ಜೋಗಿ ಬರೆದ ಅರಣ್ಯ ಪರ್ವ : ಕಾಲಿಗೆ ಚುಚ್ಚಿದ ಮುಳ್ಳಿನಂತೆ ಒಳಗೇ ಮುರಿದ ಯೋಚನೆ

ಜೋಗಿ

ಹೊರಗಿನ ಪ್ರೇರಣೆಗಳಿಲ್ಲದೇ ನಾವು ಸ್ವಾರ್ಥಿಗಳಾಗುವುದಿಲ್ಲ. ಶ್ರೀಮಂತರಾಗಬೇಕು ಅನ್ನುವುದು ಒಂದು ಕಾಯಿಲೆ. ಪ್ರಕೃತಿಗೆ ವಿರುದ್ಧವಾಗಿ ನಾವು ಹೋಗುತ್ತಾ ಇರುತ್ತೇವೆ ಅನ್ನುವುದಕ್ಕೆ ಸಾಕ್ಷಿ. ನಾವೀಗ ಕಾಟೇಜಿನಿಂದ ಬರುವ ಹೊತ್ತಿಗೆ, ಅಂಗಳದಲ್ಲಿ ಕೂತಿದ್ದವನನ್ನು ಗಮನಿಸಿದಿರಾ?

ಗುರುಗಳು ಕೇಳಿದರು. ಅವರು ಯಾವುದನ್ನೂ ಸುಮ್ಮನೆ ಕೇಳುವುದಿಲ್ಲ ಅಂತ ಗೊತ್ತಿದ್ದ ನಾವು, ಆ ವ್ಯಕ್ತಿಯನ್ನು ಕಣ್ಮುಂದೆ ತಂದುಕೊಳ್ಳಲು ಯತ್ನಿಸಿದೆವು. ಅವರು ಯಾರನ್ನು ಸೂಚಿಸುತ್ತಿದ್ದಾರೆಂದು ಗೊತ್ತಾಗಲಿಲ್ಲ. ನಾವು ಮನಸ್ಸಿನಲ್ಲೇ ತಡಕಾಡುವುದನ್ನು ನೋಡಿದ ಗುರುಗಳು ನಗುತ್ತಾ ಹೇಳಿದರು.

ಅಲ್ಲೊಬ್ಬ ದಢೂತಿ ವ್ಯಕ್ತಿ ಕೂತಿದ್ದ ನೋಡಿ. ಸುಮಾರು ನೂರಿಪ್ಪತ್ತು ಕಿಲೋ ಇರಬಹುದು. ನಾನು ಮೊದಲು ನೋಡಿದಾಗ ಐವತ್ತೋ ಅರುವತ್ತೋ ಕೇಜಿ ತೂಗುತ್ತಿದ್ದ. ಬಿಲ್ಲಿನಂತಿದ್ದ. ಮೈಬಗ್ಗಿಸಿ ದುಡಿಯುತ್ತಿದ್ದ. ಆ ದುಡಿಮೆ ಅವನನ್ನು ಶ್ರೀಮಂತನನ್ನಾಗಿ ಮಾಡಿತು. ಮೂವತ್ತೈದನೇ ವಯಸ್ಸಿಗೇ ಅವನ ಕೈ ತುಂಬ ದುಡ್ಡು ಓಡಾಡುವುದಕ್ಕೆ ಶುರುವಾಯಿತು. ಅಷ್ಟೂ ವರ್ಷ ಕಟ್ಟಿಟ್ಟ ಆಸೆಗಳನ್ನೆಲ್ಲ ತೀರಿಸಿಕೊಳ್ಳತೊಡಗಿದ. ಮೈಮುರಿದು ದುಡಿಯುವುದಕ್ಕೆ ಆಳುಗಳನ್ನು ಇಟ್ಟುಕೊಂಡ. ತಾನು ತಿನ್ನಲು ಶುರುಮಾಡಿದ. ಹಿಂದೆಂದೂ ತಿಂದಿರಲಿಲ್ಲ, ಮುಂದೆಂದೂ ತಿನ್ನುವುದಿಲ್ಲ ಎಂಬಂತೆ ತಿಂದ. ಅದರ ಪರಿಣಾಮವಾಗಿ ಹತ್ತೇ ವರುಷಕ್ಕೆ ಹೀಗಾಗಿದ್ದಾನೆ. ಅವನು ತಿನ್ನುವುದಕ್ಕೂ ಆಳುಗಳನ್ನಿಟ್ಟುಕೊಂಡರೆ ಆರೋಗ್ಯವಾಗಿರುತ್ತಿದ್ದ.

ಗುರುಗಳು ತಮಾಷೆಯಾಗಿ ಹೇಳದೇ ಹೋದರೂ ನಮಗೆ ನಗು ಬಂತು. ತಿನ್ನುವುದಕ್ಕೂ ಆಳುಗಳನ್ನಿಟ್ಟುಕೊಳ್ಳುವ ಕಲ್ಪನೆಯೇ ತಮಾಷೆಯಾಗಿತ್ತು. ’ಸಿಂಹ ಹಾಗೇ ಮಾಡುತ್ತದೆ ಗೊತ್ತಾ?’ ಗುರುಗಳು ಕೇಳಿದರು. ತಾನು ಒಮ್ಮೆ ಬಾಯಿ ಹಾಕಿದ ಬೇಟೆಯನ್ನು ಅದು ಮತ್ತೊಮ್ಮೆ ಮುಟ್ಟುವುದಿಲ್ಲ. ಹುಲಿ ಹಾಗಲ್ಲ. ಎಲ್ಲೋ ಒಂದು ಕಡೆ ಬಚ್ಚಿಟ್ಟು ಮಾರನೇ ದಿನ ಬಂದು ತಿನ್ನುತ್ತದೆ. ನಾಳೆಗೆ ಬಚ್ಚಿಡುವ ಹುಲಿಯನ್ನು ಸರಿಯಾಗಿ ನೋಡಿ. ಅದು ಚಿರತೆಯಂತೆ ಓಡಲಾರದು. ಸಿಂಹದಂತೆ ಬೇಟೆ ಆಡಲಾರದು. ಹೊಂಚು ಹಾಕಿ ಪ್ರಾಣಿಗಳನ್ನು ಕೊಂದು ತಿನ್ನುತ್ತದೆ ಅದು.

ಶ್ರೀಮಂತರಾಗುವುದು ಎಂದರೆ ಕೂಡಿಡುವುದು. ಕೂಡಿಡುವುದು ಅಂದರೆ ನಾಳೆಯ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದು ಮತ್ತು ನಮ್ಮ ನಾಳೆಯ ಬಗ್ಗೆ ನಂಬಿಕೆ ಕಳಕೊಳ್ಳುವುದು. ನಾಳೆ ನಾನು ಸಂಪಾದಿಸಲಾರೆ, ನನ್ನ ಕೈ ಕಾಲು ಬಿದ್ದು ಹೋಗಬಹುದು, ಕಾಯಿಲೆ ಬರಬಹುದು, ನನ್ನನ್ನು ಕೆಲಸದಿಂದ ಕಿತ್ತುಹಾಕಬಹುದು, ನಾನು ದೇಶಭ್ರಷ್ಟನಾಗಬಹುದು- ಎಂದು ಭ್ರಮಿಸುವುದು. ಆ ಭ್ರಮೆಯಲ್ಲೇ ನಾಳೆಗೋಸ್ಕರ ಸಂಗ್ರಹಿಸಿಡುವುದು. ಹಾಗೆ ಸಂಗ್ರಹಿಸಿದ ಭಂಡಾರ ದೊಡ್ಡದಾಗುತ್ತಾ ಹೋದ ಹಾಗೆ, ನಮ್ಮ ದೇಹ ಕೂಡ ವಿರಮಿಸಲು ತೊಡಗುತ್ತದೆ. ಹತ್ತು ವರ್ಷ ಸಿಕ್ಕಾಪಟ್ಟೆ ದುಡಿದು, ಹತ್ತು ವರ್ಷ ಏನೂ ದುಡಿಯದೇ ತಿನ್ನುವುದು ಪಾಪ. ಹೀಗೆ ಮಾಡುತ್ತಾ ನಾವು ನಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಕ್ರಮೇಣ ಕಾಯಿಲೆಗಳ ಗೂಡಾಗುತ್ತೇವೆ. ಅವುಗಳಲ್ಲಿ ಮೊದಲ ಕಾಯಿಲೆ ಶ್ರೀಮಂತಿಕೆ. ಅದೊಂದು ವೈರಸ್ಸು. ಅದು ಯಾವ ರೋಗವನ್ನು ಬೇಕಿದ್ದರೂ ತರಬಹುದು.

ಬೆಳಗಿನ ಬಿಸಿಲು ಕಾಡಿನ ಮೇಲೆ ಬಂಗಾರದ ನೀರಿನಂತೆ ಎರಚಿಕೊಂಡಿತ್ತು. ತರಗೆಲೆಗಳು ಕೂಡ ಹೊಂಬಣ್ಣದಿಂದ ಲೇಪಿತವಾದಂತೆ ಹೊಳೆಯುತ್ತಿದ್ದವು. ಮರದ ಬೊಡ್ಡೆಗಳ ಮೇಲೆ ಬೆಳಕು ನರ್ತಿಸುತ್ತಿತ್ತು. ಹರಕು ಆಕಾಶ ದಟ್ಟ ಮರಗಳ ಸಂದಿಯಿಂದ ಆಗೀಗ ಇಣುಕುತ್ತಿತ್ತು. ಅಂಥ ಪ್ರಫುಲ್ಲ ಮುಂಜಾನೆ ನಾವು ನಡೆಯುತ್ತಾ ಹೋದೆವು.

ಸ್ವಲ್ಪ ದೂರದಲ್ಲೇ ಜೇನುಕುರುಬರ ಗುಡಿಸಲುಗಳು ಕಾಣಿಸಿದವು. ಕಂಬ ನೆಟ್ಟು ತಡಿಕೆ ಹೊದಿಸಿದ ಗುಡಿಸಲುಗಳು. ಮಾಡಿಗೆ ಈಚಲು ಮರದ ಸೋಗೆ ಹಾಸಿದ್ದರು. ಕೆಲವು ಸೋಗೆಗಳು ಇನ್ನೂ ಹಸಿರು ಕಳಕೊಂಡಿರಲಿಲ್ಲ. ಅಂಗಳದಲ್ಲಿ ಒಬ್ಬ ಕುಳಿತುಕೊಂಡು ಯಾವುದೋ ಪ್ರಾಣಿಯ ಕರುಳನ್ನು ತಿರುಚುತ್ತಾ, ಹಗ್ಗ ಮಾಡುತ್ತಿದ್ದ.

ಇವರು ಹೀಗೇ ಸಂತೋಷವಾಗಿದ್ದಾರೆ. ಇವರಿಗೆ ನಾಳೆಯ ಚಿಂತೆ ಇಲ್ಲ. ಕುರಿಯನ್ನೋ ಕಾಡುಕೋಳಿಯನ್ನೋ ಬೇಟೆ ಆಡುವ ಇವರಿಗೆ ಕೂಡಿಡುವುದು ಗೊತ್ತಿಲ್ಲ. ಪ್ರಾಣಿಗಳ ಮಾಂಸವನ್ನು ಕೂಡಿಡುವುದೂ ಸಾಧ್ಯವಿಲ್ಲ. ಹೀಗಾಗಿ ಅವರು ಪ್ರತಿದಿನವೂ ಜಿಗಿದು ಓಡುತ್ತಲೇ ಇರಬೇಕು. ಈ ಹಾಡಿಯಲ್ಲಿರುವ ಗುಡಿಸಲುಗಳನ್ನೆಲ್ಲ ಹೊಕ್ಕು ಬನ್ನಿ. ಒಬ್ಬನೇ ಒಬ್ಬ ಕೈಲಾಗದ ಮನುಷ್ಯ ಸಿಗುತ್ತಾನಾ ನೋಡಿ. ಎಪ್ಪತ್ತು ತುಂಬಿದ ಮುದುಕ ಕೂಡ, ಕಣ್ಣಿಗೆ ಕೈ ಅಡ್ಡ ಇಟ್ಟುಕೊಂಡು ಕಾಡಿಗೆ ನುಗ್ಗುತ್ತಾನೆ. ಪ್ರಾಣಿಯ ವಾಸನೆ, ಸದ್ದು, ಹೆಜ್ಜೆಗುರುತು ಅವನನ್ನು ಆಕರ್ಷಿಸುತ್ತದೆ. ಇವರಿಂದ ಕಾಡಿಗೆ ಹಾನಿಯಿಲ್ಲ. ಯಾಕೆಂದರೆ ಇವರಿಗೆ ಹೊರಗಿನ ಪ್ರೇರಣೆ ಇಲ್ಲ.

ನೀನು ಬರೆಯುವ ಸಾಹಿತ್ಯ, ನೀನು ಸೃಷ್ಚಿಸುವ ಸಂಗೀತ, ನೀನು ಕೊಡುವ ಮನರಂಜನೆ ಅವನಿಗೆ ಗೊತ್ತಿಲ್ಲ. ಅದಕ್ಕೆಲ್ಲ ಅವನಿಗೆ ಪುರುಸೊತ್ತೂ ಇಲ್ಲ. ಮೂರು ಮಂದಿಯ ಕುಟುಂಬ ಇದ್ದರೆ, ಒಂದು ಮೊಲ ಸಾಕು. ಒಂದು ಕಾಡುಕೋಳಿ ಸಾಕು. ಉಪ್ಪು ಹಾಕದೇ, ಬೇಯಿಸಿ ತಿನ್ನುತ್ತಾರೆ ಅವರು. ಯಾವಾಗ ಕೃಷಿ ಶುರುವಾಯಿತೋ ಆವತ್ತಿನಿಂದ ಕೂಡಿಡುವುದು, ಮಾರಾಟ ಮಾಡುವುದೂ ಶುರುವಾಯಿತು. ಅದು ಮತ್ತೊಂದು ಜಗತ್ತು. ನಮ್ಮ ಎಲ್ಲ ಕಾಯಿಲೆಗೂ ಸಸ್ಯಾಹಾರವೇ ಮೂಲ ಅಂತ ಹೇಳಿದರೆ ನಿಮಗೆ ಗಾಬರಿ ಆಗುತ್ತದೆ. ದುಡಿಯದೇ ತಿನ್ನುವುದು ಮೂಲ ಅನ್ನಲಿಕ್ಕಂತೂ ಅಡ್ಡಿಯಿಲ್ಲ.

ಗುರುಗಳು ಯಾವುದನ್ನು ಸಮರ್ಥಿಸಿಕೊಳ್ಳುತ್ತಾರೆ ಅನ್ನುವುದು ಗೊತ್ತಾಗದೇ ಸುಮ್ಮನಾದೆವು. ಹೊರಗಿನ ಪ್ರೇರಣೆ ಅಂತ ಹೇಳಿದ್ದು ಮನಸ್ಸಿನಲ್ಲಿ ಕೊರೆಯುತ್ತಿತ್ತು. ಹಾಗಂದರೇನು ಎಂದು ಕೇಳಬೇಕು ಅನ್ನಿಸಿತು. ನಾವು ಕೇಳುವ ಮೊದಲು ಅವರೇ ಹೇಳಿದರು.

ಕಾಲಿಗೆ ಮುಳ್ಳು ಚುಚ್ಚಿಕೊಂಡಾಗ, ಅದನ್ನು ಮತ್ತೊಂದು ಮುಳ್ಳಿನಿಂದಲೇ ತೆಗೆಯಬೇಕು. ಮನಸ್ಸಿನಲ್ಲೊಂದು ಯೋಚನೆ ಮೂಡಿದಾಗ, ಅದನ್ನು ಮತ್ತೊಂದು ಯೋಚನೆಯಿಂದಲೇ ಹೊರಹಾಕಬೇಕು. ಶೂನ್ಯ ಅನ್ನುವ ಸ್ಥಿತಿ ಇಲ್ಲ.

ನಾವು ದಿಗ್ಮೂಢರಾಗಿ ಅವರನ್ನೇ ನೋಡಿದೆವು.

‍ಲೇಖಕರು avadhi

June 25, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. prathibha nandakumar

    ಮನಸ್ಸಿನಲ್ಲೊಂದು ಯೋಚನೆ ಕೊರೆಯುತ್ತಿತ್ತು. “ಮತ್ತೊಂದು ಯೋಚನೆಯಿಂದಲೇ ಹೊರಹಾಕಬೇಕು. ಶೂನ್ಯ ಅನ್ನುವ ಸ್ಥಿತಿ ಇಲ್ಲ” thank you jogi

    ಪ್ರತಿಕ್ರಿಯೆ
  2. Sarala

    “ಅವನು ತಿನ್ನುವುದಕ್ಕೂ ಆಳುಗಳನ್ನಿಟ್ಟುಕೊಂಡರೆ ಆರೋಗ್ಯವಾಗಿರುತ್ತಿದ್ದ ” enu helali ee chakitagolisuva satyakke!

    ಪ್ರತಿಕ್ರಿಯೆ
  3. Dhruva Panduranga

    ವಾವ್! ಏನ್ ಜೋಗಿ ಸರ್ ಇದು ಹೊಸ ಪುಸ್ತಕವಾ? ೧೦೦-೧೫೦ ರೂಪಾಯಿಗೆ ಕತ್ತರಿ ಹಾಕೋಕೆ ರೆಡಿ ಆಗ್ತಿದ್ದೀರ ಅಲ್ವಾ? ನನ್ನಿಂದ ನಿಮ್ಮ ಪುಸ್ತಕ ಕೊಂಡುಕೊಳ್ಳದೆ ಇರೋದಿಕ್ಕೆ ಆಗೋದಿಲ್ಲಪ್ಪ ಆದಷ್ಟು ಬೇಗ ಪುಸ್ತಕ ತನ್ನಿ, ನಾನು ದುಡ್ಡು ಹೊಂದಿಸಿಕೊಳ್ತೇನೆ…

    ಪ್ರತಿಕ್ರಿಯೆ
  4. Murthy

    ನಮಸ್ಕಾರ,
    ನಿಮ್ಮ ಬರಹಗಳನ್ನು ನಾನು ತುಂಬಾ ಓದಿರಲಿಲ್ಲ. ನಿಮ್ಮ್ನನ್ನು suchita Film Society ನಲ್ಲಿ meet ಮತ್ತು ನಿಮ್ಮ ಮಾತು ಕೆಳಿ ನಿಮ್ಮ ಬರಹಗಳ ಅಭಿಮಾನಿ ಯಾದೆ. Ya I purchased few of your Book. Wonderful writting
    Thx

    ಪ್ರತಿಕ್ರಿಯೆ
  5. SunilHH

    ಕಾಡಿನ ಬಗ್ಗೆ ಹೊಸ ಪುಸ್ತಕ ಬರುವ ಸೂಚನೆ?

    ಪ್ರತಿಕ್ರಿಯೆ
  6. deepaG

    ಶ್ರೀಮಂತರಾಗಬೇಕು ಅನ್ನುವುದು ಒಂದು ಕಾಯಿಲೆ.. e khayile hokkavaranna sokisikondaru sonku antibudutte..gurugal pratimaatinallu aksharashah satya adagide.. mundin matigaagi kaadu kulitiddene-jogi sir thanx..

    ಪ್ರತಿಕ್ರಿಯೆ
  7. Srinivas Deshpande

    Dear Sir,
    Prague na coffee house nalli kulithu coffee saviyuttha lekhana odide, nannella aathankagaliu parihaar sikkanthaaithu. India kke maralida balika maathanaaduve
    Srinivas deshpande

    ಪ್ರತಿಕ್ರಿಯೆ
  8. ಸತೀಶ್ ನಾಯ್ಕ್

    ಬದುಕುವ ಪಾಠಗಳನ್ನ ಮೇಷ್ಟ್ರೇ ಹೇಳಿ ಕೊಡಬೇಕಿಲ್ಲ.. ಮೇಷ್ಟ್ರ ಹಾಗಿನ ಇಂಥ ಲೇಖನಗಳು ಕೂಡಾ ಕಲಿಸಬಹುದು..

    ಪ್ರತಿಕ್ರಿಯೆ
  9. Dhruva Panduranga

    ಇನ್ನೂ ಒಮ್ಮೆ ಓದಿದೆ. “ಕೂಡಿಡುವುದು ಅಂದರೆ ನಾಳೆಯ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದು ಮತ್ತು ನಮ್ಮ ನಾಳೆಯ ಬಗ್ಗೆ ನಂಬಿಕೆ ಕಳಕೊಳ್ಳುವುದು” ಜೋಗಿ ಸರ್ ಎಂಥಾ ಅದ್ಭುತ ವಾಕ್ಯ ಬರೆದಿದ್ದೀರ ಸೂಪರ್

    ಪ್ರತಿಕ್ರಿಯೆ
  10. JOGI

    ಎಲ್ಲರಿಗೂ ಥ್ಯಾಂಕ್ಸ್…
    ಗುರುಗಳ ಪರವಾಗಿಯೂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: