ಜವಾಹರ್ ನೆಹರೂ ವಿಶ್ವವಿದ್ಯಾಲಯ (ಜೆ ಎನ್ ಯು) ನಲ್ಲಿನ ಬೆಳವಣಿಗೆ ಏನು?
ಅಲ್ಲಿನ ಕನ್ನಡ ಪೀಠದ ಮುಖ್ಯಸ್ಥರಾದ ಪುರುಷೋತ್ತಮ ಬಿಳಿಮಲೆ ಪ್ರಜಾವಾಣಿಯಲ್ಲಿ ವಿವರಿಸಿದ್ದಾರೆ.

ಪುರುಷೋತ್ತಮ ಬಿಳಿಮಲೆ
ಕಾರ್ಟೂನ್ : ಸತೀಶ್ ಆಚಾರ್ಯ / ಆರ್ ಪ್ರಸಾದ್
ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನ್ನು (ಜೆಎನ್‌ಯು) 1969ರಲ್ಲಿ ವಿಶೇಷ ಅಧಿಸೂಚನೆ ಹೊರಡಿಸಿ ಸರ್ಕಾರ ಸ್ಥಾಪಿಸಿತು. ಉನ್ನತ ಶಿಕ್ಷಣವನ್ನು ಇನ್ನಷ್ಟು ಬಲಪಡಿಸುವುದು ಅದರ ಮೂಲ ಉದ್ದೇಶವಾಗಿತ್ತು. ಈ ವಿಶ್ವವಿದ್ಯಾಲಯದಲ್ಲಿ ಇದೀಗ ಒಟ್ಟು 10 ನಿಕಾಯಗಳಿವೆ. ಪ್ರತಿ ನಿಕಾಯದಲ್ಲಿ 10ಕ್ಕೂ ಮಿಕ್ಕು ವಿಭಾಗಗಳಿವೆ. ಇವಲ್ಲದೆ ಸಂಸ್ಕೃತವೂ ಸೇರಿದಂತೆ ನಾಲ್ಕು ಸ್ವತಂತ್ರವಾದ ವಿಶೇಷ ಅಧ್ಯಯನ ಕೇಂದ್ರಗಳಿವೆ.
ಇಲ್ಲಿರುವ ಭಾರತೀಯ ಭಾಷೆಗಳ ಕೇಂದ್ರದಲ್ಲಿ ಈಚೆಗೆ ಕನ್ನಡ ಅಧ್ಯಯನ ಪೀಠವೂ ಕಾರ್ಯಾರಂಭ ಮಾಡಿದೆ. 2012ರಲ್ಲಿ ನ್ಯಾಷನಲ್ ಅಸೆಸ್‌ಮೆಂಟ್ ಮತ್ತು ಅಕ್ರಿಡಿಟೇಶನ್ ಕೌನ್ಸಿಲ್ ಈ ವಿಶ್ವವಿದ್ಯಾಲಯಕ್ಕೆ ನಾಲ್ಕರಲ್ಲಿ 3.9 ಅಂಕ ನೀಡಿ, ಇದು ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂದು ಹೇಳಿತು. ಈಗ ಜೆಎನ್‌ಯು ಕವಲು ಹಾದಿಯಲ್ಲಿದೆ. ಅದಕ್ಕೀಗ ಎರಡು ಬಗೆಯ ಚರಿತ್ರೆಗಳನ್ನು ಬರೆಯಲಾಗುತ್ತಿದೆ. 2014ರ ಮಹಾಚುನಾವಣೆಗಿಂತ ಮೊದಲಿನ ಚರಿತ್ರೆಯಲ್ಲಿ ಈ ವಿಶ್ವವಿದ್ಯಾಲಯವನ್ನು ಒಂದು ಬೌದ್ಧಿಕ ಕೇಂದ್ರವಾಗಿ ದೇಶಕ್ಕೆ ಪರಿಚಯಿಸಲಾಗುತ್ತಿತ್ತು.
ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದರು. ಇಲ್ಲಿನ ಪ್ರಾಧ್ಯಾಪಕರು ಬರೆದ ಸಂಶೋಧನಾ ಲೇಖನಗಳಿಗೆ ಅಂತರರಾಷ್ಟ್ರೀಯ ಮನ್ನಣೆ ದೊರಕುತ್ತಿತ್ತು. ಮಾನವಿಕಗಳಲ್ಲಿ ಮತ್ತು ಜೀವವಿಜ್ಞಾನದಲ್ಲಿ ಇಲ್ಲಿನ ಪ್ರಾಧ್ಯಾಪಕರ ಸಾಧನೆಗಳ ಕುರಿತು ದೇಶ ವಿದೇಶಗಳಲ್ಲಿ ಉನ್ನತ ಮಟ್ಟದ ಚರ್ಚೆಗಳು ನಡೆಯುತ್ತಿದ್ದುವು. ಇಲ್ಲಿ ಕಲಿತ ಮಹನೀಯರನೇಕರು ದೇಶದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದರು. ಅಂಥವರಲ್ಲಿ ರಿಸರ್ವ್ ಬ್ಯಾಂಕಿನ ಸಹ ಗವರ್ನರ್ ಆಗಿರುವ ಹರೂನ್ ರಶೀದ್ ಖಾನ್, ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಮುಜಾಫರ್ ಆಲಂ, ಇದೀಗ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಪ್ರಮುಖರು.
ಅರ್ಥಶಾಸ್ತ್ರದ ಆಧಾರದ ಮೇಲೆ ಆಧುನಿಕ ಭಾರತದ ಇತಿಹಾಸ ಬರೆದ ಪ್ರೊ. ಬಿಪಿನ್ ಚಂದ್ರ, ಸಂಸ್ಕೃತ ಕಾವ್ಯಗಳು, ಶಾಸ್ತ್ರಗಳು, ಹಳೆಯ ಮನೆಗಳು, ನೇಗಿಲಿನ ಮೊನೆ ಇತ್ಯಾದಿ ನವೀನ ಆಕರಗಳನ್ನು ಬಳಸಿ ಪ್ರಾಚೀನ ಭಾರತದ ಇತಿಹಾಸವನ್ನು ಹೊಸದಾಗಿ ಬರೆದ ಪ್ರೊ. ರೋಮಿಲಾ ಥಾಪರ್, ಹಿಂದಿ ಸಾಹಿತ್ಯ ವಿಮರ್ಶೆಗೆ ಚೈತನ್ಯ ತಂದುಕೊಟ್ಟ ಪ್ರೊ. ನಾಮವರ್ ಸಿಂಗ್ ಮೊದಲಾದವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿ ತಮ್ಮದೇ ಆದ ಒಂದು ಬೌದ್ಧಿಕ ಪರಂಪರೆಯನ್ನೇ ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ವಾದವನ್ನು ಒಪ್ಪುವವರೂ, ಒಪ್ಪದವರೂ ಇವರನ್ನೇ ಕೇಂದ್ರವಾಗಿರಿಸಿಕೊಂಡು ವಾದ ಮಂಡಿಸುತ್ತಾರೆ.
ಪೂರ್ಣ ಬರಹಕ್ಕೆ ಇಲ್ಲಿ ಕ್ಲಿಕ್ಕಿಸಿ







ಬಿಳಿಮಲೆ ಅವರ ಲೇಖನವನ್ನು ಪೂರ್ತಿ ಓದಿದೆ. ಅವರು ಒಂದು ವಿಷಯವನ್ನು ಬರೆಯಲು ಮರೆತರೋ ಅಥವಾ ‘ಬೇಕೆಂದೇ ಮರೆತರೋ’ ತಿಳಿಯದು. ಆ ವಿಷಯ ‘೧೯೭೫ರ ಜೂನ್ ನಿಂದ ೧೯೭೬ರ ಕೊನೆಯ ತನಕ ಸುಮಾರು ಒಂದೂವರೆ ವರ್ಷಗಳ ಅವಧಿಯಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ‘ನಿಜವಾಗಲೂ ಆಂತರಿಕ ತುರ್ತು ಪರಿಸ್ಥಿತಿ’ ಹೇರಿ ವಿರೋಧಪಕ್ಷದ ನಾಯಕರೆನ್ನೆಲ್ಲಾ ಸೆರೆ ಮನೆಗೆ ಹಾಕಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಸಂದರ್ಭದಲ್ಲೂ ಸಹ ಜೆ ಎನ್ ಯುನ ‘ಪ್ರತಿಭಾವಂತ ಪ್ರಾಧ್ಯಾಪಕರು’ ತಮ್ಮ ವಿಧ್ಯಾರ್ಥಿಗಳೊಂದಿಗೆ ಡಾಬಾದಲ್ಲಿ ಕುಳಿತೋ ಮರದ ಕೆಳಗೆ ನಿಂತೋ ಅದು ತಪ್ಪು ಎಂದು ಚರ್ಚಿಸುತ್ತಿದ್ದರೆ? ಬಹುಶಃ ಆ ಸಮಯದಲ್ಲಿ ಬಿಳಿಮಲೆಯವರು ಜೆ ಎನ್ ಯುದಲ್ಲಿ ಇದ್ದರೋ ಇರಲಿಲ್ಲವೋ ತಿಳಿಯದು. ಇರದಿದ್ದರೆ ಅವರ ಮಾಜಿ ಸಹೋದ್ಯೋಗಿಗಳನ್ನು ವಿಚಾರಿಸಿ ತಿಳಿಸಿದರೆ ಒಳ್ಳೆಯದು.” ಟೈಮ್ಸ್ ನೌ “ನ ಅರ್ನಾಬ್ ಗೋಸ್ವಾಮಿಯವರ news hour ಕಾರ್ಯಕ್ರಮದ ನಮಗೆ ಬಗ್ಗೆ ಹತ್ತು ಹಲವು ಟೀಕೆಗಳಿರಬಹುದು. ಆದರೆ ಆತ ಸಹ ಜೆ ಎನ್ ಯುನ ವಿದ್ಯಮಾನಗಳ ಬಗ್ಗೆ ಇಲ್ಲಿಯವರೆಗೆ ಮೂರು ಕಾರ್ಯಕ್ರಮ ನಡೆಸಿ ಖಂಡ ತುಂಡವಾಗಿ ಅದನ್ನು ‘ದೇಶದ್ರೋಹ’ದ ಎಂದೇ ಹೇಳಿದ್ದಾರೆ. ಆತ ಕೇಳಿದ ಒಂದು ಪ್ರಶ್ನೆ- ಅಭಿವ್ಯಕ್ತಿ ಸ್ವಾತಂತ್ರ್ಯದ ಎಂದು ಅಮೇರಿಕಾದಲ್ಲಿ ಒಸಮಾ ಬಿನ್ ಲಾಡೆನ್ ಪರವಾಗಿ ಜೆ ಎನ್ ಯು ರೀತಿಯಲ್ಲಿ ಕಾರ್ಯಕ್ರಮ ನಡೆಸಿದರೆ ಅಮೇರಿಕಾ ಸರ್ಕಾರ ಸುಮ್ಮನೆ ನೋಡಿಕೊಂಡು ಇರುತ್ತದೆಯೇ? ಈ ಪ್ರಶ್ನೆಗೆ ಬಿಳಿಮಲೆ ಅವರಾಗಲೀ ಅಥವಾ ಅವಧಿಯ ಓದುಗರಾಗಲೀ ತಿಳಿಸಿದರೆ ಉತ್ತಮ. ಜೆ ಎನ್ ಯು ಬಗ್ಗೆ ನಡೆದ ಕನ್ನಡದ ಸುದ್ದಿವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದವರೊಬ್ಬರು (ಅವರು ಚೀನಾದಲ್ಲಿ ಇದ್ದು ಬಂದವರು) ಹೇಳಿದ ಮಾತು–‘ಚೀನಾದಲ್ಲಿ ಇಂಟರ್ನೆಟ್ ಸರ್ಚ್ ಇಂಜಿನಲ್ಲಿ ‘ಡೆಮಾಕ್ರಸಿ’ ಎಂಬ ಪದವನ್ನು ಮೂರು ಸಲ ಟೈಪ್ ಮಾಡಬಹುದಷ್ಟೆ. ನಾಲ್ಕನೇ ಬಾರಿ ಮಾಡಿದ ಐದು ನಿಮಿಷಗಳ ಒಳಗಾಗಿ ಅಲ್ಲಿಯ ಪೋಲಿಸರು ಬಂದು ಅರೆಸ್ಟ್ ಮಾಡಿ ಕರೆದೊಯ್ಯುತ್ತಾರೆ’. ಭಾರತದಲ್ಲಿ ಈಗ ಆ ಪರಿಸ್ಥಿತಿ ಇಲ್ಲವಲ್ಲ.ಜೆ ಎನ್ ಯುನ ಅಸಾಧಾರಣ ಬುದ್ಧಿವಂತರಿಗೆ ಭಾರತದ ಸಂವಿಧಾನದ ಬಗ್ಗೆ ಮತ್ತು ಸುಪ್ರೀಂ ಕೋರ್ಟ್ ನ ತೀರ್ಪಿನ ಬಗ್ಗೆ ಗೌರವವಿಲ್ಲ. ಇನ್ನು ಯಾವುದರ ಬಗ್ಗೆ ಇವರ ಒಲವು? ಇವರೇನು ಅತಿಮಾನುಷರೆ?
ತನಿಖೆಗೆ ಮುನ್ಬನವೇ ದೇಶದ್ರೋಹಿ ಬಿರುದು ಪಡೆದ ಉಮರ್ ಖಾಲೀದ್ ಇಂದು ಮಾಡಿದ ಭಾಷಣದ ಕೆಲವು ಸಾಲುಗಳು: “ನೀವು ಇಂದಿರಾಗಾಂಧಿಯನ್ನು ಮರೆತಿದ್ದೀರಿ. ತುರ್ತು ಪರಿಸ್ಥಿತಿ ನಂತರ ಅವರು ಜೆ ಎನ್ ಯು ಕಡೆಗೆ ಬಂದಿದ್ದರು. ನಾವು ಅವರನ್ನು ಬರಲು ಬಿಟ್ಟಿರಲಿಲ್ಲ. ನಂತರ ನೀವು ಮನಮೋಹನ ಸಿಂಗ್ ರನ್ನೂ ಮರೆತಿದ್ದೀರಿ. ದೇಶವನ್ನು ಮಾರಾಟ ಮಾಡಲು ಹೊರಟ ಮನಮೋಹನ ಸಿಂಗ್ ಇಲ್ಲಿಗೆ ಬಂದಾಗ ಅವರಿಗೂ ಕಪ್ಪು ಬಾವುಟ ತೋರಿಸಿದ್ವಿ. ನಂತರ ಚಿದಂಬರಂ ಬಂದ್ರು. ಆಗ ಇಲ್ಲಿನ ವಿದ್ಯಾರ್ಥಿಗಳು ಚಿದಂಬರಂ ಅನ್ನು ಸ್ವಾಗತ ಮಾಡ್ತಾರೆ ಅಂದುಕೊಂಡಿದ್ರು. ಆದರೆ ಇಲ್ಲಿನ ವಿದ್ಯಾರ್ಥಿಗಳು ಯಾರ ಜೊತೆ ಇರ್ತೀವಿ ಎಂಬುದನ್ನು ತೋರಿಸಿಕೊಟ್ಟರು. ಇಲ್ಲಿನ ವಿದ್ಯಾರ್ಥಿಗಳು ಯಾವತ್ತೂ ಶೋಷಿತ ಜನರ ಜೊತೆ ಇರ್ತಾರೆ. ಈಗಿನ ಸರಕಾರ ನಾವು ಹೆದರುತ್ತೇವೆಯೋ ಎಂದು ಪರೀಕ್ಷೆ ಮಾಡುತ್ತಿದೆ. ನಾವು ಹೆದರುವುದಿಲ್ಲ. ನಾವು ಸಂಘರ್ಷ ಮಾಡುತ್ತೇವೆ’
ಇಂದು ಭಾರತದ ಹೆಚ್ಚಿನ ವಿವಿಗಳಲ್ಲಿ ಕಂಡುಬರದ ಒಂದು ವಿಶಿಷ್ಟ ’ಬಹುಧ್ವನಿಯುಕ್ತತೆ’ ಜೆ ಎನ್ ಯು ದ ವೈಶಿಷ್ಟ್ಯವಾಗಿತ್ತು; ಪ್ರಭುತ್ವದ ಅತಿರೇಕಗಳನ್ನು, ಅದರ ಕ್ರೌರ್ಯಗಳನ್ನು ಪ್ರತಿಭಟನೆಯ ಮೂಲಕ ಬಯಲಿಗೆಳೆಯುವ ಇಚ್ಛಾಶಕ್ತಿ ಆ ವಿ ವಿ ಗಿತ್ತು. ಆ ಬಗೆಯ ಜೆ ಎನ್ ಯು ದ ವೈಶಿಟ್ಯ-ಇಚ್ಚಾಶಕ್ತಿಗಳು ಇಂದು ಇಲ್ಲವಾಗುತ್ತಿರುವುದರ ಬಗ್ಗೆ ಡಾ. ಬಿಳಿಮಲೆ ಅವರು ತಮ್ಮ ಸ್ವಾನುಭವದಿಂದ (ಆವರು ದೆಹಲಿಯಲ್ಲಿಯೇ ಕಳೆದ ೨೦ ವರ್ಷಗಳಿಂದ ಇದ್ದಾರೆ), ವಸ್ತುನಿಷ್ಠವಾಗಿ ಆದರೆ ವಿಷಾದದಿಂದ ಬರೆದಿರುವ ಈ ಲೇಖನ ತುಂಬಾ ಸಮಯೋಚಿತವಾಗಿದೆ, ಅರ್ಥಪೂರ್ಣವಾಗಿದೆ. ’ಭಿನ್ನ ದನಿ’ಗಳ ಮಹತ್ವ ಸಾಹಿತ್ಯಕೃತಿಗಳಲ್ಲಿ ಹೇಗೋ ಹಾಗೆ ಸಾಮಾಜಿಕ-ರಾಜಕೀಯ-ಶೈಕ್ಷಣಿಕ ವ್ಯವಸ್ಥೆಗಳಲ್ಲಿಯೂ ಕಂಡು ಬರಬೇಕು; ಇಲ್ಲದಿದ್ದರೆ ಅಂತಹ ವ್ಯವಸ್ಥೆಗಳು ಜಡವಾಗಿ ಬಿಡುತ್ತವೆ. ಡಾ. ಬಿಳಿಮಲೆ ಅವರಿಗೆ ಧನ್ಯವಾದಗಳು. ಸಿ. ಎನ್. ರಾಮಚಂದ್ರನ್
ಸರ್, ತಮ್ಮ ಅಭಿಪ್ರಾಯಕ್ಕೆ ಕೃತಜ್ಞತೆಗಳು. ಮಾಧ್ಯಮಗಳ ಮೂಲಕ ಹೊರ ಜಗತ್ತಿಗೆ ತಿಳಿಯುತ್ತಿರುವ ಸತ್ಯಗಳಿಗೂ ಒಳಗಿನ ಸತ್ಯಗಳಿಗೂ ಅಪಾರ ಅಂತರವಿದೆ. ನಾಲ್ಕಾರು ಜನ ಸೇರಿ ಮುಗಿಸಬಹುದಾಗಿದ್ದ ಘಟನೆಯೊಂದು ಸರಕಾರದ ಅಪಕ್ವ ನಡವಳಿಕೆಯಿಂದಾಗಿ ಇದೀಗ ಜಾಗತಿಕ ಘಟನೆಯಾಗಿಬಿಟ್ಟಿತು. ನಮ್ಮ ದೇಶವನ್ನು ನಾವು ಪ್ರೀತಿಸುವುದಕ್ಕೆ ಬೇರೆಯವರಿಂದ ಸರ್ಟಿಫಿಕೇಟ್ ಪಡೆಯಬೇಕಾದ ದುರ್ಗತಿ ಈ ದೇಶಕ್ಕೆ ಬರಬಾರದಾಗಿತ್ತು. ನೀವೊಮ್ಮೆ ಇಲ್ಲಿಗೆ ಬಂದು ಒಂದೆರಡು ಉಪನ್ಯಾಸಗಳನ್ನು ನಮ್ಮ ಮಕ್ಕಳಿಗೆ ನೀಡಬೇಕು. ಕನ್ನಡ ಸಾಹಿತ್ಯ ಮತ್ತು ಜಾನಪದ ( ಮಂಟೇ ಸ್ವಾಮಿ, ಮಾದೇಶ್ವರ) ಹೀಗೆ ಆಯ್ಕೆ ನಿಮ್ಮದು. ಪತ್ರ ಬರೆಯುತ್ತೇನೆ. ವಂದನೆಗಳು – ಪುರುಷೋತ್ತಮ ಬಿಳಿಮಲೆ