ಜೋಗಿಯವರ ಹೊಸ ಕೃತಿ ‘ನಿತ್ಯೋಪನಿಷತ್’ ಇಂದು ಬಿಡುಗಡೆಯಾಗುತ್ತಿದೆ.
ಸಪ್ನಾ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಜೀವನ್ ಪ್ರೀತಿಯ ೯೦ ಪ್ರಸಂಗಗಳನ್ನು ಓದುಗರ ಮುಂದೆ ಹರಡಿದೆ.
ಅಂತಹ ಮೂರು ಪ್ರಸಂಗಗಳು ನಿಮಗಾಗಿ-
1.
ಸಂಜೆಯಾಗುತ್ತಿದ್ದಂತೆ ನೆರಳು ಉದ್ದವಾಗುತ್ತಾ ಹೋಗುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಇದನ್ನು ಕೊಂಚ ಸಾಂಕೇತಿಕವಾಗಿ ನೋಡಿದಾಗ ಇದರಲ್ಲಿ ಬದುಕಿನ ಚಿತ್ರವೂ ಕಾಣಿಸೀತು. ಬದುಕಿನ ಮುಸ್ಸಂಜೆಯಲ್ಲಿ ನಿಂತಾಗಲೂ ನಮ್ಮ ನೆರಳು ನಮಗಿಂತ ಉದ್ದವಿರುವುದನ್ನು ಕಾಣಬಹುದು.
ನಾವು ಎಂಬತ್ತು ವರ್ಷ ಬದುಕುತ್ತೇವೆ ಅಂತಿಟ್ಟುಕೊಳ್ಳಿ. ಈ ಎಂಬತ್ತು ವರ್ಷಗಳಲ್ಲಿ ನಾವು ನಮ್ಮಲ್ಲಷ್ಟೇ ಬದುಕಿರುವುದಿಲ್ಲ. ಬೇರೆ ಬೇರೆ ಮಂದಿಯಲ್ಲೂ ಇಷ್ಟಿಷ್ಟೇ ಜೀವಿಸಿರುತ್ತೇವೆ. ಹಾಗೆಯೇ ಬೇರೆ ಬೇರೆ ಮಂದಿ ನಮ್ಮೊಳಗೂ ಜೀವಿಸಿರುತ್ತಾರೆ. ಹೀಗಾಗಿ ಒಬ್ಬ ವ್ಯಕ್ತಿಯ ಬದುಕೆನ್ನುವುದು ಕೇವಲ ಅವನ ಬದುಕು ಮಾತ್ರವೇ ಎಂದು ಖಚಿತವಾಗಿ ಹೇಳುವುದಕ್ಕೆ ಸಾಧ್ಯವೇ ಇಲ್ಲ.
ಉದಾಹರಣೆಗೆ ಬಾಲ್ಯದ ಆರೆಂಟು ವರ್ಷಗಳಲ್ಲಿ ನಮಗೆ ನಮ್ಮ ಬದುಕು ಎನ್ನುವುದು ಇರುವುದೇ ಇಲ್ಲ. ಆಗ ನಾವೇನು ಮಾಡಿರುತ್ತೇವೆ, ಏನೇನು ನಡೆದಿರುತ್ತವೆ ಅನ್ನುವುದು ಗೊತ್ತಿರುವುದಿಲ್ಲ. ಆ ಅವಧಿ ನಮ್ಮ ಸುಪ್ತಪ್ರಜ್ಞೆಯಲ್ಲಷ್ಟೇ ಉಳಿದಿರುತ್ತದೆ. ಯಾರಾದರೂ ನೆನಪಿಸಿದಾಗ ಆ ಘಟನೆಗಳು ನೆನಪಾಗಬಹುದೇ ಹೊರತು, ನಮಗೆ ನಿಖರವಾಗಿ ಏನೇನು ನಡೆಯಿತು ಅನ್ನುವುದು ಖಂಡಿತಾ ಗೊತ್ತಿರುವುದಕ್ಕೆ ಸಾಧ್ಯವಿಲ್ಲ.
ಈ ಮಧ್ಯ ನಾವು ನಮ್ಮ ಉದ್ಯೋಗ ನಿಮಿತ್ತ ಕಳೆಯುವಂಥ ವರ್ಷಗಳು ಎಷ್ಟೋ ಸಲ ನಮ್ಮದಾಗಿರುವುದಿಲ್ಲ. ಒಬ್ಬ ಮೇಸ್ತ್ರಿ ಮೂರು ವರ್ಷಗಳ ಕಾಲ ಒಂದು ಮನೆ ಕಟ್ಟುತ್ತಾನೆ ಅಂತಿಟ್ಟುಕೊಳ್ಳೋಣ. ಆಗ ಅವನ ಬದುಕಿನ ಮೂರು ವರ್ಷಗಳಷ್ಟು ಆಯಸ್ಸನ್ನು ಅವನು ಆ ಮನೆಯ ಮಾಲೀಕನಿಗೆ ಧಾರೆಯೆರೆದು ಕೊಟ್ಟ ಎಂದೇ ಭಾವಿಸಬೇಕು. ಯಾಕೆಂದರೆ ಆ ಮೂರು ವರ್ಷಗಳಲ್ಲಿ ಆತ ತನಗೋಸ್ಕರ ಏನನ್ನೂ ಮಾಡಿರುವುದಿಲ್ಲ. ಪರ್ಯಾಯವಾಗಿ ಆ ಮನೆಯ ಮಾಲೀಕನ ಆಯಸ್ಸು ಆ ಮನೆಗೋಸ್ಕರ ಕೆಲಸ ಮಾಡಿದ ಒಬ್ಬೊಬ್ಬನಿಂದಲೂ ಮೂರು ಮೂರು ವರ್ಷ ಜಾಸ್ತಿಯಾಗುತ್ತಾ ಹೋದರೆ, ಕೊನೆಗೆ ಆತ ಸಾವಿರಾರು ವರ್ಷ ಬದುಕಿದಂತೆ ಆಗಿಬಿಡುತ್ತದೆ. ದೊಡ್ಡ ದೊಡ್ಡ ಅರಮನೆಗಳಲ್ಲಿ ಬದುಕುತ್ತಿದ್ದ ರಾಜಮಹಾರಾಜರು ಅದೆಷ್ಟು ಮಂದಿಯ ಆಯಸ್ಸನ್ನು ತಮ್ಮದನ್ನಾಗಿ ಮಾಡಿಕೊಂಡಿರಬಹುದು, ಲೆಕ್ಕ ಹಾಕಿ!
ಹೀಗೆ ನಾವು ನಮ್ಮ ಆಯಸ್ಸನ್ನು, ಅನುಭವವನ್ನು, ಭಾವಸಂಪತ್ತನ್ನು, ಶ್ರಮವನ್ನು, ಚಿಂತನೆಯನ್ನು ಮತ್ತೊಬ್ಬರಿಗೆ ಕೊಡುತ್ತಾ, ಅವರಿಂದ ಪಡೆದುಕೊಳ್ಳುತ್ತಾ, ನಾವೇನು ಮಾಡುತ್ತಿದ್ದೆವೋ ಅದೇ ಆಗಿಹೋಗುವುದನ್ನೂ ಗಮನಿಸಬಹುದು. ಹೀಗಾಗಿ ಮುಸ್ಸಂಜೆಯಲ್ಲಿ ಕಾಣುವ ಒಬ್ಬೊಬ್ಬರ ನೆರಳೂ ಒಂದೊಂದು ಥರ ಇರಬಲ್ಲದು. ನೀವು ಒಬ್ಬ ಕಮ್ಮಾರನ ಬಳಿ ಮಾತಿಗೆ ಕುಳಿತರೆ ಆತನ ವೃದ್ಧಾಪ್ಯದಲ್ಲಿ ಕೇವಲ ಕಮ್ಮಾರಿಕೆಯ ಅನುಭವಗಳೇ ತುಂಬಿರುವುದನ್ನು ಕಾಣಬಹುದು. ಅದೇ ರೀತಿ, ಬ್ಯಾಂಕ್ ಗುಮಾಸ್ತ, ಪತ್ರಕರ್ತ, ಲೇಖಕ, ಅಡುಗೆಯವನು ತಮ್ಮ ತಮ್ಮ ಕ್ಷೇತ್ರಗಳ ಅನುಭವ ವಲಯದಲ್ಲೇ ಬದುಕಿರುತ್ತಾರೆ.
ಹೀಗಾಗಿ ನಮ್ಮ ನೆರಳು ಎಷ್ಟು ಉದ್ದವಿದೆ ಎಂಬುದು ನಿಜಕ್ಕೂ ಮುಸ್ಸಂಜೆಯಲ್ಲಿಯೇ ನಮಗೆ ಗೊತ್ತಾಗುತ್ತದೆ.

2.
ನೇರವಾಗಿ ಹೇಳಲಾಗದ್ದನ್ನು ಹೇಳುವುದಕ್ಕೆ ನಮ್ಮಲ್ಲಿ ಕತೆಗಳನ್ನು ಬಳಸುವುದುಂಟು. ನಮ್ಮ ಬಹುತೇಕ ಕತೆಗಳು ಹುಟ್ಟಿಕೊಂಡದ್ದು ಅದೇ ಕಾರಣಕ್ಕೆ. ಉದಾಹರಣೆಗೆ ಮಹಾಭಾರತದಲ್ಲಿ ಬರುವ ಯಕ್ಷಪ್ರಶ್ನೆಯ ಕತೆ.
ವನವಾಸದಲ್ಲಿರುವಾಗ ಪಾಂಡವರು ಕಾಡಿನಲ್ಲಿ ಅಲೆದಾಡಿ ದಣಿಯುತ್ತಾರೆ. ಒಂದು ಕೆರೆಗೆ ನೀರು ಕುಡಿಯಲು ಹೋಗುತ್ತಾರೆ. ಹೋದವರು ವಾಪಸ್ ಬರುವುದಿಲ್ಲ. ತಮ್ಮಂದಿರನ್ನು ಹುಡುಕುತ್ತಾ ಹೋಗುವ ಧರ್ಮರಾಯನಿಗೆ ಸರೋವರದ ತಡಿಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿರುವ ತಮ್ಮಂದಿರು ಕಾಣಿಸುತ್ತಾರೆ. ಅವರಿಗೇನಾಯಿತು ಎಂದು ವಿಚಾರಿಸಿದರೆ, ಅವರೆಲ್ಲ ಆ ಸರೋವರದ ಒಡೆಯನಾದ ಯಕ್ಷನನ್ನು ಧಿಕ್ಕರಿಸಿದ್ದರಿಂದ ಸಾವಿಗೀಡಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಧರ್ಮರಾಯ ತಮ್ಮಂದಿರ ಹಾಗೆ ದುಡುಕದೇ ಯಕ್ಷನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗುತ್ತಾನೆ.
ಆ ಪ್ರಶ್ನೆಗಳು ನಮ್ಮನ್ನು ಚಿಂತನೆಗೆ ಹಚ್ಚುವಂತಿವೆ. ಹಾಗೆ ನಮ್ಮನ್ನು ಪ್ರೇರೇಪಿಸುವುದಕ್ಕೆ ಈ ಪ್ರಸಂಗವನ್ನು ಕಥೆಯ ರೂಪದಲ್ಲಿ ಅದ್ಯಾರೋ ಕವಿ ತಂದಿರಬಹುದು. ಮೂಲ ಮಹಾಭಾರತದಲ್ಲಿ ಈ ಪ್ರಸಂಗ ಇತ್ತೋ ಇಲ್ಲವೋ ಅನ್ನುವುದು ಮುಖ್ಯವಲ್ಲ. ಆದರೆ ಎಷ್ಟೋ ಸಲ ಪ್ರಕ್ಷೇಪಗಳೇ ಘನವಾದ ಕತೆ ಹೇಳುತ್ತವೆ.
ಇಲ್ಲಿ ಯಕ್ಷ ಕೇಳುವ ಒಂದು ಪ್ರಶ್ನೆ ಸೊಗಸಾಗಿದೆ. ಲೋಕದಲ್ಲಿ ಪರಮ ಧರ್ಮವು ಯಾವುದು ಎಂಬುದು ಯಕ್ಷ ಕೇಳುವ ಪ್ರಶ್ನೆ. ಅದಕ್ಕೆ ಧರ್ಮರಾಯ ಕೊಡುವ ಉತ್ತರ: ದಕ್ಷತೆ.
ನಮ್ಮಲ್ಲಿ ದಕ್ಷತೆಗೆ ಅಂಥ ಬೆಲೆಯಿಲ್ಲ. ಇವತ್ತಿನ ರಾಜಕಾರಣವನ್ನು ನೋಡಿದರೆ ಅಲ್ಲಿ ಇರುವುದು ದಕ್ಷತೆಯ ಕೊರತೆ ಅನ್ನುವುದು ಗೊತ್ತಾಗುತ್ತದೆ. ಒಬ್ಬ ರಾಜ ತನ್ನ ರಾಜ್ಯವನ್ನು ದಕ್ಷತೆಯಿಂದ ನಡೆಸಿಕೊಂಡು ಹೋಗುವುದೇ ರಾಜ ಧರ್ಮ. ಒಬ್ಬ ರೈತ ದಕ್ಷತೆಯಿಂದ ಕೃಷಿ ಮಾಡುವುದೇ ರೈತ ಧರ್ಮ. ಹೀಗೆ ಪ್ರತಿಯೊಬ್ಬನೂ ತನ್ನ ಪಾಲಿನ ಕೆಲಸವನ್ನು ದಕ್ಷತೆಯಿಂದ ಮಾಡುವುದೇ ಅವರವರ ಧರ್ಮ. ಅಲ್ಲಿಗೆ ಪರಮ ಧರ್ಮ ಅನ್ನುವುದು ಮತ್ಯಾವುದೂ ಅಲ್ಲ. ನಾವು ಹೇಳುವ ಧರ್ಮಗಳಾಗಲೀ ಮತಗಳಾಗಲೀ ಅಲ್ಲ. ಮನುಜ ಧರ್ಮ, ವಿಶ್ವಧರ್ಮ ಅಂತ ಹೇಳಬಹುದಾದದ್ದು, ಯಾವುದೇ ಜಗಳಕ್ಕೆ ಕಾರಣವಾಗದೇ ಇರುವುದು ದಕ್ಷತೆಯೇ.
ಅಂಥಾ ದಕ್ಷತೆ ಇಲ್ಲದೇ ಹೋದಾಗ ಇಡೀ ರಾಷ್ಟ್ರವೇ ಕ್ರಮೇಣ ನಾಶವಾಗುತ್ತಾ ಹೋಗುತ್ತದೆ. ಧರ್ಮಕ್ಷಯ ಆಗುತ್ತದೆ. ಬಡತನ ತಾಂಡವವಾಡುತ್ತದೆ. ದಕ್ಷತೆ ಇಲ್ಲದೇ ಹೋದಾಗ ಆ ಜಾಗವನ್ನು ತುಂಬಲು ವಶೀಲಿ, ಪ್ರಚಾರ, ಜಾಹೀರಾತುಗಳು ಬರುತ್ತವೆ. ದಾರಿತಪ್ಪಿಸಲಾಗುತ್ತದೆ. ಶಾಸ್ತ್ರೀಯವಾಗಿ ತನ್ನ ಕೆಲಸ ಗೊತ್ತಿಲ್ಲದೇ ಇರುವವನು ಕೆಲಸ ಕೆಡಿಸುತ್ತಾನೆ.
ಯಕ್ಷ ಕೇಳುವ ಮತ್ತೊಂದು ಪ್ರಶ್ನೆ- ಧನವಂತನಾಗುವುದು ಹೇಗೆ? ಅದಕ್ಕೆ ಧರ್ಮರಾಯನ ಉತ್ತರ. ಆಸೆಗಳನ್ನು ತೊರೆದವನು ಧನವಂತನಾಗುತ್ತಾನೆ, ಶ್ರೀಮಂತನಾಗುತ್ತಾನೆ.
ಈ ಮಾತಲ್ಲಿ ಎಷ್ಟೊಂದು ತಿಳಿವಳಿಕೆ ಇದೆ ನೋಡಿ. ಆಸೆಗಳಿದ್ದವನು ಯಾವತ್ತೂ ಬಡವನೇ. ಆಸೆ ಇಲ್ಲದೇ ಇರುವವನಿಗೆ ನಾವು ಏನನ್ನೂ ಕೊಡಲಾರೆವು. ಯಾರಿಗೆ ನಾವು ಏನನ್ನೂ ಕೊಡಲಾರೆವೋ ಅವನು ಶ್ರೀಮಂತನಲ್ಲವೇ!
3.
ಇಂತಹದ್ದೊಂದು ಕತೆ ನೀವು ಕೇಳಿರುತ್ತೀರಿ. ಸಾಗರ ವಿಜ್ಞಾನಿಯೊಬ್ಬರು ಒಂದು ಪ್ರಯೋಗ ಮಾಡಿದರು. ಒಂದು ಟ್ಯಾಂಕ್ನಲ್ಲಿ ಒಂದು ಶಾರ್ಕ್ ಬಿಟ್ಟರು. ನಂತರ ಒಂದಷ್ಟು ಸಣ್ಣ ಮೀನುಗಳನ್ನು ಅದಕ್ಕೆ ಹಾಕಿದರು. ತಕ್ಷಣ ಶಾರ್ಕ್ ದಾಳಿ ನಡೆಸಿ ಆ ಎಲ್ಲ ಮೀನುಗಳನ್ನು ತಿಂದುಹಾಕಿತು. ನಂತರ ವಿಜ್ಞಾನಿ ಆ ಟ್ಯಾಂಕ್ನಲ್ಲಿ ಎರಡು ವಿಭಾಗ ಮಾಡುವಂತೆ ಮಧ್ಯದಲ್ಲಿ ಒಂದು ಗಾಜಿನ ಹಲಗೆ ಇರಿಸಿದರು. ಶಾರ್ಕನ್ನು ಒಂದು ಕಡೆ ಬಿಟ್ಟು, ಇನ್ನೊಂದು ಬದಿಯಲ್ಲಿ ಸಣ್ಣ ಮೀನುಗಳನ್ನು ಹಾಕಿದರು. ಈಗಲೂ ಶಾರ್ಕ್ ದಾಳಿ ನಡೆಸಿತು. ಆದರೆ ಗಾಜಿನ ಹಲಗೆಗೆ ಡಿಕ್ಕಿ ಹೊಡೆದು ವಾಪಸಾಗುತ್ತಿತ್ತು. ಮೀನುಗಳು ಸಿಗದಿದ್ದರೂ ಶಾರ್ಕ್ ತನ್ನ ಪ್ರಯತ್ನ ನಿಲ್ಲಿಸಲಿಲ್ಲ. ಒಂದೆರಡು ತಾಸಿನವರೆಗೆ ಆಗಾಗ ಮೀನುಗಳ ಮೇಲೆ ದಾಳಿ ನಡೆಸಲು ಯತ್ನಿಸಿ, ಗಾಜಿಗೆ ಡಿಕ್ಕಿ ಹೊಡೆದು ಮರಳಿ ಬರುತ್ತಿತ್ತು. ಇನ್ನೊಂದು ಬದಿಯಲ್ಲಿ ಮೀನುಗಳು ನಿರಾತಂಕವಾಗಿ ಈಜಿಕೊಂಡಿದ್ದವು. ವಿಜ್ಞಾನಿ ಈ ಪ್ರಯೋಗವನ್ನು ಮುಂದಿನ ಒಂದೆರಡು ವಾರಗಳ ಕಾಲ ಪ್ರತಿದಿನ ಮುಂದುವರೆಸಿದರು. ದಿನದಿಂದ ದಿನಕ್ಕೆ ಶಾರ್ಕ್ ತನ್ನ ಪ್ರಯತ್ನದ ತೀವ್ರತೆ ಕಡಿಮೆ ಮಾಡುತ್ತಾ, ದಾಳಿಯ ಸಂಖ್ಯೆಯನ್ನೂ ಕಡಿಮೆ ಮಾಡುತ್ತಿತ್ತು. ಕೊನೆಗೊಂದು ದಿನ ಸಂಪೂರ್ಣ ಸುಸ್ತಾಗಿ ಮೀನುಗಳ ಮೇಲೆ ದಾಳಿ ನಡೆಸುವುದನ್ನೇ ಬಿಟ್ಟುಬಿಟ್ಟಿತು. ಈಗ ವಿಜ್ಞಾನಿ ಆ ಟ್ಯಾಂಕ್ನಲ್ಲಿದ್ದ ಗಾಜಿನ ಹಲಗೆಯನ್ನು ತೆಗೆದರು. ಆದರೂ ಮೀನುಗಳ ಮೇಲೆ ಶಾರ್ಕ್ ದಾಳಿ ನಡೆಸಲಿಲ್ಲ. ಮೀನುಗಳು ತಮಗೆ ಇಷ್ಟಬಂದ ಕಡೆ ಹಾಯಾಗಿ ಈಜಾಡತೊಡಗಿದವು.
ಆದರೂ ಶಾರ್ಕ್ ತನ್ನ ಹಾಗೂ ಮೀನುಗಳ ನಡುವೆ ಗಾಜಿನ ಗೋಡೆಯಿದೆ ಎಂದು ಭಾವಿಸಿ ದಾಳಿ ನಡೆಸುವುದನ್ನೇ ನಿಲ್ಲಿಸಿಬಿಟ್ಟಿತು. ಟ್ಯಾಂಕ್ನಲ್ಲಿ ಇಲ್ಲದ ಗೋಡೆ ಅದರ ಮನಸ್ಸಿನಲ್ಲಿ ನಿರ್ಮಾಣವಾಗಿತ್ತು! ನಾವು ಕೂಡ ಈ ಶಾರ್ಕ್ನಂತೆಯೇ. ಆಗಾಗ ನಮ್ಮ ಪ್ರಯತ್ನಕ್ಕೆ ಹಿನ್ನಡೆಯಾದರೆ ಅದನ್ನೇ ಮನಸ್ಸಿಗೆ ತೆಗೆದುಕೊಂಡು ಕೊನೆಗೆ ಪ್ರಯತ್ನ ನಡೆಸುವುದನ್ನೇ ನಿಲ್ಲಿಸಿಬಿಡುತ್ತೇವೆ. ಹಿಂದೆ ಸೋತಿದ್ದೇವೆ ಎಂಬ ಕಾರಣಕ್ಕೆ ಮುಂದೆಯೂ ಸೋಲುತ್ತೇವೆ ಎಂದು ನಮ್ಮ ಮನಸ್ಸು ಹೇಳುತ್ತಿರುತ್ತದೆ. ಅಲ್ಲೆಲ್ಲೂ ಇಲ್ಲದ ತಡೆಗೋಡೆಯೊಂದು ನಮ್ಮ ಮನಸ್ಸಿನಲ್ಲಿ ನಿರ್ಮಾಣವಾಗಿರುತ್ತದೆ. ಅದೊಂದು ಭ್ರಮೆ. ವಾಸ್ತವವಾಗಿ ನಾವು ಇರುವ ಜಾಗ ಮತ್ತು ನಮ್ಮಗುರಿಯ ನಡುವೆ ಯಾವ ಗೋಡೆಯೂ ಇಲ್ಲ. ಇದ್ದರೂ ಅವು ತಾತ್ಕಾಲಿಕ. ಸದಾ ಮುನ್ನುಗ್ಗುತ್ತಿದ್ದರೆ ನಾವಂದುಕೊಂಡಲ್ಲಿಗೆ ಖಂಡಿತ ಹೋಗಬಹುದು.





0 Comments