ಜಿ ಎನ್ ನಾಗರಾಜ್ ಅಂಕಣ- ನರಗುಂದ ರೈತ ಬಂಡಾಯದ ದಿನಗಳು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ನರಗುಂದ ರೈತ ಬಂಡಾಯದ  ದಿನಗಳು – ಭಾಗ ಒಂದು

‘ಖೊಟ್ಟಿ ಗಿಟ್ಟಿ ಇಲ್ಲ ತಗಿ ದಿಟ್ಟ ಮಾತ ಹೇಳತೀನಿ.’
ದೆಹಲಿ ಗಡಿಯ ಆರು ಕಡೆಗಳಲ್ಲಿ ರೈತ ಸಂಘರ್ಷ ಎಂಟು ತಿಂಗಳಾಗುತ್ತಾ ಬಂದಿದೆ. ಬಹಳ ತಿಕ್ಕಾಟದ ನಂತರ ರೈತರು ದೆಹಲಿಯೊಳ ಹೊಕ್ಕಿದ್ದಾರೆ. ಸಂಸತ್ ಅಧಿವೇಶನದ ಎದುರೇ ರೈತ ಸಂಸತ್ ಆರಂಭವಾಗಿದೆ.  ಅದೇ ಸಮಯದಲ್ಲಿ ಜುಲೈ 21 ಕ್ಕೆ ನರಗುಂದ- ನವಲಗುಂದ ರೈತ ಬಂಡಾಯ ಘಟಿಸಿ 41 ವರ್ಷಗಳಾದವು.

ಅಂದು ರೈತರು ಅನುಭವಿಸುತ್ತಿದ್ದ ಅದೇ ಸಮಸ್ಯೆಗಳೇ ಮತ್ತಷ್ಟು ಬೃಹದಾಕಾರವಾಗಿ ರೈತನ್ನು ಕಾಡುತ್ತಿವೆ. ನರಗುಂದ ರೈತ ಬಂಡಾಯ ನನ್ನ ಬದುಕಿನಲ್ಲಿ ಒಂದು ದೊಡ್ಡ ತಿರುವಿಗೆ ಕಾರಣವಾಯಿತು. ಕೃಷಿ ಇಲಾಖೆಯ ಉನ್ನತ ಸ್ಥಾನಕ್ಕೇರಬೇಕಾಗಿದ್ದ ನಾನು ಅಧಿಕಾರಿ ಹುದ್ದೆಗೆ ರಾಜೀನಾಮೆ ಎಸೆದು ರೈತ ಚಳುವಳಿಗೆ ಧುಮುಕಲು ಪ್ರೇರೆಪಣೆ ನೀಡಿತು. ಈ ಹಿನ್ನೆಲೆಯಲ್ಲಿ ನರಗುಂದ ರೈತ ಚಳುವಳಿಯ ಪ್ರತ್ಯಕ್ಷ ದರ್ಶಿ ಮತ್ತು ಭಾಗೀದಾರನಾದ ನನ್ನ ಅನುಭವ ಕಥನ ನಿಮ್ಮ ಮುಂದೆ.

ರೈತ ಚಳುವಳಿಯ ಆರಂಭ-
1979ರ ಡಿಸೆಂಬರ್. ನರಗುಂದಕ್ಕೆ ಮುಖ್ಯಮಂತ್ರಿ ಗುಂಡೂರಾಯರ ಭೇಟಿ. ವೇದಿಕೆ ಮೇಲೆ ಅಲ್ಲಿಯ ತಹಸೀಲ್ದಾರ್, ಬಿಡಿಒಗಳ ಜೊತೆ ನಾನು ಮುಖ್ಯಮಂತ್ರಿಯ ಹಿಂದಿನ ಕುರ್ಚಿಯಲ್ಲಿ. ಅವರು ಭಾಷಣ ಮಾಡುತ್ತಿರುವಾಗಲೇ ಅಲ್ಲಿಗೆ ರೈತರದೊಂದು ಮೆರವಣಿಗೆ ಬಂತು. ರೈತರು ಘೋಷಣೆ ಕೂಗುತ್ತಿದ್ದರು. ಅವರು ನರಗುಂದದ ನೆರೆಯ ತಾಲ್ಲೂಕಾದ ನವಲಗುಂದದವರು. ಅಲ್ಲಿ ಆಗಲೇ ರೈತ ಚಳುವಳಿ ಆರಂಭವಾಗಿ ಕೆಲ ದಿನಗಳಾಗಿದ್ದವು. ನರಗುಂದಕ್ಕೆ ಮುಖಮಂತ್ರಿಗಳು ಭೇಟಿ ನೀಡುತ್ತಾರೆಂಬ ಸುದ್ದಿ ಕೇಳಿ ಅವರಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಹಲವು ಕಿಮೀ ದೂರದಿಂದ ಮೆರವಣಿಗೆಯಲ್ಲಿ ಬಂದಿದ್ದರು. ಅದರ ನೇತೃತ್ವವನ್ನು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಪಿಎಚ್‌ಡಿಗಾಗಿ ತತ್ವಶಾಸ್ತ್ರದಲ್ಲಿ ಸಂಶೋಧನೆ ಮಾಡುತ್ತುದ್ದ ವಿ.ಎನ್ ಹಳಕಟ್ಟಿ ಎಂಬುವರು ನೇತೃತ್ವ ವಹಿಸಿದ್ದರು.

ನೀರಾವರಿ ಬೆಟರ್ ಮೆಂಟ್ ಲೆವಿ ವಿಪರೀತವಾಗಿದೆ. ಅದನ್ನು ಹಿಂತೆಗೆದುಕೊಳ್ಳಿ. ಹತ್ತಿ, ಮುಸುಕಿನ ಜೋಳಕ್ಕೆ ಲಾಭದಾಯಕ ಬೆಲೆ ಕೊಡಿ. ಈ ಬೆಳೆಗಳನ್ನು  ಸರ್ಕಾರವೇ ಕೊಳ್ಳಬೇಕು ಇತ್ಯಾದಿ ಅವರ ಒತ್ತಾಯಗಳಿಗಾಗಿ ನಡೆದಿತ್ತು ರೈತರ ಈ  ಹೋರಾಟ.

‘ನಾನು  ಇಂತಹವಕ್ಕೆಲ್ಲ ಕೇರ್ ಮಾಡುವುದಿಲ್ಲ.’ ಎಂದು ಭಾಷಣದಲ್ಲಿಯೇ ಗುಡುಗಿದ ಗುಂಡೂರಾಯರು, ನಿರ್ದಾಕ್ಷಿಣ್ಯವಾಗಿ ತೆರಿಗೆ, ಬೆಟರ್‌ಮೆಂಟ್ ಲೆವಿ ಬಾಕಿ‌ ವಸೂಲಿಗೆ ಕ್ರಮ ಕೈಗೊಳ್ಳಿ ಎಂದು ಆದೇಶವಿತ್ತರು. ನಾನು ಕೃಷಿ ಸಹಾಯಕ ನಿರ್ದೇಶಕನಾಗಿ ಜ್ಯೂನಿಯರ್ ಕ್ಲಾಸ್ ಒನ್ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ನೇರ ನೇಮಕಾತಿ ಹೊಂದಿ ಮೊದಲ ಬಾರಿಗೆ ಕೆಲಸದ ಆಜ್ಞೆ ಪಡೆದು ನರಗುಂದ ತಾಲ್ಲೂಕಿನಲ್ಲಿ ಕೆಲಸ ಮಾಡಲಾರಂಭಿಸಿದ್ದೆ.

ನರಗುಂದ ಮಲಪ್ರಭಾ ಅಣೆಕಟ್ಟಿನ ನೀರಾವರಿ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿತ್ತು. ನೆರೆಯ ನವಲಗುಂದ ಹಾಗೂ ಸವದತ್ತಿ ತಾಲ್ಲೂಕುಗಳ ಹೆಚ್ಚಿನ ಪ್ರದೇಶ, ರೋಣ, ರಾಮದುರ್ಗ ತಾಲ್ಲೂಕುಗಳ ಕೆಲವು ಗ್ರಾಮಗಳು ಇದೇ ನೀರಾವರಿ ಪ್ರದೇಶದ ಭಾಗವಾಗಿದ್ದವು. ಹೀಗಾಗಿ ಪಕ್ಕದ ನವಲಗುಂದ ತಾಲೂಕಿನಂತೆಯೇ ನರಗುಂದದ ರೈತರೂ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು ಎಂಬುದು ಹಳ್ಳಿಗಳಿಗೆ ನಾನು ಭೇಟಿ ಮಾಡಿ ರೈತರೊಂದಿಗೆ ಮಾತನಾಡುವಾಗ ಮೇಲ್ನೋಟಕ್ಕೆ ಕಂಡಿತ್ತು.

ಈ ಪ್ರತಿಭಟನೆ ನೋಡಿದ ನಂತರ ಅವುಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲಾರಂಭಿಸಿದೆ. ಅಂದು ಅವರ ಮುಖ್ಯವಾದ ಸಮಸ್ಯೆಗಳು : ಮತ್ತೆ ಅಧಿಕಾರಕ್ಕೆ ಬಂದಿದ್ದ ಇಂದಿರಾಗಾಂಧಿ ಸರ್ಕಾರ ರಸಗೊಬ್ಬರಗಳ ಬೆಲೆ ಏರಿಸಿತ್ತು. ಅವುಗಳಿಗೆ ಜೊತೆ ಎಂಬಂತೆ ಕೀಟನಾಶಕಗಳ ಬೆಲೆಗಳನ್ನು ಖಾಸಗಿ ಕಂಪನಿಗಳು ಏರಿಸಿದ್ದವು. ಇಲ್ಲಿಯ ರೈತರು ಬೆಳೆಯುತ್ತಿದ್ದ ಪ್ರಧಾನ ಬೆಳೆ ಹೈಬ್ರೀಡ್ ಹತ್ತಿಯ ವರಲಕ್ಷ್ಮಿ ಎಂಬ ತಳಿ. ಅದು ಬೇರೆ ಬೆಳೆಗಳಿಗಿಂತ ದೀರ್ಘ ಕಾಲದ ಬೆಳೆ ಹಾಗೂ ವಿಪರೀತ ಖರ್ಚಿನದು. ರಸಗೊಬ್ಬರಗಳ, ಅದಕ್ಕಿಂತ ಹೆಚ್ಚಾಗಿ ಕೀಟನಾಶಕಗಳ ವೆಚ್ಚ ಬಹಳ. ಆ ವರ್ಷ ಹತ್ತಿಯ ಬೆಲೆ ವಿಪರೀತ ಕುಸಿದು ಹೋಗಿತ್ತು. ಹಿಂದಿನ ವರ್ಷ ಒಂದು ಕ್ವಿಂಟಲಿಗೆ ಸಾವಿರ ರೂ ಇದ್ದರೆ ಈ ವರ್ಷ ಕೇವಲ ಮುನ್ನೂರೈವತ್ತು.  ಇದರಿಂದ ಬೆಳೆಯ ಖರ್ಚಿನ ಅರ್ಧ ಕೂಡಾ ದಕ್ಕಲಿಲ್ಲ.

ಹೀಗೇತಕ್ಕೆ ಎಂದು ವಿಚಾರಿಸ ಹೊರಟರೆ ಒಬ್ಬೊಬ್ಬರಿಂದ ಒಂದೊಂದು ರೀತಿ ಉತ್ತರ. ರೈತರು ಎಪಿಎಂಸಿ ಮಾರುಕಟ್ಟೆಯ ದಲಾಲರತ್ತ ಕೈ ತೋರಿಸಿದರೆ, ದಲಾಲರು ಮಾರುಕಟ್ಟೆಗೆ ಬಂದು ಹತ್ತಿ ಖರೀದಿಸುತ್ತಿದ್ದ ಖರೀದಿದಾರರತ್ತ ಕೈ ತೋರಿದರು. ಹೀಗೆ ಈ ಸರಪಣಿಯನ್ನು ಹಿಡಿದು ಹುಡುಕುತ್ತಾ ಹೋದರೆ ಹತ್ತಿಯ ಬೆಲೆ ಏರುಪೇರಿನ ಮೂಲ ಬಾಂಬೆ, ಅಹಮದಾಬಾದುಗಳ ಹತ್ತಿ ಗಿರಣಿಗಳು ಮತ್ತು ಅವರಿಗೆ ಸರಬರಾಜು ಮಾಡುತ್ತಿದ್ದ ಬೃಹತ್ ಹೋಲ್‌ಸೇಲ್ ವ್ಯಾಪಾರಿಗಳ ಹತ್ತಿರ ನಿಂತಿತು.

ಅಲ್ಲಿಗೆ ನಿಂತಿತೇನೋ ಎಂದು ನೋಡಿದರೆ ಅದು ಆ ಪ್ರದೇಶದಲ್ಲಿ ಬಹಳ ಜನಪ್ರಿಯವಾಗಿದ್ದ ಒಂದು ಜೂಜಾಟದ ಕಡೆಗೆ ಎಳೆದೊಯ್ದಿತು. ಓಸಿ ಆಟ, ಮಟ್ಕಾ ಎಂಬ ಜೂಜಾಟ ದ ಬಗ್ಗೆ ಉತ್ತರ ಕರ್ನಾಟಕದ ಜನಕ್ಕೆ ಬಿಟ್ಟರೆ ಬೇರೆಯವರಿಗೆ ಗೊತ್ತಾಗಲಿಕ್ಕಿಲ್ಲ. ಪ್ರತಿ ದಿನ ಓಪನಿಂಗ್, ಕ್ಲೋಸಿಂಗ್ ಎಂಬ ಸಂಖ್ಯೆಗಳು ಎಷ್ಟಿರುತ್ತವೆ ಎಂದು ಊಹಿಸಿ  ಬಾಜಿ ಕಟ್ಟಬೇಕು. ಊಹೆ ಸರಿಯಾಗಿದ್ದರೆ ಅವರಿಗೆ ಲಾಟರಿ ಹೊಡೆದಂತೆ ಹಣ.

ಈ ಓಸಿ ಕತೆಯೇಕೆ ಹತ್ತಿ ದರದ ವಿಚಾರದಲ್ಲಿ ಎಂದರೆ ಅದೇ ಮೂಲ. ಓಸಿ ಸೂಚಿಸುವ ಓಪನಿಂಗ್ ಕ್ಲೋಸಿಂಗ್ ಯಾವುದೆಂದರೆ ಪ್ರತಿದಿನ ನ್ಯೂಯಾರ್ಕ್ ಹತ್ತಿ ಮಾರುಕಟ್ಟೆ ತೆರೆದಾಗಿನ ದರ ಮತ್ತು ಕೊನೆಯ ದರ. ಇದು ಎಷ್ಟು ಏರುಪೇರಾಗುತ್ತಿತ್ತೆಂದರೆ ಯಾರಿಗೂ ಊಹಿಸಲು ಸಾಧ್ಯವೇ ಇಲ್ಲ ಎಂಬಂತೆ.

ಇಂದಿನ ಸ್ಟಾಕ್ ಮಾರ್ಕೆಟ್‌ನಲ್ಲಿ ಶೇರು ದರಗಳು ಅಥವಾ ಸೂಚ್ಯಾಂಕಗಳಿದ್ದಂತೆ. ಹೀಗೆ ಅಂತರರಾಷ್ಟ್ರೀಯ ಹತ್ತಿ ದರಗಳ ಏರುಪೇರು ಭಾರತದ ಹತ್ತಿ ದರಗಳನ್ನು ಬುಡಮೇಲು ಮಾಡುತ್ತಿದ್ದವು. ರೈತರ ಬದುಕಿನಲ್ಲಿ ಜೂಜಾಟವಾಡುತ್ತಿದ್ದವು. ಹತ್ತಿ ದರಗಳನ್ನು ನಿಧಾನವಾಗಿ ವರುಷದಿಂದ ವರುಷಕ್ಕೆ ಏರಿಸುತ್ತಾ ಬರುವುದು; ಒಮ್ಮೆಗೇ ಬಹಳ ಲಾಭಕಾರಿ ಎಂಬಂತೆ ಏರಿಸಿಬಿಡುವುದು; ಆಗ ಒಳ್ಳೆಯ ಆದಾಯದ ಆಸೆಯಿಂದ ಬಹಳಷ್ಟು ರೈತರು ಹತ್ತಿ ಬೆಳೆಯುವುದು;

ಹೀಗೆ ಹತ್ತಿಯ ಉತ್ಪಾದನೆ ಗಣನೀಯವಾಗಿ ಹೆಚ್ಚಿದ ಕೂಡಲೇ ಹತ್ತಿಯ ಬೆಲೆ ಕುಸಿಯುವಂತೆ ಮಾಡಿ ಹತ್ತಿ ಗಿರಣಿಗಳ ಮುಂದಿನ‌ ಹಲವು ವರ್ಷಗಳ ಅಗತ್ಯವನ್ನು ಒಮ್ಮೆಲೆ ಖರೀದಿಸಿ ಸ್ಟಾಕ್ ಮಾಡಿಟ್ಟುಕೊಳ್ಳುವುದು, ಇದು ದೇಶದ, ವಿದೇಶಗಳ ಬೃಹತ್ ಹತ್ತಿ ಗಿರಣಿ ಮಾಲೀಕರು ರೈತರನ್ನು ತಮ್ಮ ದುರ್ಲಾಭದ ಅಗತ್ಯಕ್ಕೆ ತಕ್ಕಂತೆ ಕುಣಿಸುತ್ತಿದ್ದ ರೀತಿ.

‘ಹೊಲದಾಗ ಬೆಳೆ ಭರಪೂರಾ
ದರದಾಗ ಎಲ್ಲ ಏರಪೇರಾ’
ಹೀಗೆ ವೆಚ್ಚದ ಏರಿಕೆ, ಫಸಲಿನ ದರದ ಕುಸಿತದ ಇಬ್ಬಾಯ ಅಡಕತ್ತರಿಯಲ್ಲಿ ರೈತ ಸಿಲುಕಿ ಒದ್ದಾಡುತ್ತಿದ್ದ. ಬರಗಾಲದ ಒಣ ಪ್ರದೇಶಕ್ಕೆ ನೀರು ಹರಿದಾಗ ಇಲ್ಲಿಯ ರೈತರಿಗೆ ಬಹಳ ಆನಂದವಾಗಿತ್ತು. ಆದರೆ ಈಗ ?

1979-80 ರ  ಹತ್ತಿ ಬೆಲೆಯ ತೀವ್ರ ಕುಸಿತದಿಂದ ರೈತರು ಕಂಗಾಲಾದರು. ಹತ್ತಿ ಬೆಳೆ ಬೆಳೆಯುವುದಕ್ಕೆ  ರಸಗೊಬ್ಬರ, ಕೀಟನಾಶಕಗಳ ಅಂಗಡಿಯಲ್ಲಿ ಹಾಗೂ ವಿವಿಧ ಹಬ್ಬ ಹರಿದಿನಗಳ, ಮದುವೆ ಮೊದಲಾದ ಸಮಾರಂಭಗಳ ಖರ್ಚಿಗಾಗಿ ಜವಳಿ ಮೊದಲಾದ ಅಂಗಡಿಗಳಲ್ಲಿ ರೈತರು ಸಾಲ ಮಾಡಿದ್ದರು. ಆದ್ದರಿಂದ ನರಗುಂದದ ಪೇಟೆ ಬೀದಿಯಲ್ಲಿ ಅವರು ಮುಖ ತೋರಿಸಲಾಗದ ಪರಿಸ್ಥಿತಿ ರೈತರದಾಗಿತ್ತು. ಮನೆಯ ತುರ್ತಿಗೆ ಬೇಕಾದ ದವಸ, ಲವಾಜಮೆಗಳೂ ಕೂಡಾ ಹುಟ್ಟದಂತಾಗಿತ್ತು. ಇಂತಹ ದುಸ್ಥಿತಿಯಲ್ಲಿ ಗುಂಡೂರಾವ್ ಬೆಟರ್‌ಮೆಂಟ್ ಲೆವಿ, ನೀರಿನ ದರ ಮೊದಲಾದವುಗಳನ್ನು ಕಠಿಣವಾಗಿ ವಸೂಲಿ ಮಾಡಲೇಬೇಕೆಂಬ ಕಟ್ಟಾಜ್ಞೆ ವಿಧಿಸಿ ಹೊರಟರು.

ಈ ಬೆಟರ್‌ಮೆಂಟ್ ಲೆವಿ ಎಂದರೆ ನೀರಾವರಿ ಅಣೆಕಟ್ಟು ಕಟ್ಟುವುದಕ್ಕೆ ಆದ ಖರ್ಚನ್ನು ರೈತರಿಂದ ಪಡೆದುಕೊಳ್ಳುವ ತೆರಿಗೆ. ಇದು ಎಷ್ಟು ದುಬಾರಿ ಎಂದರೆ ಅಲ್ಲಿ‌ ಆಗ ಭೂಮಿಯ ಬೆಲೆ ಎಷ್ಟಿದೆಯೋ ಅಷ್ಟಿತ್ತು. ಅಂದರೆ ರೈತರು ತಮ್ಮ ಸ್ವಂತ ಭೂಮಿಯನ್ನು ಸರ್ಕಾರದಿಂದ ಮತ್ತೆ ಕೊಂಡಂತೆ. ಮುಖ್ಯಂತ್ರಿಯ ಆದೇಶದ ಮೇರೆಗೆ ಅದನ್ನು ವಸೂಲಿ ಮಾಡಿ ಸರ್ಕಾರವನ್ನು ಮೆಚ್ಚಿಸಲು ಜಿಲ್ಲಾಧಿಕಾರಿ ರೇಣುಕಾ ವಿಶ್ವನಾಥನ್ ಕಠಿಣ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದರು. ಅಲ್ಲಿಯ ತಹಸೀಲ್ದಾರ್ ಬೆಕ್ಕಿನಾಳ್ಕರ್ ಡಂಗೂರ ಹೊಡೆಸಿ ಹಳ್ಳಿಗಳಲ್ಲಿ ರೈತರ ಮನೆಗಳಿಗೆ ನುಗ್ಗಿ ಅವರ ಚರಾಸ್ತಿಗಳನ್ನು ಹರಾಜು ಹಾಕತೊಡಗಿದರು. ಮೊದಲೇ ಕಷ್ಟದಲ್ಲಿದ್ದ ರೈತರಲ್ಲಿ ಈ ದೌರ್ಜನ್ಯ ಅಪರಿಮಿತ ಸಿಟ್ಟನ್ನು ಉಕ್ಕಿಸಿತು.

ನವಲಗುಂದ ತಾಲೂಕಿನಲ್ಲಿ ಆರಂಭವಾದ ಹೋರಾಟ ನೆರೆಯ ನರಗುಂದಕ್ಕೂ, ಸೌದತ್ತಿಗೂ ಹಬ್ಬಿತು.. ನರಗುಂದದಲ್ಲಿ ತಹಸೀಲ್ದಾರ್ ಕಛೇರಿ ಮುಂದೆ ನಿತ್ಯ ಸತ್ಯಾಗ್ರಹ ಆರಂಭವಾಯಿತು. ಮೂರು ತಿಂಗಳಿಗೂ ಹೆಚ್ಚು  ಸತ್ಯಾಗ್ರಹ ನಡೆದರೂ ಸರ್ಕಾರ ಗಮನ ನೀಡಲಿಲ್ಲ. ಕರ್ನಾಟಕ ವಿವಿಯಲ್ಲಿ ಪಿ.ಎಚ್.‌ಡಿಗಾಗಿ ಅಧ್ಯಯನ ನಡೆಸುತ್ತಿದ್ದ ವಿ.ಎನ್ ಹಳಕಟ್ಟಿ ಯವರು 1957 ರಲ್ಲಿ ಸ್ಥಾಪಿತವಾಗಿದ್ದ ಕರ್ನಾಟಕ ಪ್ರಾಂತ ರೈತ ಸಂಘ ಸೇರ್ಪಡೆಯಾಗಿದ್ದ ರಾಷ್ಟ್ರ ಮಟ್ಟದ ಸಂಘಟನೆ ಅಖಿಲ ಭಾರತ ಕಿಸಾನ್ ಸಭಾದ ಹೋರಾಟ ಮತ್ತು ಕಣ್ಣೋಟಗಳಿಂದ ಸ್ಫೂರ್ತಿ ಪಡೆದಿದ್ದರು.

ಮಲಪ್ರಭಾ ರೈತರ ಸಮಸ್ಯೆಗಳನ್ನು ಕಂಡ ಮೇಲೆ ಅಖಿಲ ಭಾರತ ರೈತ ನಾಯಕರಾದ ಹರ್ಕಿಷನ್ ಸಿಂಗ್ ಸುರ್ಜಿತ್‌ರವರು ದೇಶದ ಸ್ವಾತಂತ್ರ್ಯಾನಂತರ ನಿರ್ಮಿಸಲ್ಪಟ್ಟ ಮೊತ್ತ ಮೊದಲ ಮತ್ತು ಬೃಹತ್ ನೀರಾವರಿ ಯೋಜನೆಯಾದ ಭಾಕ್ರಾ ನಂಗಲ್ ನೀರಾವರಿ ಪ್ರದೇಶದಲ್ಲಿ ಇದೇ ಬೆಟರ್‌ಮೆಂಟ್ ಲೆವಿ ಹಾಗೂ ಕೃಷಿ ಲಸಗುವಾಡುಗಳ ಬೆಲೆ ಏರಿಕೆ ವಿರುದ್ಧ ಸಂಘಟಿಸಿದ್ದ ಹೋರಾಟದ ಬಗ್ಗೆ, ಕೃಷಿ ಸಮಸ್ಯೆಗಳ ಬಗ್ಗೆ ಕಿಸಾನ್ ಸಭಾ ವಿಶ್ಲೇಷಣೆಯನ್ನು ಅಧ್ಯಯನ ಮಾಡಿದರು. ಈ ಪ್ರದೇಶದ ಹಳ್ಳಿಗಳಲ್ಲಿ ರೈತರ ಸಭೆಗಳನ್ನು ಸಂಘಟಿಸಿ ಅವರು ಆಡುತ್ತಿದ್ದ ಮಾತುಗಳು ರೈತರನ್ನು ಸೆಳೆದವು.

ಸರ್ಕಾರಿ ಅಧಿಕಾರಿಯಾಗಿದ್ದರೂ ನಾನು ನಮ್ಮದೇ ಇಲಾಖೆಯ ಕಾರ್ಯಕ್ರಮಗಳ ಹಳ್ಳಿಗಳ ಮಟ್ಟದ ಹಲವು ಸಭೆಗಳಲ್ಲಿ ಹಾಗೂ ರೈತರೊಂದಿಗಿನ ಮಾತುಕತೆಗಳಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮೇಲೆ ವಿವರಿಸಿದ ನನ್ನ ಅಧ್ಯಯನದ ಮೂಲಕ ಕಂಡ ಮೂಲ ಕಾರಣಗಳನ್ನು ವಿವರಿಸುತ್ತಿದ್ದೆ.

ಮೂರೂ ತಾಲ್ಲೂಕು ಮಟ್ಟದ ರೈತ ಸಮಾವೇಶಗಳು ಜರುಗಿದವು. ಬೃಹತ್ ಪ್ರಮಾಣದಲ್ಲಿ ರೈತರು ಈ ಸಮಾವೇಶಗಳಲ್ಲಿ ಭಾಗಿಯಾದರು. ಈ ಸಮಾವೇಶಗಳಲ್ಲಿ ತಾಲ್ಲೂಕು ಮಟ್ಟದ ರೈತ ಹೋರಾಟ ಸಮನ್ವಯ ಸಮಿತಿಗಳನ್ನು ಆರಿಸಲಾಯಿತು. ನರಗುಂದ ತಾಲೂಕಿನ ಸಮಾವೇಶ ಜೂನ್ 30 ರಂದು ಜರುಗಿತು. ಅಂದು ಹಳಕಟ್ಟಿಯವರು ನನ್ನನ್ನು ಹುಡುಕಿಕೊಂಡು ಬಂದರು. ನನ್ನ ಅಧ್ಯಯನದ ಹಾಗೂ ಮಾತನಾಡುತ್ತಿದ್ದ ವಿಷಯಗಳು ಅವರ ಕಿವಿಗೆ ಮುಟ್ಟಿದ್ದವು. ಅಂದು ನಾಲ್ಕು ಗಂಟೆಗಳ ಕಾಲ ನಾನೂ ಅವರೂ ರೈತರ ಸಮಸ್ಯೆಗಳ ಬಗ್ಗೆ ನಮ್ಮ ಅಧ್ಯಯನ ಹಾಗೂ ಹಳ್ಳಿಗಳ ಅನುಭವವನ್ನು ಪರಸ್ಪರ ಹಂಚಿಕೊಂಡೆವು.

ತಾಲೂಕು ಸಮನ್ವಯ ಸಮಿತಿಗಳನ್ನು ಆಧರಿಸಿ ಒಟ್ಟು ಮಲಪ್ರಭಾ ಅಚ್ಚುಕಟ್ಟು ರೈತ ಹೋರಾಟ ಸಮನ್ವಯ ಸಮಿತಿ ರಚಿಸಿಕೊಂಡರು. ಅದರ ಏಳು ಜನ ಸಂಚಾಲಕರು ಈ ಪ್ರದೇಶದಲ್ಲಿ ಮನೆಮಾತಾದರು. ಮೂರೂ ತಾಲ್ಲೂಕುಗಳಲ್ಲಿ ನಡೆಯುತ್ತಿದ್ದ ದೀರ್ಘಕಾಲದ ಧರಣಿ ಸತ್ಯಾಗ್ರಹಗಳು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಮನವಿಗಳು, ತಾಲ್ಲೂಕು ಸಮಾವೇಶಗಳಿಗೆ ಯಾವ ಪ್ರತಿಕ್ರಿಯೆ ಬಾರದ ಕಾರಣ
ಈ ಸಮನ್ವಯ ಸಮಿತಿ ಮೂರು ತಾಲ್ಲೂಕುಗಳಲ್ಲಿ 1980 ರ  ಜುಲೈ 21 ರಂದು ಏಕಕಾಲಕ್ಕೆ ಬಂದ್ ಕರೆ ನೀಡಿತು. ಈ ಬಂದ್ ದಿನವೇ ಗದಗ್ ತಾಲೂಕಿನಲ್ಲಿ ಬೆಲೆಏರಿಕೆ ಬಗ್ಗೆ ಬಂದ್ ಕರೆಯನ್ನು ಅಲ್ಲಿನ ಕೆಲವು ಸಂಘಗಳು ಕರೆ ನೀಡಿದವು. ಚಳುವಳಿಯ ಕಾವು ಬಹು ವೇಗವಾಗಿ ಏರತೊಡಗಿತು.

ಮೂರು ತಾಲೂಕಗುಗಳ ಬಂದ್ ದಿನದ ಘಟನೆಗಳು ರಾಜ್ಯದ ಇತಿಹಾಸದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಆ ಬಂದ್ ಗೆ ಮೂರು ನಾಲ್ಕು ದಿನಗಳ ಹಿಂದೆಯೇ ರೈತರು ಗುಂಪು ಗುಂಪಾಗಿ ಸರ್ಕಾರಿ ಕಛೇರಿಗಳಿಗೆ, ಬ್ಯಾಂಕುಗಳಿಗೆ ಭೇಟಿ ನೀಡಿ ಅಂದು ಸರ್ಕಾರಿ ಕಛೇರಿ, ಬ್ಯಾಂಕುಗಳನ್ನೆಲ್ಲಾ ಮುಚ್ಚಲು ತಾಕೀತು ಮಾಡಿದರು.

ಬಂದ್ ಸಿದ್ಧತೆಯ ಬಿರುಸನ್ನು ನೋಡಿ ನರಗುಂದದಲ್ಲಿದ್ದ ಅಧಿಕಾರಿಗಳಿಗೆ ಬಹಳ ಹೆದರಿಕೆ ಉಂಟಾಯಿತು. ಅತ್ಯಂತ ಹೆಚ್ಚು ಹೆದರಿದವರು ಅತ್ಯಂತ ಹೆಚ್ಚು ಭ್ರಷ್ಟಾಚಾರ ಮಾಡಿದ್ದ ನೀರಾವರಿ ಇಲಾಖೆಯವರು. ನೀರನ್ನೇ ಹರಿಸದ, ಹರಿಸಲೇ ಆಗದ ಹೊಲಗಳಿಗೂ ನೀರು ಹರಿಸಲಾಗಿದೆಯೆಂದು ಸುಳ್ಳು ಲೆಕ್ಕ ನೀಡಿ ಬಜೆಟ್ ಹಣ ಖರ್ಚು ಹಾಕಿದ್ದರು. 

ಕಾಲುವೆಗಳ ನಿರ್ಮಾಣದ ಗುಣಮಟ್ಟದಲ್ಲಿ ಬಹಳ ಖೋತಾ ಆಗಿತ್ತು. ಈ ಅಧಿಕಾರಿಗಳು ತಮ್ಮ ಕುಟುಂಬಗಳನ್ನು ಮೂರು ನಾಲ್ಕು ದಿನಗಳ ಹಿಂದೆಯೇ ತಮ್ಮ ಊರುಗಳಿಗೆ ರವಾನಿಸಿ, ಬಂದ್ ಹಿಂದಿನ ದಿನವೇ ತಾವೂ ನರಗುಂದ ಬಿಟ್ಟರು. ಹಾಗೆಯೇ ಬೇರೆ ಇಲಾಖೆಗಳ  ಅಧಿಕಾರಿಗಳು ಕೂಡಾ. ರೈತರು ಯಾರ ಮೇಲೂ ಕೈ ಮಾಡದೆ ಶಾಂತಿಯುತವಾಗಿಯೇ ತಮ್ಮ ಹೋರಾಟ ಮಾಡಿದ್ದರೂ ಕೂಡಾ ರೈತರ ಕೋಪದ ಬಿಸಿ ಹಾಗಿತ್ತು. ಅಂದು ನರಗುಂದದಲ್ಲಿದ್ದ ಅಧಿಕಾರಿಗಳೆಂದರೆ ತಹಸೀಲ್ದಾರ್ ಮತ್ತು ಕೃಷಿ ಸಹಾಯಕ ನಿರ್ದೇಶಕನಾಗಿದ್ದ ನಾನು ಮಾತ್ರ.

ಜುಲೈ 21 ರ ಬೆಳಗ್ಗೆಯೇ ರೈತರು ನರಗುಂದದಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಸೇರಿದರು. ಒಂದು ದೊಡ್ಡ ಗ್ರಾಮ ಮಾತ್ರವೇ ಆಗಿದ್ದ ನರಗುಂದದಲ್ಲಿ ಅದು ಬಹು ದೊಡ್ಡ ಸಂಖ್ಯೆ. ಬೆಳಗ್ಗೆ ಒಂಬತ್ತು ಗಂಟೆಗೇ ರೈತರು ಮತ್ತೆ ಬಂದು ಕಛೇರಿಗಳಿಗೆ ಬೀಗ ಹಾಕಿಸಿದರು. ನಮ್ಮ ಕಛೇರಿಯೊಂದೇ ಅಂದು ತೆರೆದಿಟ್ಟದ್ದು.

ರೈತರು ನನ್ನನ್ನು ಕಛೇರಿಯ ಬಾಗಿಲಲ್ಲಿ ನೋಡಿ ಕೈ ಬೀಸಿ ನಮಿಸಿ ಹೊರಟು ಹೋದರು. ನಾನು ಊರೊಳಗಿನ ಪರಿಸ್ಥಿತಿ ತಿಳಿದುಕೊಳ್ಳಲು ಜೀಪು ತರ ಹೇಳಿದರೆ ನಮ್ಮ ಡ್ರೈವರ್ ಎಷ್ಟು ಧೈರ್ಯ ಹೇಳಿದರೂ ಜೀಪು ತೆಗೆಯಲೊಪ್ಪಲಿಲ್ಲ. ಅವನು ಅದೇ ಊರಿನವನಾದ ಕಾರಣ ಚಳುವಳಿಯ ಶಾಖದ ಅಳತೆ ಅವನಿಗೆ ಚೆನ್ನಾಗಿ ಗೊತ್ತಾಗಿತ್ತು. ಅವನು ಬೇಡ ಬೇಡವೆಂದರೂ ಅವನ ಸೈಕಲ್ ಅನ್ನೇ ತೆಗೆದುಕೊಂಡು ನಗರದಲ್ಲಿ ಸುತ್ತಾಡುತ್ತಾ ರೈತರ ಮೆರವಣಿಗೆಯನ್ನು ನೋಡಿ ತಹಸೀಲ್ದಾರ್ ಕಛೇರಿಯ ಕಡೆಗೆ ಬಂದೆ.

ಅಂದು ಬೆಳಗ್ಗೆ ಎಂಟು ಗಂಟೆಗೆ ತಹಸೀಲ್ದಾರ್ ಕಛೇರಿಯ ಸುತ್ತ ರೈತರು ಕೈ ಕೈ ಹಿಡಿದುಕೊಂಡು ನಿಂತು ಸಿಬ್ಬಂದಿಯನ್ನು ಒಳಗೆ ಬಿಡಲಿಲ್ಲ.  ಅವರೆಲ್ಲಾ ದೂರ ನಿಂತಿದ್ದರು. ತಹಸೀಲ್ದಾರ್ ರವರನ್ನೂ ಒಳಗೆ ಬಿಡಲಿಲ್ಲ. ತಹಸೀಲ್ದಾರ್ ಡಿಸಿಗೆ ಹೊರಗಿನಿಂದ ಫೋನ್ ಮಾಡಿ ವರದಿ ಮಾಡಿದರು. ಡಿಸಿಯವರಿಂದ ಪೋಲೀಸರ ಸಹಾಯ ಪಡೆದು ಒಳಗೆ ಹೋಗಲೇಬೇಕು. ಏನೇ ಆದರೂ ತಾಲೂಕು ಕಛೇರಿ ಮುಚ್ಚುವಂತಿಲ್ಲ ಎಂದು ಖಡಕ್ ಆದೇಶವಾಯಿತು.

ಸರಿ.ಡಿವೈಎಸ್ಪಿ, ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ತಹಸೀಲ್ದಾರ್ ರವರನ್ನು ಕಛೇರಿಯೊಳಕ್ಕೆ ಹೊಗಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ರೈತರು ಒಪ್ಪಲಿಲ್ಲ. ರೈತರು ಬಾಗಿಲ ಮುಂದೆ ಒತ್ತಾಗಿ ಮಲಗಿ ಹೋಗುವುದಾದರೆ ನಮ್ಮನ್ನು ತುಳಿದು ಹೋಗಿ ಎಂದು ಸವಾಲೆಸೆದರು. ಅಧಿಕಾರಿಗಳು ಮೂವರೂ ರೈತರನ್ನು ತುಳಿಯುತ್ತಲೇ ಕಛೇರಿ ಹೊಕ್ಕು ಆಸನಗಳಲ್ಲಿ ವಿರಾಜಮಾನರಾದರು.

ಇತ್ತ ಊರಿನ ಒಳಗಿನಿಂದ ಹತ್ತಾರು ಸಾವಿರ ರೈತರ ಮೆರವಣಿಗೆ ಹೊರಟಿತ್ತು. ಸಿಪಾಯಿ ದಂಗೆಯ ಕಾಲದ ಪ್ರಸಿದ್ಧಿಯ ನರಗುಂದ ಬಂಡಾಯದ ಪಾಳೆಯಗಾರ ಬಾಬಾ ಸಾಹೇಬನ ಮೂರ್ತಿಗೆ ಹಾರ ಹಾಕಿದರು. ಅವನ ಸೈನ್ಯ ಬ್ರಿಟಿಷ್ ಅಧಿಕಾರಿಯ ಶಿರಚ್ಛೇದ ಮಾಡಿ ಅವರ ತಲೆಗಳನ್ನು ತೂಗು ಹಾಕಿದ್ದ ದೊಡ್ಡ ದಿಡ್ಡಿ ಬಾಗಿಲಿಗೆ  ಕೆಂಪಗಸಿ ಎಂದು ಹೆಸರಾಗಿತ್ತು. ಅದಕ್ಕೆ ಗೌರವ ಸಲ್ಲಿಸಿ, ಅಂದಿನ ಆ ಹೋರಾಟದಿಂದ ಸ್ಫೂರ್ತಿ ಪಡೆದರು. ಅಲ್ಲಿಂದಲೇ ಆರಂಭವಾದ ಮೆರವಣಿಗೆ ನಂತರ ದಾರಿಯಲ್ಲಿ ತೆರೆದಿದ್ದ ಬ್ಯಾಂಕುಗಳನ್ನು ಮುಚ್ಚಿಸುತ್ತಾ ತಹಸೀಲ್ದಾರ್ ಕಛೇರಿಯ ಕಡೆ ಬರುತ್ತಿತ್ತು.

ನರಗುಂದ ತಹಸೀಲ್ದಾರ್ ಕಛೇರಿ ಸುಟ್ಟು ಬೂದಿಯಾಯ್ತು-
ರೈತರ ಮೆರವಣಿಗೆ ಘೋಷಣೆಗಳನ್ನು ಹಾಕುತ್ತಾ ತಹಸೀಲ್ದಾರ್ ಕಛೇರಿಯ ಕಡೆಗೆ ಬಂದಿತು. ದಾರಿಯಲ್ಲಿಯೇ ಅವರಿಗೆ ರೈತರನ್ನು ತುಳಿದುಕೊಂಡು ಅಧಿಕಾರಿಗಳು ಕಛೇರಿಯ ಒಳಹೊಕ್ಕ ಸುದ್ದಿ ಮುಟ್ಟಿತು. ಬಹಳ ಶಿಸ್ತಿನಿಂದ ಎರಡು ಸಾಲಾಗಿ ಘೋಷಣೆ ಹಾಕುತ್ತಾ ಮೆರವಣಿಗೆಯಲ್ಲಿ ನಡೆದು ಬರುತ್ತಿದ್ದ ರೈತರು ಸಾಲು ಒಡೆದು ಸಿಟ್ಟಿನಿಂದ ತಹಸೀಲ್ದಾರ್ ಕಛೇರಿಯ ಕಡೆಗೆ ನುಗ್ಗಿದರು. ಅದರ ಮುಂದೆ ಇದ್ದ ಪೋಲೀಸರ ರಕ್ಷಣೆಯನ್ನು ತಳ್ಳಿಕೊಂಡು ರಭಸದಿಂದ ಒಳ ನುಗ್ಗಿದರು.

ಒಳಗೆ ತಮ್ಮ ಆಸನದಲ್ಲಿ ಕುಳಿತಿದ್ದ ತಹಸೀಲ್ದಾರ್, ಸುತ್ತ ಇದ್ದ ಡಿ.ವೈ.ಎಸ್.ಪಿ, ಸರ್ಕಲ್ ಇನ್ಸ್‌ಪೆಕ್ಟರ್ ರವರಿಗೆ ಮುಖ ಮೂತಿ ನೋಡದೆ ಬಾರಿಸಿದರು. ತಹಸೀಲ್ದಾರ್ ರವರ ಕಿವಿ ಕಿತ್ತು ಹೋಯಿತು. ಡಿ.ವೈ.ಎಸ್.ಪಿ,ಇನ್ಸ್‌ಪೆಕ್ಟರ್ ರವರುಗಳ ತಲೆ ಒಡೆಯಿತು. ಇನ್ನೊಂದಷ್ಟು ಜನ ತಮ್ಮ ಭೂಮಿ, ಬೆಟರ್‌ಮೆಂಟ್ ಲೆವಿ ಕಂದಾಯದ ಲೆಕ್ಕಗಳನ್ನು ಒಳಗೊಂಡ ದಾಖಲೆಗಳತ್ತ ತಮ್ಮ ಸಿಟ್ಟನ್ನು ಹರಿಸಿದರು. ಎಲ್ಲ ದಾಖಲೆ, ಕಡತಗಳಿಗೆ ಬೆಂಕಿ ಇಟ್ಟರು. ಇಡೀ ತಹಸೀಲ್ದಾರ್ ಕಛೇರಿ ಧಗ ಧಗ ಬೆಂಕಿ ಹತ್ತಿ ಉರಿಯಿತು.

ಇತ್ತ ಇನ್ನೂ ಹೊರಗಿದ್ದ ರೈತರನ್ನು ಚದುರಿಸಲು ಹೊರಗಿದ್ದ ಏಕ ಮಾತ್ರ ಪೋಲಿಸ್ ಅಧಿಕಾರಿಯಾದ ಸಬ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದರು. ಆಗ ಚಿಕ್ಕ ನರಗುಂದ ಗ್ರಾಮದ ಒಬ್ಬ ರೈತ ನೆಲಕ್ಕುರಳಿದ. ಇದರಿಂದ ರೈತರು ಮತ್ತಷ್ಟು ಉದ್ರಿಕ್ತರಾಗಿ ಅಲ್ಲಿದ್ದ ಪೋಲೀಸು ಜೀಪನ್ನು ಅದರಲ್ಲಿದ್ದ ಗುಂಡುಗಳ ಪೆಟ್ಟಿಗೆ ಸಮೇತ ಬೆಂಕಿಯಿಟ್ಟರು. ರಿಸರ್ವ್ ವ್ಯಾನಿನಲ್ಲಿದ್ದ ಮತ್ತು ಹೊರಗಿದ್ದ ಪೋಲೀಸರನ್ನು ಅಟ್ಟಿಸಿಕೊಂಡು ಹೋದರು. ಅವರುಗಳೆಲ್ಲ  ಸತ್ತೆನೋ ಕೆಟ್ಟೆನೋ ಎಂದು ದಿಕ್ಕಾಪಾಲಾಗಿ ಓಡಿದರು.  ಅಟ್ಟಿಸಿಕೊಂಡು ಬರುತ್ತಿದ್ದ ರೈತರಿಂದ ತಪ್ಪಿಸಿಕೊಳ್ಳಲು ತಮ್ಮ ಸಮವಸ್ತ್ರವನ್ನು ಕಿತ್ತು ಬೀಸಾಡುತ್ತಾ ಓಡಿದರು. ಹೊಳೆಗೆ, ತೊರೆಗೆ ಹಾರಿ ಬಚಾವಾದರು.

ಹೀಗೆ ಬಚಾವಾಗದವನು ಗುಂಡು ಹಾರಿಸಿದ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಟೇಲ್. ಅವನನ್ನು ರೈತರು ಅಟ್ಟಿಸಿಕೊಂಡು ಹೋದರು. ಅವನು ಪಕ್ಕದಲ್ಲಿದ್ದ ಆಸ್ಪತ್ರೆಯ ಒಳಹೊಕ್ಕ.ಅಲ್ಲಿ ಬಿಳಿ ಬೆಡ್ ಶೀಟ್ ಗಳ ಅಡಿಯಲ್ಲಿ ಮುಚ್ಚಿಟ್ಟರು ನರ್ಸ್ ಗಳು. ಈ ಅಧಿಕಾರಿ ಹೊಸತಾಗಿ ನರಗುಂದಕ್ಕೆ ಬಂದಿದ್ದ ಪ್ರಾಮಾಣಿಕ ಅಧಿಕಾರಿ. ಅಲ್ಲಿ ಅಂದು ವ್ಯಾಪಕವಾಗಿದ್ದ ಮಟ್ಕಾ ದಂಧೆಯಿಂದ ಬಡವರು ಕಷ್ಟಕ್ಕೊಳಗಾಗಿದ್ದನ್ನು ನೋಡಿ ಬಹಳ ಶ್ರಮವಹಿಸಿ ಅದನ್ನು ನಿಯಂತ್ರಿಸಿ ಮಟ್ಕಾ ದಂಧೆಯ ಮಾಫಿಯಾದ ಸಿಟ್ಟಿಗೊಳಗಾಗಿದ್ದ.

ರೈತ ಹೋರಾಟದ ಸಂದರ್ಭ ಬಳಸಿ ಮೆರವಣಿಗೆಯಲ್ಲಿ ಹೊಕ್ಕಿದ್ದ ಆ ಊರಿನ ಮಟ್ಕಾ ಜೂಜಾಟದ ಮಾಫಿಯಾ ದೊರೆಯ ಕೈಯಾಳುಗಳು ಅವನನ್ನು ಹುಡುಕಾಡಿ ಅವನ ಪೋಲೀಸ್ ಶೂಗಳ ಗುರುತು ಹಿಡಿದು ಪತ್ತೆ ಹಚ್ಚಿದರು. ಅವರ ಕೈಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಿಕ್ಕಾಗ ಅವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ನಡು ಹಗಲಲ್ಲೇ ಊರ ಮುಂದಣ ಬಯಲಲ್ಲಿ ಸಾಯಿಸಿದರು.

ನರಗುಂದದಲ್ಲಿ ರೈತರ ಬೇಟೆ –
ಈ ಎಲ್ಲಾ ಘಟನೆಗಳೂ ಮಧ್ಯಾಹ್ನ ಎರಡು ಗಂಟೆಯೊಳಗೆ ಸಂಭವಿಸಿಬಿಟ್ಟವು. ಸರ್ಕಾರವೊಂದರ ತಾಲೂಕು ಮಟ್ಟದ ಪ್ರತಿರೂಪವೆಂದರೆ ತಾಲೂಕು ಕಛೇರಿ ಮತ್ತು ಅಂದು ತಾಲೂಕಿನ ಪೋಲಿಸ್ ಮುಖ್ಯಾಧಿಕಾರಿ ಸಬ್ ಇನ್ಸ್‌ಪೆಕ್ಟರ್. ತಾಲೂಕು ಕಛೇರಿ ಸುಟ್ಟು ಹಾಕಲಾಗಿತ್ತು. ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಹತನಾಗಿದ್ದ. ತಹಸೀಲ್ದಾರ್, ಡಿ.ವೈ.ಎಸ್.ಪಿ, ಇನ್ಸ್‌ಪೆಕ್ಟರ್ ತೀವ್ರ ಗಾಯಗಳಿಂದ ಆಸ್ಪತ್ರೆ ಸೇರಿದ್ದರು.

ಸರ್ಕಾರಕ್ಕೆ ತೀವ್ರ ಪೆಟ್ಟಾಗಿತ್ತು.

ಈ ಸುದ್ದಿ ಮೇಲಕ್ಕೆ ವರದಿಯಾದೊಡನೆ ಮೇಲಿನ ಅಧಿಕಾರಿಗಳು ನರಗುಂದಕ್ಕೆ ಧಾವಿಸತೊಡಗಿದರು. ರಾತ್ರೋರಾತ್ರಿ ಅಂದಿನ ರಾಜ್ಯ  ಪೋಲೀಸ್ ಮುಖ್ಯಸ್ಥ (ಆಗ ಐಜಿಪಿ ಎಂದು ಕರೆಯಲಾಗುತ್ತಿತ್ತು) ನರಗುಂದಕ್ಕೆ ಆಗಮಿಸಿದರು. ಅಂದು ನರಗುಂದದಲ್ಲಿದ್ದವನು ನಾನೊಬ್ಬನೇ ಸರ್ಕಾರದ ಗೆಜೆಟೆಡ್ ಅಧಿಕಾರಿ. ತಹಸೀಲ್ದಾರ್ ಆಸ್ಪತ್ರೆಯಲ್ಲಿ. ಉಳಿದವರು ಪರಾರಿ‌. ಆದ್ದರಿಂದ ಈ ಎಲ್ಲರನ್ನೂ ಭೇಟಿ ಮಾಡಿ ನನಗೆ ಗೊತ್ತಿದ್ದ ವಿಷಯ ಹೇಳಬೇಕಾಯಿತು. ಎಲ್ಲ ಸೈಕಲ್ ನಲ್ಲಿಯೇ ಓಡಾಟ. ನಮ್ಮ ಡ್ರೈವರಂತೂ ಹೆದರಿ ಜ್ವರ ಬಂದಂತಾಗಿದ್ದ.

ಐಜಿಪಿ ಬಂದವರು ಮಾಡಿದ್ದೇನೆಂದರೆ ರೈತ ಹೋರಾಟದಲ್ಲಿ ಯಾವ ಪಾತ್ರವೂ ವಹಿಸದ ಮತ್ತು ಅಂದಿನ ಆಳುವ ಪಕ್ಷದ ತಾಲೂಕು ನಾಯಕರನ್ನು ಹಿಡಿತರಿಸಿದರು. ಆ ನಾಯಕರು ಒಂದು ರೀತಿ ನರಗುಂದವನ್ನಾಳುತ್ತಿದ್ದವರು. ತಾಲೂಕಿನ ಜನರಿಗೆ ಇವರ ಬಗ್ಗೆ ಭಯ ಮಿಶ್ರಿತ ಗೌರವ. ಅಲ್ಲಿಯ ಪೋಲೀಸರಂತೂ ಹೆಚ್ಚಿನವರು ಅವರ ಆಜ್ಞಾಧಾರಕರು. ಅವರು ‘ನಾವು ದಂಗೆಯಲ್ಲೇನೂ ಭಾಗವಹಿಸಿಲ್ಲ, ಸರ್ಕಾರದ ಬೆಂಬಲಿಗ, ನನಗೆ ಇಡೀ ತಾಲೂಕೇ ಹೆದರುತ್ತದೆ. ಯಾರೇನು ಮಾಡುತ್ತಾರೆ’ ಎಂಬ ಗತ್ತಿನಲ್ಲೇ ಠಾಣೆಗೆ ಬಂದರು. ಆದರೆ ಐಜಿಪಿ ಅವರಿಗೆ ‘ನೀನು ಆಳುವ ಪಕ್ಷದವನಾಗಿದ್ದರೆ ಗೆಣಸು ತಿನ್ನುತ್ತಿದ್ದೆಯಾ, ರೈತರು ಚಳುವಳಿಯಲ್ಲಿ ಭಾಗವಹಿಸದಂತೆ ಮಾಡುವುದು ನಿನ್ನ ಕೆಲಸವಾಗಿರಲಿಲ್ಲವೇ ?’  ಎಂದು ಪ್ರಶ್ನಿಸಿ ತಾವೇ ಸ್ವತಃ ಒದ್ದರಂತೆ. ಇಂತಹ ಉದಾಹರಣೆಗಳ ಮೂಲಕ ಪೋಲೀಸರಿಗೆ ಹೇಗೆ ಮುಂದಿನ ಕಾರ್ಯ ನಿರ್ವಹಿಸಬೇಕೆಂದು ಪ್ರಾಯೋಗಿಕವಾಗಿ ತೋರಿಸಿದ ಐಜಿಪಿ ನಿರ್ಗಮಿಸಿದರು.

ಮರುದಿನ ಮುಖ್ಯಮಂತ್ರಿ ಗುಂಡೂರಾವ್ ತಾವೇ ನರಗುಂದಕ್ಕೆ‌ ಆಗಮಿಸಿದರು. ಮುಖ್ಯ ಮಂತ್ರಿಗಳನ್ನು ಸ್ವಾಗತಿಸಲು ಪೋಲೀಸ್ ಅಧಿಕಾರಿಗಳು ನನ್ನನ್ನು ವಿನಂತಿಸಿದರು. ಅವರನ್ನು ಸುಟ್ಟ ತಾಲೂಕು ಕಛೇರಿ ಸುತ್ತಾಡಿಸಿ, ವಿವರಣೆ ನೀಡಬೇಕಾಯಿತು. ಅವರು ರೈತರ ಸಂಕಟಗಳ ಬಗ್ಗೆ, ಅದರ ಕಾರಣಗಳ ಬಗ್ಗೆ ನನ್ನ ವಿವರಣೆಯ ಕಡೆಗೆ ಗಮನವನ್ನೇ ಕೊಡಲಿಲ್ಲ. ಇದರಿಂದ ರೈತರ ಸಮಸ್ಯೆ ಎಷ್ಟು ತೀವ್ರವಾಗಿರಬಹುದು ಎಂದು ಗುಂಡೂರಾಯರು ಮನಗಾಣಲಿಲ್ಲ.

ಏಳು ತಿಂಗಳ ಹಿಂದೆಯೇ ತಮ್ಮ ಮುಂದೆ ಪ್ರತಿಭಟನೆ ಮಾಡಿ ರೈತ ನಾಯಕರು ವಿವರಿಸಿದ್ದ ಸಮಸ್ಯೆಗಳನ್ನು ತಾನು ಪರಿಹರಿಸಲು ಗಮನ ಕೊಡದುದರಿಂದ ಈ ದುಸ್ಥಿತಿ ಒದಗಿತು ಎಂಬ ಪಶ್ಚಾತ್ತಾಪವಂತೂ ಬಹುದೂರ. ಬದಲಾಗಿ  ಮತ್ತೆ ಗುಡುಗಿದರು : ನಾನು ಇವರನ್ನು ಸುಮ್ಮನೇ ಬಿಡುವುದಿಲ್ಲ ಎಂದು. ಪತ್ರಿಕೆಗಳ ಮುಖಪುಟದಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅಚ್ಚಾಯಿತು.

ಈ ಮಾತುಗಳು, ನರಗುಂದದ ರೈತರ ಮೇಲೆ ದೌರ್ಜನ್ಯ ಎಸಗುವುದಕ್ಕೆ ಕೊಟ್ಟ ರಾಜಾಜ್ಞೆಯಂತಿತ್ತು. ಸರ್ಕಾರದ ಉನ್ನತ ವಲಯಗಳಿಗೆ ನರಗುಂದ ಘಟನೆಯಿಂದ ಬಹಳ ಅಪಮಾನವಾಗಿತ್ತು. ಇದನ್ನು ಸ್ಥಳೀಯ ಕಂದಾಯ ಮತ್ತು ಪೋಲೀಸ್ ಅಧಿಕಾರಿಗಳು ತಮ್ಮ ವಿರುದ್ಧ ಇದ್ದವರ ಮೇಲೆ ಸೇಡು ತೀರಿಸಿಕೊಳ್ಳಲು ಬಳಸಿಕೊಳ್ಳಲು ಪ್ರಯತ್ನಿಸಿದರು. ನರಗುಂದಕ್ಕೆ ಸಂಬಂಧಿಸಿದ್ದ ಗದಗ್ ಉಪವಿಭಾಗದ ಅಸಿಸ್ಟೆಂಟ್ ಕಮೀಷನರ್ ನೇರವಾಗಿಯೇ ಪೋಲೀಸರಿಗೆ ನಿರ್ದೇಶನ ನೀಡಿದ : ಸರ್ಕಾರಿ ಸಭೆ, ಕಾರ್ಯಕ್ರಮಗಳಲ್ಲಿ ತರಲೆ ಮಾಡುವವರನ್ನು ಪಟ್ಟಿ ಮಾಡಿ. ರೌಂಡ್ ಅಪ್ ಮಾಡಿ ಸರಿಯಾಗಿ ಪಾಠ ಕಲಿಸಿರಿ ಎಂದು. ಮುಂದೆ ಅವರು ರಾಜ್ಯದಲ್ಲಿ ಮುಖ್ಯ ಹುದ್ದೆಗಳನ್ನು ಪಡೆದರು ಎಂಬುದು ಬೇರೆ ಮಾತು. ಹೀಗಿತ್ತು ಸರ್ಕಾರಿ ಕಾರ್ಯವೈಖರಿ. ಮತ್ತು  ಹೀಗೇ ಇರುತ್ತದೆ ಅಧಿಕಾರಶಾಹಿ ವರ್ತನೆ.

ಇಡೀ ತಾಲೂಕಿನಲ್ಲಿ ಸೆಕ್ಷನ್ 144, ನರಗುಂದ ಪಟ್ಟಣದಲ್ಲಿ ಕರ್ಫ್ಯೂ. ಪೋಲೀಸರ ಜೀಪು, ವ್ಯಾನುಗಳು ಪ್ರತಿ ಗ್ರಾಮಗಳಿಗೂ ಸುತ್ತಾಡತೊಡಗಿದವು. ರೈತರು ಮತ್ತು ನಾಗರಿಕರು ಶೌಚಾಲಯಗಳಿಲ್ಲದ ಆ ಪಟ್ಟಣದ ಮನೆಯಿಂದ ಶೌಚಕ್ಕೂ ಹೊರಗೆ ಹೋಗಲೂ ಬಿಡದೆ ದೌರ್ಜನ್ಯ ಎಸಗಿದರು. ಸಿಕ್ಕ ಸಿಕ್ಕವರನ್ನು ಹಿಡಿತಂದು ಬಾರಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಮುಖ್ಯ ಕಾನೂನು ನಿರ್ವಹಣೆಯ ಅಧಿಕಾರಗಳಿಲ್ಲದ ಕೃಷಿ ಇಲಾಖೆಗೆ ಏನೂ ಪಾತ್ರವಿರಲಿಲ್ಲ. ಸಮಸ್ಯೆ ರೈತರದು, ಕೃಷಿಯದು. ಆದರೆ ಕೃಷಿ ಇಲಾಖೆಗೆ ಯಾವ ಪಾತ್ರವೂ ಇಲ್ಲ. ಅವರ ಮಾತನ್ನು ಕೇಳುವವರಿಲ್ಲ. ಸಲಹೆ ಪಡೆಯುವುದಂತೂ ಬಹು ದೂರ. ಇದು ನಮ್ಮ ಸರ್ಕಾರಗಳ ಆಡಳಿತ ವ್ಯವಸ್ಥೆ.

ಅಧಿಕಾರಿಗಳ, ಪೋಲೀಸರ ಯಾವ ಕ್ರಿಯೆಗಳೂ ನಮ್ಮ ಕಣ್ಣಿಗೆ ಬೀಳುವ ಪ್ರಸಂಗವೂ ಇಲ್ಲ. ಬೇರೆ ಅಧಿಕಾರಿಗಳಂತೆ, ನನಗೆ ಬಹಳ ಜನ ಸಲಹೆ ಕೊಟ್ಟಂತೆ ನಾನೂ ತಾಲೂಕಿನಿಂದ ಗಾಯಬ್ ಆಗಿಬಿಡಬಹುದಿತ್ತು. ಅಷ್ಟೇ. ಆದರೆ ಅಲ್ಲಿಯೇ ಉಳಿದುಕೊಂಡಿದ್ದರಿಂದ ಈ ಕೆಲವು ಸಂಗತಿಗಳನ್ನು ತಿಳಿಯಲು ಅವಕಾಶವಾಯಿತು. ಇಂತಹ ಅಕ್ರಮಗಳು, ಅಮಾಯಕರ ಬಂಧನಗಳು ಗಮನಕ್ಕೆ ಬಂದ ಮೇಲೆ ರೈತರ ಜೊತೆ ಆತ್ಮೀಯ ಸಂಬಂಧ ಇದ್ದವನಾಗಿ ಸುಮ್ಮನಿರಲು ಸಾಧ್ಯವೇ? ಏನು ಮಾಡಬಹುದೆಂದು ಸಾಕಷ್ಟು ಚಿಂತಿಸಿದೆ.

ಬಂಧಿಸಲು ಪಟ್ಟಿ ಮಾಡಲ್ಪಟ್ಟವರಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿ ತಪ್ಪಿಸಲು ಸಾಧ್ಯವಾದವರನ್ನು ತಪ್ಪಿಸಲು ಪ್ರಯತ್ನಿಸುವುದು. ಉಳಿದವರಿಗೆ ಮಾಹಿತಿ ಕೊಟ್ಟು ತಪ್ಪಿಸಿಕೊಳ್ಳಲು ಹೇಳುವುದು. ಇದಷ್ಟೇ ಸಾಧ್ಯ ಎನಿಸಿತು. ನಮ್ಮ ಇಲಾಖೆಯ ನಂಬಿಕಸ್ತ ಸಿಬ್ಬಂದಿ ಮತ್ತು ರೈತರನ್ನು ಬಳಸಿ ಮಾಹಿತಿ ಜಾಲವೊಂದನ್ನು ರೂಪಿಸಿದೆ. ಅದಕ್ಕಾಗಿ ನನಗೆ ಯಾವ  ಸಂಬಂಧವೂ ಇಲ್ಲದಿದ್ದರೂ ಮತ್ತೆ ಮತ್ತೆ ಪಟ್ಟಣದಲ್ಲಿ ಸುತ್ತುತ್ತಾ ಪೋಲೀಸ್ ಠಾಣೆ, ಕಂದಾಯ ಅಧಿಕಾರಿಗಳ ಭೇಟಿ ಮಾಡುತ್ತಿದ್ದೆ.

ಹಳ್ಳಿ ಹಳ್ಳಿಗೆ ಹೋಗುತ್ತಿದ್ದ ಪೋಲೀಸರು ಅಲ್ಲಿ ಸಿಕ್ಕ ಗಂಡಸರನ್ನೆಲ್ಲಾ ಹಿಡಿತರುತ್ತಿದ್ದುದರಿಂದ ಹಳ್ಳಿಗಳಲ್ಲಿ ಗಂಡಸರೆಲ್ಲಾ ಮಾಯವಾಗಿಬಿಟ್ಟರು. ಕೇವಲ ಹೆಂಗಸರು, ಮಕ್ಕಳು, ಮುದುಕರು ಮಾತ್ರ ಕಾಣುತ್ತಿದ್ದರು. ಮುಂಗಾರಿನ ಕೃಷಿ ಕೆಲಸಗಳು ಬಹಳ ಬಿರುಸಿನಿಂದ ಕಾಲದಲ್ಲಿ ಹೊಲಗಳಲ್ಲಿ ಯಾರೂ ಕಾಣುತ್ತಲೇ ಇರಲಿಲ್ಲ. ಕೃಷಿ ಇಲಾಖೆಯ ನಮಗೆಲ್ಲಾ ಅಘೋಷಿತ ದೀರ್ಘ ರಜೆಯಾಗಿತ್ತು ಆ ಇಡೀ ತಿಂಗಳು. ಅಲ್ಲಿಯ ಹಳ್ಳಿಗಳ ಗಂಡಸರೆಲ್ಲಾ ಅಡವಿ ಸೇರಿಬಿಟ್ಟಿದ್ದರು. ಸುತ್ತ ಮುತ್ತಲ ಗುಡ್ಡಗಳ ಮೇಲೆ, ಅಲ್ಲಿಯ ಗುಹೆ,ಪಾಳು ದೇಗುಲಗಳಲ್ಲಿ ವಾಸಿಸುತ್ತಿದ್ದರು. ಅವರಿಗೆ ಮನೆಗಳಿಂದ ಕದ್ದು ಮುಚ್ಚಿ ಊಟ ಸರಬರಾಜಾಗುತ್ತಿತ್ತು.

ಇದೆಲ್ಲ ಒಂದು ರೀತಿ ಅವರಿಗೆ ಅವರ ಹಿರಿಯರು ಹೇಳುತ್ತಿದ್ದ ಸ್ವಾತಂತ್ರ್ಯ ಹೋರಾಟದ ಅನುಭವಗಳ ಪುನರಭಿನಯವೆನ್ನುವಂತಿತ್ತು.  ಭಾರತ ಬಿಟ್ಟು ತೊಲಗಿ ಚಳುವಳಿಯ ಅನುಭವ. ಆದರೆ ಆ ಪರಿಸ್ಥಿತಿ ಬ್ರಿಟಿಷರ ಕಾಲದ ದೌರ್ಜನ್ಯಗಳ ಕಾಲದ್ದು. ಈಗ ಸ್ವತಂತ್ರ ಭಾರತದಲ್ಲಿ ರೈತರು ತಮ್ಮ ಬದುಕಿನ ಕಷ್ಟಗಳಿಗಾಗಿ ಅದೇ ಕಷ್ಟಗಳನ್ನು, ದೌರ್ಜನ್ಯಗಳನ್ನು ಅನುಭವಿಸುತ್ತಿದ್ದರು.ಎಂತಹಾ ವಿಪರ್ಯಾಸ !

ಈ ರೈತರು, ರೈತ ಮಹಿಳೆಯರ ವರ್ತನೆ ನೋಡುತ್ತಿದ್ದರೆ ಬಸವರಾಜ ಕಟ್ಟೀಮನಿಯವರ ‘ಮಾಡಿ ಮಡಿದವರು’ ಕಾದಂಬರಿ ಮತ್ತು ಅದನ್ನು ಆಧರಿಸಿ ಶಂಕರಪ್ಪನವರು ಮಾಡಿದ ಕಪ್ಪು ಬಿಳಿ ಸಿನೆಮಾ ನೆನಪಿಗೆ ಬಂತು. ಈ ಜನರು ಉಪಯೋಗಿಸುತ್ತಿದ್ದ ಜವಾರಿ ಬುದ್ಧಿವಂತಿಕೆ ಆಶ್ಚರ್ಯವನ್ನೂ ತರುತ್ತಿತ್ತು.

ಸಾಮಾನ್ಯ ಜನರ ಪಾಡೇ ಹೀಗಾದರೆ ಇನ್ನು ಈ ಚಳುವಳಿಯ ಅಧಿನಾಯಕರ ಕತೆ ಏನು? ಅವರ ಮೇಲೆ ಹತ್ತಾರು ವರ್ಷ ಜೈಲುವಾಸದ  ಬಹಳ ಕಠಿಣ ದೇಶದ್ರೋಹದ ಕಲಂಗಳ ಕೇಸುಗಳು, ಕೆಲವರ ಮೇಲೆ ಕೊಲೆಯ ಕೇಸುಗಳನ್ನೂ ಜಡಿಯಲಾಗಿತ್ತು. ಅವರುಗಳೂ ತಲೆ ತಪ್ಪಿಸಿಕೊಂಡು ಭೂಗತರಾಗಿದ್ದರು. ದೂರದ ಗುಡ್ಡಗಳ ಮೇಲಿನ ಗುಹೆಗಳು, ಗುಡಿಗಳು, ಮಠಗಳು ಅವರ ಆವಾಸ ಸ್ಥಾನವಾಗಿತ್ತು. ಅವರಿಗೆ ಪತ್ರಿಕೆಗಳೂ, ಆ ಮೂಲಕ ಏನು‌ ನಡೆಯುತ್ತಿದೆಯೆಂಬ  ಸುದ್ದಿಗಳು ಸಿಗುವುದೂ ಬಹಳ ಕಷ್ಟವಾಗಿತ್ತು. ನರಗುಂದದಲ್ಲಿ ಹೀಗೆ ಸರ್ಕಾರ ರೈತರ ಬೇಟೆಯಾಡುತ್ತಿದ್ದ ಸಮಯದಲ್ಲಿ ಇಡೀ ಕರ್ನಾಟಕದ ಉದ್ದಗಲಕ್ಕೂ ರೈತರು ಭುಗಿಲೆದ್ದಿದ್ದರು.

ರಾಜ್ಯದೆಲ್ಲೆಡೆ ಕಾಡುಕಿಚ್ಚಿನಂತೆ ಹಬ್ಬಿದ ರೈತ ಚಳುವಳಿ.
ರೈತ ಬಂಡಾಯ ನಡೆದ ನಂತರದ ಏಳೇ  ದಿನಗಳಲ್ಲಿ ನೂರಕ್ಕಿಂತ ಹೆಚ್ಚು ನಗರ, ಪಟ್ಟಣಗಳಲ್ಲಿ ತನ್ನಿಂದ ತಾನೇ  ಚಳುವಳಿ  ಹಬ್ಬಿಬಿಟ್ಟಿತು . ನಲವತ್ತಕ್ಕೂ ಹೆಚ್ಚು ಕಡೆ ಲಾಠಿ ಚಾರ್ಜ್ ಗಳು, ಏಳು ಗೋಲಿಬಾರ್ ಗಳು. ಇಪ್ಪತ್ತು ಜನರ ಹತ್ಯೆಗಳು. ಐನೂರಕ್ಕು ಹೆಚ್ಚು ಜನರಿಗೆ ಗಾಯಗಳು. ಮುನ್ನೂರಕ್ಕೂ ಹೆಚ್ಚು ಜನರ ಮೇಲೆ ಬಲವಾದ ಕೇಸುಗಳು. ರಾಜ್ಯದ ಚರಿತ್ರೆ ಇರಲಿ, ದೇಶದ ಸ್ವಾತಂತ್ರ್ಯಾನಂತರದ ಚರಿತ್ರೆಯಲ್ಲಿ ಎಂದೂ ಕಾಣದ ರೈತರ ಮತ್ತು ಸಾಮಾನ್ಯ ಜನರ ಆಕ್ರೋಷ ಉಕ್ಕಿ ಹರಿಯಿತು.

ರೈತರ ಸಮಸ್ಯೆಗಳ ಜೊತೆಗೆ ಬೆಲೆ ಏರಿಕೆ ಕೂಡಾ ಮುಖ್ಯ ಸಮಸ್ಯೆಯಾಗಿ ಜನರನ್ನು ಕಾಡುತ್ತಿತ್ತು.
ಪಕ್ಕದ ತಾಲೂಕಾದ ರೋಣದಲ್ಲಿ ಇದ್ದ ಪ್ರತಿ ಪಟ್ಟಣದಲ್ಲಿಯೂ ಜನ ಯಾವ ಸಂಘಗಳೂ ಇಲ್ಲದೆ ತಮ್ಮಿಂದ ತಾವೇ ಬೀದಿಗಿಳಿದು ಪ್ರತಿಭಟನೆ ಮಾಡಿದರು, ಅಲ್ಲಿಯ ಹೊಳೆ ಆಲೂರು, ಗಜೇಂದ್ರಗಡ, ರೋಣಗಳಲ್ಲಿ ನೆರೆ ಜಿಲ್ಲೆಗಳಾದ ಕೊಪ್ಪಳ, ರಾಯಚೂರು, ಬಿಜಾಪುರ ಜಿಲ್ಲೆಯ ಪಟ್ಟಣಗಳಲ್ಲಿ. ಮತ್ತೆ ಮರುದಿನ ರಾಜ್ಯದ ಉತ್ತರ ಕರ್ನಾಟಕ,ದಕ್ಷಿಣ ಕರ್ನಾಟಕಗಳ ಇತರ ಪಟ್ಟಣಗಳಿಗೂ ಹಬ್ಬಿತು. ಹಲವು ನಗರ, ಪಟ್ಟಣಗಳಲ್ಲಿ ಬಂದ್ ಆಚರಿಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಈ ಚಳುವಳಿಗಳ ಪ್ರಭಾವ ಹೆಚ್ಚು ಕಾಣಲಿಲ್ಲ. ಈಗ ಕೊಪ್ಪಳ ಜಿಲ್ಲೆಗೆ ಸೇರಿರುವ ಗಂಗಾವತಿಯಲ್ಲಿ ಜುಲೈ 27 ರಂದು  ಹತ್ತಾರು ಸಾವಿರ ಜನರು ಸೇರಿ ಪ್ರತಿಭಟನೆಗಳು ನಡೆದುವು. ಅವರ ಮೇಲೆ ಲಾಠಿಚಾರ್ಜ್ ಮಾಡಲಾಯಿತು. ಬೆಲೆ ಏರಿಕೆಯಿಂದ ಬೇಸತ್ತಿದ್ದ ಅವರು ಅಂಗಡಿಗಳಿಗೆ ನುಗ್ಗಿ ಲೂಟಿ ಮಾಡಿದರು. ಆಗ ಪೋಲೀಸರು ಸಿಕ್ಕ ಸಿಕ್ಕಲ್ಲಿ ಗುಂಡು ಹಾರಿಸಿದ ಪರಿಣಾಮ ನಾಲ್ಕು ಜನರ ಹತ್ಯೆಯಾಯಿತು.

ಮರುದಿನ ಜುಲೈ 28 ರಂದು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ದೊಡ್ಡ ಪ್ರತಿಭಟನೆಗಳಾಗಿ ಮತ್ತೆ ಗುಂಡೇಟಿಗೆ ಐದು ಜನ ಬಲಿಯಾದರು. ಯಾದಗಿರಿ, ದ.ಕನ್ನಡದ ಉಜಿರೆ, ಕೋಲಾರ ಜಿಲ್ಲೆಯ ಬಾಗೇಪಲ್ಲಿ,ಶ್ರೀನಿವಾಸಪುರಗಳಲ್ಲಿ,ಚಿತ್ರದುರ್ಗಗಳಲ್ಲಿ ಕೂಡಾ ಲಾಠಿ ಚಾರ್ಜ್ ಮತ್ತು ಗುಂಡೇಟುಗಳನ್ನು ಪ್ರಯೋಗಿಸಲಾಯಿತು.

ಜನರ ಸಮಸ್ಯೆಗಳನ್ನು ಆಲಿಸುವುದು, ಅವುಗಳಿಗೆ ತಕ್ಷಣದ ಪರಿಹಾರ ನೀಡಿ ಜನರ ಸಿಟ್ಟನ್ನು ಶಮನಗೊಳಿಸುವ ಬದಲಾಗಿ ಕಾಂಗ್ರೆಸ್ ಸರ್ಕಾರ ರೈತರು ಮತ್ತು ಜನ ಸಾಮಾನ್ಯರ ಮೇಲೆ ಯುದ್ಧ ಸಾರಿದಂತೆ  ಗುಂಡಿನ ಧಾಳಿ ಎಸಗಿತು.

ಈ ಕ್ರೌರ್ಯ ಇಡೀ ರಾಷ್ಟ್ರದ ಗಮನವನ್ನು ಸೆಳೆದರೂ ಕೂಡಾ ಇಂದಿರಾಗಾಂಧಿಯವರ ಕೇಂದ್ರ ಸರ್ಕಾರ ತುಟಿ ಬಿಚ್ಚಲಿಲ್ಲ. ರೈತರ ಬಹಳಷ್ಟು ಸಮಸ್ಯೆಗಳ ಮೂಲ ಕೇಂದ್ರ ಸರ್ಕಾರವೇ ಆಗಿತ್ತೆಂಬುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಅಷ್ಟೇ ಅಲ್ಲ ಇಷ್ಟೆಲ್ಲಾ ದೌರ್ಜನ್ಯ ನಡೆಸುತ್ತಿದ್ದ ಗುಂಡೂರಾವ್ ಸರ್ಕಾರಕ್ಕೆ ಭದ್ರ ಬೆಂಬಲ ನೀಡಿತು.

ಉಳಿದ ಪಕ್ಷಗಳ ಬಗ್ಗೆ ಗಮನ ಹರಿಸಿದರೆ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದ ಜನತಾ ಪಕ್ಷದ ನಾಯಕರುಗಳೂ ಕೂಡಾ ಜನರ ಸಂಕಟವನ್ನು ಆಲಿಸಲು ಈ ಯಾವ ಜಾಗಗಳಿಗೂ ಭೇಟಿ ಕೊಡಲಿಲ್ಲ. ಅವರ ಚಟವಟಿಕೆಯೆಲ್ಲಾ ವಿ ಧಾನ ಸಭೆಯಲ್ಲಿ ಭಾಷಣಗಳಿಗಷ್ಟೇ ಸೀಮಿತವಾಗಿತ್ತು. ನರಗುಂದ ನವಲಗುಂದ, ಸೌದತ್ತಿ ರೈತ ಚಳುವಳಿ ತಿಂಗಳುಗಟ್ಟಲೆ ನಡೆದರೂ ಕೂಡಾ ಇವರ್ಯಾರೂ ಈ ಪ್ರದೇಶಗಳತ್ತ ಮುಖ ತಿರುಗಿಸಲಿಲ್ಲ.

ರೈತರ ಹತ್ಯೆಯಂತಹ ಘಟನೆಗಳಾದ ತಕ್ಷಣವಾದರೂ ಇವರುಗಳು ಈ ಪ್ರದೇಶಗಳಿಗೆ ಧಾವಿಸಿ ಬರಬೇಕು, ಸಮಸ್ಯೆಗಳನ್ನು ಆಲಿಸಬೇಕು ಎಂಬುದು ಪ್ರಜಾಪ್ರಭುತ್ವದಲ್ಲಿನ ಜನ ಪ್ರತಿನಿಧಿಗಳ ಬಗೆಗಿನ, ವಿರೋಧ ಪಕ್ಷದ ಬಗೆಗಿನ ಪ್ರಾಥಮಿಕ ನಿರೀಕ್ಷೆ. ಅವು ಯಾವುದನ್ನೂ ಇವರು ಪೂರೈಸಲಿಲ್ಲ. ಅಂದು ವಿರೋಧ ಪಕ್ಷದ ನಾಯಕರಾಗಿದ್ದವರು ಈ ಪ್ರದೇಶಗಳ ನೆರೆಯ ಹುಬ್ಬಳ್ಳಿ ಗ್ರಾಮೀಣದಿಂದ ಆಯ್ಕೆಯಾಗಿದ್ದ ಎಸ್.ಆರ್.ಬೊಮ್ಮಾಯಿ ಯವರೇ. ಇದು ಜನತಾ ಪಕ್ಷದ ನಿಜ ಸ್ವರೂಪವನ್ನೂ ತೋರಿಸುತ್ತದೆ. ಆದರೆ ರೈತರ, ಜನ‌ಸಾಮಾನ್ಯರ ಹೋರಾಟ, ಸಾವು ನೋವುಗಳ ರಾಜಕೀಯ ಫಲವನ್ನು ದೊಡ್ಡ ಪ್ರಮಾಣದಲ್ಲಿ ಪಡೆದು ನಂತರದ ಕಾಲಘಟ್ಟದಲ್ಲಿ ಹಲವು ಬಾರಿ ಅಧಿಕಾರದ ಗದ್ದುಗೆ ಏರಿದ್ದು ಆ ಪಕ್ಷವೇ ಎಂಬುದು ವಿಪರ್ಯಾಸ.

| ಮುಂದುವರೆಯುತ್ತದೆ |

‍ಲೇಖಕರು Admin

July 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಪ್ರತ್ಯಕ್ಷ ದರ್ಶಿಯ ವಾಸ್ತವಿಕ ವರದಿ. ಗೊತ್ತಿರದ ಅನೇಕ ಸಣ್ಣಸಣ್ಣ ವಿವರಗಳೂ ತಿಳಿದಂತಾಯ್ತು. ಧನ್ಯವಾದಗಳು ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: