ಜೆ ಆರ್ ಲಕ್ಷ್ಮಣರಾವ್ ಅವರ ನೆನಪಿಗೆ ಗ್ರಂಥ

ಟಿ.ಆರ್.ಅನಂತರಾಮು

ಎಲ್ಲರ ಮನೆಯ ದೋಸೆಯೂ ತೂತು-ಎನ್ನುವಾಗ ಪ್ರತಿ ಮನೆಯಲ್ಲೂ ಒಂದಲ್ಲ ಒಂದು ಎಡವಟ್ಟು ಆಗಿಯೇ ಇರುತ್ತದೆ ಎನ್ನುವ ದನಿ ಇರುವುದು ತಾನೆ? ಅಥವಾ ಹಾಗೆ ಹೇಳಿಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳಲೂಬಹುದು. ದೋಸೆಗೆ ತೂತು ಹೇಗೆ ಬಂತು? ಇದರಲ್ಲಿ ವಿಜ್ಞಾನವಿದೆ ಎಂದಿದ್ದಾರೆ ಪ್ರೊ. ಜೆ.ಆರ್. ಲಕ್ಷ್ಮಣರಾವ್ ಅವರು. ಯಾವುದರಲ್ಲಿ ವಿಜ್ಞಾನವಿಲ್ಲ? ಎಂದು ಮರುಪ್ರಶ್ನೆ ಹಾಕಬೇಡಿ. ಜೆ.ಆರ್.ಎಲ್. ಹೇಳುವ ಮಾತುಗಳು ಇವು:

ದೋಸೆಹಿಟ್ಟು ಮಾಡಿದ ಕ್ಷಣವೇ ದಿಢೀರೆಂದು ದೋಸೆಯನ್ನು ಮಾಡುವುದಕ್ಕೆ ಆಗುವುದಿಲ್ಲ. ರುಬ್ಬಿದ ಮೇಲೆ ಒಂದು ರಾತ್ರಿ ಹುದುಗಲು ಬಿಡಬೇಕು. ಬೆಳಗ್ಗೆ ಎದ್ದರೆ ಹಿಟ್ಟು ಉಕ್ಕಿ ಪಾತ್ರಯಿಂದ ಹೊರ ಚೆಲ್ಲುತ್ತಿದ್ದರೆ, ಅದರ ಅರ್ಥ ಚೆನ್ನಾಗಿ ಹುದುಗಿದೆ ಎಂದು. ಹುದುಗು ಎಂದರೇನು? ಏಕಕೋಶ ಜೀವಿಗಳು ದೋಸೆ ಹಿಟ್ಟಿನಲ್ಲಿ ಅಡಗಿ ತಮ್ಮ ಸಂತಾನ ವೃದ್ಧಿಸಿಕೊಳ್ಳುವುದು. ಅಯ್ಯಯ್ಯೋ, ಅದನ್ನು ನಾವು ದೋಸೆ ಹೆಸರಲ್ಲಿ ತಿನ್ನುತ್ತೇವೆಯೇ ಎಂದರೆ ಹೌದು. ಆದರೆ ಅಸಹ್ಯ ಪಟ್ಟರೆ ಪ್ರಯೋಜನವಿಲ್ಲ. ಇದು ನಿಸರ್ಗದ ಧರ್ಮ ಮತ್ತು ಮರ್ಮ. ವಿಜ್ಞಾನದಲ್ಲಿ ಇದನ್ನು ಫರ್ಮೆಂಟೇಶನ್ ಎನ್ನುತ್ತಾರೆ. ನಾವು ಕನ್ನಡದಲ್ಲಿ ಕಿಣ್ವನ ಎನ್ನುತ್ತೇವೆ.

ಹಿಟ್ಟನ್ನು ನುಣ್ಣಗೆ ರುಬ್ಬಿದಷ್ಟೂ ಸೂಕ್ಷ್ಮಜೀವಿಗಳಿಗೆ ರಾಸಾಯನಿಕ ಕ್ರಿಯೆ ನಡೆಸುವುದು ಸುಲಭ. ಅಕ್ಕಿ ಮತ್ತು ಉದ್ದು ಅವುಗಳಿಗೆ ಬಲು ಪ್ರೀತಿ. ಕಿಣ್ವನದಲ್ಲಿ ಲ್ಯಾಕ್ಟಿಕ್ ಗುಂಪಿನ ಬ್ಯಾಕ್ಟೀರಿಯ ಬೇಳೆಯಲ್ಲಿರುವ ಕಾರ್ಬೋ ಹೈಡ್ರೇಟ್ ಮೇಲೆ ವರ್ತಿಸಿ, ಲ್ಯಾಕ್ಞಿಕ್ ಆಮ್ಲವನ್ನು ಉತ್ಪಾದನೆ ಮಾಡುತ್ತದಂತೆ. ಆಗ ಹಿಟ್ಟಿಗೆ ಹುಳಿ ರುಚಿ ಬರುತ್ತದೆ. ಕಾವಲಿಯ ಮೇಲೆ ಹಿಟ್ಟನ್ನು ಹರಡಿದ ತಕ್ಷಣ ಅದರಲ್ಲಿ ಹುದುಗಿದ್ದ ಕಾರ್ಬನ್ ಡೈ ಆಕ್ಸೈಡ್ ಅನಿಲ ಬಿಸಿಯಿಂದಾಗಿ ದೋಸೆಯ ಹಿಟ್ಟಿನಿಂದ ಬಿಡುಗಡೆಯಾಗುತ್ತದೆ. ಆಗ ತೂತುಗಳನ್ನು ಮಾಡುತ್ತದೆ. ಅದಕ್ಕೇ ಎಲ್ಲರ ಮನೆಯ ದೋಸೆಯೂ ತೂತೇ. ದೋಸೆ, ಕಾವಲಿಗೆ ಅಂಟಿಕೊಂಡು ಕೆಲವೊಮ್ಮೆ ಸೀದು ಹೋಗುತ್ತದಲ್ಲ. ಹೌದು, ಹಾಗಾಗದಿರಲಿ ಎಂದೇ ಎಣ್ಣೆ ಸವರುವುದು. ಎಣ್ಣೆ ಮತ್ತು ದೋಸೆ ಹಿಟ್ಟಿನ ನಡುವೆ ಆಕ್ಸಿಜನ್ ಇದ್ದರೆ ದೋಸೆ ಸೀಯುವುದಿಲ್ಲ. ಆಕ್ಸಿಜನ್ ಅಭಾವವಾದರೆ ಸೀದು ಹೋಗಿಬಿಡುತ್ತದೆ.

ಹ್ಞಾಂ, ಕಾದ ಎಣ್ಣೆಯಿಂದ ಇನ್ನೂ ಒಂದು ಪ್ರಯೋಜನವುಂಟು. ದೋಸೆಯ ಕೆಳಭಾಗ ಬೇಯುವಾಗ, ಆ ಹಬೆಯಿಂದ ದೋಸೆ ಸ್ಪಂಜಿನಂತಾಗುತ್ತದೆ. ದೋಸೆಯಲ್ಲಿ ಅಡಗಿರುವ ವಿಜ್ಞಾನವನ್ನು ಪ್ರೊ. ಲಕ್ಷ್ಮಣರಾವ್ ಅವರು ಹೀಗೆ ವಿವರಿಸಿದ್ದಾರೆ. ‘ದೋಸೆ ಮತ್ತು ವಿಜ್ಞಾನ’ ಎಂಬ ಒಂದು ಲೇಖನವನ್ನೇ ಬರೆದಿದ್ದಾರೆ. (ಹಾರಾಡುವ ತಟ್ಟೆಗಳು ಪುಸ್ತಕ). ಅದು ಸರಿ, ಈಗ ಈ ದೋಸೆಯನ್ನು ನೆನಪಿಸಿಕೊಂಡಿದ್ದೇಕೆ. ಬೆಂಗಳೂರಿನ ಗಾಂಧಿಬಜಾರಿನ ವಿದ್ಯಾರ್ಥಿ ಭವನ್ ಅಥವಾ ಮಾವಳ್ಳಿ ಟಿಫಿನ ರೂಂ ನೆನಪಿಗೆ ಬಂತೇ ಎಂದು ನೀವು ಕೇಳಿದರೆ, ‘ಇಲ್ಲ’ ಎನ್ನುವುದೇ ಉತ್ತರ.

ಪ್ರೊ. ಜೆ.ಆರ್. ಲಕ್ಷ್ಮಣರಾವ್ ಈ ನಾಡು ಕಂಡ ಶ್ರೇಷ್ಠ ವಿಜ್ಞಾನ ಲೇಖಕರಲ್ಲಿ ಒಬ್ಬರು. ಅವರ ಶಿಷ್ಯಕೋಟಿಯಿಂದ ಪ್ರೀತಿಯಿಂದ ನಮ್ಮ ಮೇಸ್ಟ್ರು ಎಂದು ಕರೆಸಿಕೊಂಡವರು. ಅವರು ಈಗ ಬದುಕಿದ್ದಿದ್ದರೆ ನೂರು ವರ್ಷವಾಗುತ್ತಿತ್ತು (21-01-2021). ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಅವರ ಕೊಡುಗೆ ಬಲು ದೊಡ್ಡದು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತನ್ನು ಕಟ್ಟಿ, ಬೆಳೆಸಿ, ಅದರ ಮುಖಪತ್ರಿಕೆ ‘ಬಾಲವಿಜ್ಞಾನ’ವನ್ನು ಹುಟ್ಟು ಹಾಕಿದವರು. ಪ್ರಬುದ್ಧ ಕರ್ನಾಟಕದ ಎರಡು ‘ಚಿನ್ನದ ಸಂಚಿಕೆ’ಗಳನ್ನು ಸಂಪಾದಿಸಿಕೊಟ್ಟು ವಿಜ್ಞಾನದ ಇತಿಹಾಸದ ಒಂದು ಭರ್ಜರಿ ಪುಟವನ್ನು ನಮ್ಮ ಮುಂದೆ ತೆರೆದಿಟ್ಟವರು. ಲೂಯಿ ಪಾಶ್ಚರ್, ಆರ್ಕಿಮಿಡಿಸ್, ಗೆಲಿಲಿಯೋ ಜೀವನ ಚರಿತ್ರೆಗಳನ್ನು ಸುಂದರವಾಗಿ ಕಟ್ಟಿಕೊಟ್ಟು ಜೀವನ ಚರಿತ್ರೆಗಳನ್ನು ಹೇಗೆ ಬರೆಯಬೇಕು ಎಂದು ತೋರಿಸಿಕೊಟ್ಟವರು. ಅವರು ಬರೆದ ‘ವಿಜ್ಞಾನಿಗಳೊಡನೆ ರಸನಿಮಿಷಗಳು’ ಕೃತಿಯನ್ನು ಎಷ್ಟು ಸಲವಾದರೂ ಓದಿ ಪುಲಕಿತರಾಗಬಹುದು.

ಜೆ.ಆರ್. ಎಲ್. ಅವರ ಜನ್ಮಶತಾಬ್ದಿಯ ನೆನಪಿಗೆ ಅವರ ಕುಟುಂಬ ಸ್ಮರಣ ಸಂಪುಟವೊಂದನ್ನು ತರಲು ಯೋಜಿಸಿದೆ. ನಾನು ಅದರ ಸಂಪಾದನೆ ಮಾಡಿಕೊಡಬೇಕೆಂಬುದು ಅವರ ಕುಟುಂಬದವರ ಅಪೇಕ್ಷೆ. ಈ ಸಂದರ್ಭದಲ್ಲಿ ಜೆ.ಆರ್. ಎಲ್. ಅವರನ್ನು ಹತ್ತಿರ ಕಂಡವರು, ಅವರ ಬರವಣಿಗೆಯನ್ನು ಬಲ್ಲವರು ತಮ್ಮಅನುಭವವನ್ನು ಹಂಚಿಕೊಳ್ಳಬಹುದು. ಅವರ ಪುತ್ರ ಜೆ.ಎಲ್. ಅನಿಲ್ ಕುಮಾರ್ ಅವರು ನೀಡಿರುವ ಇ-ಮೇಲ್ ಗೆ ಲೇಖನಗಳನ್ನು ಕಳಿಸಬಹುದು. [email protected]

‍ಲೇಖಕರು Avadhi

February 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: