
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.
ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.
ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.
ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.
ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.
52
ನಾವು ಈಗ ಕಾರ್ಯಾಗಾರ ಎನ್ನುತ್ತೇವಲ್ಲ, ಅಂತಹ ಒಂದು ವೈದ್ಯರ ಕಾರ್ಯಾಗಾರವೇ ಚರಕ ಸಂಹಿತೆಯ ರಚನೆಯ ಆರಂಭ ಮತ್ತು ಸ್ಫೂರ್ತಿ ಎಂದರೆ ನಂಬಬಹುದೇ ?
ಜನರನ್ನು ಹಲವಾರು ರೋಗಗಳನ್ನು ಕಾಡುತ್ತಿರುವುದರ ಬಗ್ಗೆ ಚಿಂತಿತರಾದ ಅರವತ್ತಕ್ಕೂ ಹೆಚ್ಚು ಪ್ರಸಿದ್ಧ ವೈದ್ಯರು ಹಾಗೂ ವೈದ್ಯ ವಿದ್ವಾಂಸರು ಹಿಮಾಲಯದ ಮೇಲೆ ಚಿತ್ರ ರಥ ಎಂಬ ಒಂದು ಜಾಗದಲ್ಲಿ ಎರಡು ದಿನ ಸೇರಿ ಚರ್ಚಿಸಿದರಂತೆ. ಚರಕ ಸಂಹಿತೆಯ ಆರಂಭದಲ್ಲಿಯೇ ಈ ಕಾರ್ಯಾಗಾರದ ಬಗ್ಗೆ ವಿವರಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಮಹಾಕಾವ್ಯ ಪುರಾಣಗಳಲ್ಲಿರುವ ಹಲವಾರು ಪ್ರಸಿದ್ಧರ ಹೆಸರುಗಳಿವೆ. (ಸೂತ್ರಸ್ಥಾನ1. 7-8) ಅದರಲ್ಲಿ ಕೆಲವರ ಹೆಸರು ಅವರ ಅಭಿಪ್ರಾಯಗಳ ಸಮೇತ ದಾಖಲಾಗಿರುವುದರಿಂದ ಅಷ್ಟನ್ನಾದರೂ ಖಚಿತವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಇವರಲ್ಲಿ ವಿದೇಹದ ರಾಜನೂ ಸ್ವತಃ ವಿದ್ವಾಂಸನಾದ ನಿಮಿಯೂ ಇದರಲ್ಲಿ ಸೇರಿರಬಹುದು. (ಈ ರಾಜನ ಹೆಸರು ಬೇರೆ ಅಧ್ಯಾಯವೊಂದರಲ್ಲಿ ನಮೂದಾಗಿದೆ) ಈ ಹೆಸರುಗಳು ಇವರುಗಳು ಭಾರತದ ಬೇರೆ ಬೇರೆ ಪ್ರದೇಶಗಳಿಂದ ಬಂದವರು, ಹಲವಾರು ಆರ್ಯ ಬುಡಕಟ್ಟುಗಳಿಗೆ ಸೇರಿದವರು ಎಂಬ ಸೂಚನೆ ಸಿಗುತ್ತದೆ. ಅಷ್ಟೇ ಅಲ್ಲ ಕೆಲವರು ದಕ್ಷಿಣ ಭಾರತವರೂ ಇರಬಹುದು, ಆರ್ಯೇತರ ಬುಡಕಟ್ಟುಗಳವರೂ ಇರಬಹುದು ಎಂದೆನಿಸುವಂತಿದೆ. ಉದಾಹರಣೆಗೆ ವೈಖಾನಸರು, ವಾಲಖಿಲ್ಯರು ಎಂಬ ಹೆಸರುಗಳಿವೆ, ವಿವಿಧ ಪ್ರಾಣಿ, ಪಕ್ಷಿ ಮೂಲವದ ಕುಲ ನಾಮಗಳು ಅವುಗಳಲ್ಲಿ ಕಾಣುತ್ತವೆ. ಉದಾಹರಣೆಗೆ ನಾಯಿ ಕುಲನಾಮದ ಮಹಾಕಾವ್ಯ ಪ್ರಸಿದ್ಧರಾದ ಶೌನಕರು, ಪಕ್ಷಿ ಮೂಲದ ಭಾರದ್ವಾಜ, ಶಾಕುಂತೇಯ ಇತ್ಯಾದಿ.
ವೈಖಾನಸರು ವೈಖಾನಸಾಗಮಕ್ಕೆ ದಕ್ಷಿಣ ಭಾರತದ ವೈಷ್ಣವ ದೇವಾಲಯಗಳಿಗೆ ಸಂಬಂಧಿಸಿದವರೆಂದು ನಂತರದ ಚರಿತ್ರೆ ತಿಳಿಸುತ್ತದೆ. ಈ ಹೆಸರುಗಳು ಮೂಲ ಚರಕ ಸಂಹಿತೆಯಲ್ಲಿನ ಹೆಸರುಗಳೇ ಅಥವಾ ಆರನೇ ಶತಮಾನದವರಾದ, ಮಹಾಕಾವ್ಯಗಳು ಮತ್ತಷ್ಟು ವಿಸ್ತರಿಸಲ್ಪಟ್ಟ ನಂತರದ ಕಾಲದಲ್ಲಿ, ಪುರಾಣಗಳು ರಚನೆಯಾಗುತ್ತಿದ್ದ ಕಾಲದಲ್ಲಿದ್ದ ದೃಢಬಾಲರು ಚರಕ ಸಂಹಿತೆ ಪುನರ್ ರಚನೆ ಮಾಡುವಾಗ ಸೇರಿಸಿದ ಹೆಸರುಗಳೇ, ಗೊತ್ತಿಲ್ಲ.

ಆದರೆ ಇಂತಹ ಒಂದು ಕಾರ್ಯಾಗಾರವೊಂದು ನಡೆದಿದೆ ಎಂಬುದು ಮಾತ್ರ ಸಂಶಯಕ್ಕೆಡೆಯಿಲ್ಲದಂತೆ ಚರಕ ಸಂಹಿತೆಯ ಒಳಗಿನ ಪುರಾವೆಗಳೇ ಸಾಬೀತು ಮಾಡುತ್ತವೆ. ಆ ಕಾಲದ ಬೇರಾವುದೇ ವೈದಿಕ ಗ್ರಂಥಗಳಲ್ಲಿ ಧರ್ಮಶಾಸ್ತ್ರ ಗ್ರಂಥಗಳಲ್ಲಿ ವಾದ – ಪ್ರತಿವಾದಗಳು ನಡೆದ ಒಂದೆರಡು ನಮೂದುಗಳಿರಬಹುದು. ಬೃಹದಾರಣ್ಯಕ ಉಪನಿಷತ್ತಿನ ಜನಕ ಎಸೆದ ಸವಾಲು, ಅದಕ್ಕೆ ಯಾಜ್ಞವಲ್ಕ್ಯರ ಸ್ಪಂದನ, ಅವರಿಗೆ ಬೇರೆಯವರು ಎಸೆದ ಪ್ರಶ್ನೆಗಳು, ಪ್ರಶ್ನೋಪನಿಷತ್ತಿನಲ್ಲಿ ನಡೆದ ಪ್ರಶ್ನೋತ್ತರಗಳು ಅಂತಹ ಉದಾಹರಣೆಗಳು. ಒಬ್ಬ ಗುರುವಿನ ಜೊತೆಗಿನ ಪ್ರಶ್ನೋತ್ತರ, ವಾದ ಪ್ರತಿವಾದಗಳ ಸ್ವರೂಪದವು. ಅರವತ್ತಕ್ಕೂ ಮೇಲ್ಪಟ್ಟು ವಿದ್ವಾಂಸರು ತಮ್ಮದೇ ಅನುಭವ, ಶೋಧಗಳ ಆಧಾರದ ಮೇಲೆ ಪರಸ್ಪರ ಚರ್ಚೆ ನಡೆಸುವ ಕಾರ್ಯಾಗಾರ ನಡೆದ ಉದಾಹರಣೆಗಳು ಹೆಚ್ಚಿಲ್ಲ. ಬುದ್ಧನ ಕಾಲದಲ್ಲಿ ಕೂಡಾ ಬುದ್ಧ ಮತ್ತು ಅವನ ಅನುಯಾಯಿಗಳ ನಡುವೆ ಹಲವು ಪ್ರಶ್ನೋತ್ತರಗಳು ನಡೆದ ಉದಾಹರಣೆ ಇದೆ. ಇವು ಕೂಡಾ ಒಬ್ಬ ಗುರುವಿಗೆ ಉಳಿದವರು ಪ್ರಶ್ನೆ ಕೇಳಿ ಸಮಾಧಾನ ಪಡೆದುಕೊಂಡ ಸ್ವರೂಪದವು. ಆದರೆ ಬುದ್ಧಾನಂತರ ಸಂಘಟಿಸಲ್ಪಟ್ಟ ವಿವಿಧ ಸಂಗೀತಿಗಳೆಂದು ಹೆಸರಾದ ಸಮಾವೇಶಗಳು ಮಾತ್ರ ಇಂತಹ ಚರ್ಚೆಯ ಸ್ವರೂಪ ಪಡೆದಿದ್ದವು. ಆದರೆ ಅದು ಸಾವಿರಾರು ಜನ ಸೇರಿದ ಸಮಾವೇಶಗಳು.
ಸಂಹಿತೆಯಲ್ಲಿ ದಾಖಲಾದ ಕಾರ್ಯಾಗಾರದ ಹೊಸ ರೀತಿಯದು. ಈ ಕಾರ್ಯಾಗಾರದಲ್ಲಿ ಅಲ್ಲಿಯವರೆಗಿನ ವೈದ್ಯಕೀಯ ಚಿಕಿತ್ಸಾ ವಿಧಾನಗಳು, ಅದರ ಅಡಿಪಾಯವಾದ ಕಾರಣಗಳ ಬಗ್ಗೆ ಗಂಭೀರವಾದ ಮತ್ತು ವೈವಿಧ್ಯಮಯವಾದ ಚರ್ಚೆ ನಡೆದ ಬಗ್ಗೆ, ವಿವಿಧ ವೈದ್ಯ ವಿದ್ವಾಂಸರ ವಿಭಿನ್ನ ಅಭಿಪ್ರಾಯಗಳು, ಅವುಗಳನ್ನು ಆ ವೈದ್ಯರಲ್ಲೊಬ್ಬರು ಮಹರ್ಷಿ ಎಂದು ಗೌರವಿಸಲ್ಪಟ್ಟವರು ಸಾರಾಂಶೀಕರಿಸಿ ಸರ್ವ ಸಮ್ಮತ ತೀರ್ಮಾನಗಳನ್ನು ಸಭೆಯ ಮುಂದಿಡುತ್ತಿದ್ದ ರೀತಿಯ ಬಗ್ಗೆ ಸಂಹಿತೆಯಲ್ಕಿಯೇ ಕೆಲವು ಕಡೆ ದಾಖಲಾಗಿದೆ. ಈ ರೀತಿ ಚರ್ಚೆಗೆ ಒಳಪಟ್ಟ ವಿಚಾರಗಳನ್ನು ಗಮನಿಸಿದರೆ ಅತ್ಯಂತ ಪ್ರಾಯೋಗಿಕವಾದ ಚಿಕಿತ್ಸಾ ವಿಧಾನಗಳು ಮತ್ತು ವೈದ್ಯರ ಅನುಭವ ಲೋಕವೂ ಸೇರಿವೆ. ಅದೇ ರೀತಿ ವೈದ್ಯಕೀಯ ವಿಜ್ಞಾನಕ್ಕೆ ಅವಶ್ಯವಾದ, ಅಂದಿನ ಭಾರತದ ಉನ್ನತ ತಾತ್ವಿಕ ವಿಷಯಗಳು ಚರ್ಚಿತವಾಗಿವೆ. ಅವುಗಳಲ್ಲಿ ಪರಲೋಕ, ಪರಬ್ರಹ್ಮಗಳ ಮೇಲೆ ಕೇಂದ್ರೀಕೃತವಾದ ವೇದಾಂತದ ವಿಚಾರಗಳಿಗೆ ವಿರುದ್ಧವಾದ ಈ ಲೋಕದ ವಸ್ತುನಿಷ್ಟತೆಯನ್ನು ವಿವರಿಸುವ ನ್ಯಾಯ ವೈಶೇಷಿಕ ದರ್ಶನ ಹಾಗೂ ಸಾಂಖ್ಯ ದರ್ಶನದ ವಿಷಯಗಳು, ಅಂದಿನ ವಿಶ್ವದಲ್ಲಿಯೇ ಹೊಸ ತತ್ವಜ್ಞಾನದ ಶೋಧಗಳು ಸೇರಿವೆ. ಇವುಗಳನ್ನು ಅಲ್ಲಿ ಸೇರಿದ್ದ ವಿದ್ವಾಂಸ ಗಡಣದ ಮುಂದೆ ಕೆಲವು ವಿದ್ವಾಂಸರು ಮಂಡಿಸಿದ್ದಾರೆ. ವೈದ್ಯಕೀಯ ವಿಜ್ಞಾನಕ್ಕೆ ಅವುಗಳ ಪ್ರಸ್ತುತತೆಯನ್ನು ವಿವರಿಸಿದ್ದಾರೆ.
ಚರಕ ಸಂಹಿತೆಗೆ ಇಂತಹ ವೈಜ್ಞಾನಿಕ ವೈಚಾರಿಕ ಆರಂಭ ಸೂಚಿತವಾಗಿರುವಂತೆಯೇ ಅದಕ್ಕೆ ಪೂರ್ತಿ ವಿರುದ್ಧವಾದ ಅಸಂಗತವಾದ ಮೂಲವನ್ನೂ ಇವುಗಳ ಜೊತೆಗೇ ಹೇಳಲಾಗಿದೆ.
ಎಲ್ಲ ಧರ್ಮಶಾಸ್ತ್ರ ಗ್ರಂಥಗಳ ಮೂಮೂಲಿ ಪುರಾಣದಂತೆ ಈ ಸಂಹಿತೆಯು ಬ್ರಹ್ಮನಿಂದ ಪ್ರಜಾಪತಿಗೆ ಉಪದೇಶಿಸಲ್ಪಟ್ಟಿತು. ಅವನಿಂದ ಅಶ್ವಿನೀ ದೇವತೆಗಳಿಗೆ, ಅವರಿಂದ ಇಂದ್ರನಿಗೆ, ಇಂದ್ರನಿಂದ ಭಾರದ್ವಾಜನೆಂಬ ಋಷಿಗೆ ಉಪದೇಶಿಸಲ್ಪಟ್ಟಿತು ಎಂದು ಹೇಳಲಾಗಿದೆ. ಭಾರದ್ವಾಜನಿಂದ ಇತರ ಋಷಿಗಳು ಈ ಜ್ಞಾನವನ್ನು ಪಡೆದುಕೊಂಡರಂತೆ.
ಮತ್ತೊಂದು ಭಿನ್ನ ಸಂಗತಿ ಅತ್ರೇಯನೆಂಬ ಮಹರ್ಷಿಯು ತನ್ನ ಆರು ಜನ ಶಿಷ್ಯರಿಗೆ ವೈದ್ಯ ವಿಜ್ಞಾನವನ್ನು ಉಪದೇಶಿಸಿದನೆಂದೂ, ಆ ಆರು ಜನ ಶಿಷ್ಯರೂ ಆರು ಗ್ರಂಥಗಳನ್ನು ಬರೆದು ಅತ್ರೇಯರಿಗೆ ತೋರಿಸಿದರೆಂದೂ ಅವೆಲ್ಲವೂ ಅವರಿಂದ ಪ್ರಶಂಸೆಗೊಳಗಾಯಿತೆಂದೂ ಹೇಳಲಾಗಿದೆ. ಈ ಆರು ಜನರಲ್ಲಿ ಅಗ್ನಿವೇಶರೆಬುವರು ಬರೆದುದನ್ನು ಚರಕರು ಚರಕ ಸಂಹಿತೆಯಾಗಿ ರೂಪಿಸಿದರು. ಆ ಗ್ರಂಥ ದೃಢಬಾಲರ ಕೈಗೆ ಅಪೂರ್ಣವಾಗಿ ಸಿಕ್ಕಿತೆಂದೂ ಅದನ್ನು ಅವನು ಪುನರ್ ರಚಿಸಿದನೆಂದೂ ಅವರು ಹೇಳಿಕೊಂಡಿದ್ದಾನೆ.
ಹೀಗೆ ಚರಕ ಸಂಹಿತೆಯ ಮೂಲದ ಬಗ್ಗೆ ಹಲವು ರೀತಿಯ, ಕೆಲವು ವಿರೋಧಾಭಾಸದ ಹೇಳಿಕೆಗಳಿವೆ. ಇಡೀ ಸಂಹಿತೆಯುದ್ದಕ್ಕೂ ಅತ್ರೇಯರು ತಮ್ಮ ವಿಚಾರಗಳನ್ನು ಮಂಡಿಸುವುದು ಮತ್ತು ಇತರ ವಿದ್ವಾಂಸರ ಅಭಿಪ್ರಾಯಗಳನ್ನು ಸಾರಾಂಶೀಕರಿಸುವರಾಗಿ ಉಲ್ಲೇಖಗೊಂಡಿದ್ದಾರೆ. ಆದರೆ ಬ್ರಹ್ಮ, ಅಶ್ವಿನಿ ದೇವತೆಗಳು, ಇಂದ್ರ ಆರಂಭದ ಕೆಲವೇ ಶ್ಲೋಕಗಳ ಹೊರತು ಮತ್ತೆಲ್ಲೂ ಕಾಣುವುದಿಲ್ಲ. ಇಂದ್ರನಿಂದ ಉಪದೇಶ ಪಡೆದ ಭಾರದ್ವಾಜರ ವಿಚಾರಗಳು ಕೆಲವೆಡೆ ನಮೂದಾಗಿದ್ದರೂ ಆ ವಿಚಾರಗಳು ಎಂತಹ ಬ್ರಹ್ಮ ವಿರೋಧಿ ಎಂದರೆ ಅವು ಬ್ರಹ್ಮನ ಮೂಲದವಾಗಲೀ ಇಂದ್ರನ ಮೂಲದವಾಗಲೀ ಆಗಿರಲು ಸಾಧ್ಯವೇ ಇಲ್ಲ ಎನ್ನುವುದು ತಂತಾನೆ ಸ್ಪಷ್ಟವಾಗಿದೆ.
ಸಂಹಿತೆಯ ಪ್ರಕಾರ ಭಾರದ್ವಾಜರು ಇಂದ್ರನಿಂದ ಆಯುರ್ವೇದದ ಜ್ಞಾನವನ್ನು ಪಡೆದ ನಂತರ ವಾಪಸ್ ಬಂದು ಇಲ್ಲಿಯ ವಿದ್ವಾಂಸರಿಗೆ ಪುರಾಣಗಳ ಸೃಷ್ಟಿಕರ್ತ ಬ್ರಹ್ಮ ಅಥವಾ ವೇದಾಂತದ ಬ್ರಹ್ಮನ್ ಆಗಲೀ ರೋಗಗಳ ಕಾರಣಗಳಾಗಿ ಸಾಮಾನ್ಯವಾಗಿ ನೀಡುವ ಸೃಷ್ಟಿ, ಕರ್ಮ, ಪಾಪ, ಪುಣ್ಯಗಳ ಬಗೆಗೆ, ಚಿಕಿತ್ಸೆ ಬಗ್ಗೆ ಏನೂ ಹೇಳಲಿಲ್ಲ. ಎಂಬುದು ಆಶ್ಚರ್ಯಕರ. ಇಹಲೋಕ ಅಸ್ತಿತ್ವದಲ್ಲೇ ಇಲ್ಲ. ಅದರ ಬಗೆಗಿನ ಜ್ಞಾನ ಅವಿದ್ಯೆ ,ಬ್ರಹ್ಮನ್ ಬಗೆಗಿನ ಅರಿವು ಮಾತ್ರ ಜ್ಞಾನ ಎಂಬುದಕ್ಕೆ ವಿರುದ್ಧವಾಗಿ ಅವರು ಹೇಳಿದ್ದು ಈ ಲೋಕದ ವಸ್ತುಗಳ ಆರು ಗುಣಗಳ ಬಗೆಗೆ. ಸಾಮಾನ್ಯ, ವಿಶೇಷ, ದ್ರವ್ಯ, ಗುಣ, ಕರ್ಮ, ಸಮವಾಯ ಎಂಬ ಈ ಆರುಗುಣಗಳ ಬಗ್ಗೆ ಭಾರದ್ವಾಜರು ಹೇಳಿದ್ದನ್ನು ಒಂದು ಶ್ಲೋಕದಲ್ಲಿ ಹೇಳಿ ನಂತರ ಅವುಗಳಲ್ಲಿ ಒಂದೊಂದನ್ನೂ ಸಂಹಿತೆಯಲ್ಲಿ ವಿವರಿಸಲಾಗಿದೆ. ಇದೇ ಭಾರದ್ವಾಜರು ಮತ್ತೊಂದು ಕಡೆ ಹೇಳಿರುವುದು ಕೂಡ ವಸ್ತುಗಳು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವುದು ಅವುಗಳ ಸ್ವಭಾವ ಎಂಬ ಸ್ವಭಾವವಾದವನ್ನು. ಈ ವಸ್ತುಗಳು ಬ್ರಹ್ಮನ ಅಥವಾ ದೇವರ ಸೃಷ್ಟಿ. ಆ ವಸ್ತುಗಳ ಸ್ವರೂಪ, ಅವುಗಳ ವರ್ತನೆ, ಬದಲಾವಣೆ ಎಲ್ಲವನ್ನೂ ಬ್ರಹ್ಮ ಅಥವಾ ದೇವರೇ ನಿರ್ದೇಶಿಸಿದಂತೆಯೇ ಜರುಗುತ್ತವೆ ಎಂಬುದಕ್ಕೆ ವಿರುದ್ಧವಾದ ದೃಷ್ಟಿಕೋನ ಅದು.
ಈ ಎರಡೂ ಅಂಶಗಳು ಕೂಡಾ ದೈವ ಸೃಷ್ಟಿ ಅಥವಾ ಬ್ರಹ್ಮಸೃಷ್ಟಿವಾದವನ್ನು ಹಾಗೂ ಜಗನ್ಮಿಥ್ಯೆ ಎಂಬ ವಾದವನ್ನು ತಿರಸ್ಕರಿಸುತ್ತವೆ. ಇದು ನಾವೆಲ್ಲ ಗಮನಿಸಬೇಕಾದ ಮುಖ್ಯ ಅಂಶ. ಚರಕ ಸಂಹಿತೆಯ ಸಂಕಲನಗೊಂಡ ನಂತರದ ಕಾಲಘಟ್ಟದಲ್ಲಿ ಆದ ಬದಲಾವಣೆಗಳಿವು. ಎಲ್ಲದರ ಮೇಲೂ ಹಿಡಿತ ಸಾಧಿಸ ಬಯಸುತ್ತಿದ್ದ ಧರ್ಮಶಾಸ್ತ್ರ ಗ್ರಂಥಗಳು, ಪುರೋಹಿತಶಾಹಿ ಕಟ್ಟಲೆಗಳು, ರಾಜ ಪ್ರಭುತ್ವಗಳ ಕಠಿಣ ಶಿಕ್ಷೆಯ ಅಂದಿನ ಸಂದರ್ಭದಲ್ಲಿ ಆದ ಬದಲಾವಣೆಗಳಿವು. ಅದನ್ನು ಪುನರ್ ರೂಪಿಸಿದವರು ಸಂಹಿತೆಯ ಹೊರ ಪುಟದ ಮಟ್ಟದಲ್ಲಾದರೂ ಧರ್ಮಶಾಸ್ತ್ರಗಳಿಗೆ ವಿಧೇಯತೆಯನ್ನು ತೋರ್ಪಡಿಸುವ ಸೇರ್ಪಡೆಗಳನ್ನು ಮಾಡಿಕೊಳ್ಳುವ ಮೂಲಕ ದೈವ ವಿರೋಧಿ, ಧರ್ಮ ಲಂಡ, ವೇದ ನಿಂದಕ ಎಂಬ ಬಹಿಷ್ಕಾರಾರ್ಹ ಮತ್ತು ಶಿಕ್ಷಾರ್ಹವಾದ ಆಪಾದನೆಗಳನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಇದರಿಂದ ತಿಳಿಯುತ್ತದೆ. ಹೀಗೆ ಮೇಲ್ತೋರಿಕೆಗೆ ಈ ಸೇರ್ಪಡೆ ಮಾಡುವ ಮೂಲಕ ಚರಕ ಸಂಹಿತೆಯ ಅಪೂರ್ವವಾದ ವೈಜ್ಞಾನಿಕ ತಿರುಳನ್ನು ಉಳಿಸಿ ಮುಂದಿನ ತಲೆಮಾರುಗಳಿಗೆ ದಾಟಿಸುವ ಪ್ರಯತ್ನ ಮಾಡಿದ್ದಾರೆ. ಎಲ್ಲ ಧರ್ಮಶಾಸ್ತ್ರ ಗ್ರಂಥಗಳಂತೆ ಇದೂ ಕೂಡಾ ಸ್ವತಃ ಬ್ರಹ್ಮನಿಂದಲೇ ಉಪದೇಶಿಸಲ್ಪಟ್ಟದ್ದು ಎನ್ನುವ ಮೂಲಕ ಅಂದಿನ ಕಾಲದ ಅಧಿಕೃತತೆಯ ಮುದ್ರೆಯನ್ನು ಹಾಕಲು ಹೆಣಗಿದ್ದಾರೆ. ಇದು ದೇವೀಪ್ರಸಾದರೂ ಸೇರಿದಂತೆ ಹಲವು ಸಂಶೋಧಕರ ಪುರಾವೆ ಸಹಿತವಾದ ಅಭಿಪ್ರಾಯವಾಗಿದೆ.
ಹಿಂದಿನ ಲೇಖನ ಒಂದರಲ್ಲಿ ಸ್ವತಃ ಭಗವಾನ್ ಶ್ರೀ ಕೃಷ್ಣನ ಬಾಯಿಂದಲೇ ವೈಜ್ಞಾನಿಕ ಚಿಂತಕರು, ವೈಚಾರಿಕತೆಯ ಬಗ್ಗೆ ಎಂತಹ ಕೀಳು ನಿಂದನೆಗಳನ್ನು ಉದುರಿಸಿ ಕ್ರೌರ್ಯಗಳಿಗೆ ಪ್ರೇರೇಪಣೆ ನೀಡಿದ್ದಾರೆ ಎಂಬುದನ್ನು ವಿವರಿಸಲಾಗಿದೆ. ಇಂತಹ ವಾತಾವರಣ ಗಣಿತ, ಖಗೋಳ ವಿಜ್ಞಾನ, ರಸಾಯನ ಶಾಸ್ತ್ರ, ಲೋಹ ಶಾಸ್ತ್ರ ಮೊದಲಾದ ಹಲವು ವಿಜ್ಞಾನಗಳು, ವಿಜ್ಞಾನಿಗಳ ಮೇಲೆ ಬೀರಿದ ಹಾನಿಕಾರಕ ಪರಿಣಾಮವನ್ನು ಕಾಣಬಹುದು.

ಇಲ್ಲಿ ಭಾರದ್ವಾಜರು ಹೇಳಿದರೆಂಬ ವಸ್ತುವಿನ ಗುಣಗಳು ಷಡ್ದರ್ಶನಗಳಲ್ಲೊಂದಾದ ವೈಶೇಷಿಕ ದರ್ಶನದ ಒಂದು ಮುಖ್ಯ ತತ್ವ ಎಂಬುದು ಮತ್ತೊಂದು ವಿಶೇಷ. ಹಿಂದಿನ ಲೇಖನದಲ್ಲಿ ವಿವರಿಸಲಾದ ಚರಕ ಸಂಹಿತೆಯಲ್ಲಿನ ವಿಚಾರ ಸಂಕಿರಣಗಳು, ಚರ್ಚೆಗಳ ಬಗೆಗಿನ ಅಂಶಗಳು ನ್ಯಾಯ ಎಂಬ ಮತ್ತೊಂದು ಷಡ್ದರ್ಶನದ ಭಾಗ. ಈ ದರ್ಶನವನ್ನು ತರ್ಕ ಎಂದೂ ಕರೆಯುತ್ತಾರೆ. ಯಾವುದೇ ಬೆಳವಣಿಗೆಯ ಕಾರಣವನ್ನು ಅನ್ವೇಷಿಸುವುದು ಮತ್ತು ಅದನ್ನು ತರ್ಕಬದ್ಧವಾಗಿ ಮಂಡಿಸುವ ವಿಧಾನವನ್ನು ರೂಪಿಸಿದ ದರ್ಶನ ಅದು.
ಈ ಎರಡೂ ದರ್ಶನಗಳು ಕ್ರಿ.ಪೂರ್ವ ಮೂರನೇ ಶತಮಾನದಲ್ಲಿ ರೂಪಿಸಲ್ಪಟ್ಟವು. ಈ ಎರಡೂ ದರ್ಶನಗಳ ಮುಖ್ಯ ತತ್ವಗಳ ಜೊತೆಗೆ ಸಾಂಖ್ಯ ದರ್ಶನದ ತತ್ವಗಳೂ ಕೂಡ ವೈದ್ಯಕೀಯ ವಿಜ್ಞಾನದ ಗ್ರಂಥದಲ್ಲಿ ಬಹು ಮುಖ್ಯವಾಗಿ ಪ್ರಸ್ತಾಪಿಸಲ್ಪಟ್ಟಿವೆಯೇಕೆ ಎಂಬುದು ಪರಿಶೀಲಿಸಬೇಕಾದ ವಿಷಯ.
ರೋಗಗಳಿಂದ ಗುಣಮುಖರಾಗುವ ದಾರಿಯಲ್ಲಿ ವಿವಿಧ ಮಾಂಸಾಹಾರ ಸೇವನೆ, ಅದರಲ್ಲಿ ಗೋಮಾಂಸದ ಸೇವನೆಯ ಅವಶ್ಯಕತೆ ಬಗ್ಗೆ ಹೇಳಿರುವುದನ್ನು ಹಿಂದಿನ ಲೇಖನದಲ್ಲಿ ಓದಿದ್ದೀರಿ. ಹಾಗೆಯೇ ಹಸುವಿನ ಹಾಲು ಮತ್ತು ಮೂತ್ರವೂ ಕೂಡಾ ಕುರಿ, ಮೇಕೆ, ಕತ್ತೆ , ಕುದುರೆ, ಒಂಟೆ, ಆನೆಗಳಂತೆ ಅಷ್ಟೇ ಎನ್ನುವ ಸಂಹಿತೆ ಯಾವುದೇ ವಿಶೇಷ ಗುಣಗಳನ್ನೇನೂ ಹಸುವಿನ ಹಾಲು, ಮೂತ್ರಕ್ಕೆ ಆರೋಪಿಸುವುದಿಲ್ಲ.
ಆದರೆ ಅಲ್ಲಲ್ಲಿ ಗೋ ಬ್ರಾಹ್ಮಣರನ್ನು ಪೂಜಿಸುವ ಬಗ್ಗೆ, ಆತ್ಮದ ಬಗ್ಗೆ ಸೇರಿಸುತ್ತಾ ಹೋಗಿದೆ. ಈ ವಿರೋಧಾಭಾಸವೂ ಕೂಡಾ ಮೇಲೆ ಹೇಳಿದಂತೆ ಪುರೋಹಿತಶಾಹಿ ಬಹಿಷ್ಕಾರದ ಇಕ್ಕಳದಿಂದ ತಪ್ಪಿಸಿಕೊಳ್ಳಲು ಮಾಡಿದ ಉಪಾಯ ಎಂಬಂತೆ ತೋರುತ್ತದೆ.
ವೈದ್ಯರು ಸ್ವತಃ ಶವಚ್ಚೇದನ ಮಾಡಬೇಕಾದ ಅಗತ್ಯ, ಅನಾಟಮಿಯ ಬಗೆಗಿನ ಅತ್ಯಂತ ಉನ್ನತ ಮಟ್ಟದ ಅರಿವು, ಸರ್ಜರಿ ಮಾಡಲು ಯಾವುದೆಲ್ಲ ರೀರಿಯಲ್ಲಿ ಪರಿಣತಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಅತ್ಯಂತ ವೈಜ್ಞಾನಿಕವಾಗಿ ವಿವರಿಸುವ ಶುಶ್ರುತ ಸಂಹಿತೆಯ ಇಂತಹುದೇ ತುರುಕುವಿಕೆಗಳ ಬಗ್ಗೆಯೂ ತಿಳಿದುಕೊಳ್ಳಬೇಕು.
ಆದೇ ಸಮಯದಲ್ಲಿ ಈ ರೀತಿಯ ತುರುಕುವಿಕೆಗಳು ಮುಂದಿನ ಶತಮಾನಗಳಲ್ಲಿ ಎಂತಹಾ ವೈದ್ಯ ವಿಜ್ಞಾನಕ್ಕೆ ಎಂತಹಾ ಶೋಚನೀಯ ಸ್ಥಿತಿಯನ್ನು ತಂದವು, ಈ 21 ನೆಯ ಶತಮಾನದಲ್ಲಿ ಆಯುರ್ವೇದವನ್ನು ಮತ್ತೆ ವ್ಯಾಪಕವಾಗಿ ಬಳಕೆಗೆ ತರುವ ಪ್ರಯತ್ನಗಳ ಸಂದರ್ಭದಲ್ಲಿ ಪಡೆಯುತ್ತಿರುವ ವಿಕಾರಗಳಿಗೆ ಕಾರಣವಾಗುತ್ತಿವೆ ಎಂದರೆ ಹೇಳಲಸಾಧ್ಯ !
| ಇನ್ನು ಮುಂದಿನ ವಾರಕ್ಕೆ |






0 Comments