ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 2

ಮೂಲ : ನಿಕೊಲಾಯ್ ಗೊಗೊಲ್
ಅನು : ಜಿ. ವಿ. ಕಾರ್ಲೊ

ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್ ದಸ್ತವೆಸ್ಕಿ ಪ್ರಮುಖ. ನಾವೆಲ್ಲಾ ಗೊಗೊಲಾನ The Overcoat ನಿಂದ ಹೊರ ಬಂದವರೆಂದು ಅವನು ಗೊಗೊಲನನ್ನು ಸ್ಮರಿಸುತ್ತಾನೆ.

ಗೊಗೊಲ್, ಅವನ ಸಮಕಾಲಿನ ರಶ್ಯನ್ ಸಮಾಜವನ್ನು ಲೇವಡಿ ಮಾಡುವ ನಾಟಕ The Inspector General, ಮಾನವ ಸರಕುಗಳಲ್ಲೊಂದಾದ ಗುಲಾಮರ ಲೇವಾದೇವಿಯ The Dead Souls ಕಾದಂಬರಿ ಮತ್ತು ಪ್ರಭುತ್ವವನ್ನು ಅಣಕಿಸುವ, ಬಡ ಗುಮಾಸ್ತನ ಕತೆ The Overcoat ಮತ್ತು ಪ್ರಸ್ತುತ ಅಧಿಕಾರಿಶಾಹಿಯ ಒಣ ಪ್ರತಿಷ್ಠೆ ಮತ್ತು ಮಹತ್ವಾಕಾಂಕ್ಷೆಯ The Nose ಓದುವಾಗ, ‘ಮೂಗು’ ಇಲ್ಲದಿರುವುದು ಎಷ್ಟೊಂದು ಅನಾಹುತಾಕಾರಿಯಾಗಬಲ್ಲದೆಂದು ನನಗೆ ‘ರಾಮಾಯಣ’ದ ‘ಶೂರ್ಪನಖಿ’ಯ ಪಾತ್ರ ಕಣ್ಣ ಮುಂದೆ ಬಂದಿತು.

2

ಸರ್ಕಾರಿ ಆಸ್ತಿ ಮೌಲ್ಯಮಾಪನ ಅಧಿಕಾರಿ ಕೊವಾಲ್ಯೊವ್ ಇವತ್ತು ಎಂದಿಗಿಂತ ಬೇಗನೇ ಎದ್ದು ತನ್ನ ನಿತ್ಯದ ಅಭ್ಯಾಸದಂತೆ ತುಟಿಗಳಿಂದ ‘ರ‍್ರ್’ ಎಂದು ಸದ್ದು ಮಾಡಿದ. ಅವನು ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಲೆಲ್ಲಾ ಈ ರೀತಿ ಶಬ್ದ ಹೊರಡಿಸುತ್ತಿದ್ದ. ಯಾಕಪ್ಪ ಹೀಗೆ ಅಂತ ನೀವೇನಾದರೂ ಅವನನ್ನು ಕೇಳಿದರೆ, ಅವನು ಪೆಚ್ಚುಪೆಚ್ಚಾಗಿ ನಗುತ್ತಿದ್ದ. ಕೊವಾಲ್ಯೊವ್ ಒಮ್ಮೆ ಮೈ ಮುರಿಯುತ್ತಾ, ತನ್ನ ಮೇಜಿನ ಮೇಲಿರುವ ಕೈಗನ್ನಡಿಯನ್ನು ತಂದು ಕೊಡಲು ಆಜ್ಞಾಪಿಸಿದ. ಹಿಂದಿನ ಸಂಜೆ ಅವನ ಮೂಗಿನ ಮೇಲೆ ಸಣ್ಣದೊಂದು ಮೊಡವೆ ಕಾಣಿಸಿಕೊಂಡಿತ್ತು. ಅದು ಏನಾಗಿದೆ ಎಂದು ನೋಡಲು ಅವನು ಕುತೂಹಲಗೊಂಡಿದ್ದ. ಕೊವಾಲ್ಯೊವ್ ಕನ್ನಡಿಯಲ್ಲಿ ನೋಡಿ ದಿಗ್ಭ್ರಮೆಗೊಂಡ. ಮೊಡವೆ ಒತ್ತಟ್ಟಿಗೆ ಇರಲಿ, ಮುಖದ ಮೇಲಿಂದ ಅವನ ಮೂಗೇ ಕಾಣೆಯಾಗಿ ಆ ಜಾಗ ಸಪಾಟಾಗಿತ್ತು! ಅವನು ಆತಂಕದಿಂದ ಕೆಲಸದವನಿಗೆ ಒಂದು ಲೋಟ ನೀರು ತಂದು ಕೊಡುವಂತೆ ಕೇಳಿ ಟವೆಲಿನಿಂದ ಕಣ್ಣನ್ನು ಚೆನ್ನಾಗಿ ಒರೆಸಿಕೊಂಡ. ಯಾವುದೇ ಅನುಮಾನವಿರಲಿಲ್ಲ. ಅವನ ಮೂಗು ನಿಜವಾಗಲೂ ಕಾಣೆಯಾಗಿತ್ತು. ಅವನು, ತಾನು ಇನ್ನೂ ನಿದ್ದೆಯಲ್ಲಿಲ್ಲವೆಂದು ಖಾತ್ರಿಪಡಿಸಿಕೊಳ್ಳಲು ಮೈಯನ್ನೊಮ್ಮೆ ಜಿಗುಟಿ ನೋಡಿದ. ಅವನು ಎಚ್ಚರವಾಗಿಯೇ ಇದ್ದ. ಅವನು ತನ್ನ ಉಡುಪನ್ನು ತರಲು ಹೇಳಿ ಅವಸವಸರದಿಂದ ಪೊಲೀಸ್ ಠಾಣೆಯ ಕಡೆಗೆ ದೌಡಾಯಿಸಿದ.

ಅಷ್ಟರೊಳಗೆ, ಈ ಕೊವಾಲ್ಯೊವ್‌ನ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿದರೆ ತಪ್ಪಾಗಲಾರದು. ಇವನು ಯಾವ ರೀತಿಯ ಮೌಲ್ಯಮಾಪಕನೆಂದು ವಾಚಕರಿಗೂ ಗೊತ್ತಾಗುತ್ತದೆ. ಈ ಮೌಲ್ಯಮಾಪಕರಲ್ಲೂ ಎರಡು ಬಗೆಗಳಿದ್ದವು. ಎರಡನ್ನೂ ಒಂದಕ್ಕೊಂದು ಹೋಲಿಸಲು ಸಾಧ್ಯವಿರಲಿಲ್ಲ. ಮೊದಲನೆಯವರು ವೃತ್ತಿಪರತೆಯಿಂದ ಮೌಲ್ಯಮಾಪಕರಾಗಿದ್ದರೆ, ಎರಡನೆಯವರು ವಶೀಲಿಬಾಜಿಯಿಂದ ಆ ಪದವಿಗೆ ಏರಿದವರಾಗಿದ್ದರು. ಕೊವಾಲ್ಯೊವ್ ಎರಡನೇ ಬಗೆಯ ಅಧಿಕಾರಿಯಾಗಿದ್ದ.

ಕೊವಾಲ್ಯೊವ್ ಮೌಲ್ಯಮಾಪಕನಾಗಿ ಬರೇ ಎರಡು ವರ್ಷಗಳು ಮಾತ್ರ ಸಂದಿದ್ದವು. ಈ ಬಗ್ಗೆ ಅವನಿಗೆ ಅರಿವಿತ್ತು. ಅವನು ಎಂದೂ ಬರೇ ಮೌಲ್ಯಮಾಪಕನೆಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ತನ್ನ ಪದವಿಗೆ ಹೆಚ್ಚು ತೂಕ ಮತ್ತು ಪ್ರಾಮುಖ್ಯತೆ ಭರಿಸಲು ಅವನು ತನ್ನ ಹೆಸರಿನ ಜತೆಗೆ ‘ಮೇಜರ್’ ಎಂಬ ವಿಶೇಷಣವನ್ನೂ ಸೇರಿಸಿಕೊಂಡಿದ್ದ. ಬೀದಿಯಲ್ಲಿ ಯಾರೋ ಶರಟುಗಳನ್ನು ಮಾರುವ ಹೆಣ್ಣುಮಗಳು ದುಂಬಾಲು ಬಿದ್ದರೆ, “ನೀನು ಮನೆಗೆ ಬಾರಮ್ಮ. ನನ್ನ ಫ್ಲ್ಯಾಟ್ ಸದೋವಯಾ ರಸ್ತೆಯಲ್ಲಿದೆ. ಅಲ್ಲಿಗೆ ಬಂದು ಯಾರನ್ನಾದರೂ ‘ಮೇಜರ್ ಕೊವಾಲ್ಯೊವ್’ರವರ ವಸತಿ ಎಲ್ಲಿ ಎಂದು ಕೇಳಿದರೆ ಸಾಕು, ತಕ್ಷಣ ತೋರಿಸುತ್ತಾರೆ. ಆ ಹೆಣ್ಣುಮಗಳು ಕೊಂಚ ಸುಂದರಿಯಾಗಿದ್ದರೆ, ಅವಳ ಕಿವಿಯಲ್ಲಿ ಗೌಪ್ಯವಾಗಿ ಏನನ್ನೋ ಉಸುರಿ, ‘ಮೇಜರ್ ಕೊವಾಲ್ಯೊವ್’ ಅಂತ ಹೇಳಮ್ಮ,” ಅನ್ನುತ್ತಿದ್ದ. ಆದ್ದರಿಂದ ಈ ಕತೆಯ ಉದ್ದಕ್ಕೂ ನಾವು ಕೊವಾಲ್ಯೊವ್‌ನನ್ನು ‘ಮೇಜರ್’ ಎಂದೇ ಕರೆಯುವುದೇ ಉಚಿತವೆನಿಸುತ್ತದೆ. ಮೇಜರ್ ಕೊವಾಲ್ಯೊವ್‌ನಿಗೆ ಪ್ರತಿದಿನ ಬೆಳಿಗ್ಗೆ ನೆವೆಸ್ಕಿ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗುವ ಅಭ್ಯಾಸವಿತ್ತು. ಅವನ ಶರಟಿನ ಕಾಲರ್‌ಗಳು ಯಾವಾಗಲೂ ಗಂಜಿ ಹಾಕಿ ಇಸ್ತ್ರಿಹಾಕಿದ್ದು ಎದ್ದು ಕಾಣುತ್ತಿದ್ದವು. ಅವನ ಗಡ್ಡ ಮೀಸೆಗಳು ಅಷ್ಟೇ. ಕಿಂಚಿತ್ತೂ ಏರುಪೇರಿಲ್ಲದೆ ಅವನಿಗಿಂತಲೂ ಉನ್ನತ ಸ್ಥಾನದಲ್ಲಿದ್ದರಿಗೆ ಸರಿ ಸಮಾನವಾಗಿರುತ್ತಿದ್ದವು.

ಮತ್ತೂ ಉನ್ನತ ಪದವಿಯನ್ನರಸುತ್ತಾ ಮೇಜರ್ ಕೊವಾಲ್ಯೊವ್ ಸೈಂಟ್ ಪೀಟರ್ಸ್​ಬರ್ಗ್‌ಗೆ ಬಂದಿದ್ದ. ಅದೃಷ್ಟವಿದ್ದಲ್ಲಿ ಉಪ-ರಾಜ್ಯಪಾಲನ ಹುದ್ದೆ, ಇಲ್ಲದಿದ್ದಲ್ಲಿ ಸರ್ಕಾರದ ಪ್ರಮುಖ ಖಾತೆಯಲ್ಲಿ ಗುಮಾಸ್ತನ ಹುದ್ದೆ. ಅವನಿಗಿನ್ನೂ ಮದುವೆಯಾಗಿರಲಿಲ್ಲ. ಹುಡುಗಿ ಎರಡುನೂರು ಸಾವಿರ ರೂಬಲುಗಳನ್ನು ತರುವಷ್ಟು ಶ್ರೀಮಂತನ ಮಗಳಾಗಿದ್ದರೆ ಅವನದು ತಕಾರುಗಳಿರಲಿಲ್ಲ. ಇಷ್ಟೊಂದು ಮಹತ್ವಾಕಾಂಕ್ಷೆ ಇದ್ದಿರುವ ಯುವಕನೋರ್ವನಿಗೆ, ಒಂದು ಸಾಧಾರಣ ಮೂಗೇ ಇಲ್ಲದಿದ್ದು, ಆ ಜಾಗ ಚಪ್ಪಟೆಯಾಗಿದ್ದರೆ ಅವನ ಸ್ಥಿತಿ ಏನಾಗಬೇಡ?

ಇದು ಸಾಲದೆಂಬಂತೆ ರಸ್ತೆಯಲ್ಲಿ ಒಂದೂ ಗಾಡಿ ಕಾಣಿಸುತ್ತಿರಲಿಲ್ಲ. ಅವನು ನಡೆದುಕೊಂಡೇ ಮನೆಗೆ ಹೊರಟ. ತನ್ನ ಕೋಟನ್ನು ಬಿಗಿಯಾಗಿ ಮೈಗೆ ಸುತ್ತಿ, ಮೂಗಿನ ಜಾಗಕ್ಕೆ, ರಕ್ತಸ್ರಾವವನ್ನು ತಡೆಯಲೆಂಬಂತೆ ಕರವಸ್ತ್ರವನ್ನು ಮುಚ್ಚಿಕೊಂಡು ನಡೆಯತೊಡಗಿದ. ಅವನಿಗೆ ಮೂಗು ಕಳೆದುಕೊಂಡಿರುವುದು ಖಂಡಿತವಾಗಿಯೂ ನಿಜವಿರಲಾರದು, ಒಂದು ಕೆಟ್ಟ ಕನಸಿರಬೇಕೆಂದು ಅನಿಸತೊಡಗಿತು. ಮೂಗು ಕಳೆದುಕೊಳ್ಳುವುದು ಹೇಗೆ ಸಾಧ್ಯ? ಈ ವಿಚಾರವನ್ನೇ ಮನದಲ್ಲಿ ಮಥಿಸುತ್ತಾ, ಮತ್ತೊಮ್ಮೆ ಪರೀಕ್ಷಿಸಲು ಒಂದು ಕಾಫಿ ಹೌಸಿಗೆ ನುಗ್ಗಿದ. ಅದೃಷ್ಟವಶಾತ್ ಆ ಹೊತ್ತಿನಲ್ಲಿ ಕಾಫಿ ಹೌಸಿನಲ್ಲಿ ಯಾರೂ ಗಿರಾಕಿಗಳಿರಲಿಲ್ಲ. ವೇಯ್ಟರ್‌ಗಳು ಮೇಜುಗಳನ್ನು ಜೋಡಿಸುತ್ತಾ, ಮತ್ತೆ ಕೆಲವರು ನೆಲಗುಡಿಸುವ ಕಾರ್ಯದಲ್ಲಿ ನಿರತರಾಗಿದ್ದರು.

“ಸದ್ಯ ಗಿರಾಕಿಗಳು ಯಾರೂ ಇಲ್ಲ. ನಿರಾತಂಕದಿಂದ ಕನ್ನಡಿ ಎದುರು ಪರೀಕ್ಷಿಸಕೊಳ್ಳಬಹುದು,” ಎಂದುಕೊಳ್ಳುತ್ತಾ ಹೋಗಿ ಕನ್ನಡಿ ಎದುರು ನಿಂತುಕೊಂಡ.

“ಹತ್ತೆರಿ… ಇದೇನಿದು?!” ನೆಲಕ್ಕೆ ಉಗಿಯುತ್ತಾ ಉದ್ಗರಿಸಿದ ಕೊವಾಲ್ಯೊವ್. ‘ಆ’ ಜಾಗದಲ್ಲಿ ಬೇರೆ ಏನೇ ಇದ್ದಿದ್ದರೂ ಅವನಿಗೆ ಅಷ್ಟು ಆಶ್ಚರ್ಯವಾಗುತ್ತಿರಲಿಲ್ಲ. ಅಷ್ಟೂ ಜಾಗ ಚಪ್ಪಟೆಯಾಗಿತ್ತು.

ಅವನು ಅನ್ಯಮನಸ್ಕನಾಗಿ ಕೆಳ ತುಟಿಯನ್ನು ಕಚ್ಚುತ್ತಾ ಕಾಫಿ ಹೌಸಿನಿಂದ ಹೊರಗೆ ನಡೆದ. ಅವನ ಸ್ವಭಾವಕ್ಕೆ ಹೊರತಾಗಿ ಯಾರಿಗೂ ಮುಗುಳ್ನಗಬಾರದೆಂದು ಬಿರಬಿರನೆ ನಡೆಯತೊಡಗಿದ. ಹಾಗೇ ಹೋಗುತ್ತಿದ್ದವನು ಯಾವುದೋ ಮನೆಯ ಮುಂಬಾಗಿಲ ಬಳಿ, ಒಂದು ಅಸಾಮಾನ್ಯ ದೃಶ್ಯವನ್ನು ಕಂಡು ಗಕ್ಕನೆ ನಿಂತುಕೊಂಡ. ಆ ಮುಂಬಾಗಿಲಿನ ಬಳಿ ಒಂದು ಗಾಡಿ ಬಂದು ನಿಂತಿತು. ಗಾಡಿಯ ಬಾಗಿಲು ರಪ್ಪನೆ ತೆರೆದು ಸಮವಸ್ತ್ರಧರಿಸಿದ್ದ ಬೆನ್ನುಹುರಿ ಬಾಗಿದ ವ್ಯಕ್ತಿಯೊಂದು ಮನೆಯ ಮೆಟ್ಟಿಲುಗಳನ್ನು ಪಟಪಟನೆ ಹತ್ತತೊಡಗಿತು. ಕೊವಾಲ್ಯೊವ್‌ನಿಗೆ ತನ್ನ ಮೂಗನ್ನು ಕಂಡು ಗಾಬರಿಯ ಜೊತೆಯಲ್ಲಿ ವಿವರಣಾತೀತ ವಿಸ್ಮಯವೂ ಆಯಿತು. ಅವನಿಗೆ ತಾನು ನಿಂತಿರುವ ಭೂಮಿ ಗರಗರನೆ ಸುತ್ತುತ್ತಿರುವಂತೆ ಭಾಸವಾಯಿತು. ಅವನಿಗೆ ನೆಲಕ್ಕೆ ಕುಸಿದು ಬೀಳುವಂತಾಯಿತಾದರೂ, ತನ್ನ ಮೂಗು ಮತ್ತೆ ಗಾಡಿ ಹತ್ತುವುದನ್ನು ನೋಡಲು ಹೇಗೋ ಸಂಭಾಳಿಸಿಕೊಂಡು ನಿಂತುಬಿಟ್ಟ. ಅವನ ಮೈ ಬಿಸಿಯಾಗಿ ಮೆಲ್ಲಗೆ ಕಂಪಿಸುತ್ತಿದ್ದ.

ಎರಡು ನಿಮಿಷಗಳ ನಂತರ ಬಂಗಾರದ ಅಂಚಿನ ಕೋಟು ಹಾಗೂ ತುಪ್ಪಳದ ಪ್ಯಾಂಟು ಮತ್ತು ಬಗಲಲ್ಲಿ ಒರೆಗೆ ಸಿಕ್ಕಿಸಿದ ಖಡ್ಗದೊಂದಿಗೆ ಅವನ ಮೂಗು ಮೆಟ್ಟಿಲಿಳಿದು ಬಂದಿತು! ಅದು ಧರಿಸಿದ್ದ ಟೊಪ್ಪಿಗೆಯಿಂದ ಹೊರಚಾಚಿದ್ದ ಪುಕ್ಕಗಳು, ಅದು ರಾಜ್ಯದ ಕೌನ್ಸಿಲರನ ಉನ್ನತ ಹುದ್ದೆಯದಾಗಿತ್ತು. (ನಾಗರಿಕ ಸೇವೆಯ ಹದಿನಾಲ್ಕು ಶ್ರೇಣಿಗಳಲ್ಲಿ ರಾಜ್ಯ ಕೌನ್ಸಿಲರ್ ಹುದ್ದೆಯು ಐದನೇ ಸ್ಥಾನ ಹೊಂದಿತ್ತು) ಅದು ಯಾರೋ ಉನ್ನತ ಅಧಿಕಾರಿಯನ್ನು ಭೇಟಿ ಮಾಡಲು ಹೊರಟಂತಿತ್ತು. ಅದು ಆಚೀಚೆ ಒಮ್ಮೆ ದೃಷ್ಟಿ ಹಾಯಿಸಿ, ಗಾಡಿ ಹತ್ತುತ್ತಾ, ಗಾಡಿ ಓಡಿಸುವವನಿಗೆ ‘ನಡಿ, ನಡಿ’ ಎಂದಿತು.

ಕೊವಾಲ್ಯೊವ್‌ನಿಗೆ ಹುಚ್ಚು ಹಿಡಿದಂತಾಯಿತು. ಅವನಿಗೆ ಏನೂ ತೋಚಲಿಲ್ಲ. ನಿನ್ನೆಯವರೆಗೆ ಅವನ ಮೀಸೆಯ ಮೇಲಿದ್ದ ಮೂಗು ಇವತ್ತು ರಾಜ್ಯಮಟ್ಟದ ಕೌನ್ಸಿಲರನ ಸಮವಸ್ತ್ರದಲ್ಲಿ ಗಾಡಿಯಲ್ಲಿ ಓಡಾಡುತ್ತಿರುವುದು ನೋಡಿ ಅವನಿಗೆ ದಿಗ್ಭ್ರಮೆಯಾಯಿತು. ಅವನು ಗಾಡಿಯ ಹಿಂದೆ ಓಡತೊಡಗಿದ. ಗಾಡಿ ಬಹಳ ದೂರವೇನೂ ಹೋಗಲಿಲ್ಲ. ಕಜಾನ್ ಬಳಿಯ ಕ್ಯಾಥೆಡ್ರಾಲ್ (ಕ್ಯಾಥೋಲಿಕ್ ಕ್ರೈಸ್ತರ ಧರ್ಮಾಧಿಕಾರಿ ಬಿಶಪ್ಪರ ಅಧಿಕೃತ ಚರ್ಚು) ಚೌಕದ ಬಳಿ ನಿಂತಿತು.

ಕೊವಾಲ್ಯೊವ್ ಅಲ್ಲಿ ನೆರೆದಿದ್ದ ಭಿಕ್ಷುಕಿಯರ ಮಧ್ಯೆ ದಾರಿ ಮಾಡಿಕೊಂಡು ಒಳ ನುಗ್ಗಿದ. ಹಿಂದೆ, ಮುಖ ಮುಚ್ಚಿಕೊಂಡು ಭಿಕ್ಷೆ ಬೇಡುತ್ತಿದ್ದ ಅವರನ್ನು ನೋಡಿ ಅವನಿಗೆ ನಗು ಬರುತ್ತಿತ್ತು. ಒಳಗೆ ಕೆಲವಷ್ಟೇ ಜನರು ಪ್ರಾರ್ಥನೆ ಮಾಡುತ್ತಿದ್ದು ಉಳಿದವರು ಹೆಬ್ಬಾಗಿಲ ಹೊರಗೆ ನಿಂತಿದ್ದರು. ಕೊವಾಲ್ಯೊವ್‌ನಿಗೆ ಪ್ರಾರ್ಥನೆಯಲ್ಲಿ ತೊಡಗುವ ಯಾವುದೇ ಉದ್ದೇಶಗಳಿರಲಿಲ್ಲ. ಅವನ ಗಮನವೆಲ್ಲಾ ಸಮವಸ್ತ್ರಧರಿಸಿದ್ದ ತನ್ನ ಮೂಗಿನನೆಡೆಗಿತ್ತು. 

ಕೊನೆಗೂ ಅವನು ತನ್ನ ಮೂಗನ್ನು ಪತ್ತೆ ಹಚ್ಚಿದ. ಚರ್ಚಿನ ಒಂದು ಪಾರ್ಶ್ವದ ಗೋಡೆಗೆ ಅದು ಒರಗಿ ತಲೆಬಾಗಿ ನಿಂತಿತ್ತು. ಅದರ ಎತ್ತರದ ಕಾಲರಿನಿಂದಾಗಿ ಅದರ ಮುಖ ಕಾಣಿಸುತ್ತಿರಲಿಲ್ಲವಾದರೂ ಅದು ಗಾಢವಾದ ಪ್ರಾರ್ಥನೆಯಲ್ಲಿ ಮುಳುಗಿರುವಂತೆ ಕಾಣಿಸುತ್ತಿತ್ತು.

“ಅದನ್ನು ಸಂಧಿಸುವುದ್ಹೇಗೆ?” ಕೊವಾಲ್ಯೊವ್ ಯೋಚಿಸತೊಡಗಿದ. ಅದರ ಸಮವಸ್ತ್ರ, ಹುದ್ದೆ ಅವನನ್ನು ಹಿಂಜರಿಯುವಂತೆ ಮಾಡಿತು. ಅವನು ಕೆಮ್ಮುತ್ತಾ ಅದರ ಗಮನವನ್ನು ಸೆಳೆಯಲು ಪ್ರಯತ್ನಿಸಿದ. ಆದರೆ, ಅವನ ಮೂಗು ದೇವರ ಧ್ಯಾನದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿತ್ತು.

“ಸರ್… ಸರ್…” ತನ್ನೊಳಗಿನ ಧೈರ್ಯವನ್ನೆಲ್ಲಾ ಒಗ್ಗೂಡಿಸುತ್ತಾ ಕೊವಾಲ್ಯೊವ್ ಉಸುರಿದ.

“ನಿನ್ನ ಸಮಸ್ಯೆ ಏನಪ್ಪ?” ಮೂಗು ಅವನೆಡೆಗೆ ತಿರುಗಿ ಕೇಳಿತು.

“ಸರ್, ಹೇಗೆ ಹೇಳುವುದೆಂದೇ ನನಗೆ ಗೊತ್ತಾಗುತ್ತಿಲ್ಲ! ಇದೊಂದು ವಿಚಿತ್ರವೆನಿಸುತ್ತದೆ. ನಿಮಗೆ ನಿಮ್ಮ ಸ್ಥಾನ ಯಾವುದೆಂದು ಖಂಡಿತವಾಗಿಯೂ ಗೊತ್ತಿಲ್ಲವೆನ್ನುತ್ತಿರಾ…? ನಿಮ್ಮನ್ನು ಇಲ್ಲಿ ನೋಡುತ್ತಿರುವುದೇ ನನಗೆ ದೊಡ್ಡ ಆಶ್ಚರ್ಯ! ಎಲ್ಲಾ ಜಾಗ ಬಿಟ್ಟು, ಚರ್ಚಿನಲ್ಲಿ..!!”

“ಕ್ಷಮಿಸಿ. ನೀವು ಏನು ಹೇಳುತ್ತಿದ್ದೀರಿ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ನೀವ್ಯಾರು, ಬಿಡಿಸಿ ಹೇಳಿ…”

“ತನ್ನನ್ನು ಹೇಗೆ ಬಿಡಿಸಿ ಹೇಳುವುದು?” ಕೊವಾಲ್ಯೊವ್ ತಲೆ ಕೆರೆದುಕೊಳ್ಳತೊಡಗಿದ.

“ನಾನು, ನಾನು… ಬಿಡಿಸಿ ಹೇಳುವುದಾದರೆ, ನಾನೊಬ್ಬ ಮೇಜರ್. ನನ್ನ ದರ್ಜೆಯ ಅಧಿಕಾರಿಯೊಬ್ಬ ಮೂಗು ಇಲ್ಲದೆ ಓಡಾಡುತ್ತಿರುವುದು ನಿಮಗೆ ಸರಿ ಕಾಣಿಸುತ್ತಿದೆಯೇ? ನೆವೆಸ್ಕಿ ಸೇತುವೆಯ ಮೇಲೆ ಅದ್ಯಾವುದೋ ಅನಾಮಧೇಯ ಕಿತ್ತಳೆ ಹಣ್ಣು ಮಾರುವ ಹೆಂಗಸಿಗೆ ಮೂಗು ಇಲ್ಲದಿದ್ದಲ್ಲಿ ಯಾರಿಗೂ, ಏನೂ ಅನಿಸುವುದಿಲ್ಲ. ಆದರೆ, ಸದ್ಯದಲ್ಲೇ ಬಡ್ತಿ ಸಿಕ್ಕುತ್ತಿರುವ ನನಗೆ… ಅಷ್ಟೇ ಅಲ್ಲ, ಸಮಾಜದ ಉಚ್ಛವರ್ಗದ ಹೆಣ್ಣುಮಕ್ಕಳ, ಉದಾ: ರಾಜ್ಯ ಕೌನ್ಸಿಲರ ಮಡದಿ, ಮೇಡಮ್ ಚೆಕ್ತಾರೆವ್ ಗೆಳೆತನ ಇರಿಸಿಕೊಂಡಿರುವ ನನಗೆ… ನೀವೇ ನ್ಯಾಯ ಹೇಳಿ. ನನ್ನನ್ನೊಮ್ಮೆ ನೋಡಿ ನೀವೇ ಹೇಳಿ…”

“ನನಗೆ ಏನೂ ಕಾಣಿಸುತ್ತಿಲ್ಲ. ವಿಷಯ ಏನು, ಸ್ಪಷ್ಟವಾಗಿ ಹೇಳಿ.”

“ಯಾರಿಗೂ ನನ್ನನ್ನು ನೋಡಿದಾಕ್ಷಣ ಗೊತ್ತಾಗುತ್ತದೆ…ನೀವು ನನ್ನದೇ ಮೂಗು ಎಂದು ನಿಮಗೆ ಗೊತ್ತಿಲ್ಲವೆಂದು ಹೇಳಿ ಬಿಡಬೇಡಿ ಮತ್ತೆ!”

ಮೂಗು ಮೇಜರರನ್ನೊಮ್ಮೆ ನೋಡಿ ಮುಖ ಸಿಂಡರಿಸಿಕೊಂಡಿತು.

“ಗೆಳೆಯಾ, ನಿನಗೆಲ್ಲೋ ತಪ್ಪು ಕಲ್ಪನೆಯಾಗಿರುವಂತಿದೆ. ನಾನು ಅಂದರೆ… ಸ್ವತಃ ನಾನೇ! ನಿನಗೂ ನನಗೂ ಯಾವುದೇ ಸಂಬಂಧವಿಲ್ಲ. ನಿನ್ನ ಶರಟಿನ ಗುಂಡಿಗಳನ್ನು ನೋಡಿದರೆ ನೀನು ಬೇರೆ ಯಾವುದೋ ಇಲಾಖೆಯವನಂತೆ ಕಾಣಿಸುತ್ತಿದ್ದೀಯ,” ಎಂದು ಹೇಳಿ ಮೂಗು ಕೊವಾಲ್ಯೊವ್‌ನಿಗೆ ಬೆನ್ನು ಮಾಡಿ ಮತ್ತೆ ಪ್ರಾರ್ಥನೆ ಮಾಡುವ ಕಾಯಕದಲ್ಲಿ ತಲ್ಲೀನವಾಯಿತು.

ಕೊವಾಲ್ಯೊವ್‌ನಿಗೆ ಮುಂದೆ ಏನು ಏನು ಮಾಡಬೇಕೆಂಬುದೇ ತೋಚಲಿಲ್ಲ. ಅಷ್ಟರಲ್ಲಿ ಅವನಿಗೆ ಹೆಣ್ಣುಮಗಳೊಬ್ಬಳು ನಡೆದು ಬರುತ್ತಿದ್ದು, ಆಕೆಯ ದಿರಸಿನ ನವಿರಾದಮರ್ಮರ ಶಬ್ದ ಕೇಳಿ ಕಿವಿಗಳು ನೆಟ್ಟಗಾದವು. ಅವನು ನೋಡುತ್ತಿದ್ದಂತೆ ಒಂದು ಹಿರಿಯ ಹೆಣ್ಣುಮಗಳ ಜತೆಗೆ ಶುಭ್ರ ಶ್ವೇತಧಾರಿಯಾದ ಸುಂದರ ತರುಣಿಯೊಬ್ಬಳ ಆಗಮನವಾಯಿತು. ಆಕೆಯ ತಲೆಯ ಮೇಲೆ ತಿಳಿ ಹಳದಿ ವರ್ಣದ ತೆಳ್ಳನೆಯ ಹ್ಯಾಟು ಶೋಭಿಸುತ್ತಿತ್ತು. ಅವರ ಹಿಂದೆ ಗಿರಿಜಾ ಮೀಸೆ ತೊಟ್ಟ ಒಬ್ಬ ಅಜಾನುಬಾಹು ಗಂಡಸೊಬ್ಬ ನಡೆದುಕೊಂಡು ಬರುತ್ತಿದ್ದವನು ತನ್ನ ನಶ್ಯದ ಡಬ್ಬಿಯನ್ನು ತೆರೆದ. ಕೊವಾಲ್ಯೊವ್ ತನ್ನ ಶರಟಿನ ಕಾಲರನ್ನು ಮತ್ತೂ ಮೇಲಕ್ಕೇರಿಸಿ ಮುಂದೆ ಸರಿದ. ಅವನ ಚಿನ್ನದ ಗಡಿಯಾರದ ಸರಪಳಿಗೆ ತೂಗುತ್ತಿದ್ದ ಪದಕಗಳನ್ನು ನೆಟ್ಟಗಾಗಿಸಿದ. ಮುಖದ ಮೇಲೆ ವಿಶಾಲವಾದ ಮುಗುಳ್ನಗೆಯನ್ನು ಪ್ರದರ್ಶಿಸುತ್ತಾ ತನ್ನ ದೃಷ್ಟಿಯನ್ನು ವಸಂತಕಾಲದ ಹೂವಿನಂತೆ, ತಲೆಯನ್ನು ಬಾಗಿಸಿ, ಎರಡೂ ಕೈ ಬೆರಳುಗಳನ್ನು ತನ್ನ ಕೋಮಲ ಹಣೆಗಾನಿಸಿ ಗಾಢ ಪ್ರಾರ್ಥನೆಯಲ್ಲಿ ತಲ್ಲೀನಳಾಗಿದ್ದ ಆ ತೆಳ್ಳನೆಯ ತರುಣಿಯ ಕಡೆಗೆ ಹರಿಸಿದ. ಆಕೆ ಧರಿಸಿದ್ದ ಹ್ಯಾಟಿನ ಕೆಳಗೆ, ವಸಂತದ ಮೊದಲ ಸ್ಪರ್ಶದಲ್ಲಿ ನಸುಗೆಂಪಾಗಿದ್ದಂತೆ ಕಾಣಿಸುತ್ತಿದ್ದವು ಆಕೆಯ ಬಿಳಿ ಗಲ್ಲಗಳು.

ಕೊವಾಲ್ಯೊವ್ ಒಮ್ಮೆಲೆ, ಬೆಂಕಿ ಹಿಡಿದಂತೆ, ಹಿಂದಕ್ಕೆ ಸರಿದ. ತನಗೆ ಮೂಗು ಇಲ್ಲವೆಂದು ಅವನಿಗೆ ಅರಿವಾದಾಗ ಕಣ್ಣುಗಳಿಂದ ಬಳಬಳನೆ ನೀರು ಹೊರಹೊಮ್ಮಿತು.

ಅವನು, ಸಮವಸ್ತ್ರದಲ್ಲಿದ್ದ ಮೂಗಿನ ಕಡೆಗೆ ತಿರುಗಿ, “ನೀನೊಬ್ಬ ವೇಷಾಧಾರಿ ಕೌನ್ಸಿಲರ್ ಕಣಯ್ಯ. ನೀನು, ನನ್ನ ಮೂಗು, ನನ್ನ ಆಸ್ತಿ. ಬೇರೆ ಏನೂ ಅಲ್ಲ,” ಎಂದ.

ಆದರೆ, ಮೂಗು ಅಷ್ಟರಲ್ಲಿ ಅಲ್ಲಿಂದ, ಬೇರೆ ಯಾರನ್ನೋ ಕಾಣಲು ಅಲ್ಲಿಂದ ಹೊರಟು ಹೋಗಿತ್ತು.

ಕೊವಾಲ್ಯೊವ್ ಹತಾಶನಾದ. ಅವನು ಹೊರಗೆ ಬಂದು ಚರ್ಚಿನ ಹೊರ ಚಾವಣಿಯ ಕೆಳಗೆ ನಿಂತು ತನ್ನ ಮೂಗು ಕಾಣಿಸುತ್ತೋ ಏನೋ ಎಂದು ಸುತ್ತಮುತ್ತ ದೃಷ್ಟಿ ಹಾಯಿಸಿದ. ಅದು ಉಟ್ಟ ಸಮವಸ್ತ್ರಅವನಿಗೆ ಚೆನ್ನಾಗಿ ಪರಿಚಿತವಾಗಿತ್ತಾದರೂ ಅದು ಬಂದ ಗಾಡಿಯಾಗಲಿ ಅಥವಾ ಅದರ ಕುದುರೆಗಳ ಬಣ್ಣವಾಗಲಿ ನೆನಪಿರಲಿಲ್ಲ. ಅಲ್ಲಿ ಅತಿವೇಗದಿಂದ ಓಡಾಡುತ್ತಿದ್ದ ಗಾಡಿಗಳ ಮಧ್ಯೆ ಮೂಗಿನ ಗಾಡಿಯ ಗುರುತು ಹಿಡಿಯುವುದು ಸುಲಭವಾಗಿರಲಿಲ್ಲ. ಗುರುತು ಹಿಡಿದರೂ ನಿಲ್ಲಿಸಲು ಅಸಾಧ್ಯವಾಗಿತ್ತು. 

| ಮುಂದುವರೆಯುವುದು |

‍ಲೇಖಕರು Admin

December 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: