ಜೋಗಿ ಬರೆದಿದ್ದಾರೆ: ಸಿರಿಯಜ್ಜಿಯ ಸ್ಮರಣೆಯೊಂದಿಗೆ ಕುಪ್ಪಳ್ಳಿಗೆ ಜಿಗಿದು..

 

jjjjj2

 

 

 

 

ಸಾವಿರಾರು ಜನಪದ ಹಾಡುಗಳನ್ನು ಒಡಲೊಳಗೆ ಅಡಗಿಸಿಟ್ಟುಕೊಂಡಿದ್ದ ಸಿರಿಯಜ್ಜಿ ಮೌನವಾಗಿದ್ದಾಳೆ.  ಕಂಪ್ಯೂಟರ್‌ನಲ್ಲಿ ಬರೆಯುತ್ತಾ, ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಾ ಬದುಕಿರುವ ಮಂದಿಗೆ ಸಿರಿಯಜ್ಜಿಯ ಬಗ್ಗೆ ಗೊತ್ತಿರುವುದು ಸಾಧ್ಯವಿಲ್ಲ. ಆಕೆಯ ಬಗ್ಗೆ ಏನು ತಿಳಿದುಕೊಂಡಿರದೇ ಇರುವುದು ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ, ಭಾಷೆ ಸಾಯುವುದು ಹೇಗೆ ಎನ್ನುವುದು ನಿಮಗೆ ಗೊತ್ತಿರಬೇಕು. ಒಬ್ಬ ಸಿರಿಯಜ್ಜಿಯೊಂದಿಗೆ ಸಾವಿರಾರು ಕವಿತೆಗಳು ಕಣ್ಮರೆಯಾಗುತ್ತದೆ. ಮೌಖಿಕವಾಗಿ ಮುಂದುವರಿಯದ ಸಾಹಿತ್ಯವಿಲ್ಲದ ಭಾಷೆಗೆ ತುಂಬ ಸುದೀರ್ಘವಾದ ಭವಿಷ್ಯ ಇರುವುದಕ್ಕೆ ಸಾಧ್ಯವಿಲ್ಲ. ಬರೆದಿಟ್ಟದ್ದಕ್ಕೆ ಅಳಿವಿದೆ. ಆಡಿದ್ದಕ್ಕೆ ಅಳಿವಿಲ್ಲ. ಭಾಷೆಯ ವಿಚಾರದಲ್ಲೂ ಸ್ಥಾವರಕ್ಕಳಿವುಂಟು, ಜಂಗಮಕ್ಕಿಲ್ಲ.

ಹಾಗೆ ಜಂಗಮ ಆಗಿದ್ದಾಕೆ ಸಿರಿಯಜ್ಜಿ. ಅಷ್ಟೊಂದು ಹಾಡುಗಳು ಸಿರಿಯಜ್ಜಿನ ನೆನಪಿನ ಕೋಶದೊಳಗೆ ಹೇಗೆ ಅವಿತು ಕುಳಿತಿದ್ದವು. ಅವನ್ನು ನೆನಪಿಟ್ಟುಕೊಳ್ಳುವುದಕ್ಕೊಂದು ಸೂತ್ರ ಆಕೆಗೆ ಗೊತ್ತಿತ್ತೇ. ಅದನ್ನಾಕೆ ತನ್ನ ಜೊತೆಯವರಿಗೆ ಹೇಳಿಕೊಟ್ಟಿದ್ದಳೇ. ಅಥವಾ ಜೊತೆಯ ಮಕ್ಕಳಿಗೆ ಅದು ನಿರಾಸಕ್ತಿದಾಯಕ ಅನ್ನಿಸಿರಬಹುದೇ ಎಂದೆಲ್ಲ ಯೋಚಿಸುತ್ತಾ ಸಿರಿಯಜ್ಜಿಯ ಸುಕ್ಕುಸುಕ್ಕಾಗಿದ್ದ ವೃದ್ಧಾಪ್ಯವನ್ನು ನೆನಪಿಸಿಕೊಂಡೆ.

ಕವಿತೆಗಳ ಗುಚ್ಚವೊಂದು ಮಣ್ಣು ಸೇರಿದೆ. ಆ ಮಣ್ಣಿನಿಂದ ಸಿರಿಯಜ್ಜಿ ಮತ್ತಷ್ಟು ಸಮೃದ್ಧವಾದ ಕವಿತೆಗಳನ್ನು ಅರಳಿಸಿಯಾಳೆ? ಅಷ್ಟಕ್ಕೂ ಹೊರಗೆ ಚಿಮ್ಮಬೇಕೆಂಬ ಕವಿತೆಗೆ ನಿಜಕ್ಕೂ ಅಡೆತಡೆಯುಂಟೆ?

*********

 ಅಪಾರದಲ್ಲಿ ಅನೂಹ್ಯದಲ್ಲಿ ಅಗೋಚರದಲ್ಲಿ ನಂಬಿಕೆ ಇದ್ದುಬಿಟ್ಟರೆ ಎಲ್ಲವೂ ಎಷ್ಟು ಸರಳ ಮತ್ತು ಸರಾಗ. ಹಾಗೆ ನಂಬುತ್ತಿರುವ ಅನೂಹ್ಯ ಅಗೋಚರ ಸಂಗತಿ ಮೂರ್ತವಾಗದೇ ಮೂರ್ತಿಯಾಗದೇ ಉಳಿದರೆ ಅದೆಂಥ ರಸಾನುಭೂತಿ. ಕಲ್ಲನ್ನೋ ಕಂಬವನ್ನೋ ಶಿರಡಿಯ ಬಿಂಬವನ್ನೋ ಯಾಕೆ ನಂಬಬೇಕು. ನಮ್ಮೊಳಗಿನ ಒಳ್ಳೆಯತನವನ್ನೋ ಆನಂದವನ್ನೋ ನಂಬಬಹುದಲ್ಲ. ಆಗಾಗ ಅಕಾರಣ ಆಗುವ ಖುಷಿ, ಪುಲಕ ಮತ್ತು ರೋಮಾಂಚನಕ್ಕಿಂತ ದೊಡ್ಡದು ಮತ್ತೇನಿದ್ದೀತು. ಯಾವ ಲಾಭವೂ ಇಲ್ಲದ, ಯಾವ ಸ್ವಾರ್ಥವೂ ಇಲ್ಲದ ಅನುಭೂತಿಯೊಂದು ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ಕ್ಷಣ ಖಂಡಿತ ಮುಟ್ಟಿ ಹೋಗಿರುತ್ತೆ. ಒಂದು ಒಳ್ಳೆಯ ಹಾಡು ಕೇಳಿದಾಗ, ಒಂದು ಒಳ್ಳೆಯ ನಾಟಕ ನೋಡಿದಾಗ, ಬಯಲಲ್ಲಿ ನಿಂತು ಅಪಾರವನ್ನು ನಿಟ್ಟಿಸಿದಾಗ, ಮಲೆನಾಡಿನ ಹಸುರನ್ನು ಕಣ್ತುಂಬಿಕೊಂಡಾಗ,ಸಾಗರದ ಅಗಾಧತೆಗೆ ಬೆರಗಾಗುತ್ತಿರುವಾಗ ನಾವು ನಾವೇ ಆಗಿರುವುದಿಲ್ಲ. ನಮ್ಮ ವಿದ್ಯೆ, ಬುದ್ಧಿ, ಜಾಣತನ ಮತ್ತು ಕುತಂತ್ರಗಳು ಅದೊಂದು ಕ್ಷಣ ನಮಗೆ ಅರಿವಿಲ್ಲದ ಹಾಗೆ ನಮ್ಮನ್ನು ತೊರೆದು ಹೋಗಿರುತ್ತವೆ. ಬಹುಶಃ ದೇವರ ಮುಂದೆ ನಿಂತಾಗಲೂ ಅಷ್ಟು ನಿರಾಳ ಅನ್ನಿಸಿರಲಿಕ್ಕಿಲ್ಲ. ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ನಿಂತು ನೋಡಿ, ಆಮೇಲೆ ಹೊರಗೆ ಬಂದು ಪ್ರಕೃತಿಯ ನಡುವೆ ನಿಲ್ಲಿ. ಎಲ್ಲಿ ನಿಮ್ಮನ್ನು ನೀವೇ ಮರೆಯುತ್ತೀರಿ ಅನ್ನುವುದು ಗೊತ್ತಾಗುತ್ತದೆ.

ಕುವೆಂಪು ಬರೆದ ಭಾದ್ರಪದದ ಸುಪ್ರಭಾತ’ ಕವನದಲ್ಲೊಂದು ಸಾಲಿದೆ. ಕವಿ ಸೂರ್ಯೋದಯವನ್ನು ವರ್ಣಿಸತೊಡಗುತ್ತಾರೆ. ಸೂರ್ಯೋದಯ, ಆ ಹೊತ್ತಿನ ಪ್ರಕೃತಿ, ಆ ಕ್ಷಣದ ಚೆಲುವು ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಬಂದು ಕೊನೆಯ ಎರಡೇ ಸಾಲುಗಳಲ್ಲಿ ಆ ಇಡೀ ಪದ್ಯವನ್ನು ಪ್ರಾರ್ಥನೆಯನ್ನಾಗಿ ಪರಿವರ್ತಿಸಿಬಿಡುತ್ತಾರೆ;

ಕವಿಗೆ ಕವಿಯ ತೋರಿಸಿತ್ತು

ಸುಪ್ರಭಾತಂ!

ಇಲ್ಲಿ ಕವಿಗೆ ಕವಿಯ ತೋರಿಸಿತ್ತು ಅನ್ನುವ ಪ್ರಯೋಗದಲ್ಲಿರುವ ಬೆರಗು ಗಮನಿಸಿ. ಸುಪ್ರಭಾತವನ್ನು ನೋಡುತ್ತಿರುವ ಕವಿಗೆ ಆ ಸುಪ್ರಭಾತವನ್ನು ಸೃಷ್ಟಿಸಿದ ಕವಿಯನ್ನು-ಭಗವಂತನನ್ನು ಆ ಬೆಳಗು ತೋರಿಸಿತ್ತು ಅನ್ನುವುದನ್ನು ಕುವೆಂಪು ಹೇಳುತ್ತಿದ್ದಾರಾ? ಅಥವಾ ಕವಿಗೆ ತನ್ನೊಳಗಿನ ಕವಿಯನ್ನು ಸುಪ್ರಭಾತ ತೋರಿಸಿತು ಅಂತ ಸೂಚಿಸುತ್ತಿದ್ದಾರಾ? ಇದನ್ನು ಓದುತ್ತಾ ನಾವೂ ಒಂದು ಕ್ಷಣ ಕವಿಗಳೇ ಆಗುತ್ತೇವಲ್ಲ? ಅದನ್ನು ಕವಿ ಹೇಳುತ್ತಿದ್ದಾರಾ?

ಸಾಹಿತ್ಯದ ಬೆರಗೆಂದರೆ ಇದೇ. ಎರಡೇ ಸಾಲುಗಳಲ್ಲಿ ನಮ್ಮ ಅರ್ಥದ ಜಗತ್ತನ್ನು ನೋಟದ ಜಗತ್ತನ್ನು ಭಾವನೆಯ ಜಗತ್ತನ್ನು ಸಾಹಿತ್ಯ ಬದಲಾಯಿಸುತ್ತದೆ. ಕಾಡಿನ ಕೊಳಲಿದು ಕಾಡ ಕವಿಯು ನಾ ನಾಡಿನ ಜನರೊಲಿದಾಲಿಪುದು ಎಂದು ಬಿನ್ನವಿಸಿಕೊಳ್ಳುತ್ತಾ ಕವಿ ತನ್ನ ಹಾಡಿನ ಬುಟ್ಟಿಯನ್ನು ಮುಂದಿಟ್ಟರೆ ಸಾಕು ಮನದ ತುಂಬ ಹಾಡುಹಬ್ಬ.

ಕುವೆಂಪು ಅವರ ಸಮಗ್ರ ಕಾವ್ಯದ ಎರಡು ಸಂಪುಟಗಳನ್ನು ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿದೆ. ಎರಡರ ಬೆಲೆ ಒಂದು ಸಾವಿರ ರುಪಾಯಿ. ಒಂದೊಂದೂ ಸಾವಿರ ಪುಟಗಳ ಸಮೃದ್ಧ ಅಕ್ಷರಸಂಪತ್ತು. ಎಲ್ಲವನ್ನೂ ಮರೆತು ಓದಲು ಕೂತರೆ ಜೀವ ಭಾವಪರವಶ. ಹಾಗೇ ಓದುತ್ತಾ ಹೋದರೆ ಕವಿತೆಯೇ ಎಲ್ಲವನ್ನೂ ಮರೆಸುತ್ತದೆ.

ಕುವೆಂಪು ಪದ್ಯಗಳು ಈ ತಲೆಮಾರಿನ ಮಂದಿಗೆ ಹೊಸದು. ಸಿ. ಅಶ್ವತ್ಥ್ ರಾಗ ಹಾಕಿ ಹಾಡಿಸಿದ ಕೆಲವನ್ನು ಬಿಟ್ಟರೆ ಉಳಿದ ಕವಿತೆಗಳೆಲ್ಲ ಅಪರಿಚಿತ. ಹಾಡಲು ಹೊರಡುವವರೂ ಕುವೆಂಪು ಪದ್ಯಗಳತ್ತ ಗಮನ ಹರಿಸುವುದಿಲ್ಲ. ಯಾಕೆಂದರೆ ಅವಕ್ಕೆ ಯಾರೂ ರಾಗ ಹಾಕಿ ಸಿದ್ಧಮಾಡಿಟ್ಟಿಲ್ಲ. ರಾಗ ಹಾಕಿ ಹಾಡುವುದಕ್ಕೆ ಒಂದೋ ಸೋಮಾರಿತನ, ಒಂದೋ ಪರಿಣತಿ ಸಾಲದು. ಆ ಪದ್ಯಗಳು ಆಮೇಲೆ ಬಂದ ಭಾವಗೀತೆಗಳಿಗಿಂತ ಎಷ್ಟೋ ಪಾಲು ಚೆನ್ನಾಗಿವೆ ಅನ್ನಿಸಿದರೂ ಅವನ್ನು ಮುಟ್ಟುವುದಕ್ಕೆ ಹಳೆಯ ಸಂಗೀತ ನಿರ್ದೇಶಕರಿಗೇ ಭಯ. ಕೆಲವು ಕವಿತೆಗಳಿಗೆ ಹಳೆಯ ಸಂಗೀತ ನಿರ್ದೇಶಕರು ರಾಗ ಹಾಕಿದ್ದಾರಾದರೂ ಅವು ಎಲ್ಲರೂ ಹಾಡುವಷ್ಟು ಸರಳವಿಲ್ಲ.

ಉದಾಹರಣೆಗೆ ಬಿ ವಿ ಕಾರಂತರು ರಾಗ ಸಂಯೋಜಿಸಿದ ನನ್ನ ಮನೆ’ ಹಾಡು. ಆ ಹಾಡಿನ ನಾಸ್ಟಾಲ್ಜಿಯ, ಲವಲವಿಕೆ ಎರಡೂ ಮನಸ್ಸಿಗೆ ತಟ್ಟದ ಹಾಗೆ ಅದನ್ನು ಹಾಡಿಸಲಾಗಿದೆ. ಆ ಕವಿತೆಯ ಸಾಲುಗಳೆಷ್ಟು ಸೊಗಸಾಗಿವೆ ನೋಡಿ;

ನಾನು ಬಿದ್ದು ಎದ್ದ ಮನೆ

ಮೊದಲು ಬೆಳಕು ಕಂಡ ಮನೆ

ತಿಪ್ಪ ತಿಪ್ಪ ಹೆಜ್ಜೆಯಿಟ್ಟು

ಬಿಸಿಲು ಕೋಲ ಹಿಡಿದುಬಿಟ್ಟು

ತಂಗಿತಮ್ಮರೊಡನೆ ಹಿಟ್ಟು

ತಿಂದು ಬೆಳೆದ ನನ್ನ ಮನೆ

ಈ ಭಾವುಕತೆಯ ನಡುವೆಯೇ ಅವರೊಂದು ವಿಷಾದದ ದನಿಯನ್ನೂ ಸೇರಿಸುತ್ತಾರೆ;

ಹೆತ್ತ ತಾಯಿ ಸತ್ತ ಮನೆ

ಮತ್ತೆ ತಂದೆ ಹೋದ ಮನೆ

ಗಿರಿಜೆ ನರಳಿ ಬಿಟ್ಟ ಮನೆ

ವಾಸು ಬೆಂದು ಸಂದ ಮನೆ

ಬಾಲ್ಯ ಬಾಡಿ ಬಿದ್ದ ಮನೆ

ಆದರೆನಗೆ ನನ್ನ ಮನೆ

ಅದಾದ ನಂತರ ಅದೇ ಮನೆಗೊಂದು ಆಧ್ಯಾತ್ಮಿಕ ಸ್ಪರ್ಶವನ್ನೂ ಅವರು ನೀಡುತ್ತಾರೆ;

ನಾನು ಬದುಕೊಳುಳಿವ ಮನೆ

ನಾನು ಬಾಳಿಯಳಿವ ಮನೆ

ನನ್ನದಲ್ಲದಿಳೆಯೊಳಿಂದು

ಹೆಮ್ಮೆಯಿಂದ ನನ್ನದೆಂದು

ಬೆಂದು ಬಳಲಿದಾಗ ಬಂದು

ನೀರು ಕುಡಿವ ನನ್ನ ಮನೆ

ಜಿ.ಎಸ್. ಶಿವರುದ್ರಪ್ಪನವರ ಕಾಣದಾ ಕಡಲಿಗೆ ಹಂಬಲಿಸಿದೆ ಮನ’ ಅನ್ನುವ ಜನಪ್ರಿಯ ಹಾಡಿನ ಬೀಜವೂ ಕುವೆಂಪು ಕವಿತೆಯಲ್ಲೇ ಇದೆ. ಮಲೆನಾಡಿನ ಮಂದಿಗೆ ಸದಾ ಕಡಲಿನ ಹಂಬಲ. ಮಲೆನಾಡಲ್ಲಿ ಬಿದ್ದ ಮಳೆ ಹೋಗಿ ಸೇರುವುದು ಕಡಲನ್ನು. ಹಾಗೇ ಮಲೆನಾಡಿಗರ ಭಾವಬಿಂದು ಕೂಡ ಸೇರಬಯಸುವುದು ಕಡಲನ್ನೇ;

ನಿನ್ನ ನೋಡಲೆನ್ನ ಎದೆಯು

ಕಾತರಿಸುವುದು

ಎನ್ನ ಎದೆಯೊಳಾಗ ಆಗ

ನಿನ್ನ ಮೊರೆವ ದನಿಯು ತಂದು

ಎನ್ನ ಜೀವ ಉಬ್ಬಿಯುಬ್ಬಿ

ತಳಮಳಿಸುವುದು.

                    -(ಕಾಣದ ಕಡಲು)

ಇಂಥದ್ದರ ನಡುವೆಯೇ ಅವರು ಕಲ್ಕಿ’ ಎನ್ನುವ ಬೆಚ್ಚಿಬೀಳಿಸುವ ಪದ್ಯವನ್ನೂ ಕುವೆಂಪು ಬರೆದಿದ್ದಾರೆ. ಕಲ್ಕಿಯ ಅವತಾರದ ಭೀಕರತೆಯನ್ನೂ ಅದು ತರಬಹುದಾದ ನಿರಾಶೆಯನ್ನೂ ಹತಾಶೆಯನ್ನೂ ಈ ಪದ್ಯ ಹಿಡಿದಿಡುತ್ತದೆ. ಬಹುಶಃ ಇವತ್ತಿಗೂ ಅರ್ಥ ಕಳೆದುಕೊಳ್ಳದ, ಹಾಗೆ ನೋಡಿದರೆ, ದಿನದಿಂದ ದಿನಕ್ಕೆ ಅರ್ಥವತ್ತಾಗುತ್ತಾ ಹೋಗುವ ಪೊಲಿಟಿಕಲ್ ಪದ್ಯ’ ಇದು. ಕವಿ ಕನಸಲ್ಲಿ ನಡೆಯುವುದು ಇವತ್ತು ಕಣ್ಣುಮುಂದೆಯೇ ನಡೆಯುತ್ತಿದೆ ಅನ್ನಿಸಿದರೆ, ಕವಿಯ ಭಾರತ ದರ್ಶನ’ ಕ್ಕೆ ಕೈ ಮುಗಿಯಿರಿ;

ನಿದ್ದೆಯ ಲೋಕದಿ ಕನಸಿನ ಬೀದಿ

ತಿರುಗಿದೆ ತೊಳಲಿದೆ ತಪ್ಪಿದೆ ಹಾದಿ!

ಮುಂದೆ ಕಾಣಿಸಿತೊಂದು ಅರಣ್ಯ

ಅನಂತವಾದುದು ವನವಿಸ್ತೀರ್ಣ

ಹೆಮ್ಮರಗಳು ಕಿಕ್ಕಿರಿದುವು ಅಲ್ಲಿ

ಬಿಡುವಿಲ್ಲದೆ ಹೆಣೆದಿದ್ದವು ಬಳ್ಳಿ..

ಹೀಗೆ ಸಾಗಿದ ಹಾದಿಯ ಕೊನೆಗೊಂದು ಊರು. ಆ ಊರಲ್ಲೋ ಕವಿಗೆ ಕಂಡದ್ದು;

ಧನಿಕರ ಮನೆಗಳು ಒಂದೆಡೆ ನಿಂತಿವೆ;

ಬಡವರ ಗುಡಿಸಲು ಒಂದೆಡೆ ನಿಂತಿವೆ

ಜ್ಯೋತಿಯ ಮಣಿದೀಪಗಳಲ್ಲಿ

ಕತ್ತಲು ಕಗ್ಗತ್ತಲು ಇಲ್ಲಿ

ಹಾಡಿನ ನುಣ್ದನಿಯತ್ತ

ಗೋಳಿನ ನೀಳ್ದನಿಯಿತ್ತ

ಕೂಳನು ಹೆಮ್ಮೆಗೆ ಬಿಸುಡುವರಲ್ಲಿ

ಹೊಟ್ಟೆಗೆ ಇಲ್ಲದೆ ಕೊರಗುವರಿಲ್ಲಿ!

ಹೀಗೆ ನೋಡುತ್ತಿದ್ದಂತೆ ಕವಿಗೆ ಕಾಣುತ್ತದೊಂದು ಭೀಕರ ದೃಶ್ಯ;

ಬಡಬಗ್ಗರ ಜಠರಾಗ್ನಿಯು ಎದ್ದು

ಗುಡಿಸಿಲುಗಳಿಗೇ ಬೆಂಕಿಯು ಬಿದ್ದು

ಬಡವರ ಬೆಂಕಿಯು ನಾಲಗೆ ಚಾಚಿ

ಶ್ರೀಮಂತರನಪ್ಪಿತು ಬಾಚಿ

ಬಡವರ ಸಿಟ್ಟದು ಏನು ಪಿಶಾಚಿ

ಬಡವನೆ ಕಲಿಯುಗದಂತ್ಯದ ಕಲ್ಕಿ!

*********

ಚೆಲುವು ಮತ್ತು ಭೀಕರತೆಯನ್ನು ತಮ್ಮ ಕಾವ್ಯದಲ್ಲಿ ಇಷ್ಟು ದಟ್ಟವಾಗಿ ತಂದಂಥ ಕವಿಗಳು ಸಿಗುವುದು ಕಷ್ಟ. ಕುವೆಂಪು ಅವರು ಬರೆಯುತ್ತಾ ಹೋದ ಕವಿತೆಗಳನ್ನು ಓದಿದರೆ ಸಾಕು, ಅವರು ನಡೆದು ಬಂದ ಹಾದಿ ಗೊತ್ತಾಗುತ್ತದೆ.

ಪ್ರಕೃತಿಯನ್ನು ಮೆಚ್ಚಿರುವ ಪದ್ಯಗಳಿಂದ ಶುರುವಾಗಿ, ಹದಿಹರೆಯದಲ್ಲಿ ವೇದಾಂತ ಕೇಸರಿಯಾಗಿ,  ಯೌವನದಲ್ಲಿ ಕ್ರಾಂತಿಕಾರಿಯಾಗಿ, ಅದರ ಮಧ್ಯೆಯೇ ಪ್ರೇಮಕವಿಯಾಗಿ, ಆಮೇಲೆ ದಾರ್ಶನಿಕನಾಗಿ ಅವರ ಪಯಣ ಸಾಗಿದೆ. ಕವಿಕಾವ್ಯವೇ ಕವಿಯ ಆತ್ಮಚರಿತ್ರೆಯೂ ಆದಾಗ ಅಲ್ಲಿ ಪ್ರಾಮಾಣಿಕತೆಯೂ ಇರುತ್ತದೆ,ಪ್ರೀತಿಯೂ ಇರುತ್ತದೆ, ತೀವ್ರತೆಯೂ ಇರುತ್ತದೆ.

ಆ ಕಾವ್ಯವೂ ಅಷ್ಟೇ, ನಮ್ಮೊಂದಿಗೇ ಬೆಳೆಯುತ್ತಾ ಹೋಗುತ್ತದೆ. ದೇವರು ರುಜು ಮಾಡಿದನು, ಕವಿ ಪರವಶನಾಗುತ ಅದ ನೋಡಿದನು ಅನ್ನುವ ಸಾಲು ಯೌವನದ ಬಿಸುಪಿನಲ್ಲಿ ಅರ್ಥವಾಗದೇ ಹೋಗಬಹುದು. ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ ಅನ್ನುವ ಸಾಲು ನಲುವತ್ತರ ತನಕ ಅರ್ಥವಾಗದೇ ಹೋಗಬಹುದು. ಆದರೆ ನಾವು ಬೆಳೆಯುತ್ತಾ ಹೋದಂತೆ ಇದ್ದಕ್ಕಿದ್ದಂತೆ ಅದರ ಅರ್ಥವೂ ಹೊಳೆಯಬಹುದು. ಅದು ಇರಬೇಕಾದದ್ದೂ ಹಾಗೇ. ನಮಗೆ ಅರ್ಥವಾಗುತ್ತಾ ಹೋಗಬೇಕು. ಒಂದೊಂದಾಗಿ… ಒಂದೊಂದಾಗಿ..

ರಸಸಿದ್ಧಿಯ ಬಗ್ಗೆ ಕುವೆಂಪು ಬರೆಯುತ್ತಾರೆ;

ಗಗನವನು ನೋಡು ಮೈ ನೀಲಿಗಟ್ಟುವವರೆಗೆ

ಕಡಲನೀಕ್ಷಿಸು ವಾರಿರಾಶಿ ಧಮನಿಗಳಲ್ಲಿ

ಧುಮ್ಮಿಕ್ಕಿ ಮೊರೆವನ್ನೆಗಂ; ಕಟ್ಟಿರುಳಿನಲ್ಲಿ

ನೀನೇ ಕತ್ತಲೆಯಾಗಿ, ನಿನ್ನೊಳಗೆ ಮಿರುಮಿರುಗೆ

ಕೋಟಿ ಸಂಖ್ಯೆಯ ತಾರೆಯನ್ನೆಗಂ ಧ್ಯಾನಗೈ.

ಒಂದು ಎರಡೆಂದೆಂಬ ಹುಸಿಯನೆಲ್ಲವ ಬಿಟ್ಟು

ಉಳಿಯಲೆಂದೆಂದಿಗೂ ಮೂಕವಾಗಿಹ ಗುಟ್ಟು!

ರಜನೀಶ್ ಹೇಳಿದ್ದರು:

ಬೌದ್ಧನಾಗಬೇಡ, ಬುದ್ಧನೇ ಆಗು. ಕಿರಿಸ್ತಾನನಾಗಬೇಡ ಕ್ರಿಸ್ತನಾಗು.

ಅದರಂತಾಗಬೇಡ, ಅದೇ ಆಗು!

‍ಲೇಖಕರು avadhi

April 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Dr. BR. Satyanarayana

    ಜೋಗಿಯವರೇ ನೀವು ಹೇಳಿದ್ದು ನಿಜ. ಭಾವಗೀತೆಗಳಾಗಿ, ರೇಡಿಯೋ ಕ್ಯಾಸೆಟ್ಟು ಮುಖಾಂತರ ಜನಪ್ರಿಯವಾಗಿರುವ ಕೆಲವೊಂದು ಗೀತೆಗಳನ್ನು ಬಿಟ್ಟರೆ, ಹೆಚ್ಚಿನ ಕುವೆಂಪು ಕವಿತೆಗಳನ್ನು ಹೆಚ್ಚು ಜನ ಗಮನಿಸಿಲ್ಲ. ನಾನೂ ಸುಮಾರು ಮೂರುವರೆ ವರ್ಷದಿಂದಲು ರಾಮಾಯಣದರ್ಶನಂ ಸೇರಿದಂತೆ ಅವರ ಸಮಗ್ರ ಸಾಹಿತ್ಯದ ಸಂಪುಟಗಳನ್ನು ಕಣ್ಣಮುಂದೆಯೇ ಇಟ್ಟುಕೊಂಡು ಪುನರಧ್ಯಯನ ನಡೆಸುತ್ತಿದ್ದೇನೆ. ಕುವೆಂಪು ಅವರ ಕಾವ್ಯಕ್ಕೆ ಕಡಲಷ್ಟನ್ನೇ ನಾವು ಹೋಲಿಸಬಹುದು. ಕಡಲನ್ನು ಹಇಡಿಯಾಗಿ ಹಿಡಿಯಲಾದೀತೆ. ಈ ಮಾತು ನಮ್ಮ ಸಂಗೀತ ನಿರ್ದೇಶಕರಿಗೂ ಅನ್ವಯಿಸುತ್ತದೆ. ಆದರೆ ಆ ಕಡಲಿಗೆ ನಾವು ಒಮ್ಮೆ ಧುಮುಕಿದರೆ ಸಾಕು, ಅದು ‘ಕವಿಗೆ ಕವಿಯ ತೋರಿಸಿಬಿಡುತ್ತದೆ!’

    ಪ್ರತಿಕ್ರಿಯೆ
  2. Dr. BR. Satyanarayana

    ಮರೆತ ಮಾತು: ನೀವು ಕಲ್ಕಿ ಕವಿತೆಯ ಬಗ್ಗೆ ಪ್ರಸ್ತಾಪಿಸಿದ್ದೀರಿ. ನಾನು ಕಳೆದ ವಾರ ಧನ್ವಂತರಿ ಚಿಕಿತ್ಸೆಯನ್ನು ಓದಿದೆ. ನನಗೆ ದಂಗು ಬಡಿದು ಹೋಯಿತು. ಈ ಹಿಂದೆ ಓದಿದಾಗ ನನಗೆ ಅಷ್ಟೊಂದು ದಕ್ಕಿರಲಿಲ್ಲ ಆ ಕಥೆ! ಸುಮಾರು ಎಪ್ಪತ್ತು ಎಂಬತ್ತು ವರ್ಷಗಳ ಹಿಂದಿನ ಆ ಕಥೆ ಇವತ್ತಿಗೂ ಪ್ರಸ್ತುತವಾಗುತ್ತಿರುವುದು ಮಾತ್ರ ಈ ದೇಶದ ದುರಂಥ.

    ಪ್ರತಿಕ್ರಿಯೆ
  3. Agnihothri

    ಜೋಗಿ ಅವರೇ ಧನ್ಯವಾದ….
    ತುಂಬಾ ಸೊಗಸಾಗಿ ಬರೆದಿದ್ದೀರಿ. ಖುಷಿಯಾಯಿತು…ಸಿರಿಯಜ್ಜಿ ಬಗ್ಗೆ ಹೇಳುತ್ತಾ ಕುವೆಂಪು, ಬಿ.ವಿ.ಕಾರಂತ, ಜಿ.ಎಸ್. ಶಿವರುದ್ರಪ್ಪ ಅವರನ್ನ, ಅವರ ಕವಿತೆಗಳನ್ನ ನೆನಪಿನಂಗಳಕ್ಕೆ ಎಳೆದು ತಂದಿದ್ದೀರಿ. ಥ್ಯಾಂಕ್ಸ್.

    ಪ್ರತಿಕ್ರಿಯೆ
  4. ಶಶಿರೇಖ ವೈಪಿ

    ನಿಮ್ಮ ಈ ಮಾಹಿತಿಗೆ ನನ್ನ ತುಂಬು ಹ್ರುದಯದ ಧನ್ಯವಾದಗಳು.
    ಕನ್ನಡ ಪದ್ಯ ಗಳಿಗಾಗಿ ಬಹಳವಾಗಿ ಹುಡುಕುತ್ತಿರುವೆ ದಯವಿಟ್ಟು ಸ್ವಲ್ಪ ಮಾಹಿತಿ ನೀಡುವಿರೇ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: