ಜೋಗಿ ಬರೆದಿದ್ದಾರೆ: ಈಡು ಮತ್ತು ಕಾಡು!

images
ಬೇಟೆ, ಶಿಕಾರಿ, ಈಡು ಮತ್ತು ಕಾಡು!
ಬೇಟೆಯನ್ನು ನಿಷೇಧಿಸಿ ದಶಕಗಳೇ ಆಗಿವೆ. ಹೀಗಾಗಿ ಬೇಟೆ ಸಾಹಿತ್ಯ ಮತ್ತೆ ಸೃಷ್ಟಿಯಾಗುವುದು ಸಾಧ್ಯವಿಲ್ಲ. ಒಂದು ಸಾಹಿತ್ಯ ಪ್ರಕಾರ ಹೇಗೆ ನಶಿಸಿ ಹೋಗುತ್ತದೆ ಅನ್ನುವುದಕ್ಕೆ ಇದೇ ಸಾಕ್ಷಿ. ಹಾಗಂತ ಸಾಹಿತ್ಯ ಪ್ರಕಾರ ಉಳಿಸಬೇಕು ಅನ್ನುವ ಕಾರಣಕ್ಕೆ ಬೇಟೆಗೆ ಅನುಮತಿ ಕೊಡುವುದಕ್ಕಾಗುವುದಿಲ್ಲ.
ಈಗ ಕುಳಿತುಕೊಂಡು, ಬೇಟೆಯನ್ನು ಕ್ರೌರ್ಯ ಅಂತ ನೋಡುವವರಿಗೆ ಆ ಕಾಲದ ಅನಿವಾರ್ಯತೆ ಗೊತ್ತಿರುವ ಸಾಧ್ಯತೆ ಇಲ್ಲ. ಆಗ ಹಳ್ಳಿಗಳಲ್ಲಿ, ಬನದ ಸೆರಗಿನಲ್ಲಿ ಅಲ್ಲಲ್ಲಿ ಒಂದೊಂದು ಮನೆಯಿರುತ್ತಿತ್ತು. ಆ ಮನೆ ಮಂದಿಯ ಪ್ರಮುಖ ಉದ್ಯೋಗ ಕೃಷಿ ಆಗಿರುತ್ತಿತ್ತು. ಕೃಷಿಗೆ ಅಗತ್ಯವಾದ ಜಾನುವಾರುಗಳನ್ನು ಸಾಕಿಕೊಂಡು, ಸ್ವಲ್ಪಮಟ್ಟಿಗಿನ ಹೈನುಗಾರಿಕೆಯಲ್ಲೂ ಆ ಕುಟುಂಬ ತೊಡಗಿಕೊಳ್ಳುತ್ತಿತ್ತು. ಆಗೆಲ್ಲ ಇಂಥ ಒಂಟಿ ಮನೆಗಳು ಸಾಧ್ಯವಾದಷ್ಟೂ ಸ್ವಾವಲಂಬಿಯಾಗಲು ಪ್ರಯತ್ನ ಪಡುತ್ತಿದ್ದವು. ಅಕ್ಕಿ, ತರಕಾರಿ, ತೆಂಗಿನಕಾಯಿ, ಹಾಲು, ಹೈನು ಎಲ್ಲವೂ ಆ ಪರಿಸರದಲ್ಲೇ ಸಿಗುವಂತೆ ನೋಡಿಕೊಳ್ಳುತ್ತಿದ್ದರು. ಹೊರಗಿನಿಂದ ತರುತ್ತಿದ್ದ ವಸ್ತುಗಳೆಂದರೆ ಉಪ್ಪು, ಬೆಂಕಿಪೆಟ್ಟಿಗೆ ಮುಂತಾದ ಸಣ್ಣಪುಟ್ಟ, ಅತ್ಯಗತ್ಯ ವಸ್ತುಗಳನ್ನು ಮಾತ್ರ.
img_1124 (1)
ಇಂಥ ಹಳ್ಳಿಗಳಲ್ಲಿ ಆ ಕಾಲದಲ್ಲಿ ಒಂದು ನರಭಕ್ಷಕ ಹುಲಿ ಕಾಣಿಸಿಕೊಂಡಿತೆಂದರೆ ಇಡೀ ಪ್ರದೇಶವೇ ಭೀತಿಯಿಂದ ನಡುಗುತ್ತಿತ್ತು. ಅದಕ್ಕೆ ಸರಿಯಾಗಿ, ನರಭಕ್ಷಕ ಅಲ್ಲೋ ಇಲ್ಲೋ ಒಬ್ಬೊಬ್ಬರನ್ನು ಬಲಿ ತೆಗೆದುಕೊಂಡ ಸುದ್ದಿ ಆಗೀಗ ಬರುತ್ತಿತ್ತು. ಆಗೆಲ್ಲ ಆ ಹುಲಿಯನ್ನು ಹೊಡೆಯುವುದಕ್ಕೆ ಶಿಕಾರಿದಾರರನ್ನು ಕರೆಸಲಾಗುತ್ತಿತ್ತು.
ಇದಲ್ಲದೇ, ಹಳ್ಳಿಯ ಶ್ರೀಮಂತ ಕುಟುಂಬಗಳಲ್ಲಿ ಷೋಕಿಗೆ ಬೇಟೆಯಾಡುವವರೂ ಇರುತ್ತಿದ್ದರು. ಬ್ರಿಟಿಷ್ ದೊರೆಗಳ ಠಿಕಾಣಿ ಇದ್ದ ಊರುಗಳಲ್ಲಿ ಇಂಥ ಮೃಗಯಾವಿನೋದ ಜಾಸ್ತಿಯೇ ಇತ್ತು. ಕನ್ನಡದಲ್ಲಿ ಬೇಟೆ ಸಾಹಿತ್ಯ ಸಿಗುವುದು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರ.
ದಕ್ಷಿಣ ಕನ್ನಡದ ಕೆದಂಬಾಡಿ ಜತ್ತಪ್ಪ ರೈ ಮತ್ತು ಕೊಡಗಿನ ಕಾಕೆಮಾನಿ- ಕನ್ನಡದಲ್ಲಿ ಸೊಗಸಾದ ಬೇಟೆ ಸಾಹಿತ್ಯ ಕೊಟ್ಟವರು ಇವರಿಬ್ಬರು. ಇವರು ಬರೆದದ್ದೆಲ್ಲ ಸ್ವಾನುಭವವೇ. ಅದರಲ್ಲೂ ಕಾಕೆಮಾನಿಯಂತೂ ತಮ್ಮನ್ನು ಎಲ್ಲೂ ಸಮರ್ಥಿಸಿಕೊಳ್ಳುವುದಕ್ಕೂ ಹೋಗದೆ ಬೇಟೆಯ ನೆನಪುಗಳನ್ನು ದಾಖಲಿಸಿದ್ದಾರೆ.
ಈ ಶಿಕಾರಿ ನೆನಪುಗಳೆಲ್ಲ ಸಾಮಾನ್ಯವಾಗಿ ಒಂದೇ ರೀತಿ ಇರುತ್ತವೆ. ಹುಲಿಯನ್ನು ಮಚಾನಿನ ಮೇಲೆ ಹೊಂಚಿ ಕುಳಿತು ಬೇಟೆಯಾಡಿದ್ದನ್ನೋ, ಹುಡುಕಿಕೊಂಡು ಹೋಗಿ ಬೇಟೆಯಾಡಿದ್ದನ್ನೋ ಶಿಕಾರಿದಾರರು ರೋಚಕವಾಗಿ ವಿವರಿಸಿರುತ್ತಾರೆ. ಅಲ್ಲಲ್ಲಿ ಹುಲಿಗಳ ವರ್ತನೆಯ ಬಗ್ಗೆ ವಿವರಗಳಿರುತ್ತವೆ.
ಕೊಡಗಿನ ಕಾಕೆಮಾನಿ ಬರೆದ ಈ ಅನುಭವ ಹಾಗಿಲ್ಲ. ಗಾಯಗೊಂಡ ಹುಲಿಯ ವಿಪರೀತ ವರ್ತನೆಯ ವಿಚಿತ್ರ ಕಥಾನಕ ಇದು. ಓದಿ:
*******
ಷಿಕಾರಿ ಪ್ರೇಮಿಗಳಾದ ನಾವು ಇಬ್ಬರು ಉಪಾಧ್ಯಾಯರುಗಳು ಫಾರೆಸ್ಟ್ ಗಾರ್ಡನ್ನು ಪುಸಲಾಯಿಸಿ, ಅಂದು ರಾತ್ರಿ ಬಂಗಲೆಯ ಸುತ್ತುಮುತ್ತಲ ಪ್ರದೇಶದಲ್ಲಿ ಷಿಕಾರಿಯಾಡುವುದೆಂದು ತೀರ್ಮಾನಿಸಿದೆವು. ರಾತ್ರಿ ಬೆಳ್ದಿಂಗಳಿದ್ದುದರಿಂದ ಮೃಗನಿಬಿಡವಾದ ಆ ನಿರ್ಜನ ಪ್ರದೇಶದಲ್ಲಿ ಷಿಕಾರಿಯಾಗುವುದೆಂದು ಖಂಡಿತ ನಂಬಿದ್ದೆವು. ಆದರೆ ನಾವು ಕಾಡುಮೇಡೆಲ್ಲ ಸುತ್ತಿದರೂ ಆ ರಾತ್ರಿ ನಮ್ಮ ಕಣ್ಣಿಗೆ ಯಾವುದೇ ಪ್ರಾಣಿಗಳು ಬೀಳಲಿಲ್ಲ.
ಅಂದು ಸಾಯಂಕಾಲ ಅಲ್ಲಿ ಇಲ್ಲಿ ಸುತ್ತಿ ಸುಸ್ತಾಗಿ, ಒಂದು ರಾಕ್ಷಸಾಕಾರದ ಬಂಡೆಯ ಮೇಲೆ ಹತ್ತಿ ದಣಿವಾರಿಸುತ್ತಿದ್ದೆವು. ಕೆಳಗಡೆಯ ಬಂಡೆಯ ಭಾಗವು ಸುಮಾರು ಐವತ್ತು ಅರುವತ್ತು ಅಡಿಗಳಷ್ಟು ಆಳವಾಗಿದ್ದು ಅದರಾಚೆ ಸುತ್ತಲೂ ಮೈದಾನದಿಂದ ಆವರಿಸಲ್ಪಟ್ಟಿತ್ತು.
ಅಲ್ಲಿ ಕೂತು ಸುತ್ತಮುತ್ತ ವೀಕ್ಷಿಸುತ್ತಿದ್ದಂತೆ ಬಲಭಾಗದ ಕೆಳಗುಡ್ಡದಿಂದ ಒಂದು ಹಿಂಡು ಕಾಡುಕೋಣಗಳು ಹೆದರಿ, ನಾಗಾಲೋಟದಿಂದ ಓಡಿ ಹಾದುಹೋದವು. ಅವು ಓಡುವಾಗ ಇಡೀ ಕಾಡೇ ಗುಡುಗುತ್ತಿತ್ತು. ಅದೇ ದಿಕ್ಕಿನಿಂದ ಒಂದು ಕೋಣವು ವಿಕಾರವಾಗಿ ಅರಚುತ್ತಾ ಓಡಿ ಬರುತ್ತಿತ್ತು. ಅದರ ಬೆನ್ನಿಗೆ ಅಂಟಿಕೊಂಡು ಒಂದು ಹೆಬ್ಬುಲಿಯು ಕಚ್ಚಿ ಹಿಡಿದಿತ್ತು. ನಮಗೆ ಗಾಬರಿಯಾದರೂ ಒಂದು ಪ್ರಾಣಿಯನ್ನು ಹುಲಿ ಹೇಗೆ ಕೊಲ್ಲುತ್ತದೆ ಅನ್ನುವ ಅಪರೂಪದ ದೃಶ್ಯವನ್ನು ನೋಡುವ ಸುಸಂದರ್ಭವನ್ನು ಕಳೆದುಕೊಳ್ಳಲು ನಾವು ಸಿದ್ಧರಿರಲಿಲ್ಲ.
ಹುಲಿಯ ಕ್ರೂರ ಹಿಡಿತಕ್ಕೆ ಸಿಕ್ಕ ಕಾಡುಕೋಣವು ನಾವಿದ್ದಲ್ಲಿಂದ ಕೇವಲ ನೂರು ಗಜದೊಳಗೆ ಸೋತು ನೆಲಕ್ಕೆ ಬಿದ್ದಿತು. ಹುಲಿಯ ಕುತ್ತಿಗೆಯನ್ನು ಕಚ್ಚಿ, ನೆಲಕ್ಕಂಟಿ ಮಲಗಿ ರಕ್ತಹೀರತೊಡಗಿತು. ಇದೇ ಸಮಯಕ್ಕೆ ಮತ್ತೊಂದು ಹುಲಿಯು ಮಿಂಚಿನಂತೆ ಹಾರಿ ಬಂದು ಕಾಡುಕೋಣವನ್ನು ಹಿಡಿದು ರಕ್ತ ಕುಡಿಯುತ್ತಿದ್ದ ಹುಲಿಯ ಮುಂದೆ ಪ್ರತ್ಯಕ್ಷವಾಯಿತು. ರಕ್ತ ಹೀರುತ್ತಿದ್ದ ಹುಲಿಯು ಅದನ್ನೊಮ್ಮೆ ನೋಡಿ ಗುರುಗುಟ್ಟಿತು. ಆಗಂತುಕ ಹುಲಿ ಕೆಲವು ಗಜ ದೂರ ನಿಂತು ನೋಡುತ್ತಾ, ಅತ್ತಿತ್ತ ಸುತ್ತಿತೇ ವಿನಾ ಪ್ರಾಣಿಯ ಮೇಲೆ ತಾನೂ ಬಾಯಿಹಾಕುವ ಸಾಹಸ ಮಾಡಲಿಲ್ಲ.
ನಮ್ಮ ಜತೆಯಲ್ಲಿದ್ದ ಗಾರ್ಡಿಗೆ ಆ ಹುಲಿಗೆ ಗುಂಡಿಕ್ಕಲೇ ಬೇಕೆಂದು ಹಠವಿದ್ದಿತು. ನಾವೂ ಅದಕ್ಕೆ ಬೆಂಬಲ ಕೊಟ್ಟೆವು. ಆಗಲೇ ರಾತ್ರಿಯಾದ್ದರಿಂದ, ಒಂದಕ್ಕೆ ಗುಂಡು ಹಾಕಿದರೆ ಇನ್ನೊಂದು ಏನು ಮಾಡೀತು ಅನ್ನುವ ಸಂಶಯ ಇದ್ದುದರಿಂದ ಬೆಳಗ್ಗೆ ಬಂದು ಬೇಟೆಯಾಡಲು ತೀರ್ಮಾನಿಸಿ ವಾಪಸ್ಸಾದೆವು.
ಮರುದಿವಸ ನಾವು ಮೂವರು ಬಂದೂಕುಧಾರಿಗಳಾಗಿ ಹೊರಟೆವು. ಕೋಣಬಿದ್ದಿದ್ದ ಸ್ಥಳಕ್ಕೆ ಬಂದೆವು. ಅಲ್ಲಿ ಕೋಣವನ್ನು ಹಿಡಿದು ರಕ್ತ ಕುಡಿದ ಗುರುತಿತ್ತೇ ವಿನಾ ಕಳೇಬರ ಇರಲಿಲ್ಲ. ಅತ್ತಿತ್ತ ಹುಡುಕಿದಾಗ ಒಂದು ಹೆಮ್ಮರದಡಿಯಲ್ಲಿ ತನ್ನ ಬೇಟೆಯನ್ನು ತರಗೆಲೆ, ಸೊಪ್ಪು, ಕಡ್ಡಿಗಳಿಂದ ಮುಚ್ಚಿ , ನಾಲ್ಕಾರು ಸ್ಥಳಗಳಲ್ಲಿ ಉಗುರುಗಳಿಂದ ಕೆರೆದು ಗುರುತುಮಾಡಿದ್ದು ಕಾಣಿಸಿತು. ಹುಲಿಯು ಹತ್ತಿರದಲ್ಲೇ ಸುಖನಿದ್ರೆ ಮಾಡುತ್ತಿರಬಹುದೆಂದು ಗಾರ್ಡು ಎಚ್ಚರಿಸಿದ.
ನಾವು ಮರವೇರಿದೆವು. ಸ್ವಲ್ಪ ಹೊತ್ತಿಗೆಲ್ಲ ಹುಲಿಯು ತನ್ನ ಬೇಟೆಯನ್ನು ನಿರಾಂತಕವಾಗಿ ಎಳೆಯುವ ದೃಶ್ಯ ಕಾಣಿಸಿತು. ಮತ್ತೊಂದು ಹುಲಿಯು ಅದಕ್ಕೆದುರಾಗಿ ನಿಂತಿತ್ತು. ಗಂಡು ಹುಲಿಯು ಆಹಾರ ತಿನ್ನುವ ಸಮಯದಲ್ಲಿ ಹೆಣ್ಣು ಹುಲಿಯು ಅದಕ್ಕೆ ಬಾಯಿಹಾಕುವುದಿಲ್ಲ ಅನ್ನುವುದು ನನಗಾಗ ತಿಳಿಯಿತು. ಗಂಡು ಹುಲಿ ತಿನ್ನುವುದನ್ನು ತೆಪ್ಪಗೆ ನೋಡುತ್ತಾ ನಿಂತ ಹೆಣ್ಣು ಹುಲಿಯು ಬೇಸತ್ತು, ತನ್ನೆರಡು ಮುಂಗಾಲುಗಳನ್ನು ನೀಡಿ, ಅಲ್ಲಿಯೇ ಮಲಗಿ, ತನ್ನ ಮುಂಗಾಲುಗಳನ್ನು ನೆಕ್ಕುತ್ತಿತ್ತು.
ಭಾರಿ ಹುಲಿಗಳನ್ನು ನೋಡಿ ನನಗಂತೂ ಗಾಬರಿಯಾಗಿತ್ತು. ನನ್ನ ಸ್ನೇಹಿತನ ಮುಖದಲ್ಲೂ ಬೆವರಿತ್ತು. ಆದರೆ ಗಾರ್ಡನಿಗೆ ಇದೆಲ್ಲಾ ಸಾಮಾನ್ಯವಾಗಿತ್ತು. ಹಾಗೆಯೇ ತನ್ನ ಕೋವಿಯನ್ನು ಗುರಿಯಿಟ್ಟು ಕೂತಿದ್ದನು. ಗುಂಡಿಕ್ಕಿದರೆ ಹುಲಿ ಮೇಲೆ ಹಾರೀತೆಂಬ ಭಯವಿಲ್ಲದಿದ್ದರೂ, ಮನಸ್ಸು ಅಳುಕುತ್ತಿತ್ತು.
ಗುಂಡು ಹಾರಿತು. ಕೋಣವನ್ನು ತಿನ್ನುತ್ತಿದ್ದ ಗಂಡು ಹುಲಿಗೆ ಗುಂಡು ನೇರವಾಗಿ ತಗಲಿತ್ತು. ತಲೆಯ ಮೇಲೆ ಗುಂಡು ಬಿದ್ದಿತ್ತು. ಹುಲಿಯೊಮ್ಮೆ ವಿಕಾರವಾಗಿ ಗರ್ಜಿಸಿ, ಜಿಗಿಯಿತು. ಅನಂತಚರ, ನಾವ್ಯಾರೂ ಊಹಿಸದ ವಿಚಿತ್ರ ಘಟನೆಯೊಂದು ನಡೆದುಹೋಯಿತು. ಏಟು ತಿಂದ ಹುಲಿ ಓಡಲೂ ಇಲ್ಲ, ಹಾರಲೂ ಇಲ್ಲ. ಅದಕ್ಕಿದಿರಾಗಿ ತನ್ನ ಮುಂಗಾಲು ನೆಕ್ಕುತ್ತಿದ್ದ ಹೆಣ್ಣುಹುಲಿಯ ಮೇಲೆರಗಿತು. ಇಂಥ ವಿಪರೀತ ಸಂದರ್ಭವನ್ನು ನೆನೆಯದಿದ್ದ ಆ ಹೆಣ್ಣು ಹುಲಿ
ಆಕ್ರಮಣಕ್ಕೆ ಸರ್ವದಾ ಸಿದ್ಧವಾಗಿರಲಿಲ್ಲ. ತನ್ನ ಗಂಡ ತನ್ನ ಮೇಲೇಕೆರಗಿದ ಎಂದು ತಿಳಿಯುವ ಮೊದಲೇ ರೌದ್ರಾವೇಶದಲ್ಲಿದ್ದ ಗಂಡು ಹುಲಿಯು ಅದರ ಕೊರಳನ್ನು ಕಚ್ಚಿ ಹಿಡಿದು, ತನ್ನ ಖರನಖಗಳಿಂದ ಅದರ ಹೊಟ್ಟೆಯನ್ನು ಬಗೆಯಿತು. ಹೆಣ್ಣು ಚಡಪಡಿಸಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅದರ ಆಟ ನಡೆಯಲಿಲ್ಲ.
ತನ್ನ ಮೈಯೊಳಗೆ ಹೊಕ್ಕ ಗುಂಡಿನಿಂದ ಬುದ್ಧಿ ಕಳಕೊಂಡ ಆ ಗಂಡು ಹೆಬ್ಬುಲಿಯು ತನ್ನ ಸಿಟ್ಟನ್ನೆಲ್ಲ ಆ ನಿರಪರಾಧಿ ಹೆಣ್ಣು ಹುಲಿಯ ಮೇಲೆ ಕಾರಿ, ಅದನ್ನು ಅರೆಜೀವ ಮಾಡಿತು.
ನಾವು ಉಸಿರು ಬಿಗಿ ಹಿಡಿದು ನೋಡುತ್ತಿದ್ದೆವು. ನಿಮಿಷಗಳ ನಂತರ ಒಳ್ಳೆಯ ಆಯಕ್ಕೆ ಬಿದ್ದ ಗುಂಡಿನ ಪರಿಣಾಮ ಕಾಣಿಸಿಕೊಳ್ಳತೊಡಗಿತು. ಗಂಡು ಹುಲಿಯ ಶಕ್ತಿ ಮೆಲ್ಲಮೆಲ್ಲಗೆ ಕ್ಷಯಿಸುತ್ತಿತ್ತು. ಅದು ಹಾಗೆಯೇ ಒದ್ದಾಡುತ್ತಿತ್ತಾದರೂ ಹೆಣ್ಣು ಹುಲಿಯ ಕತ್ತನ್ನು ಬಿಟ್ಟಿರಲಿಲ್ಲ. ಹೆಣ್ಣು ಹುಲಿಯು ಉಸಿರು ಕಟ್ಟಿ ಜೀವ ಬಿಡುವ ಸ್ಥಿತಿಗೆ ತಲುಪಿತ್ತು.
ಅವುಗಳನ್ನು ಹಾಗೆಯೇ ಬಿಟ್ಟಿದ್ದರೆ ಹೆಣ್ಣು ಹುಲಿಯು ಉಳಿದುಕೊಳ್ಳುತ್ತಿತ್ತೋ ಏನೋ? ಆದರೆ, ಗಾರ್ಡನು ಗುರಿನೋಡಿ ಹೆಣ್ಣು ಹುಲಿಯ ತಲೆಗೆ ಗುಂಡಿಕ್ಕಿದನು. ಹತ್ತು ನಿಮಿಷದ ತರುವಾಯ ಎರಡು ಹುಲಿಗಳೂ ಸ್ತಬ್ದವಾದವು. ತನ್ನ ಜೀವಕ್ಕೆ ಧಕ್ಕೆ ಬಂದಾಗ ಪೂರ್ವಾಪರ ಯೋಚನೆಯಿಲ್ಲದೆ, ತನ್ನ ಸಂಗಾತಿಯನ್ನೇ ಬಲಿ ತೆಗೆದುಕೊಂಡ ಹುಲಿಯ ರೌದ್ರವನ್ನು ಮರೆಯುವುದಾದರೂ ಹೇಗೆ?
ಸರಕಾರ ನಿಯಂತ್ರಣ ಅರಣ್ಯದಲ್ಲಿ ಎರಡು ಹುಲಿಗಳನ್ನು ಅಪ್ಪಣೆಯಿಲ್ಲದೆ ಹೊಡೆದ ತಕ್ಸೀರು ಗಾರ್ಡು ಮತ್ತು ನಮ್ಮ ಮೇಲೆ ಬಿತ್ತು. ಗಾರ್ಡನ್ನು ಬಚಾಯಿಸಲು ಪ್ರಯತ್ನಿಸಿದೆವು. ಆದರೆ ಅದು ಬ್ರಿಟಿಷರ ಕಾಲ. ಎರಡು ಹುಲಿಯ ಬೇಟೆಯೇ ಆತನ ಅರಣ್ಯ ಖಾತೆಯ ನೌಕರಿಗೆ ಮಂಗಳ ಹಾಡಿತು. ಅಂದಿನ ಗಾರ್ಡು ಇಂದು ಕಾಫಿ ತೋಟದ ಮಾಲಿಕ. ಆ ಹುಲಿಯ ಚರ್ಮ ಇಂದೂ ಅವನ ಮನೆಯಲ್ಲಿದೆ.
*********
ಕಾಕೆಮಾನಿ ಬರೆದ ಈ ಕೃತಿಯ ಹೆಸರು ಬಿಲ್ಲುಬಾಣ’. ಇದು ಪ್ರಕಟವಾದದ್ದು ೧೯೭೦ರಲ್ಲಿ. ಇದನ್ನು ಪ್ರಕಟಿಸಿದ್ದು ಕೊಡಗಿನ ಕಾವೇರಿ ಪ್ರಕಾಶನ. ಈ ಕಾವೇರಿ ಪ್ರಕಾಶನವು ಆರು ರುಪಾಯಿಗೆ ವರುಷಕ್ಕೆ ಆರುನೂರು ಪುಟಗಳ ಸಾಹಿತ್ಯ ನೀಡುತ್ತಾ ಬಂದ ಪುಸ್ತಕ ಪ್ರಕಾಶನ ಸಂಸ್ಥೆ.
ಅಂದಹಾಗೆ ಇದು ಕಾಕೆಮಾನಿಯವರ ಎರಡನೆಯ ಕೃತಿ. ಮೊದಲ ಕೃತಿ ಯಾವುದು ಅನ್ನುವುದು ಇಲ್ಲಿಲ್ಲ. ಕಾಕೆಮಾನಿಯವರ ಪುಸ್ತಕಗಳನ್ನು ಯಾರಾದರೂ ಮರುಪ್ರಕಟಿಸಿದ್ದಾರಾ? ಅದೂ ಗೊತ್ತಿಲ್ಲ.
ಕಾಡು, ಕಾಡಿನ ಕತೆ, ಕಾಕೆಮಾನಿ, ಹುಲಿ, ಬೇಟೆ, ಬೆಳದಿಂಗಳು ಎಲ್ಲವೂ ಕಣ್ಮರೆಯಾಗಿವೆ. ನಾವು ಇಂಟರ್‌ನೆಟ್‌ನಲ್ಲಿ ಹುಲಿಯ ಚಿತ್ರಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದೇವೆ. ಕೆನೆತ್ ಆಂಡರ್‌ಸನ್ ಮತ್ತು ಜಿಮ್ ಕಾರ್ಬೆಟ್ ಬರೆದ ಬೇಟೆಯ ಅನುಭವಗಳಲ್ಲಿ ಬರುವ ಊರುಗಳ ಸ್ವರೂಪವೂ ಬದಲಾಗಿದೆ. ಸದ್ಯಕ್ಕೆ ಅರ್ಥಪೂರ್ಣ ಅನ್ನಿಸುವುದು ಚಿತ್ತಾಲರ ಶಿಕಾರಿ’. ಮನುಷ್ಯ ಮನುಷ್ಯನನ್ನು ಬೇಟೆಯಾಡುವ ಕತೆ.

‍ಲೇಖಕರು avadhi

May 30, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಹಾಲ್ದೊಡ್ಡೇರಿ ಸುಧೀಂದ್ರ

    ಬಹುಶಃ ಪಾ.ವೆಂ. ಸಂಪಾದಿಸುತ್ತಿದ್ದ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಕಾಕೆಮಾನಿ ಹಾಗೂ ಕೆದಂಬಾಡಿ ಅವರ ಬೇಟೆಯ ಕತೆಗಳನ್ನು ಬಾಲ್ಯದಲ್ಲಿ ಓದಿದ್ದೆ. ಇಂದಿನ ಓದುಗರಿಗೆ ಆ ಎರಡೂ ಬೇಟೆ-cum-ಬರಹಗಾರರ ಪರಿಚಯ ಇರದಿರುವ ಸಾಧ್ಯತೆ ಹೆಚ್ಚು. ಈ ಬ್ಲಾಗ್-ಲೇಖನ ಬೇಟೆಯಾಡುವಾಗಿನ ರೋಚಕ ಕತೆಯನ್ನು ಹಳೆಯ ನೆನಪನ್ನು ಮರುಕಳಿಸುವಂತೆ ಮಾಡಿದ್ದೆ. ಥ್ಯಾಂಕ್ಸ್.

    ಪ್ರತಿಕ್ರಿಯೆ
    • ಜೋಗಿ

      you are right
      ನಾನೂ ಇತ್ತೀಚೆಗೆ ಹಳೆಯ ಕಸ್ತೂರಿಗಳನ್ನೆಲ್ಲ ತರಿಸಿಕೊಂಡೆ. ಅದನ್ನು ಓದುತ್ತಿದ್ದಾಗ ಕಾಕೆಮಾನಿ ಸಿಕ್ಕರು. ಮತ್ತಷ್ಟು ಹುಡುಕುತ್ತಿದ್ದೇನೆ.

      ಪ್ರತಿಕ್ರಿಯೆ
  2. ಮಲ್ಲಿಕಾರ್ಜುನ.ಡಿ.ಜಿ

    ಕಾಕೆಮಾನಿ ಅವರ ಬೇಟೆ ಸಾಹಿತ್ಯದ ಸೊಗಡು ತೋರಿಸಿದ ಜೋಗಿಯವರಿಗೆ ಧನ್ಯವಾದಗಳು.
    ನನ್ನ ಬಳಿ ಕೆದಂಬಾಡಿ ಜತ್ತಪ್ಪ ರೈ ಅವರ “ಈಡೊಂದು ಹುಲಿಯೆರಡು” ಪುಸ್ತಕವಿದೆ. ೧೯೭೯ರ ಪ್ರಕಟಣೆ.

    ಪ್ರತಿಕ್ರಿಯೆ
  3. ಚಂದ್ರ

    ‘ಶಿಕಾರಿಯ ಸೀಳು ನೋಟ’ ಎಂಬ ಪ್ರಭಾಕರ ಶಿಶಿಲರ ಪುಸ್ತಕವಿದೆ. ಇದು ಬಡ್ಡಡ್ಕ ಅಪ್ಪಯ್ಯ ಗೌಡರ ಬೇಟೆಯ ಅನುಭವಗಳನ್ನೊಳಗೊಂಡಿರುವ ಪುಸ್ತಕ. ಇದರಲ್ಲೂ ಅಪರೂಪದ ಘಟನೆಗಳು ಸಿಗುತ್ತವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: