ಜೈಸಲ್ಮೇರಿನ ‘ಫತೇ ಕಾ ಕಚೋಡಿ’ ಎಂಬ ಮಾಯಾಂಗನೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಈಗ್ಗೆ ಕೆಲ ದಿನಗಳ ಹಿಂದಷ್ಟೆ ಮಹೇಶ ಕೇಳಿದ.
ಹೇ, ಮತ್ತೆ ಜೈಸಲ್ಮೇರಿಗೆ ಹೋಗೋಣ್ವಾ?
ಜೈಸಲ್ಮೇರಿಗಾ? ಮತ್ತೆ ಯಾಕೆ? ನನ್ನ ಪ್ರಶ್ನೆ.
ʻಇನ್ಯಾಕೆ? ಫತೇ ಕಾ ಕಚೋಡಿ(ರಿ) ತಿನ್ನೋದಕ್ಕೆʼ ಎಂದು ನಕ್ಕ.
ʻಸುಳ್ಳು ಹೇಳ್ಬೇಡ, ನಿಂಗೂ ಅನ್ಸತ್ತೆ ತಾನೇ?ʼ ಅಂತ ಮರುಪ್ರಶ್ನೆ ಬೇರೆ.

ʻನಂಗೇನೋ ಹೋಗುವ ಅನ್ನಿಸ್ತಿದೆ, ಆದ್ರೆ, ದೆಹಲಿಯಿಂದ ಜೈಸಲ್ಮೇರು ಹತ್ತಿರ ಹತ್ತಿರ ಎಂಟ್ನೂರು ಕಿಲೋಮೀಟರು. ಅಷ್ಟು ದೂರಕ್ಕೆ ಕಚೋಡಿ ತಿನ್ನೋದಕ್ಕೆ ಹೋಗಿದ್ದು ಅಂದರೆ ಯಾರಾದರೂ ಹುಚ್ಚಾ ಅಂದಾರು, ಅದೂ ಈ ಕೋವಿಡ್‌ ಕಾಲದಲ್ಲಿʼ ಅಂತಂದು ನಾನೂ ನಕ್ಕೆ. ನಮ್ಮೂರ ಕಡೆಯಲ್ಲೊಂದು ಪಾಪ್ಯುಲರ್‌ ಜೋಕಿದೆ, ʻಎಂಕು ಪಣಂಬೂರಿಗೆ ಹೋದದ್ದುʼ ಅಂತ, ಈಗಲೂ ಅದನ್ನು ಹಲವರು ಕಾಲಕಾಲಕ್ಕೆ ನೆನಪಿಸ್ತಾ ಇರ್ತಾರೆ. ಈ ಎಂಕಿಗೂ ನಮಗೂ ವ್ಯತ್ಯಾಸ ಏನಿಲ್ಲ ಅಂತಾರೆ ಜನ ಅಂದೆ.

ಹಿಂಗೊಂದು ಟೈಂಪಾಸ್‌ ಮಾತುಕತೆ ನಡೆದು ಅದು ಅಲ್ಲಿಗೇ ನಿಂತು ಬಹಳ ದಿನವಾಗಿಬಿಟ್ಟಿತ್ತು. ಫತೇ ಕಾ ಕಚೋಡಿಯ ಆಕರ್ಷಣೆಯೇ ಅಂಥದ್ದು. ಒಮ್ಮೆ ಹೋಗಿ ಎಲ್ಲ ಮರೆತು ಕಣ್ಣುಮುಚ್ಚಿ ತಿಂದು ಬಿಡುವ ಅಂತ ಅನಿಸುವಂಥ ರುಚಿ.

ಬೆಳಗ್ಗೆ ಏಳು ಗಂಟೆಗೆ ಆತ, ತುರಿಸಲೂ ಪುರುಸೊತ್ತಿಲ್ಲದಂತೆ ಜೈಸಲ್ಮೇರಿನ ಆ ಕೋಟೆಯ ಗೋಡೆಗಂಟಿದಂತೆ ತನ್ನ ಗಾಡಿಯಲ್ಲಿ ಕಚೋಡಿ ಕರಿದು, ಅದಕ್ಕೊಂದು ತೂತು ಮಾಡಿ, ಈರುಳ್ಳಿ ಹಾಕಿ, ಎರಡು ನಮೂನೆಯ ಚಟ್ನಿ ಹಾಕಿ, ಬದಿಯಲ್ಲಿ ಮೆಣಸಿಟ್ಟು ಕೊಡುವ ಸೊಬಗಿಗೆ ಜನ ಮುಗಿ ಬೀಳುತ್ತಾರೆ. ಜೈಸಲ್ಮೇರಿನ ಯಾವ ಭಾಗಕ್ಕೆ ಹೋದರೂ ಫತೇ ಕಾ ಕಚೋಡಿಗಿರುವ ಮರ್ಯಾದೆ ಬೇರೆ ಕಚೋಡಿಗಳಿಗಿಲ್ಲ. ಮೂರ್ನಾಲ್ಕು ದಶಕಗಳಿಂದ ಮಾಡಿಕೊಂಡು ಬಂದಿರುವ ಆ ಕುಟುಂಬದ ಕಚೋಡಿಯ ಕರಾಮತ್ತೇ ಅದು.

ಬಹಳ ಸಾರಿ, ಎಲ್ಲೆಲ್ಲೋ ತಿರುಗಾಡಿ, ಏನೇನೋ ಹೊಸದನ್ನೆಲ್ಲ ಟ್ರೈ ಮಾಡಿ, ಈ ಉತ್ತರದವ್ರು ಬೆಳ್ಬೆಳಗ್ಗೆ ಅದ್ಹೇಗೆ ಕಚೋಡಿ ತಿಂತಾರಪ್ಪಾ ಅಂತ ಅನಿಸಿತ್ತು. ಬೇರೆ ಎಷ್ಟೊತ್ತಲ್ಲಿ ಏನು ಕೋಟ್ರೂ ತಿನ್ಬೋದು, ಆದರೆ, ಬೆಳಗ್ಗೆ ಮಾತ್ರ ಹೊಟ್ಟೆಗೆ ಹಿತವಾಗಿರುವ ದೋಸೆನೋ, ಇಡ್ಲಿನೋ ಇಳೀಬೇಕಪ್ಪಾ, ಅದರ ಸುಖ- ನೆಮ್ಮದಿಯೇ ಬೇರೆ ಅಂತ ಜ್ಞಾನೋದಯವಾಗಿ ಬಿಡುತ್ತಿತ್ತು.

ಒಂದಿನ ಒಕೆ, ಎರಡನೇ ದಿನಾನೂ ನಡೆದೀತು, ಆಮೇಲೆ? ಮನೆ ದೋಸೆಯಷ್ಟು ರುಚಿ ಈ ಜಗತ್ತಿನಲ್ಲಿ ಯಾವುದೂ ಇಲ್ಲವಪ್ಪಾ ಎಂದು ಬ್ಯಾಕ್‌ ಟು ಟ್ರ್ಯಾಕಿಗೆ ಬಂದುಬಿಡುತ್ತಿದ್ದೆ. ಊರಿನ ಗಂಡಸರೆಲ್ಲ, ಬೆಳಗಾತ ಎದ್ದು ಹಲ್ಲುಜ್ಜಿ ಪಿಳಿಪಿಳಿ ಕಣ್ಣಿನಲ್ಲಿ ಮನೆ ತಿಂಡಿ ಬಿಟ್ಟು ಅದ್ಹೇಗೆ ರಸ್ತೆ ಬದಿಗೆ ಬಂದು ದಿನಾ ಕಚೋಡಿ ತಿಂತಾರಪ್ಪಾ ಅಂತ ಅಚ್ಚರಿಯಾಗೋದು. ಆದರೆ ಅದೊಂದು ಊರಲ್ಲಿ ಕಚೋಡಿ ತಿಂದ ಮೇಲೆ ಹಿಂಗೂ ಅದ್ಭುತ ರುಚಿಯ ಕಚೋಡಿ ಈ ಭೂಮಿ ಮೇಲಿದೆ ಅಂತ ಗೊತ್ತಾಗಿದ್ದು. ದಿನಾ ಬೆಳಗ್ಗೆ ಕೊಟ್ರೂ ಪ್ರಸಾದ ಎಂದು ಕಣ್ಣಿಗೊತ್ತಿ ತಿಂದುಬಿಡುವೆ ಅಂತನಿಸಿದ್ದು!

ಉತ್ತರದ ಬಹಳ ಊರುಗಳಲ್ಲಿ ಕಚೋಡಿ ಟ್ರೈ ಮಾಡಿದ್ದುಂಟು. ಯಾವುದೂ ಅಷ್ಟೊಂದು ಗಮನ ಸೆಳೆದಿರಲಿಲ್ಲ. ಒಮ್ಮೆ ತಿಂದು ಮರೆತು ಬಿಡುವಂಥದ್ದು ಅನಿಸಿತ್ತು ಆದರೆ, ಫತೇ ಕಾ ಕಚೋಡಿಯಲ್ಲಿ ಮಾತ್ರ  ಒಂದು ಊಹೆಗೂ ನಿಲುಕದ ಸೆಳೆತವಿದೆ ಎಂದು ಗೊತ್ತಾಗಿದ್ದು, ಇವತ್ತು ಹೊರಡಬೇಕಾಗಿದ್ದ ನಾವು ಈ ಒಂದು ಯಕಶ್ಚಿತ್‌ ಕಚೋಡಿಗಾಗಿ ನಮ್ಮ ಪ್ಲ್ಯಾನನ್ನೇ ಬದಲಿಸಿ ಒಂದು ದಿನ ಮುಂದಕ್ಕೆ ಹಾಕಿದ್ದೆವು ಅಂದರೆ ನೀವು ನಂಬಲೇಬೇಕು.

ಯಾವಾಗಲೂ ಎಲ್ಲಿಂದಲೇ ಆಗಲಿ, ಎಲ್ಲಿಗೇ ಆಗಲಿ, ಸೂರ್ಯೋದಯಕ್ಕಿಂತಲೂ ಮೊದಲೇ ಡ್ರೈವ್‌ ಶುರುಮಾಡಿಬಿಡುವ ನಾವು, ಈ ಕಚೋಡಿಗಾಗಿಯೇ, ಆ ಸಲ ಸೂರ್ಯನ ಹೊಂಬಣ್ಣ ಬೆಳ್ಳಗಾದ ಮೇಲೂ ಆತ ಎಷ್ಟು ಗಂಟೆಗೆ ತನ್ನ ಅಂಗಡಿ ತೆರೆಯುತ್ತಾನೆಂದು ಕೇಳಿ ತಿಳಿದು ಅವನು ತನ್ನ ಗಾಡಿ ತಳ್ಳಿಕೊಂಡು ಅಲ್ಲಿ ಬರುವವರೆಗೆ ಕಾದು ಕೂತಿದ್ದೆವು.

ಜೈಸಲ್ಮೇರಿನ ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುವಾಗ ಪರಿಚಯವಾದ ಆ ಅಂಗಡಿಯಾತನೊಬ್ಬ ಮಾತಾಡಿ ಮಾತಾಡಿ ಅದೆಷ್ಟು  ಆತ್ಮೀಯನಾದ ಎಂದರೆ, ಹೊರಡುವಾಗ, ತನ್ನ ಕಾರ್ಡು ಕೊಡುತ್ತಾ, ಬನ್ನಿ ನಮ್ಮೂರಿಗೆ, ಬಾಡ್‌ಮೇರ್‌ ಅಂತ. ಪಾಕಿಸ್ತಾನದ ಗಡಿಯಲ್ಲಿ ಬರುತ್ತದೆ. ನಮ್ಮೂರಿನ ಕಚೋಡಿಯೂ ಅಷ್ಟೇ. ಈ ಫತೇ ಕಾ ಕಚೋಡಿಯಂತೆಯೇ ರುಚಿಗೆ ಭಾರೀ ಫೇಮಸ್ಸು ಅಂದಿದ್ದೇ ತಡ, ಮಹೇಶನ ಕಿವಿ ನೆಟ್ಟಗಾಗಿತ್ತು. ನಡಿ ಹೋಗುವ ಅಂದಿದ್ದ. ʻಸಮಾಧಾನ ಸಮಾಧಾನ, ಮುಂದೆ ಹೋದರಾಯಿತುʼ ಎಂದು ಬ್ರೇಕ್‌ ಹಾಕಿದ್ದೆ. ಆ ಅಂಗಡಿಯಾತನ ಬಾಯಲ್ಲಿ ಕೇಳಿ ಗೂಗಲಿಸಿ ನೋಡಿ, ಪಾಕಿಸ್ತಾನದ ಗಡಿಯಲ್ಲಿರುವ ಈ ಬಾಡ್‌ಮೇರ್‌ ಎಂಬ ಪುಟಾಣಿ ಊರಿನ ಮೇಲೆ ಕುತೂಹಲ ಮೂಡಿದ್ದು ಆಗ. ಏನೇ ಇರಲಿ, ಒಮ್ಮೆ ಈ ಊರಿಗೂ ಹೋಗಬೇಕು ಅಂತ ಮನಸ್ಸಿನಲ್ಲಿ ಅಂದುಕೊಂಡು ವರ್ಷ ಒಂದು ದಾಟಿತ್ತು.

ಮೊನ್ನೆ ಮೊನ್ನೆ ದೆಹಲಿಯಿಂದ ಚೆನ್ನೈವರೆಗೂ ಡ್ರೈವ್‌ ಮಾಡಿಕೊಂಡು ಹೋಗೋದು ಅಂತ ಹೊರಟಾಗ ಮತ್ತೆ ನಮ್ಮ ಬಕೆಟ್‌ ಲಿಸ್ಟಿನಿಂದ ಇಣುಕಿ ನೋಡಿತು. ಸರಿ ಜೈ ಎಂದೆವು. ಬಾಡ್ಮೇರ್‌ ದಾರಿ ಕೊಂಕಣ ಸುತ್ತಿ ಮೈಲಾರ ಅಂತ ಗೊತ್ತಿದ್ದೂ ಗೊತ್ತಿದ್ದೂ ಆ ದಾರಿಯಾಗಿ ಹೊರಟು ಬಿಟ್ಟಿದ್ದೆವು. ಚೆನ್ನೈಗೆ ಹೊರಟವರು ಆ ಮೂಲೆಯ ಬಾಡ್ಮೇರಿಗೆ ಹೋದದ್ದಾದರೂ ಏಕೆ ಎಂದು ಕೇಳಿದರೆ, ಕೇವಲ ಒಂದು ಕಚೋಡಿ ಎಂದು ತಿಳಿದರೆ, ಹೀಗೂ ಉಂಟೇ ಎಂದಾರು.

ಬಾಡ್ಮೇರಿಗೆ ಬಂದಿದ್ದೇನೋ ಆಗಿತ್ತು. ಸಿಕ್ಕಿಸಿಕ್ಕಿದ ಕಚೋಡಿ ತಿನ್ನಲು ಸಾಧ್ಯವಿಲ್ಲ. ತಿಂದರೆ ಧಲ್ಲೂಜೀಯ ಕಚೋಡಿಯೇ ಆಗಬೇಕು. ಸರಿ, ಒಂದು ರೌಂಡು ಬಾಡ್ಮೇರಿನ ಮರಳುಗಾಡಿನಲ್ಲಿ ಸುತ್ತಾಡಿ ಅಲ್ಲಿಯ ಲೋಕಲ್‌  ಮಕ್ಕಳ ಸೈನ್ಯದೊಂದಿಗೆ ಸೂರ್ಯಾಸ್ತ ನೋಡಿ ಮರಳುವಾಗ ಗಂಟೆ ಏಳು. ಧಲ್ಲೂಜಿಯನ್ನು ಹುಡುಕಲು ಗಲ್ಲಿ ಗಲ್ಲಿ ಸುತ್ತಾಡಿ, ಒಂದರ್ಧ ಗಂಟೆ ಹೆಚ್ಚೇ ಆಯಿತು. ಇನ್ನೇನು ಧಲ್ಲೂಜಿ ಸಿಕ್ಕಿಬಿಟ್ಟಿತು ಅನ್ನುವಷ್ಟರಲ್ಲಿ ಲೋಕವೇ ನಡುಗಿ ಹೋಗುವ ಸೈರನ್ನು. ಏನಪ್ಪಾ ಅಂದಾಗಲೇ ಗೊತ್ತಾಗಿದ್ದು, ಕೊರೊನಾ ಪ್ರಯುಕ್ತ ಅಂಗಡಿಗಳನ್ನು ಮುಚ್ಚಲು ಮೊಳಗಿಸುವ ನಾದವಿದು ಅಂತ.

ಧಲ್ಲೂಜಿ ಬಾಗಿಲು ಮುಚುವ ತರಾತುರಿಯಲ್ಲಿದ್ದರೂ, ಚೆಂದಕ್ಕೇ ಮಾತನಾಡಿಸಿದರು. ಕಚೋಡಿ ಫುಲ್‌ ಖಾಲಿ. ಆರು ಗಂಟೆಗೆಲ್ಲ ಮಾಡಿದ ಅಷ್ಟೂ ಕಚೋಡಿ ಖಾಲಿಯಾಗಿಬಿಡುತ್ತದೆ. ಈಗ ಕೊರೋನಾ ಕಾಲವಾದ್ದರಿಂದ ಬೇಗ ಬಾಗಿಲು ಮುಚ್ಚಬೇಕು ನೋಡಿ. ಸರ್ಕಾರ ಬೇಗ ಬಾಗಿಲು ಹಾಕಿಸಿದರೇನಂತೆ, ಈ ಜನ ಮಾತ್ರ ಬೇಗ ಬಂದು ನಾವು ಮಾಡಿದಷ್ಟನ್ನೂ ಖಾಲಿ ಮಾಡಿಬಿಡುತ್ತಾರೆ. ನಾವು ಮಾಡಿದ್ದು ಒಂದೇ ಒಂದು ದಿನ ಮಿಕ್ಕಿದ್ದು ಅಂತ ಇಲ್ಲವೇ ಇಲ್ಲ ಎಂದರು. ಛೇ, ಈ ವಿಷಯ ಮೊದಲೇ ಗೊತ್ತಿರುತ್ತಿದ್ದರೆ ಎಂದು ತಲೆ ಮೇಲೆ ಕೈಯಿಟ್ಟೆವು.

ನಾವು ಧಲ್ಲೂಜಿ ಕಚೋಡಿಗಾಗಿಯೇ ಕೊಂಕಣ ಸುತ್ತಿ ಮೈಲಾರ ಪ್ಲ್ಯಾನು ಮಾಡಿದ್ದು ಎಂದು ತಿಳಿದು ಅವರಿಗೂ ಸಂಕಟವಾಯಿತು. ಒಂದು ಕೆಲಸ ಮಾಡಿ, ನೀವು ನಾಳೆ ಬನ್ನಿ. ಬಿಸಿ ಬಿಸಿ ಕಚೋಡಿ ಕೊಡುವ ಎಂದರು. ಸರಿ, ಎಷ್ಟು ಗಂಟೆಗೆ ಓಪನ್‌ ಆಗುತ್ತೆ ಅಂದರೆ ಒಂಭತ್ತು ಎಂದರು. ನಮಗೆ ಇನ್ನೂ ತಲೆಬಿಸಿಯಾಯಿತು. ಒಂಭತ್ತರ ಮೊದಲು ತೆರೆಯುವಂತಿಲ್ಲ ನೋಡಿ, ಎಂದು ಮತ್ತೆ ಸರ್ಕಾರದ ರೂಲ್ಸನ್ನು ಮಧ್ಯೆ ತಂದರು. ನೀವು ೮.೩೦ರ ಹಂಗೆ ಬಂದ್ಬಿಡಿ, ಆದಷ್ಟು ಬೇಗ ನಿಮಗೆ ಕೊಡುವ ವ್ಯವಸ್ಥೆ ಮಾಡುವ ಎಂದರು.

ಬೆಳಗ್ಗೆ ಬಹಳ ಬೇಗ ಹೊರಟುಬಿಡಬೇಕೆಂಬ ಲೆಕ್ಕಾಚಾರ ತಲೆ ಕೆಳಗಾಗಿಬಿಟ್ಟಿತ್ತು. ಇಷ್ಟೆಲ್ಲ ಆಗಿ, ಇನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಲೇಟಾಗಿ ಹೊರಡುವ ಪ್ಲಾನು ಮಾಡಿ, ತಿಂದು ತೇಗಿಯೇ ಹೊರಟೆವು ಅನ್ನಿ. ಹತ್ತಿರ ಹತ್ತಿರ ಫತೇ ಕಾ ಕಚೋಡಿಯೇ! ನೋ ಡೌಟು. ಅಂದಹಾಗೆ ದೆಹಲಿಯ ಎಂತೆಂಥ ಕಚೋಡಿ ಜಾಯಿಂಟುಗಳೂ ಕೂಡೂ ಇವೆರಡು ಕಚೋಡಿಯ ಹತ್ತಿರವೂ ನಿಲ್ಲಲಾರವು ಎಂಬುದು ಅಪ್ಪಟ ಸತ್ಯ.

****

ಈ ಫತೇ ಕಾ ಕಚೋಡಿ ಜಸ್ಟ್‌ ಒಂದು ಉದಾಹರಣೆ. ನಮ್ಮ ಭಾರತದಲ್ಲಿ ಸ್ಟ್ರೀಟ್‌ ಫುಡ್‌ ಇದೆಯಲ್ಲ, ಅದರಲ್ಲಿರುವಷ್ಟು ವೈವಿಧ್ಯತೆ ಜಗತ್ತಿನ ಬೇರೆಲ್ಲೂ ಹುಡುಕಿದರೂ ಸಿಕ್ಕದು. ಒಂದೊಂದು ಊರಿನಲ್ಲೂ ಫತೇ ಕಾ ಕಚೋಡಿಯಂಥ ಮೂರ್ನಾಲ್ಕು ಪುಟಾಣಿ ಅಂಗಡಿಗಳಿದ್ದೇ ಇರುತ್ತದೆ. ಅದಕ್ಕೆ ಅದರದ್ದೇ ಆದ ಚರಿತ್ರೆ ಇರುತ್ತದೆ. ಅಲ್ಲಿ ದಿನವೂ ಸೇರುವ ಮಂದಿಯೂ ಇರುತ್ತಾರೆ. ಅದು ಕಟ್ಟಿಕೊಡುವ ಅಪರೂಪದ ಬಂಧ ಇನ್ಯಾವುದೋ ಸ್ಟಾರ್‌ ಹೋಟೆಲಿನ ಜಗಮಗಿಸುವ ಆಡಂಬರದಲ್ಲಿ ಸಿಗುವುದಿಲ್ಲ. ಅದ್ಯಾವುದೋ ಊರಿನ, ಹೆಸರಿಲ್ಲದ ಗೂಡಂಗಡಿಯ ಚಹಾದ ಘಮ ಹೇಗೆ ಆರುವುದಿಲ್ಲವೋ ಹಾಗೆ. ರೈಲಿನೊಳಗೆ ಸಿಗುವ ಬಗೆಬಗೆಯ ಜನರು, ಬಗೆಬಗೆಯ ಮುಖ- ಭಾವ ವಿಮಾನದಲ್ಲೂ ಬೇಕೆಂದರೆ ಹೇಗೆ… ಹಾಗೆ.

ಕೆಲ ಸಮಯಗಳ ಹಿಂದೆ, ದಕ್ಷಿಣದ ಗೆಳೆಯರೊಬ್ಬರು ನಮ್ಮ ಜೊತೆ ಪ್ರಯಾಣಕ್ಕೆ ಜೊತೆಯಾಗಿದ್ದರು. ಆಗ್ರಾ ದಾಟುವ ಸಂದರ್ಭ, ಅಲ್ಲಿನ ಪ್ರಸಿದ್ಧ ಬೇಡೈ ತಿನ್ನಬೇಕೆಂದು ನಾವು ಲೆಕ್ಕಾಚಾರ ಹಾಕಿಕೊಂಡರೆ, ಅವರು ಮಾತ್ರ, ʻಏ ಎಲ್ಲಿಯಾದ್ರೂ ಸೌತ್‌ ಇಂಡಿಯನ್‌ ರೆಸ್ಟೋರೆಂಟಿದ್ದರೆ ನಿಲ್ಲಿಸ್ರೋ. ಇಲ್ಲಿಯ ಫುಡ್ಡು ಬಾಯಿಗಿಡಕ್ಕಾಲ್ಲ ಮಾರಾಯ್ರೇʼ ಅಂದು ಬಿಟ್ಟರು. ಅಲ್ಲಿ ಈ ಸೌತ್‌ ಇಂಡಿಯನ್ನು ಹುಡುಕಲು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಸಿಕ್ಕರೂ, ಅವರು ಮಾಡಿದ ಸೌತ್‌ ಇಂಡಿಯನ್ನು ಬಾಯಿಡುವ ಶಾಪ ಯಾರಿಗೂ ಬೇಡ. ಬೇಡೈ ಆಸೆಗಂತೂ ತಣ್ಣೀರು ಬಿದ್ದಿತ್ತು.  ಆ ಇಡೀ ಪ್ರಯಾಣ ಒಳ್ಳೆಯ ಸೌತ್‌ ಇಂಡಿಯನ್ನು ಹುಡುಕೋದ್ರಲ್ಲೇ ಆಯ್ತು. ನಾವೇನು ಮಾಡಬಾರದು ಎಂಬುದಕ್ಕಿದು ಪಾಠ ಅಷ್ಟೆ.

ಹೊಸ ಊರಿನಲ್ಲಿ ಆ ಊರಿನವರೇ ನಾವಾಗಿಬಿಟ್ಟರೆ ದಕ್ಕುವ ಅನುಭವ ಬೇರೆಯದೇ. ತಿರುಗಾಟವನ್ನು ಕಂಪ್ಲೀಟ್‌ ಮಾಡಿಕೊಡುವ ತಾಕತ್ತು ಆಯಾ ಊರಿನ ಆಹಾರಪದ್ಧತಿಗಿದೆ. ರಾಜಸ್ಥಾನದಲ್ಲಿ ಎಲ್ಲೇ ತಿರುಗಾಡಿ, ಅಲ್ಲಿ ಬೆಳ್ಳಂಬೆಳಗ್ಗೆ ಪುಟ್ಟಪುಟಾಣಿ ಅಂಗಡಿಗಳಲ್ಲಿ ಸಿಗುವ ಪೋಹಾ ತಿನ್ನಬೇಕು. ಅಷ್ಟು ರುಚಿ. ರಾಜಸ್ಥಾನದ ದಾಲ್‌ ಭಾಟಿ ಚೂರ್ಮ, ಗುಜರಾತಿನ ಹಾದಿಯುದ್ದಕ್ಕೂ ಸಿಗುವ ದಬೇಲಿ, ಮಹಾರಾಷ್ಟ್ರದಲ್ಲಿ ಬೆಳ್ಳಂಬೆಳಿಗ್ಗೆ ಸಿಗುವ ಬಿಸಿ ಬಿಸಿ ಮಿಸಲ್‌ ಪಾವ್‌, ಪಂಚಾಬಿನಲ್ಲಿ ಛೋಲೆ-ಬತುರಾ, ಒಂದೊಂದು ಪುರಿಯಲ್ಲೂ ಬೇರೆ ಬೇರೆ ಫ್ಲೇವರಿನ ಪಾನಿ ಸುರಿದು ಕೊಡುವ ಲಖ್ನೋವಿನ ಗೋಲ್‌ಗಪ್ಪ, ಮಥುರಾ- ವೃಂದಾವನದ ಲಸ್ಸೀ-ಪೇಡಾ, ಚಳಿಗಾಲ ಬರುತ್ತಿದ್ದಂತೆ ದೆಹಲಿಯಲ್ಲಿ ದೊರೆಯುವ ಮಕ್ಕೀ ಕಾ ರೋಟಿ- ಸರಸೋಂಕಾ ಸಾಗ್‌ಗಳು, ಬಗೆಬಗೆಯ ಪರಾಠಾಗಳು ಹೀಗೆ ಲಿಸ್ಟು ಮುಂದುವರಿಯುತ್ತಾ ದೊಡ್ಡದಿದೆ.

****

ನನಗೆ ಬಹಳ ಮಜಾ ಸಿಗುವುದು, ಉತ್ತರದವರ ಬಾಯಲ್ಲಿ ನಮ್ಮ ಆಹಾರದ ಬಗ್ಗೆ ಕೇಳುವ ಗುಣಗಾನ. ಆಕೆ ಹೀಗೆ ಶುರುಮಾಡಿದ್ದಳು. ʻಹೇ ನಾನೊಮ್ಮೆ ಬೆಂಗ್ಳೂರಲ್ಲಿ ಸಮೋಸ ತಿಂದೆ ಮಾರಾಯ್ತಿ. ಫಸ್ಟ್‌ ಬೈಟಲ್ಲೇ ಒಂದು ಕರಿಬೇವು ಸಿಕ್ತು. ಮತ್ತೊಂದು ಬೈಟಿಗೆ ಇನ್ನೊಂದು. ಒಟ್ಟಾರೆ ಒಂದು ಸಮೋಸದಲ್ಲಿ ನಾಲ್ಕು ಕರಿಬೇವು ಸಿಕ್ತು! ನಾನು ಸಮೋಸ ತಿಂತಿದೇನಾ ಅಥವಾ ಕರಿಬೇವಾ ಅಂತ ಡೌಟು ಬಂದಿತ್ತು, ನೀವು ದಕ್ಷಿಣದವ್ರು ಇದ್ದೀರಲ್ಲ ಸಿಕ್ಕಿಸಿಕ್ಕಿದ್ದಕ್ಕೆಲ್ಲ ಕರಿಬೇವು ಹಾಕಿಬಿಡ್ತೀರಪ್ಪ!ʼ ಅಂತ ಗೊಳ್ಳೆಂದು ಹೊಟ್ಟೆ ಹಿಡಿದುಕೊಂಡು ನಕ್ಕಳು. ಜೊತೆಗೆ ನಾನೂ.

ಒಳ್ಳೆ ಪಾಯಿಂಟು ನೋಡಿದು. ನಾನೂ ಇಷ್ಟರವರೆಗೆ ಗಮನಿಸಿಯೇ ಇಲ್ಲ ಇದನ್ನು. ನಮಗೆಲ್ಲ ಕರಿಬೇವು ಅಂದ್ರೆ ʻಉಪ್ಪಿಗಿಂತ ರುಚಿಯಿಲ್ಲʼದ ಥರ ಅಭ್ಯಾಸವಾಗಿ ಹೋಗಿದೆ. ಅದು ಇದ್ರೂ ಅದರ ಇರುವಿಕೆಯೂ ಎಷ್ಟು ಅಭ್ಯಾಸವಾಗಿದೆ ಎಂದರೆ, ಅದಿರುವುದೂ ಗೊತ್ತೇ ಆಗುವುದಿಲ್ಲ. ಒಳ್ಳೆ ವಿಷಯ ಹೇಳಿದೆ ನೀನು ಎಂದೆ.

ಅದೇನೇ ಇರಲಿ, ದೋಸೆ ಹಿಟ್ಟು ಇದ್ಯಾ? ಅರ್ಜೆಂಟು ದೋಸೆ ತಿನ್ನುವ ಬಯಕೆ ಎಂದಳು. ದಕ್ಷಿಣ ಭಾರತೀಯರ ಮನೆಯಲ್ಲಿ ದೋಸೆ ಹಿಟ್ಟು ಡಿಫಾಲ್ಟು, ಇದ್ದೇ ಇರತ್ತೆ, ಇಲ್ಲದೆ ಎಲ್ಲಿಗೆ ಹೋಗುತ್ತೆ ಬಾ ಎಂದೆ.

ಆಹಾ, ನೀವು ದಕ್ಷಿಣದವ್ರು ಈ ತೆಂಗಿನಕಾಯಿ ಚಟ್ನಿ ಎಂಬ ಸ್ವರ್ಗವನ್ನು ಹೇಗೆ ಸೃಷ್ಟಿ ಮಾಡ್ತೀರಪ್ಪ! ನಾವು ಎಷ್ಟೇ ಕಷ್ಟ ಪಟ್ರೂ ನಿಮ್ಮ ಥರ ಚಟ್ನಿ ಮಾಡೋದಕ್ಕಾಗಲ್ಲ ಎಂದು ನಕ್ಕಳು. ʻಅರೆ, ಚಟ್ನಿ ಮಾಡೋದು ಹೇಗೆ ಅಂಥ ಯಾರಾದ್ರೂ ಕೇಳ್ತಾರಾ? ಅದೂ ಬರೀ ಕಾಯಿ ಚಟ್ನೀನ ಎನ್ನುತ್ತಾ ನಾನು ಹೊರ ಬರಬೇಕಾದರೆ, ಆಕೆ ತನ್ನ ತಟ್ಟೆಗೆ ಬಿದ್ದ ಹೊಂಬಣ್ಣದ ಆ ಕ್ರಿಸ್ಪೀ ದೋಸೆ ಕಂಡು ಆಹಾ ಎನ್ನುತ್ತಾ ಚಟ್ನಿ ಬಡಿಸಿಕೊಳ್ಳಲು ಪಾತ್ರೆ ಮುಚ್ಚಳ ತೆರೆದಳು. ಈ ಬಾರಿ ಸ್ವಲ್ಪ ಜಾಸ್ತಿಯೇ ಕರಿಬೇವಿನ ಒಗ್ಗರಣೆ ಬಿದ್ದಿತ್ತು!

‍ಲೇಖಕರು ರಾಧಿಕ ವಿಟ್ಲ

January 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: