ಜಿ ಎನ್ ನಾಗರಾಜ್ ಬರೀತಾರೆ: ವಚನ ಶಿಖರ…

ಜಿ ಎನ್ ನಾಗರಾಜ್

(ಲೇಖನದ ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ)


ವಚನ ಸಿದ್ಧಾಂತದ ಹುಡುಕಾಟ
ಅದರಿಂದಾಗಿ ವಚನಗಳ ಸಾರವನ್ನು ಅರಿತುಕೊಳ್ಳಲು ಅವುಗಳ ಹಿಂದಿನ ಸಿದ್ಧಾಂತದ ಬೆನ್ನಟ್ಟುವುದು ಅನಿವಾರ್ಯವಾಯಿತು. ಈ ಸಿದ್ಧಾಂತದ ಹುಡುಕಾಟ ನನ್ನನ್ನು ವಚನಗಳ ತತ್ವಗಳು ರೂಪುಗೊಂಡ ಬಗೆಯ ಅಧ್ಯಯನಕ್ಕೆ -ಅದೇ ಒಂದು ಪ್ರತ್ಯೇಕ ಅಧ್ಯಯನ ಕ್ಷೇತ್ರ-ಕೊಂಡೊಯ್ದಿತು. ತಮಿಳಿನ 63 ನಾಯನಾರರುಗಳ ಶೈವ ಸಿದ್ಧಾಂತ, ಆಗಮಗಳ ಸಾರ, ಕಾಶ್ಮೀರದ ಅಭಿನವ ಗುಪ್ತ ಮೊದಲಾದವರಿಂದ ವಿವರಿಸಲ್ಪಟ್ಟ ಪ್ರತ್ಯಭಿಜ್ಞಾ ಸಿದ್ಧಾಂತ, ಉತ್ತರ ಭಾರತದ ಚೌರಾಸಿ ಸಿದ್ಧರ ದೋಹೆಗಳು ( ಜನ ಭಾಷೆಯಲ್ಲಿ ದ್ವಿಪದಿಯಲ್ಲಿ ರಚಿಸಲ್ಪಟ್ಟ ಹಾಡುಗಳು) ಹಾಗು ನಮ್ಮ ಬೆಡಗಿನ ವಚನಗಳಿಗೆ ಮೂಲವಾಗಿರಬಹುದಾದ ಸಂಧಾ ಭಾಷಾದ ರಚನೆಗಟ್ಟುಗಳು, ಮಹಾರಾಷ್ಟ್ರದ ಜ್ಞಾನದೇವ ಮೊದಲಾದವರ ವಾರ್ಕರಿ ಸಂಪ್ರದಾಯದ ಹಾಡುಗಳು ಇವುಗಳ ಅಧ್ಯಯನ ವಚನಗಳನ್ನು ಅರ್ಥ ಮಾಡಿಕೊಳ್ಳಲು ಬಹಳ ಸಹಾಯ ಮಾಡಿವೆ.
ಕರ್ನಾಟಕದಲ್ಲಿ ವಚನಗಳ ಧರ್ಮದ ಉಗಮಕ್ಕೆ ಮೊದಲು ಪ್ರಚಲಿತವಾಗಿದ್ದ ಜೈನ ಧರ್ಮ, ಲಾಕುಳ ಶೈವ, ಕಾಪಾಲಿಕ , ಕಾಳಾಮುಖ ಪಂಥಗಳ ಸಿದ್ಧಾಂತಗಳು ಹಾಗೂ ಅವರ ಧಾರ್ಮಿಕ ಸಂಘಟನೆಯ ಸ್ವರೂಪ ಇವುಗಳ ಅಧ್ಯಯನವೂ ಅವಶ್ಯವಾಯಿತು.ಇವುಗಳಿಗಾಗಿ ಶಾಸನಗಳ ಬಗ್ಗೆ ಮಾಡಿದ ಅಧ್ಯಯನಗಳ ಓದು. ವಿದ್ಯಾರಣ್ಯರ ಸರ್ವ ಧರ್ಮ ಸಂಗ್ರಹವೆಂಬ ಲಿಂಗಾಯತ- ವೀರಶೈವವೂ ಸೇರಿದಂತೆ ಅಂದು ಪ್ರಚಲಿತವಾಗಿದ 14 ಧರ್ಮ, ದರ್ಶನಗಳ ವಿವರಣೆ, ವಿಮರ್ಶೆ. ಬ್ರಹ್ಮಶಿವನ ಸಮಯ ಪರೀಕ್ಷೆ. ಶಂಕರರ ಬ್ರಹ್ಮ ಸೂತ್ರ ಭಾಷ್ಯ, ಅವರ ಮೇಲೆ ಪ್ರಭಾವ ಬೀರಿದ ಮಾಧ್ಯಮಿಕ ನಾಗಾರ್ಜುನನ ತತ್ವಗಳು,  ಅಂದಿನ ತತ್ವ ಶಾಸ್ತ್ರಗಳನ್ನು ವಿವರಿಸುವ ಪ್ರೊ. ಹಿರಿಯಣ್ಣನವರ ಹಾಗೂ ದೇಬಿಪ್ರಸಾದ್ ಚಟ್ಟೋಪಾಧ್ಯಾಯರ ಲೋಕಾಯತ ಮತ್ತು ಭಾರತೀಯ ದರ್ಶನಗಳು ಎಂಬ ಗ್ರಂಥಗಳು, ಮತ್ತಿನ್ನನೇಕವುಗಳ ಅಧ್ಯಯನವೂ ಅಗತ್ಯವಾಯಿತು.
ಒಟ್ಟಿನಲ್ಲಿ ಈಜು ತಿಳಿಯದವನು ಇಡೀ ಭಾರತೀಯ ತತ್ವಶಾಸ್ತ್ರ, ದರ್ಶನಗಳ ಸಮುದ್ರವನ್ನು ಹೊಕ್ಕಂತಾಯಿತು. ಅದರೆ ಮೊದಲೇ ಹೇಳಿದಂತೆ ಅರಿವಿನ ಶಿಖರವನ್ನು ಏರುವುದು ಒಂದು ಸಾಹಸ. ಅದರಲ್ಲಿ ಮಂಡಿ ಒಡೆಯುವಂತೆ ಬೀಳುವುದು, ಮತ್ತೆ ಏಳುವುದು, ಮುಂದೆ ಏರುವುದು ಅಸಾಧ್ಯವೆಂದು ಕೈ ಬಿಡುವುದು. ಮತ್ತೆ ಕೆಲ ಕಾಲದ ನಂತರ ‘ಮರಳಿ ಯತ್ನವ ಮಾಡು ಸತ್ತು ಹುಟ್ಟಿ’ ಎಂಬಂತೆ ಮತ್ತೆ ಕೈ ಹಾಕುವುದು ಹೀಗೆ ದಶಕಗಳ ಸಾಗಿತು ಈ ಓದು. ಆದರೆ ಇಂತಹ ಸಾಹಸದಲ್ಲಿ ಯಾವ ಎತ್ತರಕ್ಕೆ ಏರಿದರೂ ಅದರಲ್ಲಿರುವ ಸಂತಸ ಬಣ್ಣಿಸಲಾಗದ್ದು.
ಈ ಅಧ್ಯಯನಗಳು ವಚನಗಳ ತತ್ವಗಳ ಪ್ರಧಾನ ಮೂಲ ಸಾಂಖ್ಯ ದರ್ಶನ, ಯೋಗ ದರ್ಶನಗಳೆಂಬ ಷಡ್ದರ್ಶನಗಳ ಎರಡು ಮುಖ್ಯ ದರ್ಶನಗಳು. ಮುಂದೆ ಇವೆರಡೂ ಕೂಡಿ ಸಾಂಖ್ಯ- ಯೋಗವೆಂದು ಒಂದೇ ಆಗಿವೆ. ಇವೇ ವಚನಗಳ ತತ್ವಶಾಸ್ತ್ರೀಯ ಅಡಿಪಾಯ. ಇವೇ ಚರಕ- ಶುಶ್ರುತರ ವೈದ್ಯ ವಿಜ್ಞಾನಕ್ಕೂ ಅಡಿಪಾಯವಾದ ತಾತ್ವಿಕ ಆಧಾರಗಳು. ಹೀಗೆ ಅಂದಿನ ಅತ್ಯಂತ ವೈಜ್ಞಾನಿಕವಾದ ತತ್ವಗಳೇ ವಚನಗಳಲ್ಲಿ ಮೂಡಿದ ಜಾತಿವಿರೋಧ ಹಾಗೂ ಮಹಿಳಾ ಸಮಾನತೆಯ ಮೌಲ್ಯಗಳ ತಾತ್ವಿಕ ಆಧಾರ ಎಂದು ಕಂಡುಕೊಂಡಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.
ಲಿಂಗಾಯತ ಧರ್ಮ ಹರಡಿತು
ಈ ಎರಡು ವಲಯಗಳ ಜೊತೆಗೆ ಬಹಳ ಮುಖ್ಯವಾದದ್ದು ಲೇಖನದ ಆರಂಭದಲ್ಲಿ ವಿವರಿಸಿದ ಲಿಂಗಾಯತ ಸಮಾಜದ ಸ್ವರೂಪ ಹಾಗೂ ಅದರ ಆಚರಣೆಗಳ ಅಧ್ಯಯನ, ಅದರ ಪ್ರಭಾವದಲ್ಲಿ ರೂಪಿತವಾದ ಒಟ್ಟು ಸಮಾಜದ ಅಧ್ಯಯನ. ಅದಕ್ಕಾಗಿ ವಿವಿಧ ಜಾತಿಗಳ ಲಿಂಗಾಯತರ, ಅವರ ಗುರುಗಳ, ಸ್ವಾಮಿಗಳ ಸಂದರ್ಶನ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬೇರೇ ಬೇರೆ ಕಾಲಗಳಲ್ಲಿ ವಿಸ್ತರಿಸಲ್ಪಟ್ಟ ಲಿಂಗಾಯತ ಧರ್ಮದ ಸ್ವರೂಪ. ಇವುಗಳಿಂದ ಉದ್ಭವವಾದ ಸಮಾಜ ರಚನೆಗೂ ವಚನ ಸಾಹಿತ್ಯಕ್ಕೂ ಇರುವ ಹಾಗೂ ಇಲ್ಲದಿರುವ ಸಂಬಂಧದ ಅಧ್ಯಯನ. ಮಠಗಳ, ಹುಟ್ಟು, ಬೆಳವಣಿಗೆ, ಇಂದು ಉಳಿದಿರುವ ಲಿಂಗಾಯತ ಸಮಾಜದ ಉಪಜಾತಿಗಳ ಅಸ್ತಿತ್ವದ ಐತಿಹಾಸಿಕ, ಸಾಮಾಜಿಕ ಹಿನ್ನೆಲೆ, ಮುನ್ನೆಲೆಗಳು- ಉದಾಹರಣೆಗೆ ನೊಣಬರು, ಸಾದರು, ಪಂಚಮಸಾಲಿಗಳು, ಆದಿ, ದೀಕ್ಷಾ ಇತ್ಯಾದಿ ಪಂಗಡಗಳು. ಇಂದಿನ ಪ್ರಜಾಸತ್ತಾತ್ಮಕ ಪರಿಸರದಲ್ಲಿ ಮಠಗಳೂ ಸೇರಿದಂತೆ ಲಿಂಗಾಯತ ಧರ್ಮದ ಸಾಂಸ್ಥಿಕ ರಚನೆಗಳು ಬೀರುತ್ತಿರುವ ಪರಿಣಾಮ,ಈ ವಲಯದ ಅಧ್ಯಯನ ಕೈಗೊಂಡಿರುವವರೇ ಬಹಳ ಕಡಿಮೆ. ಸ್ವಲ್ಪ ಮಟ್ಟಿನ ಅಧ್ಯಯನ ಲಭ್ಯವಾಗುವುದು ಡಾ. ಚಿದಾನಂದ ಮೂರ್ತಿಯವರ ಬಿಡಿ ಪ್ರಬಂಧಗಳಲ್ಲಿ ಮಾತ್ರ.
ವಿವಿಧ ಧಾರ್ಮಿಕ ಪಂಥಗಳ ಹಾಗೂ ಸಿಖ್ ಧರ್ಮದ ತೌಲನಿಕ ಅಧ್ಯಯನ
ಹಾಗೆಯೇ ವಚನಗಳ ಆಶಯ ಎಷ್ಟರ ಮಟ್ಟಿಗೆ ಕೈಗೂಡಿದೆ, ಏಕೆ ಕೈ ಗೂಡಲಿಲ್ಲ ಎಂಬ ಅಧ್ಯಯನವಿಲ್ಲದೆ ವಚನಗಳ ಮೌಲ್ಯಗಳು ಕರ್ನಾಟಕದ ಸಮಾಜದಲ್ಲಿ ಸಾಧಿಸಿದ ಬದಲಾವಣೆ, ಬೆಳವಣಿಗೆಗಳನ್ನು ಗುರುತಿಸಲಾಗುವುದಿಲ್ಲ. ಇದನ್ನು ಕೇವಲ ವಚನಗಳ ಧಾರ್ಮಿಕ ತತ್ವಗಳ ಸಾಮಾಜಿಕ ಪರಿಣಾಮಗಳ ಅಧ್ಯಯನದಿಂದ ಮಾತ್ರವೇ ಅಳೆಯಲಾಗುವುದಿಲ್ಲ. ಕರ್ನಾಟಕದಲ್ಲಿ ಪ್ರಬಲವಾಗಿದ್ದ ಜೈನ ಧರ್ಮದ ಏಳು ಬೀಳುಗಳು, ಮಾಧ್ವ-ಹರಿದಾಸ ಪಂಥದ ಸಾಮಾಜಿಕ ಪರಿಣಾಮ, ಚೈತನ್ಯ, ವಲ್ಲಭಾಚಾರ್ಯರುಗಳ ತತ್ವಗಳು ಬೀರಿದ ಸಾಮಾಜಿಕ ಪರಿಣಾಮಗಳು, ತನ್ನ ಸಿದ್ಧಾಂತದಂತೆ ಒಂದು ಸ್ವತಂತ್ರ ಧರ್ಮವಾಗುವುದರಲ್ಲಿ ಅತ್ಯಂತ ಯಶಸ್ಸು ಪಡೆದ, ಸಿಖ್ ಧರ್ಮ ಇವೆಲ್ಲವುಗಳ ಆಳವಾದ ತೌಲನಿಕ ಅಧ್ಯಯನ ನಡೆಸಬೇಕು. ಇವುಗಳು ತನ್ನಿಂದ ತಾನೇ ಒಂದು ಅಧ್ಯಯನ ಕ್ಷೇತ್ರ.. ಸಮಾಜ ಶಾಸ್ತ್ರಜ್ಞರು, ಇತಿಹಾಸಕಾರರು, ತತ್ವಶಾಸ್ತ್ರಜ್ಞರು ಅಧ್ಯಯನ ಮಾಡಬೇಕಾದ ಕ್ಷೇತ್ರ. ವಚನ ಚಳುವಳಿ ಜಾತಿ ಪದ್ಧತಿಯನ್ನು ತೊಲಗಿಸುವಲ್ಲಿ ವಿಫಲವಾಯಿತು, ತಾನೂ ಒಂದು ಜಾತಿಯಾಯಿತು  ಎಂಬ ವಾದಗಳ ಬಹಳ ಹಿಂದಿನಿಂದಲೂ ಇವೆ. ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಈ ಮೇಲಿನ ವಿಷಯಗಳ ಬಗ್ಗೆ ಒಂದು ಪ್ರಾಥಮಿಕ ಅಧ್ಯಯನವನ್ನು ಕೈಗೊಂಡು ಕೆಲವು ತೀರ್ಮಾನಗಳಿಗೆ ಬರುವುದು ಸಾಧ್ಯವಾಗಿದೆ.
ನಗರಗಳ, ಕುಶಲ ಕರ್ಮಗಳ ಬೆಳವಣಿಗೆ ಮತ್ತು ವಚನ ಧರ್ಮದ ಉಗಮ
ಇನ್ನು ವಚನಗಳ ಧಾರ್ಮಿಕ ಪಂಥದ , ಅವುಗಳಲ್ಲಿ ಮಂಡಿತವಾದ ಮೌಲ್ಯಗಳ ಉಗಮಕ್ಕೆ ಕಾರಣವೇನು ? ಏನಕೇನ ಪ್ರಕಾರೇಣ ಸ್ವಯಂಭೂ ಆಗಿ ಹುಟ್ಟಿತೇ ? ಕರ್ನಾಟಕದ ಇತಿಹಾಸದಲ್ಲಿ ವಚನಗಳ ಹುಟ್ಟಿನ ಪೂರ್ವದಲ್ಲಿ ಕದಂಬ, ಬಾದಾಮಿ ಚಾಲುಕ್ಯ, ರಾಷ್ಟ್ರ ಕೂಟ, ಕಲ್ಯಾಣಿ ಚಾಲುಕ್ಯರ ಆಡಳಿತದಲ್ಲಿ ಜರುಗುತ್ತಿದ್ದ ಬದಲಾವಣೆಗಳ ಸ್ವರೂಪವೇನು ? ಆಗ ಉಂಟಾದ ನಗರಗಳ ಬೆಳವಣಿಗೆ, ಅವುಗಳ ಸ್ವರೂಪ ವಚನ ಚಳುವಳಿಯ ಹುಟ್ಟಿಗೆ ನೀಡಿದ ಕೊಡುಗೆಯೇನು? ಭಾರತದಲ್ಲಿ ನಗರಗಳ ಬೆಳವಣಿಗೆಯ ಎರಡನೇ ಅಲೆಯಲ್ಲಿ ಬೌದ್ಧ, ಜೈನ ಧರ್ಮಗಳ ಉಗಮವಾದರೆ, ಮೂರನೇ ಅಲೆಯ ಬೆಳವಣಿಗೆ ವಚನ ಚಳುವಳಿಯ ಉಗಮಕ್ಕೆ ಕೊಡುಗೆ ನೀಡಿದೆಯೇ ? ಅಂದು ಇದ್ದ ವಿವಿಧ ಕುಶಲ ಕರ್ಮಗಳ ಸ್ವರೂಪವೇನು ? ಅಂದು ಅವುಗಳ ವಿಕಸನಕ್ಕೆ ಕಾರಣವಾದ ನೆರವಾದ ಅಂಶಗಳೇನು ? ಅಂದಿನ ಕುಶಲ ಕರ್ಮಗಳ ಪರಿಸ್ಥಿತಿಯ ಬಗ್ಗೆ ವಚನಗಳೇ ಏನು ಹೇಳುತ್ತವೆ ? ವಚನಗಳ ಜಾತಿ ವಿರೋಧೀ, ಮಹಿಳಾ ಸಮಾನತೆಯ ಆಶಯಗಳ ಉಗಮಕ್ಕೆ ಅಂದಿನ ಕುಶಲ ಕರ್ಮಗಳ ಕೊಡುಗೆಯೇನು ? ಈ ಹಲವು ಪ್ರಶ್ನೆಗಳನ್ನು ಕನ್ನಡ ವಿದ್ವತ್ ಲೋಕ ಕೇಳಿಕೊಂಡಿಲ್ಲ. ಈ ಅಂಶಗಳಿಗೆ ಸಂಬಂಧಿಸಿ ಅಪೂರ್ವ ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ ಸಾಧ್ಯವಾಗಿದೆ . ಇಲ್ಲಿನ ಸ್ಥಳಾವಕಾಶದ ಮಿತಿಯಲ್ಲಿ ಇಂದು ಚರ್ಚೆಗೆ ಬಂದಿರುವ ವಚನಗಳ ಜಾತಿ ವಿರೋಧಿ ಸ್ವರೂಪ, ಅವುಗಳ ತತ್ವ ಸಿದ್ಧಾಂತಗಳು ಹೇಗೆ ಈ ಜಾತಿ ವಿರೋಧಕ್ಕೆ ಆಧಾರವಾಗಿವೆ ಎಂಬ ಕೆಲ ವಿಷಯಗಳ ಮೇಲೆ ನನ್ನ ಶೋಧದ ವಿಚಾರಗಳನ್ನು ಮುಂದಿನ ಲೇಖನಗಳಲ್ಲಿ ನಿಮ್ಮ ಮುಂದಿಡುತ್ತೇನೆ.
ಖಂಡನೆ, ವೈಭವೀಕರಣಗಳ ವೈಪರೀತ್ಯಗಳು
ಹೀಗೆ ವಚನಗಳನ್ನು ಅರ್ಥೈಸಲು ಈ ಎಲ್ಲ ಹಿನ್ನೆಲೆ ,ತಯಾರಿ ಅಗತ್ಯವಿದೆ ಎಂದು ನನ್ನ ವಿನಮ್ರ ಸೂಚನೆ.ಕನ್ನಡ ಸಂಶೋಧನ ಲೋಕ ಈ ರೀತಿಯ ಇನ್ನೂ ಅನೇಕ ಅಧ್ಯಯನಗಳನ್ನು ಕೈಗೊಳ್ಳಬೇಕಾಗಿದೆ. ಬಹಳಷ್ಟು ವಚನಗಳು ಜಾತಿ ವಿರೋಧವನ್ನು ಪ್ರತಿಪಾದಿಸುವುದಿಲ್ಲ, ಕೇವಲ 72 ವಚನಗಳು ( 0.0.03ರಷ್ಟು ) ಮಾತ್ರ ಜಾತಿ ವಿರೋಧವನ್ನು ಸೂಚಿಸುತ್ತವೆ ಎಂಬ ಆಧಾರದಲ್ಲಿ ತೀರ್ಮಾನಕ್ಕೆ ಬರುವುದು ಒಂದು ರೀತಿಯ ವೈಪರೀತ್ಯವಾದರೆ, ವಚನಗಳ ಮೌಲ್ಯಗಳು ಪೂರ್ಣವಾಗಿ ಸಾಕಾರಗೊಳ್ಳದಿರುವುದಕ್ಕೆ ಕಾರಣಗಳನ್ನು ವಸ್ತು ನಿಷ್ಠವಾಗಿ ಅಧ್ಯಯನಕ್ಕೊಳಪಡಿಸದೇ ವೈಭವೀಕರಿಸುವುದು, ಅದರಲ್ಲಿ 20ನೆಯ ಶತಮಾನದ ಬೆಳವಣಿಗೆಗಳನ್ನು ವಿಶ್ವ ಸಂಸ್ಥೆ, ಸಂವಿಧಾನ, ಸಂಸತ್ತು , ಮಾರ್ಕ್ಸ್ ವಾದಗಳನ್ನು ಕಾಣುವುದು ಮತ್ತೊಂದು ವೈಪರೀತ್ಯದ ಬೆಳವಣಿಗೆಯಾಗಿದೆ. ಇದು ಈಗ್ಗೆ ಕೆಲವು ದಶಕಗಳ ಹಿಂದೆಯೇ ಆರಂಭವಾಗಿರುವ ಪ್ರವೃತ್ತಿಯಾಗಿದೆ.ಈ ಎರಡೂ ವೈಪರೀತ್ಯಗಳೂ ವಚನಗಳ ಸತ್ವಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತವೆ ಎಂಬುದನ್ನು ಗಮನಿಸಬೇಕು.
ವಚನಗಳನ್ನು ಸಮರ್ಥಿಸುವ ಉತ್ಸಾಹದಲ್ಲಿ ಮಾಡುವ ವಾದಗಳ ವೈಪರೀತ್ಯಗಳು ವಚನಗಳ ಮೇಲೆ ಧಾಳಿಯನ್ನು ಹೂಡುತ್ತಿರುವವರ ವಾದಕ್ಕೆ ಸಮರ್ಥನೆಗಳನ್ನು ಒದಗಿಸಬಾರದು. ವಚನಗಳನ್ನು ಅವು ಸಾಮಾಜಿಕವಾಗಿ ಬೀರಿದ ಪರಿಣಾಮಗಳನ್ನು ಅಧ್ಯಯನ ಮಾಡುವುದು ಕೇವಲ ವಚನಗಳ ಅಧ್ಯಯನದಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ಅಪಾರವಾದ , ವಿವಿಧ ಆಯಾಮಗಳ ಅಧ್ಯಯನ ಅಗತ್ಯ. ತಮ್ಮ ತಮ್ಮ ಮೂಗಿನ ನೇರಕ್ಕೆ ಅನುವಾಗುವಂತೆ, ಅವರ ಗುಪ್ತ ಅಜೆಂಡಾಕ್ಕೆ ಅನುವಾಗುವಂತೆ ತೋರಿಕೆಯ ಸಂಶೋಧನೆ ಮಾಡುವುದು, ಶಿಸ್ತುಬದ್ಧವಾದ ಅಧ್ಯಯನ, ಮಾಹಿತಿ ಸಂಗ್ರಹಣೆ, ಸಂಶೋಧನೆಯ ಶ್ರಮವನ್ನು ಹಾಕದೇ ಕೇವಲ ಹೇಳಿಕೆಗಳಲ್ಲಿ ವಿಜೃಂಭಿಸುವುದು ಎರಡೂ ಕೂಡ ಸಂಶೋಧನೆಯೆನಿಸಿಕೊಳ್ಳಲಾರದು.
ವಚನಗಳ ಬಗ್ಗೆ, ಅವುಗಳ ಅರ್ಥೈಸುವಿಕೆಯ ಬಗ್ಗೆ , ಕರ್ನಾಟಕದ ಸಾಮಾಜಿಕ ಬೆಳವಣಿಗೆಯಲ್ಲಿ ವಹಿಸಿದ ಪಾತ್ರದ ಬಗ್ಗೆ, ಇಂದಿನ ಸಮಾಜಕ್ಕೆ ಅವುಗಳ ಪ್ರಸ್ತುತತೆಯ ಬಗ್ಗೆ ವಿಪುಲವಾದ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ. ಕರ್ನಾಟಕದ ಇತಿಹಾಸದಲ್ಲಿ ವಚನಗಳ ಜೊತೆಯ ಅನುಸಂಧಾನ ನಾಲ್ಕು-ಐದು ಅಲೆಗಳಲ್ಲಿ ಸಾಗಿದೆ. ಈ ಅಲೆಗಳು ಎದ್ದಾಗೆಲ್ಲ ಸಮಾಜದಲ್ಲಿ ನಿಶ್ಚಿತವಾದ ಬದಲಾವಣೆಯನ್ನು ತಂದಿದೆ. ಕರ್ನಾಟಕದಲ್ಲಿ ಇಷ್ಟೊಂದು ವ್ಯಾಪಕವಾದ ಬೆಳವಣಿಗೆಯನ್ನು ತರುವುದರಲ್ಲಿ ಯಶಸ್ವಿಯಾದ ಮತ್ತೊಂದು ಧಾರ್ಮಿಕ ಪಂಥ ಇಲ್ಲವೆಂದೇ ಹೇಳಬೇಕು. ಇಂದಿನ ಚರ್ಚೆಯೂ ವಚನಗಳ ಜೊತೆಯ ಕನ್ನಡಿಗರ ಸಂಬಂಧ ಮತ್ತಷ್ಟು ಗಾಢವಾಗುವುದಕ್ಕೆ , ಕರ್ನಾಟಕದಲ್ಲಿ ಮೌಲಿಕ ಬದಲಾವಣೆಯನ್ನು ತರುವುದಕ್ಕೆ ಕಾರಣವಾಗಲಿ ಎಂದು ಆಶಿಸೋಣ.
(ಮುಂದುವೆರೆಯುವುದು…)
 

‍ಲೇಖಕರು avadhi

July 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. mahantesh navalkal

    g n sir ge pranamagalu.idu pustakavaagi horabarali .D R .barahadantaha utkrusts chintane
    mahantesh navalkal

    ಪ್ರತಿಕ್ರಿಯೆ
  2. Amaresh

    “ವಚನಗಳ ಮೌಲ್ಯಗಳು ಪೂರ್ಣವಾಗಿ ಸಾಕಾರಗೊಳ್ಳದಿರುವುದಕ್ಕೆ ಕಾರಣಗಳನ್ನು ವಸ್ತು ನಿಷ್ಠವಾಗಿ ಅಧ್ಯಯನಕ್ಕೊಳಪಡಿಸದೇ ವೈಭವೀಕರಿಸುವುದು, ಅದರಲ್ಲಿ 20ನೆಯ ಶತಮಾನದ ಬೆಳವಣಿಗೆಗಳನ್ನು ವಿಶ್ವ ಸಂಸ್ಥೆ, ಸಂವಿಧಾನ, ಸಂಸತ್ತು , ಮಾರ್ಕ್ಸ್ ವಾದಗಳನ್ನು ಕಾಣುವುದು ಮತ್ತೊಂದು ವೈಪರೀತ್ಯದ ಬೆಳವಣಿಗೆಯಾಗಿದೆ. ಇದು ಈಗ್ಗೆ ಕೆಲವು ದಶಕಗಳ ಹಿಂದೆಯೇ ಆರಂಭವಾಗಿರುವ ಪ್ರವೃತ್ತಿಯಾಗಿದೆ. ವಚನಗಳ ಸತ್ವಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತವೆ ಎಂಬುದನ್ನು ಗಮನಿಸಬೇಕು.”
    ಇದನ್ನು ರಂಜಾನ್ ದರ್ಗಾ ಅವರು ಒಪ್ಪಲಿಕ್ಕಿಲ್ಲ. ನಿಮ್ಮ ಅಭಿಪ್ರಾಯಕ್ಕೆ ಅವರು ಪ್ರತಿಕ್ರಿಯಿಸುವಂತೆ ಅವರನ್ನು ಸಂಪಾದಕರು ಒತ್ತಾಯಿಸಲಿ ಪ್ರೀತಿಯಿಂದ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: