ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಐ ಹೇಟ್ ಯೂ..ಐ ಹೇಟ್ ಯೂ..

ಈ ಮಾತಿಗೆ ಯಾವ ಯಾವ ಸಂದರ್ಭದಲ್ಲಿ ಏನೇನು ಅರ್ಥ ಬರೋದಕ್ಕೆ ಸಾಧ್ಯ ಎಂದು ಯೋಚಿಸುತ್ತಾ ಕೂತೆ. ನಿಜಕ್ಕೂ ಯಾರನ್ನಾದರೂ ದ್ವೇಷಿಸುವವನು, ನಾನು ನಿನ್ನನ್ನು ದ್ವೇಷಿಸುತ್ತೇನೆ ಅನ್ನುವುದಿಲ್ಲ. ನಿಜವಾದ ದ್ವೇಷ ಇದ್ದರೆ ಅದು ಮಾತಲ್ಲಿ ವ್ಯಕ್ತವಾಗುವುದೂ ಇಲ್ಲ. ಆದ್ದರಿಂದ ಐ ಹೇಟ್ ಯೂ ಅನ್ನುವ ಮಾತಿಗೆ ಅರ್ಥವಿಲ್ಲ.

ಯಾವ ಯಾವ ಸ್ತರದಲ್ಲಿ ಈ ಮಾತನ್ನು ಹೇಳೋದಕ್ಕೆ ಸಾಧ್ಯ ಎಂದು ನೋಡಿದರೆ, ಏನೂ ಹೊಳೆಯಲೇ ಇಲ್ಲ. ಭಾರತವನ್ನು ಕುರಿತು ಪಾಕಿಸ್ತಾನ ಈ ಮಾತನ್ನು ಹೇಳೋದಕ್ಕೆ ಸಾಧ್ಯವಾ? ಅದು ಭಾರತವನ್ನು ದ್ವೇಷಿಸುತ್ತಿದ್ದರೂ ಕೂಡ, ಆ ಮಾತನ್ನು ಒಂದು ದೇಶ ಉಚ್ಚರಿಸಲಾರದು. ದ್ವೇಷಕ್ಕೆಂಬಂತೆ ಕ್ರಿಕೆಟ್ ಆಡುವ ಪಾಕಿಸ್ತಾನ- ಭಾರತದ ಕ್ರಿಕೆಟ್ ಆಟಗಾರರು ಹಾಗನ್ನುತ್ತಾರಾ? ಖಂಡಿತಾ ಇಲ್ಲ. ಅವರು ಕೈ ಕುಲುಕಿಕೊಂಡೇ ಓಡಾಡುತ್ತಾರೆ.

ಹೋಗಲಿ ನಮಗೆ ತುಂಬ ಹಿಂಸೆ ಕೊಡುವ ಯಾರಿಗಾದರೂ ಆ ಮಾತು ಹೇಳುತ್ತೇವಾ ನಾವು ? ಇಲ್ಲ, ಪೀಡಿಸುವ ಬಾಸು, ಕಾಟ ಕೊಡುವ ಸಹೋದ್ಯೋಗಿ, ಕಾಡುವ ನೆರೆಮನೆಯಾತ, ಯಾರಿಗೂ ನಾವು ಐ ಹೇಟ್ ಯೂ ಅನ್ನುವುದಿಲ್ಲ. ಅದರ ಬದಲು ಅವರು ಎದುರು ಸಿಕ್ಕಾಗ ನಗುತ್ತಲೇ ಮಾತಾಡುತ್ತೇವೆ. ಒಳಗೊಳಗೇ ಕತ್ತಿ ಮಸೆಯುತ್ತೇವೆ. ಐ ಹೇಟ್ ಹಿಮ್ ಅಂತ ಮತ್ತೊಬ್ಬರ ಹತ್ತಿರ ಹೇಳುತ್ತೇವೆ. ಆದರೆ ನೇರವಾಗಿ ಯಾರ ಮುಖಕ್ಕೂ ರಾಚುವಂತೆ ಹೇಳುವುದಿಲ್ಲ.

ಸುಮ್ಮನೆ ಯೋಚಿಸಿ ನೋಡಿ, ನಾವು ಐ ಹೇಟ್ ಯೂ ಅನ್ನುವುದು ಪ್ರೀತಿಸುವವರಿಗೆ ಮಾತ್ರ. ನಾವು ತುಂಬಾ ಪ್ರೀತಿಸುವ ಗೆಳೆಯನ ಮೇಲೋ ಗೆಳತಿಯ ಮೇಲೋ ಸಿಟ್ಟು ಬಂದಾಗ ಐ ಹೇಟ್ ಯೂ ಅನ್ನುತ್ತೇವೆ. ಅದರ ಅರ್ಥ ದ್ವೇಷಿಸುತ್ತೇನೆ ಅಂತಲ್ಲ. ಆ ಕ್ಷಣಕ್ಕೆ ನಿನ್ನ ವರ್ತನೆ ಸರಿಯಿಲ್ಲ. ನೀನು ಮಾಡಿದ ಕೆಲಸದಿಂದ ಸಿಟ್ಟು ಬಂದಿದೆ ಅನ್ನುವುದಷ್ಟೇ ಅದರ ಅರ್ಥ. ಅಂದರೆ ಐ ಹೇಟ್ ಯೂ ಅನ್ನುವುದನ್ನು ನಾವು ಪ್ರೀತಿಸುವವರಿಗೆ ಮಾತ್ರ ಹೇಳಬಹುದು.

ಸಂಭಾಷಣೆ ಬರೆಯುವುದು ಹೇಗೆ ಎಂಬ ಪುಟ್ಟ ಪುಸ್ತಕವೊಂದನ್ನು ಬರೆಯುತ್ತಿದ್ದಾಗ ಇದೆಲ್ಲ ಹೊಳೆಯಿತು. ಅವಳು ಅವನನ್ನು ತೊರೆದು ಹೋಗುತ್ತಿದ್ದಾಳೆ. ಇಬ್ಬರೂ ಜಗಳವಾಡಿ ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಹೊಸಿಲು ದಾಟುವ ಮುನ್ನ ಅವರಿಬ್ಬರ ಮಧ್ಯೆ ನಡೆಯುವ ಮಾತುಕತೆ ಹೇಗಿರಬೇಕು ಎಂದು ಒಂದು ಉದಾಹರಣೆ ಕೊಡಲು ಯತ್ನಿಸಿದೆ-

ಅವನು- ನೀನು ಹೊಸಿಲು ದಾಟಿದ್ರೆ ಮತ್ತೆ ಒಳಗೆ ಕಾಲಿಡೋ ಹಾಗಿಲ್ಲ.

ಅವಳು- ಮನಸಿನ ಹೊಸಿಲು ಯಾವತ್ತೋ ದಾಟಿದ್ದಾಗಿದೆ. ಇದನ್ನು ದಾಟೋದು ಏನು ಮಹಾ?

ಅವನು- ನೀನು ಬುದ್ಧಿವಂತೆ ಅನ್ನೋ ಅಹಂಕಾರ ನಿಂಗೆ…

ಅವಳು- ಅಹಂಕಾರ ಇರೋದು ಬುದ್ಧಿವಂತರು ಅಂದ್ಕೊಂಡಿರೋರಿಗೆ, ಬುದ್ಧಿವಂತರಿಗಲ್ಲ.

ಬರೆದಾದ ಮೇಲೆ ಇದು ಎಷ್ಟು ಅಸಹಜ ಮತ್ತು ತಮಾಷೆಯಾಗಿದೆ ಅನ್ನಿಸಿ ಡಿಲೀಟ್ ಮಾಡಿದೆ. ಹೊರಟು ನಿಂತವಳು ಜಗಳ ಆಡುವುದಿಲ್ಲ. ಜಗಳ ಆಡುವುದು ಸಮಸ್ಯೆ ಬಗೆಹರಿಸುವುದಕ್ಕೆ. ಸ್ಹೇಹ ಕಡಿದುಕೊಳ್ಳುವುದಕ್ಕಲ್ಲ ಎನ್ನುವುದೆಲ್ಲ ಹೊಳೆಯತೊಡಗಿತು.

ಅವಳು- ನಾನು ಹೋಗ್ತಾ ಇದ್ದೀನಿ.. ಗುಡ್ ಬೈ

ಅವನು- ಗುಡ್ ಲಕ್.

ಅವಳು – ಮತ್ತೆ ನಾವು ಭೇಟಿ ಆಗೋಲ್ಲ ಅನ್ಸುತ್ತೆ.

ಅವನು- ಬಸ್ ಸ್ಟಾಂಡಲ್ಲೋ, ರೇಲ್ವೇ ಸ್ಟೇಷನ್ನಿನಲ್ಲೋ, ಬಿಗ್ ಬಜಾರಿನಲ್ಲೋ, ಕಾಫಿಡೇನಲ್ಲೋ ಭೇಟಿ ಆಗಬಹುದು. ಅಪರಿಚಿತರ ಥರ.

(ಎಂಟು ವರ್ಷದ ಹಿಂದೆ ಹಾಗೇ ಭೇಟಿ ಆಗಿದ್ವಿ- ಅಪರಿಚಿತರ ಥರ. ಹಾಗೇ ಇದ್ದುಬಿಟ್ಟಿದ್ರೆ ಕನಿಷ್ಟ ಕುತೂಹಲ ಆದ್ರೂ ಉಳ್ಕೊಂಡಿರೋದು – ಎಂದು ಅನ್ನಬೇಕು ಅನ್ನಿಸಿತು ಆಕೆಗೆ. ಅನ್ನಲಿಲ್ಲ)

ಹೀಗೆ ಮಾತುಗಳು ಮನಸ್ಸಲ್ಲೇ ಉಳಿದರೆ ಹೇಗೆ. ಸಿನಿಮಾದಲ್ಲಿ ಅದನ್ನು ಸ್ವಗತವೆಂಬಂತೆ ತೋರಿಸೋದಾ, ಮತ್ತೆರಡು ಪಾತ್ರಗಳು ಆಡಿಕೊಂಡಂತೆ ತೋರಿಸೋದಾ, ಅವಳು ಅಭಿನಯದಲ್ಲಿ ಆ ಮಾತು ಹೊಮ್ಮುವಂತೆ ಮಾಡಬೇಕಾ, ಮಾತಲ್ಲದ ಮಾತು ಎಷ್ಟು ಮಂದಿಯನ್ನು ತಲುಪೀತು- ಹೀಗೆಲ್ಲ ಯೋಚಿಸುತ್ತಾ ಕೂತು ದಿನ ಕಳೆಯಿತು.

ಪುಸ್ತಕ ಸಿದ್ಧವಾಗುತ್ತಿದೆ.

-2-

ಒಳ್ಳೆಯ ಭಾವ ತನಗೆ ಬೇಕಾದ ಅಭಿವ್ಯಕ್ತಿಯನ್ನು ತಾನಾಗೇ ಪಡಕೊಳ್ಳತ್ತದೆ ಅನ್ನುವ ಬಗ್ಗೆ ಎರಡು ಮಾತಿಲ್ಲ. ಕವಿತೆಗೆ ಮೈ ಕೊಡುವುದು ಪದವೇ, ಲಯವೇ, ಛಂದಸ್ಸೇ ಓದುವ ಮನಸ್ಸೇ. ಕುರಿಗಳು ಸಾರ್ ಕುರಿಗಳು ಪದ್ಯಕ್ಕೆ ಅದರದ್ದೇ ಆದ ಸೊಗಸಿದೆಯಲ್ಲ. ಅದರಲ್ಲಿ ಆದಿಪ್ರಾಸವಾಗಲೀ, ಅಂತ್ಯಪ್ರಾಸವಾಗಲೀ ಎಲ್ಲರೂ ಅಂದುಕೊಂಡಿರುವಂಥ ಲಯಬದ್ಧತೆಯಾಗಲೀ ಇಲ್ಲ. ಆದರೆ ಆ ಆಕೃತಿಯೊಳಗೇ ಒಂದು ಲಯವಿದೆ;

 

ನಮ್ಮ ಕಾಯ್ವ ಕುರುಬರು

ಪುಟಗೋಸಿಯ ಮೊನ್ನೆ ತಾನೇ ಕಿತ್ತು ಪಂಚೆಯುಟ್ಟವರು

ಶಾನುೋಗ ಗೀಚಿದ್ದಕ್ಕೆ ಹೆಬ್ಬೆಟ್ಟನ್ನು ಒತ್ತುವವರು

ಜಮಾಬಂದಿಗಮಲ್ದಾರ ಬರಲು ನಮ್ಮೊಳೊಬ್ಬನನ್ನ

ಮೆಚ್ಚಿ, ಮಸೆದ ಮಚ್ಚ ಹಿರಿದು ಕಚಕ್ಕೆಂದು ಕೊಚ್ಚಿ ಕತ್ತ

ಬಿರಿಯಾನಿಯಾ ಮೆಹರುಬಾನಿಯ ಮಾಡಿ ಕೈಯ ಜೋಡಿಸುತ್ತಾ

ಕಿಸೆಗೆ ಹಸಿರು ನೋಟು ತುರುಕಿ ನುಡಿಗೆ ಬೆಣ್ಣೆ ಹಚ್ಚುವವರು

 

ಅನ್ನುವ ಸಾಲನ್ನು ಓದುತ್ತಿದ್ದ ಹಾಗೆ ಅದರ ಅರ್ಥಸಂಪನ್ನತೆ, ವ್ಯಂಗ್ಯದಿಂದಾಗಿಯೇ ಅದಕ್ಕೊಂದು ಮೈ ಒದಗುತ್ತದೆ. ಇಂಥ ಪದ್ಯಗಳನ್ನು ಓದುವ ಹೊತ್ತಿಗೆ ಪ್ರಾಸದಿಂದಲೇ ಗಮನ ಸೆಳೆಯುವ ಪದ್ಯಗಳು ನಿರಾಸೆ ಮೂಡಿಸುತ್ತವೆ;

 

ನೀರು ತುಂಬಿದ ಮಣ್ಣ ಪಾತಿಯೆ ಕಂದರಿಗೆ ಕದಲಾರತಿ

ನೂರು ಕುಡಿಗಳ ದೀಪವೃಕ್ಪವೆ ಅಮ್ಮನೆತ್ತುವ ಆರತಿ

ಯಾವುದೋ ಸೋಬಾನೆ ಬಾನೇ ತುಂಬಿ ತುಳುಕಿದ ಝೇಂಕೃತಿ

ತುಟಿಯ ಬಟ್ಟಲು ಸುರಿವ ಅಮೃತಕೆ ಎಲ್ಲಿ ಇದೆಯೋ ಇತಿಮಿತಿ?

 

*****

ಕಾವ್ಯದ ಮೈಮನಗಳ ಮಾತನ್ನು ನೆನಪಿಸಿದ್ದು ನೀಲು ಕಾವ್ಯ. ತನ್ನ ಪತ್ರಿಕೆಯ ಪುಟಗಳ ಬೇಸರ ನೀಗಿಸಲು ಲಂಕೇಶರು ಬರೆದ ಪುಟ್ಟ ಪುಟ್ಟ ಸಾಲುಗಳಿವು. ಇವು ಈಗ ಅನೇಕರು ಮೆಚ್ಚಿಕೊಳ್ಳುವ ಹಾಗೆ ಧ್ಯಾನಿಸಿ ಬರೆದ ಸಾಲುಗಳೇನಲ್ಲ. ಕಾವ್ಯದ ನಿಗೂಢತೆ, ಗಾಢತೆ ಮತ್ತು ಸಂದಿಗ್ಧತೆ ಇಲ್ಲಿಯ ಪದ್ಯಗಳಿಗೆ ದೊರಕೊಂಡಿದ್ದರೆ ಅದು ಕೇವಲ ಆಕಸ್ಮಿಕ.

ಹಾಗಿದ್ದರೂ ಪತ್ರಿಕೆ ಓದುತ್ತಿದ್ದ ಎಲ್ಲರನ್ನೂ ಬೆರಗುಗೊಳಿಸಿದ್ದು ಈ ಸಾಲುಗಳ ಹೆಗ್ಗಳಿಕೆ. ಅವಕ್ಕೆ ಸೊಗಸಾದ ರೇಖಾಚಿತ್ರ ಬರೆಯುತ್ತಿದ್ದ ಹಾದಿಮನಿ, ಲಂಕೇಶರ ಹಸ್ತಾಕ್ಪರದಲ್ಲಿದ್ದ ಅಸ್ಪಷ್ಟತೆ ಕೂಡ ಈ ಕಾವ್ಯದ ಮೆಚ್ಚುಗೆಗೆ ಕಾರಣ ಆಗಿರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಲಂಕೇಶರು ನೀಲು ಎಂಬ ತಮ್ಮೊಳಗಿನ ಕವಿಗೆ ಸ್ವಂತ ಐಡೆಂಟಿಟಿ ಕೊಟ್ಟುಬಿಟ್ಟರು. ನೀಲು ಯಾರು ಅನ್ನುವ ದೂರದ ಓದುಗನ ಕುತೂಹಲ, ನೀಲು ಲಂಕೇಶರೇ ಇರಬೇಕು ಅನ್ನುವ ಅನುಮಾನ, ಅದು ಲಂಕೇಶರೇ ಅನ್ನುವ ಸ್ಪಷ್ಟತೆಯ ನಡುವೆಯೇ ನೀಲು ಕ್ರಮೇಣ ಇಷ್ಟವಾಗುತ್ತಾ ಹೋದ ಕಾವ್ಯಕನ್ನಿಕೆ!

ಒಂದಷ್ಟು ನೀಲು ಸಾಲುಗಳನ್ನು ನೋಡೋಣ;

-1-

ಸಿನಿಮಾದಲ್ಲಿ ಬೆಟ್ಟದಿಂದ ಬೆಟ್ಟಕ್ಕೆ

ಹಾರುವ ರಸಿಕರಾಜನ ಮೈ

ಅವನದಲ್ಲ ಎಂದು ಕೇಳಿ

ನನಗೆ ಕಣ್ಣೀರು ಬಂತು,

ನಗಬೇಡಿ.

-2-

ಸತ್ತವರ ಬಗ್ಗೆ ಅಳುವವರೆಲ್ಲ

ನಿಜಕ್ಕೂ ತಮ್ಮ ನಶ್ವರತೆಯ ಬಗ್ಗೆ

ಹೆದರಿದವರು ಎಂಬುದು

ನನ್ನ ಮುಗ್ಧ ತಿಳುವಳಿಕೆ

-3-

ಮೊನ್ನೆ ಮನಿಲಾದಲ್ಲಿ ಸರ್ವಾಧಿಕಾರಿ

ಮಾರ್ಕೋಸನ ಪುತ್ರಿಯ ಮದುವೆಗೆ

ಭಟ್ಟಂಗಿಗಳು

ನಿಜವಾದ ಬಳ್ಳಿಗೆ

ಕಾಗದದ ಹೂ ಅಂಟಿಸಿ ಅಲಂಕರಿಸಿದ್ದರು

-4-

ಮೆಚ್ಚಿದವನಿಗೆ ತನ್ನ ಪ್ರೇಯಸಿಯ

ಎತ್ತರ, ನಡಿಗೆ, ನೋಟ

ಎಲ್ಲಕ್ಕಿಂತ

ಒಟ್ಟು ಪ್ರೇಯಸಿಯೇ ಇಷ್ಟ.

-5-

ಹಚ್ಚ ಹಸಿರು ತೋಪಿನ ಗೋರಿಯಿಂದ

ಕ್ಪಣ ಎದ್ದ ವೆಂಕಟಸ್ವಾಮಿ

ತನ್ನ ದೊಂಬರ ಮನದನ್ನೆಗೆ

ಮಾಸ್ತಿಯವರ ಜ್ಞಾನಪೀಠದ ಬಗ್ಗೆ

ಹೇಳಿ ಬೆಚ್ಚಗೆ ಮುತ್ತಿಟ್ಟು ಮಲಗಿದನಂತೆ

 

ಈ ಮೇಲಿನ ಸಾಲುಗಳನ್ನು ಉದ್ದೇಶಪೂರ್ವಕವಾಗಿಯೇ ಕೊಟ್ಟಿದ್ದೇನೆ. ಈ ರಚನೆಗಳಲ್ಲಿ ನಮಗೆ ನೀಲು ಕಾಣಿಸುವುದಿಲ್ಲ, ಲಂಕೇಶರೇ ಕಾಣುತ್ತದೆ. ಅವರ ಪ್ರಖರ ವ್ಯಂಗ್ಯ, ಸಿಟ್ಟು ಮತ್ತು ಪ್ರೀತಿ ಗೊತ್ತಾಗುತ್ತದೆ.

 

ಆದರೆ ನಿಜಕ್ಕೂ ನೀಲು ಸಿಗುವ ಸಾಲುಗಳು ಇಲ್ಲಿವೆ;

 

ನಮ್ಮ ನಲ್ಮೆಯ ದಿನಗಳನ್ನು

ಹೂವಿಗೆ, ಹುಲಿಗೆ, ಹೊಳೆಗೆ

ಹೋಲಿಸಿ ಸೋತು

ನಮ್ಮ ಆಲಿಂಗನದ ಹತಾಶೆಗೆ ಹೋಲಿಸಿ

ಮೌನ ತಾಳುವೆವು

 

ನಮ್ಮ ಮೌನ, ಹಿಂಜರಿಕೆ, ಒಯ್ಯಾರಗಳ

ಆಟದ

ತಲ್ಲಣವ ಬಲ್ಲವನಿಗೆ ಮಾತ್ರ

ಬದುಕೆಂಬ ಕ್ಪಣಗಳ ಅರ್ಥ

ಹೊಳೆಯುವುದು.

 

ಇಲ್ಲಿ ನನ್ನಂಥ ತುಂಟಿ

ಮಹಾ ಒಬ್ಬಂಟಿ ಎನ್ನುವ

ವಾಸ್ತವ

ನನ್ನ ತೋಳುಗಳನ್ನು ನಿನ್ನ

ಕೊರಳಿಗೆ ಬೆಸೆಯುವುದು

ಗೊತ್ತಾ?

 

ನಾನು ಎರಡು ಪುಟ್ಟ ಜಡೆಗಳ

ತುಂಡುಲಂಗದ ಪುಟ್ಟಿಯಾಗಿದ್ದಾಗ

ಇಷ್ಟಗಲ ಕಣ್ಣುಬಿಟ್ಟು ದಿಟ್ಟಿಸಿದ

ಜಂಗಮ

ಕಾವಿಯ ಸೆರೆಯಲ್ಲಿ

ದಿಕ್ಕೆಟ್ಟ ಜೀವದಂತೆ ಕಾಣಿಸಿದ್ದು

ಇವತ್ತಿಗೂ ನೆನಪಿದೆ.

ಇವನ್ನೆಲ್ಲ ಮಾತಲ್ಲಿ ತರಲು ಸಾಧ್ಯವೇ ಯೋಚಿಸುತ್ತಿದ್ದೇನೆ.

 

 

‍ಲೇಖಕರು G

6 August, 2011

7 Comments

  1. Vivek

    Nice

  2. Gubbachchi Sathish

    ನಲ್ಲ : ನೀನಿವತ್ತು ತುಂಬಾ ಚೆನ್ನಾಗಿ ಕಾಣ್ತಿದ್ದೀಯಾ…
    ನಲ್ಲೆ : ನಂಗೊತ್ತು, ಆದ್ರೆ, ಐ ಹೇಟ್ ಯೂ…
    ನಲ್ಲ : ಹ್ಹ ಹ್ಹ ನಂಗೊತ್ತು, ಯೂ ಆಲ್ವೆಸ್ ಹೇಟ್ ಮಿ ಅಂತಾ…
    ನಲ್ಲೆ : ಇಲ್ಲಾ..ಇಲ್ಲಾ..ನಿಜವಾಗ್ಲೂ ಹೇಟ್ ಯೂ..ಹೇಟ್ ಯೂ…
    ನಲ್ಲ : ಥ್ಯಾಂಕ್ಯೂ. ಹೀಗೆ ಜೀವನ ಪೂರ್ತಿ ಹೇಟ್ ಮಾಡ್ತಾನೇ ಇರು.

  3. Manjunayak

    “I hate u”-ista aytu sir…amele bardiddiralla adanna jogi maneli odiddene…mattomme oduvaaga hemme annistu…

  4. D.RAVIVARMA

    jogi hats off nimma sahitya parichaya agidde nanage hai banglore ninda but neevu kannada prAbha dalli bareda ella lerkhana odidini itigista nimma jogi pustaka tarisi odidinini aste hattaru geleyayayarige kottu odosidini nimma ella barha odubeku antha anistide nanage nimma ella pustaka beku publishers bagge tilisi d.ravi varma hospet

  5. suvarna

    nanu hai bangalore odalu praramba madidaginda evathhina varege.i hate you.

  6. anudutt m s

    ನಿಮ್ಮ ಗದ್ಯ ಪದ್ಯದ ಥರಾ ಓದ್ಸ್ಕೊಂಡು ಹೋಗ್ತದೆ Boss..Salute!

  7. Sukhesh M.G.

    I hate your writings for they are pointless. But at the same time I love them for their utter pointlessness 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading