್ ಗಿಡವನ್ನು ಖರೀದಿಸಿ ತಂದು ತೋಟದ ನಟ್ಟನಡುವಿನಲ್ಲಿ ನೆಟ್ಟದ್ದಾಯಿತು.
ಒಂದೆರಡು ತಿಂಗಳು ಕಳೆದು ಕ್ರಿಸ್ಮಸ್ ಹಿಂದಿನ ದಿನ ಬಂದಿತು..ತನ್ನ ಎಂದಿನ ಆಕರ್ಷಣೆಯೊಂದಿಗೆ.. ಮಾಮೂಲಿನಂತೆ ಕ್ರಿಸ್ಮಸ್ ಕಾರ್ಡುಗಳನ್ನು ಅಂಚೆಯವ ನೀಡಿಹೋದ. ಈ ಬಾರಿ ಎಲ್ಲರ ಹೆಸರಿಗೂ ಒಂದೇ ಕೈಬರಹದ ಲಕೋಟೆಗಳಿದ್ದವು. ಯಾರಿರಬಹುದೆಂದು ಬಿಚ್ಚಿನೋಡಿದರೆ ಅಲ್ಲಿ ಸಿಸ್ಟರ್ ಮಾರ್ಥಾರ ಸಹಿಯಿತ್ತು!! ತಾನು ತೆರಳುವ ಮೊದಲೇ ಸಿಸ್ಟರ್ ಮಾರ್ಥಾ ತನ್ನ ಸಹವರ್ತಿಯೊಬ್ಬರ ಕೈಯಲ್ಲಿ ನಮ್ಮೆಲ್ಲರಿಗಾಗಿ ಶುಭಾಶಯ ಪತ್ರಗಳನ್ನು ನೀಡಿ ಸರಿಯಾದ ಸಮಯಕ್ಕೆ ಅಂಚೆಗೆ ಹಾಕುವಂತೆ ತಿಳಿಸಿದ್ದರು. ಅಂದಿನ ಕ್ರಿಸ್ಮಸ್ ನಮ್ಮೆಲ್ಲರಿಗೆ ಬಹಳ ವಿಶೇಷವಾಗಿತ್ತು. ಅಂದು ಸಿಸ್ಟರ್ ಮಾರ್ಥಾ ನಮ್ಮೊಂದಿಗಿದ್ದರು.
ಅವರ ನೆನಪಿನಲ್ಲಿ ನೆಟ್ಟ ಕ್ರಿಸ್ಮಸ್ ಗಿಡ ಇವತ್ತು ದೊಡ್ಡ ಮರವಾಗಿದೆ. ಬಹಳ ವರ್ಷಗಳ ನಂತರ ಅದರಡಿಯಲ್ಲಿ ಕ್ರಿಸ್ಮಸ್ ಆಚರಿಸಲು ತಯಾರಾಗುತ್ತಿದ್ದೇವೆ. ನನ್ನ ತೋಟ ನೋಡಿಕೊಳ್ಳುವ ವೆಂಕಟಮ್ಮ ಅದರ ಬಗ್ಗೆ ವಿಶೇಷ ನಿಗಾ ವಹಿಸುತ್ತಾರೆ. ಮಕ್ಕಳು ಅದರ ನೆರಳಿನಲ್ಲಿ ಆಡಿಕೊಳ್ಳುತ್ತಾರೆ. ಆಗಾಗ ಒಂದಷ್ಟು ಪಕ್ಷಿಗಳು ಬಂದು ಅದರ ಗೆಲ್ಲುಗಳ ಸುರಕ್ಷೆಯಲ್ಲಿ ಗೂಡುಕಟ್ಟಿ ಮರಿಮಾಡಿ ಹಾರಿಯೂ ಹೋಗುತ್ತವೆ. ಕ್ರಿಸ್ಮಸ್ ಮರ ತನ್ನಪಾಡಿಗೆ ತಾನು ಆನಂದವಾಗಿ ಬೆಳೆದುಕೊಂಡಿದೆ.
ನಾನಂದುಕೊಳ್ಳುತ್ತೇನೆ, ಸಿಸ್ಟರ್ ಮಾರ್ಥಾ ಅದರ ಜತೆ ಮಾತನಾಡುತ್ತಿರಬಹುದು.
ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು.








ಪ್ರಿಯ ಟೀನಾ…
ಕಥೆ ಆಪ್ತವಾಗುತ್ತದೆ ಓದುತ್ತ ಓದುತ್ತ. ಕತೆ ಓದುತ್ತಲೇ ಗೆಳತಿಯೊಬ್ಬಳಿಗೆ ಕಾಲ್ ಮಾಡಿ ಈ ಸಲದ ಮಾಸ್ ನೈಟ್ ಗೆ ನಾನೂ ಬರ್ತೇನೆ, ಪರವಾಗಿಲ್ಲವ? ಅಂದಿದ್ದೇನೆ. ಬಾ ಅಂದಿದ್ದಾಳೆ. ಹೇಗಿರತ್ತೆ ಅಂತ ಗೊತ್ತಿಲ್ಲ, ಬರೀ ನಾನು ಚರ್ಚಿಗೆ ಹೋಗಬೇಕು ಅನ್ನೋ ನನ್ನ ಬಹುದಿನದ ಆಸೆ , ಮತ್ತೆ ಈ ನಿಮ್ಮ ಲೇಖನ ನನ್ನನ್ನ ಚರ್ಚಿಗೆ ಕರಕೊಂಡು ಹೋಗ್ತಿದಾವೆ.
ಪ್ರೀತಿಯಿಂದ,
-ಶಾಂತಲಾ ಭಂಡಿ
ಪ್ರಿಯ ಶಾಂತಲಾ..
ನಿಮ್ಮ ಹಾಗೆ ಮಕ್ಕಳಷ್ಟು ಮುಗ್ಧತೆ, ಕುತೂಹಲ, ಜೀವನಪ್ರೇಮ ಇರಿಸಿಕೊಂಡಿರುವವರು ಬಲು ಅಪರೂಪ. ಹೋಗಿಬನ್ನಿ. ಯಾವುದೋ ಬೆರಗು ನಿಮಗೂ ದಕ್ಕಬಹುದು, ನನಗೆ ಸಿಕ್ಕಿದ ಹಾಗೆ..
ಚಾಂದ್,
ಥ್ಯಾಂಕ್ಸ್!! ನೀವು ಮರದ ಬಗ್ಗೆ ಹೇಳಿದ್ದು ನಿಜ. ಮರೆಗುಳಿಯಾಗಿರುವುದೂ ಕೆಲವೊಮ್ಮೆ ಬಹಳ ಒಳ್ಳೇದು!!
ಮಾಲತಿ,
ನಿಮಗೂ ಹಬ್ಬದ ಶುಭಾಶಯಗಳು. ಥ್ಯಾಂಕ್ಸ್!
ಶ್ರೀಲತಾ,
ಓದಿದ್ದಕ್ಕೆ, ಇಲ್ಲ್ ಬರೆದಿದ್ದಕ್ಕೆ ಧನ್ಯವಾದಗಳು.
ಲಾಸ್ಟ್, ಬಟ್ ನಾಟ್ ದ ಲೀಸ್ಟ್..
ಥ್ಯಾಂಕ್ಸ್ ಅವಧಿ!! ಮೆರಿ ಕ್ರಿಸ್ಮಸ್!!
A very touching story. Thank you and wish u merry christmas.
ನಿಮ್ಮನೆ ತೋಟದಲ್ಲಿ ಸಿಸ್ಟರ್ ಮಾರ್ಥಾ ಕ್ರಿಸ್ಮಸ್ ಮರದ ರೂಪದಲ್ಲಿ ಚಿರಸ್ಥಾಯಿ.
ಮರೆಗುಳಿ ಟೀನಾರ ಬರಹ ಚೆನ್ನಾಗಿದೆ
ಹ್ಯಾಪಿ ಕ್ರಿಸ್ಮಸ್
Merry christmas Dear Tina to you and all your family members!!
as usual lovely write up!!
malathi S
nimma kathe kele thumba feel aayitu.
nice,
Teens, ಓದುತ್ತ ಹೋದಂತೆ ಕಣ್ಣು ತುಂಬಿ ಬಂತು… ನಿಮ್ಮ ಮನೆಯಂಗಳದಲ್ಲಿ ತಂಪು ಮರವಾಗಿ ನಗುತಿರುವ ಸಿಸ್ಟರ್ ಗೆ ನನ್ನ ನಮನ… ನಿಮ್ಮ ಕುಟುಂಬಕ್ಕೂ ಕ್ರಿಸ್ಮಸ್ ನ ಶುಭಾಶಯಗಳು…
ಕ್ರಿಶ್ಚಿಯನ್ ಶಾಲೆಯಲ್ಲಿ ಓದಿದ ಹುಡುಗಿ ನಾನು… ಕ್ರಿಸ್ಮಸ್ ಮಾಸ್ ಇಂದಿಗೂ ಹಸಿರು ನೆನಪು… ಮುಂದಿನ ವರ್ಷ ಪುಟ್ಟ ಮಗಳನ್ನು ಕರ್ಕೊಂಡು ಹೋಗುವ ಆಸೆ ಇದೆ… ಸೃಷ್ಟಿ ಗೆ ನಂದು ನೂರು ಮುತ್ತು ಪಾಸ್ ಮಾಡು..
ಕಣ್ಣಲ್ಲಿ ನೀರಿದೆ.. ……ನಿಮಗೂ ನಿಮ್ಮ ಪರಿವಾರದವರಿಗೂ ಕ್ರಿಸ್ಮಸ್ ಶುಭಾಶಯ.
ಮೇಡಂ, ನಿಮ್ಮ ಲೇಕನ ಮನಮಿಡಿಯುವಂತಿದೆ. ಸಿಸ್ಟರ್ ಮಾರ್ಥ ಅವರ ಬದುಕಿನ ಅನನ್ಯ ಪ್ರೀತಿ , ಹಾಗುಅವರ ಮಾನವೀಯ ಕಳಕಳಿಗೊಂದು ನಮಸ್ಕಾರ. wordsworth ಒಂದು ಕಡೆ ಹೀಗೆ ಹೇಳುತ್ತಾರೆ ” nature is greater than books ,books are ದಿ opinion ಆಫ್ others ,they are soleless ಅಂಡ್ useless . ಸಿಸ್ಟರ್ ಮಾರ್ಥ ಅವರು ಕಳವಶವಾಗುವ ಮುನ್ನವೇ ಸೂಕ್ತ ಸಮಯದಲ್ಲಿ ನಿಮಗೆ ಸಿಗುವ ಹಾಗೆ ಶುಭಾಶಯ ಪತ್ರ ಕಳಿಸುವ ವ್ಯವಸ್ತೆ ಮಾಡಿ ಕಣ್ಮುಚುವ ಅವರ ಜೀವನ ಪ್ರೀತಿ ನಿಜಕ್ಕೂ ಮನಕಲಕುವಂಥಹುದು. ಈಗ ಅವರ ಆ ನಿಮ್ಮ ಮನೆಯ ಕ್ರಿಸ್ಮಸ್ ಗಿಡ ದ ಜೊತೆ ಮಾತನಾಡುತ್ತಿರುತ್ತಾರೆ .ಉತ್ತಮ ಲೇಖನ. ನಿಮಗೆ ಅಭಿನಂದನೆಗಳು. ನಿಮಗೂ ನಿಮ್ಮ ಕುಟುಂಬಕ್ಕೂ ಹ್ಯಾಪಿ ಕ್ರಿಸ್ಮಸ್ .
ರವಿ ವರ್ಮ ಹೊಸಪೇಟೆ
ಮೇಡಂ, ನಿಮ್ಮ ಲೇಕನ ಮನಮಿಡಿಯುವಂತಿದೆ. ಸಿಸ್ಟರ್ ಮಾರ್ಥ ಅವರ ಬದುಕಿನ ಅನನ್ಯ ಪ್ರೀತಿ , ಹಾಗುಅವರ ಮಾನವೀಯ ಕಳಕಳಿಗೊಂದು ನಮಸ್ಕಾರ. wordsworth ಒಂದು ಕಡೆ ಹೀಗೆ ಹೇಳುತ್ತಾರೆ ” nature is greater than books ,books are ದಿ opinion ಆಫ್ others ,they are soleless ಅಂಡ್ useless . ಸಿಸ್ಟರ್ ಮಾರ್ಥ ಅವರು kaalavashavaguva ಮುನ್ನವೇ ಸೂಕ್ತ ಸಮಯದಲ್ಲಿ ನಿಮಗೆ ಸಿಗುವ ಹಾಗೆ ಶುಭಾಶಯ ಪತ್ರ ಕಳಿಸುವ ವ್ಯವಸ್ತೆ ಮಾಡಿ ಕಣ್ಮುಚುವ ಅವರ ಜೀವನ ಪ್ರೀತಿ ನಿಜಕ್ಕೂ ಮನಕಲಕುವಂಥಹುದು. ಈಗ ಅವರ ಆ ನಿಮ್ಮ ಮನೆಯ ಕ್ರಿಸ್ಮಸ್ ಗಿಡ ದ ಜೊತೆ ಮಾತನಾಡುತ್ತಿರುತ್ತಾರೆ .ಉತ್ತಮ ಲೇಖನ. ನಿಮಗೆ ಅಭಿನಂದನೆಗಳು. ನಿಮಗೂ ನಿಮ್ಮ ಕುಟುಂಬಕ್ಕೂ ಹ್ಯಾಪಿ ಕ್ರಿಸ್ಮಸ್ . avadhi gu oodugarigu crismas shubhashayagalu.
ರವಿ ವರ್ಮ ಹೊಸಪೇಟೆ
Sweeet Tina, tumba chennagi barediddera….Merry Christmas!
ಮನ ಮುಟ್ಟುವ ಲೇಖನ…