ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಸೋನೆಮಳೆಯಂತೆ..ಜೀವಜಲದಂತೆ..

ದೇಶಭಕ್ತರ ಬಗ್ಗೆ ಬರೆಯಿರಿ, ದೇಶಪ್ರೇಮದ ಕುರಿತು ಹೇಳಿ, ಹೇಗೆ ನಮ್ಮ ಸಂಸ್ಕೃತಿಯನ್ನು ಉಳಿಸಬಹುದು ಎನ್ನುವುದರ ಬಗ್ಗೆ ಮಾತಾಡಿ, ನಮ್ಮನ್ನು ಹುರಿದುಂಬಿಸುವಂಥ ವಿಚಾರಗಳು ಬೇಕು. ಹೀಗಂತ ಬೇಡಿಕೆಗಳನ್ನು ಮುಂದಿಡುವವರಿದ್ದಾರೆ. ಒಂದು ಸೊಗಸಾದ ಭಾವಗೀತೆ ಬರೆಯಿರಿ ಎಂದು ಕವಿಯನ್ನು ಕೇಳಿಕೊಳ್ಳುವವರಿದ್ದಾರೆ. ಪ್ರೇಮಕತೆಗಳನ್ನು ಬರೆದರೆ ಚೆನ್ನಾಗಿರುತ್ತದೆ ಎಂದು ಕತೆಗಾರನನ್ನು ವಿನಂತಿ ಮಾಡಿಕೊಳ್ಳುತ್ತಾರೆ.

ಅದೆಲ್ಲ ಕಷ್ಟವಲ್ಲ. ಗಾಂಧೀಜಿಯನ್ನು ನಾವ್ಯಾರೂ ನೋಡಿಲ್ಲ. ಸುಭಾಷ್ ಚಂದ್ರ ಬೋಸರ ಕುರಿತು ಕೇಳಿದ್ದೇವೆ. ವಿವೇಕಾನಂದ, ಪರಮಹಂಸರ, ರಮಣ ಮಹರ್ಷಿಗಳ ಕುರಿತು ಓದಿದ್ದೇವೆ. ಇವತ್ತಿಗೆ ಯಾರೇನೇ ಅವರ ಕುರಿತು ಬರೆಯಲು ಹೊರಟರೂ ಅದು ಅಭಿಪ್ರಾಯ ಮಾತ್ರವೇ ಆಗಿರುತ್ತದೆ. ಓದಿದ್ದು, ಕೇಳಿದ್ದು, ಚರಿತ್ರೆ, ದಂತಕತೆ ಎಲ್ಲ ಸೇರಿಕೊಂಡು ಅಂಥ ಮಹನೀಯರ ಕುರಿತು ಭಾಷೆ, ಶೈಲಿ ಬಲ್ಲ ಯಾರು ಬೇಕಾದರೂ ಬರೆಯಬಹುದು. ಅದನ್ನು ಮತ್ತೆ ಬರೆಯಲೇಬೇಕು ಎಂದೇನಿಲ್ಲ. ಓದುವ ತುಡಿತ ಇದ್ದವನಿಗೆ ಅವೆಲ್ಲವೂ ಎಲ್ಲೋ ಒಂದು ಕಡೆ ಸಿಗುತ್ತದೆ. ಲೇಖಕ ತೋರುಬೆರಳಾಗಿ ಅವೆಲ್ಲ ಎಲ್ಲಿ ಸಿಗುತ್ತದೆ ಎಂದು ತೋರಿಸಿಕೊಡಬಹುದು. ಕನ್ನಡ ಮಾತ್ರ ಬಲ್ಲ ಓದುಗನಿಗಾಗಿ ಒಂದಷ್ಟನ್ನು ಅನುವಾದಿಸಿಕೊಡಬಹುದು.

ಸಮಯ, ಓದು ಮತ್ತು ಬರೆಯುವ ಕಲೆ ಬಲ್ಲವರು ಮಹನೀಯರ ಜೀವನದ ಮಹೋನ್ನತ ಘಟನೆಗಳನ್ನೆಲ್ಲ ಸಂಗ್ರಹಿಸಿ ಪುಸ್ತಕ ಮಾಡಬಹುದು. ಅದು ಸಾಹಿತ್ಯ ಅನ್ನಿಸಿಕೊಳ್ಳುವುದಿಲ್ಲ. ನಾವೆಲ್ಲ ಚಿಕ್ಕವರಾಗಿದ್ದಾಗ ಕಸ್ತೂರಿ ಮಾಸಪತ್ರಿಕೆಯಲ್ಲಿ ಇವರು ಹೀಗಿದ್ದರು, ಇದುವೆ ಜೀವ- ಇದುವೇ ಜೀವನ ಮಾಲಿಕೆಯಲ್ಲಿ ಇಂಥ ಘಟನೆಗಳು ಪ್ರಕಟವಾಗುತ್ತಿದ್ದವು. ಚಿಕ್ಕ ಬಾಲಕನೊಬ್ಬನ ಧೀಮಂತ ಕಾರ್ಯವೊಂದನ್ನು ಉದಾಹರಿಸಿ ಆ ಬಾಲಕ ಯಾರು ಗೊತ್ತೇ, ಮುಂದೊಂದು ದಿನ ಭಾರತದ ಪ್ರಧಾನಿಯಾಗಿ ಪ್ರಸಿದ್ಧರಾದ ಲಾಲ್ ಬಹಾದೂರ್ ಶಾಸ್ತ್ರೀಜಿ ಎಂದು ಅಂಥ ಕತೆಗಳು ಕೊನೆಗೊಳ್ಳುತ್ತಿದ್ದವು. ಆಯಾ ಕಾಲಕ್ಕೆ ತಕ್ಕಂತೆ ಪ್ರಸಿದ್ಧರ ಹೆಸರುಗಳು ಬದಲಾಗುತ್ತಿದ್ದವು. ಅವವೇ ಘಟನೆಗಳು ಬೇರೆ ಬೇರೆ ಮಹನೀಯರಿಗೆ ಆರೋಪಿಸಲಾಗುತ್ತಿತ್ತು.

ಇವೆಲ್ಲ ವಿರಾಮದ ಓದಿಗೆ, ಬಾಲ್ಯದ ಓದಿಗೆ ಚೆನ್ನಾಗಿರುತ್ತವೆ. ಮಹಾನ್ ನಾಯಕರ ಜೀವನದ ಕುರಿತ ಘಟನೆಗಳನ್ನು ಇಟ್ಟುಕೊಂಡು ಅನೇಕ ಪುಸ್ತಕಗಳು ಬಂದಿವೆ. ರೀಡರ್ಸ್ ಡೈಜೆಸ್ಟಿನ ತುಂಬ ಇಂಥ ಘಟನೆಗಳು ಸಿಗುತ್ತವೆ. ಅಂಕಣ ಬರಹಗಾರರಿಗಂತೂ ಇವು ಸುಲಭವಾಗಿ ಒದಗಿಬರುತ್ತವೆ. ಪಾಟೀಲ ಪುಟ್ಟಪ್ಪ, ಹಾಮಾನಾಯಕ ಮುಂತಾದವರು ಇಂಥ ಧೀಮಂತರ ಉದಾಹರಣೆಗಳನ್ನಿಟ್ಟುಕೊಂಡು ನೂರಾರು ಅಂಕಣಗಳನ್ನು ಬರೆದಿದ್ದಾರೆ.

ಇವು ಸಾಹಿತ್ಯ ಕೃತಿ ಕೊಡುವಂಥ ಒಳನೋಟವನ್ನು ಕೊಡಲಾರವು ಅನ್ನುವುದನ್ನು ನಾವು ಗಮನಿಸಬೇಕು. ಉದಾಹರಣೆಗೆ ಒಬ್ಬ ಪರಿಸರ ವಿಜ್ಞಾನಿಯ ಕತೆಯನ್ನೇ ತೆಗೆದುಕೊಳ್ಳಿ. ಆತನ ಜೀವನಚರಿತ್ರೆಯನ್ನು ಕರ್ವಾಲೋ ಕೃತಿಯ ಜೊತೆ ಹೋಲಿಸಿ ನೋಡಿದಾಗ ನಮಗೆ ವ್ಯತ್ಯಾಸ ಗೊತ್ತಾಗುತ್ತದೆ. ಕರ್ವಾಲೋ ನಮ್ಮನ್ನು ಮತ್ತೊಂದು ಜಗತ್ತಿಗೆ ಕರೆದೊಯ್ಯುತ್ತದೆ ಕರ್ವಾಲೋ ಎಂಬ ವಿಜ್ಞಾನಿ ಲೇಖಕರ ಸೃಷ್ಟಿಯಾಗಿರುವುದರಿಂದ ಆತನಿಗೆ ಈ ಜಗತ್ತಿನಲ್ಲಿ ಸಂಬಂಧಿಕರಿಲ್ಲ, ಮಿತ್ರರಿಲ್ಲ, ಶತ್ರುಗಳಿಲ್ಲ. ಕಾದಂಬರಿಯ ಒಂದು ಪಾತ್ರ ಈ ಜಗತ್ತಿನ ಸಮಸ್ಯೆಗಳ ಜೊತೆ ಗುದ್ದಾಡಬೇಕಿಲ್ಲ. ಕರ್ವಾಲೋ ಮೂಡಿಗೆರೆಯಲ್ಲಿ ಕಾಣಿಸಿಕೊಂಡು ಮಂದಣ್ಣನ ಎಂಬ ಮೂಡಿಗೆರೆಯ ಮುಗ್ಧನನ್ನು ಜೊತೆಗಿಟ್ಟುಕೊಂಡು ಅಲೆದಾಡಿದ್ದರೆ, ಆತನಿಗೆ ನೂರಾರು ಶತ್ರುಗಳು ಸೃಷ್ಟಿಯಾಗುತ್ತಿದ್ದರೋ ಏನೋ. ಕೊನೆಗೂ ಹಾರುವ ಓತಿಯನ್ನು ಹಿಡಿಯಲಾಗಲಿಲ್ಲ ಎನ್ನುವುದು ಅವರ ವೈಫಲ್ಯದಂತೆ ಕಾಣಿಸುತ್ತಿತ್ತು. ಸರ್ಕಾರದ ಸಂಬಳ ಪಡೆಯುವ ವಿಜ್ಞಾನಿಯೊಬ್ಬ ಹೀಗೆ ಕಾಡು ಅಲೆದು ತನ್ನ ವೃತ್ತಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂಬ ದೂರಿನಿಂದ ಹಿಡಿದು, ಮಂದಣ್ಣನನ್ನು ಶೋಷಿಸುತ್ತಿದ್ದಾನೆ ಎಂಬ ಆರೋಪದ ತನಕ ನೂರೆಂಟು ತರಲೆಗಳಿಗೆ ಆತ ಪಕ್ಕಾಗುತ್ತಿದ್ದ.

ಅದೇ ಕೃತಿಯೊಳಗಿನ ಕರ್ವಾಲೋ ಇವೆಲ್ಲವನ್ನೂ ಮೀರಿದವನಂತೆ ಕಾಣುವುದು, ತನ್ನೆಲ್ಲ ಹುಚ್ಚಾಟಗಳ ಸಹಿತ ನಮಗೆ ಇಷ್ಟವಾಗುವುದು ಯಾಕೆಂದು ಊಹಿಸಿ. ಅದು ಸಾಹಿತ್ಯದ ಶಕ್ತಿ. ಪ್ಯಾರ ಎಂಬ ಹುಡುಗ ನಿಮ್ಮ ಮನೆಯಲ್ಲಿದ್ದರೆ ಯಾವತ್ತೋ ಹೊರದಬ್ಬಿಸಿಕೊಳ್ಳುತ್ತಿದ್ದ. ಹಾಗೇ, ಹಡೆವೆಂಕಟನನ್ನು ಸಹಿಸಿಕೊಳ್ಳುವುದು ಸೂರ್ಯನ ಕುದುರೆಯ ನಾಯಕನಿಗೆ ಕಷ್ಟವಾಗುತ್ತಿತ್ತು. ಕಾದಂಬರಿಯಲ್ಲಿ ನಮ್ಮೆಲ್ಲ ಸಿದ್ಧಾಂತಗಳಿಗೆ, ಪ್ರಯೋಗಗಳಿಗೆ ರೂಪಕದಂತೆ ಕಾಣುವ ಅವಸ್ಥೆಯ ಕೃಷ್ಣಪ್ಪ, ನಮ್ಮ ನಡುವಿದ್ದರೆ ಅತ್ಯಂತ ನೀಚನಂತೆ ಬಿಂಬಿತನಾಗುತ್ತಿದ್ದ.

ಒಂದು ಪಾತ್ರದ ಸಣ್ಣತನಗಳನ್ನೂ ತೆವಲುಗಳನ್ನೂ ಅವಗುಣಗಳನ್ನೂ ನಾವು ಮೆಚ್ಚಿಕೊಳ್ಳುವಂತೆ ಮಾಡುವ ಗುಣ ಸಾಹಿತ್ಯಕ್ಕಿದೆ. ಒಂದು ಕೃತಿಯನ್ನು ಓದುವ ಹೊತ್ತಿಗೆ ಅಲ್ಲಿರುವ ಪಾತ್ರ ನಮಗೆ ಉದಾತ್ತವಾಗಿಯೇ ಕಾಣಿಸುತ್ತದೆ. ಪರಸಂಗದ ಗೆಂಡೆತಿಮ್ಮ ಕಾದಂಬರಿಯಲ್ಲಿ ಮನೋಜ್ಞ. ಭುಜಂಗಯ್ಯನ ದಶಾವತಾರಗಳೂ ನಮಗೆ ಆಪ್ಯಾಯಮಾನ. ಅದೇ ಅವನು ನಮ್ಮ ಅಣ್ಣನೋ ತಮ್ಮನೋ ಆಗಿದ್ದರೆ ನಮ್ಮ ಅಖಂಡ ದ್ವೇಷಕ್ಕೆ ತುತ್ತಾಗುತ್ತಿರಲಿಲ್ಲವೇ?

ನಮ್ಮ ನಿತ್ಯಜೀವನದಲ್ಲಿ ಯಾವತ್ತೂ ಪ್ರವೇಶ ಪಡೆಯದ ವ್ಯಕ್ತಿಗಳು ನಮಗಿಷ್ಟವಾಗುವುದಕ್ಕೆ ಅದೇ ಕಾರಣವೋ ಏನೋ. ಅತ್ಯಂತ ವಿಕ್ಷಿಪ್ತರೆಂದು ಚಿತ್ರಿತರಾದ ಪ್ರತಿಭಾವಂತರ ಬಗ್ಗೆ ಓದುವುದು ಖುಷಿ ಕೊಡುತ್ತದೆ. ಅದೇ ಅವರ ಜೊತೆಗೆ ಕೆಲಸ ಮಾಡಬೇಕಾಗಿ ಬಂದಾಗ, ಅವರ ಜೊತೆ ಸಂಬಂಧವೊಂದು ಸ್ಥಾಪಿತವಾದಾಗ ಸಣ್ಣದೊಂದು ಅಸಮಾಧಾನ ಮೂಡದೇ ಇರದು. ಕೈಲಾಸಂ ಕುಡಿತ, ಸಿಗರೇಟಿನ ಹೊಗೆ, ಮದ್ಯದ ಖಾಲಿ ಬಾಟಲ್ಲುಗಳುಗಳಿಂದ ಕೊಳೆಕೊಳೆಯಾದ ರೂಮು ಇವನ್ನೆಲ್ಲ ಕಲ್ಪಿಸಿಕೊಳ್ಳುವುದು ಖುಷಿ ಕೊಡುತ್ತದೆ. ಇಂಥ ಕತೆಗಳನ್ನು ಕೇಳುವ ಹೊತ್ತಿಗೆ ಅವರ ಸಂಬಂಧಿಕರಿಗೆ ಏನನ್ನಿಸಬಹುದು ಎಂದು ನಾವು ಯೋಚಿಸುವುದಕ್ಕೂ ಹೋಗುವುದಿಲ್ಲ.

ಗೆಳೆಯರು, ಸಾರ್ವಜನಿಕ ಬದುಕು, ಸಂಭ್ರಮ, ವಿಕ್ಷಿಪ್ತ ನಡವಳಿಕೆ- ಇವನ್ನೆಲ್ಲ ಮೀರಿದ ಬದುಕೂ ಒಂದಿದೆ. ಗಾಂಧೀಜಿ ಮಗನಿಗೆ ತಮಗೆ ಬಂದ ಪತ್ರದ ಹಿಂಬದಿಯಲ್ಲಿರುವ ಖಾಲಿ ಜಾಗದಲ್ಲಿ ಪತ್ರ ಬರೆ ಎಂದು ಹೇಳಿದ್ದನ್ನು ಒಂದು ಆದರ್ಶವೆಂದು ಸ್ವೀಕರಿಸಬಹುದು. ನೀವು ನಿಮ್ಮ ಮಕ್ಕಳಿಗೆ ಹಾಗೆ ಮಾಡಲು ಹೇಳಿ ನೋಡಿ. ಮರುಕ್ಷಣವೇ ನೀವು ಅವರ ಪಾಲಿಗೆ ಶತ್ರುಗಳಾಗಿಬಿಡುತ್ತೀರಿ. ಚಪ್ಪಲಿ ಹಾಕದೇ ನಡೆಯುವುದು ತನ್ನ ತಾತ್ವಿಕ ನಿಲುವು ಎನ್ನುವ ವ್ಯಕ್ತಿ ಕೂಡ ಮಕ್ಕಳಿಗೆ ಚಪ್ಪಲಿ ಕೊಡಿಸಲೇಬೇಕಾಗುತ್ತದೆ. ನಮ್ಮೂರಲ್ಲಿ ಸೈಕಲ್ಲಿನಲ್ಲಿ ಹೋಗುವುದು ಆರೋಗ್ಯಕರ ಮತ್ತು ಅಮೂಲ್ಯವಾದ ಇಂಧನವನ್ನು ಉಳಿಸುವ ಕ್ರಮ ಎಂದು ಭಾಷಣ ಮಾಡುತ್ತಿದ್ದವರ ಮಗ ದುಬಾರಿ ಬೈಕಿನಲ್ಲಿ ಓಡಾಡುತ್ತಿದ್ದ. ಹೀಗೆ ತಲೆಮಾರಿನಿಂದ ತಲೆಮಾರಿಗೆ ಆದ್ಯತೆಗಳು ಬದಲಾಗುತ್ತವೆ.ಅದೇ ಕಾರಣಕ್ಕೆ ಮಕ್ಕಳ ನಡವಳಿಕೆಯನ್ನು ನೋಡಿ ಅವರ ಹೆತ್ತವರ ನಿಲುವುಗಳನ್ನು ಅನುಮಾನಿಸಕೂಡದು. ಮೇಷ್ಟ್ರ ಮಗ ಪರೀಕ್ಷೆಯಲ್ಲಿ ಫೇಲಾಗಬಾರದು ಅಂತೇನೂ ಇಲ್ಲವಲ್ಲ.

ಇವೆಲ್ಲವನ್ನೂ ಒಳಗಿಟ್ಟುಕೊಂಡೇ ನಾವೊಂದು ಸಾಹಿತ್ಯ ಕೃತಿಯನ್ನು ಓದುತ್ತೇವೆ. ಆ ಕೃತಿ ನಮಗೆ ಕೊಡುವ ಸಂತೋಷವನ್ನು, ನಮಗೆ ಕೊಡುವ ಒಳನೋಟವನ್ನು, ನಮಗೆ ಒದಗಿಸುವ ಧನ್ಯತೆಯನ್ನು ಮತ್ತೊಬ್ಬನಿಗೂ ನೀಡುತ್ತದೆ ಎಂದು ಭಾವಿಸುವುದು ಕಷ್ಟ ಮತ್ತು ಅನಗತ್ಯ. ಸಾಮೂಹಿಕವಾಗಿ ಮೆಚ್ಚುವ ಮನರಂಜನೆಯಾದ ಸಿನಿಮಾ, ಕ್ರಿಕೆಟ್ ಇವುಗಳಿಂದ ಪಡೆಯುವ ಖುಷಿ ಏಕರೂಪದ್ದೇ ಆಗಿರಬಹುದು. ಆದರೆ ಆನಂತರದ ಪರಿಣಾಮ ಮತ್ತು ಅದು ಒಬ್ಬನ ಒಳಜಗತ್ತನ್ನು ಪರಿವರ್ತಿಸುವ ರೀತಿ ಮಾತ್ರ ವಿಭಿನ್ನವಾಗಿರುತ್ತದೆ. ಒಂದಷ್ಟು ಗೆಳೆಯರು ಒಟ್ಟಿಗೇ ಕೂತು ಬಿಯರ್ ಹೀರುತ್ತಾ ಅತ್ಯುತ್ಸಾಹದಿಂದ ಕ್ರಿಕೆಟ್ ನೋಡುವುದು ಆ ಕ್ಷಣದ ಆನಂದ. ಭಾರತ ಗೆದ್ದಾಗ ಕೇಕೆ ಹಾಕಿ ಸಂಭ್ರಮಿಸಿದ್ದೂ ಆ ಕ್ಷಣದ ಹುರುಪು. ಅದಾಗಿ ಮನೆಗೆ ಹೊರಟ ತಕ್ಷಣ ಪ್ರತಿಯೊಬ್ಬರ ಜಗತ್ತು ಬೇರೆ ಬೇರೆಯಾಗುತ್ತದೆ. ಮದುವೆಯಾಗದ ಏಕಾಂಗಿಯ ತಲ್ಲಣ, ಹೃದಯಾಘಾತಕ್ಕೆ ತುತ್ತಾಗಿ ಆಗಷ್ಟೇ ಚೇತರಿಸಿಕೊಂಡವನ ತಳಮಳ, ಮನೆಯಲ್ಲಿ ಹೆಂಡತಿ ಮಕ್ಕಳು ಕಾಯುತ್ತಾರೆ ಎನ್ನುವುದನ್ನು ನೆನಪಿಸಿಕೊಂಡವನ ಪಾಪಪ್ರಜ್ಞೆ, ನಾಳೆಯೇ ಸಾಲ ತೀರಿಸಬೇಕಾದವನ ಅಸಹಾಯಕತೆ –ಇವೆಲ್ಲ ಮತ್ತೆ ಮೇಲ್ಪದರಕ್ಕೆ ಬರುತ್ತವೆ. ಹಾಗಿದ್ದರೆ ಅಷ್ಟೂ ಹೊತ್ತು ಅವೆಲ್ಲವನ್ನೂ ಸಾಮೂಹಿಕ ಸಂಭ್ರಮ ಮರೆಸಿತ್ತೇ?

ಓದು ಕೂಡ ಅಂಥದ್ದೇ ಒಂದು ಮರೆಸುವ ಶಕ್ತಿ. ನಮ್ಮನ್ನು ನಮ್ಮಂತೆಯೇ ಇರಲು ಬಿಡುವ ಕೃತಿ ಆ ಕಾರಣಕ್ಕೆ ಶ್ರೇಷ್ಠ. ಒಂದು ಉತ್ತಮ ಸಾಹಿತ್ಯ ಕೃತಿ ನಮ್ಮನ್ನು ಥಟ್ಟನೆ ಬೇರೇನೋ ಮಾಡುವಂತೆ ಪ್ರೇರೇಪಿಸಲಾರದು. ಆದರೆ ಅಂತರಾಳದಲ್ಲಿ ನಮ್ಮ ಸಂವೇದನೆಯನ್ನು ತಿದ್ದಬಹುದು. ಅಮ್ಮನ ಕುರಿತು ಭಾವುಕವಾಗಿ ಬರೆದ ಪುಸ್ತಕವೊಂದು ಆ ಕ್ಷಣಕ್ಕೆ ನಮ್ಮಮ್ಮನನ್ನೂ ಗಾಢವಾಗಿ ಪ್ರೀತಿಸಬೇಕು ಎನ್ನುವ ಭಾವನೆ ಹುಟ್ಟುವಂತೆ ಮಾಡಬಹುದು. ಆದರೆ ಲಂಕೇಶರ ಅವ್ವ ಕವಿತೆ, ಅವ್ವನ ಕುರಿತು ಬೇರೆಯೇ ಒಳನೋಟವನ್ನು ನೀಡುತ್ತದೆ. ಅವ್ವನ ಇರುವಿಕೆ, ಅವ್ವನ ಕಣ್ಮರೆ ಮತ್ತು ಅವ್ವನ ನೆನಪನ್ನು ಗಾಢಗೊಳಿಸುತ್ತದೆ.

ಧೀಮಂತ ನಾಯಕರೊಬ್ಬರು ತಮ್ಮ ಮೊದಲ ತಿಂಗಳ ಸಂಬಳದಲ್ಲಿ ಅಮ್ಮನಿಗೊಂದು ಸೀರೆ ತಂದುಕೊಟ್ಟರು ಎನ್ನುವುದನ್ನು ಓದಿ ಅದನ್ನು ಪಾಲಿಸುವುದಕ್ಕೂ, ಉಮಾಪತಿಯ ಸ್ಕಾಲರ್ಶಿದಪ್ ಯಾತ್ರೆ ಕತೆಯನ್ನು ಓದಿ ಅವ್ವನನ್ನು ಮನದುಂಬಿಕೊಳ್ಳುವುದಕ್ಕೂ ಇರುವ ವ್ಯತ್ಯಾಸವೇ ಸಾಹಿತ್ಯ ಮತ್ತು ಧೀಮಂತರ ಜೀವನದ ಘಟನೆಗಳನ್ನು ಓದುವುದಕ್ಕಿರುವ ಅಂತರ. ಬದುಕಲು ಕಲಿಯಿರಿ, ಅವರು ಹೀಗೆ ಮಾಡಿದರು, ಇವರು ಹೀಗಿದ್ದರು ಅನ್ನುವುದನ್ನು ಓದಿ ಖುಷಿಪಡಬಹುದು. ಅದರಾಚೆಗೆ ನಮ್ಮ ಜೀವನ ನಮ್ಮದು. ಅದೇ ಕಾರಣಕ್ಕೆ ಅಣಿಮುತ್ತುಗಳೂ, ಜೀವನೋತ್ಸಾಹ ತುಂಬುವ ಸ್ವಾರಸ್ಯಕರ ಕತೆಗಳೂ ಜೋರಾಗಿ ಸುರಿವ ಮಳೆಯಂತೆ. ಅದು ಸುರಿದು ಹರಿದು ಹೋಗುತ್ತದೆ. ಸಾಹಿತ್ಯ ಯಾವತ್ತಿದ್ದರೂ ಸೋನೆಮಳೆಯಂತೆ. ಅದು ಮನಸ್ಸನ್ನು ನಿಧಾನವಾಗಿ ನೆನೆಸುತ್ತಾ ಹೋಗುತ್ತದೆ. ಬಿದ್ದ ನೀರು ಇಂಗುತ್ತದೆ. ಅಂತರ್ಜಲವಾಗುತ್ತದೆ.

 

 

‍ಲೇಖಕರು G

1 April, 2011

4 Comments

  1. venkatakrishna.kk

    ನಿಜ,
    ಅಕ್ಷರಗಳು ಅಕ್ಷರವಾಗುವುದು
    ಸಾಹಿತ್ಯದಲ್ಲೇ..

  2. subhanu

    ಪ್ರೀತಿಯ ಗಿರೀಶ್ ರಾವ್ ಅವರಿಗೆ ನಮಸ್ಕಾರಗಳು.
    ಇಂದು ‘ಅವಧಿ’ಯಲ್ಲಿ ನಿಮ್ಮ ಸೋನೆ ಮಳೆಯಂತೆ.. ಜೀವ ಜಲದಂತೆ.. ಬರಹ ಓದಿದೆ, ಇಷ್ಟವಾಯ್ತು.
    ನಿಮ್ಮ ಬರಹದ ಶೈಲಿ ನನಗೆ ಹಿಡಿಸಿದೆ. ನೀವು ಬರೆಯುವ ಬರಹಗಳು ನನಗೆ ಸ್ಫೂರ್ತಿ ನೀಡುತ್ತವೆ.
    ಧನ್ಯವಾದಗಳು, ಸುಭಾನು ರಾರಾವಿ

  3. Santosh

    Just great…. 🙂

  4. Santosh

    Akshragalu.. shabdagalaagi… bhavane galaagi edeyaladalli iliyuvadu saahitya dalle….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading