ಜಿ ಎನ್ ನಾಗರಾಜ್ ಅಂಕಣ- ನರಗುಂದ ರೈತ ಬಂಡಾಯದ ದಿನಗಳು ಭಾಗ ಎರಡು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ದೇಶವ್ಯಾಪಿ ಹಬ್ಬಿದ ರೈತ ಚಳುವಳಿ.. ದೆಹಲಿ ರೈತ ಸಂಘರ್ಷಕ್ಕೆ ಅಡಿಪಾಯ..

‘ಈಗ ಮಾಡೀವಿ ಆರಂಭ,
ವಿಧಾನ ಸೌಧದಿ ರಣಗಂಭ.

ರೋಮಾಂಚನ, ವಿಷಾದ, ದುಃಖ –
ಈ ಎಲ್ಲ ಭಾವನೆಗಳು ಉಕ್ಕುಕ್ಕಿ ಬರುತ್ತವೆ, ಆ ಹತ್ತು ದಿನಗಳ ಕಾಲ ಕರ್ನಾಟಕದ ರೈತರು ಮತ್ತು ಸಾಮಾನ್ಯ ಜನತೆ ರಾಜ್ಯಾದ್ಯಂತ ಬೀದಿಗಿಳಿದ ಪರಿಯನ್ನು ನೆನೆಸಿಕೊಂಡರೆ. ಯಾರಿಗಾದರೂ ಅನುಮಾನವಿದ್ದರೆ ಅಂದಿನ ಪತ್ರಿಕೆಗಳ ಪುಟಗಳನ್ನು ತಿರುವಿ ಹಾಕಿ. ಮುಖ್ಯವಾಗಿ ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕ. ಉಳಿದ ಪತ್ರಿಕೆಗಳಲ್ಲಿ ಹಲವು ಇನ್ನೂ ಹುಟ್ಟಿರಲಿಲ್ಲ ಬಿಡಿ. ಟಿವಿಯಂತೂ ಇಲ್ಲವೇ ಇಲ್ಲ.

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಅಂತೂ ಈ ರೋಮಾಂಚನವನ್ನು ತಾನೇ ಅನುಭವಿಸಿತು‌. ಅಂದು ಈ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿದ್ದ ಹರಿಕುಮಾರ್ ರವರು ಮಲಪ್ರಭಾ ರೈತರ ಹೋರಾಟದ ಬಗ್ಗೆಯೇ ಒಂದು ವಿಶೇಷ ಪುರವಣಿಯೊಂದನ್ನು ಹೊರತಂದರು. ಅಂತಹುದು ಅದೇ ಮೊದಲು ಮತ್ತು ಅಂತಹ ತುರ್ತುಗಳಿದ್ದರೂ ಇಲ್ಲಿಯವರೆಗೆ ಮತ್ತೊಂದು ಸಂಚಿಕೆ ಪ್ರಜಾವಾಣಿಯಲ್ಲೂ ಸಂಭವಿಸಿಲ್ಲ. ಟಿವಿ ಮಾಧ್ಯಮ ತಂತ್ರಜ್ಞಾನ ಇಂತಹ ಸಮಸ್ಯೆಗಳ ಬಗ್ಗೆ ಜನರ ಮುಂದೆ ಕಣ್ಣಿಗೆ ಕಟ್ಟುವಂತೆ ಸಮಸ್ಯೆಗಳನ್ನು ಮುಂದಿಡುವುದಕ್ಕೆ ಎಂತಹಾ ಅಪೂರ್ವ ಸಾಧ್ಯತೆಗಳನ್ನು ಸೃಷ್ಟಿಸಿದೆ. ಆದರೆ ಹೋರಾಟಗಳ ಒಳ್ಳೆಯ ವರದಿಗಾರಿಕೆಯನ್ನು ಗಮನಿಸಿದರೂ ಕೂಡಾ ಹೋರಾಟಗಳ ಜೊತೆಗೆ ಅದರ ಹಿನ್ನೆಲೆ, ಸಮಸ್ಯೆಗಳ ಮೂಲ ಚೂಲಗಳ ವಿಶ್ಲೇಷಣೆ, ಪರಿಹಾರದ ಸಾಧ್ಯತೆಗಳನ್ನು ಬಿಂಬಿಸುವ ಅಪೂರ್ವ ಸಾಧ್ಯತೆಗಳ ಅನ್ವೇಷಣೆ ಮಾಡಿಯೇ ಇಲ್ಲ. ಆದಕ್ಕೆ ಬದಲಾಗಿ ಅವುಗಳ ನಿತ್ಯ ದುರುಪಯೋಗ ನಡೆಯುತ್ತಿರುವುದು ಕಣ್ಣಿಗೆ ರಾಚುತ್ತಿದೆ.

ನರಗುಂದ ಬಂಡಾಯದ ನಂತರ ರಾಜ್ಯದೆಲ್ಲೆಡೆಯಲ್ಲಿ ನಡೆದ ಹೋರಾಟಗಳ ತೀವ್ರ ಸ್ವರೂಪ ಮತ್ತು ಅವುಗಳ ಮೇಲೆ ಗೋಲೀಬಾರ್, ದಿನ ದಿನವೂ ಹತ್ಯೆಗಳು ಇವು ರಾಜ್ಯದ ಜನರಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಜನಾಭಿಪ್ರಾಯದ ಅಲೆಯನ್ನು ಸೃಷ್ಟಿಸಿತು. ಈ ಪ್ರಮಾಣದ ದೌರ್ಜನ್ಯಗಳಿಗೆ ಶಿಕ್ಷೆಯಾಗಿ ಗುಂಡೂರಾವ್ ಸರ್ಕಾರದ ಪತನವೇ ಆಗಬೇಕಾಗಿತ್ತು. ಆದರೆ ಇಂದಿರಾ ರೈತ ಚಳುವಳಿಯ ಉರುಬನ್ನು ನಿಲ್ಲಿಸಲು ಮಾತ್ರ ಆದೇಶ ನೀಡಿದರು. ಅಂತಹ ಪ್ರಯತ್ನಗಳನ್ನು ಸರ್ಕಾರ ಆರಂಭಿಸಿತು. ಅಂದು ಕೃಷಿ ಮಂತ್ರಿ ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಲಾಯಿತು. ಅದು ಎರಡು ವರದಿಗಳನ್ನು ಸಲ್ಲಿಸಿತು.

ವಿಧಾನ ಸಭೆ, ಪರಿಷತ್ತುಗಳಲ್ಲಿ ಆಕ್ರೋಶ ವ್ಯಕ್ತವಾಯಿತು. ಸರ್ಕಾರವನ್ನು ಖಂಡಿಸಿ ಭಾಷಣಗಳ ಮೇಲೆ ಭಾಷಣಗಳಾದವು. ಆದರೆ ಆಗಿನ ವಿರೋಧ ಪಕ್ಷಗಳು ಮುಖ್ಯವಾಗಿ ಜನತಾ ಪಕ್ಷ ಮುಖ್ಯಮಂತ್ರಿಯ ರಾಜೀನಾಮಯಿರಲಿ, ಒಬ್ಬ ಮಂತ್ರಿಯ ರಾಜೀನಾಮೆಯನ್ನೂ ಕೇಳಲಿಲ್ಲ ಎಂಬುದು ಆಶ್ಚರ್ಯಕರವಾಗಿತ್ತು. ಚರ್ಚೆಗಳು ಮತ್ತು ಅದಕ್ಕೆ ಮುಖ್ಯಮಂತ್ರಿಯಿಂದ ಸಮರ್ಥನೆ ಇಷ್ಟಕ್ಕೇ ಈ ಕಾರ್ಯ ಕಲಾಪಗಳು ಸೀಮಿತವಾದವು. ಮುಖ್ಯಮಂತ್ರಿಯವರು ವಿಧಾನ‌ಸಭೆಯಲ್ಲಿ ಸರ್ಕಾರದ ದಬ್ಬಾಳಿಕೆಗೆ ನೀಡಿದ ಸಮರ್ಥನೆ ಎಂದರೆ ‘ಯಾರ್ಯಾರೋ ದೊಡ್ಡ ದೊಡ್ಡ ಭೂಮಾಲಕರು ಕೋಟ್ಯಾಂತರ ರೂ ತೆರಿಗೆ ಕೊಡಲು ತಪ್ಪಿಸಿಕೊಂಡು ಆಯಾಯ ಊರುಗಳಲ್ಲಿ ಪ್ರಚೋದನೆ ಮಾಡಿ ಮುಗ್ಧರನ್ನು ಆಹುತಿಗೆ ತಳ್ಳುತ್ತಿದ್ದಾರೆ. ಸ್ವಾರ್ಥ ಸಾಧಿಸುತ್ತಿದ್ದಾರೆ. ಇದನ್ನು ನಾವು ನೋಡುತ್ತಾ ಸುಮ್ಮನೆ ಕೂರಬೇಕೇ’ ಎಂದು.

ನಾಲ್ಕಾರು ಕಡೆ ಗುಂಡೇಟು ಮತ್ತು ಹದಿನೈದು ಸಾವು ಸಂಭವಿಸಿದ ಮೇಲೆ, ರಾಜ್ಯಾದ್ಯಂತ ಹಾಹಾಕಾರ ಎದ್ದ ಮೇಲೆ, ಆಮೇಲಾಮೇಲೆ ವಿಧಾನ ಸಭೆ ಹಾಗೂ ಪರಿಷತ್ತಿನಲ್ಲಿ 29-7-80 ರಂದು ವಿರೋಧ ಪಕ್ಷಗಳು ಧರಣಿ ಆರಂಭಿಸಿದವು. ಅಂದೇ ಮೇಲೆ ಉಲ್ಲೇಖಿಸಿದ ಸಮಿತಿ ರೈತರೊಂದಿಗೆ ಮಾತುಕತೆ ನಡೆಸಿದ ಮತ್ತು ತನ್ನದೇ ಅಧಿಕಾರಿಗಳ ಶಿಫಾರಸುಗಳ ಆಧಾರದ ಮೇಲೆ ಒಂದು ಮಧ್ಯಂತರ ವರದಿಯನ್ನು ನೀಡಿತು.
ಈ ಎಲ್ಲ ಒತ್ತಡಗಳ ಫಲವಾಗಿ ಬಂಧಿಸಿದ ರೈತರನ್ನು ಬಿಡುಗಡೆ ಮಾಡಲಾಯಿತು. ಮಲಪ್ರಭಾ ರೈತ ಹೋರಾಟ ಸಮನ್ವಯ ಸಮಿತಿಯ ನಾಯಕರನ್ನು ಆಹ್ವಾನಿಸಿ ಅವರೊಂದಿಗೆ ಮಾತುಕತೆ ಆರಂಭಿಸಲಾಯಿತು.

ಈ ಆಧಾರದ ಮೇಲೆ ಮುಖ್ಯಮಂತ್ರಿ ನರಗುಂದ ಮತ್ತು ನವಲಗುಂದ ಪ್ರಕರಣಗಳ ಬಗ್ಗೆ ನ್ಯಾಯಾಂಗ ತನಿಖೆ  ನಡೆಸುವ ಮತ್ತು ಶಾಸಕಾಂಗದ ಜಂಟಿ ಸಮಿತಿಯೊಂದನ್ನು ನೇಮಿಸುವ ಬಗ್ಗೆ  ಒಪ್ಪಿಗೆಯನ್ನು ವ್ಯಕ್ತಪಡಿಸಿದರು. ಜೊತೆಗೆ ಮರುದಿನ ಜುಲೈ 30ರಂದು 85 ಕೋಟಿ ರೂಗಳಿಗಿಂತ ಹೆಚ್ಚು ಪರಿಹಾರವನ್ನು ಘೋಷಿಸಿದರು.

ವಿರೋಧ ಪಕ್ಷದ ನಾಯಕರಾಗಿದ್ದ ಎಸ್.ಆರ್. ಬೊಮ್ಮಾಯಿಯವರ ನೇತೃತ್ವದಲ್ಲಿ ಒಂದು ಶಾಸಕಾಂಗದ ಜಂಟಿ ಸಮಿತಿಯನ್ನು ಹಾಗೂ ಒಂದು ನ್ಯಾಯಾಂಗ ತನಿಖೆ ಆಯೋಗವನ್ನು ನೇಮಿಸಲು ಒಪ್ಪಿಕೊಳ್ಳಲಾಯಿತು.ಅದರಲ್ಲಿ ಈ ಪ್ರದೇಶದ ರೈತರಿಗೆ ಬಹಳ ಮುಖ್ಯವಾದುದು ಬೆಟರ್ ಮೆಂಟ್ ಲೆವಿ ರದ್ದತಿ, ನೀರಿನ ಕರದ ಬಗ್ಗೆ ಪುನರ್ ಪರೀಶಲನೆ, ಬೆಂಬಲ ಬೆಲೆ ನಿಗದಿ ಮಾಡಿ ತಕ್ಷಣವೇ ಮುಸುಕಿನ ಜೋಳ ಮತ್ತಿತರ ಫಸಲುಗಳನ್ನು  ಕೊಳ್ಳಲು ಅಂದು ದೊಡ್ಡ ಮೊತ್ತವಾದ 25 ಕೋಟಿ ಹಣ ಬಿಡುಗಡೆ.

ಇವುಗಳ ಜೊತೆಗೆ ರಾಜ್ಯದ ಎಲ್ಲ ರೈತರಿಗೆ ಪ್ರಯೋಜನ ದೊರಕುವಂತೆ ಪಂಪ್ ಸೆಟ್‌ಗಳ ವಿದ್ಯುತ್ ದರ ಕಡಿತ, ರಸಗೊಬ್ಬರದ ಮೇಲೆ ತೆರಿಗೆ ಇಳಿಕೆ, ಸರ್ಕಾರ ನೇರವಾಗಿ ಕೊಟ್ಟಿದ್ದ ತಕಾವಿ ಸಾಲ ಪೂರ್ತಿ ಮನ್ನಾ, ಸಹಕಾರಿ ಸಾಲಗಳ ಮೇಲೆ ದಂಡ ಶುಲ್ಕ ಮನ್ನಾ ಮತ್ತು ಸಣ್ಣ ಮತ್ತು‌ ಅತಿ ಸಣ್ಣ ರೈತರಿಗೆ ಅರ್ಹತೆ ಆಧಾರದ ಮೇಲೆ ಸಾಲ ಮನ್ನಾ ಇತ್ಯಾದಿ.

ಕೆಂಪೇಗೌಡ ಆಯೋಗವೆಂಬ ನ್ಯಾಯಾಂಗ ಆಯೋಗವನ್ನು 21-8-80ರಂದು ನೇಮಿಸಲಾಯಿತು. ಈ ಆಯೋಗಕ್ಕೆ ಸರ್ಕಾರ ನೀಡಿದ ಕಾರ್ಯಸೂಚಿ ಎಷ್ಟು ಸೀಮಿತವಾಗಿತ್ತೆಂದರೆ ಕೇವಲ ಜನರ ಕಣ್ಣೊರೆಸಲು ಮಾತ್ರ ಆಯೋಗವನ್ನು ನೇಮಕ ಎಂಬುದು ಸ್ಪಷ್ಟವಾಗಿತ್ತು. ರಾಜ್ಯದ ಹಲವಾರು ಕಡೆಗಳಲ್ಲಿ ನಡೆದ ಚಳುವಳಿ, ಅವುಗಳ ಕಾರಣಗಳು, ಅಲ್ಲಿ ಗುಂಡೇಟು ಮತ್ತು ರೈತರ ಹತ್ಯೆ ಇವು ಆಯೋಗಕ್ಕೇನು ಸಂಬಂಧವಿರಲಿಲ್ಲ.

ಮಲಪ್ರಭಾ ಪ್ರದೇಶದ ರೈತ ಚಳುವಳಿಗೆ ಸಂಬಂಧಿಸಿದಂತೆ ಕೂಡಾ ನರಗುಂದ, ನವಲಗುಂದ ಎರಡೇ ತಾಲ್ಲೂಕಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಸವದತ್ತಿ ತಾಲೂಕು, ರೋಣ ತಾಲೂಕಿನ‌ ಪ್ರಸ್ತಾಪ  ಕೂಡಾ ಇರಲಿಲ್ಲ. ಈ ಆಯೋಗದ ಮುಂದೆ ಕೃಷಿ ಅಧಿಕಾರಿಯಾಗಿ ನಾನೂ ಹಾಜರಾಗಿ ಸಾಕ್ಷಿ ಹೇಳಿದೆ. ಈ ಆಯೋಗ ಸರ್ಕಾರದ ಅಧಿಕಾರಿಗಳ ಅದಕ್ಷತೆ, ಜನರ ಮನವಿಗೆ ಸ್ಪಂದಿಸದ ಅಧಿಕಾರಿಶಾಹಿ ಮನಸ್ಥಿತಿಯೇ ಈ ಚಳುವಳಿಗೆ ಕಾರಣ. ಅಂದಿನ ಘಟನೆಗಳನ್ನು ತಹಸೀಲ್ದಾರ್ ಮತ್ತು ಪೋಲಿಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದರೆ ನಿವಾರಿಸಬಹುದಾಗಿತ್ತು ಎಂದು ತನಗೆ ನೀಡಿದ್ದ ವ್ಯಾಪ್ತಿಯಲ್ಲಿ ರೈತರ ಚಳುವಳಿಯನ್ನು ಸಮರ್ಥಿಸಿತು.

ನರಗುಂದ, ನವಲಗುಂದ ರೈತ ಬಂಡಾಯ, ಇಪ್ಪತ್ತಕ್ಕಿಂತ ಹೆಚ್ಚು ರೈತರ ಸಾವುಗಳ ಮತ್ತು ಅನೇಕ ನೂರು ರೈತರ ಜೈಲುವಾಸ ಮತ್ತು ಸಾವಿರಾರು ಜನರ ಕಷ್ಟ ಪರಂಪರೆಯ ನಂತರ ಸರ್ಕಾರ ಮಣಿದದ್ದು ರೈತರ ಹೋರಾಟಕ್ಕೆ ಸಂದ ದೊಡ್ಡ ಜಯ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ರೈತ ಸಮುದಾಯದಲ್ಲಿ ಮೂಡಿದ ಎಚ್ಚರ ರಾಜ್ಯದ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ಮುಂದೆಂದೂ ಇಲ್ಲದಂತೆ ಬದಲಾಯಿಸಿತು.

ಜುಲೈ ಹೋರಾಟದ ಅಲೆ ಎಂದು ಕರೆಯಬಹುದಾದ ಈ ಸರಣಿಯ ನಂತರವೂ ಹೊಗೆಸೊಪ್ಪು, ಕಬ್ಬು, ಆಲೂಗಡ್ಡೆ ಮೊದಲಾದ ಬೆಳೆಗಾರರ ನಡುವೆ ಹಾಗೂ ಬರಗಾಲ ಪೀಡಿತ ರೈತರ ನಡುವೆ ಹಲವು ಪ್ರದೇಶಗಳಲ್ಲಿ ಹೋರಾಟಗಳು ಸ್ಫೋಟಿಸುತ್ತಲೇ ಇದ್ದವು. ಗುಂಡೂರಾವ್ ಸರ್ಕಾರ ಜುಲೈ ಹೋರಾಟದ ಸ್ಫೋಟಗಳಿಂದ ಯಾವುದೇ ಪಾಠ ಕಲಿಯಲಿಲ್ಲ. 1983ರವರೆಗೆ ಅವರ ಅಧಿಕಾರಾವಧಿಯ ಉದ್ದಕ್ಕೂ ಹಲವು ಬಾರಿ ಗುಂಡು ಹಾರಿಸಲಾಯಿತು. ನಿಪ್ಪಾಣಿಯಲ್ಲಿ 20 ದಿನಗಳಿಗೂ ಹೆಚ್ಚು ಕಾಲದಿಂದ ಹೋರಾಟ ಮಾಡುತ್ತಿದ್ದ ಹತ್ತಾರು ಸಾವಿರ ಹೊಗೆಸೊಪ್ಪು ಬೆಳೆಗಾರರ ಮೇಲೆ ಗುಂಡು ಹಾರಿಸಿ 11 ಜನರನ್ನು, ಶಿವಮೊಗ್ಗದ ನಾಗ ಸಮುದ್ರದಲ್ಲಿ 3 ಜನ, ಮಂಡ್ಯದ ಗೆಜ್ಜಲಗೆರೆಯಲ್ಲಿ ಇಬ್ಬರನ್ನು ಕೊಂದು ಹಾಕಿತು. 

ಇನ್ನು ಗುಂಡೇಟಿನಿಂದ, ಲಾಠಿ ಚಾರ್ಜ್‌ಗಳಿಂದ ಗಾಯಗೊಂಡವರು, ಬಂಧನಕ್ಕೀಡಾದವರಿಗೆ ಲೆಕ್ಕವೇ ಇಲ್ಲ. ರೈತರ ಮೇಲೆ ಮಾತ್ರವಲ್ಲದೆ ಕಾರ್ಮಿಕರ ಹೋರಾಟಗಳ ಮೇಲೂ ಇಂತಹುದೇ ದೌರ್ಜನ್ಯಗಳನ್ನು ಗುಂಡೂರಾವ್ ಸರ್ಕಾರ ಎಸಗಿತು. ಬೆಂಗಳೂರಿನಲ್ಲಿ ಬೆಲೆ ಏರಿಕೆಯ ವಿರುದ್ಧ, ವೇತನ‌ ಏರಿಕೆಗಾಗಿ ಒಂದೂಕಾಲು ಲಕ್ಷ ಕೆಂದ್ರ ಸರ್ಕಾರದ ಒಡೆತನದ ಸಾರ್ವಜನಿಕ ರಂಗದ‌ ಕಾರ್ಮಿಕರು ನಡೆಸುತ್ತಿದ್ದ ಮುಷ್ಕರದ ಸಮಯದಲ್ಲಿಯೂ ಕೂಡಾ ಗಂಡು ಹಾರಿಸಲಾಯಿತು. ಪ್ರಮಾಣದ ಗುಂಡಿನ ಧಾಳಿ ಬ್ರಿಟಿಷರ, ರಾಜರ ಕಾಲವನ್ನೂ ಸೇರಿಸಿದಂತೆ ಹಿಂದೆಂದೂ ಆಗಿರಲಿಲ್ಲ. ಇಲ್ಲಿಯವರೆಗೆ ಮತ್ತೆ ಯಾವ ಸರ್ಕಾರವೂ ಇಂತಹ ದುಷ್ಟ ಧೈರ್ಯ ಮಾಡಿಲ್ಲ‌ .

ರೈತ ಚಳುವಳಿಯ ಬೆಳವಿಗೆ-
ರೈತ ಹೋರಾಟದ ಈ ಬೃಹತ್ ಅಲೆ ಮಲಪ್ರಭಾ ರೈತ ಹೋರಾಟಗಾರರನ್ನು ದೊಡ್ಡ ಕ್ರಿಮಿನಲ್‌ಗಳಂತೆ ದೀರ್ಘಕಾಲದ ಜೈಲು ಶಿಕ್ಷೆಗೆ ತುತ್ತಾಗುವುದನ್ನು ತಪ್ಪಿಸಿತು. ರಾಜ್ಯದ ಜನರು ಅವರುಗಳನ್ನು ಮೆಚ್ಚಿಗೆಯಿಂದ ನೋಡುವಂತಾಯಿತು. ಸ್ವಾತಂತ್ರ್ಯ ಪೂರ್ವದಿಂದಲೇ ಕರ್ನಾಟಕದ ಕೆಲ ಭಾಗಗಳಲ್ಲಿ ಕ್ರಿಯಾಶೀಲವಾಗಿದ್ದ ಅಖಿಲ ಭಾರತ ಕಿಸಾನ್ ಸಭಾದ ನೇತೃತ್ವದ ರೈತ ಚಳುವಳಿ ಕರ್ನಾಟಕ ಏಕೀಕರಣವಾದ ಕೂಡಲೇ 1957 ರಲ್ಲಿ ಕರ್ನಾಟಕ ಪ್ರಾಂತ ರೈತ ಸಂಘವಾಗಿ ಸಂಘಟಿತವಾಗಿತ್ತು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ರಿಯಾಶೀಲವಾಗಿ ಗೇಣಿ ರೈತರ ಸಮಸ್ಯೆ, ಭೂ ಸುಧಾರಣೆ ಮೊದಲಾದ ಸಮಸ್ಯೆಗಳನ್ನು ಎತ್ತಿಕೊಂಡು ಚಳುವಳಿ ನಡೆಸುತ್ತಿತ್ತು. ಕರ್ನಾಟಕದ ಮೊತ್ತ ಮೊದಲ ರೈತ ಸಂಘಟನೆಯಾಗಿತ್ತು.

ಉ.ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೇ ಶ್ಯಾಮರಾವ್ ಪರುಳೇಕರ್, ಎನ್.ಎಲ್.ಉಪಾಧ್ಯಾಯ ಮೊದಲಾದವರ ನೇತೃತ್ವದಲ್ಲಿ ಕಿಸಾನ್ ಸಭಾ ನಾಯಕರು ಸ್ವತಂತ್ರವಾಗಿ ಭೂ ಹೋರಾಟಗಳ ನೇತೃತ್ವ ವಹಿಸಿದ್ದರು. ದಿನಕರ ದೇಸಾಯಿಯವರ ಪ್ರಸಿದ್ಧ  ಗೇಣಿ ರೈತರ ಹೋರಾಟ ಕೆಂಬಾವುಟದಡಿಯಲ್ಲಿ ಸಂಘಟಿತವಾದ ರೈತರ ಹೋರಾಟವಾಗಿತ್ತು., ಕೆಂಪು ಬಾವುಟವು ರೈತನದೋ ಎಂದು ಅವರ ಕವನದಲ್ಲಿ ಅದು ಪ್ರತಿಧ್ವನಿಸಿದೆ.

ಪ್ರಸಿದ್ಧ ಕಾಗೋಡು ಸತ್ಯಾಗ್ರಹದ ಗಣಪತಿಯಪ್ಪನವರು ಈ ಕೆಂಬಾವುಟದ ಹೋರಾಟದಿಂದ ಪ್ರೇರಣೆ ಪಡೆದು ಕಾಗೋಡು ಸತ್ಯಾಹ್ರಹ ಆರಂಭಿಸಿದರು ಎಂಬುದನ್ನು ನೆನಪಿಸಿಕೊಳ್ಳೋಣ. ಈ ಹೋರಾಟದ ನೇತೃತ್ವವನ್ನು ಮುಂದೆ ಗೋಪಾಲ ಗೌಡರು ವಹಿಸಿಕೊಂಡು ಮುನ್ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೇರಳದ ಮಲಬಾರ್ ಪ್ರದೇಶದ ಕಿಸಾನ್ ಸಭಾ ನೇತೃತ್ವದ ರೈತ ಚಳುವಳಿಗಳಿಂದ ಪ್ರೇರಿತರಾಗಿ ಗೇಣಿದಾರರು‌ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಶ್ನೆಗಳನ್ನು ಎತ್ತಿದ್ದರು. ಸ್ವಾತಂತ್ರ್ಯಾನಂತರ ಬಿವಿ ಕಕ್ಕಿಲ್ಲಾಯ, ಕೃಷ್ಣ ಶೆಟ್ಟರು, ಕೃಷ್ಣಪ್ಪ, ಜನಾರ್ಧನ ನಾಯಕ್, ಅಬ್ರಹಾಂ ಕರ್ಕಡ ಮೊದಲಾದವರ ನೇತೃತ್ವದಲ್ಲಿ ರೈತ ಚಳುವಳಿ ಬಿರುಸಾಗಿತ್ತು.

ಬಿಜಾಪುರ, ಕೊಡಗು, ಕೋಲಾರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿಯೂ ಭೂ ಸುಧಾರಣೆಗಾಗಿ ಹೋರಾಟಗಳು ನಡೆದಿದ್ದವು. ಅಖಿಲ ಭಾರತ ಕಿಸಾನ್ ಸಭಾ 1979 ರಲ್ಲಿ ಭಾರತದ ಕೃಷಿ ಪರಿಸ್ಥಿತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅಧ್ಯಯನ ಮಾಡಿ ಭೂಮಿಯ ಒಡೆತನ, ಗೇಣಿ ಸಮಸ್ಯೆಗಳ ಜೊತೆಗೆ ಬೆಳೆ, ಬೆಲೆ, ನೀರಾವರಿ ಸಮಸ್ಯೆಗಳು ತೀವ್ರವಾಗಿವೆ. ಈ ಸಮಸ್ಯೆಗಳ ಮೇಲೆ ರೈತ ಹೋರಾಟಗಳನ್ನು ರೂಪಿಸಬೇಕು ಎಂದು ತೀರ್ಮಾನಿಸಿತ್ತು.

ಭಾರತದ ರೈತ ಚಳುವಳಿಯಲ್ಲಿ ಹೊಸ ಹಂತದ ಉದ್ಘಾಟನೆಯಾದ ಈ ನಿಲುವು ವಾರಾಣಸಿ ಸಮ್ಮೇಳನದ ನಿಲುವು ಎಂದು ಪ್ರಸಿದ್ಧವಾಗಿದೆ. ದೇಶಾದ್ಯಂತ ಬೆಳೆ ಉತ್ಪಾದನೆ ಮತ್ತು ಮಾರುಕಟ್ಟೆಯ ಸಮಸ್ಯೆಗಳನ್ನು ಗುರುತಿಸಿ, ಅಧ್ಯಯನ ಮಾಡಿ ಚಳುವಳಿಗಳನ್ನು ವಿಸ್ತರಿಸುವುದರಲ್ಲಿ, ಇತರ ರೈತ ಚಳುವಳಿಗಳ ಮೇಲೆ ಕೂಡಾ ಪ್ರಭಾವ ಬೀರುವುದರಲ್ಲಿ ಪಾತ್ರ ವಹಿಸಿದೆ. ಮಲಪ್ರಭಾ ಹೋರಾಟದ ಉರುಬಿನ ನಂತರ ಪ್ರಾಂತ ರೈತ ಸಂಘದ ರಾಜ್ಯ ಮಂಡಳಿ ಈ ಹೋರಾಟ ನಿರತ ಹಾಗೂ ಬಂಧಿತ ರೈತರಿಗೆ ಬೆಂಬಲಿಸಿ ವಿವಿಧ ಜಿಲ್ಲೆಗಳಲ್ಲಿ, ತಾಲ್ಲೂಕುಗಳಲ್ಲಿ ಪ್ರತಿಭಟನೆ ನಡೆಸಿದವು. ಅದರ ಘಟಕಗಳು ಮತ್ತಷ್ಟು ಕ್ರಿಯಾಶೀಲವಾಗಿ ರೈತ ಹೋರಾಟಗಳನ್ನು ಸಂಘಟಿಸಿದವು.

ಮಲಪ್ರಭಾ ರೈತರ ಚಳುವಳಿಯನ್ನು ರಾಜ್ಯಾದ್ಯಂತ ವಿಸ್ತರಿಸುವಲ್ಲಿ ಗಣನೀಯ ಪಾತ್ರ ವಹಿಸಿದವು. ತಾವು ಅಸ್ತಿತ್ವದಲ್ಲಿದ್ದ ಜಿಲ್ಲೆಗಳಲ್ಲಿ ಬೇರೆ ತಾಲೂಕುಗಳಿಗೆ ವಿಸ್ತರಿಸಿದವು. ಹೊಸದಾಗಿ ಹಲವು ಜಿಲ್ಲೆಗಳಲ್ಲಿ ಪ್ರಾಂತ ರೈತ ಸಂಘದ ಘಟಕಗಳು ಆರಂಭವಾದುವು. ಮಲಪ್ರಭಾ ಹೋರಾಟದ ನಾಯಕ ವಿ.ಎನ್.ಹಳಕಟ್ಟಿಯವರು ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ನಾಯಕರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 

ಆ ವೇಳೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅಲ್ಲಲ್ಲಿಯ ರೈತರ ಸ್ಥಳೀಯ ಸಮಸ್ಯೆಗಳನ್ನು ಎದುರಿಸಲು ಕಬ್ಬು ಬೆಳೆಗಾರರ ಸಂಘ ಇತ್ಯಾದಿಗಳನ್ನು ರಚಿಸಿಕೊಂಡಿದ್ದ ರೈತ ಸಂಘಗಳು ಎಚ್ಚರಗೊಂಡವು. ಈ ರೈತ ಹೋರಾಟಗಳಲ್ಲಿ ಪಾಲ್ಗೊಳ್ಳಲಾರಂಭಿಸಿದವು. ಇದರಲ್ಲಿ ಶಿವಮೊಗ್ಗದ ರುದ್ರಪ್ಪನವರ ನೇತೃತ್ವದ ಕಬ್ಬು ಬೆಳೆಗಾರರ ಸಂಘವೂ ಒಂದು. 

ಈ ಹೋರಾಟಗಳಲ್ಲೆಲ್ಲಾ ಪಾಲ್ಗೊಂಡ ಸಂಘಟನೆಗಳು , ಮಲಪ್ರಭಾ ಹೋರಾಟಗಾರರು ಸೇರಿದಂತೆ ಮತ್ತು ಅವುಗಳ ನಾಯಕರು ಆಗಸ್ಟ್  11 ರಂದು ಸಭೆ ಸೇರಿ ಇಡೀ ರಾಜ್ಯದ ರೈತರ ಸಮಸ್ಯೆಗಳನ್ನು ಚರ್ಚಿಸಿ ಸಮಗ್ರ ಒತ್ತಾಯಗಳ ಪಟ್ಟಿಯನ್ನು ಸಿದ್ಧ ಮಾಡಿದವು. ಈ ಸಂದರ್ಭದಲ್ಲಿ ಸಮಾಜವಾದಿ ಹಾಗೂ ಜೆಪಿ ಚಳುವಳಿಯಲ್ಲಿ ಕ್ರಿಯಾಶೀಲವಾಗಿದ್ದ ಪ್ರೊ.ನಂಜುಂಡ ಸ್ವಾಮಿಯವರು ರೈತ ಚಳುವಳಿಗೆ ಪ್ರವೇಶ ಮಾಡಿದರು. ಆದರೆ ಅವರು ಮಲಪ್ರಭಾ ರೈತ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘಗಳ ಜೊತೆಗೆ ಸೇರಿ ಒಗ್ಗಟ್ಟಿನ  ಚಳುವಳಿ ಕೈಗೊಳ್ಳಲು ಒಪ್ಪದೆ ಪ್ರತ್ಯೇಕಗೊಳ್ಳಲು ಉಜ್ಜುಗಿಸಿದರು. ಸೆಪ್ಟೆಂಬರ್‌ನಲ್ಲಿ ಒಂದು ರೈತ ಸಮಾವೇಶ ನಡೆಸಿ ತಾವೇ ಪ್ರತ್ಯೇಕವಾಗಿ ಕರ್ನಾಟಕ ರಾಜ್ಯ ರೈತ ಸಂಘದ ಸ್ಥಾಪನೆ ಮಾಡಿದರು.

ಹೀಗೆ ಕರ್ನಾಟಕದ ಎಲ್ಲಾ ರೈತರ ಒಗ್ಗಟ್ಟಿನ ಸಮನ್ವಯ ಸಮಿತಿಯ  ಬದಲಾಗಿ ಎರಡು ರಾಜ್ಯವ್ಯಾಪಿ ರೈತ ಸಂಘಗಳು ಕೆಲಸ ಮಾಡುವಂತಾಯಿತು. ಕೃಷಿಗೆ ಸಂಬಂಧಿಸಿದಂತೆ ಈ ಎರಡು ರೈತ ಸಂಘಗಳ ವಿಚಾರ ಪ್ರಣಾಲಿಯೂ ಭಿನ್ನವಾಗಿದ್ದಿತು. ಈ ಸಂಘಗಳ ಒತ್ತಾಯಗಳು ಮತ್ತು ಹೋರಾಟಕ್ಕೆ ಎತ್ತಿಕೊಂಡ ಸಮಸ್ಯೆಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ಈ‌ ಎರಡೂ ರೈತ ಚಳುವಳಿಯ ಧಾರೆಗಳು ಅಂದಿನಿಂದಲೇ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರೆ ಕರ್ನಾಟಕದ ರೈತ ಚಳುವಳಿ ಮತ್ತಷ್ಟು ಉನ್ನತ ಸ್ತರವನ್ನು ಮುಟ್ಟಲು ಸಾಧ್ಯವಾಗುತ್ತಿತ್ತಲ್ಲಾ ಎಂಬುದು ಮುಂದಿನ ವರ್ಷಗಳಲ್ಲಿ ನಂಜುಂಡಸ್ವಾಮಿಯವರ ಜೊತೆ ಈ ಬಗ್ಗೆ ಹಲವು ಬಾರಿ ಸಂವಾದಿಸಿದ ನನ್ನ ಹಳಹಳಿಕೆಯಾಗಿದೆ. ಹೀಗೆ ಒಂದು ಧಾರೆ ಪ್ರಾಂತ ರೈತ ಸಂಘವಾಗಿ ಮತ್ತೊಂದು ಧಾರೆ ರಾಜ್ಯ ರೈತ ಸಂಘವಾಗಿ ಮುಂದಿನ‌ ದಿನಗಳಲ್ಲಿ ಹೋರಾಟಗಳನ್ನು ತೀವ್ರ ಗೊಳಿಸಿದವು.

ಕೇಳ್ ಕೇಳ್ ಕೇಳೆಲೊ ರೌಡಿ –
ಕರ್ನಾಟಕದ ರೈತ ಹೋರಾಟದ ಅಲೆಯ ಸಮಯದಲ್ಲಿಯೇ ಭಾರತದ  ಬೇರೆ ಬೇರೆ ರಾಜ್ಯಗಳಲ್ಲಿಯೂ ರೈತ ಹೋರಾಟ ಚಿಮ್ಮಿತು.
ಏಕೆಂದರೆ ರೈತರ ಸಂಕಟಗಳು ಕೇಂದ್ರ ಸರ್ಕಾರದ ಕೆಟ್ಟ ನೀತಿಗಳ ಫಲವಾಗಿಯೇ ಉದ್ಭವಿಸಿ ದೇಶದೆಲ್ಲ ರೈತರನ್ನು ಬಾಧಿಸಿದ್ದವಲ್ಲಾ ! ಕರ್ನಾಟಕದ ರೈತ ಚಳುವಳಿಗೆ ಬೆಂಬಲವಾಗಿ ಮತ್ತು ವಿವಿಧ ರಾಜ್ಯಗಳ ರೈತರ ಸಮಸ್ಯೆಗಳನ್ನು ಎತ್ತಿಕೊಂಡು ಹೋರಾಟ ಮಾಡಲು ಕರೆ ಕೊಟ್ಟಿತು.

ಮಹಾರಾಷ್ಟ್ರದ ನಾಸಿಕ್ ನಲ್ಲಿ ರಸ್ತಾ ರೋಕೋ, ನಂತರ ನಾಗಪುರದಲ್ಲಿ ನಡೆಯುತ್ತಿದ್ದ ವಿಧಾನ ಸಭೆಗೆ ಕಾಲ್ನಡಿಗೆ ಜಾಥಾ ಮತ್ತು ಮುತ್ತಿಗೆ, ತಮಿಳುನಾಡಿನಲ್ಲಿ ರಾಜ್ಯಾದ್ಯಂತ ಹೋರಾಟಗಳು, ಆಂಧ್ರ ಪ್ರದೇಶದಲ್ಲಿ ರಾಜ್ಯ ಬಂದ್, ಜಿಲ್ಲಾ ಕಛೇರಿ ಪಿಕೆಟಿಂಗ್ ಮತ್ತು ಬಂಧನ, ಪಂಜಾಬ್‌ನಲ್ಲಿ ಬಸ್ ತಡೆ, ವಿಧಾನ ಸಭೆ ಪಿಕೆಟಿಂಗ್, ಹಲವೆಡೆ ಲಾಠೀ ಚಾರ್ಜ್ ಗಳು, ಬಂಧನ ಹೀಗೆ.

ಅಖಿಲ ಭಾರತ ಭಾರತ ಸಭಾ ಮತ್ತು ಅದರ ರಾಜ್ಯ ಅಂಗಗಳು ನೇತೃತ್ವ ನೀಡಿದ ಹೋರಾಟಗಳು ನಡೆದು ತೀವ್ರತೆಯನ್ನು ಪಡೆಯಲಾರಂಭಿಸಿದವು. ಇವುಗಳ ಜೊತೆಗೇ ವಿವಿಧ ರಾಜ್ಯಗಳಲ್ಲಿ ನಂಜುಂಡ ಸ್ವಾಮಿಯವರಿಗೆ ಸಂವಾದಿಯಾಗಿ ತಮಿಳುನಾಡಿನ ನಾರಾಯಣಸ್ವಾಮಿ ನಾಯ್ಡು, ಮಹಾರಾಷ್ಟ್ರದ ಶೇತ್ಕರಿ ಸಂಘಟನೆಯ ಶರದ್ ಜೋಷಿ, ಉತ್ತರ ಪ್ರದೇಶದ ಭಾರತ ಕಿಸಾನ್ ಯೂನಿಯನ್‌ನ ಮಹೇಂದ್ರ ಟಿಕಾಯತ್ ಮೊದಲಾದವರು ಇದೇ ಸಮಯದಲ್ಲಿ ರೈತ ಚಳುವಳಿಗೆ ಹೊಸತಾಗಿ ಧುಮುಕಿದರು ಅಥವಾ ಕೆಲ ಸಮಯದ ಹಿಂದೆ ಸಂಘಗಳನ್ನು ಸ್ಥಾಪಿಸಿದ್ದವರು ಮತ್ತಷ್ಟು ಕ್ರಿಯಾಶೀಲರಾದರು.

ಈ ಹೋರಾಟಗಳು ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಸ್ವರೂಪವನ್ನು ಪಡೆದುಕೊಂಡವು. ನಾಲ್ಕು ಎಡಪಕ್ಷಗಳು, ದೇವರಾಜ ಅರಸು, ಶರದ ಪವಾರ್ ನಾಯಕತ್ವದ ಕಾಂಗ್ರೆಸ್ ಯು, ಚರಣ್ ಸಿಂಗರ ಲೋಕದಳ  ಸೇರಿದಂತೆ ಆರು ವಿರೋಧ ಪಕ್ಷಗಳು ದೆಹಲಿಯಲ್ಲಿ ಸೆಪ್ಟೆಂಬರ್ ನಲ್ಲಿ ಸಭೆ ಸೇರಿದವು. ಈ ಸಮಾವೇಶ 1981 ಜನವರಿ 17 ರಂದು ದೇಶದೆಲ್ಲೆಡೆ ಕಿಸಾನ್ ದಿನವಾಗಿ ಆಚರಿಸಲು ಮತ್ತು ಮಾರ್ಚ್ 31 ರಂದು ದೆಹಲಿಯಲ್ಲಿ ದೊಡ್ಡ ರೈತ ಪ್ರತಿಭಟನೆ ನಡೆಸಲು ಕರೆ ನೀಡಿತು.

ಅದರ ಭಾಗವಾಗಿ ಕರ್ನಾಟಕದಲ್ಲಿಯೂ ನಾಲ್ಕು ಪಕ್ಷಗಳ ಸಭೆ ನಡೆಯಿತು. ಅದರಲ್ಲಿ ಸಿಪಿಎಂ, ಸಿಪಿಐ ಪಕ್ಷಗಳ ಜೊತೆಗೆ ಆಗ ವಿರೋಧ ಪಕ್ಷದಲ್ಲಿದ್ದ ದೇವರಾಜ ಅರಸುರವರ ಪಕ್ಷವೂ ಭಾಗವಹಿಸಿತು. ಆದರೆ ಲೋಕಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದ ಜನತಾ ಪಕ್ಷ ಈ ಎಲ್ಲವುಗಳಿಂದ ದೂರ ಉಳಿಯಿತು ಎಂಬುದು ಗಮನಿಸಬೇಕಾದ ವಿಷಯ. ಕರ್ನಾಟಕದಲ್ಲಿಯೂ ಕೂಡಾ ಜನತಾ ಪಕ್ಷದ ನಡೆ ಇದೇ ಮಾದರಿಯನ್ನು ಅನುಸರಿಸಿತ್ತು  ಎಂಬ ಬಗ್ಗೆ ಮೇಲೆ ಸೂಚಿಸಿದ್ದೇನೆ.

ಅದಕ್ಕೆ ಮುನ್ನೆಲೆಯಾಗಿ  ಬೆಂಗಳೂರಿನಲ್ಲಿ ದೌರ್ಜನ್ಯ,ದಬ್ಬಾಳಿಕೆಗಳಿಂದ ಬೇಸತ್ತ  ರೈತರು ಹಾಗೂ ಕಾರ್ಮಿಕರಿಂದ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಡಿಸೆಂಬರ್, 12 ರಂದು ನಡೆದ ಪ್ರತಿಭಟನಾ ಸಭೆಯಲ್ಲಿ ನಲವತ್ತೈದರಿಂದ ಐವತ್ತು ಸಾವಿರದವರೆಗೂ ರೈತರು ಮತ್ತು ಕಾರ್ಮಿಕರು ಭಾಗವಹಿಸಿದರು.

ಜನವರಿ 2 ಮತ್ತು 3 ರಂದು ಮತ್ತೆ ಸೇರಿದ ನಾಲ್ಕು ಪಕ್ಷಗಳ ಸಭೆಯಲ್ಲಿ ಮಹಾರಾಷ್ಟ್ರದ ಸಂಘಟಿಸಲಾದ ಬೃಹತ್ ಕಾಲ್ನಡಿಗೆ ಜಾಥಾದಂತೆ ಕರ್ನಾಟಕದಲ್ಲಿಯೂ ನರಗುಂದದಿಂದ ಬೆಂಗಳೂರಿನವರೆಗೆ ಜನವರಿ 16 ರಿಂದ  ಕಾಲ್ನಡಿಗೆ ಜಾಥಾ ನಡೆಸಬೇಕೆಂದು ಫೆ. 5 ರಂದು ವಿಧಾನಸೌಧದ ಎದುರು ಬೃಹತ್ ಬಹಿರಂಗ ಸಭೆ ನಡೆಸಬೇಕೆಂದು ತೀರ್ಮಾನ ಮಾಡಲಾಯಿತು. ಜನವರಿ 16 ರಂದು
ನರಗುಂದದಲ್ಲಿ ಹುತಾತ್ಮರಾದ ಚಿಕ್ಕ ನರಗುಂದದ ಈರಪ್ಪ ಬಸಪ್ಪ  ಕಡ್ಲಿಕೊಪ್ಪ ಹಾಗೂ ನವಲಗುಂದದಲ್ಲಿ ಗುಂಡೇಟಿಗೆ ಬಲಿಯಾದ ಬಸಪ್ಪ ಲಕ್ಕುಂಡಿಯವರ ನೆನಪಿನ ಹುತಾತ್ಮ ಜ್ಯೋತಿ ಹಿಡಿದು ಕಾಲ್ನಡಿಗೆ ಆರಂಭವಾಯಿತು.

ದೇವರಾಜ ಅರಸುರವರು ಉದ್ಘಾಟನೆ ಮಾಡಿದ ಈ ಬಹಿರಂಗ ಸಭೆಯನ್ನು ವಿಫಲಗೊಳಿಸಬೇಕೆಂದು ಗುಂಡೂರಾವ್ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿತು. ಒಂದು ಕಡೆ ತಮ್ಮ ಪಕ್ಷದ ಮುಖಂಡರ ಮೂಲಕ ರೈತರಿಗೆ ಜಾಥಾಕ್ಕೆ, ಬಹಿರಂಗ ಸಭೆಗೆ ಸೇರದಿರಲು ಒತ್ತಾಯ, ಬೆದರಿಕೆಗಳು, ಮತ್ತೊಂದು ಕಡೆ ಪೋಲಿಸ್ ವಾಹನಗಳನ್ನು  ನರಗುಂದ ಪಟ್ಟಣದಲ್ಲಿ ಹಾಗೂ ವಿವಿಧ ಹಳ್ಳಿಗಳಲ್ಲಿ ಗಸ್ತು ಹೊಡೆಸಿ ಭಯ ಹುಟ್ಟಿಸಿದರು.

ತಿಂಗಳುಗಟ್ಟಲೆ ಪೋಲೀಸರ ದೌರ್ಜನ್ಯದಿಂದ ಭಯಭೀತರಾಗಿದ್ದ ರೈತರು ದೂರ ದೂರ ಮರೆಯಲ್ಲಿ ನಿಂತು ನೋಡುತ್ತಿದ್ದರೇ ಹೊರತು ಸಭೆಗೆ ಬರಲಿಲ್ಲ. ಆಗ ನರಗುಂದದ ನಂದಿ ಅಂಡ್ ಹಸ್ಬಿ ಹತ್ತಿ ಗಿರಣಿಯ ಕಾರ್ಮಿಕರು ಈ ಬೆದರಿಕೆಗಳಿಗೆ ಸೊಪ್ಪು ಹಾಕದೆ ಘೋಷಣೆ ಕೂಗುತ್ತಾ ಸಭೆಗೆ ಮೆರವಣಿಗೆಯಲ್ಲಿ ಬಂದಾಗ ರೈತರೂ ಕೂಡಾ ಅವರೊಡನೆ ಹೆಜ್ಜೆ ಹಾಕಿ ಸಭೆಗೆ ಬಂದು ಉದ್ಘಾಟನೆಯನ್ನು ಯಶಸ್ವಿಗೊಳಿಸಿದರು. ಇಂತಹ ಕುತಂತ್ರಗಳನ್ನು ಜಾಥಾದ ದಾರಿಯುದ್ದಕ್ಕೂ ಸರ್ಕಾರದ ಮಂತ್ರಿಗಳ‌ ಮೂಲಕ ಮಾಡಲು ಪ್ರಯತ್ನಿಸಿ ವಿಫಲರಾದರು. ಅರಸುರವರು ಕಾಲ್ನಡಿಗೆ ಉದ್ಘಾಟನೆ ಮಾಡಿ ಕೆಲವು ದೂರ ನಡೆದರು.

ನರಗುಂದದಿಂದ ಆರಂಭವಾದ ಕಾಲ್ನಡಿಗೆಯಲ್ಲಿ ಸಾವಿರಾರು ಜನರು ಜೊತೆಗೆ ಭಾಗವಹಿಸಿ ನಡೆದರು. ಮುಂದಿನ ಊರು ಸೇರು ಸೇರಿದಾಗ ಆ ಊರಿನ ಇಡೀ ಜನರೇ ಈ ನಡಿಗೆಗೆ ಸೇರುತ್ತಿದ್ದರು. ಇಡೀ ಊರಿಗೆ ಊರೇ ನಡೆದು ಬರುತ್ತಿದ್ದಂತೆ  ಕಾಣುತ್ತಿತ್ತು. ಈ ಜನ ಬೆಂಬಲ ಹೋರಾಟದ ಕಣವಾಗಿದ್ದ ಮಲಪ್ರಭಾ ಪ್ರದೇಶ ದಾಟಿದ ಮೇಲೂ ಇಡೀ 550 ಕಿಮೀ ಉದ್ದಕ್ಕೂ ಮುಂದುವರೆಯಿತು.

ರೈತರು ಅಲಂಕರಿಸಿದ ಎತ್ತಿನ ಬಂಡಿಗಳಲ್ಲಿ ಡೊಳ್ಳು, ಹಲಗೆ ಬಡಿಯುತ್ತಾ ಊಟ, ತಿಂಡಿ ತೆಗೆದುಕೊಂಡು ಬಂದು ನೀಡಿ ಜಾಥಾಕ್ಕೆ ಜೊತೆಗೂಡುತ್ತಿದ್ದರು. ಹರಿಹರದಲ್ಲಂತೂ ರಾತ್ರಿ 11 ಗಂಟೆಗೆ ಸಭೆ ಆರಂಭವಾಗಿ ರಾತ್ರಿ ಒಂದೂವರೆ ಗಂಟೆಯವರೆಗೂ ನಡೆಯಿತು. ಮುಖ್ಯ ನಗರಗಳಲ್ಲಿನ‌ ಸಭೆಗಳಿಗೆ ಅಖಿಲ ಭಾರತ ಕಿಸಾನ್ ಸಭಾದ ನಾಯಕರೂ, ಕಾಂಗ್ರೆಸ್ ಯು ಅಧ್ಯಕ್ಷರಾಗಿದ್ದ ಚಂದ್ರೇಗೌಡ, ಹುಚ್ಚ ಮಾಸ್ತಿಗೌಡ ಮೊದಲಾದವರೂ ಭಾಗವಹಿಸುತ್ತಿದ್ದರು. ಈ ನಡಿಗೆಯಲ್ಲಿಯೇ ಸಿದ್ಧಲಿಂಗಯ್ಯನವರ ಹಾಡು ಮಾರ್ಪಾಡಾಗಿ ‘ರೈತರು ಬರುವರು ದಾರಿ ಬಿಡಿ,ರೈತರ ಕೈಗೆ ರಾಜ್ಯ ಕೊಡಿ’ ಆಯಿತು.

ಚಿಕ್ಕ ನರಗುಂದದ ಒಬ್ಬ ಕೂಲಿಕಾರ ಈ ಜಾಥಾದಲ್ಲಿ ಭಾಗವಹಿಸಿ ಹಾಡು ಹಾಡುತ್ತಲೇ ರಚಿಸಿದ ಲಾವಣಿ ಜಾಥಾದುದ್ದಕ್ಕೂ ಬಹು ಜನಪ್ರಿಯವಾಯಿತು.
‘ಈಗ ಮಾಡೀವಿ ಆರಂಭ,
ವಿಧಾನ ಸೌಧದಿ ರಣಗಂಭ
ಕೇಳ್ ಕೇಳೆಲೋ ರೌಡಿ,
ನೀನಲ್ಲೋ ನಮ ಸಮಾನ ಜೋಡಿ
ಸರಿ ಸರೀ ಸರಿ ಹಿಂದಕ್ಕ,
ಸಾಗಿ ಬರುತೇವಾ ಮುಂದಕ್ಕ’
ಈ ಲಾವಣಿಯ ಕೆಲ ಸಾಲುಗಳು. ಒಬ್ಬ ಕೂಲಿಕಾರ ರಾಜ್ಯದ ಮುಖ್ಯಮಂತ್ರಿಗೆ ನೀನಲ್ಲೋ ನಮ ಸಮಾನ ಜೋಡಿ ಎಂದು ಸವಾಲು ಹಾಕುವ ಸುಂದರ ಕ್ಷಣ ದಕ್ಕುವುದು  ಚಳುವಳಿಗಳಲ್ಲಿ. ಆಗಿನ್ನೂ ಅಧಿಕಾರಿಯಾಗಿದ್ದ ನಾನು ಈ ಮಹಾ ನಡಿಗೆಯಲ್ಲಿ ಭಾಗವಹಿಸುವಂತಿರಲಿಲ್ಲ.  ಸಾಧ್ಯವಾದೆಡೆಗಳಿಗೆ ಹೋಗಿ ದೂರದಲ್ಲಿ ನಿಂತು ಕಣ್ಣು ತುಂಬಿಕೊಳ್ಳುತ್ತಿದ್ದೆ.

ನರಗುಂದದಿಂದ ಹೊರಟ ಜಾಥಾ ಪ್ರಧಾನ‌ ಕಾಲ್ನಡಿಗೆ ಜಾಥಾ ಆದರೆ ರಾಜ್ಯದ ಹಲವು ಜಿಲ್ಲೆಗಳಿಂದ ವಾಹನ ಜಾಥಾಗಳು ಬಂದು ಈ ಜಾಥಾಕ್ಕೆ ಕೂಡಿಕೊಂಡವು. ಬಿಜಾಪುರದಿಂದ ಮಂಗಳೂರು-ಚಿಕ್ಕ ಮಗಳೂರು- ಹಾಸನ‌ ಮಾರ್ಗದಿಂದ, ಶಿವಮೊಗ್ಗ – ಭದ್ರಾವತಿ ಮಾರ್ಗದಿಂದ ಮೈಸೂರು- ಮಂಡ್ಯ ಮಾರ್ಗದಿಂದ, ಕೊಡಗು, ಕೋಲಾರ, ದೊಡ್ಡ ಬಳ್ಳಾಪುರದಿಂದ, ಬಾಗೇಪಲ್ಲಿಯಲ್ಲಿ ಗುಂಡೇಟಿನಿಂದ ಹುತಾತ್ಮರಾಗಿದ್ದ ನಾಲ್ಕು ಜನರ ನೆನಪಿನ ಜ್ಯೋತಿಯನ್ನು ಹಿಡಿದು ಅಲ್ಲಿಂದ ಹೀಗೆ ಹಲವೆಡೆಗಳಿಂದ ದಾರಿಯುದ್ದಕ್ಕೂ ಸಭೆಗಳನ್ನು ಮಾಡುತ್ತಾ ಬಹಳಷ್ಟು ಜಾಥಾಗಳು ಬಂದು ಬೆಂಗಳೂರಿನ‌  ಯಶವಂತಪುರ ಸೇರಿದವು.
ನೆನೆ ನೆನೆ ಆ ದಿನವಾ-
ನೆನೆ ನೆನೆ ಆ ದಿನವ
ಓ ರೈತ ಭಾಂಧವಾ
ನೆನೆ ನೆನೆಯೋ ಆ ದಿನವ
ಅಂದು ಆವ ಸೆಲೆಯೊಡೆದುದೇನೋ ಹೊರ
ಹೊಮ್ಮಿ‌ಚಿಮ್ಮಿ ಚಿಗಿದು
ಉರುಳಿ ಉರುಳಿ ಹೊರಹೊರಳಿ ಬಂತು ಮೊರೆ
ಮೊರೆದು ಬಂತು ಹೊನಲು
ಹಿಂದೆಗೆಯಲಿಲ್ಲ,ತಲೆ ಬಾಗಲಿಲ್ಲ ಎದೆಗೆಟ್ಟುದಿಲ್ಲ ಜನತೆ
ಅಧಿಕಾರ ಬಲದ ಮದಗಜದ ತುಳಿತಕೂ ಎದೆಯನೊಡ್ಡಿ ನಗುತೆ.
-ಗೋಪಾಲ ಕೃಷ್ಣ ಅಡಿಗ

ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು
ಕಪ್ಪು‌ಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳು
– ಸಿದ್ಧಲಿಂಗಯ್ಯ

ಅಂದು ಬೆಂಗಳೂರಿನಲ್ಲಿದ್ದವರೆಲ್ಲ ಕಣ್ತುಂಬಿಕೊಂಡ,ಮನ ತುಂಬಿಕೊಂಡ ದೃಶ್ಯಗಳು , ಇಂದೂ ಅವರ ಕಣ್ಣಲ್ಲಿ ನೆಲೆಸಿವೆ. ದೆಹಲಿಯತ್ತ ಧಾವಿಸುತ್ತಿದ್ದ ರೈತರ ಮುನ್ನಗ್ಗುವ ಆ ಧಾಡಸೀತನ, ಉತ್ಸಾಹ ಈಗಲೂ ಕಣ್ತುಂಬಿರುವಂತೆ. ಅದಕ್ಕೆ ಇದೇ ಸಾಟಿ,ಇದಕ್ಕೆ ಅದೇ ಸಾಟಿ. ಸಾಗರಂ ಸಾಗರೋಪಮಂ ಎನುವಂತೆ. ಯಶವಂತಪುರದಿಂದ ರೈತರ ಮೆರವಣಿಗೆ ಹೊರಾಟಾಗ ಹಲವಾರು ನದಿಗಳು ಕೂಡಿದಂತೆ ಕೂಡುತ್ತಾ ಹೋದವು. ದಾರಿಯುದ್ದಕ್ಕೂ ಹೂವಿನ ಸುರಿಮಳೆಯಿಂದ ಕೂಡಿದ ಸ್ವಾಗತ. ಉತ್ಸಾಹದ ಜಯಘೋಷಗಳು.

ಈ ಮೆರವಣಿಗೆ ವಿಧಾನ ಸೌಧದ ಮುಂದಿನ ಕಬ್ಬನ್ ಪಾರ್ಕ್ ಸೇರಿದಾಗ ಕರ್ನಾಟಕದ ಎಲ್ಲೆಡೆಯಿಂದ ಬಂದ ನದಿ,ಹೊಳೆಗಳು ಸೇರಿ ಜನ ಸಾಗರವಾಯಿತು. ಐದಾರು ಲಕ್ಷವಾಯಿತು. ಬಹು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರೂ, ವಿದ್ಯಾರ್ಥಿಗಳು, ಮಹಿಳೆಯರೂ ಸೇರಿದರು,ರೈತರಿಗೆ ಬೆಂಬಲವಾಗಿ. ಅಂದು ವಿಧಾನ ಸೌಧದ ಸುತ್ತ ಹಲವು ಸಾವಿರ ಪೋಲೀಸರ ಪಹರೆ. ಹಲವು ಸುತ್ತಿನ ಪಹರೆ. ಬಾರು ಮಾಡಿದ ಬಂದೂಕುಗಳ ಮೂರು ನಾಲ್ಕು ಸಾಲುಗಳು. ಈ ರೈತ ಸಾಗರ ಎಲ್ಲಿ ವಿಧಾನ ಸೌಧದೊಳಕ್ಕೆ ನುಗ್ಗಿ ನರಗುಂದದಲ್ಲಾದಂತೆ ಇಡೀ ಸೌಧಕ್ಕೆ ಬೆಂಕಿ ಹಚ್ಚಿ ಬಿಡುವುದೇನೋ ಎಂಬ ಭಯ ಆಳುವವರಿಗೆ. ಅವರಿಗೆ ಎದೆ ಡವ ಡವ.

ರೈತರು ನರಗುಂದ ಮತ್ತು ವಿವಿಧೆಡೆಗಳಿಂದ ತಂದ ಹುತಾತ್ಮ ರೈತರ ನೆನಪಿನ ಜ್ಯೋತಿಯನ್ನು ವಿಧಾನ ಸೌಧದ ಮೆಲಿಟ್ಟೇ ತೀರುವೆವೆಂಬ ದೃಢ ತೀರ್ಮಾನ. ಕಬ್ಬನ್ ಪಾರ್ಕ್ ದಾಟಲು ಬಿಡೆವೆಂಬ ಪೋಲೀಸರ ತೀರ್ಮಾನ. ಬಾರು ಮಾಡಿದ ಪೋಲೀಸರ ಸಾಲು ಸಾಲುಗಳ ನಡುವೆಯೇ ರೈತರು ನುಗ್ಗಿ ವಿಧಾನ ಸೌಧದ ಮೆಟ್ಟಿಲುಗಳನ್ನೇರಿ ಜ್ಯೋತಿಯನ್ನು‌ ಸ್ಥಾಪಿಸಿಯೇ ಬಿಟ್ಟರು. ಮತ್ತೆ ಹಿಂದಿರುಗಿ
ರೈತರ ಬಹಿರಂಗ ಸಭೆ ನಡೆಯಿತು. ರೈತರ ಹಕ್ಕೊತ್ತಾಯಗಳು ಈಡೇರುವವರೆಗೂ ಹೋರಾಟ ಬೆಳೆಯುತ್ತ ಹೋಗುವುದೆಂಬ ದೃಢ ನುಡಿಗಳು ಹಲವರಿಂದ.

ಬೆಂಗಳೂರು ಅಲ್ಲಿಯವರೆಗೆ ಕಂಡರಿಯದ ಜನ ಸ್ತೋಮ. ಹೀಗೆ ಲಕ್ಷಾಂತರ ಜನರು ಬಂದು ಸೇರುವ ಸೂಚನೆ ಸಿಕ್ಕಾಗಲೇ ಸಂಘಟಕರಾದ ನಾಲ್ಕು ರಾಜಕೀಯ ಪಕ್ಷಗಳ ಮುಖಂಡರಿಗೆ ಹಲವು ಚಿಂತೆಗಳು. ಹತ್ತು ವರ್ಷ ಕರ್ನಾಟಕವನ್ನಾಳಿದ್ದ ಅರಸರಿಗೂ ಕೂಡಾ ಹೇಗಪ್ಪಾ ಇವರಿಗೆಲ್ಲ ಊಟ , ನೀರಿನ‌ ವ್ಯವಸ್ಥೆ ಮಾಡುವುದು ಎಂಬ ಚಿಂತೆ. ಅಂದು ಬೆಂಗಳೂರಿನಲ್ಲಿ ಈಗಿನಂತೆ ಬಹಳ ಹೋಟೆಲುಗಳೂ ಇರಲಿಲ್ಲ. ಆಗ ಬಂದ ರೈತರಿಗೆಲ್ಲ ನಾವು ಊಟ ಕೊಡುವೆವೆಂದು ಮುಂದೆ ಬಂದವರು ಕಾರ್ಮಿಕ ನಾಯಕರಾದ ಸೂರ್ಯ ನಾರಾಯಣ ರಾಯರು. ಬೆಂಗಳೂರಿನ  ಕಾರ್ಮಿಕರು ಒಬ್ಬೊಬ್ಬರೂ ಹತ್ತು ಜನರಿಗೆ ಊಟ ತಯಾರಿಸಿ ತರಬೇಕೆಂಬ ನಿರ್ದೇಶನ ಕಾರ್ಮಿಕ ಸಂಘಗಳಿಂದ ಹೊರಟಿತು. ಸರಿ,ಕಬ್ಬನ್ ಪಾರ್ಕಿನಲ್ಲಿ ಊಟದ ಪ್ಯಾಕೆಟ್‌ಗಳು ಬೆಟ್ಟದಂತೆ ಬಂದು ಬಿದ್ದಿತು.  ಚಿತ್ರಾನ್ನ, ಪುಳಿಯೋಗರೆ,ಚಪಾತಿ, ಬ್ರೆಡ್, ಬಾಳೆ ಹಣ್ಣುಗಳ ರಾಶಿ ರಾಶಿ. ಬಂದ ರೈತರೆಲ್ಲ ಹೊಟ್ಟೆ ತುಂಬ ಊಟ ಮಾಡಿ ಮರಳಿ ಪ್ರಯಾಣದಲ್ಲಿ ತಿನ್ನಲು ಬುತ್ತಿ ತೆಗೆದುಕೊಂಡು ಹೋಗುವಷ್ಟು.

ಹೀಗೆ ಇಲ್ಲಿ ನಾಯಕರ ಘರ್ಜನೆಗಳು ಕೇಳುತ್ತಿರುವಾಗ, ಗುಂಡೂರಾವ್‌ರವರ ಮೇರೆ ಮೀರಿದ ದಬ್ಬಾಳಿಕೆ,ದೌರ್ಜನ್ಯಗಳ ಖಂಡನೆ, ಧಿಕ್ಕಾರಗಳು, ಗುಂಡೂರಾವ್ ,ಇಂದಿರಾಗಾಂಧಿಗೆ ಧಿಕ್ಕಾರ, ಅವರು ಆಡಳಿತದಿಂದ ತೊಲಗಲಿ ಎಂಬ ಘೋಷಣೆಗಳು ಕೇಳುತ್ತಿರುವಾಗ ಒಳಗೆ ವಿಧಾನ ಸೌಧದಲ್ಲಿ  ಕುಳಿತ ಗುಂಡೂರಾವ್‌ರವರಿಗೆ ಸಿಡಿಮಿಡಿ. ಸಭೆಯೆಲ್ಲಾ ಮುಗಿದು ರೈತರು ತೆರಳುತ್ತಿದ್ದಾರೆ ಎನ್ನುವಾಗ  ಅವರ ಬಾಯಿಂದ ”  ಬಂದವರೆಲ್ಲಾ ಬಾಡಿಗೆ ರೈತರು” ಎಂಬ ಮಾತುಗಳು ಹೊರಬಂದವು.

ಈ ಮಾತುಗಳು ರೈಲು ನಿಲ್ದಾಣಗಳಲ್ಲಿ ರೈಲು ಹತ್ತುತ್ತಿದ್ದ ಸಾವಿರಾರು ರೈತರ ಕಿವಿಗೆ ಸಂಜೆ ಪತ್ರಿಕೆಗಳ ಮೂಲಕ, ಕರ್ಣಾಕರ್ಣಿಯಾಗಿ ಮುಟ್ಟಿತು. ರೈಲು ಹತ್ತಿದ್ದವರೂ ದಿಗ್ಗನಿಳಿದರು. ರಾತ್ರಿ ಇಲ್ಲಿಯೇ ಉಳಿದರು. ಬೆಳಗ್ಗೆ ಕಛೇರಿಗಳು ಆರಂಭವಾಗುತ್ತಲೇ ಸಾವಿರಾರು ರೈತರು ವಿಧಾನ ಸೌಧದೆಡೆಗೆ ನುಗ್ಗಿದರು. ಪೋಲಿಸರ ಅಡೆ ತಡೆಗಳನ್ನೆಲ್ಲಾ ದಾಟಿ ಸೌಧದೊಳಕ್ಕೇ ನುಗ್ಗಿಬಿಟ್ಟರು. ‘ಯಾರು ಬಾಡಿಗೆ ರೈತರು’ ಎಂಬ ಘರ್ಜನೆ ವಿಧಾನಸೌಧದ ಮೊಗಸಾಲೆಗಳಲ್ಲಿ ಘರ್ಜಿಸಿದರು. ಗುಂಡೂರಾಯರು ಪರಾರಿ. ಕೊನೆಗೆ ಪೋಲೀಸ್ ದಂಡು ಬಂದು ಐನೂರಕ್ಕೂ ಹೆಚ್ಚು ರೈತರು, ಚಂದ್ರೇಗೌಡರೂ ಸೇರಿದಂತೆ ಹಲವು ಶಾಸಕರು, ಸಿಪಿಎಂ, ಸಿಪಿಐಗಳ ನಾಯಕರುಗಳನ್ನು ಬಂಧಿಸಲಾಯಿತು.

ರಾಜ್ಯದ ರಾಜಕೀಯಕ್ಕೆ ಮಹಾ ತಿರುವು. ರಾಷ್ಟ್ರವ್ಯಾಪಿ ಪ್ರಭಾವ –
ರೈತ ಚಳುವಳಿ ಹೀಗೆ ರಾಜ್ಯ ವ್ಯಾಪಿ ಹಬ್ಬುವುದರ ಜೊತೆಗೆ ಕಾರ್ಮಿಕ ಚಳುವಳಿ,ಮುಷ್ಜರಗಳೂ ಹೆಚ್ಚಾದವಲ್ಲ. ಈ ಎರಡೂ ಮುಂದಿನೆರಡು ವರ್ಷಗಳ ಕಾಲವೂ ಅಲ್ಲಲ್ಲಿ ಸ್ಫೋಟಿಸುತ್ತಲೇ ಇದ್ದವು. ಸರಿಸುಮಾರು ಅದೇ ಸಮಯದಲ್ಲಿ  ಸಾಂಸ್ಕೃತಿಕ ರಂಗದಲ್ಲಿ ಕೂಡಾ ಮಹತ್ವದ ಬೆಳವಣಿಗೆಗಳು. ಸಿದ್ಧಲಿಂಗಯ್ಯನವರ ಕ್ರಾಂತಿಗೀತೆಗಳು ರಾಜ್ಯದಲ್ಲೆಲ್ಲಾ ಮೊಳಗಲಾರಂಭಿಸಿದ್ದವು. ಸಮುದಾಯ ಸಾಂಸ್ಕೃತಿಕ ಜಾಥಾ ಇಡೀ ರಾಜ್ಯದ ಪ್ರಗತಿಪರ ಸಾಹಿತಿ, ಕಲಾವಿದರುಗಳನ್ನು ಒಗ್ಗೂಡಿಸಿತು. ಬಂಡಾಯ ಸಾಹಿತ್ಯ ಚಳುವಳಿ ಆರಂಭವಾಗಿತ್ತು. ಕೆಲವೇ ತಿಂಗಳುಗಳ ನಂತರ ಗೋಕಾಕ್ ಚಳುವಳಿ ಆರಂಭವಾಯಿತು.

ಈ ಎಲ್ಲ ಸಾಂಸ್ಕೃತಿಕ ಚಳುವಳಿಗಳಿಗೆ ಎಪ್ಪತ್ತರ ದಶಕದ ಆರಂಭದಲ್ಲಿಯೇ ಜಾತಿ ವಿನಾಶ ಆಂದೋಲನ, ತೇಜಸ್ವಿ, ಲಂಕೇಶ್ , ಚಂಪಾರವರ ಹೊಸ ದಿಗಂತದ ಕಡೆಗೆ ಮುಖ ಮಾಡಿದ ಸಾಹಿತ್ಯ, ಬೂಸಾ ಚಳುವಳಿ, ಸಿದ್ಧಲಿಂಗಯ್ಯನವರ ಹೊಲೆ ಮಾದಿಗರ ಹಾಡು, ದೇವನೂರರ ಕತೆಗಳು, ಜೆಪಿ ಚಳುವಳಿ, ತುರ್ತು ಪರಿಸ್ಥಿತಿ ಹೇರಿದ ಮೇಲೆ ಅದರ ವಿರುದ್ಧದ ಆಕ್ರೋಶ, ಲಂಕೇಶ್ ಪತ್ರಿಕೆಯ ಆರಂಭ ಇವೆಲ್ಲ ಮುನ್ನುಡಿ ಬರೆದಿದ್ದವು. ದಲಿತ ಸಂಘರ್ಷ ಸಮಿತಿಯ ಸ್ಥಾಪನೆಯಾಗಿ ದಲಿತ ಚಳುವಳಿಯೂ ಹೋರಾಟಗಳ ಸಾಗರಕ್ಕೆ ಒಂದು ದೊಡ್ಡ ಪ್ರವಾಹವಾಗಿ ಸೇರಿತು.

ಈ ಎಲ್ಲವೂ ಸೇರಿ 1983 ರಲ್ಲಿ ವಿಧಾನ‌ಸಭಾ ಚುನಾವಣೆಗಳು ನಡೆದಾಗ ಗುಂಡೂರಾವ್ ಸೋಲಿಸಲ್ಪಟ್ಟರು. ಕಾಂಗ್ರೆಸ್ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಸೋಲಿಸಲ್ಪಟ್ಟಿತು.ಕಾಂಗ್ರೆಸ್‌ನ 36 ವರ್ಷಗಳ ಸುದೀರ್ಘ ಏಕಪಕ್ಷೀಯ ಅಧಿಕಾರ ಕೊನೆಗೊಂಡಿತು. ಮುಂದೆ ಎರಡು ದಶಕಗಳ ಕಾಲ ಎರಡು ಪಕ್ಷಗಳು ಓಂದಾದ ಮೇಲೊಂದರ ಆವರ್ತನದ ಆಡಳಿತ ಆರಂಭವಾಯಿತು. ಇಲ್ಲಿಯವರೆಗೂ ಈ ರಾಜಕೀಯ ಬೇರೆ ಬೇರೆ ರೂಪಗಳಲ್ಲಿ ಮುಂದುವರೆಯುತ್ತಿದೆ.

ಇಂತಹ ಮಹತ್ವದ ರಾಜಕೀಯದ ಪರಿವರ್ತನೆಯಲ್ಲಿ ಬಹುಸಂಖ್ಯೆಯ ಜನರನ್ನು ಒಳಗೊಂಡ ರೈತಾಪಿ ಜನತೆಯ ಚಳುವಳಿ ಪ್ರಧಾನ ಪಾತ್ರ ವಹಿಸಿತೆಂದರೆ ತಪ್ಪಿಲ್ಲ. ಕಾಂಗ್ರೆಸ್ ಸೋತಿತು ನಿಜ. ಆದರೆ ಗೆದ್ದದ್ದು ಚಳುವಳಿಗಳಲ್ಲ. ಗೆದ್ದದ್ದು ಚಳುವಳಿಗಳ ನೇತೃತ್ವ ವಹಿಸಿದ್ದ ಸಂಘಟನೆಗಳಲ್ಲ. ಚಳುವಳಿಗಳಿಂದ ಮಾರು ದೂರ ಉಳಿದಿದ್ದ ಜನತಾ ಪಕ್ಷ.  ರುದ್ರಪ್ಪ, ನಂಜುಂಡ ಸ್ವಾಮಿಯವರ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಗಳು ಚುನಾವಣೆಗಳಿಂದ ದೂರ ಉಳಿದವು. ಆ ವೇಳೆಗೆ ಸಂಭವಿಸಿದ್ದ ದೇವರಾಜ ಅರಸರ ಸಾವಿನೊಂದಿಗೆ ಕಾಂಗ್ರೆಸ್ ಯು ಪ್ರಭಾವ ಕ್ಷೀಣಿಸಿತು.

ಚಳುವಳಿಗಳ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘ, ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು,ನಾಯಕರು ಭಾಗವಾಗಿದ್ದ ಕಮ್ಯುನಿಸ್ಟ್ ಪಕ್ಷಗಳು ಮಾತ್ರ ಈ ಚಳುವಳಿಗಳ ಪ್ರತಿನಿಧಿಗಳಾಗಿ ಚುನಾವಣಾ ಕಣಕ್ಕಿಳಿದವು. ಉಳಿದೆಲ್ಲ ಚಳುವಳಿಗಳ ರಾಜಕೀಯ ಅಲಿಪ್ತತೆಯ ಹಿನ್ನೆಲೆಯಲ್ಲಿ ಗುಂಡುರಾವ್ ಸರ್ಕಾರದ ದೌಜನ್ಯಗಳಿಗೆ ಕೊನೆ ಹಾಡಲು  ಕಮ್ಯುನಿಸ್ಟ್ ಪಕ್ಷಗಳು ಜನತಾ ಪಕ್ಷದೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಎರಡೂ ಕಮ್ಯುನಿಸ್ಟ್ ಪಕ್ಷಗಳಿಂದ ಗೆದ್ದ ಆರು ಸದಸ್ಯರ ಜೊತೆಗೆ ಜನತಾ ಪಕ್ಷ ಸೇರಿ ಗೆದ್ದಿದ್ದ ಮಲಪ್ರಭಾ ರೈತ ಚಳುವಳಿಯ ನಾಯಕರಲ್ಲೊಬ್ಬರಾದ  ಯಾವಗಲ್ ಮಾತ್ರ ಚಳುವಳಿಯ ಬಳುವಳಿಗಳಾದರು. 

ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಅನ್ನು ಸೋಲಿಸಬೇಕೆಂಬ ಜನರ ದೃಢ ನಿಶ್ಚಯ ಹೇಗಿತ್ತೆಂದರೆ ಅಂದು ಸ್ಪರ್ಧಿಸಿದ್ದ ಅನೇಕರ ಬಳಿ ಪ್ರಚಾರ ಮಾಡಲು ಹಣವಿರಲಿಲ್ಲ. ಕ್ಷೇತ್ರದಲ್ಲಿ ಅವರ ಹೆಸರೂ ಅನೇಕರಿಗೆ ಗೊತ್ತಿರಲಿಲ್ಲ. ಆದರೂ ಹಳ್ಳಿಗಳಲ್ಲಿ, ನಗರ,ಪಟ್ಟಣಗಳ ಬೀದಿ ಬೀದಿಗಳಲ್ಲಿ ಜನರೇ ಮುಂದಾಗಿ ಅವರನ್ನು ಹೊತ್ತು ಮೆರೆಸಿದರು. ತಾವೇ ಹಣ ಹಾಕಿಕೊಂಡು ಪ್ರಚಾರ ಮಾಡಿದರು. ಹೀಗೆ ಗೆದ್ದದ್ದು ಜನತಾ ಪಕ್ಷ. ಜನರಲ್ಲ. ಗೆಲ್ಲಿಸಿದ್ದು ಮಾತ್ರ ಜನರೇ.

ಜನತಾ ಪಕ್ಷದ ಆಡಳಿತ ರೈತ ಪರವಾಗಿತ್ತೇ ? ರೈತರ,ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತೇ ? ಇವೆಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಈಗ ಅವಕಾಶವಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸೋಲು ಕೇವಲ ರಾಜ್ಯದ ಒಳಗೆ ಮಾತ್ರವಲ್ಲದೆ ರಾಷ್ಟ್ರವ್ಯಾಪಿ ಪರಿಣಾಮ ಬೀರಿತು. ಕಾಂಗ್ರೆಸ್ ಮತ್ತೆ ಏಕಪಕ್ಷದ ಅಧಿಕಾರ ನಡೆಸುವ ಸಾಮರ್ಥ್ಯವನ್ನು ಕುಗ್ಗಿಸಿತು. ರೈತ ಚಳುವಳಿ ಮುಂದೆ ಚುನಾವಣೆಗಳು ನಡೆದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳನ್ನು ಅಧಿಕರಾಕ್ಕೆ ತರುವಲ್ಲಿ ಮುಖ್ಯ ಪಾತ್ರ ವಹಿಸಿತು.

ದೇಶದಲ್ಲಿ ರಾಜ್ಯಗಳಿಗೆ ಸ್ವಾಯತ್ತತೆ, ಕೇಂದ್ರದ ಸರ್ವಾಧಿಕಾರ ಕೊನೆಯಾಗಲಿ ಎಂಬ ಆಶಯ ಮೊಳಗಲು ಕಾರಣವಾಯಿತು. ರೈತ ಚಳುವಳಿ, ದಲಿತ ಚಳುವಳಿ ಏಕಕಾಲಕ್ಕೆ ಬೆಳೆಯುವುದಕ್ಕೆ ಅಡಿಪಾಯ ಹಾಕಿದ, ಭಾರತದಲ್ಲಿ ಎಪ್ಪತ್ತರ ದಶಕದ ಅರೆಬರೆ ಭೂ ಸುಧಾರಣೆಗಳು, ಹಸಿರು ಕ್ರಾಂತಿ, ಇತರ ಆರ್ಥಿಕ, ಸಾಮಾಜಿಕ ನೀತಿ- ದುರ್ನೀತಿಗಳು ಹೇಗೆ ಕಾರಣ? ಸಾಂಸ್ಕೃತಿಕ ರಂಗದ ಬೆಳವಣಿಗೆಗಳಿಗೂ ಈ ಚಳುವಳಿಗಳು, ನೀತಿಗಳಿಗೂ ಸಂಬಂಧವೇನು? ಪರಸ್ಪರ ಅವುಗಳು ಬೀರಿದ ಪರಿಣಾಮ, ಮುಂದಿನ‌ದಿನಗಳಲ್ಲಿ  ಈ ಎಲ್ಲ ಆಯಾಮಗಳು ತಳೆದ ರೂಪ.

ಇಂದು ಭಾರತದಲ್ಲಿ ಬೆಳೆದಿರುವ ಕೋಮುವಾದಕ್ಕೂ ಈ ಬೆಳವಣಿಗೆಗಳಿಗೂ ಇರುವ ಸಂಬಂಧ ಇವುಗಳ ಪರಿಶೀಲನೆ ಒಂದು ಪುಸ್ತಕವನ್ನೇ ಬರೆಯಲು ಒತ್ತಾಯಿಸುತ್ತಿವೆ. ಎಂಬತ್ತರ ದಶಕದ ರೈತ ಚಳುವಳಿಗಳ ಈ ಬೆಳವಣಿಗೆಯ ವಿವರಗಳಿಂದ ನಿಮಗೆ ಇಷ್ಟು ಖಾತರಿಯಾಗಿದೆ ಎಂದು ಭಾವಿಸುತ್ತೇನೆ. ಇಂದು ದೆಹಲಿಯಲ್ಲಿ ನಡೆಯುತ್ತಿರುವ ರೈತ ಸಂಘರ್ಷಕ್ಕೆ ಅಡಿಪಾಯ ಹಾಕಿದ್ದೇ ನರಗುಂದ ರೈತ ಬಂಡಾಯದಿಂದ ಆರಂಭವಾದ ಬೆಳವಣಿಗೆಗಳ ಸರಪಳಿ ಎಂದು. ಅಂದು ಭಾರತಾದ್ಯಂತ ಹುಟ್ಟಿದ ರೈತ ಸಂಘಟನೆಗಳ ತುಣುಕುಗಳೇ ಇಂದು ಐನೂರಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಆಗಿದೆ.

ವಿಭಜಿಯ ಕರ್ನಾಟಕ ರಾಜ್ಯ ರೈತ ಸಂಘಗಳು, ಕರ್ನಾಟಕ ಪ್ರಾಂತ ರೈತ ಸಂಘ ಮತ್ತೂ ಹಲವು ಸಂಘಟನೆಗಳು, ಸಂಘಗಳ ಜೊತೆ ಸೇರಿ ಚಳುವಳಿಯ ಭಾಗವಾಗಿದೆ. ದಲಿತ ಸಂಘಟನೆಗಳೂ ಜೊತೆ ಸೇರಿವೆ. ಅಖಿಲ ಭಾರತ ಕಿಸಾನ್ ಸಭಾ ಮತ್ತು ಮೂವತ್ತು ರಾಜ್ಯಗಳಲ್ಲಿಯೂ ಇರುವ ಅದರ ಘಟಕಗಳು ಈ ಮೋರ್ಚಾದ ಭಾಗವಾಗಿ ದೇಶಾದ್ಯಂತ ರೈತ ಚಳುವಳಿಯನ್ನ ಬಲಗೊಳಿಸುತ್ತಿವೆ. ಹಸಿರು, ಕೆಂಪು, ನೀಲಿ ಚಳುವಳಿಗಳೆಲ್ಲ ಕರ್ನಾಟಕದಲ್ಲಾದಂತೆ ದೂರ ನಿಲ್ಲದೆ ಒಂದೇ ವೇದಿಕೆಯಲ್ಲಿವೆ. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿನಂತೆ ರಾಷ್ಟ್ರ ಮಟ್ಟದಲ್ಲಿಯೂ ಕಾರ್ಮಿಕ ಸಂಘಟನೆಗಳೆಲ್ಲಾ ರೈತ ಚಳುವಳಿಗೆ ದೃಢ ಬೆಂಬಲ ನೀಡಿವೆ.

ರೈತ ಚಳುವಳಿ ಅದನ್ನು ತುಂಬು ಹೃದಯದಿಂದ ಸ್ವಾಗತಿಸಿದೆ. ಒಗ್ಗಟ್ಟು ಮೂಡಿದೆ. ರಾಷ್ಟ್ರ ಮಟ್ಟದ ಈ ಚಳುವಳಿಯ ಪ್ರಶ್ನೆಯೂ ಮಲಪ್ರಭಾ ರೈತರು ಎತ್ತಿದ ಫಸಲುಗಳ ಬೆಲೆ ಪ್ರಶ್ನೆಯ ಹಲವು ಪಟ್ಟು ಉಲ್ಬಣಿಸಿದ ರೂಪವಾಗಿದೆ. ಈ ಒಗ್ಗಟ್ಟನ್ನು ದೃಢವಾಗಿ ಉಳಿಸಿಕೊಂಡು, ಅದರ ಪರಿಣಾಮವಾಗಿ ಈಗಲಾದರೂ ಬೆಲೆ ಮೊದಲಾದ ರೈತರ ಬದುಕಿನ‌ ತುರ್ತು ಸಮಸ್ಯೆಗಳು ಪರಿಹಾರ ಕಾಣಲಿ‌ ಎಂದು ಆಶಿಸೋಣ.

‍ಲೇಖಕರು Admin

July 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: