ಜಿ ಎನ್ ನಾಗರಾಜ್ ಅಂಕಣ- ಪ್ರಾಣಿಗಳು ದೇವರುಗಳೋ, ಬಲಿಗಳೋ ?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

10

ಪ್ರಾಣಿಗಳು ದೇವರುಗಳೂ ಹೌದು, ದೇವರಿಗೆ ಕೊಡುವ ಬಲಿಗಳೂ ಹೌದು. ಎರಡೂ ಆಗುವುದು ಹೇಗೆ ಸಾಧ್ಯ ?
ಭಾರತದಲ್ಲಿ ಅತ್ಯಂತ ಹೆಚ್ಚು ಪೂಜಿತರಾದ ಇಬ್ಬರು ದೇವರುಗಳಲ್ಲಿ ಒಬ್ಬ ಮುಖ್ಯನಾದ ದೇವರ ದೇವ ವಿಷ್ಣುವೇ ಸ್ವತಃ ಪ್ರಾಣಿಗಳ ಅವತಾರ ಎತ್ತಿದ್ದಾನೆ. 

ವಿಷ್ಣುವಿನ ಹತ್ತು ಅವತಾರಗಳಲ್ಲಿ ಮೊದಲ ನಾಲ್ಕು ಪ್ರಾಣಿಯ ಅವತಾರಗಳು. ಮೀನು,ಆಮೆ,ಹಂದಿ, ಮನುಷ್ಯನ ದೇಹ ಸಿಂಹದ ಮುಖ ಹೊತ್ತ ನರಸಿಂಹ. ಇಪ್ಪತ್ತನೇ ಶತಮಾನದಲ್ಲಿ ಅತ್ಯಂತ ಹೆಚ್ಚು ಜನಪ್ರಿಯನಾದ ದೇವರಾದ ಗಣಪತಿ ಕೂಡಾ ಆನೆಯ ಮುಖ ಹೊತ್ತ ಮನುಷ್ಯ ರೂಪ.

ಗಜ ಮುಖ ಗಣಪತಿ ಇದ್ದಂತೆ ಬೇರೆ ಬೇರೆ ಪ್ರಾಣಿಗಳ ಮುಖ ಹೊತ್ತ ಗಣಪತಿಗಳೂ ಇವೆಯೆಂದು ಮೂರು ಮುಖ್ಯ ವೇದಗಳಲ್ಲಿ ಯಜುರ್ವೇದದ ಭಾಗವಾದ ತೈತ್ತಿರೀಯ ಸಂಹಿತೆಯಲ್ಲಿ ಹೇಳಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ನಾಲ್ಕು ಬೇರೆ ಬೇರೆ ಪ್ರಾಣಿಗಳ ಮುಖಗಳನ್ನುಳ್ಳ ಗಣಪತಿಗಳು ಇದ್ದವಂತೆ. ಹೋರಿಯ ಮುಖ,ಹಾವಿನ ಮುಖ, ಆನೆಯ ಮುಖದ ಗಣಪತಿಗಳು‌ ಸಾಮಾನ್ಯವಾಗಿದ್ದವಂತೆ.

ಇದೇ ರೀತಿ ಪ್ರಾಣಿ ಮುಖವನ್ನು ಕರಾವಳಿಯ ಬಹಳ ಜನಪ್ರಿಯ ದೈವವಾದ ಪಂಜುರ್ಲಿಯ ಆರಾಧನೆಯಲ್ಲಿ ಕಾಣುತ್ತೇವೆ. ಪಂಜುರ್ಲಿಯ ಹಬ್ಬವಾದ ಕೋಲದಲ್ಲಿ ಪಾತ್ರಿ ಎಂಬ ಪೂಜಾರಿ ಹಂದಿಯ ಮುಖವಾಡ ಧರಿಸಿ ಪಂಜುರ್ಲಿ ದೇವರ ಆವಾಹನೆಯಾಯಿತೆಂದು ಕಾರಣಿಕಗಳನ್ನು ನುಡಿಯುತ್ತಾನೆ. ಉಳಿದ ಸಮಯದಲ್ಲಿ ಈ ಮುಖವಾಡ ಪಂಜುರ್ಲಿಯ ನೇಮ ಉಳ್ಳವರ ಕುಟುಂಬದ ಮನೆಯಲ್ಲಿರುತ್ತದೆ. ಹಾಗೆಯೇ ಮತ್ತೊಂದು ಪ್ರಾಣಿಯ ಮುಖವಾಡ ಹೊತ್ತ ಮನುಷ್ಯನೆಂದರೆ ದಕ್ಷ. ದಕ್ಷ ಯಜ್ಞದಲ್ಲಿ ಶಿವನ ಕೋಪದಿಂದ ಹತನಾದ ಅವನ ಮಾವ. ಈಗಲೂ ವೀರಭದ್ರನ ಪ್ರತಿಮೆಯ ಬುಡದಲ್ಲಿ ಕೈ ಮುಗಿದ ಆಡಿನ ಮುಖ ಹೊತ್ತ ದಕ್ಷನ ಶಿಲ್ಪವನ್ನು ಕಾಣಬಹುದು.
ಅಶ್ವಿನಿ ದೇವತೆಗಳು…..

ಇನ್ನು ಶಿವನ ಗಣಂಗಳಲ್ಲಿ ಪ್ರಾಣಿ ಮುಖ ಹೊತ್ತವರು ಕೆಲವರು ಇರುವಂತೆ ಕಾಣುತ್ತದೆ. ಇನ್ನೂ ಯಾರಾದರೂ ಗಮನಕ್ಕೆ ಬಾರದಿರುವವರು ಇರಬಹುದು. ವೈದಿಕ ಧರ್ಮಗ್ರಂಥಗಳ ಪ್ರಕಾರ 33 ಕೋಟಿ ದೇವತೆಗಳಿದ್ದಾರಲ್ಲವೇ.
ಪ್ರಾಣಿಗಳು ದೇವ ಸಮೂಹದಲ್ಲಿ ಕಾಣುವ ಮತ್ತೊಂದು ರೀತಿ ಎಂದರೆ ದೇವರ ವಾಹನಗಳಾಗಿ. ಗರುಡ, ಹೋರಿ, ಇಲಿ, ಕೋಣ, ಕಾಗೆ, ನವಿಲು, ಮೊಸಳೆ ಹೀಗೆ ಮತ್ತಷ್ಟು ಪ್ರಾಣಿಗಳಿವೆ. ಹಾವುಗಳಂತೂ ಹಾಸಿಗೆಯಾಗಿ, ಕಂಠಾಭರಣವಾಗಿ, ಹೊಟ್ಟೆಯನ್ನು ಒಡೆದುಹೋಗದಂತೆ ಹಿಡಿದಿಟ್ಟುಕೊಳ್ಳಲು ಹೀಗೆ ಬೇರೆ ಬೇರೆ ರೂಪದಲ್ಲಿ , ಸ್ವತಂತ್ರವಾಗಿ ಕೂಡಾ ಪೂಜೆಗೆ ಒಳಗಾಗಿದೆ.

ಪ್ರಶ್ನೆ ಏನೆಂದರೆ ಸ್ವತಃ ದೇವರುಗಳೆನಿಸಿದ ಪ್ರಾಣಿಗಳನ್ನೂ ಸೇರಿ ಹಲವಾರು ಪ್ರಾಣಿಗಳನ್ನು ಯಜ್ಞ ಯಾಗಾದಿಗಳಲ್ಲಿಯೂ ಬಲಿಯಾಗಿ ದೇವರಿಗೆ ಅರ್ಪಿಸುತ್ತಾರೆ. ಒಂದೆರಡಲ್ಲ ಹತ್ತಾರು ಸಾವಿರ. ಕುದುರೆಯ ಜೊತೆಗೆ ದನಗಳು,ಮೇಕೆ,ಕುರಿಗಳು ಇನ್ನಿತರ ಪ್ರಾಣಿಗಳೂ ಕೂಡಾ. ಜಾತ್ರೆಗಳು,ಪೂಜೆಗಳು,ಹರಕೆಗಳ ಭಾಗವಾಗಿಯೂ ಬಲಿ ಕೊಡುವುದು ಹಲವು ಸಾವಿರ ವರ್ಷಗಳ ಪದ್ಧತಿ. ಇದು ಹೆಚ್ಚಾಗಿ ಬುಡಕಟ್ಟು ಮೂಲದ ಹೆಣ್ಣು ದೇವರುಗಳಿಗೆ ಮತ್ತು ಭೈರವ,ಬೀರಪ್ಪನಂತಹ ಕೆಲ ಜಾನಪದ ಗಂಡು ದೇವರುಗಳಿಗೆ  ಹರಕೆ ಹೊತ್ತ ಮನೆಗಳವರು ಮನೆಗೊಂದರಂತೆ ಸಾವಿರಾರು ಪ್ರಾಣಿಗಳಾಗುತ್ತವೆ. ಕೋಣ,ಕುರಿ,ಮೇಕೆ,ಕೋಳಿಗಳು ಇಲ್ಲಿಯ ಬಲಿ ಪ್ರಾಣಿಗಳು.

ವಿಶ್ವಾದ್ಯಂತ :

ಇಂತಹ ಪದ್ಧತಿಗಳು ಕೇವಲ ಭಾರತಕ್ಕೆ ಸೀಮಿತವಲ್ಲ. ವಿಶ್ವಾದ್ಯಂತ ಹಲವು ಪ್ರಾಚೀನ ನಾಗರೀಕತೆಗಳಲ್ಲಿ ಕಾಣುತ್ತವೆ.‌ ಈಜಿಪ್ಟ್, ಮೆಸೊಪೊಟೋಮಿಯಾ, ಗ್ರೀಸ್, ಚೀನಾ ಆಫ್ರಿಕಾ, ಅಮೇರಿಕದ ಮೂಲ ನಿವಾಸಿ ಬುಡಕಟ್ಟುಗಳು ಇತ್ಯಾದಿ.

ಗ್ರೀಸ್‌ನ ಥೀಬ್ಸ್ ಎಂಬ ಪ್ರದೇಶದಲ್ಲಿ ಅಮುನ್‌ನ ರೂಪಗಳಲ್ಲಿ ಒಂದು ಟಗರು ಅಥವಾ ಟಗರು ತಲೆಯ ಮಾನವ ದೇಹ. ಈ ದೇವತೆಯನ್ನು ಆರಾಧಿಸುವ ದೇವರಿಗೆ ಟಗರು ಪೂಜ್ಯ. ಈ ಟಗರುಗಳನ್ನು ಅಮುನ್ ದೇವತೆಗೆ ವರ್ಷಕ್ಕೊಮ್ಮೆ ಬಲಿ ನೀಡುತ್ತಿದ್ದರು. ಹೀಗೆ ಬಲಿ ಕೊಟ್ಟ ಟಗರಿನ ಉಣ್ಣೆಯನ್ನೇ ದೇವತೆಯ ಉಡುಪಾಗಿ ಹೊದಿಸಲಾಗುತ್ತಿತ್ತು. ಗ್ರೀಸ್‌ನ ಮತ್ತೊಂದು ದೇವತೆ ಪ್ಯಾನ್‌ಗೆ ಮಾನವರ ಮುಖದ ಜೊತೆಗೆ ಹೋತದ ಕೊಂಬು ಮತ್ತು ಗಡ್ಡ . ಜೊತೆಗೆ ಹೋತದ ಹಿಂದಿನ ಕಾಲುಗಳೇ ಪ್ಯಾನ್ ದೇವತೆಯ ಕಾಲುಗಳು. ಕೈಗಳು ಮಾನವರ ಕೈಗಳಂತೆಯೇ. ಈ ದೇವತೆಗೆ ದೇವಾಲಯಗಳಿರಲಿಲ್ಲ. ಬೆಟ್ಟ ಗುಡ್ಡಗಳ ಪ್ರದೇಶದ ದೇವತೆಯಾದ ಪ್ಯಾನ್‌ಗೆ ಅದರ ಗುಹೆಗಳೇ ಪೂಜಾ ಸ್ಥಾನಗಳು. ಕುರಿಗಾಹಿಗಳ ಹಾಗೂ ಕುರಿಮಂದೆಯ ರಕ್ಷಕ ದೇವತೆ ಎಂದು ಅವರ ಪೂಜೆಗೊಳಗಾಗಿತ್ತು. ಈ ದೇವತೆ ಕುರಿಗಾಹಿಗಳ ಒಂಟಿತನ ನೀಗಿಸಲು ಒಂದು ಸಂಗೀತದ ಉಪಕರಣವನ್ನು ಸೃಷ್ಟಿಸಿ ನೀಡಿತಂತೆ.

ಡಯೋನಿಸಸ್ ಎಂಬ ರೋಮನ್ ದೇವತೆ ಮೊದಲು ಹೋರಿಯ ರೂಪವೆಂದು ಪರಿಗಣಿತವಾಗಿತ್ತು. ಇದಕ್ಕೆ ವರ್ಷಕ್ಕೊಮ್ಮೆ ಆರಿಸಿದ ಹೋರಿಕರುವನ್ನು ಈ ದೇವತೆಗೆ ಸೇರಿದ ವನಗಳಲ್ಲಿ ಬಲಿಕೊಡಲಾಗುತ್ತಿತ್ತು. ನಂತರ ಇದೇ ದೇವತೆಯನ್ನು ಹೋತ ಎಂದು ಪರಿಗಣಿಸಿ ಹೋತದ ಬಲಿಯನ್ನು ನೀಡಲಾಗುತ್ತಿತ್ತು. ಹೋತವನ್ನು ಈ ದೇವರ ಪೂಜೆ ಮಾಡುತ್ತಿದ್ದ ಮಹಿಳೆಯರು ಜೀವಂತವಾಗಿಯೇ ಸಿಗಿದು ತಿನ್ನುತ್ತಿದ್ದರಂತೆ. ನಮ್ಮ ರಾಜ್ಯ ಮತ್ತು ನೆರೆಯ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇಂದಿಗೂ ಪ್ರಚಲಿತವಿರುವ ಆಡು ಅಥವಾ ಕುರಿಯನ್ನು ಗಾವು  ಸಿಗಿಯುವುದು ಎನ್ನುವ ಪದ್ಧತಿಯ ತದ್ರೂಪಿ ಇದು.

ಜಪಾನಿನಲ್ಲಿ, ಅಲಾಸ್ಕದಲ್ಲಿ ತಿಮಿಂಗಲಗಳನ್ನು ಅಡಿಗೆ ಮಾಡಿ ತಿಂದ ಮೇಲೆ ಉಳಿದ ಮೂಳೆಗಳನ್ನು ತಿಮಿಂಗಿಲ ದೇವತೆ ಎಂದು ಪೂಜಿಸುವುದು, ಅದರ ಸಮಾಧಿ ಮಾಡುವುದು ಅಥವಾ ದೇವಾಲಯ ಕಟ್ಟುವುದು ಮೊದಲಾದ ಪದ್ಧತಿಗಳಿವೆ.

ಎಸ್ಕಿಮೊ ಜನರ ಒಂದು ದೇವತೆ ತಾತಾನಲುಕ್ ತನ್ನನ್ನು ಆರಾಧಿಸುವ ಜನರು ತಾನು ವಿಧಿಸಿದ ಕಟ್ಟಲೆಗಳನ್ನೆಲ್ಲಾ ಪಾಲಿಸುತ್ತಾರೆಯೇ ಎಂದು ಗಮನಿಸಿ ಅದಕ್ಕೆ ತಕ್ಕಂತೆ ತನ್ನ ಅಧೀನದ ಸಮುದ್ರದ ಪ್ರಾಣಿಗಳು ಅವರ ಬೇಟೆಗೆ ಸಿಗುವಂತೆ ಮಾಡುತ್ತದೆ. ಹಾಗೆಯೇ ಭೂಮಿಯ ಮೇಲಿನ ಪ್ರಾಣಿಗಳಿಗೂ ಅವುಗಳ ಒಡೆಯ ದೇವತೆ ಬೇಟೆಗೆ ಸಿಗುವಂತೆ ನಿರ್ದೇಶನ ನೀಡುತ್ತದೆ ಎಂಬ ನಂಬಿಕೆ. ಬೇಟೆಗೆ ಪ್ರಾಣಿಗಳು ಸಿಗದಿದ್ದರೆ ಆ ಬುಡಕಟ್ಟುಗಳ ದೇವರ ಗುಡ್ಡನಂತಹ ಪೂಜಾರಿ ಅಂಗಾಕುತ್ ದೇವರನ್ನು ಬೇಟೆಗೆ ಪ್ರಾಣಿಗಳನ್ನು ಏಕೆ ಕಳಿಸಲಿಲ್ಲ, ಏನು ತಪ್ಪಾಯಿತು ಎಂದು ಕೇಳಿ ಅದರ ಉತ್ತರವೆಂದು ತನ್ನದೇ ವ್ಯಾಖ್ಯಾನ ನೀಡಿ ನಿರ್ದಿಷ್ಟ ಆಚರಣೆಗಳನ್ನು ಮಾಡಲು ಸೂಚಿಸುತ್ತಾನೆ. ಇದೂ ಕೂಡಾ ಇಂದಿಗೂ ನಮ್ಮ ಹಳ್ಳಿಗಳಲ್ಲಿನ “ಅಮ್ಮ” ದೇವತೆಗಳಿಗೆ ಅವರ ಒಕ್ಕಲಿನವರು ನಮ್ಮಿಂದ ಏನು ತಪ್ಪಾಯ್ತಮ್ಮಾ ಎಂದು ಬೇಡಿಕೊಳ್ಳುವಂತಹ ಆಚರಣೆ.

ಉತ್ತರ ಧ್ರುವದ ಸುತ್ತಲಿನ ವಿಶಾಕ ಪ್ರದೇಶದಲ್ಲಿ ಹಿಮ‌ಕರಡಿಗಳು ಹೇರಳ. ಅಲ್ಲಿ ವಾಸ ಮಾಡುವ ಅನೇಕ ಬುಡಕಟ್ಟು ಸಮುದಾಯಗಳಿಗೆ ಹಿಮ ಕರಡಿಯ ಮಾಂಸವೇ ಜೀವನಾಧಾರ. ಆದ್ದರಿಂದ ಈ ಎಲ್ಲ ಬುಡಕಟ್ಟುಗಳ ಆಚರಣೆಗಳ ಕೇಂದ್ರ ಹಿಮಕರಡಿಯೇ.

ಇಂತಹ ಒಂದು ಬುಡಕಟ್ಟು ಜಪಾನಿನ ಉತ್ತರದ ದ್ವೀಪಗಳಲ್ಲಿ ವಾಸಿಸುವ ಐನು ಸಮುದಾಯ. ಇವರು ಹಿಮ ಕರಡಿಯನ್ನು ‘ಕಾಮುಯಿ’ ಎಂದರೆ ದೇವರು ಎನ್ನುತ್ತಾರೆ. ಇದು ಎಲ್ಲ ದೇವತೆಗಳ ಮುಖ್ಯಸ್ಥ. ಈ ದೇವತೆ ಜನರಿಗೆ ಒಳಿತು ಮಾಡಲೆಂದು ಈ ಲೋಕಕ್ಕೆ ಭೇಟಿ ನೀಡುವಾಗ ಅದು ಕರಡಿಯ ರೂಪ ಧರಿಸಿ ಬರುತ್ತದೆ. ಅದರ ಮಾಂಸವನ್ನು ತಮಗೆ ಆಹಾರವಾಗಿ ಒದಗಿಸಿ ತಮ್ಮನ್ನು ಕಾಪಾಡುತ್ತದೆ ಎಂದು ಭಾವಿಸುತ್ತಾರೆ.
ಈ ಬುಡಕಟ್ಟು ಆಚರಿಸುವ ಐಯೋಮಾಂಟೆ ಎಂಬ ಹಬ್ಬದಲ್ಲಿಯೂ ಅನೇಕ ಪ್ರಾಣಿ, ಮರಗಿಡಗಳನ್ನು ಪೂಜಿಸಿದರೂ ಹಿಮ‌ಕರಡಿಯೇ ಪ್ರಧಾನ ದೇವತೆ. ಹಿಮ ಕರಡಿಯ ಸಣ್ಣ ಮರಿಯನ್ನು ತಂದು ಒಂದೂವರೆ ವರ್ಷದವರೆಗೆ ಸಾಕಿ ನಂತರ ಅದನ್ನು ಮೆರವಣಿಗೆ ಮಾಡುತ್ತಾರೆ.

ನಂತರ ಬಲಿ ಕೊಡುವಾಗ ಹೆಂಗಸರು ಬಲಿ ಕೊಡುವವರಿಗೆ ಶಾಪ ಹಾಕುತ್ತಾರೆ, ಹೊಡೆಯುತ್ತಾರೆ. ತಮ್ಮ ದುಃಖವನ್ನು ಹಾಡು,ನೃತ್ಯದ ಮೂಲಕವೂ ವ್ಯಕ್ತ ಪಡಿಸುತ್ತಾರೆ. ಅದರ ಹಸಿಗೆಯಾದ ನಂತರ ಅದರ ತಲೆ, ಚರ್ಮ, ಕಾಲುಗಳನ್ನು ಕರಡಿಯಾಕಾರದಲ್ಲಿ ಜೋಡಿಸಿ ಅದಕ್ಕೆ ‌ಎಡ ಇಡುತ್ತಾರೆ. ಇಂತಹುದೇ ಪದ್ಧತಿ ಸೈಬೀರಿಯಾದ ಗಿಲಿಯಾಕ್ ಬುಡಕಟ್ಟು, ಫಿನ್ಲೆಂಡ್, ನಾರ್ವೆ, ಸ್ವೀಡನ್ನುಗಳಲ್ಲಿರುವ ಸಾಮಿ ಬುಡಕಟ್ಟು, ಚೀನಾದ ಓರೊಕ್ವೆನ್ ಬುಡಕಟ್ಟುಗಳಲ್ಲಿ ಇಂತಹುದೇ ಕರಡಿ ಹಬ್ಬಗಳಿವೆ. ಈ ಬುಡಕಟ್ಟುಗಳಲ್ಲಿ ಬಲಿ ನೀಡುವಾಗಲೂ, ನಂತರ ಪ್ರಾರ್ಥಿಸುವಾಗಲೂ ಕರಡಿಯನ್ನು ತಮ್ಮ ಹಿರಿಯ, ತಮ್ಮ ಅಜ್ಜ ಎಂದೇ ಕರೆಯುತ್ತಾರೆ. ‌

ಅಮೆರಿಕದ ಆದಿವಾಸಿ “ಇಂಡಿಯನ್ನರು” :

ಕೊಲಂಬಸ್ ಎಂಬ ಬಿಳಿಯ  ಅಮೇರಿಕವನ್ನು ಕಂಡು ಹಿಡಿದ ಎಂದು ಜಗತ್ತಿನ ಇತಿಹಾಸದ ಪುಸ್ತಕಗಳೆಲ್ಲ ಬೊಬ್ಬೆ ಹೊಡೆಯುತ್ತವಲ್ಲಾ, ಅದಕ್ಕೆ ಹತ್ತು ಸಾವಿರ ವರ್ಷಗಳಿಗೂ ಮೊದಲೇ ಅಮೆರಿಕದಲ್ಲಿ ನೂರಾರು ಬುಡಕಟ್ಟುಗಳು, ಅವರದೇ‌ ಆದ ಸಂಸ್ಕೃತಿ ಇತ್ತು. ಅದರಲ್ಲಿ ಬಯಲಿನ ಆದಿವಾಸಿಗಳಿಗೆಲ್ಲ ಬೈಸನ್ ಎಂಬ ಕಾಡೆಮ್ಮೆಗಳೇ ಜೀವನಾಧಾರ. ಅದರ ಒಂದು ಬುಡಕಟ್ಟು ಬ್ಲಾಕ್ ಫುಟ್ . ‌

ಈ ಬುಡಕಟ್ಟುಗಳಿಗೆ ಕಾಡೆಮ್ಮೆ ಜೀವನಾಧಾರ ಎಂದರೆ ಅವರ ಜೀವನದ ಎಲ್ಲವೂ ಎಂದರೆ ತಪ್ಪಿಲ್ಲ. ಕಾಡೆಮ್ಮೆಗಳ ಚರ್ಮವೇ ಅವರ ಗುಡಿಸಲ ಮಾಡು, ಅವರ ಬಟ್ಟೆ. ಎಮ್ಮೆ ಮರಿಗಳ ಚರ್ಮ ಅವರ ಮಕ್ಕಳ ಬಟ್ಟೆ. ಎಮ್ಮೆಗಳ ಜಠರ ಅವರ ನೀರು ತರುವ ಕೊಡ.‌ಅವುಗಳ ಕೊಂಬು ಅವರಿಗೆ ಪದಾರ್ಥಗಳನ್ನು ಕಾಪಿಡುವ ಪಾತ್ರೆ. ಅಷ್ಟೇ ಅಲ್ಲ ಅದರಲ್ಲಿಯೇ ಅವರು ಮುಂದಿನ‌ ಬಿಡಾರಕ್ಕೆ ಬೆಂಕಿಯನ್ನು ಕೊಂಡೊಯ್ಯುವ ಪೆಟ್ಟಿಗೆ. ಇನ್ನು ಆಹಾರದ ವಿಷಯ ಹೇಳಬೇಕಿಲ್ಲ. ಕೆಲ ಗೆಡ್ಡೆ ಗೆಣಸುಗಳು, ಬೇರೆ ಪ್ರಾಣಿಗಳನ್ನು ಆಹಾರವಾಗಿ ಬಳಸುತ್ತಿದ್ದರೂ ಕೂಡಾ ಕಾಡೆಮ್ಮೆಗಳೇ ಮುಖ್ಯ ಆಹಾರ.

ಇಂತಹ ಕಾಡೆಮ್ಮೆಗಳು ಹಿಂಡು ಹಿಂಡಾಗಿ‌ ಅಲೆಯುತ್ತಿದ್ದವು. ಇವುಗಳ ವರ್ತನೆ, ಬದುಕಿನ ಆವರ್ತಗಳು ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಇಡೀ ಹಿಂಡುಗಳನ್ನೇ ಬೇಟೆಯಾಡುವ ವಿಧಾನವನ್ನು ರೂಪಿಸಿಕೊಂಡಿದ್ದರು. ಆದರೆ ಎಲ್ಲ ಸಮಯದಲ್ಲಿ ಅವರಿಗೆ ಬೇಟೆ ಸಿಗುತ್ತಿರಲಿಲ್ಲ. ಅದಕ್ಕಾಗಿ ಅವರ ದೇವರಗುಡ್ಡನಂತಹವರೂ ಕೂಡಾ ಅವರು ಉಳಿಸಿಕೊಂಡು ಪೂಜಿಸುತ್ತಿದ್ದ ಎಮ್ಮೆಯ ತಲೆ ಬುರುಡೆಗೆ ಪ್ರಾರ್ಥನೆ ಸಲ್ಲಿಸಿ ತಮಗೆ ಯಥೇಚ್ಛವಾಗಿ ಬೇಟೆ ಸಿಗುವಂತೆ ಮಾಡು ಎಂದು ಬೇಡಿಕೊಳ್ಳುತ್ತಿದ್ದ. ಎಮ್ಮೆಗಳ ಹಿಂಡು ಯಾವ ದಿಕ್ಕಿನಲ್ಲಿದೆ ಎಂದು ಕಣಿ ಹೇಳುತ್ತಿದ್ದ.
ಇವರು ಬೇಟೆಗೆ ಹೊರಡುವ ಮೊದಲು ನಾಲ್ಕಾರು ದಿನ ಲೈಂಗಿಕ ಸಂಪರ್ಕ ಮಾಡುತ್ತಿರಲಿಲ್ಲ.

ಹಿಂದಿನ ರಾತ್ರಿಯೆಲ್ಲಾ ಬೇಟೆ ನೃತ್ಯ ಮಾಡುತ್ತಿದ್ದರು. ಕೆಲವು ಬುಡಕಟ್ಟುಗಳು ಮೂರು ದಿನ ನೃತ್ಯ ಮಾಡುತ್ತಿದ್ದರು. ಅವರ ನೃತ್ಯವೆಂದರೆ ಹದಿನೈದು ಜನರು ಎಮ್ಮೆಯ ತಲೆಬುರುಡೆ ಅಸ್ಥಿಪಂಜರವನ್ನು ಮುಖಕ್ಕೆ ಕಟ್ಟಿಕೊಂಡು ಮೈಗೆಲ್ಲಾ ಬಣ್ಣ ಹಚ್ಚಿಕೊಳ್ಳುತ್ತಿದ್ದರು. ಎಮ್ಮೆಯ ಬಾಲವನ್ನು ಹಿಂದೆ ಕಟ್ಟಿಕೊಳ್ಳುತ್ತಿದ್ದರು. ವೃತ್ತಾಕಾರ,ಅರೆ ವೃತ್ತಾಕಾರದಲ್ಲಿ ಎಮ್ಮೆಗಳ ಚಲನೆ ಮತ್ತು ದನಿಯನ್ನು ಅನುಕರಿಸುತ್ತಾ ನೃತ್ಯ ಮಾಡುತ್ತಿದ್ದರು. ಅದರಲ್ಲಿ ಒಬ್ಬ ಸುಸ್ತಾದವನಂತೆ ನಟಿಸಿ ಅಲ್ಲಿಯೇ ಬೀಳುತ್ತಿದ್ದ. ಅವನನ್ನು ನೋಡುತ್ತಾ ನಿಂತವರಲ್ಲಿ ಕೆಲವರು ಸಾಲಿನಿಂದ ಎಳೆದುಕೊಂಡು ಹೊರಕ್ಕೊಯ್ಯುತ್ತಿದ್ದರು. ಅವನನ್ನು ಬಲಿ ಕೊಟ್ಟಂತೆ , ಚರ್ಮ ಸುಲಿದಂತೆ ನಟಿಸುತ್ತಿದ್ದರು.

ಯಶಸ್ವಿ ಬೇಟೆಯ ನಂತರ ಇಂತಹ ನೃತ್ಯ ಇರುತ್ತಿರಲಿಲ್ಲ. ಬದಲಾಗಿ ಸಿಕ್ಕ ಮೊದಲ ಎಮ್ಮೆಯನ್ನು ದೇವರಿಗೆ ಬಲಿ ಕೊಡುತ್ತಿದ್ದರು. ಎಮ್ಮೆಯ ನಾಲಿಗೆ ಬಹಳ ರುಚಿಕರವಾದ್ದರಿಂದ ನಾಲಿಗೆ ಹಬ್ಬ ಮಾಡುತ್ತಿದ್ದರು.‌

ಹೀಗೆ ಅವರು ವರ್ಷದ ವಿವಿಧ ಋತುಗಳಲ್ಲಿ ವಿವಿಧ ರೀತಿಯ ಎಮ್ಮೆ ನೃತ್ಯಗಳನ್ನು ಮಾಡುತ್ತಿದ್ದರು. ಎಮ್ಮೆಗಳ ಸಂತತಿ ವೃದ್ಧಿಯಾಗಲಿ ಎಂಬುದೂ ಕೂಡಾ ಇಂತಹ ನೃತ್ಯಗಳಲ್ಲೊಂದು. ಈ ನೃತ್ಯಗಳನ್ನು, ಅವುಗಳ ವೈವಿಧ್ಯತೆಯನ್ನು ನೋಡಿದರೆ ಅವರು ಎಮ್ಮೆ, ಕೋಣಗಳು, ಮರಿಗಳ ಪ್ರತಿ ಚಲನೆ ಮತ್ತು ವರ್ತನೆಗಳನ್ನು ಬಹಳ ಕೂಲಂಕಷವಾಗಿ ಗಮನಿಸುತ್ತಿದ್ದರು ಎಂಬುದು ತಿಳಿಯುತ್ತದೆ. ಈ ನೃತ್ಯಗಳು ಅವರು ಎಮ್ಮೆಗಳ ವರ್ತನೆಯ ವಿವರಗಳನ್ನು ನೆನಪಿಟ್ಟುಕೊಳ್ಳಲೋಸುಗವೇ ಮಾಡುತ್ತಾರಾ, ಬೇಟೆಯ ಮುನ್ನಾ ದಿನ ಬೇಟೆಯಲ್ಲಿ ಯಾರು ಯಾವ ಪಾತ್ರ ವಹಿಸಬೇಕೆಂಬ ಒಂದು ರಿಹರ್ಸಲ್ ರೀತಿಯೇ, ಬೇಟೆಯಲ್ಲಿನ್ನೂ ಪಳಗದ ಎಳೆಯರಿಗೆ ತರಬೇತಿಯೇ ಎಂಬ ಸಕಾರಣ ಅನುಮಾನ ಮೂಡುವಂತಿದೆ.

ಜಗತ್ತಿನ ಇನ್ನೂ ಹಲವು ದೇಶಗಳಲ್ಲಿ ಎಮ್ಮೆಗಳನ್ನು ಕೇಂದ್ರೀಕರಿಸಿದ ಆಚರಣೆಗಳಿವೆ. ಎಮ್ಮೆ ಕಾಳಗದ ಹಬ್ಬಗಳು, ಕಾಳಗದ ನಂತರ ಭಾಗವಹಿಸಿದವುಗಳನ್ನು ಬಲಿ ನೀಡಿ ಒಟ್ಟಿಗೇ ಅಡಿಗೆ ಮಾಡಿ ತಿನ್ನುವುದು ಮೊದಲಾದ ಪದ್ಧತಿಗಳು ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷಿಯಾ, ವಿಯೆಟ್ನಾಂ ಮೊದಲಾದ ನಮ್ಮ ದೇಶದಂತೆ ನೀರೆಮ್ಮೆ ಮುಖ್ಯವಾದ ದೇಶಗಳಲ್ಲಿವೆ.

ಜಗತ್ತಿನಲ್ಲಿ ಇನ್ನೂ ಸಾವಿರಾರು ರೀತಿಯ ಪ್ರಾಣಿ ಬಲಿ ಆಚರಣೆಗಳಿವೆ. ಆದರೆ ಪ್ರಾಣಿಗಳನ್ನು ದೇವರೆಂದು ಏಕೆ ಪರಿಗಣಿಸಿದರು ಮತ್ತು ಏಕೆ ಆ ದೇವರುಗಳನ್ನೇ ಬಲಿ ನೀಡಲಾರಂಭಿಸಿದರು ಎಂಬುದನ್ನು ವಿಶ್ಲೇಷಿಸಲು ಪ್ರಾತಿನಿಧಿಕವಾಗಿ ಮೇಲೆ ನೀಡಿದ ಕೆಲ ಉದಾಹರಣೆಗಳು ಸಾಕೆನಿಸುತ್ತದೆ.

ಕರ್ನಾಟಕದಲ್ಲಿ ಕೋಣ ಬಲಿ :
ಕರ್ನಾಟಕದಲ್ಲಿ ಮಾರಮ್ಮ ಮತ್ತು ಇತರ ಕೆಲ “ಅಮ್ಮ” ದೇವತೆಗಳಿಗೆ ಕೋಣನ ಬಲಿ ನೀಡುವ ಪದ್ಧತಿ ಅನೂಚಾನವಾಗಿತ್ತು. ಕಾನೂನುಗಳ ನಿರ್ಬಂಧಗಳಿಂದಾಗಿ ಈಗಲೂ ಹಲವೆಡೆ ಕದ್ದು ಮುಚ್ಚಿ ನಡೆಯುತ್ತಿರುತ್ತದೆ. ನೇಪಾಳದಲ್ಲಿ ಸಾವಿರಾರು ಕೋಣಗಳನ್ನು ಬಲಿ ನೀಡುವ ಜಾತ್ರೆಗಳಿವೆಯಂತೆ.

ಇಲ್ಲಿ ಕೋಣಗಳನ್ನು ಬಲಿ ನೀಡುವ ಪದ್ಧತಿ ಬಹಳಷ್ಟು ಹಿಮ ಕರಡಿ ಬಲಿಗೆ ಹೋಲುತ್ತದೆ. ಇಲ್ಲಿ ಪಟ್ಟದ ಕೋಣ ಎಂದು ನಿರ್ದಿಷ್ಟ ಲಕ್ಷಣಗಳಿರುವ ಒಂದು ಕೋಣವನ್ನು ಊರ ಪಟೇಲರು ಅಥವಾ ಮಾಲಿ ಪಾಟೀಲರು ದೇವತೆಗಾಗಿ ಬಿಡಬೇಕು. ಅದು ಐದು ವರ್ಷಗಳ ಕಾಲ ಯಾವ ನಿರ್ಬಂಧವೂ ಇಲ್ಲದೆ ಯಾರ ಜಮೀನಿನಲ್ಲಾದರೂ ಮೇಯುತ್ತಾ ಕೊಬ್ಬಿ ಬೆಳೆಯಬೇಕು. ಅದನ್ನು ಮಾರಮ್ಮನ ಜಾತ್ರೆ ಸಮಯದಲ್ಲಿ ಹಿಡಿದು ಮೆರವಣಿಗೆ ಮಾಡಿ ಬಲಿ ನೀಡಬೇಕು. ಅದರ ಬಲಿಯ ರಕ್ತವನ್ನು ಅನ್ನದಲ್ಲಿ ಕಲಸಿ ಊರ ಸುತ್ತಾ ಚರಗ ಚೆಲ್ಲಬೇಕು. ಮಾಂಸವನ್ನು ಎಲ್ಲರೂ ಒಟ್ಟಾಗಿ ಅಡಿಗೆ ಮಾಡಿ ತಿನ್ನಬೇಕು ಎಂಬುದು ಬಲಿಯ ತಿರುಳು. ಈ ಕೋಣ ದಲಿತನೆಂದೂ, ಮಾರಮ್ಮ ಬ್ರಾಹ್ಮಣಿ ಎಂದೂ, ದಲಿತ ಬ್ರಾಹ್ಮಣಿಯನ್ನು ಜಾತಿ ಮುಚ್ಚಿ ಮದುವೆಯಾದ ತಪ್ಪಿಗೆ ಬಲಿ ನೀಡುತ್ತಾರೆಂಬ ಪುರಾಣ ಸೃಷ್ಟಿಸಲಾಗಿದೆ. ಅದು ಬೇರೆಯೇ ಕತೆ. ಆದರೆ ಪ್ರಾಣಿ ಬಲಿಗೆ ಸಂಬಂಧಿಸಿ ಇಷ್ಟು ಮಾತ್ರ ಮುಖ್ಯ. ಉಳಿದಂತೆ ಕುರಿ, ಮೇಕೆ, ಕೋಳಿಗಳನ್ನು ಬಲಿ ಕೊಡುವಾಗ ಕೋಣನ ಬಲಿಗೆ  ಇರುವಂತಹ ನಿರ್ದಿಷ್ಟ ಆಚರಣೆಗಳಿಲ್ಲ.

ಪ್ರಾಣಿಗಳನ್ನು ದೈವಗಳೆಂದು ಏಕೆ ಪರಿಗಣಿಸಲಾಯಿತು ?  :

ಇದು ಈ ಲೇಖನದ ಮುಖ್ಯ ತಿರುಳು. ಅರಿವ ಬೆಡಗು ಲೇಖನ ಮಾಲೆಗೆ ಮುಖ್ಯವಾದದ್ದೆಂದರೆ ಅಂದು ಮಾನವರು ಕಂಡುಕೊಂಡ ಅರಿವಿನ ಮಿತಿಗಳು. ಅರಿವಿನ ಸ್ಫೋಟಗಳ ಬಗ್ಗೆ ಆಚ್ಚರಿ, ಮೆಚ್ಚುಗೆ ತೋರಿಸುವಾಗಲೇ ಈ ಅರಿವಿನ ಮಿತಿಗಳು, ಕೊರತೆಗಳು ಅಗಾಧವಾಗಿದ್ದವು. ಈ ಮಿತಿಗಳು ಅಂದಿನಿಂದ ಇಂದಿನವರೆಗೂ ಕಾಡುತ್ತಿರುವ ಪರಿಣಾಮವನ್ನು ಬೀರಿದವು ಎಂಬ ಕಾರಣಕ್ಕೆ.

ಮೇಲಿನೆಲ್ಲ ಪ್ರಾಣಿ ಬಲಿಯ ಉದಾಹರಣೆಗಳನ್ನು ನೋಡುವಾಗ ಈ ಕೆಲ ಸಂಗತಿಗಳು ಎದ್ದು ಕಾಣುತ್ತವೆ –
ಒಂದು, ಹಿಂದಿನ ಲೇಖನಗಳಲ್ಲಿ ವಿವರಿಸಿದಂತೆ ಮಾನವರ ಆದಿಮ ಘಟ್ಟದಲ್ಲಿ ಪ್ರಾಣಿಗಳು ಪ್ರಧಾನ ಆಹಾರ ಮೂಲವಾಗಿದ್ದವು. ಮಾನವರ ಮೆದುಳಿನ ಬೆಳವಣಿಗೆ ಮತ್ತು ಮಾನವರ ಆಯಸ್ಸಿನ ಹೆಚ್ಚಳ, ಜನಸಂಖ್ಯೆಯ ಬೆಳವಣಿಗೆ ಇವುಗಳಿಗೆ ಪ್ರಾಣಿಮೂಲ ಆಹಾರ ಮತ್ತು ಬೇಟೆಯೇ ಪ್ರಧಾನ ಸಾಧನಗಳಾಗಿದ್ದವು.

ಎರಡು, 70,000-30,000 ವರ್ಷಗಳ ಪ್ರಾಚೀನ ಶಿಲಾಯುಗದ ಕೊನೆಯ ಹಂತವಾದ  ಮೊದಲ ಅರಿವಿನ ಸ್ಫೋಟದ ನಂತರ ಮಾನವರ ಬೇಟೆಯ ಆಯುಧಗಳ ಮತ್ತು ಕೌಶಲ್ಯಗಳ ‌ಅಭಿವೃದ್ಧಿ, ಮಾನವ ಲೋಕ ಮೊತ್ತ ಮೊದಲಿಗೆ ಕಂಡ ಅಜ್ಜಿ,ಅಜ್ಜಂದಿರಿಂದ ದಶಕಗಳ ಕಾಲದ ವೀಕ್ಷಣೆ, ಗಮನ,ತುಲನೆಗಳಿಂದ ಪ್ರಾಣಿ,ಸಸ್ಯ ಲೋಕ, ಹವಾಮಾನ,ಋತುಗಳ ಅರಿವು ಶೇಖರವಾಗಿದ್ದು ಮತ್ತು  ಮುಂದಿನ ತಲೆಮಾರಿಗೆ ದಾಟಿಸಲು ಸಾಧ್ಯವಾಗಿದ್ದು ಇವೆರಡೂ ಮೊದಲ ಅರಿವಿನ ಸ್ಫೋಟದ ಮಹತ್ತರ ಸಾಧನೆಗಳು.‌

ಮಾನವರು ಕಂಡುಕೊಂಡದ್ದು ಬಹಳ ಬಹಳ ಸ್ವಲ್ಪ. ಇಂದು 20-21 ನೆಯ ಶತಮಾನದ ಅಗಾಧ ಅರಿವಿನ ಸ್ಫೋಟದ ನಂತರವೂ ಮಾನವರು ತಿಳಿದುಕೊಳ್ಳಬೇಕಾದ್ದು, ಶೋಧಿಸಬೇಕಾದ್ದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಇನ್ನೂ ಅಗಾಧವಾಗಿದೆ ಎಂಬ ಅರಿವು ಮಾನವರಿಗೆ ಮೂಡಿದೆ. ಅಂದ ಮೇಲೆ ಅಂದಿನ ಕಲ್ಲಿನ ಆಯುಧಗಳು , ಪ್ರಕೃತಿಯ ಬಗೆಗಿನ ಜ್ಞಾನ ಬಹಳ ಸೀಮಿತವಾಗಿತ್ತು. ಅದು ಅಜ್ಞಾನವಲ್ಲ. ಮುಗ್ಧತೆಯ ಆಯಾಮವುಳ್ಳ ಅರಿವಿನ ಮಿತಿ.

ಅದರ ಫಲವಾಗಿ ಹಲವೊಮ್ಮೆ ಅವರಿಗೆ ಬೇಟೆಗಳು ದಕ್ಕುತ್ತಿದ್ದವು. ಹಲವೊಮ್ಮೆ ಕೈ ತಪ್ಪಿ ಹೋಗುತ್ತಿದ್ದವು. ಬೇಟೆಗಳು ಸಿಗದ ಪರಿಸ್ಥಿತಿಯಲ್ಲಿ ಇಡೀ ಬುಡಕಟ್ಟೇ ಅಸಹಾಯಕವಾಗಿ ಹಸಿವಿನ ದವಡೆಗೆ ತುತ್ತಾಗುತ್ತಿದ್ದವು. ಬೇಟೆಯ ಕೊರತೆಯ ಹಾಗೂ  ಹಸಿವಿನ ಅವಧಿ ಹಲವು ದಿನಗಳು ದಾಟಿದವೆಂದರೆ ಸಾವುಗಳು, ಶಕ್ತಿ ಹೀನತೆ ಮತ್ತು ರೋಗಗಳು.

ಇವುಗಳಿಂದಾಗಿ ಬೇಟೆ ದೊರಕಿದ ಸಂದರ್ಭ ಅಂದಿನ ಮಾನವರಿಗೆ ಹಿಂದಿನ ಹಲವು ದಿನ, ವಾರಗಳು ಏನೆಲ್ಲಾ ಪ್ರಯತ್ನ ಪಟ್ಟರೂ ತಮ್ನೆಲ್ಲಾ ಅನುಭವ, ಆಯುಧ ತಾಂತ್ರಕತೆ ಬಳಸಿದರೂ ಸಿಗದ ಬೇಟೆ ಈಗ ಹೇಗೆ ಸಿಕ್ಕಿತು ?  ಈಗ ಬೇಟೆಯಲ್ಲಿ ಯಶಸ್ಸು ಕಂಡಿದ್ದಕ್ಕೆ ನಾವಲ್ಲ ಕಾರಣ.  ಬೇಟೆಯ ಪ್ರಾಣಿಗಳು ನಮ್ಮನ್ನು ಬದುಕಿಸಲು ತಾವಾಗಿ ಬಂದು ಸಿಕ್ಕಿವೆ ಎಂಬ ಭಾವನೆ ಈ ಮಾನವ ಸಮುದಾಯಗಳಲ್ಲಿ ಮೂಡಿತು. ಪ್ರಕೃತಿಯ ವೈವಿಧ್ಯಮಯ ಮತ್ತು ಬಹು ಆಯಾಮಗಳ ಕಾಂಪ್ಲೆಕ್ಸ್ ವಾಸ್ತವದ ಬಗ್ಗೆ ಇನ್ನೂ ಮೂಡದ ಅರಿವು, ಅರಿವಿನ ಮಿತಿ, ಕೊರತೆಗಳು ಇಂತಹ  ಭಾವನೆಗಳಿಗೆ ಕಾರಣವಾದವು.

ಅದರಿಂದಾಗಿ ಪ್ರಾಣಿಗಳನ್ನು, ತಮ್ಮ ಆಹಾರವಾದ ಪ್ರಾಣಿಗಳನ್ನು ದೈವಗಳೆಂದೇ ಮಾನವರು ಭಾವಿಸಿದರು. ಅಷ್ಟೇ ಅಲ್ಲ ಆ ದೈವಗಳಿಗೆ ಆ ದೈವಗಳನ್ನೇ ( ಪ್ರಾಣಿ ರೂಪದ ದೈವಗಳಿಗೆ ಅದೇ ಪ್ತಾಣಿಗಳನ್ನೇ ) ಬೇಟೆಯಾಡಿ ಬಲಿ ನೀಡಿದರು. ಎಡೆ‌ ಅರ್ಪಿಸಿದರು.  ತಾವೂ ಬದುಕಿದರು. ಬೆಳೆದರು. ವಿಷ್ಣುವಿನ ಮೊದಲ ಮೂರು ಅವತಾರ ಮೀನು,ಆಮೆ,ಹಂದಿ ಹೀಗೆ ಅಂದಿನ ಮಾನವರ ಮುಖ್ಯ ಆಹಾರದ ಮೂಲಗಳಾಗಿ ದೈವಗಳಾದದ್ದು.
ಮುಂದಿನ ಸಂಚಿಕೆ- ಹೊಸ ಆವಿಷ್ಕಾರ, ಶೋಧಗಳೇ ದೈವಗಳಾದ ಬಗೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

May 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: