ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜ್ಯೋತಿ 'ಎಡಿಟೋರಿಯಲ್'

ಜ್ಯೋತಿ ಅನಂತಸುಬ್ಬರಾವ್ 
೮೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಸಮ್ಮೇಳನಾಧ್ಯಕ್ಷರಾದ ಚಂಪಾ ರಾಜಕಾರಣದ ಬಗ್ಗೆ ಮಾತನಾಡಿದರೆಂದು ಕೂಗಾಡುವವರಿಗೆ ಒಂದು ಸ್ಪಷ್ಟನೆ.
ಅವರು ಸರಿಯಾದ ವಿಚಾರವನ್ನೇ ಹೇಳಿದ್ದಾರೆ. ಸಮಾಜದಲ್ಲಿ ಜಾತಿ-ಕೋಮುಗಳ ಬೆಂಕಿ ಹಚ್ಚುವವರು ಹೆಚ್ಚಾಗಿರುವಾಗ ಆ ವಿನಾಶಕಾರಕ ಕಿಡಿಗಳನ್ನು ನಂದಿಸುವುದು ಸಾಹಿತಿಗಳ, ವಿದ್ಯಾವಂತರ, ಶಾಂತಿಪ್ರಿಯರ, ಎಲ್ಲಾ ಪ್ರಜ್ಞಾವಂತರ ಕೆಲಸವಾಗಬೇಕು. ನಾಡನ್ನು ಕಟ್ಟಬೇಕಾದರೆ, ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದರೆ, ನಮ್ಮ ಸೌಹಾರ್ದ ಪರಂಪರೆಯುಳ್ಳ ಸಮಾಜವನ್ನು ಉಳಿಸಿಕೊಳ್ಳಲೇಬೇಕು; ಜಾತ್ಯಾತೀತ ಮನಸ್ಸುಗಳ ನಿರ್ಮಾಣದಿಂದ ಇದು ಸಾಧ್ಯ.
ಇದಕ್ಕಾಗಿ ಜಾತ್ಯಾತೀತತೆಯನ್ನು ಆಧರಿಸಿರುವ ಪಕ್ಷಗಳು ಅಧಿಕಾರಕ್ಕೆ ಬರಬೇಕು. ಆಗ ಹೊಟ್ಟೆ, ಬಟ್ಟೆ, ಆರೋಗ್ಯ, ಶಿಕ್ಷಣ, ನೀರು, ಸೂರಿನ ಕಡೆ ಗಮನ ನೀಡಬಹುದು.
ಸಾಹಿತ್ಯ ಸಮ್ಮೇಳನವೆಂದರೆ ಕೇವಲ ಅಂದ-ಚಂದಗಳನ್ನು ವರ್ಣಿಸಿಕೊಳ್ಳುವ ಕಾವ್ಯಗೋಷ್ಠಿಗಳಲ್ಲ, ಜನರ ಬಾಳಿಗೆ ಸಂಬಂಧವಿರದ ಒಣಹರಟೆಗಳೂ ಅಲ್ಲ. ಪಕ್ಷ ರಾಜಕಾರಣವಲ್ಲದಿದ್ದರೂ ಜನರ ಬದುಕಿನ ಮೇಲೆ ಪ್ರಭಾವ ಬೀರುವ ಎಲ್ಲಾ ಅಂಶಗಳನ್ನೂ ಒಳಗೊಳ್ಳುವ ಚರ್ಚೆ, ಪ್ರಶ್ನೆ, ಚಿಂತನೆಗಳಿಗೆಡೆ ಮಾಡಿಕೊಡಬೇಕು.
ನಾಡೆಂದರೆ ಕೇವಲ ಭೌಗೋಲಿಕ ಪ್ರದೇಶವಲ್ಲ, ಅದರೊಳಗೆ ಜೀವಿಸುವ ಜನರ ಬದುಕಿನ ಪ್ರಶ್ನೆಗಳನ್ನೊಳಗೊಂಡಿರುತ್ತದೆ. ಭಾಷೆ ಉಳಿಯುವುದು ಮತ್ತು ಸಮೃದ್ಧವಾಗುವುದು ಆಯಾ ಭಾಷಿಕರ ಬಾಳು ಹಸನಾದಾಗಲೇ. ಸಾಹಿತ್ಯವೆಂದರೆ ಕೇವಲ ಅಕ್ಷರವಲ್ಲ, ಕಟ್ಟಕಡೆಯ ಮನುಷ್ಯನ ಬದುಕಿನ ಅಕ್ಷರ ರೂಪವೂ ಹೌದು.
ಆದ್ದರಿಂದ ಜಾತ್ಯಾತೀತ/ ಧರ್ಮನಿರಪೇಕ್ಷಿತ ನೆಲದಲ್ಲಿ ಮಾತ್ರ ಜನರ ಜೀವನಮಟ್ಟ ಸುಧಾರಿಸಬಲ್ಲದು, ಸಾಹಿತ್ಯ ಸಮೃದ್ಧವಾಗಬಲ್ಲದು. ಚಂಪಾ ಅವರ ಮಾತುಗಳು ಅತ್ಯಂತ ಪ್ರಸ್ತುತ. ಅವುಗಳ ಅರ್ಥೈಸುವಿಕೆಯಲ್ಲಿ ಕೊಳಕು ರಾಜಕೀಯ ಬೇಡ.

‍ಲೇಖಕರು avadhi

27 November, 2017

7 Comments

  1. No name

    ಕೊಳಕು ಅರ್ಥೈಸುವವರ ಮಾತಿನಲ್ಲಲ್ಲ. ಉದ್ಘೋಷಿಸುವವರ ಮನಸ್ಸಿನಲ್ಲಿ. ಸಿಕ್ಕಿದ ಯಾವುದೇ ವೇದಿಕೆಯನ್ನು ತಮ್ಮ ಇಷ್ಟದ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಕೊಳಕು ಜನರಲ್ಲಿ ಮತ್ತು ಅದನ್ನು ಸಮರ್ತಿಸುವ ಹೀನ ಪ್ರವರ್ತಿಯವರಲ್ಲಿ.

  2. Sudha ChidanandGowd

    ಸಾಹಿತಿಗಳು ರಾಜಕೀಯ ಮಾತನಾಡಬಾರದು ಎಂದು ಫರ್ಮಾನು ಹೊರಡಿಸುವುದೇ ಒಂದು ರಾಜಕೀಯ ಹೇಳಿಕೆ. ಜನಮಾನಸದಿಂದ ದೂರ ಉಳಿಯುವ ಸಾಹಿತ್ಯ ದಂತ ಗೋಪುರದ ಮೇಲಿಟ್ಟು ಚಂದ ನೋಡಲಷ್ಟೇ ಲಾಯಕ್ಕು. ಜೀವನದ ಆಗುಹೋಗುಗಳಿಗೆ ಸ್ಪಂದಿಸುವ ಲೇಖಕರು ಸಮಯ ಬಂದಾಗ ಪ್ರಭುತ್ವಕ್ಕೆ ಸರಿಯಾಗಿಯೇ ಚುರುಕು ಮುಟ್ಟಿಸಿದ್ದಾರೆ. ಅದರಲ್ಲಿ ಚಂಪಾಸರ್ ಸದಾ ಮುಂದು. ಅವರ ಹೇಳಿಕೆ ಸಹಜವಾಗಿಯೇ ಕೆಲವರು ಕೆರಳುವಂತೆ ಮಾಡಿರುವುದರಲ್ಲೇನೂ ಆಶ್ಚರ್ಯವಿಲ್ಲ.ಸಕಾಲಿಕ ಹೇಳಿಕೆ ಅವರದು.

  3. D S PRAKASH

    ಮೈಸೂರಿನಲ್ಲಿ ನಡೆದ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ ಚಂ ಪಾ ರವರು, ಆ ಸ್ಥಾನದ ಘನತೆಯನ್ನು ಅರಿಯದೆ ರಾಜಕಾರಣದ ಬಗ್ಗೆ ಮಾತನ್ನಾಡಿದ್ದಲ್ಲದೆ ಅದನ್ನು ಸಮರ್ಥಿಸಿಕೊಂಡಿದ್ದಾರೆ.
    ಅವರ ಈ ನಡೆ ಕನ್ನಡ ಸಾಹಿತ್ಯ ಕ್ಕೆ ಹಾಗೂ ಸಾಹಿತ್ಯ ಪರಿಷತ್ ಗೆ ಮಾಡಿದ ದೊಡ್ಡ ಅವಮಾನ ಎನ್ನದೇ ವಿಧಿಯಿಲ್ಲ.
    ಅವರಿಗೆ ಈ ರಾಜಕೀಯ ಮಾಡಲು ಬೇರೆಯದೇ ಹಲವಾರು ವೇದಿಕೆಗಳಿದ್ದವು. ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಇರುವಾಗ ಈ ವೇದಿಕೆಯನ್ನು ರಾಜಕೀಯ ವೇದಿಕೆಯಾಗಿ ಉಪಯೋಗಿಸಿಕೊಂಡಿದ್ದು ಅದೆಷ್ಟು ಸರಿ ? ಅವರು ಯಾವ ಆಮಿಷಕ್ಕಾಗಿ ಈ ಸಾಹಿತ್ಯ ಸಮ್ಮೇಳನದಲ್ಲಿ ಈ ಹೇಳಿಕೆ ನೀಡಿದರು ?
    ಕನ್ನಡಿಗರ ಶಾಂತ ಮನಸ್ಥಿತಿಯನ್ನು ಅವರು ತಮ್ಮ ಈ ಹೇಳಿಕೆಯಿಂದ ರಾಡಿಯೆಬ್ಬಿಸಿದ್ದಾರೆ.
    ಕನ್ನಡಿಗರು ಬುದ್ಧಿವಂತರು, ಈ ತರಹ ತಿಕ್ಕಲು ಹೇಳಿಕೆಗಳನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಿಂದ ಆಚೆಹಾಕುತ್ತಾರೆ.
    ಕನ್ನಡ ಸಮ್ಮೇಳನದಲ್ಲಿ ಅಧ್ಯಕರು ಮಾಡಿದ ರಾಜಕೀಯ ಪ್ರೇರಿತ ಇಂತಹ ಭಾಷಣ ಮಾಡಬಾರದಾಗಿತ್ತು ಎಂಬುದು ಕನ್ನಡಿಗರ ಅಭಿಪ್ರಾಯ.
    ಡಿ ಎಸ್ ಪ್ರಕಾಶ್

  4. Kiran

    ಮೊದಲಿಗೆ ಈ ಚಂಪಾ ಅಂಬೋ ಸಾಹಿತಿ, ಸಾಹಿತಿಗಳ ಮಧ್ಯೆ ಫೇಮಸ್ಸೇ ಹೊರತು ಜನಸಾಮಾನ್ಯರು ಈ ಮನುಷ್ಯನ ಸಾಹಿತ್ಯವನ್ನು ಎಷ್ಟು ಜನ ಓದಿದ್ದಾರೆ?
    ಅದಿರಲಿ ಎಲ್ಲಿ ಅವಕಾಶ, ಜಾಗ ಸಿಕ್ಕರೂ ಮರಿ ಥೇಟ್ ಮರಿ ಕಾಂಗ್ರೆಸ್ ಪುಡಾರಿಯಂತೆ ವರ್ತಿಸುವ ಈ ಅಸಾಮಿಗೆ ಒಂದು ಪ್ರಜ್ಞಾವಂತ ಮನಸು ಗೌರವ ಕೊಡಲು ಹೇಗೆ ಸಾಧ್ಯ?
    ಇನ್ನು ಜಾತ್ಯತೀತ ಎಂಬ ಕಿತ್ತೋದ ಪದದ ಬಗೆಗೆ ಮಾತಾಡಬೇಕೆಂದರೆ, ಈ ಜಾತ್ಯತೀತ ಎಂದು ಕರೆದುಕೊಳ್ಳುವ ಚಟ, ಹುಚ್ಚು ಇರುವುದು ನಾವು ಗಮನಿಸಿದರೆ ಹಿಂದೂ ಧರ್ಮಿಯರಲ್ಲಿ ಮಾತ್ರ! ಇದು ಒಂದು ಯುಟೋಪಿಯನ್ ಕಲ್ಪನೆ ಮಾತ್ರ, ಇದಕ್ಕೆ ಪ್ರಾಕ್ಟಿಕಲ್ ಜಗತ್ತಿನಲ್ಲಿ ಯಾವುದೇ ಬೆಲೆ, ನೆಲೆ ಇಲ್ಲ, ಒಬ್ಬ ಕ್ರಿಶ್ಚಿಯನ್ ಅಥವಾ ಮುಸ್ಲಿಂ ತನ್ನ ಧರ್ಮದ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೆ ಹೇಳಿಕೊಳ್ಳುತ್ತಾನೆ, ಆದರೆ ಕೆಲವು ಮುಂದುವರೆದಿದ್ದೇವೆ ಎಂದು ಭ್ರಮೆಯಲ್ಲಿರುವ ಹಿಂದುಗಳಿಗೆ ಈ ಜಾತ್ಯತೀತ ಎಂದು ಕರೆದುಕೊಂಡು ಏನೋ ಸಾಧಿಸಿದೆ ಅನ್ನುವ ಸಂಭ್ರಮ!
    ಸ್ವಲ್ಪ ಯೋಚನೆ ಮಾಡಿ, ಈ ಜಾತ್ಯಾತೀತ ಮನಸ್ಸು ಅಂದರೆ ಏನು? ಹಿಂದೂ ದ್ವೇಷವೇ? ಸದ್ಯದ ಪರಿಸ್ಥಿತಿಯಲ್ಲಿ ಇದೆ ಅದರ ಅರ್ಥ!
    ಜಾತ್ಯಾತೀತತೆಯನ್ನು ಆಧರಿಸಿರುವ ಪಕ್ಷಗಳು ಎಂದರೆ ಏನು? ಇಂದಿನ ಸಾಮಾಜಿಕ, ರಾಜಕೀಯ ಸನ್ನಿವೇಶದಲ್ಲಿ ಈ ಐಡಿಯಾ ನೇ ಒಂದು ಪರಮ ಹಾಸ್ಯಾಸ್ಪದ ಅನಿಸುವುದಿಲ್ಲವೇ? ಇಂದು ಯಾವ ಪಕ್ಷ ಶೇಕಡಾ ೧ರಷ್ಟು ಜಾತ್ಯತೀತವಾಗಿವೆ? ಜಾತ್ಯತೀತ ಜನತಾ ಪಕ್ಷದ ಗೌಡರು ಉಸಿರಾಡುವುದೇ ಜಾತಿ ಲೆಕ್ಕಾಚಾರವನ್ನು! ಇನ್ನು ಕಾಂಗ್ರೆಸ್ ಬಿಡಿ ಅವರಿಗೆ ಜಾತ್ಯತೀತ ಇರಲಿ ಯಾವುದೇ ಒಂದು ಸಿದ್ದಾಂತವೇ ಇಲ್ಲ, ಅವರಿಗೆ ಗಾಂಧಿಗಿರಿ ಮತ್ತು ಅಧಿಕಾರದ ಹತ್ತಿರ ಕರೆದುಕೊಂಡು ಹೋಗುವ ಯಾವುದೇ ಸೈತಾನನನ್ನು ಪೂಜಿಸುತ್ತಾರೆ!
    ಮೊದಲಿಗೆ ಈ ಜಾತ್ಯತೀತ ಅನ್ನುವ ಜನರಿಗೆ ಬೇಕಾಗಿರುವುದು ಒಂದು: ಅವರು ಬೇಗ ಗುಣವಾಗಲಿ, ಬುದ್ದಿ ಬರಲಿ ಎಂಬ ಹಾರೈಕೆ. ಆದರೆ ಅವರು ಯಾವುದೇ ಒಂದು ಗುರಿಯನ್ನಿಟ್ಟುಕೊಂಡು ಇದನ್ನು ಹೇಳಿದರೆ ಅವರಾಗಲೇ ಬುದ್ದಿವಂತರಾಗಿದ್ದರೆ!

  5. D S PRAKASH

    ಜ್ಯೋತಿ ‘ ಎಡಿಟೋರಿಯಲ್ ‘ ಬಗ್ಗೆ.
    ಸಾಹಿತಿಗಳ ಬೆಂಬಲಕ್ಕೆ ನಿಲ್ಲುವ ಭರದಲ್ಲಿ , 83 ನೇ ಕನ್ನಡ ಸಾಹಿತ್ಯ ಸಮ್ಮೇಳಲನದ ಅಧ್ಯಕ್ಷರಾದ ಶ್ರೀಯುತ ಚಂ ಪಾ ರವರ ಅಸಾಂದರ್ಭಿಕ, ರಾಜಕೀಯ ಹೇಳಿಕೆಯನ್ನೂ ಬೆಂಬಲಿಸುವ ಹಂತಕ್ಕೆ ನಿಂತಿದ್ದು ಸಖೇದಾಶ್ಚರ್ಯ ವನ್ನುಂಟು ಮಾಡಿತು.
    ಒಂದು ಪತ್ರಿಕೆಯಾಗಿ ನಿಷ್ಪಕ್ಷಪಾತ ನಿಲು ವನ್ನು ಹೊಂದಿರಬೇಕಾದ್ದು ಅವಶ್ಯ. ಅದು ಯಾರೊಬ್ಬರ ಅಥವಾ ಯಾವುದೇ ಪಕ್ಷದ ಮುಖವಾಣಿಯಾಗ ಬಾರದು.
    ಇದು ಯಾರದೇ ಒಬ್ಬರ ಅನಿಸಿಕೆಯಾಗಿದ್ದರೆ ಪರ್ವಾಗಿರಲಿಲ್ಲ, ಆದರೆ ‘ E D I T O R I A L’ ನಲ್ಲಿ ಬಂದಿದ್ದು ನನ್ನ ಆಶ್ಚರ್ಯಕ್ಕೆ ಕಾರಣ.
    ಡಿ ಎಸ್ ಪ್ರಕಾಶ್

  6. D S PRAKASH

    ಕಿರಣ್ ರವರೆ ನಿಮ್ಮ ಅನಿಸಿಕೆ ಖಂಡಿತಾ ನಿಜ.

  7. ಗಿರೀಶ್ ಭಟ್

    ಒಬ್ಬರು ಸಮ್ಮೇಳನಾಧ್ಯಕ್ಷ ಹುದ್ದೆಯಂತಹ ಸಾಹಿತ್ಯ ಘನತೆಯ ಪೀಠವನ್ನು ಅಲಂಕರಿಸಿ ಚಿಲ್ಲರೆ ರಾಜಕಾರಣಿಯಂತೆ ಚುನಾವಣಾ ಪ್ರಚಾರ ಭಾಷಣ ಮಾಡಿದರು, ಮತ್ತೊಬ್ಬರು ವೃತ್ತಿಪರ ರಾಜಕಾರಣಿಗಳು ಕೊನೆಯಲ್ಲಿ ಅದು ಸರಿಯಲ್ಲ ಅಂದರು. ಅಧ್ಯಕ್ಷರನ್ನು ಸಮರ್ಥಿಸಿ ಒಂದಷ್ಟು ಜನ, ವಿರೋಧವನ್ನು ಸಮರ್ಥಿಸಿ ಇನ್ನೊಂದಷ್ಟು ಜನ ಬೀದಿ ಜಗಳಕ್ಕೆ ತೋಳೇರಿಸಿ ನಿಂತರು; ಕೊನೆಯಲ್ಲಿ ಫಲಶ್ರುತಿ ನಿಜವಾದ ಸಾಹಿತ್ಯಾಭಿಮಾನಿಗಳ, ಸಾಹಿತ್ಯದ ಮರ್ಯಾದೆ ಕಳೆದು ಹೋಯಿತು. ಇರಲಿ, ಮರ್ಯಾದೆ ಇದ್ದವರದ್ದು ಮಾತ್ರ ಹೋಗುತ್ತದೆ ಎಂಬುದು ಸಮಾಧಾನಕರ ಸಂಗತಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading