ಟಿ ಕೆ ತ್ಯಾಗರಾಜ್ ಬರೀತಾರೆ: ಅದೊಂದು ಅರಚು ರೋಗ..

ಟಿ  ಕೆ ತ್ಯಾಗರಾಜ್

ಸಂಗೀತ ಅನ್ನುವುದು ನಮ್ಮೊಳಗನ್ನು ತಟ್ಟಿ ಆಪ್ತ ಸಂವೇದನೆಯನ್ನು ಜಾಗೃತಗೊಳಿಸುವ ಮಹೋನ್ನತ ಕಲೆ. ಅದಕ್ಕೆ ಭಾ‍ಷೆ,ಜಾತಿ, ಧರ್ಮ,ಗಡಿ, ಲಿಂಗದ ಹಂಗಿಲ್ಲ. ನಮಗರ್ಥವಾಗದ ಭಾ‍ಷೆಯ ಸಂಗೀತ ಸುಮಧುರವಾಗಿದ್ದರೆ ಅದನ್ನು ಆಸ್ವಾದಿಸುತ್ತೇವೆ.ಅದು ಅರ್ಥವಾದರಂತೂ ಅದೇನೋ ಸಂಪತ್ತು ಸಿಕ್ಕಂತೆ ಮೈಮರೆಯುತ್ತೇವೆ, ಅದೇ ಖು‍ಷಿಯಲ್ಲಿ ಮತ್ತೆಮತ್ತೆ ಗುನುಗುತ್ತಿರುತ್ತೇವೆ.ಒಂದು ಹಾಡು, ಒಂದು ಸಂಗೀತ ನಮ್ಮಂತರಂಗದ ಕದ ತಟ್ಟುವಂತಿರಬೇಕು.ಹಾಗಿದ್ದರೆ ಮಾತ್ರ ಅದು ಯಶಸ್ಸು ಗಳಿಸಿದಂತೆ. ಕನ್ನಡದ ಯಾವುದೋ ಡಬ್ಬಾ ಚಿತ್ರದ ಯೋವುದೋ ಹಾಡು ಕೂಡಾ ನಮ್ಮನ್ನು ಕಾಡಬಹುದು, ನಮಗೆ ಪರಿಚಯವೇ ಇಲ್ಲದ ಯಾವುದೋ ವಿದೇಶಿ ಭಾಷೆಯ ಸಂಗೀತ ನಮಗೆ ಇಷ್ಟವಾಗಬಹುದು. ನನಗೆ ಸೂಫಿ ಸಂತರ ಸಮ್ಮೋಹನಗೊಳಿಸುವ ಸಂಗೀತ ಎಷ್ಟು ಇಷ್ಟವೋ ಕನ್ನಡದ ಭಾವಗೀತೆ,ಜಾನಪದ ಗೀತೆ,ವಚನ, ತತ್ವಪದ ಅಷ್ಟೇ ಇಷ್ಟ. ದೇವರು ದಿಂಡರು ಇತ್ಯಾದಿಗಳ ನಂಬಿಕೆ ನನಗಿಲ್ಲವಾದರೂ ಭೀಮಸೇನ್ ಜೋಷಿ ಹಾಡಿದ “ಭಾಗ್ಯದಾ ಲಕ್ಷ್ಮಿ ಬಾರಮ್ಮಾ” ವನ್ನೂ ಕೇಳುತ್ತಾ ಮೈಮರೆಯುತ್ತೇನೆ, ನಾನೂ ಹಾಡುತ್ತೇನೆ. ವೀರಮಣಿ ಹಾಡಿದ ಅಯ್ಯಪ್ಪ ಭಕ್ತಿಗೀತೆಗಳೂ ನನ್ನನ್ನು ಯಾವತ್ತೋ ಕಾಡಿದ್ದೂ ಇದೆ.
ಇದೆಲ್ಲ ಯಾಕೆ ಹೇಳಿದೆ ಅಂದರೆ ಒಂದೊಂದು ರೀತಿಯ ಗೀತೆಗಳಿಗೂ ಒಂದು ಶೈಲಿ ಅನ್ನುವುದಿದೆ. ತತ್ವಪದ,ವಚನ,ಜನಪದ ಗೀತೆ ಹಾಡುವುದಕ್ಕೂ ಒಂದು ರೀತಿ ಇದೆ. ಜನಪದ ಗೀತೆಗಳು ಕ್ಯಾಸೆಟ್ ಗಳಿಗಾಗಿ ಹಾಡಿರುವ ರೀತಿಯೇ ಬೇರೆ.ಈ ಮಣ್ಣಿನ ಅನಕ್ಷರಸ್ಥ ಪ್ರತಿಭೆಗಳು ಹಾಡುವ ಚಂದವೇ ಬೇರೆ.ಹಾಗೆ ತತ್ವ ಪದಗಳನ್ನು ಮೂಲ ಡಾಟಿಯಲ್ಲೇ ಕೇಳಬೇಕೆಂದರೆ ಉತ್ತರಕರ್ನಾಟಕಕ್ಕೆ ಹೋಗಿಯೇ ಕೇಳಬೇಕು.ವಚನ ಸಿರಿಗೂ ಅದರದ್ದೇ ಆದ ದಾಟಿ ಇದೆ. ಅದು ನಿಜವಾದ ಆಸ್ತಿ.

ರಘು ದೀಕ್ಷಿತ್ ಎಂಬ ಅರಚುಗಾರನೊಬ್ಬ ಶಿಶುನಾಳ ಷರೀಫರ ತತ್ವಪದಗಳನ್ನು ವಿದೇಶೀಯರಿಗೆ ಮುಟ್ಟಿಸುತ್ತೇನೆ ಎಂದು ಅವುಗಳನ್ನು ರಾಕ್ ಶೈಲಿಯಲ್ಲಿ ಹಾಡಿ ಗಬ್ಬೆಬ್ಬಿಸಿದಾಗಲೇ ಆತನನ್ನು ಮನದಲ್ಲೇ ಬೈದುಕೊಂಡಿದ್ದೆ. ಈಗ ಅದ್ಯಾರೋ ಅಮ್ರಪಾಲಿ ಎಂಬ ಹುಡುಗಿಯೊಬ್ಬಳು ಅವಳ ತಂದೆಯೊಂದಿಗೆ ಟಿ.ವಿ.ನೈನ್ ಸ್ಟುಡಿಯೋದಲ್ಲಿ ಕುಳಿತು ವಚನಗಳನ್ನು ರಾಕ್ ಶೈಲಿಯಲ್ಲಿ ಹಾಡುವುದಾಗಿ ಅರಚಿದ್ದು ನೋಡಿ ತುಂಬ ಸಿಟ್ಟು ಬಂತು. ವಚನಗಳನ್ನು ಜನಪ್ರಿಯಗೊಳಿಸುವುದಕ್ಕೆ ಈ ನಿರ್ಧಾರ ಮಾಡಿರುವುದಾಗಿಯೂ ಆಕೆ ಹೇಳಿದಳು. ವಚನ ಸಂಪತ್ತು ಅದರದೇ ಧಾಟಿಅಯ್ಲ್ಲಿ ಹಾಡಿದರೂ ಸಾಕು, ಅದರ ಪ್ರಚಾರಕ್ಕೆ ಯಾವುದೇ ಮಧ್ಯವರ್ತಿಗಳ ಅಗತ್ಯವೂ ಇಲ್ಲ. ಅವುಗಳಿಗೆ ಸ್ವಯಂಪ್ರಭೆ ಇದೆಯೇ ಹೊರತು ಅದು ಬೆಳಗುವುದಕ್ಕೆ ಇನ್ಯಾವುದೇ ಬೆಳಕಿನ ಮೂಲದ ಅಗತ್ಯವೇ ಇಲ್ಲ. ವಚನ ಈ ನೆಲದ ಸಂಪತ್ತು. ಅದು ಅರಚು ರೋಗ ಇರುವವರಿಂದ ದೂರ ಇದ್ದಷ್ಟು ಒಳಿತು.ಆ ಹುಡುಗಿಗೆ ನೋವುಂಟು ಮಾಡುವುದು ನನ್ನ ಉದ್ದೇಶವಲ್ಲ. ಅವರ ಮನೆ ತುಂಬ ಸಂಗೀತದ ವಾತಾವರಣವೇ ಇದೆಯಂತೆ. ಆದರೆ ಈ ಸತ್ವಹೀನ ಪ್ರಯತ್ನ ಕೈಬಿಟ್ಟು ವಚನಗಳನ್ನು ಅದೇ ಧಾಟಿಯಲ್ಲಿ ಹಾಡುವುದಾಗಿ ಅವರು ವಚನ ನೀಡಿದರೆ ಕನ್ನಡಿಗರಷ್ಟೇ ಅಲ್ಲ, ವಿದೇಶೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು.ಸಂಗೀತ ಅನ್ನುವುದು ಕೇವಲ ವ್ಯವಹಾರದ ಸಾಧನವಾಗಬಾರದು.

ಇದಕ್ಕೆ ಪೂರಕವಾಗಿ ಇನ್ನೊಂದು ಘಟನೆಯನ್ನೂ ಹೇಳುತ್ತೇನೆ.ಸುಮಾರು ಹದಿನೈದು ವರ್ಷಗಳ ಹಿಂದೆ ಲಂಕೇಶರ ಜತೆ ರವೀಂದ್ರ ಕಲಾಕ್ಷೇತ್ರಕ್ಕೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಆ ಕಾರ್ಯಕ್ರಮದಲ್ಲಿ ಲಂಕೇಶ್ ಮುಖ್ಯ ಅತಿಥಿ.ಕಾರ್ಯಕ್ರಮ ಶುರುವಾಗುವುದಕ್ಕೆ ಇನ್ನೂ ಸಮಯವಿತ್ತು. ಅಲ್ಲಿದ್ದ ಲಂಕೇಶರ ಅಭಿಮಾನಿಗಳು ಅವರನ್ನು ಮುತ್ತಿಕೊಂಡು ಮಾತನಾಡಿಸುತ್ತಿದ್ದಾಗ ಖ್ಯಾತ ಗಾಯಕ ಸಿ.ಅಶ್ವತ್ಥ್ ಬಂದು ಲಂಕೇಶರಿಗೆ ಷೇಕ್ ಹ್ಯಾಂಡ್ ಮಾಡಲು ಮುಂದೆ ಬಂದರೆ ಲಂಕೇಶ್ ಅವರ ಕೈ ಕೊಡವಿ ‘ಥೂ,ಥೂ’ ಅಂದುಬಿಟ್ಟರು.ನಾನೋ ಅಶ್ವತ್ಥರ ಮಹಾನ್ ಅಭಿಮಾನಿ. ಲಂಕೇಶರ ವರ್ತನೆಯಿಂದ ಶಾಕ್ ಆಗಿದ್ದೆ. ಕಾರ್ಯಕ್ರಮ ಮುಗಿದ ನಂತರ ಕಾರಿನಲ್ಲಿ ವಾಪಸಾಗುವಾಗ ಲಂಕೇಶರನ್ನು ಕೇಳಿದೆ,” ಯಾಕೆ ಸರ್, ಅಶ್ವತ್ಥರಿಗೆ ಆ ರೀತಿ ಮಾಡಿದಿರಿ?” ಅಂತ. ಅದಕ್ಕವರು, ” ಶಿಶುನಾಳ ಷರೀಫರ ಹಾಡನ್ನು ಹಾಡಿದರಷ್ಟೆ ಸಾಲದು.ಹಾಗೇ ನಡೆದುಕೊಳ್ಳುವುದೂ ಮುಖ್ಯ.ಶಿವಮೊಗ್ಗ ಸುಬ್ಬಣ್ಣ ಅವರನ್ನೇ ನೋಡು.ಶಿಶುನಾಳ ಷರೀಫರ ಹಾಡುಗಳನ್ನೂ ಹಾಡುತ್ತಾರೆ, ಆ ತತ್ವಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಅವರನ್ನು ಜಾತಿ,ಧರ್ಮ ಯಾವುದೂ ಕಾಡುವುದಿಲ್ಲ'” ಎಂದು ಹೇಳಿ ಅವರ ಮಗಳ ಅಂತರ್ಜಾತಿ ಮದುವೆಯನ್ನು ಉದಾಹರಣೆಯಾಗಿ ನೀಡಿದರು. ನನಗೂ ಸರಿ ಅನ್ನಿಸಿತು.
 

‍ಲೇಖಕರು G

June 25, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. jagadishkoppa

    ಪ್ರಿಯ ತ್ಯಾಗರಾಜ್, ಮೊನ್ನೆ ಆ ಹುಡುಗಿ ರಾಕ್ ಶೈಲಿಯಲ್ಲಿ ವಚನ ಹಾಡುವಾಗ ನನಗೂ ಸಹ ಅಸಹ್ಯ ಎನಿಸಿತು. ಈಗ ಅಂತರಂಗದ ಪಿಸುಮಾತುಗಳಿಗೆ, ಕಿವಿಕೊಡುವವರೇ ಇಲ್ಲವಾಗಿದ್ದಾರೆ. ವಚನಗಳನ್ನು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಹಿಂದೂಸ್ಥಾನಿ ಶೈಲಿಯಲ್ಲಿ ಹಾಡಿ, ಮಲ್ಲಿಕಾರ್ಜುನ್ ಮನ್ಸೂರ್, ಭೀಮಸೇನ್ ಜೋಷಿ ಮುಂತಾದವರು ಅವುಗಳನ್ನು ಉತ್ತುಂಗಕ್ಕೆ ಕೊಡೊಯ್ದಿದ್ದರು. ವಚನಗಳನ್ನು ರಾಕ್ ಶೈಲಿಯಲ್ಲಿ ಹಾಡುವುದೇ ಅಸಂಬದ್ಧವಾದುದು. ಅವುಗಳ ಅರ್ಥ,ಮತ್ತು ಆಶಯಗಳಿಗೆ ವಿರುದ್ಧವಾದುದು.
    ಜಗದೀಶ್ ಕೊಪ್ಪ, ಧಾರವಾಡ.

    ಪ್ರತಿಕ್ರಿಯೆ
  2. ಪಿಚ್ಚಳ್ಳಿಶ್ರೀನಿವಸ್

    ತ್ಯಾಗರಾಜ್ ಸಾರ್ ನಿಜವಾಗಲೂ ಕಣು ತೆರೆಸುವ ಬರಹ ದನ್ಯವಾದಗಳು ನಿಮಗೆ.ಪ್ರತಿಯೊಂದು ಸಂಗೀತ ಪ್ರಕಾರಕ್ಕೆ ಅದರದೆ ಶ್ಶೆಲಿ ಸೌಂದರ್ಯ ಇರುತ್ತದೆ ಅದು ಅರ್ತಮಾಡಿಕೊಳ್ಳಲು ಈಗ ಹಾಡುತ್ತಿರುವಯಾವ ಹಾಡುಗಾರರಿಗು ಬೆಡವಾಗಿದೆ.ಒಂದೊ,ಎರಡೊ ಸಿ.ಡಿ.ತಂದು ಸೂಪರ್ ಸಿಂಗರ್ ಗಳಾಗಿ ಮೆರೆಯಬೆಕೆಂದು ಹಂಬಲಿಸುತ್ತಾರೆ.ಬೇರೆಬೆರೆ ಕಾರಣಗಳಿಗಾಗಿ ಕೆಲವರನ್ನು ಮಾದ್ಯಮಗಳೂ ಆಕಾಶಕ್ಕೆ ಏರಿಸುತ್ತವೆ ಅದೇ ಈ ಎಲ್ಲಾ ಅವಗಡಗಳಿಗೆ ಕಾರಣ ಅಂದುಕೊಂಡಿದ್ದೆನೆ.

    ಪ್ರತಿಕ್ರಿಯೆ
  3. u s mahesh

    ಲೇಖನ ಚನ್ನಾಗಿದೆ,ಬರೆಯುತ್ತಾ .. ಇರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: