ಜೈಪುರದ ಟೀಕಂ ಚಾಂದನ ವಿಂಟೇಜ್ ಕ್ಯಾಮರಾ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಅದೊಂದು ಕಾಲ ಇತ್ತು. ನಾವೆಲ್ಲ ಕುಟುಂಬ ಸಮೇತರಾಗಿ ಅಪರೂಪಕ್ಕೊಂದು ಪ್ರವಾಸ ಹೋಗುವುದು, ಬೇಲೂರೋ, ಹಳೆಬೀಡೋ, ಶ್ರವಣಬೆಳಗೊಳದ ಗೊಮ್ಮಟನ ಎದುರೋ, ಮೈಸೂರಿನ ಮಹಿಷಾಸುರ ಪ್ರತಿಮೆಯ ಎದುರೋ ಸಾಲಾಗಿ ನಿಂತು ಅಲ್ಲೇ ಕ್ಯಾಮರಾ ನೇತಾಡಿಸಿಕೊಂಡು ತಿರುಗಾಡುವ ಫೋಟೋಗ್ರಾಫರ ಬಳಿಯಲ್ಲಿ ಒಂದೆರಡು ಫೋಟೋ ಹೊಡೆಸಿಕೊಂಡು, ಆ ಒಂದು ಪ್ರವಾಸ ಪರಿಪೂರ್ಣವಾಯಿತೆಂಬ ಖುಷಿಯಿಂದ ಆತ ಹೇಳಿದ ದುಡ್ಡು ಜೊತೆಗೆ ಅಡ್ರೆಸ್‌ ಕೊಟ್ಟು, ಆತ ಮನೆ ವಿಳಾಸ ಕಳಿಸಿಕೊಟ್ಟಾನೆಂಬ ಪುಕುಪುಕು ನಂಬಿಕೆಯನ್ನು ಹೊತ್ತುಕೊಂಡು ಮನೆಗೆ ಮರಳುವುದು!

ವಾರದ ನಂತರ ಮನೆಗೆ ಬಂದ ಕವರು ಹರಿದು ಫೋಟೋ ಹೇಗೆ ಬಂದಿದೆಯೆಂದು ನೋಡಿಕೊಂಡು ಅದನ್ನೊಂದು ಆಲ್ಬಮ್ಮಿನಲ್ಲಿ ಸಿಕ್ಕಿಸಿ, ಮನೆಗೆ ಬರುವ ನೆಂಟರಿಷ್ಟರಿಗೆಲ್ಲ ತೋರಿಸಿ ತೋರಿಸಿ ಸಂಭ್ರಮಿಸುವುದು. ಇನ್ನೂ ಕೆಲವೊಮ್ಮೆ ಮೆಲ್ಲಗೆ ಪುಸ್ತಕದೆಡೆಯಲ್ಲಿ ಅಡಗಿಸಿಟ್ಟು ಶಾಲೆಗೆ ತೆಗೆದುಕೊಂಡು ಹೋಗಿ, ಹೇಗೋ ಮೇಷ್ಟ್ರಿಗೆ ಗೊತ್ತಾಗದಂತೆ ಪಾಠದ ನಡುವಲ್ಲಿ ಗೆಳೆಯ ಗೆಳತಿಯರೆಲ್ಲ ಒಬ್ಬರಿಗೊಬ್ಬರು ಪಾಸ್‌ ಮಾಡಿಕೊಂಡು ನೋಡಿ ತಮಾಷೆ ಮಾಡಿ ನಕ್ಕು ಸಂಭ್ರಮಿಸುವುದು! ೯೦ರ ದಶಕದಲ್ಲಿ ಪುಟಾಣಿಗಳಾಗಿದ್ದವರ ನಾಸ್ಟಾಲ್ಜಿಯಾ ಬಹಳ ಮಧುರ. ಅದು ಹಿಂದಿನವರಿಗೂ ದಕ್ಕಿರಲಿಕ್ಕಿಲ್ಲ, ಮುಂದಿನವರಿಗೂ ಇಲ್ಲ. ಅದೊಂಥರಾ ಪರಿವರ್ತನೆಯಾಗುತ್ತಿದ್ದ ಆದರೆ, ಎಲ್ಲ ಮಧುರತೆಯನ್ನೂ ಇಟ್ಟುಕೊಂಡಿದ್ದ ಸಮೃದ್ಧ ಕಾಲಘಟ್ಟ.

ಈಗ ಕೈಗೆ ಫೋನು ಬಂದು ಫೋನಿನಲ್ಲಿ ಕ್ಯಾಮರಾವೂ ಸೇರಿಕೊಂಡು ಜಗತ್ತು ಸಂಪೂರ್ಣ ಬದಲಾಗಿದೆ. ಫೋಟೋ ತೆಗೆಸಿಕೊಳ್ಳುವುದು ಎಂಬುದೂ ಕೂಡಾ ಜೀವಮಾನದ ಅತ್ಯಂತ ಅಪರೂಪದ ಘಟನೆಯೆಂಬಂತೆ ಇದ್ದ ಕಾಲವೊಂದು ಮಗ್ಗಲು ಬದಲಾಯಿಸಿಕೊಂಡು, ನಿಂತರೆ ಕೂತರೆ ಮಲಗಿದರೆ ಎದ್ದರೆ ಎಂಬಂತೆ ರಾಶಿ ರಾಶಿ ಸೆಲ್ಫೀಗಳು ನಮ್ಮ ಫೋನಿನ ಗ್ಯಾಲರಿಯಲ್ಲಿ ಕೂರುತ್ತವೆ. ಈ ಡಿಜಿಟಲ್‌ ಯುಗ ಸಾಮಾನ್ಯ ಜನರಿಗೆ ಮರೀಚಿಕೆಯಾಗಿ ಉಳಿದಿದ್ದ ಫೋಟೋಗ್ರಫಿ ಎಂಬ ಕಲೆಯನ್ನೂ ಸಾಕಷ್ಟು ಕೈಗೆಟಕುವಂತೆ ಮಾಡಿದೆ.

ಅದೊಂದು ದಿನ ರಾಜಸ್ಥಾನದ ಉದಯಪುರದಿಂದ ಮರಳುತ್ತಿರಬೇಕಾದರೆ, ಜೈಪುರ ದಾಟಿಕೊಂಡು ಬರುವಾಗ ಥಟ್ಟನೆ ಲಕ್ಷ್ಮಿ ಮಿಷ್ಠಾನ್‌ ಭಂಡಾರದ ನೆನಪಾಗಿ, ಕೇವಲ ಮಳೆಗಾಲದಲ್ಲಷ್ಟೆ ಸಿಗುವ ಜೇನುಗೂಡಿನಂಥ ಪದರುಗಳನ್ನು ಹೊಂದಿದ ಘೇವರ್ ಎಂಬ ಸಿಹಿತಿನಿಸು ನೆನಪಾಗಿ ಒಂದಿಷ್ಟು ಹೊಟ್ಟೆಗಿಳಿಸುವ ಎಂದುಕೊಂಡು ಪಿಂಕ್‌ ಸಿಟಿಯೊಳಗೆ ಹೊಕ್ಕು ಹವಾಮಹಲ್‌ ದಾಟಿಕೊಂಡು ಬರುವಾಗ ಕಣ್ಣಿಗೆ ಬಿದ್ದಿದ್ದು ಟ್ರೈಪಾಡ್‌ ಮೇಲೆ ಇಷ್ಟು ದೊಡ್ಡ ಪೆಟ್ಟಿಗೆಯಂಥಾ ಕ್ಯಾಮರಾ ಸಿಕ್ಕಿಸಿಕೊಂಡು ಪ್ರವಾಸಿಗರ ಫೋಟೋ ತೆಗೆಯುತ್ತ ನಿಂತಿದ್ದ ನಗುಮೊಗದ ವ್ಯಕ್ತಿ. ಹೆಸರು ಟೀಕಂ ಚಾಂದ್ ಪಹಾಡಿ.‌ ವಯಸ್ಸು ಸುಮಾರು ೫೫ರ ಆಸುಪಾಸು. ಯಾರೇ ಆದರೂ ಹವಾಮಹಲ್‌ ಎದುರು ಓಡಾಡಿದರೆ ಸಿಕ್ಕೇ ಸಿಗುವ ವ್ಯಕ್ತಿ. ವಿಶೇಷ ಅಂದರೆ, ಈತ ಬಳಸುತ್ತಿರುವುದು ಸುಮಾರು ೧೬೦ ವರ್ಷಗಳಷ್ಟು ಹಳೆಯ ಕ್ಯಾಮರಾ!

ಹವಾ ಮಹಲಿನ ಎದುರಿನ ಫುಟ್ಪಾತಿನಲ್ಲಿ ಕ್ಯಾಮರಾ ಇಟ್ಟುಕೊಂಡು ಇಂದಿಗೂ ಗತಕಾಲದ ನೆನಪನ್ನು ಹಂಚುವ ಈ ಟೀಕಂ ಚಾಂದ್‌ ಅವರ ಅಜ್ಜ ಪಹಾಡಿ ಲಾಲ್‌ ಅವರು ಜೈಪುರ ಮಹಾರಾಜರ ಅಧಿಕೃತ ಛಾಯಾಗ್ರಾಹಕರಾಗಿದ್ದರಂತೆ. ಸುಮಾರು ೫೦ ವರ್ಷ ಕ್ಯಾಮರಾ ಜೊತೆ ಕೆಲಸ ಮಾಡಿದ ಅನುಭವ ಅವರದ್ದು. ಇದಾದ ನಂತರ ಚಾಂದ್‌ ಅವರಪ್ಪ ಈ ಕೆಲಸ ಮುಂದುವರಿಸಿದರು. ಅಪ್ಪನ ಜೊತೆಗೆ ಒಡನಾಡಿ ಕಲಿತುಕೊಂಡು, ೧೯೭೭ರಿಂದ ಇದನ್ನು ಟೀಕಂ ಅವರೇ ಬಳಸತೊಡಗಿದರಂತೆ. ಬಹಳ ವರ್ಷಗಳಿಂದ ಇದೇ ಹವಾ ಮಹಲಿನ ಇದೇ ಫುಟ್ಪಾತು ಅವರ ದಿನನಿತ್ಯದ ಜಾಗ.

ಜರ್ಮನಿ ಮೂಲದ ಕ್ಯಾಮರಾ ಲೆನ್ಸ್‌ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಸುಮಾರು ೧೭೫ ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆ ಕಾರ್ಲ್‌ ಝೈಸ್‌ನ ಕ್ಯಾಮರಾ ಇದಾಗಿದ್ದು, ಆ ಕಾಲದ ಬಹುತೇಕ ಸ್ಟ್ರೀಟ್‌ ಫೋಟೋಗ್ರಾಫರುಗಳು ಇಂಥವನ್ನೇ ಬಳಸುತ್ತಿದ್ದರು. ಮರದ ದೊಡ್ಡ ಬಾಕ್ಸ್‌ ಮಾದರಿಯ ವಿಶೇಷ ಕ್ಯಾಮರಾ ಇದು. ಇದರಲ್ಲಿ ಕ್ಯಾಮೆರಾ ಮುಂದಿದ್ದರೆ, ಅದನ್ನು ಸ್ಥಳದಲ್ಲೇ ಸಂಸ್ಕರಿಸಿ ನಿಮಿಷಗಳಲ್ಲಿ ಚಿತ್ರ ಮಾಡಿ ಕೊಡುವ ಡಾರ್ಕ್‌ರೂಮ್ ಭಾಗ ಅದರ ಹಿಂಬದಿಯಲ್ಲಿ ಇರುತ್ತಿತ್ತು. ಇವಿಡೀ ಕ್ಯಾಮರಾದ ಭಾಗವೇ ಆಗಿದ್ದು ಇದರಲ್ಲಿ ಫೋಟೋ ಹಾಗೂ ಸಂಸ್ಕರಣೆ ಎರಡೂ ಜೊತೆಗೇ‌ ಕೆಲವೇ ನಿಮಿಷಗಳಲ್ಲಿ ಮಾಡಬಹುದಾಗಿದೆ.

ಟೀಕಂ ಹೇಳುವಂತೆ, ಇದು ಸುಮಾರು ೧೬೦ ವರ್ಷಗಳಷ್ಟು ಹಳೆಯ ಕ್ಯಾಮರಾ. ಇದಕ್ಕಿಂತ ಹಳೆಯ ಕ್ಯಾಮರಾಗಳು ಪ್ರಪಂಚದಲ್ಲೇ ಇಲ್ಲ ಎಂದು ನಾನು ಹೇಳುವಷ್ಟು ಗೊತ್ತಿಲ್ಲ. ಆದರೆ, ಇರುವ ಹಳೇ ಕ್ಯಾಮರಾಗಳೆಲ್ಲ ವಸ್ತು ಸಂಗ್ರಹಾಲಯಗಳನ್ನು ಸೇರಿಕೊಂಡಿವೆ. ನನಗೆ ಗೊತ್ತಿರುವ ಹಾಗೆ ಇಷ್ಟು ಹಳೆಯ ಕ್ಯಾಮರಾವನ್ನು ಹೀಗೆ ಬೀದಿಯಲ್ಲಿ ಹಿಡಿದು ಫೋಟೋ ತೆಗೆಯುವವರು ಯಾರೂ ಇಲ್ಲ. ಈಗಲೂ ಸಮರ್ಥವಾಗಿ ಕಾರ್ಯ ನಿರ್ವಹಿಸುವ ಅತ್ಯಂತ ಹಳೆಯ ಕ್ಯಾಮರಾ ಏನಾದರೂ ಇದ್ದರೆ ಅದು ಇದೇ ಇರಬಹುದು ಎನ್ನುತ್ತಾರೆ.

ಹಾಳಾದರೆ, ಏನಾದರೂ ತೊಂದರೆಗಳಿದ್ದರೆ ಏನು ಮಾಡುತ್ತೀರಿ ಎಂದರೆ, ಇದನ್ನು ರಿಪೇರಿ ಮಾಡುವವರು ಸಿಗೋದಿಲ್ಲ, ಈ ಕ್ಯಾಮರಾದ ಅಪ್ಪ ಅಮ್ಮ ಎಲ್ಲ ನಾನೇ. ಇದರ ನಾಡಿಮಿಡಿತ ನನಗೆ ಗೊತ್ತು. ಇದರ ರಿಪೇರಿ ಕೂಡಾ ಗೊತ್ತು. ಇದಕ್ಕೆ ನಾನು ಗೊತ್ತು. ನನಗೆ ಇದು ಗೊತ್ತು. ಇಬ್ಬರೂ ಒಬ್ಬರನ್ನೊಬ್ಬರು ಚೆಂದಕ್ಕೆ ಅರ್ಥ ಮಾಡಿಕೊಂಡಿದ್ದೇವೆ. ಎಲ್ಲಿಯವರೆಗೆ ಇದಕ್ಕೆ ಬೇಕಾದ ವಸ್ತುಗಳು ದೊರೆಯುತ್ತವೆಯೋ ಅಲ್ಲಿಯವರೆಗೂ ಹೇಗೋ ಸಂಭಾಳಿಸಿಕೊಂಡು ಹೋಗಬಹುದು.

ಮುಂದಿನದು ನಮ್ಮ ಕೈಲಿಲ್ಲ ನೋಡಿ. ನನಗೆ ಎಷ್ಟು ಕಾಲ ಸಾಧ್ಯವೋ ಅಷ್ಟು ಕಾಲ ಮಾಡುವುದು, ಅಜ್ಜನಿಂದ ನನ್ನ ಅಪ್ಪ, ಅಪ್ಪನಿಂದ ಈಗ ನಾನು ಈ ಕ್ಯಾಮರಾ ಸಂಸ್ಕೃತಿಯನ್ನು ದಾಟಿಸಿಕೊಂಡು ಹೋದಂತೆ ನನ್ನಿಂದ ನನ್ನ ಮಗನೂ ಇದನ್ನು ಮುಂದುವರಿಸಲಿ ಎಂಬ ಆಸೆ ಇದೆ. ಆತನಿಗೆ ಕ್ಯಾಮರಾ ಬಗ್ಗೆ, ಅದರ ರಿಪೇರಿ ಎಲ್ಲವನ್ನೂ ಕಲಿಸುತ್ತಿರುವೆ. ಆದರೂ ನನ್ನ ಹಾಗೆ ಹೀಗೆ ಹವಾ ಮಹಲಿನ ಎದುರು ಅವರು ಕೂತಾರೆಂಬ ನಿರೀಕ್ಷೆ ಇಲ್ಲ. ಆದರೆ, ನನ್ನ ಉಸಿರಿರುವವರೆಗೂ ಇದನ್ನು ನನಗೆ ಬಿಟ್ಟಿರಲಾಗದು ಎಂದು ನಗುತ್ತಾರೆ.

ಇಷ್ಟು ಮಾತಾಡುತ್ತಾ ಆಡುತ್ತಾ ಟೀಕಂ, ಯಾವ ಸೈಜಿನ ಫೋಟೋ ಬೇಕು ಎಂದು ಕೇಳಿ ರೇಟುಗಳನ್ನೂ ಹೇಳಿ ತಮ್ಮ ಕ್ಯಾಮರಾಕ್ಕೆ ಮುಚ್ಚಿದ್ದ ಪರದೆ ಸರಿಸಿ, ಕ್ಯಾಮರಾವನ್ನು ಸ್ವಲ್ಪ ಮೇಲಕ್ಕೆ ಸೆಟ್‌ ಮಾಡಿದರು. ಮಗನ ಜೊತೆ ಅವನಜ್ಜಿಯೂ ಕೂತರು. ಟೀಕಂ ತನ್ನ ಝೈಸ್‌ ಲೆನ್ಸನ್ನು ಫೋಕಸ್‌ ಮಾಡುತ್ತಾ, ಮುಖಭಾವ ಹೇಳುತ್ತಾ, ಒನ್‌, ಟು, ತ್ರೀ… ಫೋಟೋ ಕ್ಲಿಕ್ಕಾಯಿತು, ಅಷ್ಟೇ. ಇನ್ನು ಹತ್ತು ನಿಮಿಷ ಮಾತಾಡುತ್ತಾ, ಹೇಗೆ ಸಂಸ್ಕರಣೆ ಎಂದು ತೋರಿಸುತ್ತಾ, ಒಳಗಿನಿಂದ ನೆಗೆಟಿವ್‌ ಮೊದಲು ತೆಗೆದವರು, ಆಮೇಲೆ ಪಾಸಿಟಿವ್‌ ತೆಗೆದರು. ಕಪ್ಪು ಬಿಳುಪಿನ ಅಜ್ಜಿ ಮೊಮ್ಮಗನ ಪುಟಾಣಿ ಚಿತ್ರ ನಮ್ಮ ಕೈಸೇರಿತು.

ʻಕೈಲಿ ನಮ್ಮ ಫೋಟೋ ಹಿಡಿದು ನೋಡುವ ಖುಷಿಯೇ ಬೇರೆ ಅಲ್ವಾ? ಈಗ ಆ ಭಾಗ್ಯ ಎಲ್ಲಿದೆ ಹೇಳಿʼ ಎಂದ ಟೀಕಂ ಮುಂದುವರಿದು, ನೋಡಿ, ನನಗಂತೂ ಹಲವು ಬಗೆಯ ಕ್ಯಾಮರಾಗಳ ಒಡನಾಟ ದಕ್ಕಿದೆ, ಪಿನ್‌ಹೋಲ್‌ ಕ್ಯಾಮರಾದಿಂದ ಈಗಿನ ಡಿಜಿಟಲ್‌ ಯುಗದವರೆಗೆ. ಈಗಿನ ಡಿಜಿಟಲ್‌ ಲೋಕ ಚಂದವೇ. ಆದರೆ, ಈ ನನ್ನ ಹಳೇ ಲೋಕದ ಮಾಧುರ್ಯ ಬಹುಶಃ ಈಗಿನ ಡಿಜಿಟಲ್‌ ಜಗತ್ತಿನಲ್ಲಿ ಸಿಗುವುದಿಲ್ಲ ಅಂತನೇ ನನಗನಿಸೋದು. ಅಲ್ವಾ ಏನಂತೀರಿ ಎಂದು ನನ್ನತ್ತ ಪ್ರಶ್ನೆ ಎಸೆದರು.

ʻನೋಡಿ ನೀವೀಗ ಅಜ್ಜಿ ಮೊಮ್ಮಗನ ಫೋಟೋವನ್ನು ಕೈಲಿ ಹೀಗೆ ಹಿಡಿದು ನೋಡುವ ಫೀಲು ಡಿಜಿಟಲ್‌ ಜಗತ್ತಿಗೆ ಸಿಗುವುದಿಲ್ಲ. ಫೋಟೋ ತೆಗೆದು ಒಂದಷ್ಟು ನಿಮಿಷ ಅದಕ್ಕಾಗಿ ಕಾದು, ಸಂಸ್ಕರಿಸಿ, ಅದನ್ನು ಕೈಲಿ ಹಿಡಿದು ನೋಡುವ ಭಾವವೇ ಬೇರೆ, ಫೋನಿನಲ್ಲೋ, ಕ್ಯಾಮರಾದಲ್ಲೋ ಚಕಚಕನೆ ಕ್ಲಿಕ್ಕಿಸಿ ರಾಶಿ ರಾಶಿ ಫೋಟೋ ಗುಡ್ಡೆ ಹಾಕಿ ಇಡೋದರಲ್ಲಿ ಇದೆಲ್ಲ ಭಾವ ಇಲ್ಲ. ಫೋಟೋ ತೆಗೆದು ಸೆಕೆಂಡುಗಳಲ್ಲಿ ವಾಟ್ಸಾಪಿನಲ್ಲಿ, ಫೇಸ್‌ ಬುಕ್ಕಿನಲ್ಲಿ, ಗೆಳೆಯರಿಗೆ, ಪ್ರಪಂಚಕ್ಕೆ ತೋರಿಸಬಹುದೇನೋ ನಿಜ, ಆ ಜಗತ್ತಿನ ಸಾಧ್ಯತೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಭಾವ ಪ್ರಪಂಚದ ಚೌಕಟ್ಟಿನಲ್ಲಿ ಯೋಚಿಸಿ ನೋಡಿ. ಈ ಫೋಟೋಗಳೆಲ್ಲ ಹೃದಯಕ್ಕೆ ಹತ್ತಿರ ಅಲ್ವಾ ಎಂದರು.

ನೀವು ನನ್ನದೇ ಮಾತನ್ನು ಹೇಳುತ್ತಿದ್ದೀರಿ ಎಂದೆ.

ಜನರಿಗೆ ನೋಡಿ ಹಳೇ ಕ್ಯಾಮರಾ ನೋಡುವಾಗ ಖುಷಿ ಸಿಗುತ್ತದೆ. ಆಸಕ್ತಿಯಿಂದ ಕೆಲವರು ನೋಡುತ್ತಾರೆ, ಹಾಗಂತ, ಎಲ್ಲರೂ ಫೋಟೋ ತೆಗೆಸಿಕೊಳ್ಳುವುದಿಲ್ಲ. ನೋಡಿ ಹಾಗೇ ಹೋಗುತ್ತಾರೆ. ಆದರೆ, ಯಾರೇ ಕ್ಯಾಮರಾ ಬಗ್ಗೆ ತಿಳಿಯುವ ಆಸಕ್ತಿ ತೋರಿಸಿದರೂ ನಾನು ವಿವರಿಸುತ್ತೇನೆ. ಕ್ಯಾಮರಾ ತೋರಿಸುತ್ತೇನೆ. ಇದರಲ್ಲಿ ವಯಸ್ಸಿನ ಬೇಧವಿಲ್ಲ. ಆದರೂ, ಈಗಿನ ಯುವ ಪೀಳಿಗೆ ಆಸಕ್ತಿ ವಹಿಸಿ ನೋಡುತ್ತಾರೆ. ಅದರಲ್ಲೂ ಮುಖ್ಯವಾಗಿ ವಿದೇಶೀ ಪ್ರವಾಸಿಗರಿಗೆ ಹೆಚ್ಚು ಆಸಕ್ತಿ. ಅವರು ಫೋಟೋ ಕೂಡಾ ತೆಗೆಸಿಕೊಂಡು ಸಂತೋಷದಿಂದ ತೆರಳುತ್ತಾರೆ ಎಂದರು.

ಎಲ್ಲರೂ ಒಂದೇ ಥರ ಇರೋದಿಲ್ಲ. ಸುಮ್ಮನೆ ನೇರ ನಿಂತು ಪಾಸ್‌ಪೋರ್ಟಿಗೆ ಹೊಡೆಸಿಕೊಳ್ಳುವಂತೆ ಕೇವಲ ಭಾವಚಿತ್ರ ಸಾಕಾಗುವುದಿಲ್ಲ. ಅಂಥವರಿಗೂ ನನ್ನ ಕೆಲವು ಐಡಿಯಾಗಳಿವೆ. ಅರ್ಧಚಂದ್ರನ ಚಂದ್ರನ ಮೇಲೆ ಕೂರಿಸಿದಂತೆ, ದೇವರ ಆಶಿರ್ವಾದದ ಕಿರಣ ನೇರವಾಗಿ ಕೂತಿರುವವರ ತಲೆ ಮೇಲೆಯೇ ಬೀಳುವಂತೆ ಹೀಗೆಲ್ಲ ಕರಾಮತ್ತುಗಳನ್ನು ಮಾಡುತ್ತೇನೆ. ಎಲ್ಲವೂ ಗ್ರಾಹಕರ ಅಭಿರುಚಿಗೆ ತಕ್ಕಂತೆ. ಅವರೂ ತಮ್ಮ ಚಿತ್ರ ತೆಗೆದುಕೊಂಡು ಖುಷಿಯಾಗಿ ಹೋಗುತ್ತಾರೆ ಎಂದು ನಕ್ಕರು.

ನನಗೆ ಮಾತ್ರ ಚಂದ್ರನಿಂದ ಇಣುಕುವ ಹಳೇ ಸಿನಿಮಾಗಳ ಹಿರೋಯಿನ್ನುಗಳು, ಪೋಸ್ಟರುಗಳೆಲ್ಲ ಒಮ್ಮೆಗೆ ನೆನಪಿಗೆ ಬಂದು ಮಜಾ ಎನಿಸಿತು. ಟೀಕಂ ಇನ್ನೂ ಮುಂದುವರಿದು, ಇಷ್ಟೇ ಅಲ್ಲ, ನಾವು, ಬೋಳೂತಲೆಯ ಮನುಷ್ಯನಿಗೆ ಕೂದಲೂ ಬರಿಸಿದ್ದೇವೆ, ಸಣ್ಣ ಹುಡುಗ ಮೀಸೆ ತಿರುವಿಸಲು, ಮೀಸೆಯನ್ನೂ ಬರಿಸಿದ್ದೇವೆ ಎಂದು ನಕ್ಕರು. ಎಲ್ಲವೂ ಫೋಟೋದಲ್ಲಿ ಮಾತ್ರ, ಅದೂ ರಿಯಲಿಸ್ಟಿಕ್‌ ಗೊತ್ತಾʼ ಎಂದರು. ಎಲ್ಲರೂ ಗೊಳ್ಳೆಂದು ನಕ್ಕೆವು.

ʻಸಿನಿಮಾದಲ್ಲೂ ಕೂಡಾ ಈ ಕ್ಯಾಮರಾದೊಂದಿಗೆ ನಾನು ಬಂದಿದ್ದೇನೆ ಗೊತ್ತಾ?ʼ ಎಂದರು. ಹೌದಾ! ಯಾವುದರಲ್ಲಿ? ಎಂದರೆ ಭೂಲ್‌ಬುಲಯ್ಯಾ, ಏಕ್‌ ಥಾ ಟೈಗರ್‌… ಎಂದು ಹೇಳುವಷ್ಟರಲ್ಲಿ ಟೀಕಂ ಗಮನ, ತನ್ನ ಕ್ಯಾಮರಾವನ್ನು ಕುತೂಹಲದಿಂದ ನೋಡುತ್ತಾ ಬಂದ ಹೊಸ ಗ್ರಾಹಕರತ್ತ ಹೊರಳಿತು. ಗಡಿಬಿಡಿಯಲ್ಲಿ ೧೫೦ ಎಂದರು. ಕೈಜೋಡಿಸಿ, ದುಡ್ಡು ಜೇಬಿಗಿಳಿಸಿ ಮುಚ್ಚಿದ್ದ ಕರಿ ಪರದೆಗಳನ್ನು ಮೆಲ್ಲನೆ ತೆರೆಯುತ್ತಾ ಟೀಕಂ ತನ್ನ ವಿಂಟೇಜ್‌ ಯಾನದ ಕಥೆಯನ್ನು ಮತ್ತದೇ ಉತ್ಸಾಹದಿಂದ ಹೇಳಲು ಅನುವಾದರು!

‍ಲೇಖಕರು Admin

August 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: