ಜೋಗಿ ಮನೆ : ಸೂತಕವಿಲ್ಲದ ಸದ್ದಿಗಾಗಿ ಹಂಬಲಿಸಿದ ರಾತ್ರಿ


ಎಲ್ಲೆಡೆ ಮೌನ. ಬಹುಶಃ ನಡುರಾತ್ರಿ ಆಗಿದ್ದರೂ ಆಗಿರಬಹುದು. ಗದ್ದಲ ನಿಧಾನವಾಗಿ ಅಡಗುತ್ತಿದೆ. ಅಪರಾತ್ರಿಯಲ್ಲಿ ಕುಡಿದೋ, ಸಿಟ್ಟಿನಿಂದಲೋ ಮನೆಗೆ ಧಾವಿಸುತ್ತಿರುವ ವಾಹನಗಳ ರೊಂಯ್ಯ್ ಸದ್ದು. ಯಾರೋ ಮನೆಯ ಕಿಟಕಿ ಮುಚ್ಚಿದ ಶಬ್ದ. ಪಕ್ಕದ ಮನೆಯವರು ಫ್ಲಷ್ ಮಾಡಿದ ಶಬ್ದ. ಎದುರು ಮನೆಯ ಮುದುಕರು ಕೆಮ್ಮುತ್ತಾರೆ. ಆ ಸದ್ದಿಗೆ ನಾಯಿ ಎದ್ದು ಮೈಯನ್ನೊಮ್ಮೆ ಫಟಫಟಿಸಿ ಅಂಟಿಕೊಂಡಿದ್ದ ಮರಳನ್ನೆಲ್ಲ ಕೊಡವಿ ಎರಡೂ ಮುಂಗೈಗಳ ಮೇಲೆ ಮುಖವಿಟ್ಟು ಮತ್ತೆ ಮಲಗಿಕೊಳ್ಳುತ್ತದೆ. ಪಕ್ಕದ ಬೀದಿಯ ಟೈಲರ್ ಅಂಗಡಿಯವನಿಗೆ ಹಬ್ಬದ ಭರಾಟೆ. ಟೈಲರ್ ಮೆಷಿನ್ನಿನ ಸದ್ದು ಇದ್ದಕ್ಕಿದ್ದಂತೆ ನಿಂತು ಹೋಗಿ ಶಟರ್ ಎಳೆದ ಶಬ್ದ. ಹಿಂಬದಿಯ ಅಪಾರ್ಟುಮೆಂಟಿನ ನಡುವಯಸ್ಕ ಆಗಷ್ಟೇ ಬಂದಿದ್ದಾನೆ. ಅವನ ಕಾರು ರಿವರ್ಸ್ ತೆಗೆದುಕೊಳ್ಳುತ್ತಿದೆ. ಅದರ ಕರ್ಕಶ ಕುಂಯ್ಕ್ ಕುಂಯ್ಕ್ ಶಬ್ದ.
ಇವೆಲ್ಲವೂ ಪರಿಚಿತವೇ. ಎಲ್ಲ ಸದ್ದುಗಳೂ ಕಿವಿಗೆ ಬೀಳುತ್ತಿರುವಂಥವೇ. ಶಬ್ದ ಸೂತಕ ಎಂಬ ಪದ ಯಾಕೋ ನೆನಪಾಗುತ್ತದೆ. ಪರಿಚಿತ ಆವರಣದಲ್ಲಿ ಮನಸ್ಸು ನಿರಾಳವಾಗಿರುತ್ತದೆ. ಪರಿಚಿತವಾದದ್ದು ಸುಖ ಕೊಡುತ್ತದೆ. ಅಲ್ಲಿ ಅಪಾಯಗಳಿಲ್ಲ ಅನ್ನುವುದು ನಮಗೆ ಗೊತ್ತು. ಅಪಾಯಗಳಿಲ್ಲದ ಜಾಗದಲ್ಲೇ ನಾವು ಇರಲು ಬಯಸುತ್ತೇವೆ. ಇರುತ್ತೇವೆ. ಫೆಮಿಲಿಯಾರಿಟಿ ಎಂಬ ಪದ ಎಷ್ಟು ಸುಂದರ ಮತ್ತು ಅಪಾಯಕಾರಿ.
ಕ್ರಮೇಣ ಎಲ್ಲವೂ ನಮಗೆ ಫೆಮಿಲಿಯರ್ ಆಗುತ್ತಾ ಹೋಗುತ್ತದೆ. ಮೊದಲ ಸಲ ನೋಡಿದ ಸಾವು ಬೆಚ್ಚಿ ಬೀಳಿಸುತ್ತದೆ. ಸುಮಾರು ವರುಷ ಅದು ನಮ್ಮನ್ನು ಕಾಡುತ್ತಲೇ ಇರುತ್ತದೆ. ನಮ್ಮ ಹಳೆಯ ಮನೆಯ ಕಾಂಪೋಂಡಿನ ಮೇಲೆ ಕೂತಿರುತ್ತಿದ್ದ ಸುಮಾರು ಐವತ್ತು ವಯಸ್ಸಿನ ಪಕ್ಕದ ಮನೆಯ ಗಂಡಸೊಬ್ಬರು ಒಂದು ಮುಸ್ಸಂಜೆ ತಲೆತಿರುಗಿ ಬಿದ್ದಿದ್ದರು. ಕೇವಲ ಆರಡಿಯ ಕಾಂಪೋಡು. ಹಿಂದಕ್ಕೆ ಮಗುಚಿಕೊಂಡ ರಭಸಕ್ಕೆ ಕತ್ತು ಮುರಿದು ಕಮಕ್ ಕಿಮಕ್ ಅನ್ನದೇ ಸತ್ತು ಹೋಗಿದ್ದರು. ಅದು ಗೊತ್ತಾದದ್ದೇ ತಡ ಪಕ್ಕದ ಮನೆಯಿಂದ ಓಡಿಬಂದ ಅವರ ಹೆಂಡತಿ ನಾನೆಂದೂ ಕೇಳದ ಧ್ವನಿಯಲ್ಲಿ ಅಳತೊಡಗಿದರು. ಅವರು ಜಗಳ ಆಡುವುದನ್ನು ಕೇಳಿದ್ದೆ. ಮಾತಾಡುವುದನ್ನು ಕೇಳಿದ್ದೆ. ಗುಟ್ಟು ಹೇಳುವುದನ್ನು ಕೇಳಿದ್ದೆ. ಹಾಡುವುದನ್ನೂ ಕೇಳಿದ್ದೆ. ಆದರೆ ಅಂಥ ಅಳು ಕೂಡ ಅವರ ಗಂಟಲಿನಿಂದ ಹೊರಡಬಹುದು ಅಂತ ಯಾವತ್ತೂ ಅನಿನಿಸಿರಲಿಲ್ಲ. ಆ ಸಾವಿನ ತೀವ್ರತೆಯನ್ನು ಹೆಚ್ಚಿಸಿದ್ದು ಅವಳ ಅಳುವೇ ಇರಬೇಕು ಎಂದು ಈಗ ಅನ್ನಿಸುತ್ತಿದೆ. ಊಳಿಟ್ಟ ಹಾಗೆ ವಿಕಾರವಾಗಿ ದನಿ ಹೊರಡಿಸಿ, ಯಾರಾದರೂ ಕೇಳಿಸಿಕೊಳ್ಳುತ್ತಾರೆ ಅನ್ನುವ ಪರಿವೆಯಿಲ್ಲದೆ, ತನ್ನ ಗಂಟಲ ಸದ್ದು ತನಗೇ ಕೇಳಿಸುತ್ತಿಲ್ಲವೇನೋ ಎಂಬಂತೆ ಅವರ ಗಂಟಲಿಂದ ಗೊರಗೊರ ಸದ್ದು ಹೊರಟಿತ್ತು. ಸಾವಿನ ಸದ್ದು ಅದೇ ಇರಬೇಕೆಂದು ನನಗೆ ಬಹಳ ದಿನ ಅನ್ನಿಸುತ್ತಿತ್ತು. ಅದಾಗಿ ಆರೆಂಟು ತಿಂಗಳ ನಂತರ ನಮ್ಮೂರಿನ ಹುಚ್ಚನೊಬ್ಬ ಬಸ್ ನಿಲ್ದಾಣದ ಎದುರಿನ ಕಟ್ಟೆಯ ಮೇಲೆ ಸತ್ತು ಬಿದ್ದಿದ್ದ. ಅವನ ಹೆಣ ನೋಡಿದಾಗಲೂ ನನ್ನ ಕಿವಿಗೆ ಕೇಳಿಸಿದ್ದು ಆ ಹೆಂಗಸು ಅತ್ತ ಸದ್ದೇ. ಸುಮಾರು ವರುಷ ಅದೇ ಅಳು ನನ್ನ ಪಾಲಿಗೆ ಸಾವಿನ ಹಿನ್ನೆಲೆ ಸಂಗೀತ ಆಗಿಬಿಟ್ಟಿತ್ತು.
ಅಷ್ಟೊಂದು ಕಾಡಿದ ಸದ್ದನ್ನು ನಾನು ಮತ್ತೆಂದೂ ಕೇಳಲೇ ಇಲ್ಲವೇನೋ? ಯಾತನೆಗೆ ಅದರದ್ದೇ ಆದ ದನಿಯಿರುತ್ತದೆ. ಯಾರನ್ನಾದರೂ ಏನನ್ನಾದರೂ ಕೇಳುವಾಗ ನಮ್ಮ ದನಿ ಎಷ್ಟೊಂದು ಹತೋಟಿಯಲ್ಲಿರುತ್ತದೆ. ಅಧಿಕಾರ ಶಾಶ್ವತ ಎಂದು ನಂಬಿಕೊಂಡವರು ಹೇಗೆ ಅಧಿಕಾರವಾಣಿಯ ಧ್ವನಿ ಹೊರಡಿಸುತ್ತಾರೆ. ಅರ್ಥ ಗೊತ್ತಿರುವ ಮಾತುಗಳನ್ನಾಡಲಿಕ್ಕೇ ಹಿಂಜರಿಯುವ ಹೊತ್ತಲ್ಲಿ, ಅರ್ಥವೇ ಗೊತ್ತಿಲ್ಲದ ಮಂತ್ರಗಳನ್ನು ಎಷ್ಟೊಂದು ಸ್ಪಷ್ಟವಾಗಿ ಹೇಳಬಲ್ಲರು? ಅವನನ್ನು ಕೊಲ್ಲಿ ಅಂತ ಅಪ್ಪಣೆ ಕೊಡಿಸುವವನು ಹೊರಡಿಸುವ ಸದ್ದು ಹೇಗಿರಬಹುದು. ಮತ್ತೊಬ್ಬರನ್ನು ಬೈಯುವಾಗಿನ ಧ್ವನಿಯಲ್ಲಿ ಮಾನವೀಯತೆ ಇರುವುದಿಲ್ಲವಾ? ಅದೇ ಪದ, ಅದೇ ಅರ್ಥ, ಧ್ವನಿ ಮಾತ್ರ ಬೇರೆ. ಹತ್ತಿಕ್ಕುವ ಧ್ವನಿ. ಒರೆಸಿಹಾಕುವ ಧ್ವನಿ. ನಾನು ಕೊಳೆ ಮಾಡಿದ್ದೇನೆ. ನೀನದನ್ನು ತೊಳೆದು ಸ್ಪಚ್ಛಮಾಡು ಎಂದು ಹೇಳುವಾಗಿನ ಧ್ವನಿ. ಕತ್ತಿಯ ಅಲಗಿನಂತೆ, ರಕ್ತ ಹನಿಯುತ್ತಿರುವ ತ್ರಿಶೂಲದಂತೆ ಧ್ವನಿ ಕೂಡ ಬದಲಾಗುತ್ತಾ ಹೋಗುತ್ತದೆ. ನಮ್ಮವರ ಧ್ವನಿಯೇ ನಮಗೆ ಅಪರಿಚಿತ ಅನ್ನಿಸುತ್ತದೆ.
ಸಾದತ್ ಹಸನ್ ಮಂಟೋನ ಕತೆಯೊಂದರ ಹೆಸರು ಖೋಲ್ ದೋ. ಖೋಲ್ ದೋ ಅಂದರೆ ತೆರೆ, ತೆಗೀ ಅಂತ ಅರ್ಥ. ಹೇಗೆ ಯಾರಿಗೋ ಯಾರೋ ಸಹಜವಾಗಿ ಹೇಳಿದ ಮಾತು ಭಯಭೀತರನ್ನು ಬೆಚ್ಚಿ ಬೀಳಿಸಬಲ್ಲದು ಎನ್ನುವುದನ್ನು ಆ ಕತೆ ಹೇಳುತ್ತದೆ. ಆ ಕತೆಯ ಸಾರಾಂಶ ಇಷ್ಟು:
ಅಮೃತಸರದಿಂದ ಎರಡು ಗಂಟೆಗೆ ಹೊರಟ ವಿಶೇಷ ರೇಲು, ಮುಗಲ್ಪುರಕ್ಕೆ ಎಂಟು ಗಂಟೆ ತಡವಾಗಿ ತಲುಪಿತ್ತು. ಪ್ರಯಾಣಿಕರ ಪೈಕಿ ಅನೇಕರು ದಾರಿಯಲ್ಲಿ ಕೊಲೆಯಾಗಿದ್ದರು. ಕೆಲವರು ಗಾಯಗೊಂಡಿದ್ದರು. ಹಲವರು ಕಾಣೆಯಾಗಿದ್ದರು. ಸಿರಾಜುದ್ದೀನ್ ಕಣ್ಣು ಬಿಡುವ ಹೊತ್ತಿಗೆ ಆತ ನಿರಾಶ್ರಿತರ ಶಿಬಿರದಲ್ಲಿದ್ದ. ಕಣ್ತೆರೆಯುತ್ತಿದ್ದಂತೆ ಅವನಿಗೆ ಹಿಂದಿನ ರಾತ್ರಿಯ ಘಟನೆಗಳು ದುಃಸ್ವಪ್ನದಂತೆ ನೆನಪಾದವು. ಯಾರೋ ರೇಲಿಗೆ ಬೆಂಕಿಯಿಟ್ಟಿದ್ದರು. ಗದ್ದಲ, ಗಲಾಟೆ, ಯಾರೋ ಅಟ್ಟಿಸಿಕೊಂಡು ಬರುತ್ತಿದ್ದರು, ಯಾರೋ ಓಡುತ್ತಿದ್ದರು, ಯಾರೋ ಬೆಂಕಿಯಲ್ಲಿ ಸುಟ್ಟು ಅರಚಿಕೊಳ್ಳುತ್ತಿದ್ದರು. ಯಾರೋ ಚೀರುತ್ತಿದ್ದರು. ಆತ ಥಟ್ಟನೆ ಎದ್ದು ಕೂತು ಸಕೀನಾ ಅಂತ ಕೂಗಿಕೊಂಡ.
ನಾಪತ್ತೆಯಾದ ಅವಳು ಎಷ್ಟೋ ದಿನಗಳ ನಂತರ ವೈದ್ಯಕೀಯ ಶಿಬಿರಕ್ಕೆ ಬರುತ್ತಾಳೆ. ಅವಳು ಸಿಕ್ಕಿದ್ದಾಳೆ ಅಂತ ಸಿರಾಜುದ್ದೀನನಿಗೆ ಗೊತ್ತಾಗುತ್ತದೆ. ಅವಳನ್ನು ವೈದ್ಯರ ಕೋಣೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ ಎಂದು ಗೊತ್ತಾಗಿ ಆತ ಅಲ್ಲಿಗೆ ಓಡುತ್ತಾನೆ. ವೈದ್ಯರ ಮುಂದೆ ಆಕೆ ಮಲಗಿದ್ದಾಳೆ. ಸತ್ತಂತಿದ್ದಾಳೆ. ಮೈಮೇಲೆ ಪ್ರಜ್ಞೆ ಇದ್ದಂತಿಲ್ಲ. ಓಡಿ ಬಂದ ಆತನನ್ನು ಡಾಕ್ಟರ್ ಕೇಳುತ್ತಾರೆ. ಏನು ವಿಷ್ಯ. ಸಿರಾಜುದ್ದೀನ್ ಹೇಳುತ್ತಾನೆ. ಅವಳು.. ಅವಳು ನನ್ನ ಮಗಳು. ಡಾಕ್ಟರ್ ನಿಟ್ಟುಸಿರಿಟ್ಟು ಅವಳ ನಾಡಿ ಹಿಡಿದು ನೋಡುತ್ತಾನೆ. ಸಿರಾಜುದ್ದೀನ್ ಕಡೆ ನೋಡುತ್ತಾ ಕಿಟಕಿಯತ್ತ ಕಣ್ಣು ಹಾಯಿಸಿ ಖೋಲ್ ದೋ ? ತೆಗೀ ಅನ್ನುತ್ತಾನೆ.
ಸಕೀನಾ ಅಪ್ರಯತ್ನಕವಾಗಿ ತನ್ನ ಸಲ್ವಾರ್ ಲಾಡಿ ಬಿಚ್ಚಿ ಅದನ್ನು ಕೆಳಗೆ ಜಾರಿಸುತ್ತಾಳೆ.

ಆನಂತರ ಅವಳ ತಂದೆ ನನ್ನ ಮಗಳು ಬದ್ಕಿದ್ದಾಳೆ ಅಂತ ಚೀರಿಕೊಳ್ಳುವುದೆಲ್ಲ ನಡೆಯುತ್ತದೆ. ಆದರೆ ಡಾಕ್ಟರ್ ಹೇಳಿದ ತೆಗೀ ಅನ್ನುವ ಪದ ಅವಳನ್ನು ಆಜ್ಞೆಯಂತೆ ತಲುಪುವ ರೀತಿ, ಅವಳಿಗೆ ತೆಗೀ ಅನ್ನುವ ಪದಕ್ಕೆ ಬೇರೆ ಅರ್ಥವೇ ಇಲ್ಲ ಎಂಬಷ್ಟು ಅದು ಪರಿಚಿತವಾದದ್ದು, ಆ ಪದ ಅವಳಲ್ಲಿ ಎಬ್ಬಿಸಬಹುದಾಗಿದ್ದ ಅಸಹನೆ, ಸಿಟ್ಟು, ರೇಜಿಗೆ, ನೋವು, ಆತಂಕ, ಭಯ ಎಲ್ಲವನ್ನೂ ಕಳೆದುಕೊಂಡು ಕೇವಲ ಒಂದು ಪಾಲಿಸಲೇಬೇಕಾದ ಸೂಚನೆ ಆಗಿಬಿಟ್ಟದ್ದರ ವಿವರ ಅದಕ್ಕೂ ಮುಂಚೆಯೇ ಕತೆಯಲ್ಲಿ ಬಂದು ಹೋಗುತ್ತದೆ. ಅವಳನ್ನು ಎಂಟು ಮಂದಿ ಸೈನಿಕರು ವಾರಗಟ್ಟಲೆ ಅತ್ಯಾಚಾರಕ್ಕೆ ಗುರಿಯಾಗಿಸಿರುತ್ತಾರೆ.
ಖೋಲೋ ಅನ್ನುವುದು ಕೇವಲ ಸದ್ದು. ಪರಿಚಿತ ಸದ್ದು. ಅದಕ್ಕೊಂದು ಪರಿಚಿತ ಅರ್ಥ. ಅದು ಅಷ್ಟರ ಮಟ್ಟಿಗೆ ಅವಳನ್ನು ಆವರಿಸಿಕೊಂಡು ಬಿಟ್ಟಿದೆ. ಕಿಟಕಿ ತೆಗೀ ಅಂದರೂ ಅವಳಿಗೆ ಅರ್ಥವಾಗುವುದು ಒಂದೇ.
ಹೀಗೆ ಒಂದಷ್ಟು ಪದಗಳು ನಮಗೂ ಪರಿಚಿತ. ಕೊಲ್ಲು, ದೂರ ಇಡು, ನಾಶ ಮಾಡು, ಸುಟ್ಟು ಬಿಡು, ಒಳಗೆ ಬಿಟ್ಟುಕೊಳ್ಳಬೇಡ, ಹಿಂಸಿಸು. ಅವಮಾನಿಸು..
ಅರ್ಥವೇ ಇಲ್ಲದ ಹೊಸ ಅಪರಿಚಿತ ಸದ್ದು ಕೇಳೀಸಿತೇನೋ ಅಂತ ಹುಡುಕಬೇಕಾಗಿದೆ. ಪ್ರೇಮದಲ್ಲಿ, ಲೆಕ್ಕಾಚಾರದಲ್ಲಿ, ಸಂಬಂಧದಲ್ಲಿ, ಅನುಮತಿಯಲ್ಲಿ, ಮನುಷ್ಯರ ನಡುವೆ ಹೊಸ ಸದ್ದುಗಳು ಬೇಕಿವೆ. ಯಾವತ್ತೂ ಕೇಳಿಯೇ ಇರದ, ಅರ್ಥವೇ ಗೊತ್ತಿರದ, ಇದು ಇದೇ ಎಂದು ಊಹಿಸಲಿಕ್ಕೂ ಆಗದ ಹೊಸದೊಂದು ಸದ್ದು. ಹೊಸದೊಂದು ಉದ್ಗಾರ. ಹೊಸದೊಂದು ಡಮರುಗದ ಶಬುದ.
ಸೂತಕವೇ ಇಲ್ಲದ ಸದ್ದು. ಇದು ಈ ದೇವರಿಗಷ್ಟೇ ಸಲ್ಲಬೇಕು ಎಂದು ಸೂಚಿಸದ ಪ್ರಾರ್ಥನೆ. ಇದು ಆ ಗುಂಪಿಗಷ್ಟೇ ಮೀಸಲು ಎಂದು ಗೊತ್ತಾಗದಂಥಾ ಸುಪ್ರಭಾತ. ಒಂದು ಸಾರ್ವತ್ರಿಕವಾದ, ಗುರುತು ಹಿಡಿಯಲಾರದ ಪ್ರಾರ್ಥನೆ.
 

‍ಲೇಖಕರು avadhi

September 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಸುಧಾ ಚಿದಾನಂದಗೌಡ

    ಉದಯವಾಣಿ ಪತ್ರಿಕೆಯಲ್ಲಿ ಓದಿದ್ದೆ ಇದನ್ನು.
    ಶಬ್ದ ಅವಳಲ್ಲಿ ಹುಟ್ಟಿಸುವ ನಿರ್ಭಾವುಕ ಪ್ರತಿಕ್ರಿಯೆ ಬೆಚ್ಚಿಬೀಳಿಸುತ್ತದೆ ಮತ್ತು ತುಂಬ ಕಾಡುತ್ತದೆ.
    ಪರಿಚಿತ ಶಬ್ದಗಳು ನಿರ್ಜೀವವಾಗಿಸುವ ಪ್ರಸಂಗ ಒಮ್ಮೊಮ್ಮೆ ಹುಡುಕಾಡಲು ಪ್ರೇರೇಪಿಸುತ್ತವೆ.
    ಪ್ರಾರ್ಥನೆಯು ಹುಡುಕಾಟದ ಮತ್ತೊಂದು ರೂಪವಿರಬೇಕು.

    ಪ್ರತಿಕ್ರಿಯೆ
  2. Raj

    Blood chilling.
    It is simply inexplicable why the same man behaves differently under different circumstances, those same soldiers could’ve been her neighbors, classmates earlier.
    A human mind is a very complex animal.

    ಪ್ರತಿಕ್ರಿಯೆ
  3. ಹರೀಶ್‌ಬಸವರಾಜ್‌, ಹುಳಿಯಾರು

    ಪ್ರೇಮದಲ್ಲಿ, ಲೆಕ್ಕಾಚಾರದಲ್ಲಿ, ಸಂಬಂಧದಲ್ಲಿ, ಅನುಮತಿಯಲ್ಲಿ, ಮನುಷ್ಯರ ನಡುವೆ ಹೊಸ ಸದ್ದುಗಳು ಬೇಕಿವೆ. ಯಾವತ್ತೂ ಕೇಳಿಯೇ ಇರದ, ಅರ್ಥವೇ ಗೊತ್ತಿರದ, ಇದು ಇದೇ ಎಂದು ಊಹಿಸಲಿಕ್ಕೂ ಆಗದ ಹೊಸದೊಂದು ಸದ್ದು. ಹೊಸದೊಂದು ಉದ್ಗಾರ. ಹೊಸದೊಂದು ಡಮರುಗದ ಶಬುದ.
    ಈ ಸಾಲುಗಳಲ್ಲಿ…. .ಅದೆಂತದೋ ಒಂದು ಅದ್ಭುತ ಶಕ್ತಿ ಇದೆ ಸಾರ್ ……… ಈ ಲಲೇಖನದ ಬಗ್ಗೆ ಹೇಳಲು ಪದಗಳೇ ಸಿಗುತ್ತಿಲ್ಲಾ………ಅದ್ಭುತ ಎಂದಷ್ಷ ಹೇಳಬಹುದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: