ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂದುವರಿದ ಜೀವನವೆಂಬ ಪಯಣ..

(ಇಲ್ಲಿಯವರೆಗೆ)
ಚಿಂತೆಯಿಲ್ಲದವನಿಗೆ…..
ಕೆಲವಾರು ಜನಕ್ಕೆ ಕೆಲವಾರು ರೀತಿಯ ಭಿನ್ನ ಭಿನ್ನ ಖಯಾಲಿಗಳು, ಚಟಗಳೂ ಇರುತ್ತವೆ. ಕೆಲವರಿಗೆ ಬೀಡಿ ಸಿಗರೇಟು ಸೇದುವ ಚಟ. ಅದೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಈ ಚಟದೊಳಗೊಂದು ಚಟ. ಕೆಲವು ಜನ ಬಸ್ಸಿಗೋ ವ್ಯಾನಿಗೋ ಕಾಯುತ್ತಾ ನಿಂತಿದ್ದವರು ವಾಹನ ಬಂದು ಅದರೊಳಗೆ ನುಸುಳಿಕೊಂಡು ಕೂಡಲೇ ಅದಕ್ಕೇ ಕಾದಿದ್ದವರಂತೆ ಜನಗಳ ಮಧ್ಯೆಯೇ ಬೀಡಿ ಸಿಗರೇಟು ತುಟಿಗಿಡುವುದನ್ನು ಕಾಣುತ್ತೇವೆ. ಕಾನೂನು ಬಂದು ದಂಡ ವಿಧಿಸುವ ಪ್ರಕ್ರಿಯೆ ಶುರುವಾದ ನಂತರ ಈ ಚಟದೊಳಗಿನ ಚಟ ಕಡಿಮೆಯಾಗಿದೆ ಎನ್ನಬಹುದು. ಇನ್ನು ಕೆಲವರಿಗೆ ಸಾರ್ವಜನಿಕ ಸ್ಥಳದಲ್ಲಿ, ಬೀದಿ ಬದಿಯಲ್ಲಿ ಮೂತ್ರ ಮಾಡುವ ಚಟ ಜನ ತಿರುಗಾಡುವ ರಸ್ತೆಯಲ್ಲಿ ಮೂತ್ರ ಮಾಡಿ ಕೈಯಲ್ಲಿರುವುದನ್ನು ಅಲುಗಿಸುತ್ತಾ ನಿಲ್ಲುವುದು ಅಸಹ್ಯವೆನಿಸುತ್ತದೆ.
ಮತ್ತು ಕೆಲವರಿಗೆ ನಿದ್ರೆಯ ಚಟ. ಅದು ಹೇಗೋ ಇಂತಹವರಿಗೆ ಎಲ್ಲೆಂದರಲ್ಲಿ ನಿದ್ರೆ ಹತ್ತಿ ಬಿಡುತ್ತದೆ. ನಮ್ಮ ಆಫೀಸಿನ ಮುಂದುಗಡೆ ರಸ್ತೆಯಲ್ಲಿ ನಡೆಯುವ ವಾರದ ಸಂತೆಯಲ್ಲಿ ದಂಪತಿಗಳು ಬಂದು ತರಕಾರಿ ಅಂಗಡಿ ಹಾಕುತ್ತಾರೆ. ಹೆಂಡತಿ ವ್ಯಾಪಾರ ಮಾಡುತ್ತಿದ್ದರೆ ಗಂಡ ತರಕಾರಿ ರಾಶಿಯ ಹಿಂಬದಿಲ್ಲಿ ನಿದ್ದೆ ಹೊಡೆಯುತ್ತಿರುತ್ತಾನೆ. ಸಂತೆಯ ಗದ್ದಲ, ವಾಗ್ವಾದ, ವಾಹನಗಳ ಅಬ್ಬರ ಚೌಕಾಶಿಗಳ ಮಧ್ಯೆ ಅತ ಸಣ್ಣಗೆ ಗೊರಕೆ ಹೊಡೆಯುವುದನ್ನು ಕಂಡಾಗ ಅಚ್ಚರಿಯೆನಿಸುತ್ತದೆ. ನನ್ನ ಒಬ್ಬ ಮಿತ್ರನಿಗೆ ಕುಂತಲ್ಲಿಯೇ ಕೆಲವು ಸೆಕೆಂಡುಗಳಲ್ಲಿಯೇ ನಿದ್ದೆ ಹತ್ತಿ ಬಿಡುತ್ತದೆ. ಯಾರದಾರೂ ನೆಂಟರ ಮನೆಗೆ ಹೋದರೆ ಮನೆಯವರು ಕಾಫಿ ಮಾಡಿ ತರುತ್ತೇನೆ, ಕೂತಿರಿ ಎಂದು ಹೇಳಿ ಹೋದೊಡನೆಯೇ ಇಲ್ಲಿ ಇವನು ಕೂತ ಕುರ್ಚಿಯಲ್ಲೇ ನಿದ್ದಗೆ ಜಾರುತ್ತಾನೆ. ಕಾಫಿ ಮಾಡಿ ತಂದ ಮನೆಯೊಡತಿಗೆ ಅಚ್ಚರಿ. ಅವನನ್ನು ಏಳಿಸಿ ನಂತರ ಕಾಫಿ ಕೊಡಬೇಕು ಈ ತರಹದ ಹಲವಾರು ಚಟಗಾರರು ನಮ್ಮ ದಿನ ನಿತ್ಯದ ಬದುಕಿನಲ್ಲಿ ಬಂದು ಹೋಗುತ್ತಾರೆ.
ಒಮ್ಮೆ ನಾನು ಮಡಿಕೇರಿಯಿಂದ ಮೈಸೂರಿಗೆ ಬಸ್ಸಿನಲ್ಲಿ ಪಯಣ ಹೊರಟಿದ್ದೆ. ಮೂರು ಜನ ಕೂರುವ ಸೀಟಿನಲ್ಲಿ ಮಧ್ಯದ ಜಾಗ ನನ್ನದಾಗಿತ್ತು. ಆ ಕಡೆ ಈ ಕಡೆ ಕುಳಿತ ಸಹ ಪ್ರಯಾಣಿಕರು- ಇಬ್ಬರೂ ಗಂಡಸರು- ಅಚ್ಚುಕಟ್ಟಾದ ವೇಷ ಭೂಷಣದಲ್ಲಿದ್ದರು. ಅವರ ಪಯಣವೂ ಸಹ ಮೈಸೂರಿಗೇ. ಮುಖ ಚರ್ಯೆಯಿಂದ ಸಭ್ಯರಂತೆ ತೋರುತ್ತಿದ್ದದರಿಂದ ನಾನು ನನ್ನ ಸ್ಥಳದಲ್ಲಿ ನೆಮ್ಮದಿಯಿಂದ ಕುಳಿತು ಕೊಂಡಿದ್ದೆ.
ಬಸ್ಸು ಹೊರಟಿತು. ನಾನು ಮಾಮೂಲಿನಂತೆ ಆಲೋಚನೆಯ ಸಾಗರದಲ್ಲಿ ಮುಳುಗಿದ್ದೆ. ಹೋಗುವ ಕೆಲಸ ಏನಾಗುವುದೋ . ದಸರಾದ ಗೌಜು ಬೇರೆ . ಸ್ನೇಹಿತರೂ ಈ ಹಬ್ಬದ ಗಡಿ ಬಿಡಿಯಲ್ಲಿ ಪುರುಸೋತ್ತಾಗಿ ಸಿಕ್ಕಿಯಾರೇ …. ನನ್ನ ಸಮಸ್ಯೆಗೆ ಸ್ಪಂದಿಸಲು ಅವರಿಗೆ ಸಮಯವಿದ್ದೀತೆ? … ಹೀಗೆ.
ಬಸ್ಸು ಹತ್ತು ಕಿಲೋ ಮೀಟರ್ ಬಂದಿರ ಬಹುದು. ಶುಂಠಿಕೊಪ್ಪದ ಲೈಟಿನ ಬೆಳಕು ಕಾಣುತ್ತಿತ್ತು. ನನ್ನ ಬಲದ ಭುಜದ ಮೇಲೆ ಸಣ್ಣ ಭಾರದಂತೆ ಭಾಸವಾಯಿತು. ಆಲೋಚನೆಯಿಂದ ಹೊರಬಂದು ಕತ್ತು ಹೊರಳಿಸಿದೆ. ನನ್ನ ಬಲಬದಿಯ ಪ್ರಯಾಣಿಕನ ತಲೆ ನನ್ನ ಭುಜದ ಮೇಲಿದೆ. ಅವನು ತೂಕಡಿಕೆಯಿಂದ ಒಳ್ಳೆಯ ನಿದ್ದೆಗೇ ಜಾರಿದಂತಿತ್ತು.
ಅವನನ್ನು ಮೆಲ್ಲಗೆ ಅಲುಗಿಸಿದೆ. ಸಣ್ಣಗೆ ಕಣ್ತೆರೆದು ನೋಡಿದ ಆತ ತನ್ನ ಸೀಟಿನಲ್ಲಿ ನೆಟ್ಟಗೆ ಕೂರಲು ಯತ್ನಿಸಿದ. ಏನೋ ಪಾಪ ನಿದ್ರೆಯ ಮಂಪರು ಎಂದು ಕೊಳ್ಳುತ್ತಾ ನಾನು ನನ್ನ ಯೋಚನೆಯ ಚಿಪ್ಪಿನೊಳಗೆ ಜಾರಿಕೊಂಡೆ.
ಬಸ್ಸು ಶುಂಠಿಕೊಪ್ಪ ದಾಟಿ ಆನೆಕಾಡು ಬಳಿ ದಾರಿ ಕ್ರಮಿಸುತ್ತಿತ್ತು. ಮತ್ತೆ ಆತ ನನ್ನೆಡೆಗೆ ವಾಲುತ್ತಿರುವ ಅನುಭವವಾಗ ತೊಡಗಿತು. ಸ್ವಲ್ಪ ಹೊತ್ತಿನಲ್ಲೆ ಅವನ ತಲೆ ಮತ್ತೆ ನನ್ನ ಭುಜದ ಮೇಲಿತ್ತು.
ಏನೋ ಪಾಪ ದಣಿದಿರಬಹುದು. ನಿದ್ದೆಯ ಜೊಂಪು ತಡೆಯಲಾಗುತ್ತಿಲ್ಲವೇನೋ ಎಂದುಕೊಳ್ಳುತ್ತಾ ಅವನ ತೂಕಡಿಗೆ ಅಡಚಣೆಯಾಗದಂತೆ ನಿಧಾನವಾಗಿ ಅವನನ್ನು ಸ್ವಸ್ಥಾನಕ್ಕೆ ತಳ್ಳಿದೆ. ಮತ್ತೆ ಕಣ್ತೆರೆದು ನೋಡಿ ನೆಟ್ಟಗೆ ಕೂರಲು ಯತ್ನಿಸಿದ.

ಕೆಲವೇ ಕ್ಷಣ ಅಷ್ಟೆ ಮತ್ತದೇ ಪುನರಾವರ್ತನೆ. ಅವನು ಎಡಕ್ಕೆ ಜಾರಿ ಜಾರಿ ಬಂದು ತನ್ನ ತಲೆಯನ್ನು ನನ್ನ ಬಲಭುಜದ ಮೇಲೆ ಆಗಿಸುವುದು, ನಾನು ಅವನ್ನನ್ನು ಮೆಲ್ಲಗೆ ಏಳಿಸಿ ನಿಧಾನಕ್ಕೆ ಅವನ ಸೀಟಿನ ಕಡೆ ತಳ್ಳುವುದು ನಡೆದೇ ಇತ್ತು.
ಬಸ್ಸು ಕುಶಾಲನಗರ ಪ್ರವೇಶಿಸಿತು. ಬಸ್ಸ್ಟ್ಯಾಂಡಿನಲ್ಲಿ ಗದ್ದಲ. ದಸರಾ ಸೀಜನ್ ಆದ್ದರಿಂದ ಬಸ್ಸಿಗೆ ಹತ್ತಲು ನೂಕು ನುಗ್ಗಲು.
ಅದುವರೆಗೂ ಶಾಂತವಾಗಿದ್ದ ಬಸ್ಸೊಳಗಿನ ವಾತಾವರಣದಲ್ಲಿ ಕಾವೇರಿ ಬಿಟ್ಟಿತು. ಗದ್ದಲದಿಂದ ತುಂಬಿ ತುಳುಕುತ್ತಿದ್ದ ಬಸ್ಸು ಕೆಲವರು ಮನಸ್ಸಿನಲ್ಲಿ ಸಮಾಧಾನ ತಂದಿತ್ತು. ಗದ್ದಲವೋ ಗದ್ದಲ. ಇಲ್ಲದ ಸೀಟಿಗಾಗಿ ಹುಡುಕಾಟ. ಯಾರೋ ಯಾರದೋ ಕಾಲು ತುಳಿದರು. ಯಾರರೋ ಬ್ಯಾಗು ಯಾರಿಗೂ ತಗುಲಿತು. ನೂಕಾಟ ಜಗಳ ಬಸ್ಸೋಳಗೆ.
ನನಗೆ ಒಳಗೆ ಖುಷಿಯಾಯಿತು. ಈ ಗದ್ದಲದಿಂದಲಾದರೂ ನನ್ನ ಸಹ ಪ್ರಯಾಣಿಕರ ಎಚ್ಚರ ಗೊಳ್ಳಬಹುದು. ನನ್ನ ಪಯಣ ಯಾವುದೇ ಅಡಚಣೆಯಿಲ್ಲದೇ ಸಹನೀಯವಾಗಬಹುದು ಎಂದು ಕೊಂಡೆ.
ಬಸ್ಸು ಪಿರಿಯಾಣಪಟ್ಟಣದ ಅಭಿಮುಖವಾಗಿ ಚಲಿಸತೊಡಗಿತು. ನಾನು ನನ್ನ ಬಲ ಬದಿಗೆ ತಿರುಗಿ ನೋಡಿದೆ. ಆತನಿಗೆ ಗದ್ದಲ ಅಸಹನೀಯವಾಗಿದ್ದಂತೆ ತೋರಿತು. ಪಿಳಿ ಪಿಳಿ ಕಣ್ಣು ಬಿಡುತ್ತಾ ಕುಳಿತ್ತಿದ್ದ. ಮುಖದಲ್ಲಿ ಅಸಮಾಧಾನದ ಛಾಯೆಯಿತ್ತು.
ನಾನು ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಕಣ್ಮುಚ್ಚಿ ನನ್ನ ಯೋಚನಾ ಲಹರಿಯಲ್ಲಿ ತೊಡಗಿಕೊಂಡೆ.
ನನಗೆ ನಿರಾಸೆಯಾಗಲಿಕ್ಕ ಬೈಲುಕುಪ್ಪೆಯವರೆಗೇನೂ ತಲಪಬೇಕಾಗಲಿಲ್ಲ. ಒಬ್ಬ ವ್ಯಕ್ತಿಯನ್ನೋ ಒಂದು ಅವಮಾನವನ್ನೋ ಅಥವಾ ಕಿರಿಕಿರಿಯನೋ ಒಮ್ಮೆ ಸಹಿಸಿಕೊಂಡಲ್ಲಿ ಮತ್ತೆ ಹಲವಾರು ಸಂದರ್ಭಗಳಲ್ಲಿ ಮತ್ತೆ ಮತ್ತೆ ಸಹಿಸಿಕೊಳ್ಳಲೇ ಬೇಕಾಗುತ್ತದೆ ಎಂಬ ಅನಿಸಿಕೆ ನಿಜವಾಗ ತೊಡಗಿತ್ತು.
ಆ ವ್ಯಕ್ತಿ ತೂಕಡಿಕೆಯಿಂದ ಮಂಪರಿಗೆ ಸರಿದು ಈಗ ಗಾಢ ನಿದ್ದಗೆ ಜಾರಿಕೊಂಡುತ್ತಿತ್ತು.ಅವನಿಗೆ ತಾನು ಸಾರ್ವಜನಿಕ ಸ್ಥಳದಲ್ಲಿದ್ದೇನೆ. ಸುತ್ತಲಿನವರಿಗೆ ತನ್ನಿಂದ ತೊಂದರೆಯಾಗುತ್ತದೆ ಎಂಬ ಪರಿವೇಯೇ ಇದ್ದಂತಿರಲಿಲ್ಲ.
ಮೈ ಮೇಲೆ ಒರಗಿದವನನ್ನು ಅವನ ಸೀಟಿನ ಕಡೆಗೆ ನೂಕಿ ಹಿಡಿದು ನೆಟ್ಟಗೆ ಕೂರಿಸಲು ಪ್ರಯತ್ನಿಸುತ್ತಿದ್ದೆ. ಬರುಬರುತ್ತಾ ಆ ಪ್ರಯತ್ನದಿಂದಾಗಿ ನನ್ನ ಬಲ ರಟ್ಟೆ ನೋಯ ತೊಡಗಿತ್ತು. ಮನಸಿನಲ್ಲಿ ಸಹಿಸಲಾರದ ಕಿರಿ ಕಿರಿ . ನಾನು ಕೈ ಬಿಟ್ಟ ಕೆಲವೇ ಕ್ಷಣಗಳಲ್ಲಿ ಆತ ಆಸರೆಯಿಲ್ಲದ ಬುಡ ಕಡಿದ ಮರಂದತೆ ಮತ್ತೆ ಮತ್ತೆ ರಭಸದಿಂದ ವಾಲಿ ಬಂದು ನನ್ನ ಮೈ ಮೇಲೆ ಒರಗುತ್ತಿದ್ದ.
ನನಗೆ ಅವನ ಮಿತಿ ಮೀರಿದ ಚಟ ಅಸಹನೀಯವಾಗ ತೊಡಗಿತು. ಆದರಿಂದ ತಪ್ಪಿಸಿಕೊಳ್ಳಲು ಮೈ ಹಿಡಿಮಾಡಿ ಎಡಬದಿಗೆ ಸರಿದು ಕುಳಿತುಕೊಳ್ಳ ತೊಡಗಿದೆ. ಆದರಿಂದ ನನಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗ ತೊಡಗಿತು. ಈಗ ಅವನಿಗೂ ನನಗೂ ಅಂತರ ಹೆಚ್ಚು ಇದ್ದುದರಿಂದ ರಭಸವಾಗಿ ಬೀಸಿ ಬಂದು ನನ್ನ ಮೇಲೆ ಬೀಳುತ್ತಿದ್ದ.
ನನ್ನ ಎಡ ಬದಿಯಲ್ಲಿದ್ದವರು- ಅವರ ಹೆಸರು ಪೊನ್ನಪ್ಪ, ವಕೀಲ ಎಂಬುದು ನಂತರ ತಿಳಿಯಿತು- ಈ ನಿದ್ದೆ- ನೂಕಾಟದ ಆಟವನ್ನು ಗಮನಿಸುತ್ತಿದ್ದವರು ಮೊದ ಮೊದಲಿಗೆ ನನ್ನ ಬಗ್ಗೆ ಕನಿಕರದ ನೋಟ ಬೀರಿದರಾದರೂ ನಂತರದಲ್ಲಿ ಸಹಿಸಿಕೊಳ್ಳುವುದಕ್ಕೂ ಒಂದು ಮಿತಿಯಿದೆ! ಎಂಬಂತೆ ಸಿಟ್ಟಿನ ನೋಟ ಹರಿಸ ತೊಡಗಿದರು.
ಪೊನ್ನಪ್ಪನ ಭಾವನೆಗೆ ಹೇಗೆ ಪ್ರತಿಕ್ರಿಯಿಸ ಬೇಕೆಂಬುದೇ ತಿಳಿಯದಾಯಿತು. ಒಂದು ಬಗೆಯ ಅವಮಾನವಂದಂತಯಿತು.
ಪರಿಸ್ಥಿತಿಯೇಕೋ ಕ್ಲೈಮ್ಯಾಕ್ಸ್ನತ್ತ ತಲುಪುತ್ತಿದೆ ಎನಿಸಿತು ನನಗೆ.
ಈ ಕಡೆ ನಿದ್ದೆಯನ್ನೇ ಅವಹಿಸಿಕೊಂಡು ಆಗಾಗ ಮೈ ಮೇಲೆ ಬೀಳುವ ಭೂಪ! ಆ ಕಡೆ ಸಹಿಸಿಕೊಂಡು ಸುಮ್ಮನೇ ಕೂತಿದ್ದೀಯಲ್ಲಾ ಎಂಬಂತೆ ಸಿಟ್ಟಿನ ನೋಟ ಬೀರುವ ವಕೀಲ! ಎರಡನ್ನೂ ಎದುರಿಸುವ ಶಕ್ತಿ ನನ್ನಲ್ಲಿ ಉಳಿದಿರಲಿಲ್ಲ. ಮನಸ್ಸಿನಂತೆ ಮೈಯೂ ಸಂಕೋಚಗೊಂಡಂತೆ ಹಿಡಿ ಗಾತ್ರವಾದಂತೆನಿಸಿತು. ಕುಳಿತ ಸೀಟಿನಲ್ಲೇ ಮುಂದೆ ಸರದು ಮುಂಭಾಗದ ಸೀಟಿಗೆ ತಲೆ ಕೊಟ್ಟು ಕುಳಿತುಕೊಂಡೆ.
ಪಿರಿಯಾಪಟ್ಟಣ ಸಮೀಪಿಸುತ್ತಿತ್ತು. ಈಗ ಆತ ಎಡಕ್ಕೆ ವಾಲಿ ವಾಲಿ ಬರುತ್ತಿದ್ದುದು ಒರಗಲು ಯಾವುದೇ ಆಸರೆ ಸಿಗದೆ ಮತ್ತೆ ಬಲಕ್ಕೆ ಸೆಟೆದುಕೊಳ್ಲುತ್ತಿದ್ದುದು ನನ್ನ ಗಮನಕ್ಕೆ ಬರುತ್ತಿತ್ತು. ಏನಾದರಾಗಲೀ ಎಂದು ಸುಮ್ಮನೇ ಕಣ್ಣುಚ್ಚಿ ಕುಳಿತೆ.
ಅವನಾದರೂ ಎಷ್ಟು ಹೊತ್ತು ತಡೆಯುತ್ತಾನೆ. ತಡೆದಷ್ಟೂ ನಿದ್ದೆ ಹೆಚ್ಚಾಗಿರ ಬಹುದು. ಈ ಬಾರಿ ಎಡಕ್ಕೆ ವಾಲಿದವನಿಗೆ ಮಧ್ಯದಲ್ಲಿ ತಡೆಯಲು ಯಾವುದೇ ಆಸರೆ ಇರಲಿಲ್ಲ. ಜೋರು ನಿದ್ದೆಯಲ್ಲಿದ್ದವನ ಶರೀರ ಅವನ ಹಿಡಿತದಲ್ಲಿರಲಿಲ್ಲ. ಬೀಸಿ ಬಂದ ಶರೀರ ಈ ಬಾರಿ ಎಡ ತುದಿಯಲ್ಲಿ ಕುಳಿತಿದ್ದ ಪೊನ್ನಪ್ಪನ ಮೇಲೆ ದೊಪ್ಪನೆ ಬಿತ್ತು.
ಏನಾಗುತ್ತಿದೆ ಎಂದು ನಾನು ಎದ್ದು ನಿಂತು ತಿರುಗಿ ನೋಡುವಷ್ಟರಲ್ಲಿ ಪೊನ್ನಪ್ಪ ಆ ಪ್ರಯಾಣಿಕನನ್ನು ಅವನ ಕುತ್ತಿಗೆ ಪಟ್ಟಿ ಹಿಡಿದು ಅವನ ಸೀಟಿನೆಡೆಗೆ ನೂಕಿ ಹಿಡಿದು ರಪ್ಪನೆ ಕೆನ್ನೆಗೊಂದು ಬಾರಿಸಿದ.
ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ನಿದ್ದೆ ಬಂತಂತೆ ಹಾಗಾಯ್ತೂ ಎನ್ನುತ್ತಾ ದುಮುಗುಡುತ್ತಾ ತನ್ನ ಸೀಟಿನ ಮೇಲೆ ಕುಳಿತುಕೊಂಡ. ಆ ಪ್ರಯಾಣಿಕ ತನ್ನ ಸೀಟಿನ ಮೇಲೆ ಕುಕ್ಕರಿಸಿದ. ಪಿರಿಯಾಪಟ್ಟಣ ಸ್ಟಾಂಡಿನಲ್ಲಿ ಬಸ್ಸುನಿಂತಾಗ ಇಬ್ಬರೂ ಟೀ ಕುಡಿಯಲು ಇಳಿದು ಹೋದೆವು.
ವಾಪಸು ಬಂದಾಗ ಆವನಿರಲಿಲ್ಲ
 
ಹೌಸಿಂಗ್ ಬೋರ್ಡಿಗೆ ಹೊಡೆಯಯ್ಯ

ಗೋಡೆ ಗಡಿಯಾರ ಆರು ಮುಕ್ಕಾಲು ತೋರಿಸುತ್ತಿತ್ತು. ಓದು ನಿಲ್ಲಿಸಿ ಪೇಜ್ ಗುರುತು ಹಾಕಿಟ್ಟು ಹೊರಡಲು ಅನುವಾದೆ.
ಏಳು ಗಂಟೆಗೆಲ್ಲಾ ಬಾರ್ ಬಳಿ ಇರಬೇಕು. ಅವರೆಲ್ಲಾ ಸಮಯಕ್ಕೆ ಸರಿಯಾಗಿ ಬಂದು ಸೇರಿ ಬಿಟ್ಟಿರುತ್ತಾರೆ. ಕೆಲಸದ ಸ್ಥಳಕ್ಕೂ ಬರಲು ಆಷ್ಟೂ ನಿಖರ ಸಮಯ ಪ್ರಜ್ಞೆ ಪ್ರದರ್ಶಿಸುವುದಿಲ್ಲ. ಇದಕ್ಕಾದರೆ ನಾನು ಹೇಳಿದ ಸಮಯಕ್ಕೆ ಕರಾರುವಕ್ಕಾಗಿ ಬಂದು ಬಿಡುತ್ತಾರೆ.
ನನ್ನೊಂದಿಗೆ ಪಾರ್ಟಿಗೆ ಬರಲು ಅವರುಗಳ ಮನೆಯಲ್ಲೂ ಏನೂ ತಕರಾರು ಇರುವುದಿಲ್ಲ. ಇವರುಗಳಾದರೂ ನಮ್ಮ ಪಾರ್ಟಿ ತಪ್ಪಿಸಲು ಇಷ್ಟ ಪಡುವುದಿಲ್ಲ. ಶಿಸ್ತಿಗೆ ಬದ್ಧರಾಗಿರುತ್ತಾರೆ.ಮಾನಸಿಕವಾಗಿ ದುಡಿಮೆಯ ವೇಳೆಯ ಕಿರಿಕಿರಿ, ದೈನಂದಿನ ಬದುಕಿನ ಜಂಜಾಟದಿಂದ ಪಾರಾಗುವ ಕ್ಷಣಗಳನ್ನು ಕಳೆದುಕೊಳ್ಳಲು ಯಾರು ಇಷ್ಟ ಪಡುತ್ತಾರೆ. ಹಾಗಾಗಿ ಯಾವ ಯಾವುದೇ ನೆಪ ಮಾಡಿ ಕನಿಷ್ಟ ವಾರಕ್ಕೊಂದಾದರೂ ಸರದಿಯ ಪ್ರಕಾರದ ಪಾರ್ಟಿ ನಡೆಯದಿದ್ದರೆ ಹೇಗೇ?
ನಮ್ಮ ಪಾರ್ಟಿ ಎಂದರೆ ಹೇಗೆ? ಅಂತೀರಿ ಊಟಕ್ಕೆ ಮೊದಲು ಒಂದು ಪೆಗ್, ನಂತರ ಊಟದೊಂದಿಗೆ ಇನ್ನೊಂದು ಪೆಗ್ ನಡುವೆ ಹಿತಮಿತವಾದ ಮಾತು, ತಮಾಷೆ! ಸ್ವಲ್ಪ ಹೆಚ್ಚಾದರೆ ಏನೂ ತೊಂದರೆಯಿಲ್ಲ. ಒಳ್ಳೆಯ ಲಹರಿಯಲ್ಲಿ ಸಮಯಕ್ಕೆ ಸರಿಯಾಗಿ ಮನೆ ಸೇರಿಕೊಳ್ಳುವುದರಿಂದ ಮನೆ ಮಕ್ಕಳಿಗೂ ನೆಮ್ಮದಿ.
ನಾನು ಎಕ್ಸ್ಲೇಟರ್ ಒತ್ತುವುದೇ ಅಷ್ಟೇ ಅಥವಾ ಅದು ಓಡುವುದೇ ಅಷ್ಟೋ ಒಟ್ಟಿನಲ್ಲಿ ನನ್ನ ಬಜಾಜ್ ಸೂಪರ್ ಸಿಟಿಯೊಳಗೆ ಮೂವತ್ತರ ಮೇಲೆ ಹೋದದ್ದೇ ಕಾಣೆ. ಊಟವಾದ ಮೇಲೆ ಹಿಂತಿರುಗುವಾಗಲೂ ಅಷ್ಟೇ. ಯಾವುದೇ ಲಹರಿಯಲ್ಲಿದ್ದರೂ ಸ್ಪೀಡು ಮಾತ್ರ ಅದೇ!
ನನ್ನ ಸ್ಕೂಟರ್ ಬಾರ್ ಬಾಗಿಲಿಗೆ ತಲಪುವ ವೇಳೆಗಾಗಲೇ ಎಲ್ಲರೂ ಒಳ ಹೋಗಿ ಆಗಿತ್ತು. ನನಗಾಗಿ ಬಾಗಿಲಲ್ಲೆ ಕಾಯುತ್ತಾ ನಿಂತಿದ್ದ ಚಂದ್ರಶೇಖರ ಸ್ವಾಗತ ನಗೆ ಬೀರಿ ಬನ್ನಿ ಸಾರ್ ಟೇಬಲ್ ಅರೇಂಜ್ ಮಾಡಿದೀವಿ ಎನ್ನುತ್ತಾ ಒಳನಡೆದ.
ಅವನನ್ನು ಹಿಂಬಾಲಿಸಿ ನಾನು ಒಳ ನಡೆಯುವಾಗ ಬಲಭಾಗದ ಟೇಬಲ್ ನಿಂದ ಸಾರ್ ಎಂಬ ದನಿ ಕೇಳಿ ತಿರುಗಿ ನೋಡಿದೆ.
ಕರೆಯುತ್ತಿದ್ದವನು ಬೊಮ್ಮಯ್ಯ
ಆತ ರೆವಿನ್ಯೂ ಇನ್ಸ್ಪೆಕ್ಟರ್. ನಮ್ಮ ಮನೆಯ ಪಕ್ಕದ ಕ್ರಾಸಿನಲ್ಲೆ ವಾಸ ಆತನದು. ಒಳ್ಳೆಯ ಕೆಲಸಗಾರ ಎಂದು ಕೇಳಿದ್ದೆ. ಜನ ಅವನ್ನನ್ನು ಹುಡಕಿಕೊಂಡು ಮನೆಯ ಬಳಿಯೇ ಬರುತ್ತಿದ್ದರು.
ನನಗೂ ಆಗಾಗ ಎದುರಾದಾಗ ಗೌರವದಿಂದ ನಮಸ್ಕರಿಸಿ ಮಾತನಾಡುತ್ತಿದ್ದ.
ಅವನ ಟೇಬಲ್ನಲ್ಲಿ ನಾಲ್ಕೈದು ಜನ ಕುಳಿತು ಆಗಲೇ ಪಾನ ಪೂಜೆಗೆ ತೊಡಗಿದ್ದರು. ಅವರಲ್ಲಿ ಕೆಲವರು ಸಣ್ಣ ಮಟ್ಟದ ಪುಡಾರಿಗಳು. ಯಾವುದೋ ಪಕ್ಕದ ಮಂಡಲ ಪಂಚಾಯ್ತಿ ಸದಸ್ಯರುಗಳಿರ ಬಹುದು ಎಂದು ಕೊಂಡೆ.
ಒಂದು ಪುಲ್ ಬಾಟಲ್ ಸಿಗ್ನೇಚರ್ ಓಪನ್ ಆಗಿ ಮೊದಲ ರೌಂಡ್ನಲ್ಲಿದ್ದರು.
‘ನಮಸ್ಕಾರ ಸಾರ್ …. ಇಲ್ಲೇ ಬನ್ನಿ’ ಎಂದ ಆಗಲೇ ಗೌರವದಿಂದ ಎದ್ದು ನಿಂತಿದ್ದ ಬೊಮ್ಮಯ್ಯ, ಸಾರ್ ಇವ್ರು ನಮ್ಮ ಮನೆ ಪಕ್ಕದವರು. ಒಳ್ಳೆ ಕತೆ, ಕಾದಂಬರಿ ಬರೆಯುತ್ತಾರೆ ಎನ್ನುತ್ತಾ ನನ್ನ ಹೆಸರು ಹೇಳಿ ತನ್ನ ಪಾನಗೋಷ್ಟಿಯ ಸದಸ್ಯರಿಗೆ ಪರಿಚಯ ಮಾಡಿಸಿದ.
ಓ…. ಬಹಳ ಸಂತೋಷ ಸಾರ್. ಪೇಪರ್ ನಲ್ಲಿ ನಿಮ್ಮ ಬಗ್ಗೆ ತಿಳ್ಕಂಡಿದ್ವಿ ಸಾರ್ ಎನ್ನುತ್ತಾ ಎಲ್ಲರೂ ಎದ್ದು ಹೆಮ್ಮೆಯಿಂದ ಕೈ ಕುಲುಕಿದರು.
ನಮ್ ಜೊತೆಲೆ ಜಾಯಿನ್ ಆಗಿ ಸಾರ್ ಎಂದು ಬೊಮ್ಮಯ್ಯನೊಂದಿಗೆ ಅವರೂ ಒತ್ತಾಯದ ದನಿಗೂಡಿಸಿದರು.
ಇಲ್ಲಿ ಬಿಡಿ ಇವ್ರೆ ಇನ್ನೊದ್ಸಲ ಸೇರಣ. ಅಲ್ಲಿ ನಮ್ಮ ಗೆಳೆಯರು ಕಾಯ್ತಿದ್ದಾರೆ ಎನ್ನುತ್ತಾ ಮುಂದಿನ ಟೇಬಲ್ ನಲ್ಲಿ ನನಗಾಗಿ ಕಾಯುತ್ತಿದ್ದ ಗೆಳೆಯರ ಕಡೆ ಕೈತೋರಿಸಿದೆ.
ಸೌಜನ್ಯಕ್ಕೆಂಬಂತೆ ಬೊಮ್ಮಯ್ಯನ ಪ್ಲೇಟಿನಿಂದ ಒಂದು ಕೋಳಿ ಮಾಂಸದ ತುಂಡನ್ನು ತೆಗೆದು ಬಾಯಿಗೆ ಹಾಕಿಕೊಂಡು ನಮ್ಮ ಟೇಬಲ್ ಕಡೆ ಹೆಜ್ಜೆ ಹಾಕಿದೆ.
ಸ್ಕೂಟರ್ ಇದೆಯಲ್ಲಾ ಸಾರ್. ಹೋಗುವಾಗ ಒಟ್ಟಿಗೆ ಹೋಗೋಣ ಎಂದ ಬೊಮ್ಮಯ್ಯ.
ನನಗೂ ಖುಷಿಯಾಯಿತು. ಹೇಗೂ ಸಿಕ್ಕಿದ್ದಾನೆ. ನಿಧಾನಕ್ಕೆ ಹೋಗುತ್ತಾ ನಿವೇಶನ ಸಮಸ್ಯೆ ಕುರಿತು ನನ್ನ ಮುಂದಿನ ಕಥೆಗೆ ಕೆಲವು ವಿವರ ಸಂಗ್ರಹಿಸಬೇಕು ಎಂದು ಕೊಳ್ಳುತ್ತಾ ಕಾತುರದಲ್ಲಿದ್ದ ಗೋಷ್ಠಿಸದಸ್ಯರನ್ನು ಸೇರಿಕೊಂಡೆ.
ಎಲ್ಲರೂ ಒಳ್ಳೆಯ ಮೂಡ್ನಲ್ಲೆ ಇದ್ದರು. ತಮ್ಮ ಕಛೇರಿಯ ಮೇಲ್ವಿಚಾರಕರಿಗೆ ಸಮಾಜದಲ್ಲಿ ಒಳ್ಳೆಯ ಗೌರವಿದೆ ಎಂಬ ಹೆಮ್ಮೆಯ ಭಾವದಿಂದ ಬರ ಮಾಡಿಕೊಂಡು ಪ್ರಮುಖ ಸ್ಥಳದಲ್ಲಿ ನನಗಾಗಿ ಕಾಯ್ದಿರಿಸಿದ್ದ ಸ್ಥಳದಲ್ಲಿ ಕುಳ್ಳಿರಿಸಿದರು.
ಆಗಲೇ ಪಾರ್ಟಿಯ ಸಿದ್ಧತೆಯೆಲ್ಲ ಆಗಿತ್ತು. ತಡವಿಲ್ಲದೆ ಆರಂಭವಾಯಿತು.
ಅದು ಪಾರ್ಟಿ ಅನ್ನುವುದಕ್ಕಿಂತ ಒಂದು ಗೋಷ್ಟಿ. ಸಿಕ್ಕಿದ ಒಂದು ಗಂಟೆಯಲ್ಲಿ ತಮಾಷೆ, ಜೋಕುಗಳು,ಸಣ್ಣ ಸಣ್ಣ ಪ್ರಸಂಗಗಳು ಎಲ್ಲವೂ ವಿನಿಮಯವಾದವು. ಎಲ್ಲರಿಗೂ ಅವರ ಪ್ರತಿಭೆ ಪ್ರಸ್ತುತ ಪಡಿಸಲು ಸಮಾನ ಅವಕಾಶ. ನನ್ನದು ಬರೀ ಅಧ್ಯಕ್ಷತೆ!
ಗೋಷ್ಠಿ ಮುಗಿಯಿತು . ಬೀಡಾ, ಬಾಳೆಹಣ್ಣು, ಸಿಗರೇಟು ಬಂದವು.
ಬೊಮ್ಮಯ್ಯ ನನೆಪಾಯಿತು. ಅವನ ಟೇಬಲ್ ಕಡೆ ನೋಡಿದೆ. ಅವರ ಪಾರ್ಟಿಯೂ ಕೊನೆಯ ಹಂತಕ್ಕೆ ಬಂದಿತ್ತು. ಬಿಲ್ ಹಿಡಿದುಕೊಂಡು ಆಡಿಟ್ ಮಾಡುತ್ತಿದ್ದರು. ವೆಯಿಟರ್ ಕಾಯುತ್ತಿದ್ದ.
ಅವರ ಟೇಬಲ್ ಬಳಿ ಬಂದೆ. ಅವರೆಲ್ಲಾ ಬಹಳ ಭಕ್ತಿಯಿಂದೆಂದುಬಂದೆ, ಮನಸ್ಪೂರ್ವಕವಾಗಿ ಪಾನ ಪೂಜೆ ನಡೆಸಿದ್ದುದು ಅವರ ಹಾವ ಭಾವದಿಂದ ತಿಳಿಯುವಂತಿತ್ತು.
ಆ ಟೇಬಲ್ಲಿನ ಗೋಷ್ಠಿಯ ಸದಸ್ಯರೆಲ್ಲಾ ಅವರವರಲ್ಲೊ ಚರ್ಚೆಯಲ್ಲಿ ತೊಡಗಿದ್ದರು. ಆರಂಭದಲ್ಲಿ ಅಷ್ಟೊಂದು ಗೌರವ ತೋರಿದ್ದ ಅವರು ಈಗ ನನ್ನೆಡೆಗೆ ಪರಿಷಚಯದ ನೋಟವನ್ನು ಬೀರಲಿಲ್ಲ.
ಹೊರಗೆ ಕಾಯ್ತಿನಿ ಬನ್ನಿ ಎನ್ನುತ್ತಾ ಬೊಮ್ಮಯ್ಯನಿಗೆ ಹೇಳಿ ಸ್ಕೂಟರ್ ಬಳಿ ಬಂದೆ. ನನ್ನ ಗೋಷ್ಟಿ ಗೆಳೆಯರೆಲ್ಲಾ ಅವರವರ ಮನೆಯ ಹಾದಿ ಹಿಡಿದರು.
ಬೊಮ್ಮಯ್ಯ ಸಾಕಷ್ಟು ಅಮಲಿನಲ್ಲಿದ್ದಾನೆ. ನಿಧಾನಕ್ಕೆ ಕರೆದು ಕೊಂಡು ಹೋಗಬೇಕು. ದಾರಿಯಲ್ಲಿ ಕೆಆರ್ ಪುರಂ ಸರ್ಕಲ್ ಬಳಿ ನಿಲ್ಲಿಸಿ ಸಿಗರೇಟು ಸೇದುತ್ತಾ ಅವನಿಂದ ನನ್ನ ಕತೆಗೆ ಬೇಕಾದ ವಿವರ ಪಡೆದುಕೊಂಡರಾಯಿತು. ನನ್ನ ಬಗ್ಗೆ ಆತನಿಗೆ ಬಹಳ ಗೌರವವಿದೆ. ಖುಷಿಯಾಗಿ ಸಹಕರಿಸುತ್ತಾನೆ ಎಂದು ಕೊಳ್ಳುತ್ತಾ ಸ್ಕೂಟರ್ ದೂಳು ಒರೆಸತೊಡಗಿದೆ.
ಬೊಮ್ಮಯ್ಯ ಅವನ ಪಾಲಗೋಷ್ಟಿ ಸದಸ್ಯರಿಗೆ ಟಾಟಾ ಹೇಳಿ ನನ್ನೆಡೆಗೆ ಬರತೊಡಗಿದೆ.
ನಾನು ನನ್ನ ಬಜಾಜ್ ಏರಿ ಸ್ಟಾರ್ಟ್ ಮಾಡಿದೆ. ಬೊಮ್ಮಯ್ಯ ಹಿಂದಿನ ಸೀಟಿಗೆ ಏರಿ ಸಾವಕಾಶ ಕುಳಿತುಕೊಂಡ.
‘ಹೋಗೋಣವಾ’ ಅಂದೆ.ಅದು ಸೌಜನ್ಯಕ್ಕಾಗಿ.
‘ಹುಂ,ಹೌಸಿಂಗ್ ಬೋರ್ಡಗೆ ಹೊಡಿಯಯ್ಯ”ಎಂದು ಅಬ್ಬರಿಸುವಂತೆ ಹೇಳಿದ.
ತಿರುಗಿ ನೋಡಿದೆ.ಎದೆಯ ಮೇಲೆ ಕೈ ಕಟ್ಟಿಕೊಂಡು ಹಿಂದಿನ ಸ್ಣೆಪ್ನಿಗೆ ಒರಗಿ ಕಣ್ಮುಚ್ಚಿ ಕುಳಿತಿದ್ದಾನೆ.ಯಾರದೋ ಆಟೋದಲ್ಲಿ ಕುಳಿತ ಭಾವದಲ್ಲಿದ್ದಾನೆ.ಅವನ ಬಗ್ಗೆ ಗೌರವದ ಭಾವ ತುಂಬಿಕೊಂಡಿದ್ದ.ನನಗೆ ನನ್ನ ಉತ್ಸಾಹದ ಬೆಲೂನಿನ ಮುಳ್ಳು ತಾಗಿದಂತಾಗಿತ್ತು.
ಸ್ಕೂಟರನ್ನು ನಿದಾನಕ್ಕೆ ರಸ್ತೆಗಿಳಿಸಿದೆ.ಬಜಾಜ್ನ ಮೈಲಾ ಮೀಟರು ಇಪ್ಪತ್ತರ ಮೇಲೆ ಏರಲೇ ಇಲ್ಲ.
 
(ಇನ್ನೂ ಇದೆ…)
 

‍ಲೇಖಕರು avadhi

7 May, 2013

1 Comment

  1. bharathi

    :)))))))))))))))

Trackbacks/Pingbacks

  1. ಕಾಡುಹಕ್ಕಿಯ ಹಾದಿ ನೋಟ : ಡ್ರಾಪ್ ಕೊಟ್ರೆ ಕಷ್ಟ ಸಾರ್! « ಅವಧಿ / avadhi - [...] ಕಾಡುಹಕ್ಕಿಯ ಹಾದಿ ನೋಟ : ಡ್ರಾಪ್ ಕೊಟ್ರೆ ಕಷ್ಟ ಸಾರ್! May 8, 2013 by Avadhikannada (ಇಲ್ಲಿಯವರೆಗೆ..) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading