ಜಿ ಎನ್ ನಾಗರಾಜ್ ಅಂಕಣ- ನಿಸಾರ್ ಅಹಮದ್‌ರವರ ಒಂದು ಕವನ ‘ಅ’

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ಬುರ್ಖಾ ಪದ್ಧತಿಯ ಉಗಮ ಮತ್ತು ಸಮಾಜ ಸುಧಾರಣೆ-

ನಿಸಾರ್ ಅಹಮದ್‌ರವರ ಒಂದು ಕವನ ‘ಅಮ್ಮ, ಆಚಾರ ಮತ್ತು ನಾನು’ ಹೀಗೆ ಹೇಳುತ್ತದೆ :
ಅಮ್ಮ ಕಟ್ಟಾ ಸಂಪ್ರದಾಯಸ್ಥೆ

…………

ಬುರ್ಖಾ ತೊಡದೆ ಬೀದಿಯಲಿ
ಹಾದುಹೋಗುವ ನಮ್ಮವರ
ಹೆಣ್ಣುಗಳ ಕಂಡು ಕಿಡಿಯಾಗಿ-
ಹೆಚ್ಚು ಕಲಿತ ಬಜಾರಿಗಳ ಹಣೆಬರಹವೇ ಇಷ್ಟು:
ದೆರವರು ಧರ್ಮಗಳ ಭಯವಿರದೆ ಎಳ್ಳಷ್ಟೂ
ಗಂಡಸರೆದುರು ಮೈ ಪ್ರದರ್ಶಿಸುವ ಗಂಡು  ಬೀರಿಗಳು ಗಂಡಂದಿರ ಜೊತೆಯಲ್ಲಿ ಬಾಳಿಯಾರೇ ?
ಇಂತವರ ನನ್ನ ಮಗನಿಗೆಂದೂ ತಾರೆ
……….
ಎಂದು ಪ್ರತಿಜ್ಞೆ ಮಾಡಿದಾಗ ಮಗ ಹಠ ಹಿಡಿದು ಡಬಲ್ ಗ್ರಾಜುಯೇಟ್ ಹುಡುಗಿಯನ್ನೇ ಆರಿಸುತ್ತಾನೆ. ತಾಯಿ ಅನಿವಾರ್ಯವಾಗಿ ಒಪ್ಪಿಗೆ ಸೂಚಿಸುತ್ತಾಳೆ. ಮದುವೆಯಾಗುತ್ತದೆ. ಮದುವೆಯ ನಂತರ ಮೊದಲ ಬಾರಿಗೆ ಹೊಸ ಜೋಡಿ ಮನೆಯಿಂದ ಹೊರ ಹೊರಟಾಗ-
ನನ್ನಾಕೆ ತೋಳಿಲ್ಲದ ರವಕೆ ತೊಟ್ಟು
ಭಾರಿ ಸೀರೆಯನ್ನು ಸೊಂಟದ ಕೆಳಗೆ ನಾಜೂಕಾಗಿ ಕಟ್ಟಿ
……
ಹೊಸಿಲ ದಾಟಿ ಇನ್ನೇನು ದಾಟಬೇಕು – ಆಗ
‘ಬಂದೆ ತಡೆಯಿರಿ’ ಎಂದು ಒಳಗೋಡಿ
ಬಂದು ‘ನಡೆಯಿರಿ’ ಎಂದಾಗ
ತಲೆಸುತ್ತಿ ನಾಲಗೆ ಬತ್ತಿ ನಾನಾದೇ ಮೂಕ
ನೋಡಿದರೆ
ತೊಟ್ಟಿದ್ದಳು ನಮ್ಮಮ್ಮನ ಬುರ್ಖಾ

ಈ ಕವನ ಮುಸ್ಲಿಂ ಸಮುದಾಯದ ಕುಟುಂಬದ ಒಳಗೆ ನಡೆಯುವ ಆಧುನಿಕತೆ ಮತ್ತು ಸಂಪ್ರದಾಯ ಬದ್ಧತೆಗಳ ನಡುವಣ ಸಂಘರ್ಷವನ್ನು ನವಿರಾಗಿ ಬಿಚ್ಚಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಬುರ್ಖಾ ಚರ್ಚೆಯ, ಮನೆಯೊಳಗಿನ, ಮುಸ್ಲಿಂ ಸಮುದಾಯದ ಒಳಗಿನ ಸಂಘರ್ಷದ ವಿಷಯ ಮಾತ್ರವಲ್ಲದೆ ಬೀದಿಯ ಸಂಘರ್ಷಗಳಿಗೆ ಕಾರಣವಾಗುತ್ತಿದೆ.

ಮುಸ್ಲಿಮರ ಮೇಲೆ ಧಾಳಿ‌ ಮಾಡುವ, ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ವಿಷಯವಾಗುತ್ತಿದೆ. ಅವರನ್ನು ಶಿಕ್ಷಣದಿಂದ ಹೊರದೂಡುವುದಕ್ಕೆ ಕಾರಣವಾಗುತ್ತಿದೆ. ದನಗಳ ಮಾಂಸ ತಿನ್ನುವುದು, ತಲಾಖ್, ನಾಲ್ಕು ಜನರನ್ನು ಮದುವೆಯಾಗುವ ಅವಕಾಶ, ಕುಟುಂಬ ಯೋಜನೆಯ ನಿರಾಕರಣೆ, ಸಾಮಾನ್ಯ ನಾಗರಿಕ ಸಂಹಿತೆ, ಲವ್ ಜಿಹಾದ್ ಇತ್ಯಾದಿ ಅನೇಕವು ಸೇರಿ ಒಂದು ಮುಸ್ಲಿಂ ದ್ವೇಷದ ಪ್ಯಾಕೇಜ್ ಆಗಿವೆ. ಈ ಪ್ಯಾಕೇಜ್‌ಗೆ  ಆಗಾಗ್ಗೆ  ಹೊಸ ಶಸ್ತ್ರಾಸ್ತ್ರಗಳು ಸೇರ್ಪಡೆಯಾಗುತ್ತಿರುತ್ತವೆ. ಒಂದೊಂದು ಸಮಯದಲ್ಲಿ ಒಂದೊಂದು ಬಹಳ ಪ್ರಚಲಿತವಾಗುತ್ತವೆ.

ಈಗ ಸದ್ಯ ಯುಪಿ,ಅಸ್ಸಾಂ ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಪ್ರೋತ್ಸಾಹ ಎಬ ಹೆಸರಿನಲ್ಲಿ ಕೈಗೊಂಡ ಕ್ರಮಗಳಿಂದ ಅದು ಮುನ್ನೆಲೆಗೆ ಬಂದಿದೆ. ಬುರ್ಖಾ ಭಾರತದಲ್ಲಿ ಮಾತ್ರವೇ ಅಲ್ಲದೆ ಫ್ರಾನ್ಸ್ ಮೊದಲಾದ ಯುರೋಪಿನ ಹಲವು ದೇಶಗಳಲ್ಲಿ ನಿಷೇಧ ಮೊದಲಾದ ಕ್ರಮಗಳ ಮೂಲಕ ಜಾಗತಿಕ ವಿಷಯವಾಗಿದೆ. ಮುಸ್ಲಿಮರು ಅಲ್ಪ ಸಂಖ್ಯಾತರಾಗಿರುವ ದೇಶಗಳಲ್ಲಿ ಮಾತ್ರವೇ ಅಲ್ಲದೆ ಮುಸ್ಲಿಮರು ಬಹು ಸಂಖ್ಯಾತರಾಗಿರುವ ದೇಶಗಳಲ್ಲಿ ಕೂಡಾ ನಿಷೇಧದ ಕಾನೂನು, ಅದರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಹೀಗೆ ಬುರ್ಖಾ ಒಂದು ಜಾಗತಿಕ ವಿಷಯವಾಗಿದೆ.

ಕರ್ನಾಟಕದಲ್ಲಿ ಆಗಾಗ್ಗೆ ಕಾಲೇಜುಗಳಲ್ಲಿ ಕೋಮುವಾದಿ ಸಂಘಟನೆಗಳು ಬುರ್ಖಾ ಧರಿಸಿದ ವಿದ್ಯಾರ್ಥಿನಿಯರ ವಿರುದ್ಧ ಗದ್ದಲ ಎಬ್ಬಿಸುವುದು, ಕಾಲೇಜುಗಳು ನಿಷಯ ಹೇರುವುದು ಇಂತಹ ಕ್ರಮಗಳ ಮೂಲಕ ಸುದ್ದಿಯಾಗುತ್ತಿದೆ. ಕೆಲ ದಿನಗಳಿಂದ ಜಾಲತಾಣಗಳ ಚರ್ಚೆಯ ವಿಷಯವಾಗಿದೆ. ಮಹಿಳೆಯರು, ಪುರುಷರು, ಹಿಂದೂ ಧರ್ಮ, ಮುಸ್ಲಿಂ ಧರ್ಮ ಮೂಲದವರು, ಅಲ್ಲದವರು, ಸಾಹಿತಿಗಳು, ಚಿಂತಕರು ಹೀಗೆ ಹಲವಾರು ಜನರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ವಾದ ವಿವಾದ ಬಿರುಸಾಗಿ ನಡೆದಿದೆ. ಈ ಹಿನ್ನೆಲೆಯಲ್ಲಿ ಮೊದಲು ಬುರ್ಖಾ ಬಗ್ಗೆ ಪ್ರಸ್ತಾಪಿಸ ಬಯಸುತ್ತೇನೆ.

ಮುಸ್ಲಿಂ ಮಹಿಳೆಯರು ತಮ್ಮ  ಧರ್ಮದ ಕಟ್ಟಲೆಗಳಿಗನುಗುಣವಾಗಿ ಹಿಜಾಬ್, ನಿಕಾಬ್, ಬುರ್ಖಾ ಮೊದಲಾದ ವಸ್ತ್ರಗಳನ್ನು ತೊಡುತ್ತಾರೆ. ಈ ಕಟ್ಟಲೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇವುಗಳ ಮೂಲಕ್ಕೆ, ಈ ಪದ್ಧತಿಗಳು ಹುಟ್ಟಿದ ಭೌಗೋಳಿಕ, ಪ್ರಾಕೃತಿಕ, ಸಾಮಾಜಿಕ ಪರಿಸರದ ಕಡೆಗೆ ಹೋಗಬೇಕಾಗುತ್ತದೆ. ರಾಮಾಯಣದಂತಹ ಅತ್ಯಂತ ಹೆಚ್ಚು ಪೂಜಿತವಾದ ಗ್ರಂಥದ  ವಿಷಯದಲ್ಲಾಗಲಿ, ಮಾರಮ್ಮ, ಎಲ್ಲಮ್ಮ ಮೊದಲಾದ ಜನಪದರ ದೇವತೆಗಳ ವಿಷಯದಲ್ಲಾಗಲಿ ಅವುಗಳ ಇಂದಿನ ಸ್ವರೂಪ, ಪ್ರಭಾವಗಳನ್ನು ಅರ್ಥ ಮಾಡಿಕೊಳ್ಳಲು, ಸತ್ಯವನ್ನು ಅನ್ವೇಷಿಸಲು ಈ ವಿಧಾನ ಸಹಾಯ ಮಾಡಿದೆ.

ಎಲ್ಲರಿಗೂ ಗೊತ್ತಿರುವಂತೆ ಇಸ್ಲಾಂ ಹುಟ್ಟಿದ ಪ್ರದೇಶ ಅರಬ್ ಮರುಭೂಮಿ ಪ್ರದೇಶ. ಈ ಪ್ರದೇಶದಲ್ಲಿ ಇತಿಹಾಸ ಪೂರ್ವ ಕಾಲದಿಂದ ರೂಪುಗೊಂಡ ಜನಜೀವನ ತನ್ನ ಬದುಕಿನ‌ ಹಾಗೂ ಸಾಮಾಜಿಕ ವಿಧಾನಗಳನ್ನು ರೂಪಿಸಿಕೊಳ್ಳುತ್ತದೆ. ಇಂದು ಮುಸ್ಲಿಮ್ ಸಮುದಾಯಗಳಲ್ಲಿ ಕಾಣುವ ಹಲವು ಪದ್ಧತಿಗಳ ಮೇಲೆ ಮರುಭೂಮಿಯ ಬದುಕು ತನ್ನ ಅಳಿಸಲಾಗದ ಮುದ್ರೆಯನ್ನು ಒತ್ತಿರುವುದನ್ನು ಕಾಣಬಹುದು. ಅವರ ಊಟದ ವಿಧಾನ, ಅದರ ಉಣಿಸು, ತಿನಿಸುಗಳು, ಕೈ ತೊಳೆದುಕೊಳ್ಳುವ ರೀತಿ, ಅವರ ಅತ್ತರು, ಸುನ್ನತ್ ಎಂಬ ಪುರುಷ ಲಿಂಗದ ಕ್ರಿಯೆ, ಆಜಾನ್ ಎಂಬ ಪ್ರಾರ್ಥನೆಯ ಕರೆ, ತಲಾಖ್, ನಾಲ್ಕು ಮಹಿಳೆಯರನ್ನು ಮದುವೆಯಾಗುವ ಅವಕಾಶ  ಹೀಗೆ ಹಲ ಹಲವು ಪದ್ಧತಿಗಳು ಮರುಭೂಮಿಯ ಬದುಕಿನ ಮೂಲದ ಗುರುತುಗಳಿವೆ. ಇವುಗಳಲ್ಲನೇಕವು ಇಸ್ಲಾಂ ಪೂರ್ವ ಕಾಲಘಟ್ಟದಿಂದ ರೂಢವಾದವು.

ಈಗ ನಮ್ಮ ಚರ್ಚೆಗೆ ಅಗತ್ಯವಾದ ಮಹಿಳೆಯರು ತೊಡುವ ವಿಶೇಷ ಉಡುಪುಗಳ ಮೂಲದ ಬಗ್ಗೆ ತಿಳಿಯೋಣ. ಮರುಭೂಮಿ ಪ್ರದೇಶದ ದೇಶಗಳ ಮಹಿಳೆಯರ ಉಡುಪಿನ ಬಗ್ಗೆ ತಿಳಿದುಕೊಳ್ಳುವುದಕ್ಕೆ ಪುರುಷರ ಉಡುಪುಗಳತ್ತ ಕಣ್ಣು ಹಾಯಿಸುವುದು ಅಗತ್ಯ. ಇಂದಿನ ಆಧುನಿಕ ಯುಗದಲ್ಲಿ ಹಲವರ ಉಡುಪು ಬೇರೆ ಬೇರೆ ರೂಪು ಪಡೆದಿರಬಹುದಾದರೂ ಇಂದೂ ಕೂಡಾ ಅಲ್ಲಿಯ ಬಹು ಸಂಖ್ಯಾತ ಪುರುಷರ ಉಡುಪು ಒಂದರ ಮೇಲೊಂದರಂತೆ ಹಲವು ಪದರುಗಳನ್ನು ಉಳ್ಳದ್ದಾಗಿದೆ. ಒಳಗೆ ಅಚ್ಚ ಬಿಳಿಯ ಉಡುಪುಗಳಿದ್ದರೂ  ಅದರ ಮೇಲ್ಪದರ ಬಣ್ಣದ ,ದಪ್ಪ ಬಟ್ಟೆಯದಾಗಿರುತ್ತದೆ. ತಲೆ ಮೇಲೊಂದು ಬಟ್ಟೆ ತಲೆಯಿಂದ ಕತ್ತಿನವರೆಗೆ ಇಳಿಬಿದ್ದಿರುತ್ತದೆ. ಅದು ಜಾರದಂತೆ ತಲೆಯ ಮೇಲೆ ಒಂದು ವಿಶೇಷ ಬಟ್ಟೆ ಅಥವಾ ಹಗ್ಗದಂತಹದೊಂದರಿಂದ ಕಟ್ಟಿ ಹಾಕಲಾಗಿರುತ್ತದೆ.

ಈಗ ಈ ಚಿತ್ರವನ್ನು ಮುಸ್ಲಿಂ ಮಹಿಳೆಯರು ಧರಿಸುವ ತಲೆ ಮತ್ತು ಕತ್ತಿನ ಸುತ್ತ ಸುತ್ತಿಕೊಳ್ಳುವ ಬಟ್ಟೆ, ಹಿಜಾಬ್‌ಗೆ ಹೋಲಿಸಿದರೆ ಆಕಾರದಲ್ಲಿ ಬೇರೆಯಾದರೂ ಉದ್ದೇಶ ಒಂದೇ- ತಲೆಯಿಂದ ಕುತ್ತಿಗೆಯ ಭಾಗವನ್ನು ರಕ್ಷಿಸುವುದು ಎಂಬುದು ಗೋಚರವಾಗದಿರದು. ಮರುಭೂಮಿಯ ಬಿಸಿಲಿನ ಝಳ, ಬೀಸುವ ತೇವವಿಲ್ಲದ ಬಿಸಿ ಗಾಳಿ, ಹಸಿರು ಆವರಿಸದ ಮರಳು ಭೂಮಿಯಿಂದ ಗಾಳಿಯೊಳಗೆ ತೂರಿಬರುವ ಅಪಾರ ಮರಳ ಕಣಗಳ ಪರಿಸರದ ಮನುಷ್ಯನ ಬದುಕನ್ನು ಕಲ್ಪಿಸಿಕೊಳ್ಳಿ. ಹಾಗೆಯೇ ಈ ಮರುಭೂಮಿಯ ಕೋರೈಸುವ ಚಳಿಗಾಲವೂ ಹಾಗೂ ಅದರ ಕುಳಿರ್ಗಾಳಿಯೂ ಭಯಂಕರ.

ಜೀವದಿಂದಿರಲು ಈ ರೀತಿಯ ತಲೆಯ ಉಡುಪು ಗಂಡಸರು, ಹೆಂಗಸರಿಬ್ಬರಿಗೂ ಅನಿವಾರ್ಯ ಎಂಬುದು ಆಗ ಅರ್ಥವಾಗುತ್ತದೆ.
ಈ ರೀತಿಯ ಉಡುಪು ಕೂಡಾ ಸಾವಿರಾರು ವರ್ಷಗಳಲ್ಲಿ ವಿಕಾಸವಾಗುತ್ತಾ ಬಂದಿದೆ. ಈ ವಿಸ್ತಾರ ಮರುಭೂಮಿಯ ವಿವಿಧ ಪ್ರದೇಶಗಳಲ್ಲಿ ನೆಲಸಿದ್ದ ಬುಡಕಟ್ಟುಗಳಲ್ಲಿ ಇದೇ ಉಡುಪಿನ ಸ್ವಲ್ಪ ಭಿನ್ನ ಭಿನ್ನ ರೂಪಗಳಿರುವುದು ಸಾಧ್ಯ.

ಇಸ್ಲಾಂ ಧರ್ಮ ಉಗಮವಾದ ‌ಸಮಯದಲ್ಲಿ, ಒಂದರೊಡನೊಂದು ಕಾದಾಡುತ್ತಿದ್ದ ವಿವಿಧ ಬುಡಕಟ್ಟುಗಳನ್ನು ಒಂದು ಧರ್ಮದ ಕಟ್ಟಿಗೆ ತರುವ ಪ್ರಯತ್ನದಲ್ಲಿ ಪೈಗಂಬರರು ಉಡುಪಿನ‌ ಕಡೆಗೂ ಗಮನ‌ಹರಿಸಿ ಒಂದು ಸಾಮಾನ್ಯ ಸೂತ್ರವನ್ನು ಸೂಚಿಸಿದ್ದಾರೆ. ಕುರಾನಿನಲ್ಲಿ, ಹಡಿತ್ ಎಂಬ ಗ್ರಂಥಗಳಲ್ಲಿ ಮಹಿಳೆಯರ ಉಡುಪಿನ ಬಗ್ಗೆ ಇಂತಹ ಸಾಮಾನ್ಯ (ಜನರಲ್) ಸ್ವರೂಪದ ಉಲ್ಲೇಖವಿದೆ. ಅದು ಹಿಜಾಬ್, ಬುರ್ಖಾ, ನಿಖಾಬ್ ಮುಂತಾದ ಯಾವ ನಿರ್ದಿಷ್ಟ ರೂಪದ ಉಡುಪನ್ನೂ ಉಲ್ಲೇಖಸುವುದಿಲ್ಲ. ಅದು ‘ಮಹಿಳೆಯರು ತಮ್ಮ ಖಾಸಗಿ ಅಂಗಾಂಗಗಳನ್ನು ಮುಚ್ಚಿಕೊಳ್ಳಬೇಕು, ಹೊರಗೆ ಕಾಣುವಂತಹ ಸೌಂದರ್ಯವನ್ನು ಬಿಟ್ಟು ಬೇರೆಲ್ಲವನ್ನು ಪ್ರದರ್ಶಿಸಬಾರದು. ತಮ್ಮ ಎದೆಯನ್ನು ಖಿಮರ್ (ವೇಲ್‌ನಿಂದ) ಮುಚ್ಚಿಕೊಳ್ಳಬೇಕು’ ಎಂದಷ್ಟೇ ಹೇಳಿದೆ.

ಹಡಿತ್‌ನಲ್ಲಿ ಮುಖ, ಕೈ ಮತ್ತು ಪಾದಗಳನ್ನು ಹೊರತುಪಡಿಸಿ ಉಳಿದ ದೇಹ ಮುಚ್ಚುಂತಹ ಉಡುಪು ಧರಿಸಬೇಕೆಂದು ಹೇಳಲಾಗಿದೆಯಂತೆ. ಆದರೆ ಮುಂದೆ ಎಲ್ಲ ಬುಡಕಟ್ಟುಗಳು ಒಂದುಗೂಡಿದ ಮೇಲೆ ಬೆಳೆದ ವಾಣಿಜ್ಯ, ವಹಿವಾಟು, ಸಂಪತ್ತಿನ ಫಲವಾಗಿ ರೂಪುಗೊಂಡ ದೊಡ್ಡ ಸಾಮ್ರಾಜ್ಯಗಳ ಕಾಲದಲ್ಲಿ ಸಾಮ್ರಾಟರುಗಳು ಹಲವು ಪತ್ನಿ,ಉಪಪತ್ನಿಯರುಗಳನ್ನು ಹೊಂದಲಾರಂಭಿಸಿದರು. ಇದನ್ನೇ ಅವರ ಆಸ್ಥಾನದ ಮನ್ನೆಯರು, ಶ್ರೀಮಂತರುಗಳೂ ಅನುಸರಿಸಿದರು.

ಈ ಹಲವಾರು ಸ್ತ್ರೀಯರ ಲೈಂಗಿಕತೆಯ ಮೇಲೆ ನಿಯಂತ್ರಣ ಸಾಧಿಸಲು ಜನಾನಾ – ಅರಮನೆಯ ಒಂದು ಭಾಗವನ್ನು ಸಾಮ್ರಾಟನ ಹೊರತಾಗಿ ಬೇರಾರಿಗೂ ಪ್ರವೇಶವಿಲ್ಲದಂತೆ ಮಾಡುವುದು, ಖೋಜಾಗಳನ್ನು ಕಾವಲಿಗಿಡುವುದು ಪರ್ದಾ – ಒಂದು ಪರದೆಯ ಹಿಂದಿನಿಂದ ಮಾತ್ರ ಪುರುಷರೊಂದಿಗೆ ಮಾತನಾಡುವುದು ರಾಜಾಸ್ಥಾನವನ್ನೂ ಕೂಡಾ ಪರದೆಯ ಹಿಂದಿನಿಂದ ವೀಕ್ಷಿಸುವುದು ಮೊದಲಾದ ಕಠಿಣ ನಿರ್ಬಂಧಗಳಿಗೊಳಪಡಿಸಲಾಯಿತು.

ಆಗ ಇಂತಹ ರಾಣೀವಾಸದ ಮತ್ತು ಇತರ ಶ್ರೀಮಂತ ಸ್ತ್ರೀಯರು ಹೊರಗೆ ಸಂಚರಿಸಬೇಕಾದಾಗ ಈ ಪರ್ದಾ ಪದ್ಧತಿಯ ಮುಂದುವರೆದ ರೂಪವಾಗಿ ಮುಖವನ್ನೂ ಸೇರಿಸಿ ಮೈ ಪೂರ್ತಿ ಮುಚ್ಚಿಕೊಳ್ಳುವ ನಿಯಮಗಳು ಅಸ್ತಿತ್ವಕ್ಕೆ ಬಂದಿವೆ. ಇದನ್ನು ನಂತರ ಇತರೆಲ್ಲ ಸ್ತ್ರೀಯರೂ ಅನುಸರಿಸಬೇಕೆಂಬ ಕಡ್ಡಾಯ ಮಾಡಲಾಯಿತು. ಇದನ್ನು 9-10 ನೆಯ ಶತಮಾನದಲ್ಲಿ ಜಾರಿಗೆ ತರಲಾಯಿತೆಂದು ಕೆಲ ಇತಿಹಾಸಕಾರರು ಹೇಳುತ್ತಾರೆ. ಇದೇ ಕಾಲದಲ್ಲಿ ಕುರಾನಿನ ‘ಹೊರಗೆ ಕಾಣುವಂತಹ ಸೌಂದರ್ಯ’ ಎಂಬ ಪದಗಳಿಗೆ ಮುಖವೂ ಸೇರಿದೆ ಎಂದು ಕೆಲ ಇಸ್ಲಾಂ ಧಾರ್ಮಿಕ ಪಂಡಿತರು ಅರ್ಥೈಸಿದರು.

ಈ ಕಾಲದಲ್ಲಿ ನಿಖಾಬ್, ಬುರ್ಖಾಗಳಂತಹ ಉಡುಪುಗಳು ಅಸ್ತಿತ್ವಕ್ಕೆ ಬಂದವು. ಬುರ್ಖಾ ಮೊದಲು ಅಸ್ತಿತ್ವಕ್ಕೆ ಬಂದದ್ದು ಇರಾನಿನಲ್ಲಿ ಎಂಬ ವಾದವೂ ಇದೆ. ಹೀಗೆ ರಾಜಪ್ರಭುತ್ವ ಕಾಲದ ಪುರುಷಾಧಿಪತ್ಯಕ್ಕೆ ಸಾಮ್ರಾಟರುಗಳ, ಶ್ರೀಮಂತರುಗಳ ಸ್ತ್ರೀ ಲೋಲುಪತೆಗೆ ಧಾರ್ಮಿಕ ಕಟ್ಟಳೆಯ ಮುದ್ರೆ ಬಿದ್ದಿತು. ಪ್ರಾಕೃತಿಕ ಪರಿಸರದ ಅವಶ್ಯಕತೆಯ ಭಾಗವಾಗಿ ರೂಪುಗೊಂಡ ಉಡುಪಿಗೆ ಪುರುಷಾಧಿಪತ್ಯದ ಅಡಿಯಲ್ಲಿ ಧಾರ್ಮಿಕ ರೂಪ, ದೇವರು, ಸ್ವರ್ಗ, ನರಕಗಳ ಭಯ ಅಪ್ಪಿ ಹಿಡಿದುಕೊಂಡಿತು. ಅನುಲ್ಲಂಘನೀಯವಾಯಿತು. ಅಷ್ಟೇ ಅಲ್ಲ, ಇಸ್ಲಾಂ ಹಬ್ಬಿದೆಡೆಗೆಲ್ಲ ಬುರ್ಖಾ, ನಿಖಾಬ್‌ಗಳೂ ಹಬ್ಬಿದವು.

ಮರುಭೂಮಿಯ ಜೀವನದ ಅನಿವಾರ್ಯವೊಂದು ಅಂತಹ ಪರಿಸ್ಥಿತಿಯಿಲ್ಲದ, ಅದರ ಅಗತ್ಯವೇ ಇಲ್ಲದ ಪ್ರದೇಶಗಳಲ್ಲಿಯೂ ಕಡ್ಡಾಯವಾದದ್ದು ವಿಪರ್ಯಾಸ. ಆದರೆ ಈ ವ್ಯಾಖ್ಯಾನವನ್ನು ಕೆಲ ಪಂಥಗಳು ಒಪ್ಪಲಿಲ್ಲ. ಇಲ್ಲಿಯವರೆಗೂ ಒಪ್ಪಿಲ್ಲ. ಈ ಧಾರ್ಮಿಕ ಪಂಡಿತರು ಕುರಾನಿನ ಪ್ರಕಾರ ಹಿಜಾಬ್ ಸಾಕು ಎಂದು ವಾದಿಸುತ್ತಾರೆ.

ಭಾರತದಲ್ಲಿ ಕೂಡಾ ಸಾವಿರಾರು ವರ್ಷಗಳ ಹಿಂದೆ ರಾಜಪ್ರಭುತ್ವ ಸ್ಥಾಪನೆ,ಸಾಮ್ರಾಜ್ಯಗಳ ವಿಸ್ತರಣೆಯೊಂದಿಗೆ ಹಲವಾರು ರಾಣಿಯರ, ಉಪಪತ್ನಿಯರ ಅಂತಃಪುರಗಳು ರೂಪುಗೊಂಡದ್ದನ್ನು ನೆನಪಿಸಿಕೊಳ್ಳೋಣ. ಇಂತಹ ಪುರುಷಾಧಿಪತ್ಯದಲ್ಲಿ, ಶ್ರೀಮಂತರ ಸ್ವತ್ತುಗಳಾದ ಸ್ತ್ರೀಯರು ಅವಗುಂಟನ ಎಂಬ ವಸ್ತ್ರವನ್ನು ತಲೆಯ ಮೇಲಿಂದ ಎಳೆದುಕೊಂಡು ಮುಖ ಮುಚ್ಚಿಕೊಳ್ಳುವಂತೆ ಧರಿಸುವ ಪದ್ದತಿ ರೂಪುಗೊಂಡಿತು. ರಾಮಾಯಣ ಮಹಾಕಾವ್ಯ, ಮೃಚ್ಛಕಟಿಕ, ಕಾಳಿದಾಸನ, ಭಾಸನ ನಾಟಕಗಳಲ್ಲಿ ಸ್ತ್ರೀಯರು ಅವಗುಂಟನ‌ ಧರಿಸುತ್ತಿದ್ದರೆಂಬ ಉಲ್ಲೇಖಗಳು ಗಣನೀಯ ಸಂಖ್ಯೆಯಲ್ಲಿವೆ.

ಈ ಅವಗುಂಟನ, ಗೂಂಗಟ್ ಎಂಬ ಪದ್ಧತಿಯಾಗಿ ಜನಸಾಮಾನ್ಯರ ನಡುವೆ ಇಂದೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಆಚರಣೆಯಲ್ಲಿದೆ. ಮದುವೆಯ ಸಮಯದಲ್ಲಿ ತವರು ಮನೆಯಿಂದ ಒಂದು ಗುಂಗಟ್‌ನ್ನು ಮುಖದ ಮೇಲೆ ಹೊದಿಸಿದರೆ, ಗಂಡನ ಮನೆಯಿಂದ ಮತ್ತೊಂದು ಗೂಂಗಟ್‌ ಅನ್ನು ಹೊದಿಸುತ್ತಾರಂತೆ.

ಮದುವೆಯ ನಂತರ ಹೊಸ ಪತ್ನಿ ಗಂಡನ ಮನೆಗೆ ಮೊದಲ ಬಾರಿ ಹೋದಾಗ ಗಂಡನ ಮನೆಯವರು ಮತ್ತು ಹತ್ತಿರದ ಬಂಧುಗಳು, ಒಬ್ಬೊಬ್ಬರಾಗಿ ಬಂದು ಆಕೆಯ ಗೂಂಗಟ್‌ ಅನ್ನು ಎತ್ತಿ ಮುಖ ನೋಡುವ ಮುಖ್ ದಿಖಾವೋ ಎಂಬ ಶಾಸ್ತ್ರ ಇದೆಯಂತೆ. ನಂತರವೂ ಆಕೆ ಗಂಡನ ಮನೆಯ ಒಳಗೆ ಕೂಡಾ ಗೂಂಗಟ್‌ನಿಂದ ಮುಖ ಮುಚ್ಚಿಕೊಂಡಿರಬೇಕಂತೆ. ಹೊರಗೆ ಹೋದಾಗಂತೂ ಕಡ್ಡಾಯ.

ಇದನ್ನು ನಾನೇ ಸ್ವತಃ ರಾಜಾಸ್ಥಾನದ ಜೋಧಪುರ, ಜೈಸಲ್ಮೇರ್ ಜಿಲ್ಲೆಗಳಲ್ಲಿ ನೋಡಿದ್ದೇನೆ. ಗೂಂಗಟ್ ಪದ್ಧತಿ ಇನ್ನೂ ಅಸ್ತಿತ್ವದಲ್ಲಿರುವುದು ಬಿಜೆಪಿ ಪ್ರಬಲವಾಗಿರುವ ರಾಜ್ಯದಲ್ಲಿ ಮಾತ್ರ ಎಂಬುದು ಕಾಕತಾಳೀಯವಲ್ಲ. ವಸಾಹತುಗಳಾಗಿದ್ದ ದೇಶಗಳಲ್ಲಿ ಸ್ವಾತಂತ್ರ್ಯ ಚಳುವಳಿ ಬೆಳೆದಂತೆ  ಪ್ರಜಾಪ್ರಭುತ್ವೀಯ ವಿಚಾರಗಳು ಹಬ್ಬತೊಡಗಿದಂತೆ ಅಲ್ಲಿಯ ಮಹಿಳೆಯರಿಂದ ಬುರ್ಖಾ ಮಾತ್ರವಲ್ಲ ಹಿಜಾಬ್ ವಿರುದ್ಧವೂ ಪ್ರತಿಭಟನೆಗಳಾದವು.

ರಷ್ಯಾದ ಕ್ರಾಂತಿಕಾರಿ ಸಂಘರ್ಷದ ಕಾಲದಲ್ಲಿ  ಮತ್ತು ನಂತರ ಮುಸ್ಲಿಂ ಬಾಹುಳ್ಯದ ಮಧ್ಯ ಏಷ್ಯಾ ಪ್ರಾಂತ್ಯಗಳಲ್ಲಿ ಮಹಿಳಾ ಚಳುವಳಿಯ ಬೆಳವಣಿಗೆ ಮಹಿಳೆಯರ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ತಂದಿತು. ಅದರ ಭಾಗವಾಗಿ ಬುರ್ಖಾ ತ್ಯಜಿಸುವುದು ಒಂದು ಚಳುವಳಿಯಾಯಿತು. ಹೊಸದಾಗಿ ಸ್ವಾತಂತ್ರ್ಯ ಪಡೆದ ಈಜಿಪ್ಟ್‌, ಆಲ್ಜೀರಿಯಾ, ತುರ್ಕಿ, ಇರಾಕ್ ಮೊದಲಾದ ಮುಸ್ಲಿಂ ಬಾಹುಳ್ಯದ ದೇಶಗಳು ಸೆಕ್ಯುಲರ್ ಗಣರಾಜ್ಯಗಳಾದವು. ಮಹಿಳೆಯರನೇಕರು ಬುರ್ಖಾ ಮೊದಲಾದ ಈ ಉಡುಪುಗಳನ್ನು ತ್ಯಜಿಸಿದರು.

ಶಿಕ್ಷಣ, ಉದ್ಯೋಗಗಳಲ್ಲಿ ತೊಡಗಿದರು. ಇಸ್ಲಾಂ ಧರ್ಮದ ಸಾಮಾಜಿಕ ಕಟ್ಟಲೆಗಳ ಸುಧಾರಣೆಗಳ ಜೊತೆಗೆ ಮಹಿಳಾ ಸಮಾನತೆಯೆಡೆಗಿನ ಸುಧಾರಣೆಗಳೂ ನಡೆಯಲಾರಂಭಿಸಿದುವು. ಆದರೆ ಇದೇ ಸಮಯದಲ್ಲಿ ಪ್ರಜಾಪ್ರಭುತ್ವೀಯ ವಿಚಾರಗಳು, ಸಮಾನತೆ ಮೊದಲಾದ ತತ್ವಗಳಿಂದ  ಭಯಗೊಂಡ ಮುಸ್ಲಿಂ ಪಾಳೆಯಗಾರಿ ಶ್ರೀಮಂತ ಪಟ್ಟ ಭದ್ರ ಶಕ್ತಿಗಳು ಇಂತಹ ಸುಧಾರಣೆಗಳ ವಿರುದ್ಧ ಧಾರ್ಮಿಕ ಮೂಲಭೂತವಾದವನ್ನು ಬೆಳೆಸಲು ಯತ್ನಿಸಿದವು.

ಈಜಿಪ್ಟಿನ ಮುಸ್ಲಿಂ‌ ಬ್ರದರ್‌ಹುಡ್ ಎಂಬ ಸಂಘಟನೆ  ಇಂತಹುದೊಂದು ಸಂಸ್ಥೆ. ಇದೇ ರೀತಿಯ ಹಲವು ಮೂಲಭೂತವಾದಿ‌ ಸಂಸ್ಥೆಗಳು ಈ ದೇಶಗಳಲ್ಲಿ ಆರಂಭವಾದವು. ಬುರ್ಖಾ, ಹಿಜಾಬ್‌ ಧಾರಣೆ ಇಸ್ಲಾಂ ಧರ್ಮದ ಸಂಕೇತ. ಅದನ್ನು‌ ಧರಿಸಿದ ಮಹಿಳೆಯರು ಮಾತ್ರ ಸ್ವರ್ಗಕ್ಕೆ ಹೋಗಲು ಅರ್ಹರು. ಅದನ್ನು ತೆಗೆದವರು ಪಾಖಂಡಿಗಳು ಎಂದು ಬಿಂಬಿಸಿದವು. ಪ್ರಜಾಪ್ರಭುತ್ವ ಸರ್ಕಾರಗಳ ಅಸ್ತಿತ್ವದ ಕಾಲದಲ್ಲಿ ಈ ವಿಚಾರಗಳು ಜನ ಮನ್ನಣೆಯನ್ನು ಪಡೆಯಲಿಲ್ಲ. ಮುಂದೆ  ಪ್ರಜಾಪ್ರಭುತ್ವೀಯ ಸರ್ಕಾರಗಳನ್ನು ಅಮೆರಿಕ ಪತನಗೊಳಿಸಿ ತನ್ನ ಬಾಲಂಗೋಚಿಗಳನ್ನು ಹೇರಿ ಈ‌ ದೇಶಗಳ ಸಂಪತ್ತನ್ನು ಹೀರತೊಡಗಿದಾಗ ಈ ಮೂಲಭೂತವಾದಿ ಸಂಸ್ಥೆಗಳಿಗೆ ಜೀವ ಬಂತು. 

ಜನರಲ್ಲಿ ಅಮೇರಿಕನ್ ದಬ್ಬಾಳಿಕೆಯ ವಿರುದ್ಧದ ಸಿಟ್ಟನ್ನು ಇಸ್ಲಾಮೀಕರಣಕ್ಕೆ ಸಾಧಕವಾಗಿ ಬಳಸಿಕೊಂಡವು. ಇರಾನಿನಲ್ಲಿ ಖೊಮೈನಿ ನೇತೃತ್ವದ ಚಳುವಳಿ ಮತ್ತು ನಂತರ ಅವರ ಧಾರ್ಮಿಕ ಪ್ರಭುತ್ವ ಸ್ಥಾಪನೆ ಇಂತಹ ಪ್ರಕ್ರಿಯೆಯ ಮುಖ್ಯ ಉದಾಹರಣೆ. ಖೋಮೈನಿ ಕೇವಲ ಇರಾನಿನಲ್ಲಿ ಮಾತ್ರವೇ ಅಲ್ಲದೆ ಜಗತ್ತಿನಾದ್ಯಂತ ಮುಸ್ಲಿಮರ ನಡುವೆ ಪ್ರಭಾವ ಬೀರಿದರು. ಇರಾನಿನಲ್ಲಿ ಖೋಮೈನಿ ಸರ್ಕಾರ ಸ್ಥಾಪನೆಯ ನಂತರದ ನಾಲ್ಕು ದಶಕಗಳು ಮಹಿಳೆಯರ ಮೇಲೆ ಅಸಮಾನತೆಯನ್ನು ಹೇರುವ ವರ್ಷಗಳು. ಅದರ ಭಾಗವಾಗಿ ಹಿಜಾಬ್ ಕಡ್ಡಾಯ ಕಾನೂನು ಜಾರಿಯಾಯಿತು.  ಈಜಿಪ್ಟಿನಲ್ಲಿ ಮುಸ್ಲಿಂ ಬ್ರದರ್‌ಹುಡ್ ಬಲವಾಗಿ ಬೆಳೆಯಲಾರಂಭಿಸಿತು.

ಇದರ ಜೊತೆಗೆ ಮತ್ತೊಂದು ಮಹತ್ವದ ಸಂಗತಿ ಎಂದರೆ ಪ್ರಜಾಪ್ರಭುತ್ವದ ಹತ್ತಿರವೇ ಸುಳಿಯದ ದೇಶಗಳಾದ ಸೌದಿ ಅರೇಬಿಯಾ, ಜೋರ್ಡಾನ್, ಮತ್ತು ಸುತ್ತಲಿನ‌ ಅಮೀರರ ಆಡಳಿತಗಳು. ಇಲ್ಲಿಯ ಪೆಟ್ರೊಲಿಯಂಗಾಗಿ ಇಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯನ್ನು ಅಮೆರಿಕ ಮತ್ತು ಈ ದೇಶಗಳನ್ನು ಹಿಂದೆ ಆಳುತ್ತಿದ್ದ ಬ್ರಿಟನ್ ಹತ್ತಿಕ್ಕಿದವು. ಈಗ ಸೌದಿ ಅರೇಬಿಯಾದ ರಾಜಪ್ರಭುತ್ವ ತಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ವಿಚಾರಗಳು ಹರಡಿ ತಮ್ಮ ಆಳ್ವಿಕೆಯ ಬುಡ ಅಲುಗಾಡುವುದನ್ನು ತಪ್ಪಿಸಲು ಅತ್ಯಂತ ಪ್ರಗತಿ ವಿರೋಧಿಯಾದ ವಹಾಬಿ ಅಥವಾ ಸಲಾಫಿ ಇಸ್ಲಾಮಿಕ್ ಪಂಥವನ್ನು ಬೆಳೆಸುತ್ತಿದೆ.

ಮಹಿಳಾ ಸಮಾನತೆಯ ಅತ್ಯಂತ ಕೆಳಮಟ್ಟದ ಸ್ಥಿತಿಯಲ್ಲಿರುವ ಸೌದಿ ಅರೇಬಿಯಾ ದೇಶದ ಈ ಪಂಥ ಅತ್ಯಂತ ಮಹಿಳಾ ವಿರೋಧಿಯಾಗಿದೆ. ಬುರ್ಖಾ ಪ್ರತಿಪಾದಕ ಪಂಥವಾಗಿದೆ. 1973 ರ ನಂತರ ಈ ಪ್ರಜಾಪ್ರಭುತ್ವ ರಹಿತ ರಾಷ್ಟ್ರಗಳಿಗೆ ಪೆಟ್ರೋಲಿಯಂ ಬೆಲೆ ಏರಿಕೆಯ ನಂತರ ಸಿಕ್ಕ ದಿಢೀರ್ ಶ್ರೀಮಂತಿಕೆಯ ಆಸರೆಯೊಂದಿಗೆ ವಿಶ್ವಾದ್ಯಂತದ ಮುಸ್ಲಿಂ ಸಮುದಾಯಗಳ ನಡುವೆ ಈ ಪಂಥವನ್ನು ಬೆಳೆಸುವುದಕ್ಕೆ ಅಪಾರ ಹಣ ಹೂಡುತ್ತಿದೆ. ಅಮೇರಿಕದ ಕಾರ್ಪೊರೇಟ್‌‌ಗಳೂ ಈ ಮೂಲಭೂತವಾದಿ ಇಸ್ಲಾಮಿಕ್ ಪಂಥದ ಬೆಳವಣಿಗೆಯಲ್ಲಿ ತಮ್ಮ ಕೈವಾಡ ನಡೆಸಿವೆ.

ಈ ದೇಶಗಳಲ್ಲಿ ಅಮೇರಿಕದ, ಇತರ ಪಾಶ್ಚಾತ್ಯ ದೇಶಗಳ ವಿರುದ್ಧದ ಮುಸ್ಲಿಮರ ಆಕ್ರೋಶ ಹಾಗೂ ಪ್ರಜಾಪ್ರಭುತ್ವ ದೇಶಗಳಲ್ಲಿ ಮುಸ್ಲಿಮರ ಸ್ಥಿತಿ ಅಧೋಮುಖವಾಗಿದ್ದು ಮುಸ್ಲಿಂ ಯುವಜನರು ಸುನ್ನಿ ಮೊದಲಾದ ಪಂಥಗಳ ವಿರುದ್ಧ ತಿರುಗಿಬೀಳುವಂತೆ ಮಾಡಿದೆ. ಈ ಎಲ್ಲ ಅಂಶಗಳ ಸಮಗ್ರ ಪರಿಣಾಮ ಇಂದು ಜಗತ್ತಿನ ಮುಸ್ಲಿಂ ಸಮುದಾಯಗಳ ನಡುವೆ ವಹಾಬಿ ಅಥವಾ ಸಲಾಫಿ ಪಂಥವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಂಥವಾಗಿದೆ. ಭಾರತದಲ್ಲಿಯೂ, ಮೇಲೆ ವಿವರಿಸಿದ ಅಂಶಗಳ ದಟ್ಟ ಛಾಯೆಯನ್ನು ಕಾಣಬಹುದಾಗಿದೆ.

ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ  ಪ್ರಜಾಪ್ರಭುತ್ವೀಯ ವಿಚಾರಗಳು, ಮಹಿಳಾ ಸಮಾನತೆಯ ಕಾಂಕ್ಷೆ ಬೆಳೆಯಿತು. ಭಾರತದಲ್ಲಿ ಬಹು ಸಂಖ್ಯಾಕರಾದ ಹಿಂದೂ ಧರ್ಮದಲ್ಲಿ ಹಲವು ಸುಧಾರಣೆಗಳನ್ನು ತರಲು ಇದರಿಂದ ಸಾಧ್ಯವಾಯಿತು. ಈ ಸುಧಾರಣೆಗಳು ಮಹಿಳೆಯರ ಸ್ಥಾನಮಾನ ಹಾಗೂ ಬದುಕಿನ ಮೇಲೆ  ಪರಿಣಾಮ ಉಂಟುಮಾಡಿದೆ. ಅಸ್ಪೃಶ್ಯ ಮತ್ತಿತರ ತಳ ಸಮುದಾಯಗಳ ಮೇಲೆ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಅಲ್ಲದಿದ್ದರೂ ಕೂಡಾ ಗಣನೀಯ ಪರಿಣಾಮ ಉಂಟುಮಾಡಿದೆ.

ಮುಖ್ಯವಾಗಿ ಮಹಿಳೆಯರ ಶಿಕ್ಷಣ, ಅವರ ಉದ್ಯೋಗ, ಸ್ವಾವಲಂಬನೆ, ಮಾನವ ಸಮುದಾಯದ ಮುನ್ನಡೆಯ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸಾಂಸ್ಕೃತಿಕ ರಂಗಗಳಲ್ಲಿ, ಆಡಳಿತ, ರಾಜಕೀಯಗಳಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಬ್ರಾಹ್ಮಣರೂ ಕೂಡಾ ಸನಾತನಿ ಬ್ರಾಹ್ಮಣ್ಯವನ್ನು ಬಿಟ್ಟು ಸುಧಾರಣೆಗೆ ಒಳಗಾಗಿದ್ದರಿಂದಲೇ ಮುಂದುವರೆದಿದ್ದಾರೆ.

ಸಾಮಾಜಿಕ ಸುಧಾರಣೆಯ ಈ ಪ್ರಕ್ರಿಯೆ ಇಂದೂ ಹಲವು ರೂಪಗಳಲ್ಲಿ ಮುಂದುವರೆಯುತ್ತಿದೆ. ಬುರ್ಖಾದ ಹಿಂದೂ ಅವೃತ್ತಿ ಎನ್ನಬಹುದಾದ ಗೂಂಗಟ್ಗೆ ಸಂಬಂಧಿಸಿದಂತೆ ಒಂದು ಉದಾಹರಣೆ: ರಾಜಾಸ್ಥಾನದಲ್ಲಿ ಗೂಂಗಟ್ ಬಹಳ ವ್ಯಾಪಕವಾಗಿರುವುದರ ಹಿನ್ನೆಲೆಯಲ್ಲಿ ಅಲ್ಲಿಯ ಮುಖ್ಯಮಂತ್ರಿ ಗೆಹ್ಲೊಟ್ ಗೂಂಗಟ್ಗಳನ್ನು ತೊಡೆಯಿರಿ ಎಂದು ಕರೆ ನೀಡಿದ್ದಲ್ಲದೆ ಒಬ್ಬ ಮಹಿಳೆಯ ಗೂಂಗಟ್ ಅನ್ನು ಬಹಿರಂಗವಾಗಿ ತೆಗೆಸಿಹಾಕಿದರು.

ಸಾಮಾಜಿಕ ಸುಧಾರಣೆ ಪ್ರಕ್ರಿಯೆ ಮುಸ್ಲಿಂ ಸಮುದಾಯದ ಒಳಗೂ ಬದಲಾವಣೆಗಳಿಗೆ ನಾಂದಿ ಹಾಡಿತು. ನಿಸಾರ್ ಅಹಮದ್‌ರವರ ಕವನದಲ್ಲಿ ಬಿಂಬಿಸಿದಂತೆ ಮುಸ್ಲಿಮರ ಮನೆಗಳಲ್ಲೂ  ಚರ್ಚೆಗೆ ಒಳಗಾಯಿತು. ಆ ಕವನದಲ್ಲಿ ಕೊನೆಗೆ ಹಿಂದಕ್ಕೆ ಚಲಿಸಿದಂತೆ ಕಂಡರೂ ಸಂಘರ್ಷದ ಪ್ರಕ್ರಿಯೆ ಜೀವಂತವಾಗಿದೆ. ವಿವಿಧ ಹಿಂದೂ ಜಾತಿ ಸಮುದಾಯಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಾದರೂ ಬದಲಾವಣೆಯತ್ತ ಈ ಸಮುದಾಯ ಸಾಗುತ್ತಿತ್ತು.

ಈ ಪ್ರಜಾಪ್ರಭುತ್ವೀಯ, ಸಮಾನತೆಯ ಚಿಂತನೆ ಮುಸ್ಲಿಂ ಬಾಹುಳ್ಯದ ದೇಶಗಳಂತೆ ಇಲ್ಲಿಯ ಪುರೋಹಿತಶಾಹಿ, ಪಾಳೆಯಗಾರಿ ಶಕ್ತಿಗಳಲ್ಲಿ ಆತಂಕವುಂಟು ಮಾಡಿ ಒಂದು ಕಡೆ ಆರೆಸ್ಸೆಸ್ ಮತ್ತೊಂದು ಕಡೆ ಮುಸ್ಲಿಂ ಸಮುದಾಯದ ಮೂಲಭೂತವಾದಿ ಸಂಘಟನೆಗಳ ಸ್ಥಾಪನೆಗೆ ಕಾರಣವಾಯಿತು. ಸ್ವಾತಂತ್ರ್ಯದ ಆಶಯಗಳನ್ನು ವಾಸ್ತವಗೊಳಿಸಿ ಜನಹಿತವನ್ನು‌ ಸಾಧಿಸಲು ವಿಫಲವಾಗುತ್ತ ನಡೆದಂತೆ ಆರೆಸ್ಸೆಸ್‌ನ ರಾಜಕೀಯ ಅಂಗವಾದ ಬಿಜೆಪಿ ಕೋಮು ದಂಗೆಗಳನ್ನೆಬ್ಬಿಸಿ ಕೋಮು ದ್ವೇಷವನ್ನು ಬೆಳೆಸಿತು.

ಬಾಬ್ರಿ ಮಸೀದಿ ನಾಶ, ದಿನನಿತ್ಯ ಮುಸ್ಲಿಮ್ ಸಮುದಾಯದ ಮೇಲೆ ದೌರ್ಜನ್ಯ ಇವುಗಳು ಮುಸ್ಲಿಂ ಯುವಜನರನ್ನು ದೊಡ್ಡ ಪ್ರಮಾಣದಲ್ಲಿ ಮೂಲಭೂತವಾದಿ ಸಲಾಫಿ- ವಹಾಬಿ ಪಂಥದ ಸೆಳೆತಕ್ಕೆ ಒಳಗಾಗುವಂತೆ ಮಾಡಿದೆ. ಒಂದು ಕಡೆ ಹಿಂದಿನಿಂದ ಬಂದ ಸಂಪ್ರದಾಯವಾದಿ ಬುರ್ಖಾ ಧಾರಣೆಯ ಒತ್ತಡ. ಅದರೊಂದಿಗೆ ಕೋಮುವಾದದ ಆತಂಕ ಸೃಷ್ಟಿಸಿದ ಮುಸ್ಲಿಂ ಮೂಲಭೂತವಾದಿಗಳ ಪ್ರಭಾವ ಇಂದು ಮಹಿಳೆಯರ ಮೇಲೆ ಅತೀವ ಒತ್ತಡ ಹೇರುತ್ತಿವೆ.

ಮುಸ್ಲಿಂ ಮಹಿಳೆಯರು ಶಿಕ್ಷಣದ ಮೂಲಕ ಪಡೆದ ಪ್ರಜಾಪ್ರಭುತ್ವೀಯ ಚಿಂತನೆ, ಮಹಿಳಾ ಸಮಾನತೆಯ ಬಯಕೆಯನ್ನು ಬುರ್ಖಾ ತ್ಯಜಿಸುವುದರ ಮೂಲಕ ವ್ಯಕ್ತಪಡಿಸಲು ಅವಕಾಶವಿಲ್ಲದಂತಾಗಿದೆ. ಅವರು ಶಿಕ್ಷಣ  ಮುಂದುವರೆಸಬೇಕೆಂದರೆ ಬುರ್ಖಾ ತೊಡಲೇಬೇಕು. ಒಂದು ಕಡೆ ಹಿರಿಯರ ಒತ್ತಾಯ ಮತ್ತೊಂದು ಕಡೆ ಸಲಾಫಿಗಳಾದ ಯುವಕರ ಅತ್ಯಂತ ಆಕ್ರಮಣಕಾರಿ ವರ್ತನೆ, ಮುಸ್ಲಿಮರ ಮೇಲಿನ‌ ದೌರ್ಜನ್ಯ, ದಬ್ಬಾಳಿಕೆಗಳು ಯುವತಿಯರ ಒಂದು ವಿಭಾಗವನ್ನು ಕೂಡ ಮಹಿಳಾ ವಿರೋಧಿ ಸಲಾಫಿ ಪಂಥದತ್ತ ದೂಡಿರುವುದು ಇವುಗಳ ಒಟ್ಟು ಪರಿಣಾಮವಾಗಿ ಬುರ್ಖಾ ಧಾರಣೆ ಹೆಚ್ಚಾಗುತ್ತಿದೆ. ಮುಸ್ಲಿಂ ಸಮುದಾಯದ ಒಳಗೆ ನಡೆಯುತ್ತಿದ್ದ, ವೇಗಗೊಳ್ಳಬೇಕಾಗಿದ್ದ ಪ್ರಜಾಪ್ರಭುತ್ವೀಯ ಸಾಮಾಜಿಕ ಸುಧಾರಣೆಗೆ ದೊಡ್ಡ ಅಡ್ಡಿ ಉಂಟಾಗಿದೆ.

ನಮ್ಮ ಮಹಿಳೆಯರು ಬುರ್ಖಾ ಧಾರಣೆ ಮಾಡಿದರೆ ನಿಮಗೇನು ತೊಂದರೆ? ಬುರ್ಖಾ ಧಾರಣೆ ಹೇಗೆ ಆಕೆಗೆ ಬಂಧನವಾಗುತ್ತದೆ, ಹೇಗೆ ಸ್ವಾತಂತ್ರ್ಯ ಹರಣವಾಗುತ್ತದೆ, ಹೇಗೆ ಬಂಧನವಾಗುತ್ತದೆ, ಹೇಗೆ ಅಸಮಾನತೆಯಾಗುತ್ತದೆ? ಅದರಿಂದ ಆಕೆಯನ್ನು ಯಾವುದರಿಂದ ತಡೆಹಿಡಿದಂತಾಗುತ್ತದೆ ? ಹೀಗೆ ಬಹಳ ಮುಗ್ಧರಾಗಿ ಪ್ರಶ್ನೆ ಕೇಳುವುದು ಒಂದು ಕಡೆಯಾದರೆ, ಇಂತಹ ವಿಷಯಗಳನ್ನೆತ್ತಿದರೆ ಆಕ್ರಮಣಕಾರಿಯಾಗಿ ವೈಯುಕ್ತಿಕ ದೂಷಣೆ ಮಾಡುವುದು, ನಿಂದನೆ ಮಾಡುವುದು ಮತ್ತೊಂದು ಕಡೆ.

ಮೇಲಿನ ಪ್ರಶ್ನೆಗಳಿಗೆ ಉತ್ತರವಾಗಿ ಹಲವು ಅಂಶಗಳನ್ನು ಹೇಳಬಹುದಾದರೂ ಇಲ್ಲಿ ಸ್ಥಳಾವಕಾಶದ ಕಾರಣ ಒಂದು ಅಂಶದ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತೇನೆ. ಇದನ್ನು ಒಬ್ಬ ಮುಸ್ಲಿಂ ಲೇಖಕರೇ ಬುರ್ಖಾಗೆ ಸಂಬಂಧಪಟ್ಟ ತಮ್ಮ ಲೇಖನ ಒಂದರಲ್ಲಿ ವಿವರಿಸಿದ್ದಾರೆ. ಪ್ರಜಾಪ್ರಭುತ್ವದ ಮೂಲ ಅಡಿಪಾಯವೇ ಸಂವಾದ. ಸಂವಾದದ ಮುಖ್ಯ ಅಂಗ ಸಂವಹನ.

ಪ್ರತಿಯೊಬ್ಬರಿಗೂ ಮತ್ತೊಬ್ಬರ ಚಿಂತನೆಯ ಪರಿಣಾಮಕಾರಿ ಸಂವಹನ. ಶಿಕ್ಷಣವೂ ಸಂವಹನದ ಮೇಲೆಯೇ ಆಧಾರಿತವಾದದ್ದು. ಸಂವಹನದಲ್ಲಿ ಮುಖದ ಮೇಲೆ ಅಭಿವ್ಯಕ್ತಗೊಳ್ಳುವ ಭಾವನೆಗಳು ಬಹಳ ಮುಖ್ಯ. ಒಂದು ಪಾಠ, ಉಪನ್ಯಾಸ ಕೇಳುವಾಗ ಮುಖ ವ್ಯಕ್ತಪಡಿಸುವ ಭಾವನೆಗಳಿಂದಲೇ ಕೇಳುವವರಿಗೆ ಸಂವಹನವಾಗುತ್ತಿದೆಯೇ ಎಂಬ ಅಂಶ ತಿಳಿಯುವುದು. ಅದರಿಂದ ಪಾಠ ಮುಂದುವರೆಯಲು ಸಹಾಯ.

ಹಾಗೆಯೇ ಉನ್ನತ ಹಂತದ ವೈಜ್ಞಾನಿಕ, ತಂತ್ರಜ್ಞಾನದ ಕಾರ್ಯಾಗಾರಗಳಲ್ಲಿ, ಸಾಮಾಜಿಕ ವಿಜ್ಞಾನಗಳ ಚರ್ಚೆಗಳಲ್ಲಿ, ಆಡಳಿತದ ಸಭೆಗಳಲ್ಲಿ ಉಪನ್ಯಾಸಕ್ಕಿಂತಲೂ ಚರ್ಚೆ ಮುಖ್ಯ. ಅದಂತೂ ಪರಿಣಾಮಕಾರಿ ಸಂವಹನದ ಮೇಲೆಯೇ ಆಧಾರಿತವಾದದ್ದು. ಕಳೆಗಟ್ಟುವುದು. ಒಬ್ಬ ಅಧಿಕಾರಿಯಾಗಿ ಒಬ್ಬರ ಅಹವಾಲು ಕೇಳಿ ಸಮಜಾಯಿಷಿ ಹೇಳಬೇಕೆಂದರೆ ಕೂಡಾ ಮುಖದ ಮೇಲೆ ನೆಟ್ಟ ನೋಟ, ಅವರ ಕಣ್ಣು ಕಲೆಯುವುದು ಮುಖ್ಯ. ಒಬ್ಬ ಪೋಲೀಸ್ ಅಧಿಕಾರಿಗೆ ಮುಖದಲ್ಲಿ ಕಾಣುವ ಸಿಟ್ಟು, ಕರುಣೆಗಳೇ ಅವರ ಕಾರ್ಯ ನಿರ್ವಹಣೆಗೆ ಮುಖ್ಯ. ಮಾತೇ ಇಲ್ಲದೆ ಕೇವಲ ಮುಖಭಾವದಿಂದಲೇ ಉದ್ದೇಶ ಸಾಧಿಸಬಹುದು. ಇನ್ನು ರಂಗಭೂಮಿ, ಸಿನಿಮಾ, ಟಿವಿ ನಟನೆ,  ಆ್ಯಂಕರ್ ಕೆಲಸ ಸಾಧ್ಯವೇ ? ಸಂಗೀತ, ನೃತ್ಯ ? ಹೀಗೆ ಬೆಳೆಸುತ್ತಾ ಹೋಗಬಹುದು ?

ಈ ರೀತಿಯ ಪ್ರಾಚೀನ  ಚಿಂತನೆ ಕೇವಲ ಬುರ್ಖಾ ಧಾರಣೆಗಷ್ಟೇ ಸೀಮಿತವಾಗಿಲ್ಲವಲ್ಲ. ಬುರ್ಖಾ ಧಾರಣೆ ಒಂದು ಸಂಕೇತವಷ್ಟೇ. ಮಹಿಳೆಯರ ಬದುಕಿನ ಹಲವು ಆಯಾಮಗಳನ್ನು ಈ ಬಗೆಯ ಮೂಲಭೂತವಾದಿ ಚಿಂತನೆ ಬಾಧಿಸುತ್ತದೆ. ಕೇವಲ ಮಹಿಳೆಯರ ಬದುಕನ್ನು ಮಾತ್ರವೇ ಅಲ್ಲ ಮುಸ್ಲಿಂ ಪುರುಷರ ಬದುಕೂ ಸೇರಿದಂತೆ ಇಡೀ ಸಮುದಾಯವನ್ನೇ ಬಾಧಿಸುತ್ತದೆ, ಹಲವು ಶತಮಾನಗಳಷ್ಟು ಹಿಂದೂಡುತ್ತದೆ.

ಈ ಬೆಳವಣಿಗೆ ಅಮೇರಿಕಕ್ಕೆ ತನ್ನ ಉದ್ದೇಶ ಈಡೇರಿದ ಅಪಾರ ಸಂತೋಷವನ್ನು ತಂದಿದೆ. ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಮುಖ್ಯವಾಗಿ ಯುರೋಪಿನ‌ ದೇಶಗಳಿಗೆ ಅಗ್ಗದ ಕೂಲಿಕಾರರನ್ನು ಒದಗಿಸಿದೆ. ಅದೇ ಸಮಯದಲ್ಲಿ ಆ ದೇಶಗಳಲ್ಲಿ ಮುಸ್ಲಿಂ ವಲಸೆಗಾರರನ್ನು ಗುರಿಯಾಗಿಟ್ಟುಕೊಂಡು ಜನಾಂಗೀಯ ದ್ವೇಷ ಬೆಳೆಸಲು ಸಾಧ್ಯವಾಗಿದೆ.

ಅಮೇರಿಕದ ಮೇಲಿನ‌ ಸಿಟ್ಟಿನಿಂದ ಅಮೆರಿಕ ಹೂಡಿದ ಬಲೆಗೆ ಮುಸ್ಲಿಂ ಯುವಕರು ಸಿಕ್ಕಿ ಬೀಳುತ್ತಿದ್ದಾರೆ. ಮತ್ತೊಂದು ಕಡೆ ಭಾರತದ ಹಿಂದೂ ಕೋಮುವಾದಿಗಳಿಗೂ ಬಹಳ ಖುಷಿಯಾಗಿದೆ. ಮುಸ್ಲಿಂ ಮೂಲಭೂತವಾದಿಗಳನ್ನು ತೋರಿಸುತ್ತಾ ಹಿಂದೂಗಳನ್ನು ಮತ್ತಷ್ಟು ಹೆಚ್ಚು ಹೆಚ್ಚಾಗಿ ತಮ್ಮೆಡೆಗೆ ಸೆಳೆಯಬಹುದು.

ಮುಸ್ಲಿಂ ಸಮುದಾಯವಮ್ನು ಮತ್ತಷ್ಟು ಹಿಂದೂಡಿ ಮತ್ತಷ್ಟು ತುಳಿಯಲು ಸಾಧನ ಮಾಡಿಕೊಳ್ಳಬಹುದು ಎಂದು. ಈ ಎಲ್ಲ ಅಂಶಗಳನ್ನು ಮುಸ್ಲಿಂ ಸಮುದಾಯದ ಎಲ್ಲರೂ, ಮುಖ್ಯವಾಗಿ ಯುವಕರು ಮನಗಾಣಬೇಕು. ಜಗತ್ತಿನ ಇತಿಹಾಸದ ಭಾಗವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ವೈಜ್ಞಾನಿಕ, ವೈಚಾರಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು.

ಅದೇ ಸಮಯದಲ್ಲಿ ಎಲ್ಲ ಧರ್ಮದ ಪ್ರಜಾಪ್ರಭುತ್ವೀಯ,ಮಾನವೀಯ ಮನಸ್ಸಿನವರು ಎರಡು ತತ್ವ ಗಳನ್ನು ಅನುಸರಿಸಬೇಕು.
ಬುರ್ಖಾ ನಿಷೇಧ ಮಾಡಿ ಯಾವ ಸಂಸ್ಥೆ, ಸರ್ಕಾರ ಕಾನೂನು ಮಾಡಿದರೂ, ಬುರ್ಖಾ ತೊಟ್ಟವರು ಹೊರತು ಯಾರೇ ಅದನ್ನು ಕಿತ್ತೊಗೆಯಲು ಪ್ರಯತ್ನಿಸಿದರೂ ಪ್ರಜಾಪ್ರಭುತ್ವೀಯ ಪ್ರಜ್ಞೆಯ ಜನರು ಖಂಡ ತುಂಡವಾಗಿ ವಿರೋಧಿಸಬೇಕು. ಬುರ್ಖಾವನ್ನು ನೆಪವಾಗಿಸಿ ಅವರಿಗೆ ಅವಮಾನ ಮಾಡುವುದು,ಬಲವಂತ ಮಾಡುವುದರ ವಿರುದ್ಧ ಮುಸ್ಲಿಂ ಮಹಿಳೆಯರನ್ನು ಬೆಂಬಲಿಸಬೇಕು.

ಅದೇ ಸಮಯದಲ್ಲಿ ಬುರ್ಖಾವನ್ನು ಯಾವ ಕಾರಣಕ್ಕೂ ಸಮರ್ಥಿಸಬಾರದು. ಬುರ್ಖಾ ಮಹಿಳಾ ಅಸಮಾನತೆಯ ಸಾಧನ , ಮುಸ್ಲಿಂ ಸಮುದಾಯದ ಹಿಂದುಳಿಯುವಿಕೆಯ ಸೂಚಕ ಎಂಬ ಬಗ್ಗೆ ದೃಢ ನಿಲುವನ್ನು ಹೊಂದಿರಬೇಕು. ಅವುಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಿರಬೇಕು. ಮುಸ್ಲಿಂ ಗೆಳೆಯರು ತಮ್ಮ ಧರ್ಮದ ಕಂದಾಚಾರಗಳನ್ನು, ಬುರ್ಖಾ ಪದ್ಧತಿಯನ್ನು ತೊಡೆಯುವಂತೆ, ತಮ್ಮ ಧರ್ಮದಲ್ಲಿ ಸುಧಾರಣೆ ತರುವಂತೆ ವಿಚಾರ ಮಂಡಿಸಬೇಕು. ಅವರು ಸಿಟ್ಟಿಗೆ ಕೈಕೊಟ್ಟು ತಾಳ್ಮೆ ಕಳೆದುಕೊಂಡು ವರ್ತಿಸುತ್ತಿರುವುದರಿಂದ ನಮಗೆ ತಾಳ್ಮೆ ಬೇಕು.

ಮುಸ್ಲಿಂ ಸಮುದಾಯದ ಹಲ ಹಲವು ಸಮಸ್ಯೆಗಳಿಗೆ ದನಿಯಾಗಬೇಕು. ಅವರಲ್ಲಿ ಪ್ರಜಾಪ್ರಭುತ್ವೀಯ ಚಳುವಳಿಗಳ ಭಾಗವಾಗಲು ನೆರವಾಗಬೇಕು. ಅವರ ಮೇಲಿನ‌ ಒತ್ತಡಗಳು ತಗ್ಗಿ ಮುಕ್ತ ಮನಸ್ಸಿನಿಂದ ಚಿಂತಿಸುವ ಅವಕಾಶ ಕಲ್ಪಿಸಲು ಸಹಾಯ ಮಾಡಬೇಕು.
ಅವರ ಸಮುದಾಯದೊಳಗೆ ಸಾಮಾಜಿಕ  ಸುಧಾರಣೆಗಳನ್ನು ತರುವುದು ಅವರದೇ ಹಕ್ಕು, ಅವರದೇ ಹೊಣೆ. ಅವರದೇ ಕರ್ತವ್ಯ ಕೂಡಾ.
ಬೇರೆಯವರ ಒತ್ತಾಯ, ದಬ್ಬಾಳಿಕೆಗೆ ಅವಕಾಶವಿಲ್ಲ.

‍ಲೇಖಕರು Admin

July 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Bheemanagowda kashireddy

    ಕನ್ನಡ ಕೊನೆಯ ಪ್ಯಾರಾಗೆ ನನ್ನ ಸಹಮತವಿಲ್ಲ, ಹಿಂದೂ ಧರ್ಮದ ವ್ಯಾಪ್ತಿಯಲ್ಲಿದ್ದ ಹಲವಾರು ಸಾಮಾಜಿಕ ಅನಿಷ್ಟಗಳನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಸುಧಾರಣೆ ಆಯಾ ಸಮುದಾಯದ ಒಳಗಿನಿಂದಲೇ ಬರಬೇಕು ಎನ್ನುವುದು ಆಗಿದ್ದರೆ ಇದು ಸಾಧ್ಯವಿರಲಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: