ಜುಗಾರಿಕ್ರಾಸ್; ಚಕ್ರವ್ಯೂಹದೊಳಗಿನ ಮಾಯಾಲೋಕ

ಗೊರೂರು ಶಿವೇಶ್ 

ಶ್ರೇಷ್ಠತೆಯ ಜೊತೆಗೆ ಜನಪ್ರಿಯತೆಯನ್ನು ಸಾಧಿಸಿರುವ ಕೆಲವೆ ಕೆಲವು ಲೇಖಕರಲ್ಲಿ ಕೆ.ಪಿ.ಪೂರ್ಣಚಂದ್ರತೇಜಸ್ವಿ ಒಬ್ಬರು. ಅವರ ಜನಪ್ರಿಯತೆಯ ಜಾಡು ಹಿಡಿದು ಹೊರಟರೆ ಸಿಗುವುದು ಅವರ ಕೃತಿಗಳಲ್ಲಿ ಕಂಡುಬರುವ ಪತ್ತೇದಾರಿ ಎಳೆ. ಅವರ ನಿಗೂಢ ಮನುಷ್ಯರು, ಚಿದಂಬರ ರಹಸ್ಯ, ಕರ್ವಾಲೋ ಮುಂತಾದ ಕಾದಂಬರಿಗಳು ಹೆಸರಿನ ಜೊತೆಗೆ ಕೃತಿಯಲ್ಲಿನ ಕುತೂಹಲಕಾರಿಯ ಬೆಳವಣಿಗೆಗಳು ಮೈನವಿರೇಳಿಸುತ್ತವೆ. ರೋಮಾಂಚನವನ್ನುಂಟು ಮಾಡುವ ಸನ್ನಿವೇಶಗಳು ಕೃತಿಗೆ ಪತ್ತೇದಾರಿಯ ಲೇಪ ನೀಡುತ್ತವೆ. ಅಂಥದೆ ಕುತೂಹಲಕಾರಿ ಕಾದಂಬರಿ ಜುಗಾರಿಕ್ರಾಸ್.

ಜುಗಾರಿ ಎಂದರೆ ಜೂಜು. ಅದೃಷ್ಟದ ಆಟದ ಪರೀಕ್ಷೆಗೆ ಹೊರಟು ಸಂಭವನಿಯ ಫಲಿತಾಂಶದ ಹಿಂದೆ ಬೀಳುವ ಲಕ್ಷಾಂತರ ಜನರಲ್ಲಿ ಯಶ ಸಾಧಿಸುವುದು ಕೆಲವೆ ಕೆಲವರಾದರೂ ಅದರ ಸೆಳೆತ ಮಾತ್ರ ವಿಪರೀತ. ಸಹಸ್ರಾರು ಚದರಮೈಲಿ ವಿಸ್ತಾರದ ಕಾಡಿನ ನಟ್ಟನಡುವೆ ಧರ್ಮಸ್ಥಳ, ಸುಬ್ರಮಣ್ಯ, ಕೊಲ್ಲೂರು, ಉಡುಪಿ, ಕಾರ್ಕಳ ಮುಂತಾದೆಡೆಗೆ ಸಾಗುವ ನಾಲ್ಕಾರು ದಾರಿಗಳು ಸೇರುವ ಜಂಕ್ಷನ್ ಜುಗಾರಿ ಕ್ರಾಸ್ ಎಂದು ಹೆಸರಾಗಿದೆ. ತಾನು ಬೆಳೆದ ಏಲಕ್ಕಿಯನ್ನು ಮಾರಲು ದೇವಪುರಕ್ಕೆ ಹೋಗಲೆಂದು ಖುದ್ದೂಸ್ ಎಕ್ಸ್‍ಪ್ರೆಸ್ ಹತ್ತುವ ಸುರೇಶ ಮತ್ತು ಗೌರಿ ಇಪ್ಪತ್ಕಾಲ್ಕು ಗಂಟೆಯಲ್ಲಿ ವಿಶಿಷ್ಠ ಅನುಭವಗಳನ್ನು ಪಡೆದು ನಂತರ ಅದೇ ಬಸ್ಸನ್ನು ಹತ್ತುವುದರೊಂದಿಗೆ ಮುಕ್ತಾಯವಾಗುತ್ತದೆ. ಜುಗಾರಿ ಪದಕ್ಕೆ ಅನ್ವರ್ಥವಾಗಿ ಏಲಕ್ಕಿ ಬೆಳೆಯ ಏರಿಳಿತಗಳು, ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ವ್ಯಾಪಾರಿಗಳು, ಬ್ಯಾಂಕಿಗೆ ಹೋಗಬೇಕಾದ ಚೆಕ್ ಮದ್ಯದಲ್ಲಿಯೆ ದಲ್ಲಾಳಿಗಳಿಂದ ನಗದಿಕರಣಗೊಳ್ಳುವ ತೆರಿಗೆ ವಂಚಕತನ, ರೈತರಿಗೆ ಸಿಗುವ ಹಣವನ್ನು ಲಪಟಾಯಿಸಲು ಕಾದು ಕುಳಿತ, ಹಣಕ್ಕಾಗಿ ಕೊಲೆ ಮಾಡಲು ಹೇಸದ ಕ್ರೂರಿಗಳು ಒಂದೆಡೆಯಾದರೆ ಇನ್ನೊಂದೆಡೆ ಕಾಡಿನಲ್ಲಿ ಹರಿಯುವ ನೂರಾರು ನದಿಗಳ ಹಿನ್ನೆಲೆಯಲ್ಲಿ ಅಡಗಿರುವ ರತ್ನಗಳನ್ನು ಹುಡುಕಿಹೊರಟ ಅದನ್ನು ಪಡೆಯಲು ಏನು ಬೇಕಾದರೂ ಮಾಡಲು ಹೇಸದ ಘಾತಕ ಜನ. ಅದರ ಅರಿವಿರದ ಇವೆರೆಡರ ನಡುವೆ ಸಿಕ್ಕಿಬೀಳುವ ಸುರೇಶ ಮತ್ತು ಗೌರಿ, ಅನುಕ್ಷಣವೂ ಅಪಾಯವನ್ನು ಎದುರಿಸಿ ಹೋಗುವ ಪರಿ ಓದುಗರ ಎದೆ ಜಲ್ ಎನಿಸುತ್ತದೆ.

‘ಬಿಗ್‍ಬಾಸ್’ ಮನೆಯಲ್ಲಿನ ಆಟಗಾರರಂತೆ ಬಾಸ್ ಯಾರೆಂದು ತಿಳಿಯದೆ ಆತನ ಏಜೆಂಟ್‍ಗಳು ನೀಡುವ ಸೂಚನೆಗಳನ್ನಷ್ಟೆ ಪಾಲಿಸುತ್ತಾ ಹೋಗುವ ಮಂದಿ ಕಣ್ಣು ಕಟ್ಟಿ ಕಾಡಿಗೆ ಬಿಟ್ಟ ಮಂದಿಯಂತೆ ತಡಕಾಡುತ್ತಾ ಪರಸ್ಪರರನ್ನು ಅನುಮಾನಿಸುತ್ತಾ ತಂತ್ರ, ತಂತ್ರಕ್ಕೆ ಪ್ರತಿತಂತ್ರಗಳನ್ನು ಹೂಡುತ್ತಾ ಭೂಗತ ಜಗತ್ತಿನ ಲೋಕವನ್ನು ಅನಾವರಣ ಮಾಡುತ್ತವೆ. ಇದರ ನಡುವೆಯೆ ಮಾಯವಾಗುತ್ತಿರುವ ನ್ಯಾಯ, ನೀತಿ, ಕರುಣೆಯ ಪ್ರಶ್ನೆಗಳು ಹಾದು ಹೋಗುತ್ತವೆ.

37ನೇ ಮೈಲಿಕಲ್ಲನ್ನು ದಾಟಿದಕೂಡಲೇ ಸಿಗುವ ದೈತ್ಯ ಮಾವಿನಮರದ ಪಕ್ಕದಲ್ಲಿರುವ ಲಂಟಾನದ ಪೊದೆಯಲ್ಲಿ ಬಿಳಿಯ ಪ್ಲಾಸ್ಟಿಕ್‍ನಲ್ಲಿ ಸುತ್ತಿಟ್ಟಿದ್ದ ಪ್ಯಾಕೇಟನ್ನು ಒಯ್ದು ದೇವಪುರದ ಮತ್ತಾರಿಗೋ ತಲುಪಿಸಲು ಹೊರಟ ಕುಟ್ಟಿ.ದೌಲತ್ ರಾಮ. ಅಲ್ಲಿ ಕಾಣಿಸಿಕೊಂಡ ಹುಡುಗಿ ಮತ್ತು ಅದೇ ಹಾದಿಯಲ್ಲಿ ಕಂಡ ಪೋಲಿಸರನ್ನು ಕಂಡು ಗಲಿಬಿಲಿಯಾಗಿ ತಾವು ಕಣ್ಣಾನೂರಿನಿಂದ ಕದ್ದು ತಂದಿದ್ದ ಕಾರನ್ನು ಅಲ್ಲಿಯೆ ಮರೆಮಾಡಿ, ಜುಗಾರಿಕ್ರಾಸ್‍ನಿಂದ ಬಂದ ಖುದ್ದೂಸ್ ಎಕ್ಸ್‍ಪ್ರೆಸ್ ಹತ್ತುತ್ತಾರೆ. ಅದೇ ಬಸ್‍ನಲ್ಲಿ ತಾವು ಬೆಳೆದ ಏಲಕ್ಕಿಯನ್ನು ದೇವಪುರದ ಮಾರ್ಕೆಟ್‍ನಲ್ಲಿ ಮಾರ ಹೊರಟ ಸುರೇಶ್ ಮತ್ತು ಗೌರಿಯ ಹಳದಿ ಅಮೋಘಾಸ್ ಮೂಟೆಯ ಮೇಲೆ ಕೂರುತ್ತಾರೆ. ಮಾರ್ಗಮದ್ಯೆ ಕಂಡ ಆ ಪೋಲಿಸ್ ಜೀಪ್‍ಗಳಿಗೆ ಹೆದರಿ ತಾವು ತಂದೆ ಪ್ಯಾಕೇಟ್‍ನ್ನು ಮೂಟೆಯಲ್ಲಿ ಬೈತಿರಿಸುತ್ತಾರೆ. ಇಳಿಯುವ ಸಂದರ್ಭದಲ್ಲಿ ಅಲ್ಲಿದ್ದ ಚೆಕಿಂಗ್ ಇನ್ಸ್‍ಪೆಕ್ಟರ್ ಕಂಡು ಚೆಕ್ಕಿಂಗ್ ರಂಪಾಟ ಮುಗಿದ ನಂತರ ಅದನ್ನು ಪಡೆಯಲು ಯೋಚಿಸಿ ಮೂತ್ರ ಮಾಡಿ ಬರಲು ಹೋಗುತ್ತಾರೆ. ಅದೇ ಸಮಯಕ್ಕೆ ತೀರ್ಥಯಾತೆಗೆÉ್ರ ಹೋಗಿದ್ದ ಬೋಳಮ್ಮ ಇಳಿಯಲಾಗದೆ ನಿಂತಲ್ಲೆ ವಾಂತಿಮಾಡಲು ಅಲ್ಲಿದ್ದ ಜನರೆಲ್ಲ ಕ್ಷಣ ಮಾತ್ರದಲ್ಲಿ ಚದುರಿ ಹೋಗುತ್ತಾರೆ. ಅವರೊಡನೆ ಸುರೇಶ ಮತ್ತು ಗೌರಿಯರು ಮಾರ್ಕೆಟಿಗೆ ಹೊರಟು ಅವರಿಂದ ಕಾಣೆಯಾಗುತ್ತಾರೆ.

ಆ ಚೀಲವನ್ನು ಪಡೆಯಲು ನಡೆಯುವ ಹುನ್ನಾರ, ಹರಾಜಿನಲ್ಲಿ ಏಲಕ್ಕಿಗೆ ಏಕಾಏಕಿ ಸಿಗುವ ದುಬಾರಿ ಹಣದ ಚೆಕ್, ಅದನ್ನು ನಗದೀಕರಿಸಲು ಹೋದಾಗ ಸಿಗುವ ಇನ್ನು ಹೆಚ್ಚುವರಿ ಒಂದು ಲಕ್ಷ ಹಣ ತಾವು ಭೂಗತ ಪ್ರಪಂಚದ ಸುಳಿಗೆ ಸಿಲುಕಿದ್ದೇವೆ ಎಂದು ಗೌರಿ ಮತ್ತು ಸುರೇಶನಿಗೆ ಮನದಟ್ಟು ಮಾಡುತ್ತದೆ. ಇದರ ನಡುವೆ ಶೇಷಪ್ಪನ ಅಂಗಡಿಯ ಬಳಿ ಸಿಗುವ ಸುರೇಶನ ಹಳೆಯ ಸಹಪಾಟಿ ಶೇಷಪ್ಪನ ಬಳಿ ಇದ್ದ ಹಸ್ತಪ್ರತಿಯ ಹಳೆಗನ್ನಡ ಕಾವ್ಯದ ರಹಸ್ಯಗಳು ಕಥೆಗೆ ಮತ್ತೊಂದು ತಿರುವನ್ನು ನೀಡುತ್ತದೆ. ಗುರುರಾಜ ಕವಿಯ ಆ ಕಾವ್ಯ ಒಂದರ್ಥದಲ್ಲಿ ಉತ್ತುಂಗ ರಾಜನಿಗೆ ರತ್ನಮಾಲಾಳೆಂಬ ನರ್ತಕಿಯು ಮಾಣಿಕ್ಯವನ್ನು ಕೊಟ್ಟ ಕಥೆಯಾದರೆ ಇನ್ನೊಂದು ಅರ್ಥದಲ್ಲಿ ‘ರತ್ನಮಾಲಾ’ ದೋಣಿಹೊಳೆಯ ಮೂಲದಲ್ಲೆಲ್ಲೋ ಸಹ್ಯಾದ್ರಿಯ ಶೃಂಗಸೆಲೆಯಲ್ಲಿ ದೊರೆಯುವ ಹೊಳೆಯುವ ಕೆಂಪುರತ್ನ ಜಾಗವನ್ನು ನಿರ್ಧರಿಸುವ ನೀಲನಕ್ಷೆಯಾಗಿತ್ತು. ನರ್ತಕಿಯ ಹೆಸರು ಮತ್ತು ನದಿಯ ಹೆಸರು ಒಂದೆ ಆಗಿದ್ರು ಒಂದನ್ನೊಂದು ಸಮೀಕರಿಸಿ ಏಕಕಾಲಕ್ಕೆ ಕಾವ್ಯವೂ ಮತ್ತು ನಿಧಿನಕ್ಷೆಯನ್ನಾಗಿ ರಚಿಸಿದ್ದು, ಆ ಕಾವ್ಯವನ್ನು ಅರ್ಥೈಸುವಾಗ ಆ ಪದ (ರತ್ನಮಾಲ)ದ ಜಾಗವನ್ನು ಹುಳು ತಿಂದ ರೀತಿಯಲ್ಲಿ ಮಾಯವಾಗಿರುತ್ತದೆ. ಕನ್ನಡದ ಎಂ.ಎ ವಿದ್ಯಾರ್ಥಿಯಾದ ಸುರೇಶ್ ನಿಧಾನವಾಗಿ ಅದನ್ನು ಬಿಡಿಸುತ್ತಾ ಹೋಗುವುದು, ‘ಜುಗಾರಿ ಕ್ರಾಸ್’ ನ ರೋಚಕತೆಯ ಮತ್ತೊಂದು ಭಾಗ. ಕಾದಂಬರಿಯ ಕೊನೆಯಲ್ಲಿ ಆ ಕಡತ ಮುಸುಕುಧಾರಿಗಳ ಕೈಗೆಸಿಕ್ಕು ಅದರ ಮಹತ್ವ ತಿಳಿಯದ ಅವರು ನದಿನೀರಿಗೆ ಎಸೆದು ಅದು ಬಿಡಿಬಿಡಿಯಾಗಿ ಬಿದ್ದು ನೀರುಪಾಲಾಗುತ್ತದೆ. ಇದ್ದ ಒಂದು ಪ್ರತಿಯೂ ಮಾಯವಾದರೂ ಎಲ್ಲಿಯಾದರೂ ಮತ್ತೊಂದು ಪ್ರತಿಯನ್ನು ಹುಡುಕಿಯೆ ತೀರುತ್ತೇನೆ ಮತ್ತು ಅದರ ಸಹಾಯದಿಂದ ರತ್ನಮಾಲಾ ವಜ್ರವನ್ನು ಪಡೆದೆ ತೀರಬೇಕೆಂದು, ಮುಂದೆ ಅದನ್ನು ಹಂಚಿಕೊಳ್ಳಬಹುದೆಂದು ರಾಜಪ್ಪ ತಿಳಿಸಿ, ಅದಕ್ಕೆ ಮೂವರು ಒಪ್ಪಿ ಜುಗಾರಿಕ್ರಾಸ್‍ನ ಬಸ್ ಹತ್ತುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಭ್ರಷ್ಟಾಚಾರದ ಬೇರುಗಳು ಇಡೀ ಸಮಾಜವನ್ನು ಆಳವಾಗಿ ಬೇರೂರಿರುವ ರೀತಿಯನ್ನು ಕೃತಿ ಅನನ್ಯವಾಗಿ ಚಿತ್ರಿಸುತ್ತದೆ. ಹಣದ ಹಿಂದೆ ಬಿದ್ದ ಜನ ಮಾನವತೆಯನ್ನು ಸಂಪೂರ್ಣವಾಗಿ ಮರೆಯುತ್ತಿರುವ ಪ್ರತೀಕವಾಗಿ ಬರುವ ಚೆಕ್‍ಪೋಸ್ಟ್‍ನ ಪಾರಸ್ಟರ್ ಇಕ್ಬಾಲ್, ಗಾರ್ಡ್ ಗುರಪ್ಪ, ಕಂಡಕ್ಟರ್, ದೌಲತ್‍ರಾಮ್, ಕುಟ್ಟಿ, ಶಾಸ್ತ್ರಿ, ಜೀವನ್‍ಲಾಲ್, ಶೇಷಪ್ಪಶೆಟ್ಟಿ. . . . ಹೀಗೆ ಹಣ ಹೆಣೆದ ಬಲೆಗೆ ಸಿಕ್ಕಿಬಿದ್ದವರು ಹೊರಬರಲಾಗÀದವರಾಗಿದ್ದಾರೆ. ದುರಂತವೆಂದರೆ ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರೂ ಅದರ ಬಗ್ಗೆ ಅವರಿಗೆ ಪರಿತಾಪವಿಲ್ಲ. ಸರ್ಕಾರದ ಸ್ಟಾಂಪ್ ಪೇಪರ್‍ನ ಬರಹ, ಕಾನೂನುಗಳನ್ನು ಗೌರವಿಸದವರು, ಭೂಗತಲೋಕದ ವ್ಯವಹಾರಗಳ ಸಿಗರೇಟ್ ಪ್ಯಾಕೆಟ್ ಮೇಲಿನ ಮೋಡಿ ಅಕ್ಷರಗಳಿಗೆ ಗೌರವ ನೀಡುವುದು, ವ್ಯಾಪಾರ ಲೋಕದಲ್ಲಿನ ನಾವು ತಿಳಿಯದ ಏಲಕ್ಕಿ ಮಾರ್ಕೆಟ್‍ನ ಅಂದರ್-ಬಾಹರ್ ವ್ಯವಹಾರಗಳನ್ನು ವಿವಿಧ ಹಂತಗಳಲ್ಲಿ ವಿವರಿಸುತ್ತಾ, ಪರ್ಯಾಯ ಸರ್ಕಾರವನ್ನು ನಡೆಸುತ್ತಿರುವ ಸರ್ಕಾರ ವಿರೋಧಿ ಸಮಾಜ ಘಾತಕ ಶಕ್ತಿಗಳ ಕುರಿತಾಗಿ ಲೇಖಕರು ನಿರುದ್ವಿಗ್ನತೆಯಿಂದ ತಿಳಿಸುತ್ತಾ ಸಾಗುತ್ತಾರೆ.
ತೇಜಸ್ವಿಯವರ ಕೃತಿಗಳಾಗಿ ಕಂಡುಬರುವ ಸಹಜ ಹಾಸ್ಯ ಇಲ್ಲಿಯೂ ಹೊರಹೊಮ್ಮಿದೆ. ಕಂಡಕ್ಟರ್ ಪ್ರಯಾಣಿಕನ ಸಂವಾದ, ಬೋಳಮ್ಮನ ವಾಂತಿಯಿಂದಾಗಿ ಇಡೀ ಬಸ್ಸಿನ ಜನ ಚೆಕ್ಕಿಂಗ್ ಮಂದಿ ಸಮೇತ ಕ್ಷಣಾರ್ಧದಲ್ಲಿ ಮಾಯವಾಗುವುದು, ಸುರೇಶ ಮತ್ತÀು ಅಬ್ಬಾಸಾಲಿಯ ಸಂಭಾಷಣೆ, ಏಜೆಂಟ್ ಶೇಷಪ್ಪನ ಮನ್ಮಥಬೀಡದ ಪ್ರಸಂಗ, ರಾಜಪ್ಪನ ಬಳಿಯಿಂದ ಗುರ್ರಾಜಪಂಡಿತನ ಕಾವ್ಯದ ಹಿನ್ನೆಲೆಯ ವಿವರಣೆ ಎಲ್ಲವೂ ಓದುಗನಲ್ಲಿ ನಗು ಮೂಡಿಸುತ್ತಿದೆ.

ಜೂಜಿನ ಆಕರ್ಷಣೆಯ ಹಾಗೆ! ಪ್ರಾರಂಭದಲ್ಲಿ ಸಣ್ಣದಾಗಿ ಪ್ರಾರಂಭವಾಗುವ ಅದೃಷ್ಟ ಪರೀಕ್ಷೆ, ಕೊನೆಗೆ ತನ್ನ ಹಣ, ನಂತರ ಮನೆಯವರೆಲ್ಲರ ಹಣ, ಮುಂದೆ ಸಾಲ, ನಂತರ ಅಪರಾಧ,. . . ಅತ್ಮಹತ್ಯೆ ಮುಂತಾಗಿ ತನ್ನ ಪಾಶವಿ ವ್ಯೂಹದಿಂದ ಸೆಳೆಯುತ್ತಾ ಹೋಗುತ್ತದೆ. ಆ ಚಕ್ರವ್ಯೂಹದಲ್ಲಿ ಒಮ್ಮೆ ಸಿಲುಕಿದವನು ಹೊರಬರುವುದು ಕಷ್ಟ ಎಂಬುದನ್ನು ಈ ಕೃತಿಯ ಪಾತ್ರಗಳ ವಿವಿಧ ಸನ್ನಿವೇಶದಲ್ಲಿ ಮನದಟ್ಟು ಮಾಡುತ್ತವೆ. ಅಷ್ಟೆ ಏಕೆ ? ಆ ಬಲೆಯಿಂದ ಹೊರಬರಲು ಯತ್ನಿಸುವ ಸುರೇಶ-ಗೌರಿಯರು ಕಾದಂಬರಿಯ ಕೊನೆಗೆ ರಾಜಪ್ಪನ ಆಫರ್‍ಗೆ ಒಪ್ಪಿ ಆ ಸುಳಿಯಲ್ಲಿ ಮತ್ತೆ ಸಿಲುಕುವ ಸೂಚನೆ ಇದೆ. ಜೂಜಿನ ಆಕರ್ಷಣೆಯ ತೀವ್ರತೆಗೆ ಇಡೀ ಸಮಾಜ ಒಂದೊಂದು ರೀತಿಯಲ್ಲಿ ಈ ವ್ಯೂಹಕ್ಕೆ ಸಿಲುಕುತ್ತಿರುವುದನ್ನು ವಿವರಿಸುತ್ತಾ, ಅದರ ಜೊತೆಗೆ ಅವನತಿ ಹೊಂದುತ್ತಿರುವ ಗ್ರಾಮೀಣ ಬದುಕನ್ನು ವಿವರಿಸುತ್ತಾರೆ. ಮೇಗರವಳ್ಳಿಯ ಗುಡಿಕೈಗಾರಿಕೆಯ ಕಲಾತ್ಮಕ ಬಿದಿರಿನ ಬುಟ್ಟಿಯನ್ನು ಆಪೋಶನ ತೆಗೆದುಕೊಳ್ಳುತಿರುವ ಪ್ಲಾಸ್ಟಿಕ್ ಚೀಲಗಳ ಉದಾಹರಣೆಯ ಮೂಲಕ ಅದನ್ನು ಸೂಕ್ಷ್ಮವಾಗಿ ಚರ್ಚಿಸಿದ್ದಾರೆ.

ಕೃತಿಯಲ್ಲಿ ಬರುವ ವಿಚಿತ್ರ ದರ್ಪಣ ಬಿಂಬಿಸುವ ರಸ್ತೆಯ ಚಿತ್ರದಂತೆ ನಮ್ಮ ಸುತ್ತಲಿನ ಬದುಕಿನ ಅಂತರಂಗದ ವಿಶ್ವರೂಪವನ್ನು ಪರಿಚಯಿಸುವ ಜುಗಾರಿ ಕ್ರಾಸ್ ವಿಶಿಷ್ಟ ಕೃತಿ ಎಂಬುದು ನಿಸ್ಸಂಶಯ.

‍ಲೇಖಕರು avadhi

September 8, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: