ಟಾಮಿ ಮತ್ತು ಇತರ ಸಂಗತಿಗಳು

ಸಂದೇಶ್ ಸಾಲ್ಯಾನ್  

ನನ್ನ ಮನೆಯ ಟಾಮಿ ಬಹಳ ಆಲಸಿ. ಸದಾ ನಿದ್ದೆ ಮಾಡುತ್ತಿರುತ್ತಾನೆ ಇಲ್ಲವೇ ಆಕಳಿಸುತ್ತಿರುತ್ತಾನೆ. ಕಟ್ಟಿ ಹಾಕಿರುವುದರಿಂದ ನಿದ್ದೆ ಮಾಡುವುದಲ್ಲದೆ ಬೇರೇನೂ ಮಾಡಲೂ ಆಗದು ಎನ್ನಿ! ಆದರೆ ಬಿಟ್ಟಿದ್ದರೂ ಅವನಿಗೆ ನಿದ್ರಿಸುವುದು ಬಹಳ ಇಷ್ಟ.

ಆದರೆ ಏನಾದರೂ ಸದ್ದಾದರೆ ಕೂಡಲೇ ಎಚ್ಚರಗೊಳ್ಳುತ್ತಾನೆ. ನಾನೇನಾದರೂ ಸನಿಹವಿದ್ದಲ್ಲಿ ಅವನಿಗೆ ಎಚ್ಚರಿಕೆ ಬಹಳ ಹೆಚ್ಚೇ ಇರುತ್ತದೆ. ತಾನು ಏನಾದರೂ ತಪ್ಪು ಮಾಡಿದ್ದಲ್ಲಿ ಏಟು ಬೀಳುವುದರಿಂದ ಅವನು ನನ್ನ ಬಗ್ಗೆ ಸದಾ ಗಮನ ಇಟ್ಟಿರುತ್ತಾನೆ!

ಅವನ ತಟ್ಟೆಯ ಅನ್ನ ತಿನ್ನಲು ಬರುವ ಆ ಉದ್ದ ಬಾಲದ ಕೆಂಬೂತದ ತಲೆಯ ‘ಕೆಕ್ಕೆಕ್ಕೆ’ ಎನ್ನುವ ಬಣ್ಣದ ಎರಡು ಮಟಪಕ್ಷಿಗಳು (rufous treepie) ಅವನನ್ನು ಸತಾಯಿಸುತ್ತವೆ. ಅವನೆಷ್ಟೇ ಗುರ್ರ್ ಅಂದರೂ, ನೆಗೆದಾಡಿದರೂ ಅವನನ್ನು ಕಟ್ಟಿ ಹಾಕಿರುವ ಸರಪಳಿ ಅವನಿಗೆ ಮಿತಿಯನ್ನು ಹೇರುತ್ತದೆ.

ಮನೆಯ ಸುತ್ತಮುತ್ತ ನೆಗೆದಾಡುವ ತರಗೆಲೆ ಹಕ್ಕಿಗಳು (ಹರಟೆಮಲ್ಲ jungle babbler) ಅವನ ತಂಟೆಗೆ ಬರುವುದು ಬಹಳ ಕಡಿಮೆ. ಅವು ಸದಾ ಕೆದಕುವ ಬಗೆಗೇ ಆಸಕ್ತಿ ಹೊಂದಿರುತ್ತವೆ. ಕೆದಕುತ್ತ ಕೆದಕುತ್ತ ಬಂದು ಸಿಟೌಟಿನಿಂದ ಕೆಳಗೆ ಬಿದ್ದಿರುವ ಅನ್ನವನ್ನು ತಿಂದಾವಷ್ಟೆ ಅವು. ಹತ್ತಿರದ ಮರದಲ್ಲಿ ಕೂರುವ ಜೋಡಿ ಉದ್ದ ಬಾಲದ ಕಾಜಾಣಗಳು (greater racket tailed drongo) ಈ ಕಡೆ ಸುಳಿಯುವುದೇ ಇಲ್ಲ.

ಈ ದಿನ ಮಳೆ ಸ್ವಲ್ಪ ಕಡಿಮೆ. ಟಾಮಿ ಮಲಗುವ ಸಿಟೌಟಿನ ಬದಿಗೆ ಬಿಸಿಲು ಬೀಳುತ್ತದೆ. ಟಾಮಿಯ ಬಲಬದಿಯಲ್ಲಿ ಚೇರ್ ಹಾಕಿಕೊಂಡು ಟಾಮಿಯನ್ನು ನೋಡುತ್ತಿದ್ದೆ.‌ ನಾನು ಅಲ್ಲಿ ಕುಳಿತರೆ ಅವನು ನೆಟ್ಟಗೆ ನಿಂತು ಚೇರ್ ಮೇಲೆ ಮುಂಗಾಲುಗಳನ್ನಿಡುತ್ತಾನೆ. ಈಗಲೂ ಹಾಗೆ ಮಾಡಿ ಈಗ ನಿದ್ದೆ ಮಾಡುತ್ತಿದ್ದಾನೆ.

ಆಗ ಅಲ್ಲಿಂದ ಸುಮಾರು ಹದಿನೈದು ಹೆಜ್ಜೆಗಳಷ್ಟು ದೂರದಲ್ಲಿ ನವಿಲಮ್ಮ ಬಿಸಿಲಿಗೆ ಮೈ ಹರವಿಕೊಂಡಿದ್ದು ಕಾಣಿಸಿತು. ಥೇಟ್ ಕೋಳಿಯಂತೆ. ಹಾಯಾಗಿ ಬಿದ್ದುಕೊಂಡು ತನ್ನ ಕೊಕ್ಕಿನಿಂದ ಗರಿಗಳನ್ನು ಸ್ವಚ್ಛಗೊಳಿಸುತ್ತಿದ್ದಳು. ಇಂದು ಒಂಟಿಯಾಗಿ ಬಂದಿದ್ದಾಳೆ ಬಹುಶಃ. ಇತ್ತೀಚಿನ ಕೆಲವು ದಿನ ಒಂದೋ ಎರಡೋ ಗಂಡು ನವಿಲು ಮತ್ತು ಕೆಲವು ಹೆಣ್ಣು ನವಿಲುಗಳು ಮನೆಯ ಸುತ್ತಮುತ್ತ ಓಡಾಡುತ್ತಿದ್ದವು. ಅವುಗಳನ್ನು ನಾವು ಗಮನಿಸಿದರೂ ಗಮನಿಸದಂತೆ ಇರುತ್ತೇವೆ. ಹಾಗೂ ಮನೆಯಲ್ಲಿ ಹೆಚ್ಚಿನ ಸಮಯ ಟಾಮಿ ಮಾತ್ರ ಇರುತ್ತಾನೆ. ಹಾಗಾಗಿ ಬಹುಶಃ ಅವಕ್ಕೆ ನಮ್ಮ ಬಗ್ಗೆ ಭಯ ಇರುವಂತೆ ತೋರುವುದಿಲ್ಲ.

ಟಾಮಿಗೆ ಊಟಕ್ಕೆ ಏನಾದರೂ ಸಾರು ಬೇಕು. ಅನ್ನಕ್ಕೆ ಬೆರೆಸಿರಬೇಕು. ಅದರಲ್ಲೂ ಸ್ವಲ್ಪ ಅನ್ನ ಉಳಿಯುತ್ತದೆ. ಏನೋ ಮೊದಲು ಪೂರ್ತಿ ತಿನ್ನುತ್ತಿದ್ದ. ಈಗ ಪ್ರತಿ ಸಂಜೆ ಬಿಟ್ಟಾಗ ಹುಲ್ಲು ತಿನ್ನುವುದನ್ನು ಹಲವು ಸಲ ಕಂಡಿದ್ದೇನೆ. ಹೊಟ್ಟೆನೋವು ಇದ್ದಲ್ಲಿ ನಾಯಿ, ಬೆಕ್ಕುಗಳು ಹುಲ್ಲು ತಿನ್ನುತ್ತವಂತೆ. ಹೀಗೆ ತಿನ್ನದೆ ಉಳಿದ ಅನ್ನವನ್ನು ಏನು ಮಾಡುವುದು? ಅದನ್ನು ತಿನ್ನಲು ಮಟಪಕ್ಷಿಗಳು ಬಂದರೆ ಅವನಿಗೆ ಕೋಪ ಬರುತ್ತದೆ. ತಾನೂ ತಿನ್ನಲಾರ, ಅವಕ್ಕೂ ತಿನ್ನಲು ಬಿಡಲಾರ.

ಅದಕ್ಕೆ ಯಾವಾಗೆಲ್ಲ ಹೀಗೆ ಅನ್ನ ಉಳಿಯುತ್ತದೋ ಆಗೆಲ್ಲ ಅಮ್ಮ ಆ ಅನ್ನವನ್ನು ಮನೆಯ ಹಿಂಭಾಗ ಅಗರ್ ಎಂದು ಕರೆಯಲ್ಪಡುವ, ಸಾದಾ ಕಲ್ಲುಗಳಿಂದ ಕಟ್ಟಿರುವ ಕಾಂಪೌಂಡ್ ಪಕ್ಕ ಚೆಲ್ಲಿಬರುತ್ತಾರೆ. ಹಕ್ಕಿಗಳು ತಿನ್ನಲಿ ಎಂದು.

ಹೀಗೆ ಚೆಲ್ಲಿದ ಅನ್ನವನ್ನು ನವಿಲುಗಳು ತಿನ್ನುತ್ತಿದ್ದವು. ಹಾಗೇ ಅಭ್ಯಾಸವಾಗಿ ಮನೆಯ ಸುತ್ತಮುತ್ತ ಸುಳಿದಾಡಿ ಹೋಗುವುದು ಸಾಮಾನ್ಯವಾಗಿತ್ತು. ಮನೆಯಲ್ಲಿ ಅವಕ್ಕೆ ಯಾರಿಂದಲೂ ಅಪಾಯ ಇರದಿದ್ದರಿಂದ, ಟಾಮಿ ಸದಾ ಬಂಧನದಲ್ಲಿರುತ್ತಿದ್ದರಿಂದ ಅವು ಭಯಪಡುವ ಸನ್ನಿವೇಶ ಕಡಿಮೆ ಇತ್ತು.

ಟಾಮಿಯೂ ನವಿಲುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎನಿಸುತ್ತದೆ. ಅವಂತೂ ಇವನ ತಂಟೆಗೆ ಬರುವುದು ದೂರದ ಮಾತು. ಇನ್ನು ಗಾಂಧಾರಿ ಮೆಣಸಿನ ಗಿಡದಲ್ಲಿ ಅಡಗಿ ಕುಳಿತ ಮಿಡತೆಗಳನ್ನು ಯಾವಾಗಲಾದರೂ ಒಮ್ಮೆ ಬಂದು ಹಿಡಿಯುವ ಪಿಕಳಾರ ಹಕ್ಕಿ, ತಿಂಗಳ ಹಿಂದೆ ಒಂಟಿಯಾಗಿ ಬಂದು ಮುದ್ದಾಗಿ ಕ್ಯಾಟ್ ವಾಕ್ ಮಾಡಿ ಪುರ್ರನೆ ಹಾರಿ ಹೋಗುತ್ತಿದ್ದ-ಈಗ ಜಂಟಿಯಾಗಿರುವ ಚೋರೆ ಹಕ್ಕಿ (spotted dove) ಇವೆಲ್ಲ ಟಾಮಿಗೆ ನಗಣ್ಯ.

ಈ ನವಿಲಮ್ಮ ಅದೇ ಅನ್ನ ಹಾಕುವ ಜಾಗದಲ್ಲಿ ಇದ್ದಳು ಸ್ವಲ್ಪ ಹೊತ್ತಿನ ಹಿಂದೆ. ಆಮೇಲೆ ನಿಧಾನವಾಗಿ ಮನೆಯ ಹಿಂಭಾಗದಲ್ಲಿ ಸಾಗಿ ಈಗ ಮನೆಯ ಎಡಭಾಗದಲ್ಲಿ ಮಲಗಿ ಕೊಂಡಿದ್ದಾಳೆ. ಸ್ವಲ್ಪ ಹೊತ್ತು ಕಳೆಯಿತು. ನಿಧಾನವಾಗಿ ಅಲ್ಲಿಂದ ಎದ್ದು ಅಡಿಕೆ ಗಿಡಗಳ ನಡುವೆ ಸಾಗಿ ಏನನ್ನೋ ಹುಡುಕುತ್ತ, ತಿನ್ನುತ್ತ, ಮಧ್ಯೆ ಮಧ್ಯೆ ಕತ್ತೆತ್ತಿ ನನ್ನ ಕಡೆ ನೋಡುತ್ತ ಮನೆಯ ಮುಂಭಾಗದಲ್ಲಿ ಸಾಗಿದಳು. ಟಾಮಿಯತ್ತ ನೋಡಿದೆ. ಕಣ್ಣು ತೆರೆದಿದ್ದ. ಮಲಗಿಕೊಂಡೇ ನವಿಲತ್ತ ನೋಡುತ್ತಿದ್ದ. ಸದ್ದಿಲ್ಲ! ನವಿಲಮ್ಮ ಮತ್ತೆ ಅನ್ನ ಹಾಕುವ ಜಾಗದ ಕಡೆ ಸಾಗಿದಳು. ಮನೆಗೆ ಒಂದು ಸುತ್ತು ಪೂರ್ಣ!

ಇತ್ತೀಚೆಗೆ ಒಂದು ಕೇರೆ ಹಾವು ಅಂಗಳಕ್ಕೆ ಬಂದಿತ್ತು. ಟಾಮಿಗೆ ಇದು ಹೊಸ ಜೀವಿ. ಗುರ್ರ್ ಎನ್ನುತ್ತಿದ್ದ. ಕೋತಿಗಳು ಬಂದರೆ ಕ್ಯೆಕ್ಯೆ, ಕುಂಯ್ ಕಂಯ್ ಅಂತೆಲ್ಲ ವಿಚಿತ್ರ ಧ್ವನಿ ಹೊರಡಿಸುತ್ತಾನೆ. ಬೇರೆ ಯಾವುದಾದರೂ ನಾಯಿಗಳು ಬಂದರೆ ಗುರ್ರ್ ಗುರ್ರ್ ಅನ್ನುತ್ತ, ತಿಪ್ಪರಲಾಗ ಹಾಕುತ್ತಾನೆ.

ಅವನು ಈಗ ದೊಡ್ಡವನಾಗುತ್ತಿದ್ದಾನೆ. ಸಂಜೆ ಬಿಟ್ಟ ಕೂಡಲೇ ಅಲ್ಲಲ್ಲಿ ಕಾಲೆತ್ತಿ ಮೂತ್ರ ಮಾಡಿ ತನ್ನ ಸೀಮೆಯ ಗಡಿಗಳನ್ನು ಪುನರ್ಘೋಷಿಸಿಕೊಳ್ಳುತ್ತಾನೆ. ಮೊನ್ನೆ ಒಮ್ಮೆ ಮನೆಯ ಬಳಿ ಬಂದ ನಾಯಿಯೊಂದನ್ನು ಅಟ್ಟಿಸಿಕೊಂಡು ಹೋಗಿ ಕಚ್ಚಿ ಬಂದಿದ್ದ. ನಾಯಿಗಳು ತಮ್ಮ ಸೀಮೆಯೊಳಗೆ ಬೇರೆ ಪ್ರಾಣಿಗಳು, ಮನುಷ್ಯರು, (ಕೆಲವೊಮ್ಮೆ ವಾಹನಗಳೂ ಸಹ) ಪ್ರವೇಶಿಸುವುದನ್ನು ಸಹಿಸುವುದಿಲ್ಲ. 

ಟಾಮಿಗೆ ತಿಂಡಿ ಎಂದರೆ ಬಹಳ ಇಷ್ಟ. ಅವನನ್ನು ಬಿಟ್ಟಿರಬೇಕು. ತಿಂಡಿ ಹಿಡಿದುಕೊಂಡು ಅವನ ಬಳಿ ಹೋಗಬೇಕು. ಅವನು ಕುದುರೆಯಂತೆ ನೆಗೆದಾಡುತ್ತಾನೆ. ತಕತಕ ಕುಣಿಯುತ್ತಾನೆ. ನೆಟ್ಟಗೆ ಹಿಂಗಾಲುಗಳ ಮೇಲೆ ನಿಂತುಕೊಳ್ಳುತ್ತಾನೆ. ಅವನಿಗೆ ಕೊಡದೇ ನಾವೇ ಮನೆಯೊಳಗೆ ತಿನ್ನುತ್ತ ಕುಳಿತರೆ ಹೊರಗೆ ಕುಳಿತು ಗುರ್ರ್ ಅನ್ನುತ್ತಾನೆ. ನನಗೂ ಕೊಡಿ ಎನ್ನುವುದಕ್ಕೆ ಅವನ ಬಳಿ ಒಂದು ವಿಧದ ಆಗ್ರಹ ಪೂರ್ವಕ ಬೊಗಳುವಿಕೆ ಇದೆ!

ಅದನ್ನು ಪ್ರಯೋಗಿಸುತ್ತಾನೆ.

ಮತ್ತೂ ನಾವು ಕೊಡದೇ ಇದ್ದರೆ ಬಾಗಿಲಲ್ಲಿ ಮುಂಗಾಲುಗಳ ಮೇಲೆ ಮುಖವಿಟ್ಟು ಕಾಯುತ್ತಾನೆ. ತಾನು ಮಲಗುವ ಗೋಣಿಚೀಲವನ್ನು ಕಾಲುಗಳಿಂದ ಎಳೆದು, ಬಾಯಿಯಿಂದ ಕಚ್ಚಿ ಬೇಕಾದ ಜಾಗಕ್ಕೆ ಸಾಗಿಸಿ ಅಲ್ಲಿ ಬಿದ್ದುಕೊಳ್ಳಲು ಅವನಿಗೆ ತಿಳಿದಿದೆ. ಬೆತ್ತ ಬಳಿ ಬಂದಾಗ ಬಾಲ ಮಡಚಿ, ಮುಂಗಾಲುಗಳನ್ನು ಮುಂಚಾಚಿ ತಲೆ ಬಗ್ಗಿಸಿ ಶರಣಾಗತಿ ಸೂಚಿಸಲೂ ತಿಳಿದಿದೆ! ಬಹಳ ಕಿಲಾಡಿ ಅವನು! 

ಅವನು ಮರಿಯಾಗಿದ್ದಾಗ ಮನೆಯಲ್ಲಿ ಮರಿಬೆಕ್ಕೊಂದು ಇತ್ತು. ಚಿಕ್ಕ ಚಿಕ್ಕ ಕಾಲುಗಳು, ದುಂಡು ಮುಖ, ಚುರುಕು ಕಣ್ಣು. ಬಣ್ಣ ಆಕರ್ಷಕ ಏನಲ್ಲ. ಆದರೂ ಸಹಜ ಸುಂದರಿ. ಅದನ್ನು ನಾನೇ ಮನೆಗೆ ತಂದಿದ್ದೆ. ಅಳಿಲಿನ ಮರಿಯಂತಿದ್ದ ಅದು ಮೊದಲೆರಡು ದಿನಗಳಲ್ಲಿ ಸೋಫಾದ ಅಡಿಯಲ್ಲಿ ಅವಿತುಕೊಳ್ಳುತ್ತಿತ್ತು.

ಎಲ್ಲಿ ಓಡಲೂ ಅದಕ್ಕೆ ತಿಳಿಯುತ್ತಿರಲಿಲ್ಲ. ಸೋಫಾದ ಬಳಿ ಬೌಲ್ ಒಂದರಲ್ಲಿ ಹಾಲು ಸುರಿದು ಇಡುತ್ತಿದ್ದೆ. ಬೆಕ್ಕಿನ ಸ್ವರದಲ್ಲಿ ಕೂಗುತ್ತಿದ್ದೆ. ಅದು ಮೆಲ್ಲನೆ ಹಾಲು ಕುಡಿದು ಮತ್ತೆ ಅಡಗಿಕೊಳ್ಳುತ್ತಿತ್ತು. ಹೀಗೆ ಹಾಲು ಕುಡಿಯಲು ಹೊರಬಂದ ಮರಿಯ ತಲೆಯನ್ನು ಸೋಫಾದಲ್ಲಿ ಕುಳಿತುಕೊಂಡು ಮೆಲ್ಲನೆ ನೇವರಿಸಿದೆ.

ಅದರ ಬೆನ್ನಿನ ಮೇಲೆ ಅಂಗೈ ಆವರಿಸಿ ಹಿಡಿದೆ. ಮೇಲೆತ್ತಿ ತೊಡೆಯ ಮೇಲೆ ಮಲಗಿಸಿ ಸುರಕ್ಷಿತ ಭಾವ ಮೂಡಿಸಲು ಪ್ರಯತ್ನ ಮಾಡಿದೆ. (ಚುರುಕು ಬೆಕ್ಕಿನ ಮರಿಯನ್ನು ಇದ್ದಕ್ಕಿದ್ದಂತೆ ಮೇಲೆತ್ತಬಾರದು. ಅದು ಭಯದಿಂದ ಮುದ್ದೆಯಾಗಿ ಕೈಕಾಲುಗಳ ಪಂಜಗಳನ್ನು ಅರಳಿಸಿ ನಮ್ಮ ಕೈಗಳನ್ನು ಹಿಡಿದುಕೊಳ್ಳುತ್ತದೆ. ನಮ್ಮ ಕೈಗೆ ಗಾಯವಾಗಬಹುದು. ಬೆಕ್ಕು ಕಚ್ಚಲೂಬಹುದು. ಅದರ ಬೆನ್ನಿನ ಮೇಲೆ ನಮ್ಮ ಅಂಗೈ ಇರಿಸಿ, ತೋರುಬೆರಳು ಅದರ ಕುತ್ತಿಗೆಯನ್ನು ಬಳಸಿಕೊಂಡು, ಹೆಬ್ಬೆರಳು ಅದರ ಹೊಟ್ಟೆಯನ್ನು ಎಡಭಾಗದಿಂದ ಬಳಸಿಕೊಂಡು, ಉಳಿದ ಮೂರು ಬೆರಳುಗಳು ಅದರ ಹೊಟ್ಟೆಯ ಬಲಬದಿಯಿಂದ ಆವರಿಸಿಕೊಳ್ಳಬೇಕು. ಆಗ ಅದು ಓಡಲು ಹವಣಿಸುತ್ತದೆ. ಅದಕ್ಕೆ ಅವಕಾಶ ಕೊಡಬಾರದು. ಹಾಗೆಂದು ತಕ್ಷಣ ಮೇಲೆತ್ತಲೂ ಬಾರದು. ಅದರ ಪರಚಾಟ ನೆಲದ ಮೇಲೆ ಆಗುತ್ತದೆ. ಆ ಬಳಿಕ ಅದರ ತಲೆಯನ್ನು ಎಡಗೈಯಿಂದ ನೇವರಿಸಬೇಕು. ಇದೇ ಕ್ರಮ ಬಳಸಿ ವಿಶ್ವಾಸ ಮೂಡಿಸಿ, ಇಡೀ ದೇಹವನ್ನು ನೇವರಿಸುವಲ್ಲಿ ಯಶಸ್ಸು ಕಾಣಬೇಕು. ಆಮೇಲೆ ಎತ್ತಿಕೊಳ್ಳಬೇಕು. ಅವಸರ ಮಾಡಿದಲ್ಲಿ ಬೆಕ್ಕು ಸದಾ ಕಾಲಕ್ಕೂ ನಮ್ಮ ಬಗ್ಗೆ ಭಯ ಹೊಂದಬಹುದು.) ಕ್ರಮೇಣ ಅದು ನನ್ನ ಕೈಯಲ್ಲಿರುವಾಗ ಪ್ರತಿರೋಧ ತೋರದೆ ಸುಮ್ಮನಿದ್ದು ನನ್ನ ಮುಖವನ್ನು ನೋಡುತ್ತಿತ್ತು.  

ಅಂದಿನಿಂದ ಅದು ನನ್ನ ಕೈಯಲ್ಲಿ ಧೈರ್ಯವಾಗಿ ಇರುತ್ತಿತ್ತು. ಕರೆದರೆ ಓಡಿ ಬರುತ್ತಿತ್ತು. ತೊಡೆಯ ಮೇಲೆ ಮಲಗುತ್ತಿತ್ತು. ಖುಷಿಯಿಂದ ಅದು ತನ್ನ ಮುದ್ದಾದ ಪಂಜಗಳನ್ನು ಅಗಲಿಸಿ ಭಯಂಕರ ಉಗುರುಗಳನ್ನು ಹೈಡ್ರಾಲಿಕ್ ಯಂತ್ರದಂತೆ ಉದ್ದ ಬಿಡುತ್ತಿತ್ತು!

ಮರಿ ಟಾಮಿ ತಕತಕ ಕುಣಿಯುತ್ತ ಬರುವಾಗ ನಾನು ಬೆಕ್ಕಿನ ಮರಿಯ ಇಡೀ ದೇಹವನ್ನು ನನ್ನೆರಡೂ ಕೈಗಳಿಂದ ಮುಚ್ಚಿ ಅದಕ್ಕೆ ‘ನಾನಿದ್ದೇನೆ’ ಎಂಬ ಭಾವ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದೆ. ಬೆಕ್ಕಿನ ಮರಿ ಭಯಗೊಂಡರೂ ಮರುಕ್ಷಣ ಸುಮ್ಮನೆ ಕುಳಿತುಕೊಳ್ಳುತ್ತಿತ್ತು.

ಹೀಗೇ ಬೆಳೆದು ಟಾಮಿಯೂ ಬೆಕ್ಕೂ ಬಹಳ ಹತ್ತಿರವಾದವು. ಸದಾ ಅವರೆಡರ ಆಟ. ಆದರೆ ಒಂದು ದಿನ ಬೆಕ್ಕು ಕಣ್ಮರೆಯಾಯಿತು. ಟಾಮಿ ಅದಕ್ಕಾಗಿ ಹುಡುಕಿರಬೇಕು. ಆದರೇನು? ಬೆಕ್ಕು ಏನಾಯಿತೆಂಬುದು ಯಾರಿಗೂ ಗೊತ್ತಿಲ್ಲ. ಮನೆಯ ಸುತ್ತಮುತ್ತ ಮುಂಗುಸಿಗಳು ಓಡಾಡುತ್ತಿದ್ದುದನ್ನು ನಾನು ಕಂಡಿದ್ದೆ. ಹೆಬ್ಬಾವುಗಳೂ ಇರಬೇಕು ಪೊದೆಗಳಲ್ಲಿ. ಚಿಕ್ಕ ಗಾತ್ರದ ಕುತೂಹಲಿ ಬೆಕ್ಕು ಯಾವುದೋ ಪ್ರಾಣಿಗೆ ಆಹಾರವಾಗಿರಬೇಕು. ಪ್ರಾಣಿಗಳ ಹೊಂಚು ಹಾಗೆಲ್ಲ ಸುಲಭವಾಗಿ ವಿಫಲವಾಗುವುದಿಲ್ಲ.

ಮತ್ತೊಂದು ಬೆಕ್ಕನ್ನು ತರಲಾಯಿತು. ಅದು ಸ್ವಲ್ಪ ಬೆಳೆದಿತ್ತು. ಆದರೆ ಸಾಧುವಾಗಿತ್ತು. ಸಾಮಾನ್ಯವಾಗಿ ದೊಡ್ಡ ಬೆಕ್ಕುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದು ಬಹಳ ಕಷ್ಟ. ಸಾಗಿಸಿದರೂ ಹೊಸ ಮನೆ ಸೇರಿದ ಕೂಡಲೇ ಅವು ಅಲ್ಲಿಂದ ಪರಾರಿಯಾಗುತ್ತವೆ.

ಎಷ್ಟೋ ಬಾರಿ ಈ ವಿಧದ ಪ್ರಯತ್ನಗಳು ವ್ಯರ್ಥ ಕೆಲಸ ಎನಿಸುತ್ತವೆ. ಮರಿಯಾಗಿದ್ದಾಗಲೇ ಬೆಕ್ಕುಗಳು ಪಳಗಿಸಲು ಯೋಗ್ಯ. ಆದರೆ ಈ ಬೆಕ್ಕು ಅಷ್ಟೇನೂ ರಂಪ ಮಾಡುವಷ್ಟು ದೊಡ್ಡದಾಗಿರಲಿಲ್ಲ. ಸಾಧುವೂ ಆಗಿದ್ದರಿಂದ ಮನೆಗೆ ಒಗ್ಗಿಕೊಂಡಿತು. ಆದರೆ ಅದಕ್ಕೆ ಅನ್ನಕ್ಕಿಂತ ಸೇಮೆ (ಸೇವ್) ಎಂಬ ತಿಂಡಿ ಬಹಳ ಪ್ರಿಯವಾಗಿತ್ತು. ಬರೇ ಅದನ್ನೇ ತಿಂದರೆ ಬೆಕ್ಕು ಬೆಳವಣಿಗೆ ಕಾಣುವುದೇ?

ಬೆಕ್ಕುಗಳು ಮರಿಯಾಗಿದ್ದಾಗ ಅವಕ್ಕೆ ನಾವು ಯಾವ ಆಹಾರ ನೀಡುತ್ತೇವೋ ಅದಕ್ಕೇ ಅವು ಒಗ್ಗಿಕೊಳ್ಳುತ್ತವೆ. ಸರಳವಾದ ಅನ್ನ, ಹಾಲೋ, ಅಥವಾ ಮೀನು ಮಾಂಸವೋ ನಾವು ಆಗಲೇ ನಿರ್ಧರಿಸಬೇಕು. ನಾಯಿಗಳಿಗೂ ಇದೇ ಅನ್ವಯವಾಗುತ್ತದೆ. ಮಸಾಲೆಯುಕ್ತ ಆಹಾರ ಹೇಗೆ ಮನುಷ್ಯನ ದೇಹಕ್ಕೆ ಅಷ್ಟು ಉತ್ತಮವಲ್ಲವೋ ನಾಯಿಗಳ ದೇಹಕ್ಕೂ ಒಳ್ಳೆಯದಲ್ಲವಂತೆ. ಸಾಕುವವರಿಗೂ ಅಷ್ಟೆ. ಸರಳ ಆಹಾರ ಕ್ರಮವಾದರೆ ನಾವು ತಿನ್ನುವ ಆಹಾರವನ್ನೇ ಅವಕ್ಕೆ ನೀಡಬಹುದು. ಪ್ರತಿದಿನ ಮೀನು ಮಾಂಸ ಬೇಕೆಂದರೆ ಹಳ್ಳಿಗಳಲ್ಲಿ ಅದು ಕಷ್ಟಸಾಧ್ಯ. (ವಿಶೇಷ ತಳಿಯ ನಾಯಿಗಳನ್ನು ಹೊರತುಪಡಿಸಿ). 

ಹೀಗೆ ತಂದ ಬೆಕ್ಕು ಏನು ತಿಂದಿತೋ ಬಿಟ್ಟಿತೋ, ಅಂತು ಆಟವಾಡುತ್ತ ಇರುತ್ತಿತ್ತು. ಹಲ್ಲಿಗಳಿಗೆ ಭಯ ಹುಟ್ಟಿಸಿತ್ತು. (ಬೆಕ್ಕುಗಳಿದ್ದರೆ ಹಲ್ಲಿಗಳ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ.) ಆದರೆ ಟಾಮಿಯ ಬಳಿ ಹೋಗಲು ಹೆದರುತ್ತಿತ್ತು. ಟಾಮಿ ಮಾತ್ರ ತನ್ನ ಹಳೆ ಗೆಳತಿಯಂತೆ ಇದರ ಜತೆ ಆಡಲು ಬಯಸುತ್ತಿತ್ತು. ಇದು ಅದೇ ಬೆಕ್ಕೇ? ತನ್ನೊಂದಿಗೆ ಯಾಕೆ ಆಡುತ್ತಿಲ್ಲ ಎಂದೆಲ್ಲ ಟಾಮಿ ಯೋಚಿಸಿರಬಹುದು.

ಅವನ ಮುಖದಲ್ಲಿ ಈ ಬಗೆಯ ಆಲೋಚನೆಯ ಛಾಯೆಯಂತೂ ಇದ್ದೇ ಇತ್ತು. ಬೆಕ್ಕು ಟಾಮಿಯ ಬಳಿ ಸುಳಿದಾಡುತ್ತಾದರೂ ಮೊದಲಿನ ಬೆಕ್ಕಿನಂತೆ ಆಡುತ್ತಿರಲಿಲ್ಲ. ಬಹುಶಃ ಅದು ಮರಿಯಿದ್ದಾಗ ನಾಯಿಗಳಿಂದ ಭಯಕ್ಕೊಳಪಟ್ಟಿರಬೇಕು. ಆದರೆ ಟಾಮಿ ಅದರ ಸಂಗಕ್ಕೆ ಹಾತೊರೆಯುತ್ತಿತ್ತು. ಒಂದು ದಿನ ಈ ಬೆಕ್ಕೂ ನಾಪತ್ತೆಯಾಯಿತು. ಈಗ ಟಾಮಿಗೆ ಜತೆಗಾರರಿಲ್ಲ. ನಿದ್ರೆಯೇ ಮಿತ್ರ!

ಹಾಗೆಂದು ಟಾಮಿಯನ್ನು ಸ್ವತಂತ್ರವಾಗಿ ಬಿಟ್ಟು ಬಿಡುವುದು ಅಪಾಯ. ಹಾಗೆ ನಾಯಿಗಳನ್ನು ಬಿಟ್ಟು ಬಿಟ್ಟರೆ ಅವು ಊರು ಸುತ್ತುತ್ತವೆ.‌ ಪೊದೆ, ಕಾಡುಗಳಿರುವುದರಿಂದ ಹೆಬ್ಬಾವಿಗೆ ಆಹಾರವಾಗಲೂಬಹುದು. ಬೇರೆ ದೊಡ್ಡ ನಾಯಿಗಳಿಂದ ಕಚ್ಚಿಸಿಕೊಳ್ಳಲೂಬಹುದು. ಮನೆ ಮಂದಿ ಎಲ್ಲಾದರೂ ಹೊರಟರೆ ಅವರನ್ನೇ ಹಿಂಬಾಲಿಸಿ ಹೋಗಬಹುದು. ನಾಪತ್ತೆಯಾಗಲೂಬಹುದು. ತಕ್ಕಮಟ್ಟಿನ ಶಿಸ್ತು ನಾಯಿಗಳಿಗೆ ಆವಶ್ಯಕ.

ಟಾಮಿಗೆ ಆ ಓರ್ವ ಹೆಂಗಸನ್ನು ಕಂಡರಾಗದು. ಬಿಟ್ಟರೆ ಸಿಗಿದು ಹಾಕುತ್ತಾನೇನೊ ಎನ್ನುವಂತಿರುತ್ತದೆ ಅವನ ಆರ್ಭಟ. ಹಾಗಾಗಿ ಅವನಿಗೆ ಬಂಧನ ಅಗತ್ಯವೇ. ಕೆಲವು ನಾಯಿಗಳಿಗೆ ಮಕ್ಕಳನ್ನು ಕಂಡರೆ ಆಗುವುದಿಲ್ಲ. ಕೀಟಲೆ ಮಾಡುತ್ತಾರೆಂದೋ ಏನೋ, ನನ್ನ ಬಳಿ ಬರಬೇಡ ಎಂಬ ಧಾಟಿಯಲ್ಲಿ ಗುರ್ರ್ ಎನ್ನುತ್ತವೆ.

ಹಾಗಾಗಿ ಆ ರೀತಿಯ ರಿಸ್ಕ್ ತೆಗೆದುಕೊಳ್ಳುವುದು ಸರಿಯಲ್ಲವಾದ್ದರಿಂದ ಟಾಮಿಗೆ ಸಂಜೆ ಮತ್ತು ರಾತ್ರಿ ಮಾತ್ರವೇ ಬಿಡುಗಡೆ ನೀಡಲಾಗುತ್ತದೆ. ಆದರೂ ಹೆಗ್ಗಣಗಳು ರಾತ್ರಿ ಅಲ್ಲಲ್ಲಿ ಸುರಂಗ ಕೊರೆಯುವುದನ್ನು ಅವನಿಂದ ನಿಯಂತ್ರಿಸಲಾಗಿಲ್ಲ. ಏಕೆಂದರೆ ಅವನು ನಿದ್ರಿಸುತ್ತಿರುತ್ತಾನಲ್ಲ?!

‍ಲೇಖಕರು Avadhi

September 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಎಲ್ಲ ನಮ್ಮ ಸೋನಿಯ ವಿವರಗಳಂತೆ. ಒಂದೇ ವ್ಯತ್ಯಾಸ. ನಮ್ಮ ಸೋನಿ ಒಳ್ಳೆಯ ವಾಚ್ ಡಾಗ್. ರಾತ್ರಿಯೆಲ್ಲಾ ನಿದ್ರಿಸದೆ ಮನೆ ಕಾಯುತ್ತಿರುತ್ತಾನೆ. ಬೆಳಗಾಗಿ ನಾವು ಎದ್ದ ಬಳಿಕ, ಅಣ್ಣ ಹೊರಗಿನಿಂದ ಒಳಬಂದ ಬಳಿಕವೇ ಅವನ ನಿದ್ದೆ. ಬಣ್ಣದಲ್ಲಿ ಹೆಚ್ಚು ಬಿಳಿ.. ಇನ್ನೊಂದು ವ್ಯತ್ಯಾಸವೆಂದರೆ ಬೆಕ್ಕುಗಳನ್ನು ಕಂಡರಾಗದಂತೆ ಓಡಿಸುತ್ತಾನೆ..
    ಟಾಮಿಯ ವಿವರ , ನಿಮ್ಮ ಪಕ್ಷಿಲೋಕ ಖುಶಿ ಕೊಟ್ಟಿತು.

    ಪ್ರತಿಕ್ರಿಯೆ
  2. Vidya Gadagkar

    Such a simple and beautiful article. Good observation of the behavior of animals. Enjoyed reading it.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: