ಹಣತೆ ಉರಿಸುವುದಕ್ಕೆ ನಿರಾತಂಕ ಕತ್ತಲಿರಲಿ..

 

lights hanging

ಬೆಳಕು ಅಂದರೇನು?

ಅವನು ವಿಜ್ಞಾನಿಯ ಬಳಿ ವಿನಯದಿಂದ ಕೇಳಿದ. ವಿಜ್ಞಾನಿಗೆ ಎಲ್ಲವೂ ಗೊತ್ತಿತ್ತು. ಬೆಳಕೆಂದರೆ ವಿದ್ಯುದಯಸ್ಕಾಂತೀಯ ವಿಕಿರಣ. ಇಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಷನ್. ಅದಕ್ಕೆ ಪುನರಾವರ್ತನೆ, ಧ್ರುವೀಕರಣ ಮತ್ತು ತೀವ್ರತೆ ಇರುತ್ತದೆ. ಬೆಳಕೆಂದರೆ ಪೋಟಾನ್ ಸೂಕ್ಷ್ಮಕಣಗಳು ಎಂದು ಆತ ತನ್ನ ಭಾಷೆಯಲ್ಲಿ ವಿವರಿಸಿದ.

ಬೆಳಕು ಅಂದರೇನು ಎಂಬ ಪ್ರಶ್ನೆ ಹಾಗೇ ಉಳಿಯಿತು.

ಅದೇ ಪ್ರಶ್ನೆಯನ್ನು ಅವನು ಕವಿಯ ಬಳಿ ಕೇಳಿದ. ಕವಿ ಬೆಳಕೆಂದರೆ ಕತ್ತಲೆಯೇ ಇಲ್ಲದ ಸ್ಥಿತಿ. ಬೆಳಕೆಂದರೆ ಆನಂದ. ಬೆಳಕೆಂದರೆ ಬದುಕು ಎಂದು ಬೆಳಕನ್ನು ಕೊಂಡಾಡಿದ.

ಪ್ರಶ್ನೆ ಬೆಳೆಯಿತು.

ಅವನು ಜ್ಞಾನಿಯನ್ನು ಕೇಳಿದ.

ಬೆಳಕೆಂದರೆ ಜ್ಞಾನ ಎಂದು ಜ್ಞಾನಿ ಮುಗುಳ್ನಕ್ಕ. ಕತ್ತಲೆಯನ್ನು ಯಾವುದೆಲ್ಲ ಓಡಿಸುತ್ತದೋ ಅದು ಬೆಳಕು. ಅಜ್ಞಾನವೊಂದು ಕತ್ತಲು. ಅವಿದ್ಯೆಯೊಂದು ಕತ್ತಲು ಎಂದು ತಮಸೋಮಾ ಜ್ಯೋತಿರ್ಗಮಯ ಎಂದ.

ಪ್ರಶ್ನೆ ವ್ಯಾಪಿಸಿತು.

ಬೆಳಕೆಂದರೇನು ಎಂದು ಅವನು ಬದುಕನ್ನೇ ಕೇಳಿದ.

ನಿನ್ನನ್ನು ನೀನು ಸುಟ್ಟುಕೊಳ್ಳುವುದು ಎಂದಿತು ಬದುಕು.

ಪ್ರಶ್ನೆ ಗಂಭೀರವಾಯಿತು.

ಕೊನೆಯದಾಗಿ ಆತ ತನ್ನನ್ನೇ ಕೇಳಿಕೊಂಡ.

ಬೆಳಕೆಂದರೇನು?

ಬೆಳಕು.

ಪ್ರಶ್ನೆ ಮುಗಿಯಿತು. ಉತ್ತರವೂ ಉರಿದು ಮುಗಿಯಿತು. ಪ್ರಶ್ನೆ ಬೆಳೆಯುತ್ತಾ ಬೆಳೆಯುತ್ತಾ ಬೆಳಕಾಯಿತು. ಬೆಳಗಾಯಿತು. ಪ್ರಶ್ನೆಯೂ ಬೆಳಕೇ. ಉತ್ತರವೂ ಬೆಳಕೇ.

***
light hand1ಬೆಳಕಿಲ್ಲದೇ ಬಣ್ಣವಿಲ್ಲ. ಕಾಮನಬಿಲ್ಲು ಬಣ್ಣದ ಗೊಂಚಲು ಅಂದುಕೊಂಡರೆ ಅದೂ ಸುಳ್ಳೇ. ಕತ್ತಲಿಗೆ ಕಾಮನಬಿಲ್ಲು ಮೂಡುವುದಿಲ್ಲ. ಬಣ್ಣಗಳೆಲ್ಲ ಕಲಸಿಹೋಗಿ, ಕತ್ತಲೆಂದರೆ ಕಪ್ಪು. ಕತ್ತಲೆಂದರೆ ಅನೂಹ್ಯ. ಕತ್ತಲೆಂದರೆ ನಿಗೂಢ. ಬೆಳಕೆಂದರೆ ಎಲ್ಲವನ್ನೂ ಬಗೆದಿಡುತ್ತಾ,. ತೆರೆದಿಡುತ್ತಾ, ತೋರಿಸಿಕೊಡುತ್ತಾ ಹೋಗುವುದು. ಹಾಗೆ ತೆರೆದುಕೊಳ್ಳುತ್ತಾ ಹೋದಂತೆ ಸಾರವೆಲ್ಲ ನಿಸ್ಸಾರ. ಜ್ಞಾನದ ಬೆಳಕಲ್ಲಿ ನಾವು ನಿಚ್ಚಳವಾಗುತ್ತಾ ಹೋದ ಹಾಗೆ, ಮನುಷ್ಯತ್ವದ ಗುಣಗಳನ್ನೆಲ್ಲ ಕಳೆದುಕೊಳ್ಳುತ್ತಾ ಹೋಗುತ್ತೇವೆ. ಯಾವುದೂ ನಮ್ಮನ್ನು ಅಚ್ಚರಿಗೊಳಿಸದು, ಯಾವುದೂ ಬೆಚ್ಚಿ ಬೀಳಿಸದು, ಯಾವುದೂ ನೋಯಿಸದು, ಯಾವುದೂ ಸಂತೋಷಪಡಿಸದು. ಯಾರಿಗೆ ನೋವೂ ಇಲ್ಲವೋ ನಗುವೂ ಇಲ್ಲವೋ ಭಯವೂ ಇಲ್ಲವೋ ಸಾವೂ ಇಲ್ಲವೋ ನಿನ್ನೆಗಳಿಲ್ಲವೋ ನಾಳೆಗಳಿಲ್ಲವೋ ಅವನು ದೇವರು. ನಿಗರ್ುಣ, ನಿರಾಮಯ, ನಿರಾಕಾರ. ದೇವರೆಂದರೆ ಬೆಳಕು. ಆ ಬೆಳಕು ನಮ್ಮ ಮೇಲೆ ಬೀಳದೇ ಇರುವಷ್ಟು ದಿನ ಸಂಸಾರದ ಸುಖ. ಬೆಳಕು ಬಿದ್ದೊಡನೇ ಈ ದಾರಿ ಮರೆತುಹೋಗಿ, ಆ ದಾರಿ ಕಾಣಿಸಿ ಪ್ರತಿಯೊಬ್ಬನೂ ದಾಸದಾಸರ ಮನೆಯ ದಾಸಾನುದಾಸ.

ಕನಿಷ್ಠ ಅವಮಾನವೂ ಆಗದ, ಕ್ಷಣಿಕ ಸಂತೋಷಕ್ಕೂ ತುತ್ತಾಗದ, ಅಜರಾಮರ. ನಾಳೆ ಮುಪ್ಪಿಲ್ಲ ಅಂತ ಗೊತ್ತಾದರೆ ಯೌವನಕ್ಕೆ ಬೆಲೆಯಿಲ್ಲ. ನಾಳೆ ಸಾವಿಲ್ಲ ಎಂದು ತಿಳಿದರೆ ಆಯಸ್ಸಿಗೆ ಅರ್ಥವಿಲ್ಲ. ನಾಳೆ ಕತ್ತಲೆಯಿಲ್ಲ ಎಂದು ಗೊತ್ತಾಗಿಹೋದರೆ ಬೆಳಕಿಗೆ ಬೆಲೆಯಿಲ್ಲ. ಅನಂತವಾದ ಬೆಳಕು ಶರಶಯ್ಯೆ.

ಕಣ್ಮುಚ್ಚಿದರೆ ಬೆಳಕು, ಕಣ್ತೆರೆದರೆ ಕತ್ತಲು. ಕಣ್ಣುಚ್ಚಿದರೂ ಬೆಳಕೇ ಕಂಡರೆ ಅದು ರೌರವ ನರಕ. ಆಗ ರೆಪ್ಪೆಗೆಲ್ಲಿಯ ಬೆಲೆ. ಒದ್ದೋಡಿಸಲಾಗದ ಬೆಳಕನ್ನು ಸ್ವೀಕರಿಸಬಲ್ಲೆವಾ ನಾವು? ನಿದ್ದೆಗೆ ಬೆಳಕು ಇರಬಾರದು. ಕತ್ತಲೆಯೇ ಬೇಕು. ಸಾವಿಗೆ ಬೆಳಕು ಬೇಕಾ? ಸಾವಿಗೂ ಗೊತ್ತಿಲ್ಲ!

***

ಅಂಚಿನಲ್ಲಿ ಕೂತಿದ್ದ ಅವನು ತಿರುಗಿ ನೋಡಿದ. ದಟ್ಟವಾದ ಕಾಡು ಹಿಂಬದಿಗೆ. ಮರಳುಗಾಡು ಮುಂದೆ ಮುಂದಕ್ಕೆ. ಕಾಡಿನೊಳಗೆ ಕತ್ತಲು. ಮರಳುಗಾಡಿನ ತುಂಬ ಬೆಳಕು. ಒಂದೇ ಒಂದು ಕಾಮನಬಿಲ್ಲು ಕಂಡರೆ ಸಾಕು ಅಂತ ಎಷ್ಟೋ ಸಲ ಅವನಿಗೆ ಅನ್ನಿಸುವುದುಂಟು. ನಿನಗೆ ಕಾಮನಬಿಲ್ಲು ಕಾಣಿಸಿದ ದಿನ ಮೋಕ್ಷ ಎಂದು ಶಪಿಸಿದವನು ಉಃಶಾಪ ಕೊಟ್ಟು ಹರಸಿದ್ದ. ಆವತ್ತಿನಿಂದ ಅವನು ಕಾಡಿನ ಅಂಚಿಗೆ ಬಂದು ಕಾಮನಬಿಲ್ಲಿಗೋಸ್ಕರ ಕಾಯುತ್ತಲೇ ಇದ್ದಾನೆ.

ಅವನ ಮಗ ಕಾಡಿನಾಚೆಗಿರುವ ನಗರದಲ್ಲಿದ್ದಾನೆ. ಅವನಿಗೆ ಕಾಮನ ಬಿಲ್ಲು ಬೇಕಿಲ್ಲ. ಆ ಏಳು ಬಣ್ಣಗಳನ್ನು ನಾನೇ ಸೃಷ್ಟಿಸಬಲ್ಲೆ ಎಂಬ ಹಮ್ಮಿನಲ್ಲಿ ಅವನಿದ್ದಾನೆ. ಆಕಾಶದಲ್ಲೇ ಬಣ್ಣದ ಬಿಲ್ಲು ಮೂಡಿಸುವುದು ಕೂಡ ಕಷ್ಟವೇನಲ್ಲ ಎಂದು ಅವನಿಗೆ ಗೊತ್ತು. ಕಾಮನಬಿಲ್ಲು ಅಂದರೆ ಬೆಳಕಿನ ವಕ್ರೀಭವನ. ಒಂದು ಕೋನದಲ್ಲಿ ಬಾಗಿರುವ ಗಾಜಿನ ಮೂಲಕ ಬೆಳಕು ಹಾಯಿಸಿದರೆ ಬಿಳಿಯ ಬಣ್ಣ ಸಿಡಿದು ಹೋಳಾಗಿ ಏಳು ಹೆಡೆಯ ವರ್ಣಸರ್ಪ. ಅದಕ್ಕೇ ಕಾಡಾದರೆ ಏನು, ನಾಡಾದರೆ ಏನು?

ನರಕಾಸುರನ ಸಂಹಾರಕ್ಕೆ ಮನಸ್ಸು ತುಡಿಯುತ್ತದೆ. ನರಕಾಸುರ ಅಂದರೆ ಯಾರು? ಕತ್ತಲನ್ನೇ ತನ್ನ ಕೋಟೆಯಾಗಿಸಿಕೊಂಡವನು. ಆ ಕತ್ತಲು ಕೂಪದೊಳಗೆ ನುಗ್ಗಿ ಸಂಹರಿಸುವುದಕ್ಕೆ ಬೆಳಕೇ ಬೇಕು. ಅದು ಅಕ್ಷರದ ಬೆಳಕಾ, ನೆಮ್ಮದಿಯ ಬೆಳಕಾ, ಸಜ್ಜನಿಕೆಯ ಬೆಳಕಾ, ಧರ್ಮದ ಬೆಳಕಾ, ತ್ಯಾಗದ ಬೆಳಕಾ ಅಥವಾ ಪ್ರೇಮದ ಬೆಳಕಾ? ಜಾಹೀರಾತುಗಳ ಬೆಳಕು ಸಾಕು ಎಂದು ಮಗ ನಂಬಿದ್ದಾನೆ. ಶ್ರೀಮಂತಿಕೆಯ ಬೆಳಕು ಸಾಕು ಎಂದು ಮಗಳು ಹೇಳುತ್ತಾಳೆ. ಎಲ್ಲ ಬೆಳಕು ಕೂಡ ಕೊನೆಯಾಗಲೇಬೇಕು. ಅದು ಕ್ರಮಿಸುವ ದೂರ ಎಷ್ಟೆಂದರೆ ಅಷ್ಟೇ. ಯಾರೋ ಎಲ್ಲಿಂದಲೋ ಟಾಚರ್ು ಹಾಕಿದಂತೆ. ಕಣ್ಣ ಕೊನೆಗೆ ಅದು ಕೊನೆಯಾಗಿ, ಅದರಾಚೆಗೆ ಬರೀ ಕತ್ತಲು. ದೀವಟಿಗೆ ಹಿಡಿದವನೂ ನಡೆಯುತ್ತಲೇ ಇರಬೇಕು. ಅವನಿಗೆ ಬೆಳಕು ಬೇಕೋ ಬೇಡವೋ ಅನ್ನುವುದು ಮುಖ್ಯ ಅಲ್ಲವೇ ಅಲ್ಲ.

ನರಕಾಸುರ ಎಲ್ಲಿದ್ದಾನೆ ಎಂದು ಯಾರೂ ಕೇಳುವಂತಿಲ್ಲ. ಮಹಾನಗರದ ಗಗನಚುಂಬಿ ಅಪಾಟರ್ುಮೆಂಟಿನ ಆಸೆಗಳಲ್ಲಿ, ಮಹಾ ಬಜಾರುಗಳ ಭರಾಟೆಯಲ್ಲಿ, ಅಗತ್ಯಕ್ಕಿಂತ ಹೆಚ್ಚನ್ನು ಕೊಳ್ಳಬೇಕೆಂಬ ಹಪಾಹಪಿಯಲ್ಲಿ, ಪ್ರೇಮವನ್ನೂ ಮೀರಬಲ್ಲ ಅಕಾರದ ಆಸೆಯಲ್ಲಿ, ನಾಳೆಯನ್ನು ಮಾತ್ರ ನಂಬುವ ಇಂದಿನ ಕ್ಷಣಭಂಗುರದಲ್ಲಿ, ನಿರರ್ಥಕ ಕನಸುಗಳಲ್ಲಿ, ಅಪ್ರಾಪ್ತ ಕಾಮನೆಗಳಲ್ಲಿ… ನಾವು ಎಲ್ಲವನ್ನೂ ಗೆದ್ದಾಗಿದೆ. ಎಲ್ಲಬೆರಗುಗಳೂ ರದ್ದಾಗಿವೆ. ಚಾಲ್ತಿಯಲ್ಲಿರುವುದು ಕೇವಲ ನರಕಾಸುರನ ನಿರಂಕುಶ ಪ್ರಭುತ್ವ.

ಕನಸಿಗೆ ಕನ್ನ ಹಾಕುವುದಕ್ಕೆ ಸಕರ್ಾರವೇ ಹೊರಟಿರುವಾಗ, ಮಗನೆಂಬ ಪರಿಸ್ಥಿತಿಯ ಶಿಶುವಿನದ್ದೇನು ಮಹಾ ದುರಾಸೆ? ಶಿಶು ಯಾವತ್ತು ಶಿಶುಪಾಲನಾಗುತ್ತಾನೋ ಗೊತ್ತಿಲ್ಲ. ಶತಾಪರಾಧದ ಲೆಕ್ಕ ಇಡುವುದಕ್ಕೆ ಶ್ರೀಕೃಷ್ಣನಿಗೂ ಪುರುಸೊತ್ತಿಲ್ಲ. ಭಗ್ನಗೊಳಿಸುವಲ್ಲೇ ನಮ್ಮ ಜಾಣತನ, ವಿದ್ಯೆ, ಅವಕಾಶಗಳೆಲ್ಲ ಮಗ್ನ. ಅಂಚಿನಲ್ಲಿ ಕೂತವನಿಗೆ ಆಳ ಕಾಣಿಸುವುದಿಲ್ಲ. ಎತ್ತರದಲ್ಲಿ ಗೂಡು ಕಟ್ಟಿದ ಹಕ್ಕಿಗೆ ಬೇಟೆಗಾರನ ಭಯವಿಲ್ಲ ಎಂಬುದು ಜಾಣನುಡಿಯೋ ನಾಣ್ಣುಡಿಯೋ

ಗೊತ್ತಿಲ್ಲ.

ಸುಟ್ಟಲ್ಲದೆ ಮುಟ್ಟೆನು ಎಂಬ ಉಡಾಫೆಯಲ್ಲಿ ಸುವರ್ಣ ಲಂಕೆ ಧಗಧಗ.

***

ತಂತ್ರಜ್ಞಾನ ಏನನ್ನು ಕಿತ್ತುಕೊಂಡಿದೆ ಹೇಳಿ? ಅದು ನಮಗೆ ಎಲ್ಲವನ್ನೂ ಕೊಟ್ಟಿದೆ ಎಂದು ಅವರು ಬೀಗುತ್ತಾರೆ. ಹೌದು, ಇದು ಧ್ಯಾನಿಗಳಿಗೆ ಕಾಲವಲ್ಲ. ಯೋಚನೆ ಮಾಡಿ ಹೇಳುತ್ತೇನೆ, ಧೇನಿಸಿ ಆಡುತ್ತೇನೆ ಎನ್ನುವ ಮಾತಿಗೆ ಅರ್ಥವಿಲ್ಲ. ದಾರಿಯಲ್ಲಿ ನಡೆದು ಹೋಗುತ್ತಿದ್ದರೆ ಯಾರೋ ಬಂದು ಮುಖದೆದುರು ಮೈಕು ಹಿಡಿಯುತ್ತಾರೆ. ನಿಮಗೇನು ಅನ್ನಿಸುತ್ತದೆ ಎಂದು ಕೇಳುತ್ತಾರೆ. ಉತ್ತರಿಸುವ ಒತ್ತಾಯಕ್ಕೆ ಸಿಕ್ಕಿ, ಪ್ರತಿಕ್ರಿಯಿಸಲೇಬೇಕಾದ ಒತ್ತಡಕ್ಕೆ ಸಿಕ್ಕಿ, ಆಡಲೇಬೇಕಾದ ಅಡಕತ್ತರಿಗೆ ಸಿಕ್ಕಿ ನಾವು ಆಡಬಾರದ್ದನ್ನು ಆಡುತ್ತೇವೆ. ನಮ್ಮ ಉತ್ತರಗಳು, ಪ್ರತಿಕ್ರಿಯೆಗಳು, ಮಾತುಗಳು ನಮ್ಮದಲ್ಲ, ಕಾಲದ್ದು.

ನಾಳೆ ಬಾ ಅನ್ನಬೇಕಾಗಿದೆ ಆ ಕ್ಷಣದ ಉದ್ವೇಗಕ್ಕೆ. ಕ್ಷಣ ಕ್ಷಣವೂ ಬದುಕುತ್ತಾ ಹೋಗು, ಆ ಘಳಿಗೆಗೆ ಸ್ಪಂದಿಸು, ನಿನ್ನ ಮುಂದಿರುವ ಈ ತತ್ಕ್ಷಣಕ್ಕೆ ಒಪ್ಪಿಸಿಕೋ ಎನ್ನುವ ಮಾತು ಕೂಡ ಹೇಗೆ ನಶ್ವರವಾಗುತ್ತಾ ಸಾಗಿದೆ. ಹಾಗೆ ಸ್ಪಂದಿಸುವುದನ್ನು ನಿಲ್ಲಿಸಿದ ತಕ್ಷಣವೇ ನಾವು ಸತ್ತೇಹೋದವೇನೋ ಅನ್ನಿಸುವಂತಿದೆ. ಯಾಕೆ ನೀನೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಅಂತ ಯಾರೂ ಕೇಳುತ್ತಲೇ ಇಲ್ಲ. ನೋಡದೇ ತುಂಬ ದಿನವಾಯಿತು ಅಂತ ಯಾರಿಗೂ ಯಾರ ಬಗ್ಗೆಯೂ ಅನ್ನಿಸುತ್ತಿಲ್ಲ. ನೋಡಿದ್ದೂ ದಾಖಲಾಗದೇ, ನೋಡದ್ದೂ ಕಾಡದೇ ಸಾಗುತ್ತಿದೆ ನೇಗಿಲ ಗೆರೆ. ಕಾಲ ಸೀಳುತ್ತಾ ಹೋಗುವ ಕರ್ಮಭೂಮಿಗೆ ಬಿತ್ತ ಬಿತ್ತುವವರು ಯಾರು? ಬಿತ್ತಿ ಬೆಳೆದವರು ಈಗೆಲ್ಲಿ? ನಮ್ಮದೇನಿದ್ದರೂ ಬುತ್ತಿಯೂಟ?

***

ನಾವು ನಗಲಾರೆವು. ನಮ್ಮನ್ನು ನಗಿಸುವುದೂ ಒಂದು ವೃತ್ತಿ. ವಿದೂಷಕರಿಗೆ ಈಗ ಬೇಡಿಕೆ ಜಾಸ್ತಿ. ನಮ್ಮೊಳಗಿನ ವಿದೂಷಕ ಯಾವತ್ತೋ ಸತ್ತುಹೋಗಿ, ರಾಕ್ಷಸನಾಗಿ ಮತ್ತೆ ಹುಟ್ಟಿದ್ದಾನೆ. ಆ ರಾಕ್ಷಸನಿಗೆ ಹೊಟ್ಟೆತುಂಬ ನಗು ಬೇಕು. ಅದನ್ನು ಕೊಡುವುದಕ್ಕೆಂದೇ ವಿದೂಷಕರ ದಂಡು. ನಮಗೆ ಅನುವಾದದಲ್ಲಿ ಆಸಕ್ತಿಯಿಲ್ಲ. ಯಾರೂ ಜೀವನವನ್ನು ಅನುವಾದಿಸಲು ಹೊರಡುವುದಿಲ್ಲ. ನಾವು ವಾದಿಸಿ ಗೆಲ್ಲುವವರು. ವಾದಿಸುತ್ತಲೇ ಇರುವವರು. ಹೂವನ್ನು ಅಪರಾಯೆಂದೂ ನಕ್ಷತ್ರಗಳನ್ನು ಭ್ರಮೆಯೆಂದೂ ಅಮ್ಮನನ್ನು ಯಂತ್ರವೆಂದೂ ಮಕ್ಕಳನ್ನು ಉಪಉತ್ಪನ್ನಗಳೆಂದೂ ಉದ್ಯೋಗವನ್ನು ಭೋಗವೆಂದೂ ಸ್ನಾನವನ್ನು ಯೋಗವೆಂದೂ ವಾದಿಸಿ ಗೆಲ್ಲಬಲ್ಲ ಮಂತ್ರ-ವಾದಿ ಹುಟ್ಟಿಕೊಂಡಿದ್ದಾನೆ. ದುಡಿಯದೇ ತಿನ್ನುವುದು ಗೊತ್ತಿದೆ. ನುಡಿಯದೇ ವಾಗ್ಮಿಯಾಗಬಲ್ಲೆವು ನಾವು. ಬೆಳಕೆಂದರೆ ಏನು ಎಂದು ಧೈರ್ಯವಾಗಿ ಕತ್ತಲೆಯನ್ನು ಪ್ರಶ್ನೆ ಮಾಡುವಂತಿಲ್ಲ. ಕತ್ತಲೆ ಎದೆತಟ್ಟಿಕೊಂಡು ನಾನೇ ಬೆಳಕು ಅನ್ನುತ್ತದೆ. ಅಲ್ಲವೆಂದರೆ ಪ್ಯಾನೆಲ್ ಡಿಸ್ಕಷನ್ ನಡೆಯುತ್ತದೆ.

ಒಬ್ಬ ಬಡವನ ಕತೆ ನೆನಪಾಗುತ್ತದೆ.

ಆ ಬಡವನಿಗೆ ಒಂದು ದಿನ ಕಾಡಿನಲ್ಲೊಂದು ಬೆಳಕಿನ ಬೀಜ ಸಿಗುತ್ತದೆ. ಅದನ್ನು ಅವನು ಮನೆಯೊಳಗೆ ತಂದು ಜೋಪಾನವಾಗಿಡುತ್ತಾನೆ. ತನ್ನದೇ ಆದ ಒಂದು ಪುಟ್ಟ ಹೊಲವನ್ನು ಹೇಗೋ ಸಂಪಾದನೆ ಮಾಡಿ, ಅದರಲ್ಲಿ ಆ ಬೆಳಕಿನ ಬೀಜವನ್ನು ಬಿತ್ತಬೇಕು ಅನ್ನುlights hand3ವುದು ಅವನ ಆಸೆ. ಅವನು ಅಂದಿನಿಂದ ಕಷ್ಟಪಟ್ಟು ದುಡಿಯಲು ಆರಂಭಿಸುತ್ತಾನೆ. ರಾತ್ರಿಹಗಲೂ ಕೆಲಸ ಮಾಡುತ್ತಾನೆ. ನಿದ್ರೆಯಿಲ್ಲದ, ವಿಶ್ರಾಂತಿಯಿಲ್ಲದ ದುಡಿತ.

ಹಾಗೆ ದುಡಿಯುತ್ತಲೇ ಹೋಗುತ್ತಾನೆ. ಹತ್ತಿಪ್ಪತ್ತು ವರುಷ ಕೆಲಸ ಮಾಡಿದ ನಂತರ ಒಂದು ಹೊಲ ಕೊಳ್ಳುವಷ್ಟು ದುಡ್ಡು ಅವನದಾಗುತ್ತದೆ. ಅವನು ಆ ಶ್ರೀಮಂತನೊಬ್ಬನ ಬಳಿಗೆ ಹೋಗಿ, ಒಂದೆಕರೆ ಹೊಲ ಕೊಡುವಂತೆ ಕೇಳಿಕೊಳ್ಳುತ್ತಾನೆ. ಆ ಶ್ರೀಮಂತ ಆತನ ದುಡ್ಡನ್ನೆಲ್ಲ ಎಣಿಸಿ ಒಳಗಿಟ್ಟುಕೊಂಡು, ತನ್ನ ಸಾವಿರಾರು ಎಕರೆ ಜಮೀನಿನ ತುತ್ತತುದಿಯ ಒಂದೆಕರೆ ಜಮೀನನ್ನು ಆ ಬಡವನಿಗೆ ಕೊಡುತ್ತಾನೆ.

ಬಡವ ಮನೆಯಲ್ಲಿಟ್ಟ ಬೆಳಕಿನ ಬೀಜವನ್ನು ತಂದು ಆ ಜಮೀನಿನಲ್ಲಿ ಬಿತ್ತುತ್ತಾನೆ. ಅಷ್ಟರಲ್ಲಾಗಲೇ ಕಾಲು ಶತಮಾನ ಮುಗಿದು ಹೋಗಿದೆ. ಆತ ಬೀಜ ಬಿತ್ತಿದ ಎರಡೇ ದಿನಕ್ಕೆ ಸಕರ್ಾರ ಆ ಜಮೀನನ್ನು ರಸ್ತೆ ಮಾಡುವುದಕ್ಕೆಂದು ವಶಪಡಿಸಿಕೊಳ್ಳುತ್ತದೆ. ರೈತನ ಆಕ್ರೋಶ, ಆಕ್ರಂದನಗಳಿಗೆ ಕಿವಿಗೊಡದೇ, ಆ ಜಮೀನನ್ನು ವಶಪಡಿಸಿಕೊಳ್ಳುತ್ತದೆ. ರೈತ ನೋಡನೋಡುತ್ತಿದ್ದಂತೆ ಅಲ್ಲೊಂದು ಸಪಾಟಾದ ಅಗಲವಾದ ರಸ್ತೆ ನಿಮರ್ಾಣವಾಗುತ್ತದೆ. ರೈತ ಒಂದು ರಾತ್ರಿ ಅಲ್ಲಿಗೆ ಬಂದು ನೋಡಿದರೆ ನೂರಾರು ಬೆಳಕುಗಳು ರಸ್ತೆಯುದ್ದಕ್ಕೂ ಓಡುತ್ತಿರುವುದನ್ನು ನೋಡುತ್ತಾನೆ. ತಾನು ಬಿತ್ತಿದ ಬೆಳಕು, ಹೀಗೆ ವಾಹನಗಳ ರೂಪದಲ್ಲಿ ಶರವೇಗದಲ್ಲಿ ಓಡುವುದನ್ನು ನೋಡಿದ ರೈತನಿಗೆ ಗಾಬರಿಯಾಗುತ್ತದೆ.

ನಾವು ಬೆಳಕು ಬಿತ್ತದೇ ಬೆಳಕು ಬೆಳೆಯಬಲ್ಲೆವು ಎಂದು ನಂಬಿದವರು. ಬೆಳಕೆಂದರೆ ವೇಗ, ಬೆಳಕೆಂದರೆ ಬೆತ್ತಲೆ, ಬೆಳಕೆಂದರೆ ವ್ಯಾಮೋಹ, ಬೆಳಕೆಂದರೆ ಕ್ರೌರ್ಯ. ಬೆಳಕಿನಲ್ಲೇ ಕತ್ತಿಯ ಅಂಚು, ಕೆಂಪು ರಕ್ತ, ಕುಣಿಯುತ್ತಿರುವವಳ ಹೊಳೆಯುವ ಬಟ್ಟೆ, ಕಳಚಿಬೀಳುವ ಮುಗ್ಧತೆ ನಮಗೆ ಕಾಣಿಸುತ್ತದೆ. ಕತ್ತಲಿಗೆ ಯಾವ ಅಂಜಿಕೆಯೂ ಇಲ್ಲ. ಅಲ್ಲೆಲ್ಲೋ ದೂರದಲ್ಲಿ ಯಾರೋ ಇದ್ದಾರೆ ಎಂಬ ನಂಬಿಕೆ ಇಟ್ಟುಕೊಂಡು ಕಗ್ಗತ್ತಲಲ್ಲಿ ಬದುಕುವುದು ಸುಖ. ಅಲ್ಲಿ ಯಾರಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಆತಂಕ ಮತ್ತು ಆಮಿಷಗಳೆರಡೂ ಚಿಗುರುತ್ತದೆ. ಒಂದು ನಮ್ಮನ್ನು ಕೊಲ್ಲುತ್ತದೆ. ಮತ್ತೊಂದು ನಮ್ಮನ್ನು ಕೊಲೆಗಾರರನ್ನಾಗಿ ಮಾಡುತ್ತದೆ.

***

ಕತ್ತಲೆಗೆ ನಮಿಸೋಣ. ಕತ್ತಲನ್ನು ಆರಸೋಣ. ಬೆಳಕಿನಿಂದ ಕತ್ತಲೆಯತ್ತ ನಡೆಯೋಣ. ಅಜ್ಞಾನಿಗಳಾಗೋಣ. ಮುಗ್ಧರಾಗೋಣ. ಏನನ್ನೂ ನೋಡದೇ ಈ ಕಣ್ಣುಗಳು ಪವಿತ್ರವಾಗಲಿ. ನೋಡಬೇಕು ಅನ್ನುವ ಆಸೆ ಹಾಗೆ ಉಳಿದುಕೊಳ್ಳಲಿ. ಓದಲಿಕ್ಕೆ ಬಹಳಷ್ಟಿದೆ ಎಂಬ ಆಸೆ, ಓದಿ ಮುಗಿದಿದೆ ಎಂಬ ಅಹಂಕಾರವನ್ನು ಮೆಟ್ಟಿ ನಿಲ್ಲಲಿ.

ದೀಪಾವಳಿಯ ದಿನವಾದರೂ ಹಣತೆ ಉರಿಸುವುದಕ್ಕೆ ನಿರಾತಂಕ ಕತ್ತಲಿರಲಿ.

‍ಲೇಖಕರು G

November 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Anonymous

    ವಾಹ ಜೋಗಿಜಿ ಅನುಪಮ ಬರಹ – ಅಖಂಡ ಕತ್ತಲೆಯ ಕೊನೆಗಾಣಿಸಲು ಬೆಳಕಿನ ಒಂದು ಚುಕ್ಕೆ ಸಾಕು -ಅಂತೆಯೆ ಎಷ್ಟೆ ಸೊಕ್ಕಿನ ಬೆಳಕಿಗೂ ಕತ್ತೆಲೆಯನ್ನು ಸಂಪೂರ್ಣ ಕೊನೆಗಾಣಿಸಲಾಗದು. ಎಷ್ಟೊಂದು ಗಾಢವಾಗಿ ತಟ್ಟುವ ಬರಹವಿದು.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  2. Prabhakar Nimbargi

    ಬೆಳಕಿನಿಂದ ಕತ್ತಲೆಯತ್ತ ನಡೆಯೋಣ. ಮುಗ್ಧರಾಗೋಣ.ಏನನ್ನೂ ನೋಡದೇ ಈ ಕಣ್ಣುಗಳು ಪವಿತ್ರವಾಗಲಿ. ನೋಡಬೇಕು ಅನ್ನುವ ಆಸೆ ಹಾಗೆ ಉಳಿದುಕೊಳ್ಳಲಿ. ಓದಲಿಕ್ಕೆ ಬಹಳಷ್ಟಿದೆ ಎಂಬ ಆಸೆ, ಓದಿ ಮುಗಿದಿದೆ ಎಂಬ ಅಹಂಕಾರವನ್ನು ಮೆಟ್ಟಿ ನಿಲ್ಲಲಿ.- What a thought provoking article! Innocence is very often a bliss. Hats off to you!

    ಪ್ರತಿಕ್ರಿಯೆ
  3. Pramod

    ವಿಜ್ಙಾನದಿ೦ದ ಶುರುವಾಗಿ ಕುತೂಹಲ ಹೆಚ್ಚಾಗಿ, ಓದುತ್ತಾ ಖಿನ್ನತೆ ತ೦ದಿತು. ನ೦ತರ ವಿಕಟ ರಸ. ನಗಬೇಕೋ ಅಳಬೇಕೋ ಎನ್ನುವ ಸ೦ಧಿಗ್ದತೆ. ಬೆತ್ತಲಾಗಿ ಬಯಲು ಸಿಕ್ಕಿ ಛೇ ಎನ್ನುವ ಪರಿಸ್ಥಿತಿ. ಈ ಬೆಳಕೆನ್ನುದು ಬ್ಲ್ಯಾಕ್ ಹೋಲ್ ತರಹ, ನಮ್ಮನ್ನೆಲ್ಲ ಅದೇ ತನ್ನತ್ತ ಎಳೆದುಕೊಳ್ಳುತ್ತಿದೆ. ಬೆಳಕಿನೆಡೆಗೆ೦ಬ ಕೊಳಕಿನಡೆಗೆ ನಡೆದ ದಾರಿ ಒನ್ ವೇ. ಹಿ೦ಬರಲು ಅವಕಾಶವಿಲ್ಲ. ಒ೦ದು ಸೂಜಿ ಪಿನ್ ಗೆ ಮುಗ್ಧತೆ ಕಳಕೊ೦ಡ ಬಲೂನಿನ೦ತೆ ಈ ಜನ್ಮಕ್ಕಿಲ್ಲ ರಿಸ್ಟಾರ್ಟ್ ಬಟನ್. ತಿಳಿದೂ ತಿಳಿದ೦ತೆ ಇರಬೇಕೇ? ತಿಳಿದದ್ದು ಸಾಕು ಎ೦ದಿರಬೇಕೆ? ಯಾವುದು ಬೆಳಕು? ಏನು ಕತ್ತಲೆ. ಸತ್ಯ ಮಿಥ್ಯಗಳ ನಡುವೆ ಅ೦ಗೈಯಷ್ಟು ದೂರ!

    ಅಧ್ಬುತ ಲೇಖನ!!

    ಪ್ರತಿಕ್ರಿಯೆ
  4. chandrakala.g.bhat

    ಮುಗ್ಧತೆ ಕಳಚಿಬೀಳಿಸುವ ಬೆಳಕು …..ಬೆಳಕನ್ನು ಅನುಭವಿಸಲು ಬೇಕಾಗುವ ಕತ್ತಲೆ …ಮನ ಮುಟ್ಟುವ, ಮನ ತಟ್ಟುವ, ಬರಹ.

    ಪ್ರತಿಕ್ರಿಯೆ
  5. Anantha Ramesh

    ‘ಕತ್ತಲೆ ಎದೆತಟ್ಟಿಕೊಂಡು ನಾನೇ ಬೆಳಕು ಅನ್ನುತ್ತದೆ. ಅಲ್ಲವೆಂದರೆ ಪ್ಯಾನೆಲ್ ಡಿಸ್ಕಷನ್ ನಡೆಯುತ್ತದೆ.’ ವಿಷಾದ ಛಾಯೆಗಳಲ್ಲಿ ಇಂಥ ಮಿಂಚುಗಳು ಎಲ್ಲಾಕಡೆ ಸತತ ಹರಿದು ಬೆಳಕು ಬಯಲಾಗಿದೆ .

    ಪ್ರತಿಕ್ರಿಯೆ
  6. ಕರ್ಕಿ ಕೃಷ್ಣಮೂರ್ತಿ

    Wow…! This is Jogi ! ಕತ್ತಲೆಗಾಗಿ ಹಪಪಿಸುವ ಮನಸಿಗೆ ಒಂದು ಬೆಳ್ಳಂಬೆಳಗಿನಂತ ಲೇಖನ ಕೊಟ್ಟ ನಿಮಗೆ ಥ್ಯಾಂಕ್ಸ್!

    ಪ್ರತಿಕ್ರಿಯೆ
  7. padma bhat

    wow.. super jogi.. omme e jagattinalliruva belakella maagi kattalu aavarisi matte belaku haridantaayitu..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: