ಜೋಗಿ ಹೊಸ ಪುಸ್ತಕ ‘ನಿತ್ಯೋಪನಿಷತ್ತು’

ಜೋಗಿಯವರ ಹೊಸ ಕೃತಿ ‘ನಿತ್ಯೋಪನಿಷತ್ತು’ ಇದೇ ೩೦ರಂದು ಗಾಂಧಿ ಭವನದಲ್ಲಿ ಬಿಡುಗಡೆಯಾಗುತ್ತಿದೆ 

ಸಪ್ನಾ ಪ್ರಕಾಶನ ಪ್ರಕಟಿಸಿರುವ ಈ ಕೃತಿಗೆ ಪತ್ರಕರ್ತ ಮಹಾಬಲ ಸೀತಾಲಭಾವಿ ಬರೆದ ಮುನ್ನುಡಿ ಇಲ್ಲಿದೆ- 

ಮಹಾಬಲ ಸೀತಾಳಭಾವಿ

ಉಪನಿಷತ್ ಅಂದರೆ ಹತ್ತಿರದಲ್ಲಿ ಕುಳಿತುಕೊಳ್ಳುವುದು. ಅಥವಾ ಯಾವುದು ನಮ್ಮನ್ನು ಹತ್ತಿರ ಕರೆದುಕೊಂಡು ಹೋಗಿ ಕುಳ್ಳಿರಿಸಿಕೊಳ್ಳುತ್ತದೆಯೋ ಅದು ಉಪನಿಷತ್ತು.

ಯಾವುದರ ಹತ್ತಿರ? ದೇವರ ಹತ್ತಿರ? ಮೋಕ್ಷದ ಹತ್ತಿರ? ಬ್ರಹ್ಮಜ್ಞಾನದ ಹತ್ತಿರ? ಯಶಸ್ಸಿನ ಹತ್ತಿರ? ಬದುಕಿನ ಹತ್ತಿರ? ಅಥವಾ ಒಳ್ಳೆಯ ಸಾವಿನ ಹತ್ತಿರ? ನಮ್ಮ ಊಹೆಗೆ ಬಿಟ್ಟದ್ದು.

ಹಿಂದಿನ ಕಾಲದಲ್ಲಿ ಇಂತಹ ವೇದ, ಉಪನಿಷತ್ತುಗಳನ್ನೆಲ್ಲ ಅಧ್ಯಯನ ಮಾಡಿ ಒಳ್ಳೆಯ ಬ್ರಹ್ಮಚಾರಿಯಾಗಲಿ ಎಂದೇ ಹುಡುಗರಿಗೆ ಉಪನಯನ ಮಾಡುತ್ತಿದ್ದರು. ಈಗಲೂ ಮಾಡುತ್ತಾರೆ, ಜನಿವಾರ ಹಾಕುವ ಕಾರಣಕ್ಕೆ. ಆದರೆ ಯಾರೂ ಆಮೇಲೆ ವೇದವನ್ನಾಗಲೀ, ಉಪನಿಷತ್ತನ್ನಾಗಲೀ ಓದುವ ಸಾಹಸಕ್ಕೆ ಹೋಗುವುದಿಲ್ಲ. ಏಕೆಂದರೆ ಅವು ಹಳತಾಗಿವೆ. ಪುಸ್ತಕಗಳು ಜೀರ್ಣವಾಗಿವೆ. ಕೊಡವಿದರೆ ಅಲರ್ಜಿಯಾಗುತ್ತದೆ. ಅವುಗಳನ್ನು ಓದಿದರೆ ಕೆಲಸ ಯಾರು ಕೊಡುತ್ತಾರೆ? ಜೋಗಿಯವರು ಬರೆದ ನಿತ್ಯೋಪನಿಷತ್ತು ಹೀಗೆ ಉಪನಯನ ಮಾಡಿಸಿಕೊಳ್ಳದಿದ್ದರೂ, ಮೂರೆಳೆಯ ಜನಿವಾರ ಹೊಟ್ಟೆಯ ಮೇಲೆ ಬೀಳದಿದ್ದರೂ ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಓದಬಹುದಾದ ಮತ್ತು ಓದಲೇಬೇಕಾದ ಆಧುನಿಕ ಉಪನಿಷತ್ತು. ಇದು ನಮ್ಮನ್ನು ದೇವರ ಬಳಿಗಲ್ಲ, ಸುಂದರ ಬದುಕಿನ ಬಳಿಗೆ ಕೈಹಿಡಿದು ನಡೆಸಿಕೊಂಡು ಹೋಗುತ್ತದೆ.

ಯೂಟ್ಯೂಬ್ ತೆರೆದರೆ ವ್ಯಕ್ತಿತ್ವ ವಿಕಸನದ ಪಾಠ ಮಾಡುವ ಲಕ್ಷಾಂತರ ಜನರು ಸಿಗುತ್ತಾರೆ. ಸನ್ಯಾಸಿಗಳಿಂದ ಹಿಡಿದು ಕಾರ್ಪೊರೇಟ್ ಮ್ಯಾನೇಜ್‌ಮೆಂಟ್ ಗುರುಗಳವರೆಗೆ ಪ್ರತಿಯೊಬ್ಬರಿಗೂ ಇಂದು ಪರ್ಸನಾಲಿಟಿ ಡೆವಲಪ್‌ಮೆಂಟ್ ಹೇಳಿಕೊಡುವುದೇ ಅನುದಿನದ ಉದ್ಯೋಗ. ಅವರೆಲ್ಲರೂ ಜೋಳಿಗೆಯಲ್ಲಿ ಒಂದಷ್ಟು ಕತೆಗಳನ್ನಿಟ್ಟುಕೊಂಡಿದ್ದಾರೆ. ಅವು ರಾಮಾಯಣ ಮಹಾಭಾರತಗಳಿಂದ, ವೇದ ಉಪನಿಷತ್ತುಗಳಿಂದ, ಶತಮಾನದ ಸಾಧಕರ ಬದುಕಿನಿಂದ, ಬೇರೆ ಬೇರೆ ದೇಶಗಳ ಪುರಾಣ ಪ್ರವಚನಗಳಿಂದ ಎತ್ತಿಕೊಂಡ ಕತೆಗಳು. ಅವುಗಳಿಗೆ ಪಾಲಿಶ್ ಮಾಡಿ, ಇವತ್ತಿನ ಬದುಕಿನ ಒಂದಷ್ಟು ಉದಾಹರಣೆಗಳನ್ನು ಸೇರಿಸಿ, ಹಳೆಯ ಕತೆಗೆ ಹೊಸ ರೂಪ ನೀಡಿ, ಒಂದು ಆಕರ್ಷಕ ಆಂಗಲ್ ಕೊಟ್ಟು ಇವರು ಉಪನ್ಯಾಸ ಮಾಡುತ್ತಾರೆ. ಕೇಳುವ ನಮಗೆ ಹಳೆಯ ಕತೆ ಗೊತ್ತಿಲ್ಲ ಮತ್ತು ಹೊಸ ಬದುಕಿನ ಸಂಕಟಗಳು ಸರಿಯಾಗಿ ಅರ್ಥವಾಗುತ್ತಿಲ್ಲ. ಹಾಗಾಗಿ ಇವೆರಡನ್ನು ಮಿಕ್ಸ್ ಮಾಡಿದ ಪರ್ಸನಾಲಿಟಿ ಡೆವಲಪ್‌ಮೆಂಟ್ ಪಾಠ ಪರಮಾದ್ಭುತ ಅನ್ನಿಸಿಬಿಡುತ್ತದೆ. ಪರಿಣಾಮ: ನಮ್ಮ ನೆಚ್ಚಿನ ಯೂಟ್ಯೂಬ್ ಗುರುವಿನ ಅಕೌಂಟ್‌ಗೆ ಹಿಟ್ಸ್ ಮತ್ತು ಜಾಹೀರಾತು. ಅವರಿಗೆ ಇನ್ನಷ್ಟು ಫಾಲೋವರ್ಸ್. ನಮಗೆ? ಟೈಂಪಾಸು ಮತ್ತು ಮರೆವು. ಟ್ರಾಫಿಕ್ಕು ಮತ್ತು ಆಫೀಸು.

ಜೋಗಿಯವರ ನಿತ್ಯೋಪನಿಷತ್ತು ಹೀಗಲ್ಲ. ಇಲ್ಲಿ ಏನುಂಟು ಏನಿಲ್ಲ. ದರ್ಶನಗಳುಂಟು, ಉಪದೇಶವಿಲ್ಲ! ನಮಗಿವತ್ತು ತುರ್ತಾಗಿ ಬೇಕಿರುವುದೇ ಇಂತಹ ದರ್ಶನಗಳು. ಆದರೆ ಪುಸ್ತಕ ಭಂಡಾರದಲ್ಲಿ ಹುಡುಕಿದರೆ ಸಿಗುವುದು ಬೌದ್ಧದರ್ಶನ, ಅರ್ಹತದರ್ಶನ, ಪೂರ್ಣಪ್ರಜ್ಞದರ್ಶನ, ಶೈವದರ್ಶನ, ರಾಮಾನುಜದರ್ಶನ, ಜೈಮಿನಿದರ್ಶನ, ಪಾಣಿನಿದರ್ಶನ, ಶಾಂಕರದರ್ಶನ ಹೀಗೆ ತೂಕದ ಹೆಸರಿನ ಹಳೆಯ ದರ್ಶನಗಳೇ. ಇವುಗಳಿಗೆ ಎಷ್ಟು ನೂರು ವರ್ಷಗಳಾದವೋ. ಜಗತ್ತು ಇವುಗಳಿಂದ ಬಹಳ ಮುಂದೆ ಬಂದುಬಿಟ್ಟಿದೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ನಮಗೆ ಆಧುನಿಕ ದರ್ಶನಗಳು ಬೇಕು. ಆದರೆ ಅವು ಹಳೆಯದನ್ನು ಮರೆತಿರಬಾರದು. ಜೊತೆಗೆ ಅವು ಆಧುನಿಕ ರೂಪದಲ್ಲೇ ಇರಬೇಕು, ಇಲ್ಲದಿದ್ದರೆ ನಮ್ಮ ತಲೆಗೆ ಹೋಗುವುದಿಲ್ಲ.

ನನ್ನ ಪ್ರಕಾರ ಜೋಗಿಯವರು ಬರೆದ ನಿತ್ಯೋಪನಿಷತ್ತು ಇಂತಹ ಆಧುನಿಕ ದರ್ಶನಗಳ ಅಪರೂಪದ ತುಣುಕು. ವಾಟ್ಸಾಪ್‌ಗೆ ಕಟ್ ಪೇಸ್ಟ್ ಮಾಡಿ ಊರೆಲ್ಲ ಸುತ್ತಾಡಿಸಬಹುದಾದ ಸಣ್ಣ ಸಣ್ಣ ಕ್ಯಾಪ್ಸೂಲ್ ಮಾದರಿಯ ತುಣುಕುಗಳಷ್ಟೇ ಇಂದಿನ ತಲೆಮಾರಿಗೆ ಅಕಸ್ಮಾತ್ತಾಗಿಯಾದರೂ ಕಣ್ಣಿಗೆ ಬಿದ್ದು, ಮುಂದೆ ರುಚಿಸಿದರೆ, ಹುಡುಕಿ ಓದಿಸಿಕೊಂಡು ಹೋಗುವ ಶಕ್ತಿ ಹೊಂದಿವೆ. ನಿತ್ಯೋಪನಿಷತ್ತಿನಲ್ಲಿ ನಿಸ್ಸಂಶಯವಾಗಿ ಅಂತಹ ಶಕ್ತಿಯಿದೆ. ಇಲ್ಲಿರುವ ಸುಮಾರು ಇನ್ನೂರು ಕ್ಯಾಪ್ಸೂಲುಗಳನ್ನು ದಿನಾ ಬೆಳಿಗ್ಗೆ ಒಂದು, ರಾತ್ರಿ ಒಂದು ತೆಗೆದುಕೊಂಡರೆ ಜೀವನಕ್ಕೆ ಒಳ್ಳೆಯದು. ಏಕೆಂದರೆ ಇವು ಬದುಕನ್ನು ಪ್ರೀತಿಸಲು ಕಲಿಸುತ್ತವೆ. ಬದುಕನ್ನು ಹೇಗೆ ನೋಡಬೇಕೆಂಬುದನ್ನು ಕಲಿಸುತ್ತವೆ. ನಾವು ನಿರ್ಲಕ್ಷಿಸುವ ದಿನನಿತ್ಯದ ಘಟನೆಗಳ ಒಳಗಿರುವ ಅಸಾಮಾನ್ಯ ಮಜಕೂರುಗಳನ್ನು ಹೊಳೆಯಿಸುತ್ತವೆ. ಎಂದೋ ಓದಿ ಬಿಟ್ಟ ಭಗವದ್ಗೀತೆಯ ಶ್ಲೋಕದಲ್ಲಿ ಎಷ್ಟೊಳ್ಳೆಯ ಜೀವನದ ಪಾಠವಿದೆ ಎಂಬುದನ್ನು ನೆನಪಿಸುತ್ತವೆ. ಅಜ್ಜಿ-ಅಜ್ಜ ಹೇಳಿರದ ಪುರಾಣದ ಕತೆಯನ್ನು ಹೇಳಿ ಅದರಲ್ಲಿರುವ ಗುಟ್ಟನ್ನು ತಿಳಿಸಿಕೊಡುತ್ತವೆ. ವೇದದಲ್ಲೋ, ಉಪನಿಷತ್ತಿನಲ್ಲೋ, ಅರಣ್ಯಕದಲ್ಲೋ ಅಥವಾ ಯಾವುದೋ ಬೃಹತ್ ಶಾಸ್ತ್ರಗ್ರಂಥದಲ್ಲಿ ಬಂದುಹೋದ ಸಂಕೀರ್ಣ ಜಿಜ್ಞಾಸೆಯನ್ನು ಅವ್ಯಾವುದರ ಹೆಸರನ್ನೂ ಹೇಳದೆ ಎಷ್ಟು ಸರಳವಾಗಿ ಮತ್ತು ಆಕರ್ಷಕವಾಗಿ ಇಂದಿನ ಬದುಕಿಗೆ ಥಟ್ಟನೆ ಸಮೀಕರಿಸಿ ಜೋಗಿ ಹೇಳಿಬಿಡುತ್ತಾರೆಂದರೆ ಅವು ಆಧುನಿಕ ಸಂತನೊಬ್ಬನ ೨೪ ಕ್ಯಾರೆಟ್ ಚಿನ್ನದ ಮಾತುಗಳಂತೆ ಕೇಳಿಸುತ್ತವೆ.

ನಮಗಿಂದು ಹೆಚ್ಚೆನಿಸುವಷ್ಟು ಎಂಟರ್‌ಟೇನ್ಮೆಂಟ್ ಲಭ್ಯವಿದೆ. ಓದಿ ಮುಗಿಸಲಾಗದಷ್ಟು ಪುಸ್ತಕಗಳು ಸಿಗುತ್ತವೆ. ಇಂಥದ್ದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿ ಬಾಯ್ಮುಚ್ಚುವುದರೊಳಗೆ ಅಷ್ಟೂ ಪ್ರವರ ಒಪ್ಪಿಸುವ ಡಿವೈಸುಗಳು ನಮ್ಮ ಬಳಿಯಿವೆ. ದಾರಿ ತೋರಿಸಲು ಜಿಪಿಎಸ್ ಇದೆ. ಆದರೆ, ಬದುಕನ್ನು ಪ್ರೀತಿಸಲು ಕಲಿಸುವ ಮತ್ತು ಚೆನ್ನಾಗಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸುವ ಸಂಗತಿ ರೂಪದ ಸಾಧನಗಳು ಇಲ್ಲ. ಅಲ್ಲೋ ಇಲ್ಲೋ ಇದ್ದರೂ ಅವು ನಮ್ಮನ್ನು ಆಕರ್ಷಿಸುತ್ತಿಲ್ಲ. ನಿತ್ಯೋಪನಿಷತ್ತಿನ ಒಂದೊಂದು ಬರಹವೂ ಅಂತಹ ಸಾಧನ ಎಂಬ ನಂಬಿಕೆ ನನ್ನದು. ಹೈಸ್ಕೂಲು, ಕಾಲೇಜು ಮತ್ತು ಈಗಷ್ಟೇ ಕೆಲಸಕ್ಕೆ ಸೇರಿದ ವಯಸ್ಸಿನ ಯುವಕರು ಇವುಗಳನ್ನು ಓದಬೇಕು. ಬದುಕನ್ನು ನೋಡುವ ರೀತಿಯನ್ನೇ ಇವು ಬದಲಿಸುತ್ತವೆ.

ಕತೆ, ಕಾದಂಬರಿ, ಕವಿತೆ, ವಿಮರ್ಶೆ, ಲಲಿತ ಪ್ರಬಂಧ ಹೀಗೆ ಜೋಗಿಯವರು ಕೃಷಿ ಮಾಡಿದ ಯಾವ ಸಾಹಿತ್ಯ ಪ್ರಕಾರಕ್ಕೂ ಈ ನಿತ್ಯೋಪನಿಷತ್ತು ಸೇರುವುದಿಲ್ಲ. ಅವೆಲ್ಲವುಗಳಿಗೆ ಹೊರತಾದ ಹೊಚ್ಚಹೊಸ ರೂಪವೊಂದು ಇವುಗಳಿಗೆ ಬಹಳ ಸಹಜವಾಗಿ ಪ್ರಾಪ್ತವಾಗಿದೆ. ಸಿದ್ಧ ಮಾದರಿಗಳನ್ನೆಲ್ಲ ಉಲ್ಲಂಘಿಸಿ ಬರೆಯುವುದೇ ಜೋಗಿಯವರ ವಿಶೇಷ ಶಕ್ತಿ. ಆ ವಿಶೇಷ ನಿತ್ಯೋಪನಿಷತ್ತಿನಲ್ಲಿ ಇನ್ನೊಂದು ಎತ್ತರಕ್ಕೆ ಹೋಗಿದೆ.

ಬದುಕನ್ನು ಪ್ರೀತಿಸಬೇಕು ಅಥವಾ ಕನಿಷ್ಠ ಪಕ್ಷ ನಾಳೆಯಿಂದಾದರೂ ಪ್ರೀತಿಸಬೇಕು ಅಥವಾ ಇನ್ನಾದರೂ ಸರಿಯಾಗಿ ಅರ್ಥಮಾಡಿಕೊಂಡು ಪ್ರೀತಿಸಬೇಕು ಎಂದುಕೊಂಡ ಎಲ್ಲರಿಗಾಗಿ ಈ ನಿತ್ಯೋಪನಿಷತ್ತು. ಆಗಲೇ ಹೇಳಿದಂತೆ ನನ್ನ ಪ್ರಿಸ್ಕ್ರಿಪ್ಷನ್ – ದಿನಾ ಬೆಳಿಗ್ಗೆ ಒಂದು, ರಾತ್ರಿ ಒಂದು.

‍ಲೇಖಕರು avadhi

November 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Chandra Aithal

    ಜೋಗಿಯವರು ಈ ಮೊದಲು ಬೆಂಗಳೂರಿನ ಕುರಿತು ಬರೆದಿದ್ದ ಎರಡು ಪುಸ್ತಕಗಳೂ ನಿರಾಸೆ ಉಂಟು ಮಾಡಿದ್ದವು. ಪುಸ್ತಕದ ಹಿಂದಿನ ಹೊದಿಕೆಯಲ್ಲಿನ ಒಕ್ಕಣಿಕೆಯಷ್ಟೇ ಕುತೂಹಲಕಾರಿಯಾಗಿದ್ದಿತ್ತು. ಅದೇ ರೀತಿ ಇಲ್ಲಿ ಸೀತಾಳ ಭಾವಿಯವರ ಮುನ್ನುಡಿ ತುಂಬ ಸ್ವಾರಸ್ಯಕರವಾಗಿದೆ. ಪುಸ್ತಕದ ಒಳಗೆ ಈ ಸ್ವಾರಸ್ಯವು ಉಳಿದೀತೋ ಎಂದು ಸ್ವಲ್ಪ ಅನುಮಾನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: