(ಜೀವನ ಸುಗಮ ದಾರಿಯಲ್ಲ. ಕಠಿಣ ಪರಿಶ್ರಮದ ಸಾಧನೆಯ ಶಿಖರ)
ವೀರಣ್ಣ ಮಂಠಾಳಕರ್
ಮನಸ್ಸು ಬೇಜಾರಾದಗಲೆಲ್ಲ ಅನ್ಸೋದು.? ಈ ದೇಹದಲ್ಲಿ ಉಸಿರು ಇರೋತನಕ ಬದುಕಬೇಕಾ.! ಅಥವಾ ಸತ್ತು ಬದುಕಬೇಕಾ!! ಅಂತ. ಪದೇ ಪದೇ ಕಾಡುವ ನೆನಪು ಎಂದರೆ ಇದೊಂದೆ ಆಗಿತ್ತು. ಆದರೆ ಜೀವನ ಭಾರ ಆದಂತೆಲ್ಲ ಬದುಕುವ ಉತ್ಸಾಹ. ಸಾಧನೆಯ ಮಾರ್ಗವನ್ನು ಹುಡುಕುತ್ತಾ ಹೊರಟಿದ್ದು ಗೊತ್ತೇ ಆಗಲಿಲ್ಲ. ಈ ಬದುಕಿನ ನಡುವೆ ಬಂದು ಹೋಗುವ ಸಾವಿನ ನೆರಳಲ್ಲಿ ಬದುಕಿನ ಕಿರಣಗಳು ಪ್ರಜ್ವಲಿಸುತಿದ್ದವು. ಇದರಿಂದಾಗಿ ಸಾವಿಗೆ ಶರಣಾಗುವುದಕ್ಕಿಂತ ಬದುಕಿನ ಹೋರಾಟಕ್ಕೆ ಸಜ್ಜಾಗಬೇಕು ಎಂದು ಅನಿಸಿದ್ದೇ ತಡ, ಸತ್ತು ಬರೀ ಮಣ್ಣಾಗಿ ಇರುವುದಕ್ಕೆ ಮನಸ್ಸಾಕ್ಷಿ ಒಪ್ಪಲಿಲ್ಲ. ಬದುಕಿದ್ದು ಸಾಧಿಸುವ ಮೂಲಕ ಸತ್ತು ಹೋದ ಬಳಿಕವೂ ಮತ್ತೆ ನಾನು ಬದುಕಬೇಕು ಎಂಬ ದೃಢ ನಿರ್ಧಾರಕ್ಕೆ ಮನಸ್ಸಿಳಿಯಿತು.
ಜೀವನ ಎಂದರೆ ಸುಗಮ ದಾರಿಯಲ್ಲ. ಅದು ಕಠಿಣ ಪರಿಶ್ರಮದಿಂದ ಕೂಡಿದ ಸಾಧನೆಯ ಶಿಖರ. ಯಶಸ್ಸಿನ ಮೆಟ್ಟಿಲನ್ನು ಹತ್ತಲು ಎಲ್ಲರಿಂದಲೂ ಅದು ಸಾಧ್ಯವಾಗುವುದಿಲ್ಲ. ಹಾಗಂತ ನಮಗಾಗಿ ಯಾರೂ ಇಲ್ಲ. ಗುರುತಿಸಿ ಪ್ರೋತ್ಸಾಹಿಸುವವರೂ ಇಲ್ಲ ಎಂದು ಚಿಂತಿಸುತ್ತ, ಕೈಚೆಲ್ಲಿ ಕುಳಿತರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ. ಬೆಂಬಲಕ್ಕೆ ಯಾರೂ ಇಲ್ಲವೆಂದು ಕೊರಗುವುದಕ್ಕಿಂತ ಸ್ವ-ಪ್ರಯತ್ನವೇ ಪ್ರತಿಕ್ಷಣದ ನೆಮ್ಮದಿಯನ್ನು ತಂದು ಕೊಡುತ್ತದೆ. ಪ್ರಯತ್ನಕ್ಕೆ ಯಾವುದಾದರೊಂದು ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂಬ ನಂಬಿಕೆ ನನ್ನದು.
ಈ ಭೂಮಿಯ ಮೇಲೆ ಆ ಸೃಷ್ಠಿಕರ್ತನ ನಿಯಮದಂತೆ ಹುಟ್ಟಿ ಬಂದಿರುವ ಪ್ರತಿಯೊಂದು ಜೀವಿ, ಪ್ರಾಣಿ, ಪಕ್ಷಿಗಳಿಗೆ ಬದುಕುವ ಹಕ್ಕು ಇದೆ. ಮನುಷ್ಯರನ್ನಾಗಿ ಹುಟ್ಟಿರುವ ನಮಗೆ ನಾವೇ ಬಾಳನ್ನು ಹಾಳು ಮಾಡಿಕೊಳ್ಳುವುದು ನ್ಯಾಯ ಸಮ್ಮತವಲ್ಲ ಅನಿಸುತ್ತದೆ. ಅನಾಯಾಸವಾಗಿ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುವುದಕ್ಕಿಂತ ತೀರಾ ಕ್ಲಿಷ್ಟಕರವಾದ ಬದುಕನ್ನಾದರೂ ಸರಿ. ಅದನ್ನು ಒಂದು ಸುಸೂತ್ರವಾದ ಮಾರ್ಗಕ್ಕೆ ಕೊಂಡೊಯ್ಯುವ ಸಾಮಥ್ರ್ಯ ಎಲ್ಲರಿಗಿದೆ. ಆ ದೇವರು ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಎಂಬ ವರವೊಂದು ಕರುಣಿಸಿರುತ್ತಾನೆ. ಸ್ವಪ್ರಯತ್ನವೇ ಸ್ವತಂತ್ರ ಜೀವನಕ್ಕೆ ನಾಂದಿಯಾಗುತ್ತದೆ ಎಂಬುದನ್ನು ಮರೆಯಬಾರದು.

ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲವೋ ಹಾಗೆ, ಪ್ರತಿಯೊಂದು ಜೀವಿಗಳಲ್ಲಿ, ಪ್ರಾಣಿ, ಪಕ್ಷಿ, ಮನುಷ್ಯರಲ್ಲಿ ಅವರವರ ಸಾಮಥ್ರ್ಯ, ಭಾವಕ್ಕನುಗುಣವಾಗಿ ಪ್ರತಿಭೆ ಮರೀಚಿಕೆಯಾಗಿ ಕುಳಿತಿರುತ್ತದೆ. ಅದನ್ನು ನಾವು ಹುಡುಕುವ ಪ್ರಯತ್ನ ಮಾಡಬೇಕಷ್ಟೆ. ಆತ್ಮವಿಶ್ವಾಸ, ಛಲ, ಗುರಿಯೊಂದಿದ್ದರೆ ಯಾವುದೇ ಅಡೆತಡೆಗಳು ಎದುರಾಗಲಿ, ಕಲ್ಲು ಮುಳ್ಳಿನ ದಾರಿಯಿಂದ ಸಾಗಿ ಜೀವನವೆಂಬುದು ಹೂವಿನ ಹಾಸಿಗೆಯಾಗಿ ಮಾಡಿಕೊಳ್ಳಬಹುದು. ಆತ್ಮವಿಶ್ವಾಸ ಮನುಷ್ಯನ ಜಟಿಲವಾದ ಸಮಸ್ಯೆಗಳನ್ನು ಒಡೆದು ಚೂರಾಗಿಸುತ್ತದೆ. ಸಾಧನೆಯ ಮಾರ್ಗದಲ್ಲಿ ಮುನ್ನುಗಲು ಛಲ ಮತ್ತು ಗುರಿಯೆಂಬುದು ಅಸ್ತ್ರಗಳಾಗಿರುತ್ತವೆ.
ಸ್ವಾರ್ಥವನ್ನೇ ತುಂಬಿರುವ ಸಮಾಜದಲ್ಲಿ ಪ್ರತಿಭಾವಂತರು, ಪ್ರಾಮಾಣಿಕರು, ನಿಷ್ಕಳಂಕದ ಮನಸ್ಸುಳ್ಳವರು ಬದುಕು ನಡೆಸುವುದು ಕಷ್ಟದ ಕಾಲ ಇದಾಗಿರಬಹುದು ನಿಜ. ಆದರೆ ಬೀದಿ ಬದಿಯಲ್ಲಿ ಎರಡೂ ಕಾಲಿಲ್ಲದವನೊಬ್ಬ ಕುಳಿತು ಭಿಕ್ಷೆ ಬೇಡಿ, ತನ್ನ ಹೆಂಡತಿ, ಎರಡು ಪುಟ್ಟ ಮಕ್ಕಳೊಂದಿಗೆ ಜೀವನ ನಡೆಸುವುತ್ತಿರುವುದನ್ನು ನೋಡಿದರೆ ಮನಸ್ಸು ಚುರುಗುಟ್ಟುತ್ತದೆ. ಭಿಕ್ಷುಕನೊಬ್ಬ ಅಸಹಾಯಕನಾಗಿದ್ದರೂ ಬದುಕಿನ ಭರವಸೆಯನ್ನೇ ಕಳೆದುಕೊಂಡವರಿಗೆ ಮಾದರಿಯಾಗಿ ನಿಲ್ಲುತ್ತಾನೆ. ಹಾಗಾದರೆ ಶಾರೀರಿಕವಾಗಿ, ಮಾನಸಿಕವಾಗಿ ಎಲ್ಲದರಲ್ಲೂ ಸದೃಢರಾಗಿರುವ ನಾವು/ನೀವೆಲ್ಲ ಸಾವಿಗೆ ಶರಣಾಗುತ್ತಿರುವುದು ವಿಷಾದದ ಸಂಗತಿ ಕೂಡ.
ಗಂಡನಿಲ್ಲದ ವಿಧವೆಯೊಬ್ಬಳು ಮೂರು ಮಕ್ಕಳೊಂದಿಗೆ ಬದುಕನ್ನು ನಡೆಸುವುದು, ಹುಟ್ಟಿನಿಂದಲೇ ಅಂಗವೈಕಲ್ಯತೆಯಿಂದ ಬಳಲುತ್ತಿರುವವನು ಫಸ್ಟ್ ರ್ಯಾಂಕ್ನಲ್ಲಿ ಪಾಸಾಗುವುದು. ಇಂತಹ ಅನೇಕ ಅಸಹಾಯಕರ ಉದಾಹರಣೆ ದಿನನಿತ್ಯ ನಾವು ನೋಡುತಿರುತ್ತೇವೆ. ಇವರನ್ನಾದರೂ ನೋಡಿ ಬದುಕುವ ಕಲೆ ರೂಢಿಸಿಕೊಳ್ಳಬೇಕಾಗಿದೆ. ಶ್ರೀಮಂತಿಕೆ, ಐಷಾರಾಮದ ವ್ಯಕ್ತಿಗಳನ್ನು ನೋಡಿ ಜೀವನ ಅನುಕರಿಸುವುದು ತರವಲ್ಲ. ನಮಗೆ ಇಷ್ಟವಾದಂತೆ ಉತ್ತಮವಾದ ಚಾರಿತ್ರ್ಯ ಹೊಂದಿರಬೇಕು. ಬೆಳಕಿನ ಪ್ರತಿಬಿಂಬವಾಗಿ ಸಮಾಜಕ್ಕೆ ಕೊಡುಗೆಯಾಗಬೇಕು. ಆ ನಿಟ್ಟಿನಲ್ಲಿ ಸಾಹಸ ಪ್ರವೃತ್ತಿ ಬೆಳೆಸಿಕೊಂಡರೆ ಉತ್ತಮ ಎನಿಸುತ್ತದೆ.
ಅತ್ಯಂತ ಕಠಿಣ ಪರಿಶ್ರಮದಿಂದ, ಬಡತನದ ಹಿನ್ನೆಲೆಯಿಂದ ಬಂದಿರುವಂಥ ವ್ಯಕ್ತಿಗಳು ಸಾಗಿ ಬಂದ ದಾರಿ, ಅವರು ತಲುಪಿದ ಗುರಿ, ಉನ್ನತ ಮಟ್ಟಕ್ಕೆ ಹೋಗಿ, ತಾವು ನಡೆದುಕೊಂಡು ಬಂದಿರುವ ದಾರಿಯನ್ನು ಒಮ್ಮೆ ಹಿಂತಿರುಗಿ ನೋಡುವವರ ಮಾರ್ಗ ನಾವಿಂದು ಅನುಸರಿಸಬೇಕಾಗಿದೆ. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದದ್ದು ಎಂಬ ಉಲ್ಲೇಖವಿದೆ. ಜೀವನದ ಮಾರ್ಗ ಮಧ್ಯದಲ್ಲಿಯೇ ಮುಕ್ತಿಗೊಂಡು ಸಾಯಲು ಹೊರಟವನಿಗೆ ಸಾಧಕರ ಜೀವನವನ್ನು ನೋಡಿ, ಓದಿ ತಿಳಿದುಕೊಂಡರೆ ಇನ್ನೂ ಬದುಕು ಸಾರ್ಥಕಗೊಳ್ಳುತ್ತದೆ. ಇಂತಹ ಒಂದು ಚಿಂತನೆಯಲ್ಲಿ ಬಾಳಿದರೆ ಸಾಯಬೇಕೆನಿಸಿದವನಿಗೂ ಇನ್ನೂ ಬದುಕಬೇಕು ಎಂದೆನಿಸಿದರೆ ಅಚ್ಚರಿಯಲ್ಲ.!
ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ದಿಕ್ಕೆಟ್ಟು ಹೋಗಿದೆ ಎಂಬುದು ಹಿರಿಯರ ಗೊಣಗಾಟ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಸ್ವತ: ಯುವ ಪೀಳಿಗೆ ಸಮಾಜದ ಏಳ್ಗೆಗಾಗಿ ಪ್ರಯತ್ನಿಸುವ ಮೂಲಕ ಮನಸ್ಸು ಮಾಡಬೇಕು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್, ಇಂಟರ್ನೆಟ್, ಫೇಸ್ಬುಕ್ಗಳಂಥ ಅಂತರ್ಜಾಲ ತಾಣಗಳಿಗೆ ಹಗಲು ರಾತ್ರಿಯೆನ್ನದೇ ಯುವಕ/ಯುವತಿಯರು ಅಂಟಿಕೊಂಡುರುವುದು ದುರಾದೃಷ್ಟಕರ. ಒಂದೆಡೆ ಈ ವರ್ಗದಲ್ಲಿ ಆರೋಗ್ಯಕರ ಸಮಾಜಕ್ಕಾಗಿ ದುಡಿಯುವವರಿದ್ದಾರೆ. ಸದ್ಭಳಕೆಗಿಂತ ಇಂಟರ್ನೆಟ್ ಲೋಕ ದುರ್ಬಳಕೆ ಮಾಡಿಕೊಳ್ಳುತ್ತಿರುವರ ಪಾಲಿಗೆ ನೂರಾರು ಅನಾಹುತ, ಅಘಾತ, ಮೋಸ, ವಂಚನೆಗಳನ್ನು ಅವರವರ ಜೀವನದಲ್ಲಿ ಘಟಿಸುತ್ತಿವೆ. ಸಮಯ ಪ್ರಜ್ಞೆ, ಬದುಕಿನ ಮೌಲ್ಯವನ್ನು ಗೊತ್ತಿಲ್ಲದೇ ಆತ್ಮ ಹತ್ಯೆಯಂಥ ಹೇಡಿತನಕ್ಕೆ ಬರಮಾಡಿಕೊಳ್ಳುವುದು ಸರಿಯಲ್ಲ. ಬದುಕಿದ್ದು ಸಾಧಿಸುವ ಛಲವೊಂದಿದ್ದರೆ ಸತ್ತು ಮತ್ತೆ ಬದುಕಲು ಸಾಧ್ಯವಿದೆ.
ಅರ್ಥವಿಲ್ಲದ ಪ್ರೀತಿಗಾಗಿ, ಅವಳು ಅವನಿಗೆ ಸಿಗಲಿಲ್ಲ/ಪ್ರೀತಿಸಲಿಲ್ಲ ಎಂದು, ಅವನು ಅವಳಿಗೆ ಮೋಸ ಮಾಡಿದನೆಂದು/ ಬೇರೆಯವಳನ್ನು ಮದುವೆಯಾದಳೆಂದೋ, ಪರೀಕ್ಷೆಯಲ್ಲಿ ಫೇಲಾದೆ ಎಂಬ ಕಾರಣಕ್ಕೋ, ಹೆಚ್ಚು ಮಾಕ್ರ್ಸ ಪಡೆಯಲಿಲ್ಲ ಎಂಬ ಬೇಸರಕ್ಕೆ, ತಂದೆ/ತಾಯಿ ಹೊಡೆದರೆಂಬ ಒಂದೇ ಒಂದು ಚಿಕ್ಕ ವಿಷಯಕ್ಕೆ, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸಾವೊಂದೇ ಸಮಸ್ಯೆಗೆ ಪರಿಹಾರವಲ್ಲ. ಬದುಕಿದ್ದು ಸಾಧಿಸುವ ಛಲವೊಂದಿದ್ದರೆ ಸಾಕು. ಈ ಹಿನ್ನೆಲೆಯಲ್ಲಿ ಯುವ ಜನತೆ ಚಿಂತಿಸಬೇಕಾಗಿದೆ. ತಮಗೆ ತಾವೇ ಆತ್ಮ ವಂಚನೆಗೊಳಗಾಗದೇ, ಒಳ್ಳೆಯ ಚಿಂತನೆಗಳೊಂದಿಗೆ ಬದುಕನ್ನು ಗೆಲ್ಲಬೇಕಾಗಿದೆ.






Super artical sir