ಜೇಡಹುಡುಗನ ಪ್ರೇಮಗಾಥೆ

ಲಲಿತಾ ಸಿದ್ಧಬಸವಯ್ಯ

ಕೆಂದಳಿರ ಹುಡುಗಿ ಕೂಡೆಂತ
ಸರಸವೊ ನಿನಗೆ ಜೇಡಹುಡುಗಾ

ಸರಸವೆಲ್ಲಿಂದ ಬಂತಕ್ಕ
ಇದು ಹೊಟ್ಟೆಪಾಡಿನ ನೂಲುಗೂಡು

ಹುಡುಗಿ ಮನೆಯೋಣಿಯಲೆ
ಗೂಡು ಕಟ್ಟುವ ಹುನ್ನಾರ ಚೆದುರ

ನುಣುಪು ಬಲೆಗವಳ ಕೆಡವಿ
ಅಡಗಿಸುವ ಈ ಜಾಡು ನನಗರಿಯದೊ

ಅಜ್ಜಿಯಾಗಿಹೆ ನೀನಕ್ಕಯ್ಯ
ಯಾವ ಕಾಲದ ಹಲುಬಿನಲ್ಲಿಹೆಯೇ

ಕೀಟಕುಲತಿಲಕನಿಗೆ ಸಸ್ಯಸಂಕುಲ
ಕುವರಿ ಈಡುಜೋಡಾಗುವುದೆ ಹೇಳೇ

ಮೂಢ ಜೇಡತಮ್ಮನೇ ಕೇಳು
ತಿರುಮಂತ್ರ ಒದರಿ ಬಾಯಿ ಮುಚ್ಚಿಸಬೇಡ

ಎಲ್ಲಕ್ಕು ಮುನ್ನವೇ ಹುಟ್ಟಿತ್ತು
ಪ್ರೇಮ, ಅದಕ್ಕಿನ್ನೂ ಕಣ್ಣು ಹುಟ್ಟಿಲ್ಲವೋ

ಹುಟ್ಟುಕುರುಡನೋ ಪ್ರೇಮರಾಜ
ಬುದ್ಧಿಯನು ಅಡವಿಟ್ಟು ಅಲೆವನವ ಮನಸಿಜ

ಕುಲ ನೆಲೆಯ ಸೋಸುವಾ ವ್ಯವಧಾನ
ಅಳೆದುಸುರಿವಾ ಅತಿ ಚುರುಕು ಅವಧಾನ

ಯುಗ ಕಳೆದರೂ ಪ್ರೇಮ ಕಲಿತಿಲ್ಲವೋ
ಎದೆಬಡಿತ ಹೊರತಿತರ ಗಣಿತ ಅರಿವಿಲ್ಲವೊ

ಸಾಕು ಬಿಡು ಹಳೆಯಕ್ಕಯ್ಯ
ಹೇಳಿ ಹೆದರಿಸಬೇಡ ಕನಸು ಹರಿಯಬೇಡ

ಕೆಂದಳಿರ ನವಿರುಗೆನ್ನೆಯ ನಿತ್ಯ
ನೋಡುನೋಡುತ್ತಲೆ ಮತ್ತನಾಗಿರುವೆ

ನಾನು ಕಟ್ಟಿದ ಬಲೆಯೊಳಗೀಗ
ನಾನೇ ಆಜೀವ ಶಿಕ್ಷೆಯ ಬಂಧಿಯಾಗಿರುವೆ

ಈ ಶಿಕ್ಷೆಯೂ ಬಲು ಸವಿಯಾಗಿದೆಯೆ
ಅವಳಡಿಯ ದಾಸಾನುದಾಸನಾಗಿ ಹೋಗಿಹೆ

ಮುಂದೇನು ಕಾದಿದೆಯೆಂಬ
ಭಯವಿಲ್ಲವೆನಗೆ ಇಂದಿನೀ ಸೊಗವೆ ಸತ್ಯ

ಸತ್ಯ ಗಿತ್ಯದ ದೊಡ್ಡ ಮಾತಾಡದಿರು
ಬದುಕುವಾ ದಾರಿ ಹುಡುಕಿಕೊ ಹುಡುಗ

ನಿನಗೊಲಿದ ಆ ಜೇಡಹುಡುಗಿ
ಇಗೊ ಈ ಕಾಗದವ ಕಳಿಸಿ ಕೊಟ್ಟಿಹಳು

ನಿನಗಾಗಿಯೇ ಮನೆ ಕಟ್ಟಿ
ಮನೆಗೆ ತೋರಣ ಕಟ್ಟಿ ಕಾಯುತಿಹಳು

ಆಗದು ಹೋಗದೀ ಸಂಬಂಧ
ತುದಿಹರಿದು ಬಲೆ ನುಚ್ಚುನೂರಾಗುವ ಮುನ್ನ

ಹೊರಡು ಈ ಓಣಿಯ ಬಿಟ್ಟು
ಒಲಿದವಳ ಜೊತೆಗೆ ಹೊಸ ಬದುಕು ಕಟ್ಟು

ಕಾಲ ಹೋದವಳಿವಳ ಮಾತೇನು
ಎಂದುದಾಸೀನವ ಮಾಡದಿರು ತಮ್ಮಯ್ಯ

ಕಾಲ ಕಂಡಾ ಕಣ್ಣುಗಳಿವು
ಊರ್ಜಿತವಾಗದೋ ಈ ಏಕಮುಖ ಪ್ರೇಮ

ಕೆಂದಳಿರು ಹಸಿರಿಗೆ ತಿರುಗಿ
ಎಳೆಬಳ್ಳಿ ಉರುಳಾಗಿ ಗೋಣು ಹಿಸುಕುವುದು

ಉಣ್ಣುವುದ ಬಿಟ್ಟವಳ ನಾಂಟ್ಯವ
ನೋಡಿ ಬಲೆಯೊಳಗೆ ಜೀವ ಬಿಟ್ಟರೇನುಂಟು

ಅವಳ ಜೀವನಚಕ್ರಕ್ಕವಳ ಬಿಡು
ನಿನ್ನ ಚಾಪೆಯೆಳೆಗಳ ಕಳಚಿ ನೀನೀಗ ಹೊರಡು

‍ಲೇಖಕರು Avadhi

January 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ಚೆನ್ನಾಗಿದೆ ಲಲಿತಕ್ಕ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: